ಸಾಹಿತ್ಯ ಸೌರಭ ಕೃತಿ ಕುರಿತು

ಪುಸ್ತಕ ಸಂಗಾತಿ

ಸಾಹಿತ್ಯ ಸೌರಭ

ಗವೀಶ ಹಿರೇಮಠ

ಐವತ್ತು ವರ್ಷಗಳ ಹಿಂದಿನ ನಾಡಿನ ಪ್ರಮುಖ ಲೇಖಕರ ಬರಹಗಳ ಕುರಿತ ಗವೀಶ ಹಿರೇಮಠ ರ ಸಂಪಾದನೆಯ ಸಾಹಿತ್ಯ ಸೌರಭ ಕೃತಿ ಕುರಿತು ನನ್ನ ಮನಕೆ ತಟ್ಟಿದ ಮಾತುಗಳಿವು.ಈ ಗುಣಗ್ರಾಹಿ ಕೃತಿಗಾಗಿ. ಕೃತಿಯ ಸಂಪಾದಕರಾದ ಗೆಳೆಯರ ಪ್ರೀತಿಗಾಗಿ ಈ‌ ಲೇಖನ ಬರೆದೆ. ೨೧,ಅಗಸ್ಟ -೨೨ ರಂದು ಕಲಬುರ್ಗಿಯಲ್ಲಿ ಬಿಡುಗಡೆ ಆಗಲಿದೆಯಂತೆ‌ ಈ ಕೃತಿ.ಅಂದರೆ ನಾಳೆ.

ಖ್ಯಾತ ಕವಿ ಲೇಖಕ ಬಹುಮುಖ ಪ್ರತಿಭೆಯ ಬಣ್ಣದ ಲೋಕದ ಪರಿಚಾರಕ ಲಿಂ.ಗವೀಶ ಹಿರೇಮಠರ ಸಂಪಾದನೆಯ ಈ ಸಾಹಿತ್ಯ ಸೌಗಂಧ ಕೃತಿ ಕುರಿತು ಕೆಲಮಾತು ಬರೆದು ಕೊಡಲು ಅಂತಹದೇ ಪ್ರತಿಭೆ, ಅಂತಹದೇ ಹವ್ಯಾಸದ ! ಹಾಗೂ ಅದೇ ಬಣ್ಣದ ಲೋಕದ ಗೆಳೆಯ ಮಹಿಪಾಲರೆಡ್ಡಿಯವರು ಕೇಳಿದ್ದರು. ಮೊದಲು ಫೋನು ನಂತರ ಪುಸ್ತಕ ಪತ್ರ ಎಲ್ಲವೂ ಬಂದು ತಲುಪಿ ಅವರು ಕೊಟ್ಟ ನಿಗದಿತ ಸಮಯ ಸಮೀಪ ಬರುವುದಕ್ಕೂ; ಕೊರೋನಾ ಎರಡನೇ ಅಲೆಯ ಲಾಕ್ ಡೌನ್ ಆರಂಭ ಆಗುವುದಕ್ಕೂ ಸರಿ ಆಯಿತು. ಹಾಗಾಗಿ ಇಡೀ ಪುಸ್ತಕ ಓದಿ  ಬರೆದ ಲೇಖನವಿದು.

ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರ್ಗಿಯವರ  ಮೂಲಕ ಮರು ಮುದ್ರಣ ಕಂಡ ಈ ಕೃತಿ ಸುಮಾರು ಐವತ್ತು ವರ್ಷಗಳ ಹಿಂದೆ ಪ್ರಕಟವಾದ ಕೃತಿ.ನಾಡಿನ ಬಹುಮುಖ ಪ್ರತಿಭೆಯ ಅನೇಕ ದಿಗ್ಗಜರ ಪ್ರಬಂಧಗಳನ್ನು ಹೊಂದಿರುವ ಬಹು ಮುಖ್ಯವಾದ ವೈವಿಧ್ಯಮಯ ವಿಷಯ ವಸ್ತು ಹೊಂದಿದ ಕೃತಿ ಇದಾಗಿದೆ.ರೆಡ್ಡಿಯವರು ನನಗೆ ಕೇಳಿದಾಗ ನಾನು ಒಬ್ಬ ಲಲಿತ ಪ್ರಬಂಧಕಾರ ಇರೋದರಿಂದ ಲಲಿತ ಪ್ರಬಂಧ ಕೃತಿ ಕೊಡುತ್ತಿದ್ದಾರೇನೋ ಅಂದುಕೊಂಡು ಬೇರೆನೂ ವಿಚಾರಿಸದೇ ಬರೀ ತಮಾಷೆಯಾಗಿ ಗೌರವಧನದ ವಿಷಯ ಚರ್ಚೆ ಮಾಡಿದೆನೇ ಹೊರತು ಎಂತಹ ಪ್ರಬಂಧ ಅಂತ ಕೇಳದೇ ಹೋಗಿದ್ದೆ.

   ಪುಸ್ತಕ ತೆಗೆದು ನೋಡಿದಾಗ ಆಹಾ! ಬೆಸ್ತು ಬಿದ್ದೆನಲ್ಲಾ ಅಂತ ಮೊದಲ ನೋಟಕ್ಕೆ ಅನಿಸಿದ್ದು ಸಹಜ.ಯಾಕೆಂದರೆ ಇದರಲ್ಲಿ ಬಹುತೇಕ ೨-೩ ಬರೆಹ ಬಿಟ್ಟರೆ ಉಳಿದುವೆಲ್ಲ ಗೋಷ್ಠಿ ಯಲ್ಲಿ ಮಂಡಿಸಿದ ಪ್ರಬಂಧಗಳ ಸ್ವರೂಪ ಹೊಂದಿದವುಗಳೇ ಆಗಿವೆ.ಆದರೆ ಈ ಕೃತಿಯ ಒಳಗಿರುವ ಬಹುತೇಕ ಲೇಖಕರು ಒಂದೊಂದು ಸರೋವರದಂತಹವರು. ಆದ್ದರಿಂದ ಇರಲಿ.ಒಲ್ಲೆ ಅನ್ನಬಾರದು.ಇಂತಹ ಎಲ್ಲ ಲೇಖಕರ ಒಂದೊಂದು ಲೇಖನ ಆದರು ಓದಿದ ಸಂತೋಷ ಈ ಮೂಲಕ ಸಿಗುವುದು ಸಹ ಸಣ್ಣ ಸಂಗತಿಯಲ್ಲ ಅಂತ ಮನಸಾರೆ ಖುಷಿಗೊಂಡು ಬರೆಯುತ್ತಿರುವೆ.

    ಈ ಕೃತಿಗೆ  ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ,ಕಥೆಗಾರರು,ಲಲಿತ ಪ್ರಬಂಧಕಾರರು ಆದ ಡಾ.ಎಚ್.ಟಿ.ಪೋತೆಯವರು ಅರ್ಥಪೂರ್ಣ ಮುನ್ನುಡಿ ಬರೆದಿದ್ದಾರೆ.ಕನ್ನಡ ಸಾರಸ್ವತ ಲೋಕದ ದಿಗ್ಗಜರಾದ ವಿ.ಕೃ.ಗೋಕಾಕರು,ಪಂಡಿತ ಬನ್ನಂಜೆ ಗೋವಿಂದಾಚಾರ್ಯರು,ಡಾ.ಪಂಚಾಕ್ಷರಿ ಹಿರೇಮಠರು, ಡಾ.ಗಿರಡ್ಡಿ ಗೋವಿಂದರಾಜರು,ಡಾ.ಬಿ.ಬಿ.ಹೆಂಡಿಯವರು, ಡಾ.ವಿ.ಶಿವಾನಂದರು,ಬಿ.ಮಹಾದೇವಪ್ಪನವರು,ಡಾ.ಚೆನ್ನಣ್ಣ ವಾಲೀಕಾರರು,ಡಾ.ಶಕುಂತಲಾ ದುರ್ಗಿಯವರು, ಪ್ರೊ.ಮಲ್ಲಿಕಾರ್ಜುನ ಹಿರೇಮಠರು,ಡಾ:ಎಂ.ಎಸ್. ಲಠ್ಠೆಯವರಂತಹ ಮೇರು ಪರ್ವತಗಳ ಬರಹ ಈ ಸಂಕಲನದಲ್ಲಿವೆ. ಈ ಕೃತಿ ವಿವಿಗೆ ಪಠ್ಯವಾಗಿಸಲು ಸಂಗ್ರಹಿಸಿದ ಕಾರಣದಿಂದ ಗವೀಶ ಹಿರೇಮಠರು ಈ ಕೃತಿ ಸಂಪಾದಕರಾಗಿರುವುದು ಕಂಡು ಬರುತ್ತದೆ.

ಇನ್ನೂ ಮರೆತಿಲ್ಲ

ನಾನಿನ್ನೂ ಮರೆತಿಲ್ಲ

ಆಟದಿ ಸೋತು

ರೋಷದಿ ಕಚ್ಚಿದ

ಇನ್ನೂ ಮರೆತಿಲ್ಲ….

 ಎಂಬ ಹಾಡು ಹಾಡಿಕೊಂಡು ಹಳ್ಳಿಯ ಹೊಲ ಮನೆ ರಸ್ತೆಗಳಲ್ಲಿ ಗ್ರಾಮೀಣ ಸೊಬಗಿನಿಂದ ಬದುಕುವ ಜನಗಳ ನೋವು ನಲಿವಿನ ಚಿತ್ರಣವನ್ಪು ಗೋಕಾಕರು ತಮ್ಮ  ಯಕ್ಷ ಪ್ರಶ್ನೆಗಳು… ಎಂಬ ಬರಹವನ್ನು ಲಲಿತ ಪ್ರಬಂಧದ ಶೈಲಿಯಲ್ಲಿ ತುಂಬಾ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

ಇನ್ನೂ ಬನ್ನಂಜೆ ಗೋವಿಂದಾಚಾರ್ಯ  ಅವರು ಬೆಳ್ಳಿ ಬೆಟ್ಟದಲ್ಲಿ ಒಂದು ವಾರ ಎಂಬ ಬರಹವನ್ನು ಪ್ರವಾಸ ಕಥನದ ಮಾದರಿಯಲ್ಲಿ ತಾವು ಕಂಡ ಹಿಮಾಲಯದ ಚಿತ್ರಣವನ್ನು, ಅಲ್ಲಿಯ ಪರಿಸರವನ್ನು ಅತ್ಯಂತ ಮನ ಮೋಹಕವಾಗಿ ಚಿತ್ರಿಸಿದ್ದಾರೆ. ಕನ್ಯಾ ಕುಮಾರಿಯಿಂದ  ಹಿಮಾಲಯದೆಡೆಗೆ… ಪ್ರವಾಸ ಕೃತಿ ರಚಿಸಿರುವ ನನಗೆ ಅವರು ನನಗಿಂತ ೫೦ ವರ್ಷಗಳ ಮೊದಲು ತಾವು ಕಂಡ ಹಿಮಾಲಯದ ಕುರಿತು ಈ ಬರಹದಲ್ಲಿ ದಾಖಲಿಸಿದ್ದು ಓದಿದಾಗ ನಾ ಕಂಡ,ಕಾಣದೇ ಉಳಿದ ಹಿಮಾಲಯವನ್ನು ಮತ್ತೊಮ್ಮೆ ಕಂಡ ಅನುಭವ ಮೂಡಿಸುವಂತೆ ಬರೆದಿರುವುದನ್ನು ಓದುವಾಗ ಅದಮ್ಯ ಖುಷಿ ಅನುಭವಿಸಿದೆ.

   ಅವರು ಕೇದಾರ,ಗೌರಿ ಕುಂಡದಕಡೆಗೆ ಏಕೆ ಹೋಗಲಿಲ್ಲವೆಂಬ ಸಂಶಯ ಕಾಡಿತು.ಅವರು ಹಿಮಾಲಯದ ಪಾದವಾದ ಹರಿದ್ವಾರ, ಋಷಿಕೇಷದಿಂದ ಆರಂಭಿಸಿ ರಸ್ತೆಯಲ್ಲಿ ಬರುವ ದೇವಪ್ರಯಾಗ,ಮಹಾ ಪ್ರಯಾಗ,ಕರ್ಣ ಪ್ರಯಾಗ,ಜೋಷಿಮಠ ಮೂಲಕ ನೇರ ಭದ್ರಿನಾಥದ ಕಡೆಗೆ ಪ್ರಯಾಣಿಸಿದ್ದು ನೋಡಿದರೆ ಆವಾಗ ಕೇದಾರದ ಕಡೆಗೆ ರಸ್ತೆ ನಿರ್ಮಾಣವೇ ಆಗಿರಲಿಲ್ಲವೇನೋ ಅನಿಸುತ್ತದೆ.ಗೌರಿಕುಂಡದವರೆಗೆ ವಾಹನ ಚಲಿಸಲು ರಸ್ತೆ ನಿರ್ಮಾಣ ಆಗಿದ್ದು ಕೇದಾರದ ಕಡೆಗೆ ಕಾಲು ರಸ್ತೆ ಮಾತ್ರ ನಾ ಹೋದ ೨೦೦೧ ರಷ್ಟರಲ್ಲಿ ಆಗಿತ್ತು.ಅಲ್ಲಿ ಕುದುರೆ ಮೇಲೂ ಹೋಗಬಹುದಿತ್ತು.ಬನ್ನಂಜೆಯವರು ಹೋದಾಗ ಆ ಮಾರ್ಗ ಆಗ ಆಗಿರಲಿಕ್ಕಿಲ್ಲ ಅನಿಸುತ್ತದೆ. ಭದ್ರಿನಾಥದ ತಂಪು ಹಾಗೂ ಬಿಸಿ ನೀರಿನ ಹೊಂಡದ ಅನುಭವ ಹಾಗೂ ಅದೇ ಸ್ವರ್ಗ ಅನ್ನಿಸುವಂತಹ ನನಗಾದ ರಾತ್ರಿಯ ಅನುಭೂತಿ ಈ ಲೇಖಕರಿಗೂ ಆಗಿರುವುದು ನನಗೆ ಒಂದು ಮರು ಸುಖಾನುಭವ ನೀಡಿತು.ಅವರಿಗಾದ ಬಹುತೇಕ ಅನುಭವದ ಕಾಣ್ಕೆ ನನ್ನದು ಸಹ ಆಗಿದ್ದು ಈ ಬರಹದ ಓದು ಸಾರ್ಥಕತೆ ಅನಿಸಿತು.

   ಇನ್ನೂ ಡಾ.ಪಂಚಾಕ್ಷರಿ ಹಿರೇಮಠ ಅವರು ಇತ್ತೀಚಿನ ದಿನಗಳಲ್ಲಿ ನನಗೆ ಬಹುವಾಗಿ ಕಾಡಿ ನನ್ನಿಂದ ಮೂರು ಗಜಲ್ ಕೃತಿಗಳು ಹೊರಬರಲು ಕಾರಣ ಆದ ಗಜಲ್ ಸಾಹಿತ್ಯಕ್ಕೆ ಸಂಬಂಧಿಸಿದ ಗಜಲ್  ಸಾಹಿತ್ಯದ ಮೇರು ಪರ್ವತ  ಯುಗ ಪುರುಷ ಗಾಲಿಬ್ ಎಂಬ ಪ್ರಬಂಧ ತುಂಬಾ ಮನಸೆಳೆಯಿತು.ಗಾಲಿಬ್ ಹುಟ್ಟಿನಿಂದ ಸಾವಿನ ವರೆಗೆ ಆತನ ಬದುಕು ಬರಹ ಹವ್ಯಾಸ ಸುಖ ದುಃಖ ಸಾಲ ಸೋಲ ನೋವು ಅವಮಾನ ಸ್ವಾಭಿಮಾನ ಹೀಗೆ ಎಲ್ಲ ಮಾಹಿತಿಯೊಂದಿಗೆ ಗಜಲ್ ಕ್ಷೇತ್ರದ ಯುಗ ಪುರುಷ ಅನ್ನುವಷ್ಟರ ಮಟ್ಟಿಗೆ ಬೆಳೆದ ಆತನ ಅಪ್ರತಿಮ ಗಜಲ್ ಕಾವ್ಯವನ್ನು ,ಆತನ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ.

ನೂರು ತಲೆಮಾರಿನಿಂದ ನಡೆದು ಬಂದಿದೆ ಸೈನಿಕ ವೃತ್ತಿ

ಕೀರ್ತಿ ಸ್ಥಾನ ಪಡೆಯಲೋಸುಗ ನಾನು ಕಾವ್ಯ ರಚಿಸಬೇಕಾದುದಿಲ್ಲ!

ಮಹಾ ಆತ್ಮಾಭಿಮಾನಿಯಾದ ಗಾಲಿಬ್ ನ ಈ ಸಾಲುಗಳ ಮೂಲಕ ಆತನ ಕಾವ್ಯ ಧೋರಣೆಯ ಆಶಯದ ಅರಿವಾಗಬಹುದಾಗಿದೆ.

ನಿನ್ನ ನೋಡಲೆಂದು ನನ್ನ ಕಣ್ಣೀರು ಸ್ವ ಪ್ರತಿಷ್ಠೆಯ ಚಿನ್ನವನ್ನು ಸಂಪೂರ್ಣ ತೊಳೆದು ಹಾಕಿದೆ!

ಈಗ ಮಂಜು ಹನಿಯಂತಿರುವ ಪವಿತ್ರ ದೃಷ್ಟಿಯೊಂದು ಮಾತ್ರ ಉಳಿದಿದೆ! – ಗಾಲಿಬ್

ನಿನ್ನ ಚೆಲುವಿನ ಮಿಂಚಿನ ಹೊಳಪಿನಿಂದಾಗಿ ನನ್ನ ದೃಷ್ಟಿ ಸುಟ್ಟು ಕೇವಲ ರೆಪ್ಪೆಯ ಕೂದಲು ಮಾತ್ರ ಉಳಿಯಿತು

ಎಲ್ಲ ಸುಟ್ಟು ಬೂದಿಯುಳಿಯುವ ಹಾಗೆ… – ಗಾಲಿಬ್

   ಹೀಗೆ ಅನಂತ ಗಜಲ್ ಗಳ ಮೂಲಕ ಇಂದಿಗೂ ಗಜಲ್ ಅಂದ್ರೆ ಗಾಲಿಬ್  ಎನ್ನುವಂತೆ ಗಜಲ್ ಸಾಹಿತ್ಯದ ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿರುವ ಗಾಲಿಬ್ ರ ಬಗೆಗಿನ ಪರಿಚಯಾತ್ಮಕ ಲೇಖನ ಈ ಕೃತಿಯ ವೈವಿಧ್ಯಮಯತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.ಗಾಲಿಬ್‌ ಒಂದು ಹಂತದಲ್ಲಿ ಕಡು ಕಷ್ಟದಲ್ಲಿ ಇದ್ದಾಗ ಆತನ ಅಭಿಮಾನಿಗಳು ದೆಹಲಿಯ ಕಾಲೇಜು ಒಂದರಲ್ಲಿ ಬೋಧಕ ವೃತ್ತಿ ಖಾಲಿ ಇದೆ.ಅದನ್ನು ನೀವು ಮಾಡಿ.ನಿಮ್ಮ ಜೀವನ ನಿರ್ವಹಣೆಗೆ ಸಹಾಯ ಆಗುತ್ತದೆ ಎಂದು ತುಂಬಾ ಒತ್ತಾಯಿಸಿ ಆ ಆಡಳಿತ ಮಂಡಳಿಯವರ ಮನ ಒಲಿಸಿ ಆ ಹುದ್ದೆಗೆ ನೇಮಕಾತಿ ಕೊಡಿಸುತ್ತಾರೆ.ಒಂದು ದಿನ ಆ ಹುದ್ದೆಗೆ ಸೇರಲು ತಮ್ಮ ಮೇನೆಯಲ್ಲಿ ಕುಳಿತು ಕಾಲೇಜು ಮುಂದೆ ಹೋಗಿ ಇಳಿಯುತ್ತಾರೆ.ಸ್ವಲ್ಪ ಹೊತ್ತು ಕಾಯುತ್ತಾರೆ. ಇವರನ್ನು ಒಳ ಕರೆದೊಯ್ಯಲು ಯಾರು ಬರುವದಿಲ್ಲ. ಬೇಸತ್ತ ಗಾಲಿಬ್ ಅದೇ ಮೇನೆಯಲ್ಲಿ ಕುಳಿತು ಮನೆಗೆ ಮರಳುತ್ತಾರೆ.

    ಮರುದಿನ ಇವರನ್ನು ನಿನ್ನೆ ನೀವು ಕೆಲಸಕ್ಕೆ ಏಕೆ ಜ್ವಯಿನ್ ಆಗಲಿಲ್ಲ.ಹೋಗಲಿಲ್ಲವೇ? ಆಡಳಿತ ಮಂಡಳಿಯವರು ನಿಮಗಾಗಿ ಕಾದಿದ್ದರು ಅನ್ನುತ್ತಾರೆ.ಆಗ ಗಾಲಿಬ್ ರು‌ ನನ್ನನ್ನು‌ ಸ್ವಾಗತಿಸಲು ಯಾರು ಬಾಗಿಲಿಗೆ ಬರಲಿಲ್ಲ.ಹಾಗಾಗಿ ನಾ ಅಲ್ಲಿಯವರೆಗೆ ಹೋದವ ಹಿಂದೆ ಬಂದೆ ಅನ್ನುತ್ತಾರೆ. ನಿಮ್ಮನ್ನು ಸ್ವಾಗತಿಸಲು ನೀವು ಆ ಕಾಲೇಜಿಗೆ ಅತಿಥಿಯಾಗಿ ಹೋಗಿಲ್ಲ.ಕೆಲಸ ಮಾಡಲು ಹೋಗಿದ್ದು. ಕೆಲಸಗಾರನಿಗೆ ಯಾರು ಸ್ವಾಗತಿಸುವದಿಲ್ಲವೆಂದು ಸಹಜವಾಗಿ ಹೇಳುತ್ತಾರೆ.ನಾ ಮಾಡುವ ಕೆಲಸದಿಂದ ಅಲ್ಲಿ ನನಗೆ‌ ಗೌರವ ಸಿಗುವದಿಲ್ಲವೆಂದರೆ ನಾನೇಕೆ ಅಂತಹ ಕೆಲಸ ಮಾಡಲಿ.ನನಗೆ ಗೌರವ ಸಿಗದ ಕೆಲಸ ಬೇಡ ಅಂತ  ಬಿಟ್ಟುಕೊಟ್ಟು ತಮ್ಮ ಕಡುಕಷ್ಟದ ಜೀವನವೇ ಆಯ್ಕೆ ಮಾಡಿಕೊಳ್ಳುತ್ತಾರೆ.ಇದು ಗಾಲಿಬ್. ಇದು ಅವರ ಬದುಕಿನ ಒಂದು ನಡೆದ ಘಟನೆ ಅಂತ ಅವರ ಕುರಿತು ಬರೆದ ಅನೇಕರು ಉಲ್ಲೇಖಿಸುತ್ತಾರೆ.ಮೋಜು ಮಸ್ತಿ ಕವಿತೆ ಸಾಲ ಸೋಲ ಸಾವುಗಳು ಹೀಗೆ ಅನೇಕ ಜಂಜಡಗಳಿಗೆ ಬಲಿಯಾದರು ಸಹ ಗಾಲಿಬ್ ತಮ್ಮ ಗಜಲ್ ರಚನೆಗಳ ಮೂಲಕ ಎಲ್ಲವನ್ನೂ ಮರೆತು ಹಗುರಾಗಿ ಅದ್ಭುತವಾದ ಗಜಲ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ನಮ್ಮ ಕಣ್ಣ ಮುಂದಿದೆ.

    ನಂತರ ಹಾಲುಂಡ ತವರಿಗೆ ಏನೆಂದು ಹರಸಲಿ ಕರಿಕಿಯ ಕುಡಿಯಾಂಗ ಹಬ್ಬಲಿ ಅವರ ರಸಬಳ್ಳಿ  ಎಂಬ ಜಾನಪದ ಸಾಹಿತ್ಯದ ಕುರಿತ ಮನನೀಯ ಲೇಖನ ಈ ಕೃತಿಯಲ್ಲಿ ಖ್ಯಾತ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜು ಅವರು ಬರೆದಿದ್ದು ಮುಖ್ಯವಾಗುತ್ತದೆ.

ಡಾ.ಬಿ.ಬಿ.ಹೆಂಡಿಯವರು ಸಾಹಿತ್ಯ ಸ್ವರೂಪ ಎಂಬ ಪ್ರಬಂಧದ ಮೂಲಕ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಕುರಿತು ಮನೋಜ್ಞವಾಗಿ ಚಿಂತಿಸಿದ್ದಾರೆ.ಯಾವುದು ಸೃಜನಶೀಲ ಸಾಹಿತ್ಯ,ಯಾವುದು ಸೃಜನೇತರ, ಸಾಹಿತ್ಯದ ವ್ಯಾಖ್ಯಾನ,ಅದರ ಫಲಾಫಲಗಳೇನು ಹೀಗೆ ಹಲವು ಹತ್ತಾರು ಆಯಾಮಗಳಲ್ಲಿ ಚಿಂತಿಸಿದ್ದಾರೆ.

    ಇನ್ನೂ ವಿಶ್ವ ಸಾಹಿತ್ಯಕ್ಕೆ ಮರ್ತ್ಯ ಜೀವನವೇ ಒರೆಗಲ್ಲು ಎಂಬ ಪ್ರಬಂಧದ ಮೂಲಕ ಡಾ.ವಿ.ಶಿವಾನಂದ ಅವರು ನಮ್ಮ ಪುರಾಣ ಕಾವ್ಯಗಳಿಂದ ಹಿಡಿದು ಜಗತ್ತಿನ ಎಲ್ಲಾ ಲೇಖಕರ ಸಾಹಿತ್ಯದ ಕುರಿತು ತೌಲನಿಕವಾಗಿ ಚರ್ಚಿಸಿದ್ದು ಮಹತ್ವದ್ದಾಗಿದೆ.

ಮರ್ತ್ಯದಲ್ಲಿ ನಿಂತು ಗೆಲ್ಲು

ಮರ್ತ್ಯವೇ ಒರೆಗಲ್ಲು

ನೆಲವೇ ಆಧಾರ

ನೆಲವೆ ಆ-ಧಾರ

ಎಂಬ ಉದಾತ್ತ ಆಶಯದೊಂದಿಗೆ ಮಾನವ ಜಗತ್ತು ಮತ್ತು ಮಾನವೀಯ ಭಾವವೇ ಬಹುಮುಖ್ಯ. ಅದುವೇ ಬರಹದ ಮೂಲಸೆಲೆಯಾಗಬೇಕೆಂದು ಹಲವಾರು ಕೃತಿಗಳ ಸಂವಾದದೊಂದಿಗೆ ಈ ಪ್ರಬಂಧದಲ್ಲಿ ಮಂಡಿಸಿದ್ದಾರೆ.

ಇನ್ನೂ ವಿಶ್ವ ಕಲ್ಯಾಣ ಪತ್ರಿಕೆಯ ಸಂಪಾದಕರು ಮಹಾ ಶರಣಜೀವಿಯಾದ ಬಿ.ಮಹಾದೇವಪ್ಪನವರು *ವಚನಕಾರರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಎಂಬ ಪ್ರಬಂಧದ ಮೂಲಕ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಇಡೀ ಕನ್ನಡ ಸಾಹಿತ್ಯವನ್ನೇ ಜನಮುಖಿ ಆಗಿಸಿದ ಕುರಿತು ಬಹು ಮುಖ್ಯವಾದ ಅಂಶವನ್ನು ದಾಖಲಿಸಿದ್ದಾರೆ. ವಚನ ಸಾಹಿತ್ಯ ವಿಶ್ವದ ಸಕಲ ಜೀವಾತ್ಮರಿಗೆ ಲೇಸ ಬಯಸಿದ ಬಹುದೊಡ್ಡ ಆಶಯದ ಜೊತೆ ಜೊತೆಗೆ ಕನ್ನಡ ಭಾಷೆಗೆ ಸಲ್ಲಿಸಿದ ಕಾಣಿಕೆಯನ್ನು ಯಾರು ಮರೆಯಲಾಗದು.

ಗರತಿಯ ಹಾಡುಗಳಲ್ಲಿ ಹಳ್ಳಿಗರ ಜೀವನ ಕುರಿತ ಲೇಖನದಲ್ಲಿ ನಮ್ಮ ಎಲ್ಲರ ಅಣ್ಣ ಡಾ.ಚೆನ್ನಣ್ಣ ವಾಲೀಕಾರರು  ಬಹು ಮನ ಮುಟ್ಟುವಂತಹ ಹಾಡುಗಳ ಮೂಲಕ ಹಳ್ಳಿಗರ ಸಹಜ ಜೀವನ,ಅವರ ನಂಬಿಕೆ,ಆಚಾರ ವಿಚಾರ ಕಟ್ಟಿಕೊಟ್ಟಿದ್ದಾರೆ.

ಶಿವ ಶಿವಾ ಎಂದರೆ ಶಿವನಮ್ಮ ಮನದಾಗ

ಶಿವದಾರ ನಮ್ಮ ಕೊರಳಾಗ!

ಶಿವರಾತ್ರಿ ಜಾಗರಣೆ

ನಮ್ಮ ಮನಿಯಾಗ….

ಎಂದು ಶಿವನನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಸಿಕೊಂಡ ಗರತಿಯರ ಹಾಡುಗಳು ನಿತ್ಮಸತ್ಯದ ಸಾಕ್ಷಾತ್ಕಾರ ಗಳು.ಧರ್ಮ ದೇವರು ಎಂಬುದು ಅದೇನೋ ವಿಶಿಷ್ಟ ವಸ್ತುವಲ್ಲ.ಧರ್ಮ ತನ್ನ ದಿನನಿತ್ಯದ ಕಾರ್ಯವೆಂದು,ಶಿವ ತನ್ನ ಬದುಕನ್ನು ಸದಾ ಮುನ್ನೆಡೆಸುವ,ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಆತ್ಮ ಬಂಧು ಎಂಬುದು ಗ್ರಾಮೀಣ ಗರತಿಯ ಭಾವ ಮತ್ತು ಅದು ಸಹಜ ಅನುಭಾವವು ಆಗಿದೆ.

ಗುಡ್ಡದ ಮಲ್ಲಯ್ಯ ಗಂಡು ಮಗನ ಕೊಡು

ಚೆಂಡು ದಿನಕೀನ ಚೆಲುವನ ಕೊಟ್ಟರೆ

ಗುಡ್ಡಕಾರುತಿ ಬೆಳಗೇನ..‌‌…

ಎಂದು ಮನದುಂಬಿ ಬೇಡಿಕೊಳ್ಳುವ ಗ್ರಾಮೀಣ ಮಹಿಳೆಗೆ ಕೊಟ್ಟೆ ಕೊಡುವನೆಂಬ ಅಪಾರ ನಂಬಿಕೆ…

*ಬಾಗೋಡಿ ಬಸವಯ್ಯ ನಾ ನಿನ್ನ ಶಿಸುವಯ್ಯ

ಹಾಲ ತಂದೀನಿ ಸೇವಿಸಯ್ಯ!*

ಮನದಾನ ಮಾತು ಗೆದಿಸಯ್ಯಾ…

ಎಂದು ಸಹಜವಾಗಿ ಓಣಿಯ ಹಿರಿಯರು ತಂದೆ ತಾಯಿ ಬಂಧು ಬಳಗ ಅಣ್ಣ ತಮ್ಮರಂತೆ ಶಿವ ಕೂಡಾ ಒಬ್ಬ ಮನೆಯವನಾಗಿ ಕುಟುಂಬದ ಹಿರಿಯನಂತೆ ಎಲ್ಲಾ ಆಗುಮಾಡುವವನಂತೆ ಅವರೊಂದಿಗೆ ಇರುತ್ತಾನೆ.ಇದು ಬರೆದಷ್ಟು ಮುಗಿಯದ ಸಾಹಿತ್ಯ.ಆದರೆ ಆ ಹಳ್ಳಿಗಳು ಇಂದು ಹುಡುಕಬೇಕಿದೆ.

ಡಾ.ಶಕುಂತಲಾ ದುರ್ಗಿಯವರು  ನಮ್ಮ ದೇಶದಲ್ಲಿ ಮಹಿಳೆಯರ ಪ್ರಗತಿ ಕುರಿತು  ತಮ್ಮ ಪ್ರಬಂಧದಲ್ಲಿ ಅಂಕಿ ಅಂಶಗಳ ಮೂಲಕ ಒಟ್ಟು ದೇಶದ ಜನಸಂಖ್ಯೆಯ ಆಧಾರದ ಮೇಲೆ ಚರ್ಚಿಸಿದ್ಜಾರೆ.ಮಹಿಳೆಯರ ಪ್ರಗತಿ ಇನ್ನೂ ಆಗಬೇಕೆಂಬುದು ಒಪ್ಪಬಹುದಾದ ಮಾತಾಗಿದೆ.

ಶರಣ ಜೀವಿ ಡಾ.ಎಂ.ಎಸ್.ಲಠ್ಠೆಯವರು ಡಾ.ಸಿದ್ಧಯ್ಯ ಪುರಾಣಿಕರ ಆಧುನಿಕ ವಚನಗಳಲ್ಲಿ ಲೋಕಾನುಭವ ಕುರಿತು ತುಂಬಾ ಹೊಸ ಹೊಳಹು ನೀಡಿದ ಪ್ರಬಂಧ ಇದಾಗಿದೆ.

*ಬದುಕಿನ ವಿಷವನ್ನೆ ಬಾಳಿನ ರಸವನ್ನಾಗಿ

ಮಾಡಿಕೊಳ್ಳುವ ಮರ್ಮವ ವಿವರಿಸಯ್ಯ…*

*ಮಾನವತೆಯ ಬಗ್ಗೆ ಮಾತನಾಡಿ ಮಾತನಾಡಿ

ಮಾನವತ್ವವನೇ ಕಳೆದುಕೊಂಡೆನಯ್ಯ…*

*ವಿಜ್ಞಾನಿಯ ಬುದ್ಧಿ ತತ್ವಜ್ಞಾನಿಯ ಮನ

ಕವಿಯ ಹೃದಯವ ಕರುಣಿಸಯ್ಯ…*

   ಹೀಗೆ ಒಬ್ಬ ಶ್ರೇಷ್ಠ ಆಡಳಿತ ಅಧಿಕಾರಿಯಾಗಿದ್ದ ಪುರಾಣಿಕರು  ಹಾಗೂ ಜಚನಿ ಈ ಈರ್ವರು ಆಧುನಿಕ ವಚನಕಾರರಲ್ಲಿ ಬಹುಮುಖ್ಯವಾದ ವಚನ ರಚನೆ ಮಾಡಿದ ಶ್ರೇಯಸ್ಸಿಗೆ ಪಾತ್ರರಾಗಿದ್ದು ಡಾ.ಲಠ್ಠೆಯವರಂತಹ  ಶ್ರೇಷ್ಠ ವ್ಯಕ್ತಿ ದಾಖಲಿಸಿದ್ದು ಸಹ ಅಧ್ಯಯನ ಯೋಗ್ಯವಾಗಿದೆ.

ಬಸವಣ್ಣನವರ ಐದು ವಚನಗಳ ವಿಶ್ಲೇಷಣೆ ಎಂಬ ಪ್ರಬಂಧದಲ್ಲಿ ಡಾ.ಮಲ್ಲಿಕಾರ್ಜುನ ಹಿರೇಮಠ ರ ಲೇಖನವಿದೆ.ಬಸವಣ್ಣನವರು ರಚಿಸಿದ ನೂರಾರು ವಚನಗಳಲ್ಲಿ ತಮಗಿಷ್ಟವಾದ ಐದು ವಚನಗಳ ಹಿನ್ನೆಲೆಯಲ್ಲಿ ಅವರು ಬಹು ಅರ್ಥಪೂರ್ಣವಾಗಿ, ಅಧ್ಯಯನ ಪೂರ್ಣವಾಗಿ ಆ ವಚನಗಳ ಕುರಿತು ಹೊಸ ಹೊಳಹು ನೀಡಿದ್ದಾರೆ.

ಕೊನೆಯದಾಗಿ ಈ ಸಾಹಿತ್ಯ ಸೌಗಂಧದ ಸಂಪಾದಕರಾದ ಗವೀಶ ಹಿರೇಮಠ ಅವರು

ಜೈ ಭಾರತ ಜನನೀಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಎಂದು ಮನದುಂಬಿ ಹಾಡಿದ ಈ ಶತಮಾನದ ಮೇರು ಕವಿ ಕುವೆಂಪು ಶಿರ್ಷಿಕೆ ಅಡಿಯಲ್ಲಿ ಕುವೆಂಪು ಅವರ ಕುರಿತ ಪ್ರಬಂಧವಿದೆ.

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ

ಕನ್ನಡಕ್ಕಾಗಿ ಕೊರಳೆತ್ತು  ಪಾಂಚಜನ್ಯ ಮೂಡುತ್ತದೆ

ಕನ್ನಡಕ್ಕಾಗಿ ಕಿರಿ ಬೆರಳೆತ್ತಿದರೂ ಸಾಕು

ಅದು ಗೋವರ್ಧನ ಗಿರಿಧಾರಿಯಾಗುತ್ತದೆ…

ಎಂದು ಕನ್ನಡ ಭಾಷಾಭಿಮಾನ ತುಂಬಿದ ಈ ಕವಿ ಪಡೆದ ನಾವು ನಮ್ಮ ನಾಡು ಧನ್ಯವು.

*ಹೂವಿಗಿಂತ ಕಣ್ಣೆ ಸವಿ

ಚೊನ್ನಕ್ಕಿಂತ ನಗೆಯೇ ಸವಿ

ಜೇನಿಗಿಂತ ಮುತ್ತೆ ಸವಿ*

*ಹಾಲು ಸವಿ ಜೇನು ಸವಿ

ಹಾಲು ಜೇನುಗಳನು ಮೀರಿ

ನೀನೇ ನನಗೆ ಹೆಚ್ಚು ಸವಿ….*

ಎಂದು  ಸಖಿ,ಪ್ರೇಯಸಿಯು ನೀಡುವ ಸುಖವು  ಅಮೃತಕಿಂತಲೂ ಮಿಗಿಲು ಎಂದು ಕವಿ ಕುವೆಂಪುರವರ ಅನೇಕ ಕವನಗಳು ಇಲ್ಲಿ ಓದಲು ಖುಷಿ ನೀಡುತ್ತವೆ.

ಹೀಗೆ ಈ ಸಾಹಿತ್ಯ ಸೌಗಂಧ ಕೃತಿಯು ಐವತ್ತು ವರ್ಷಗಳ ಹಿಂದಿನ ಎಲ್ಲ ಆಯಾಮಗಳ ಮೂಲಕ ಅಂದಿನ ಸಾಹಿತ್ಯದ ಪರಿಚಯ ಹೊಸ ತಲೆಮಾರಿನ ನಮಗೆ ಮತ್ತು ನಮ್ಮ ನಂತರದ ಮುಂದಿನ ತಲೆಮಾರಿಗೂ ಸಹ ಒಂದು ಸಾಕ್ಷಿಪ್ರಜ್ಞೆ ಯಾಗಿ ನಿಂತು ಹನ್ನೆರಡು ಜನ ಬಹು ಮುಖ್ಯವಾದ ಈ ನಾಡಿನ ಲೇಖಕರಿಂದ ಕಟ್ಟಿಕೊಟ್ಟಿದೆ.

ಕಳೆದ ವರ್ಷ ನಮ್ಮನ್ನು ಅಗಲಿದ ಗುಣಗ್ರಾಹಿ ಶ್ರೀ ಗವೀಶ ಹಿರೇಮಠರ ನೆನಪಿಗಾಗಿ ತರುತ್ತಿರುವ ಈ ಕೃತಿಗಾಗಿ ಈ ಲೇಖನದ ನೆಪದಲ್ಲಿ ಇದೆಲ್ಲ ಓದಲು ಹಾಗೂ ಬರೆಯಲು ಹಚ್ಚಿದ ಗುಣಗ್ರಾಹಿ ಸಂಪಾದಕ ಮಂಡಳಿಯ ಎಲ್ಲ ಗೆಳೆಯರಿಗೂ ವಂದಿಸಿ ಈ ಸಾಹಿತ್ಯ ಸೌರಭದ ಮಾತಿಗೂ ಹಾಗೂ ಲಿಂ.ಗವೀಶ ಹಿರೇಮಠರ ಆತ್ಮಕ್ಕೆ ಚಿರಶಾಂತಿ ಕೋರಿ ವಿಶ್ರಮಿಸುವೆ.ನಮಸ್ಕಾರ.


ಸಿದ್ಧರಾಮ ಹೊನ್ಕಲ್

Leave a Reply

Back To Top