ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ
ಯಾರಿಗೆ ಸ್ವಾತಂತ್ರ್ಯ ?
ಎಂ. ಆರ್. ಅನಸೂಯ
ಎಲ್ಲೆಲ್ಲೂ ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ಇಂಥ ಜಲ ಸಮೃದ್ಧಿಯ ನಡುವೆ ಸ್ವಾತಂತ್ಯ ಗಳಿಸಿ ಎಪ್ಪತ್ತೈದು ವರ್ಷ ಆಗಿದ್ದರ ಪ್ರಯುಕ್ತ ಅಮೃತ ಮಹೋತ್ಸವದ ಸಂಭ್ರಮದ ಆಚರಣೆಯ ಅಂಗವಾಗಿ ತ್ರಿವರ್ಣದ ವಿದ್ಯುತ್ ದೀಪಗಳ ಝಗಮಗಿಸುವ ಅಲಂಕಾರವು ನಾಡಿನಾದ್ಯಂತ ಸಡಗರಕ್ಕೆ ಸಾಕ್ಷಿಯಾಗಿತ್ತು. ಇಂಥಾ ಸಡಗರವನ್ನು ಕಣ್ತುಂಬಿಕೊಳ್ಳುವ ಆಸೆಯಿಂದ ನಾವು ಹೋಗಿದ್ದೆವು. ಕೋಡಿಬಿದ್ದ ಜಲಾಶಯ ಗಳಿಂದ ಹೊರ ಬೀಳುವ ಅಮೃತದಂಥಾ ಆ ಜಲಧಾರೆಯ ವೈಭವ ನೋಡುವ ಕಣ್ಣುಗಳಿಗೆ ತಂಪನ್ನೀಯುತ್ತ ಮನಸ್ಸಿಗೆ ಹಿತವಾಗಿತ್ತು. ಇಂತಹ ಕೆರೆ ಕಟ್ಟೆಗಳನ್ನು ನಿರ್ಮಿಸಿ ನಾಡಿನ ಸಮೃದ್ಧಿಗೆ ಕಾರಣವಾದ ಅಂದಿನ ಮೈಸೂರು ಮಹಾರಾಜರ ಆಳ್ವಿಕೆಯನ್ನು ನೆನೆದ ಮನವು ಕೃತಜ್ಞತೆಯಿಂದ ತುಂಬಿಬಂತು ಹೀಗೆ ಆಹ್ಲಾದಕರ ವಾತಾವರಣವನ್ನು ನೋಡುತ್ತಾ ಮನೆಗೆ ಹಿಂದಿರುಗುವಾಗ ಬರುವ ದಾರಿಯಲ್ಲಿದ್ದ ಗ್ರಾಮವೂಂದರ ದೇವಾಲಯಕ್ಕೆ ಹೋದೆವು. ದೇವತಾ ದರ್ಶನ ಮಾಡಿ ಅಲ್ಲೇ ಮುಖ್ಯದ್ವಾರದ ಬಳಿ ಕೆಲಹೊತ್ತು ಕುಳಿತೆವು. ಆಲ್ಲಿಗೆ ಬಂದ ಹೆಣ್ಣುಮಗಳೊಬ್ಬಳು ಮುಖ್ಯ ದ್ವಾರದ ಆಚೆಯೇ ನಿಂತಳು ಒಳಗೆ ಬಾರಮ್ಮ ಎಂದು ನಾನು ಕರೆದಾಗ ಆಕೆ ಮುಗ್ಧವಾಗಿ ‘ ನಾವ್ ಒಳಗೆ ಬರಂಗಿಲ್ಲ ‘ ಎಂದಳು ಅರ್ಥವಾಯಿತು. ಆಕೆ ಅಂತಹ ಶೋಷಣೆಗೆ ಒಗ್ಗಿಕೊಂಡ ಮನೋಭಾವ ಅವಳ ಮೊಗದಲ್ಲಿ ಕಾಣುತ್ತಿತ್ತು. ಆಕೆಯ ಪಾಲಿಗೆ ಗತ್ಯಂತರವಿಲ್ಲ ಅಲ್ಲಿಂದಲೆ ‘ ಸ್ವಾಮೇರ ‘ಎಂದು ಪೂಜಾರಪ್ಪನನ್ನು ಕರೆದಳು ಪೂಜಾರಪ್ಪ ಜಾಗೂರೂಕತೆಯಿಂದ ಅವಳ ಕೈ ಸೋಕದಂತೆ ಅವಳ ಕೈಗೆ ಕುಂಕುಮ, ಹೂ ಹಾಗು ತೀರ್ಥವನ್ನು ಕೊಟ್ಟರು ಆಕೆ ತನ್ನ ಭಕ್ತಿಯ ಕಿರುಗಾಣಿಕೆಯಾಗಿ ಕಾಸನ್ನು ತಟ್ಟೆಗೆ ಹಾಕಿ ಕೊಟ್ಟಿದ್ದನ್ನು ಭಕ್ತಿಯಿಂದ ಕಣ್ಣಿಗೊತ್ತಿಕೊಂಡಳು. ಅವಳಿಗೆ ಪ್ರವೇಶವಿಲ್ಲದಿದ್ದರೂ ಅವಳು ಹಾಕಿದ ಕಾಸಿಗಂತು ಪ್ರವೇಶ ದೊರೆಯಿತು. ಈ ಜಾತೀಯತೆಯ ದಾಸ್ಯದಿಂದ ಎಪ್ಪತ್ತೈದು ವಸಂತಗಳನ್ನು ಕಳೆದ ನಮ್ಮ ಸ್ವತಂತ್ರ ಭಾರತಕ್ಕೆ ಅದರಲ್ಲೂ ಗ್ರಾಮೀಣ ಭಾರತಕ್ಕೆ ಬಿಡುಗಡೆಯ ಸ್ವಾತಂತ್ಯವು ಸಿಕ್ಕಿಲ್ಲದ್ದು ವಿಪರ್ಯಾಸವಲ್ಲದೆ ಮತ್ತೇನು ! ಪರಿಸ್ಥಿತಿ ಹೀಗಿರುವಾಗ ಪ್ರಜಾಪ್ರಭುತ್ವದ ಮುಖ್ಯ ಆಶಯಗಳಾದಂಥ ಸಮಾನತೆ, ಸಹೋದರತೆ ಹಾಗೂ ಸ್ಥಾತಂತ್ಯಗಳಿಗೆಲ್ಲಿದೆ ಬೆಲೆ ? ಯಾರಿಗೆ ಸಿಕ್ಕಿದೆ ಸ್ಥತಂತ್ರ ? ಎಂಬ ವಿಷಾದ ಸುಳಿಯಿತು.