ಕರ್ನಾಟಕದಲ್ಲಿ ರಾಷ್ಟ್ರಧ್ವಜ ಸತ್ಯಾಗ್ರಹಗಳು

ಕರ್ನಾಟಕದಲ್ಲಿ ರಾಷ್ಟ್ರಧ್ವಜ ಸತ್ಯಾಗ್ರಹಗಳು

ಡಾ. ಎಸ್.ಬಿ. ಬಸೆಟ್ಟಿ

ಭಾರತದಲ್ಲಿ ಧ್ವಜ ಸತ್ಯಾಗ್ರಹ ಎಂಬುವುದು ಭಾರತೀಯ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಶಾಂತಿಯುತ ನಾಗರಿಕ ಅಸಹಕಾರದ ಅಭಿಯಾನವಾಗಿದ್ದು, ರಾಷ್ಟ್ರೀಯತಾವಾದಿ ಧ್ವಜವನ್ನು ಹಾರಿಸುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಚಲಾಯಿಸುವುದರ ಮೇಲೆ ಕೇಂದ್ರೀಕರಿಸಿತು ಮತ್ತು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಧ್ವಜಗಳನ್ನು ಹಾರಿಸುವುದನ್ನು ನಿಷೇದಿಸುವ ಕಾನೂನುಗಳು. ಧ್ವಜ ಸತ್ಯಾಗ್ರಹಗಳನ್ನು ೧೯೨೩ರಲ್ಲಿ ಜಬಲ್ಪುರ ಮತ್ತು ನಾಗ್ಪುರ ನಗರದಲ್ಲಿ ವಿಶೇಷವಾಗಿ ಭಾರತದ ಅನೇಕ ಭಾಗಗಳಲ್ಲಿ ನಡೆಸಲಾಯಿತು.

ಖಾಸಗಿ ಮತ್ತು ಸಾರ್ವಜನಿಕ ಕಟ್ಟಡಗಳ ಮೇಲೆ ರಾಷ್ಟ್ರೀಯತಾವಾದಿ ಧ್ವಜಗಳನ್ನು ಹಾರಿಸುವುದು(ಕೆಲವೊಮ್ಮೆ ಸರ್ಕಾರಿ ಕಟ್ಟಡಗಳನ್ನು ಒಳಗೊಂಡಂತೆ) ಸಾಮಾನ್ಯ ರಾಷ್ಟ್ರೀಯತಾವಾದಿ ನಾಯಕರಾದ ಬಿಪಿನ್ ಚಂದ್ರ ಪಾಲ್ ಮತ್ತು ಲಾಲಾ ಲಜಪತ್ ರಾಯ್ ಅವರ ಉದಯದೊಂದಿಗೆ ಇಂತಹ ಪ್ರತಿಭಟನೆಯ ಕಾರ್ಯಗಳು ಭಾರತದಾದ್ಯಂತ ಕರೆನ್ಸಿಯನ್ನು ಗಳಿಸಿದವು. ಧ್ವಜ ಸತ್ಯಾಗ್ರಹವು ಧ್ವಜಾರೋಹಣವನ್ನು ಬ್ರಿಟಿಷರು ನಾಗರಿಕ ಸ್ವಾತಂತ್ರ್ಯದ ಮೇಲೆ ಹೇರಿದ ನಿರ್ಬಂಧಗಳ ವಿರುದ್ದ ಮತ್ತು ಒಟ್ಟಾರೆಯಾಗಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ನ್ಯಾಯಸಮ್ಮತತೆಯ ವಿರುದ್ದವಾಗಿ ವಿವರಿಸಲು ರಚಿಸಲಾದ ಪದವಾಗಿದೆ. ಅಸಹಕಾರ ಚಳುವಳಿ(೧೯೨೦-೧೯೨೨) ಮತ್ತು ಉಪ್ಪಿನ ಸತ್ಯಾಗ್ರಹ(೧೯೩೦) ಮತ್ತು ಕ್ವಿಟ್ ಇಂಡಿಯಾ ಚಳುವಳಿ(೧೯೪೨)ದ ಪ್ರಮುಖ ಅಂಶಗಳ ಸಮಯದಲ್ಲಿ ಪ್ರವರ್ದಮಾನಕ್ಕೆ ಬಂದ ಈ ದಂಗೆಯ ವಿಧಾನಗಳು ಸತ್ಯಾಗ್ರಹದ ತಂತ್ರದೊಂದಿಗೆ ರಾಷ್ಟ್ರೀಯವಾದಿ ಧ್ವಜವನ್ನು ಹಾರಿಸುವುದನ್ನು ಸಂಯೋಜಿಸಿದವು. ಹಿಂಸಾತ್ಮಕ ನಾಗರಿಕ ಅಸಹಕಾರ ಮಹಾತ್ಮಾ ಗಾಂಧಿಯವರ ಪ್ರವರ್ತಕ. ರಾಷ್ಟ್ರೀಯವಾದಿಗಳು ಕಾನೂನನ್ನು ಉಲ್ಲಂಘಿಸಲು ಮತ್ತು ಬಂಧನವನ್ನು ವಿರೋಧಿಸದೆ ಅಥವಾ ಪೊಲೀಸರ ವಿರುದ್ದ ಪ್ರತೀಕಾರ ಮಾಡದೆ ಧ್ವಜವನ್ನು ಹಾರಿಸಲು ಪ್ರೋತ್ಸಾಹಿಸಲಾಯಿತು.

ಧ್ವಜ ಸತ್ಯಾಗ್ರಹಗಳು ಹೋರಾಟದ ಉದ್ದಕ್ಕೂ ಗಾಂಧಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ರಾಷ್ಟ್ರೀಯವಾದಿ ದಂಗೆಗಳ ಸಮಯದಲ್ಲಿ ಧಿಕ್ಕರಿಸುವ ಸಾಮಾನ್ಯ ಕ್ರಿಯೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಧ್ವಜವನ್ನು ದೊಡ್ಡ ಮೆರವಣಿಗೆಗಳು ಮತ್ತು ರಾಷ್ಟ್ರೀಯವಾದಿ ಜನಸಮೂಹದಿಂದ ನಿಯಮಿತವಾಗಿ ಘೋಷಿಸಲಾಯಿತು. ೩೧ ಡಿಸೆಂಬರ್ ೧೯೨೯ ರಂದು ಕಾಂಗ್ರೆಸ್ ಅಧ್ಯಕ್ಷ ಜವಾಹರಲಾಲ ನೆಹರು ಅವರು ರಾವಿ ನದಿಯ ದಡದಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸುವದರೊಂದಿಗೆ ಪೂರ್ಣ ಸ್ವರಾಜ್ ಸ್ವಾತಂತ್ರ್ಯದ ಘೋಷಣೆಯನ್ನು ಅಂಗೀಕರಿಸಿದರು. ೧೯೪೨ರ ಅಗಸ್ಟ್ ೭ರಂದು ಮುಂಬೈ(ಆಗಿನ ಬಾಂಬೆ)ನಲ್ಲಿರುವ ಗೋವಾಲಿಯಾ ಟ್ಯಾಂಕನಲ್ಲಿ ಕ್ವಿಟ್ ಇಂಡಿಯಾ ದಂಗೆಯ ಪ್ರಾರಂಭದಲ್ಲಿ ಧ್ವಜವನ್ನು ಹಾರಿಸಲಾಯಿತು.

೧೯೨೩ರಲ್ಲಿ ನಾಗ್ಪುರ ಮತ್ತು ಜಬಲ್ಪುರದ ಧ್ವಜ ಸತ್ಯಾಗ್ರಹವು ಹಲವಾರು ತಿಂಗಳುಗಳ ಕಾಲ ನಡೆಯಿತು. ಧ್ವಜವನ್ನು ಹಾರಿಸುವ ಹಕ್ಕನ್ನು ಒತ್ತಾಯಿಸುವ ರಾಷ್ಟ್ರೀಯವಾದಿ ಪ್ರತಿಭಟನಾಕಾರರ ಬಂಧನವು ಭಾರತದಾದ್ಯಂತ ವಿಶೇಷವಾಗಿ ಗಾಂಧೀಯನ್ನು ಇತ್ತೀಚೆಗೆ ಬಂಧಿಸಿದಂತೆ ಆಕ್ರೋಶಕ್ಕೆ ಕಾರಣವಾಯಿತು. ಸರ್ದಾರ್ ವಲ್ಲಭಭಾಯಿ ಪಟೇಲ್, ಜಮ್ನಾಲಾಲ್ ಬಜಾಜ್, ಚಕ್ರವರ್ತಿ ರಾಜಗೋಪಾಲಾಚಾರಿ, ಡಾ. ರಾಜೇಂದ್ರ ಪ್ರಸಾದ್ ಮತ್ತು ವಿನೋಬಾ ಭಾವೆ ಮುಂತಾದ ರಾಷ್ಟ್ರೀಯವಾದಿ ನಾಯಕರು ದಂಗೆವನ್ನು ಸಂಘಟಿಸಿದರು ಮತ್ತು ದಕ್ಷಿಣದ ತಿರುವಾಂಕೂರ್ ರಾಜ್ಯ ಸೇರಿದಂತೆ ವಿವಿಧ ಪ್ರದೇಶಗಳಿಂದ ಸಾವಿರಾರು ಜನರು ನಾಗಪುರ ಮತ್ತು ಇತರ ಭಾಗಗಳಿಗೆ ಪ್ರಯಾಣಿಸಿದರು. ಕೇಂದ್ರ ಪ್ರಾಂತ್ಯಗಳ(ಈಗ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದಲ್ಲಿದೆ) ನಾಗರಿಕ ಅಸಹಕಾರದಲ್ಲಿ ಭಾಗವಹಿಸಲು. ಕೊನೆಯಲ್ಲಿ, ಬ್ರಿಟಿಷರು ಪಟೇಲ್ ಮತ್ತು ಇತರ ಕಾಂಗ್ರೆಸ್ ನಾಯಕರೊಂದಿಗೆ ಒಪ್ಪಂದವನ್ನು ಮಾಡಿಕೊಂಡರು, ಪ್ರತಿಭಟನಾಕಾರರು ತಮ್ಮ ಮೆರವಣಿಗೆಯನ್ನು ಅಡೆತಡೆಯಿಲ್ಲದೆ ನಡೆಸಲು ಅನುಮತಿ ನೀಡಿದರು ಮತ್ತು ಬಂಧಿತರೆಲ್ಲರ ಬಿಡುಗಡೆಯನ್ನು ಪಡೆದರು. 

ಕರ್ನಾಟಕದಲ್ಲಿ ರಾಷ್ಟ್ರಧ್ವಜ ಸತ್ಯಾಗ್ರಹಗಳು:

(೧) ಅಗಷ್ಟ ೧೯೩೨ರಲ್ಲಿ ಶ್ರೀ ಶಂಕರ ಕುರ್ತಕೋಟಿ ಮುಂಬಯಿಯ ಸೆಕ್ರೆಟರೇಟದ ಮೇಲೆ ಧ್ವಜ ಹಾರಿಸಿದರು.

            ಗದಗ ತಾಲೂಕ ಸಮೀಪದ ಹಳ್ಳಿ ಕುರ್ತಕೋಟಿ. ಕುರ್ತಕೋಟಿಯ ಪಾಟೀಲರು ಲಿಂಗೋ ರಾಮಚಂದ್ರ ಕುರ್ತಕೋಟಿಯವರು. ಲಿಂಗೋ ರಾಮಚಂದ್ರ ಕುರ್ತಕೋಟಿಯವರು ಲಿಂಗನಗೌಡರಾಗಿ ಗೌಡಿಕೆ ಮಾಡಿದವರು. ಅಂದಿನ ದಿನಗಳಲ್ಲಿ  ಇವರ ಮನೆಗೆ ‘ಕೇಸರಿ’ ಪತ್ರಿಕೆ ಬರುತ್ತಿತ್ತು. ಕೇಸರಿ ಪತ್ರಿಕೆ ಬರುತ್ತದೆ ಎಂದರೆ ಅವರ ಮನೆತನದ ಮೇಲೆ ಸರಕಾರದ ಕಣ್ಣಿತ್ತು. ೧೯೦೮ರ ಮಾರ್ಚ್ ೮ ರಂದು ಲಿಂಗನಗೌಡರಿಗೆ ‘ಹದ್ಲಿ’ಯಲ್ಲಿ ಜನಿಸಿದ ಮಗುವೆ ಶಂಕರ ಅವರು. ಹದ್ಲಿ ಶಂಕರ ಅವರ ಅಜ್ಜಿ ಮನೆ, ಸಿರಿತನ ತುಂಬಿದ ಮನೆ. ಬೆಳ್ಳಿಯ ಚಮಚ ಬಾಯಲ್ಲಿ ಹಿಡಿದೆ ಹುಟ್ಟಿದ ಮಗು ಶಂಕರ ಅವರು. ಶಂಕರ ಅವರ ಪ್ರಾಥಮಿಕ ಶಾಲೆ ಕುರ್ತಕೋಟಿಯಲ್ಲಿ ಪ್ರಾರಂಭವಾಯಿತು. ಇವರ ಮನೆಗೆ ಕುಲಕರ್ಣಿ ಎಂದು ಕೆಲವರು ಹೆಸರು ಇಟ್ಟುಕೊಂಡಿದ್ದರೆ ಇನ್ನೂ ಕೆಲವರು ಪಾಟೀಲ ಎಂದು ಹೇಳಿಕೊಳ್ಳುತ್ತಿದ್ದರು. ಮುಂದೆ ಇವರು ಕುರ್ತಕೋಟಿ ಎಂದು ಹೆಸರನ್ನು ಇರಿಸಿಕೊಂಡರೆಂದು ಹೇಳುತ್ತಾರೆ.

            ಲಿಂಗೇಗೌಡರು ೧೯೨೦ರಲ್ಲಿ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ ಕರೆದುಕೊಂಡು ಹೋಗಿದ್ದರು. ಆಗ ಶಂಕರ ಅವರಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದಿದೆ.  ಆದರೆ ಅದು ಸಂದಿಗೊಂದಿಗಳಲ್ಲಿ ಉಳಿದಿದೆ ಎನ್ನುವ ಅನುಭವವಾಗಿತ್ತು. ಮುಂದೆ ಅವರು ಹದಿನಾಲ್ಕು ವರ್ಷದವನಾದಾಗ ಬೆಳಗಾಂವಿಯಲ್ಲಿ ನಡೆದ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ ಅವರ ತಂದೆ ಕರೆದುಕೊಂಡು ಹೋಗಿದ್ದರು. ಕರ್ನಾಟಕದ ಸಿಂಹವೆಂದೇ ಹೆಸರಾಗಿದ್ದ ಗಂಗಾಧರರಾವ್ ದೇಶಪಾಂಡೆಯವರು ಆ ಅಧಿವೇಶನದ ವ್ಯವಸ್ಥೆ ಮಾಡಿದ್ದರು. ಎನ್.ಎಸ್. ಹರ್ಡಿಕರ ಅವರು ಹಿಂದುಸ್ಥಾನಿ ಸೇವಾದಳದವರಿಂದ ಎಲ್ಲ ಕೆಲಸ ಕಾರ‍್ಯಗಳನ್ನು ನಿಭಾಯಿಸಿದ್ದರು. ಇದರ ಪರಿಣಾಮ ಈ ಶಂಕರ ಅವರ ಮೇಲಾಯಿತು. ರಾಷ್ಟ್ರಸೇವೆಯಲ್ಲಿ ಧುಮುಕುವ ಪ್ರೇರಣೆ ಕೂಡ ದೊರೆಯಿತು. 

ಶಂಕರವರಿಗೆ ಇಷ್ಟವಿಲ್ಲದ ಎಷ್ಟೋ ಕೆಲಸಗಳು ಮನೆಯಲ್ಲಿ ನಡೆಯುತ್ತಿದ್ದವು. ಅವರಿಗೆ ಎಲ್ಲರಂತೆ, ಸಾಮಾನ್ಯ ಜನರಂತೆ ಬದುಕುವುದು ಬೇಕಿತ್ತು. ತನ್ನದೇ ಆದ ವೈಭವದ ಬದುಕು ಅವರಿಗೆ ಬೇಕಿರಲಿಲ್ಲ. ಹೀಗಾಗಿ ಅವರು ಮನೆಬಿಟ್ಟು ನಡೆದುಬಿಟ್ಟರು.

ಗದಗಿಗೆ ಬಂದು ಅಲ್ಲಿ ಕಾಂಗ್ರೆಸ್ ಮುಖಂಡರಾದ ಡಾ|| ಹುಯಿಲಗೋಳ ಬಳಿ ಹೋಗಿ ‘ನನಗೆ ಕುರ್ತಕೋಟಿಯಲ್ಲಿ ಬದುಕುವ ಇಷ್ಟವಿಲ್ಲ. ನನಗೆ ಅಲ್ಲಿಯ ವಾತಾವರಣ ಹಿಡಿಸುವದಿಲ್ಲ. ಆದ್ದರಿಂದ ನಾನು ಮನೆಬಿಟ್ಟು ಬಂದಿದ್ದೇನೆ.  ತುಂಗಭದ್ರದ ಬಳಿ ಇರುವ ತಾರಾನಾಥ ಆಶ್ರಮಕ್ಕೆ ಹೋಗುತ್ತೇನೆ. ನನಗೆ ದಾರಿ ಖರ್ಚಿಗೆ ಸ್ವಲ್ಪ ಹಣದ ವ್ಯವಸ್ಥೆ ಮಾಡಿಕೊಡಿರಿ’ ಎಂದರು  ಅವರು ಶಂಕರವರಿಗೆ ಹಣದ ಸಹಾಯ ಮಾಡಿದರು. ಅವರ ಸಹಾಯದಿಂದ ಶಂಕರ ಅವರು ಕುರ್ತಿಕೋಟಿಯ ವೈಭವದ ಜೀವನಕ್ಕೆ ಶರಣು ಹೊಡೆದು ಸರಳ ಸಾತ್ವಿಕ ಸಾಮಾನ್ಯ ವ್ಯಕ್ತಿಯಾಗಿ ಸಾಮಾನ್ಯ ಜನರಲ್ಲಿ ಬೆರೆದು ತಾರಾನಾಥ ಆಶ್ರಮದ ಆಶ್ರಮವಾಸಿಯಾದರು.  ತಾರಾನಾಥ ಆಶ್ರಮದಲ್ಲಿ ಶಂಕರ ಅವರು ಖುಷಿಯಾಗಿದ್ದರು.  ಆದರೆ ಮನೆಯಲ್ಲಿ ಎಲ್ಲರೂ ಗಾಬರಿಯಾದರು. ಶಂಕರವರಿಗಾಗಿ ಎಲ್ಲೆಡೆ ಹುಡುಕಾಟ ನಡೆಯಿತು. ಆರು ತಿಂಗಳಾದರೂ ಪತ್ತೆಯಾಗಲಿಲ್ಲ. ಆರು ತಿಂಗಳ ನಂತರ ಶಂಕರರು ತಾರಾನಾಥರಲ್ಲಿರುವುದು ತಿಳಿಯಿತು. ಆಗ ಅವರ ತಂದೆ, ಅಣ್ಣ ಅವನಿಗೆ ಬುದ್ಧಿ ಹೇಳಿ, ಒಪ್ಪಿಸಿ, ಕರೆದುಕೊಂಡು ಬಂದು ಧಾರವಾಡದಲ್ಲಿ ಹೈಸ್ಕೂಲಿಗೆ ಹಚ್ಚಿದರು.

ಆಗ ಧಾರವಾಡದಲ್ಲಿ ಸ್ವಾತಂತ್ರ್ಯ ಕಹಳೆ ಮೊಳಗುತ್ತಿತ್ತು. ಕಾಂಗ್ರೆಸ್ ಧುರೀಣರೆಲ್ಲ ದತ್ತಾತ್ರೇಯ ಗುಡಿಯಲ್ಲಿ ಪ್ರತಿನಿತ್ಯ ಕೂರುತ್ತಿದ್ದರು.  ಅಂತೂ ಆಗ ಶಂಕರರು ಮ್ಯಾಟ್ರಿಕ್ ಓದುತ್ತಿದ್ದರು. ಆಗ ಇವರು ಆ ಮೀಟಿಂಗಿಗೆ ಹೋಗಿರುತ್ತಿದ್ದರು. ಡಾ|| ಯೂಸುಫ್, ಮೆಹರ ಅಲಿ, ಸಿಂಗಾಪುರೆ ಮುಂತಾದ ಅನೇಕ ಮುಖಂಡರು ಮುಂಬಯಿಯ ಯುವ ವೇದಿಕೆಯ ಕಾರ‍್ಯಕರ್ತರು ಧಾರವಾಡಕ್ಕೆ ಬರುತ್ತಿದ್ದರು. ಆಗ ಶಂಕರ ಅವರು ಧಾರವಾಡದಲ್ಲಿ ಯುವಕರನ್ನೆಲ್ಲ ಸೇರಿಸಿ ಇಲ್ಲಿಯ ಯುವ ವೇದಿಕೆಗೆ ಮುಖ್ಯಸ್ಥನಾಗಿದ್ದರು. ಹೀಗೆ ವಿದ್ಯಾರ್ಥಿ ಜೀವನದಲ್ಲಿಯೇ ರಾಜಕೀಯದಲ್ಲಿ ಧುಮುಕಿದ ಹಾಗೂ ಹೆಸರು ಕೂಡಾ ಸಂಪಾದಿಸಿದ. ೧೯೨೮ ರಲ್ಲಿ ಸಾಯಮನ್ ಕಮೀಶನ್ ಧಾರವಾಡಕ್ಕೆ ಬರುವದಿತ್ತು. ಅದನ್ನು ಬಹಿಷ್ಕರಿಸುವಂತೆ ಮಹಾತ್ಮಾ ಗಾಂಧೀಜಿಯವರು ಕರೆಕೊಟ್ಟಿದ್ದರು.

ಕಾಂಗ್ರೆಸ್ ಯುವ ವೇದಿಕೆಯ ಮುಖ್ಯಸ್ಥನಾದ ಶಂಕರ ಅವರು ವಿದ್ಯಾರ್ಥಿಗಳನ್ನೆಲ್ಲ ಸಂಘಟಿಸಿ ಧಾರವಾಡದ ಕಡಪಾ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಿ ಡಿ.ಪಿ. ಕರಮರಕರ ಅವರನ್ನು ಮುಖ್ಯ ಅತಿಥಿಯನ್ನಾಗಿ ಕರೆದಿದ್ದರು. ಹೈಸ್ಕೂಲು, ಕಾಲೇಜುಗಳ ವಿದ್ಯಾರ್ಥಿ ವೃಂದವೆಲ್ಲ ಕಡಪಾ ಮೈದಾನದಲ್ಲಿ ಕಿಕ್ಕಿರಿದು ತುಂಬಿತ್ತು. ಎಲ್ಲರ ಮುಖದಲ್ಲೂ ಹುಮ್ಮಸ್ಸು ತುಂಬಿತ್ತು. ಡಿ.ಪಿ. ಕರಮರಕರ ಅವರ ಭಾಷಣ ವಿದ್ಯಾರ್ಥಿ ವೃಂದವನ್ನು ಬಡಿದೆಬ್ಬಿಸಿತು.  ಈ ರಾಜಕೀಯ ರಂಗದಲ್ಲಿ ಧುಮುಕಿದ ಶಂಕರವರಿಗೆ ಯಾವುದೂ ಬೇಕಿರಲಿಲ್ಲ. ಸಿರಿ, ಸಂಪತ್ತು, ವಿದ್ಯೆ, ವೈಭವ ಎಲ್ಲವೂ ಸ್ವಾತಂತ್ರ್ಯ ದೇವಿಯ ಕಡೆಗಿತ್ತು. ಹೀಗಾಗಿ ಶಂಕರವರು ವಿದ್ಯೆಗೆ ಶರಣು ಹೊಡೆದು ಸಂಪೂರ್ಣವಾಗಿ ಸ್ವಾತಂತ್ರ್ಯ ಚಳುವಳಿಗೆ ಇಳಿದರು. ಸೈಮನ್ ಕಮೀಶನ್ ತಿರಸ್ಕರಿಸಿ ವಿದ್ಯಾರ್ಥಿವೃಂದ ತೋರಿದ ನಿಷ್ಠೆ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯುವಂತಾಯಿತು.

ಶಂಕರ ಅವರು ಸ್ವತಂತ್ರರಾಗಿದ್ದರು.  ಅವರು ಸಂಪೂರ್ಣವಾಗಿ ರಾಜಕೀಯಕ್ಕಿಳಿದಿದ್ದರು. ಆಗ ಅವರು ಯಾರಿಗೂ ಅಂಜಬೇಕಾಗಿರಲಿಲ್ಲ.  ಸತ್ಯಾಗ್ರಹ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.  ಅವರ ಮುಖಂಡತ್ವದಲ್ಲಿ ಎಲ್ಲ ಶಾಲೆ, ಕಾಲೇಜುಗಳನ್ನು ಬಂದು ಮಾಡಿಸುತ್ತಿದ್ದರು. ಸತ್ಯಾಗ್ರಹ ಆಂದೋಲನದಲ್ಲಿ ಶಂಕರ ಸಂಪೂರ್ಣವಾಗಿ ಧುಮುಕಿದರು. ಶಂಕರವರಿಗೆ ಆಗ ಯಾವ ಭಯವೂ ಇರಲಿಲ್ಲ.  ಶಾಲೆ, ಕಾಲೇಜು, ಆಫೀಸು ಒಂದು ಮಾಡಿಸುವಲ್ಲಿ ಮುಂದಿರುತ್ತಿದ್ದರು. ಪೊಲೀಸರು ಅವರನ್ನು ಹಿಡಿದು ಮುಂದೆ ಹೀಗೆ ಮಾಡಬೇಡವೆಂದು ಸೂಚನೆ ಕೊಟ್ಟು ಬಿಟ್ಟುಬಿಟ್ಟರು. ಆದರೆ ಶಂಕರರು ತಮ್ಮ ಕೆಲಸವನ್ನು ಮುಂದುವರಿಸಿದರು. ೧೯೩೨ ರಲ್ಲಿ ಕಾಯ್ದೆ ಭಂಗ ಚಳುವಳಿ ಜೋರಾಯಿತು.

ಶ್ರೀ ಆರ್.ಎಸ್. ಹುಕ್ಕೇರಿಕರ ಹಾಗೂ ಡಾ.ಎನ್.ಎಸ್. ಹರ್ಡಿಕರ ಅವರ ಮಾರ್ಗದರ್ಶನದಲ್ಲಿ ಕಾರ‍್ಯಕ್ರಮ ನಡೆದಿತ್ತು. ಆಗ ಅವರು ಶಂಕರರು ಕರ‍್ಯದಕ್ಷತೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದ ಆಸಕ್ತಿ, ಕಂಡು ಧಾರವಾಡಕ್ಕಿಂತ ಅಂದಿನ ರಾಜಧಾನಿಯಾದ ಮುಂಬಯಿಯಲ್ಲಿ ಇವರಿದ್ದರೆ ಹೆಚ್ಚು ಕೆಲಸವಾಗುವದೆಂದು ಶಂಕರ ಅವರಿಗೆ ಮುಂಬಯಿಗೆ ಹೋಗಲು ಹೇಳಿದರು. ಮಹಾತ್ಮಾ ಗಾಂಧೀಜಿಯವರ ಆಪ್ತ ಕಾರ್ಯದರ್ಶಿಯಾಗಿ ಮೀರಾ ಬೆನ್ ಇದ್ದರು. ಕರ್ನಾಟಕದ ವತಿಯಿಂದ ಕೆಲಸ ಮಾಡಲು ಶಂಕರ ಅವರು ಆಯ್ಕೆಯಾಗಿ ಮುಂಬಯಿಯಲ್ಲಿ ಉಳಿದರು. ಸೈಕ್ಲೊಸ್ಟೈಲ್ ಮಾಡುವದು, ಹಂಚುವುದು, ಹ್ಯಾಂಡ್ ಬಿಲ್ಲುಗಳನ್ನು ಹಂಚುವುದು ಮುಂತಾದ ಜನಜಾಗೃತಿ ಕೆಲಸದಲ್ಲಿ ತೊಡಗಿದರು.

ಸ್ವಯಂ ಸೇವಕರನ್ನು ಸಂಘಟಿಸುವದು, ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವದು, ಇವರ ಮಹತ್ವದ ಕೆಲಸವಾಗಿತ್ತು. ಉಳಿಯಲು ಸ್ಥಳ, ಊಟ ಇಷ್ಟಾದರೆ ಇವರಿಗೆ ಸಾಕಾಗಿತ್ತು. ಅಗಷ್ಟ್ ತಿಂಗಳ ೧೯೩೨ರಲ್ಲಿ ಇಂಗ್ಲೆಂಡಿನಿಂದ ಒಂದು ನಿಯೋಗ ಭಾರತಕ್ಕೆ ಬಂದಿತ್ತು. ಅದು ಪಾರ್ಲಿಮೆಂಟ್ ಮೆಂಬರ್ ನಾಲ್ಕು ಜನರ ನಿಯೋಗ, ಶಾಂತಿಯುತ ಸತ್ಯಾಗ್ರಹವನ್ನು ಗಾಂಧೀಜಿ ಹೇಗೆ ಮಾಡಿಸುತ್ತಾರೆಂಬುದನ್ನು ಅವರು ಪ್ರತ್ಯಕ್ಷವಾಗಿ ನೋಡಿ ತಿಳಿದುಕೊಳ್ಳಬೇಕಾಗಿತ್ತು. ನಾಲ್ಕು ಜನ ಪಾರ್ಲಿಮೆಂಟ್ ಮೆಂಬರ ನಿಯೋಗ ಭಾರತಕ್ಕೆ ಬರುವದನ್ನು ತಿಳಿದು ಗಾಂಧೀಜಿಯವರ ಆದೇಶದಂತೆ ದೊಡ್ಡ ಕಾರ್ಯಕ್ರಮವೊಂದನ್ನು ಹಾಕಿಕೊಂಡಿದ್ದರು.

ಆಹಿಂಸಾತ್ಮಕ ಆಂದೋಲನ ನೋಡಲು ಬಂದ ನಿಯೋಗದೆದುರು ಸೆಕ್ರೆಟರೇಟರ ಮೇಲೆ ಧ್ವಜ ಏರಿಸುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು.  ಸೆಕ್ರೆಟರೇಟದ ಬಳಿ ಹದಿನೈದು ಇಪ್ಪತ್ತು ಸಾವಿರ ಜನ ಸೇರಿದ್ದರು. ಅನೇಕರ ಕೈಯಲ್ಲೂ ಧ್ವಜ, ನೂರು ಜನರ ಗುಂಪು ಮಾಡಿ ಅದಕ್ಕೆ ಒಬ್ಬ ಮುಖ್ಯಸ್ಥನನ್ನು ನೇಮಿಸಲಾಗಿತ್ತು. ಇಂಥ ಒಂದು ಗುಂಪಿಗೆ ಶಂಕರರು ಮುಖ್ಯಸ್ಥರಾಗಿದ್ದರು.  ಧ್ವಜ ಏರಿಸಲು ನಾ ಮುಂದು ನೀ ಮುಂದು ಎಂದು ಒಂದೊಂದು ಗುಂಪು ಮುಂದೆ ಬರುತ್ತಿತ್ತು. ಪೊಲೀಸರು ಅವರನ್ನು ಹಿಡಿದು ಹೊಡೆದು ಬಡಿದು ಲಾಕಪ್ಪಿಗೆ ಹಾಕುತ್ತಿದ್ದರು.

ಶಂಕರನನ್ನು ಗುಂಪಿನ ಮುಖಂಡನೆಂದು ಲಾಕಪ್ಪಿಗೆ ಹಾಕಿದರು. ಪೊಲೀಸ್ ಸ್ಟೇಶನ್ನಿನ ನ್ಯಾಯಾಧೀಶರೆದುರು ನಿಲ್ಲಿಸಿದರು. ವಿಚಾರಣೆಯ ನಂತರ ಶಂಕರರವರಿಗೆ ಒಂಬತ್ತು ತಿಂಗಳ ಸಶ್ರಮ ಶಿಕ್ಷೆ ಎರಡುನೂರು ರೂಪಾಯಿ ದಂಡ ಅಥವಾ ಮತ್ತೆ ಮೂರು ತಿಂಗಳ ಸಶ್ರಮ ಶಿಕ್ಷೆಯಾಗಿ ಜೈಲಿಗೆ ಕಳಿಸಲಾಯಿತು.  ಮೂರು ದಿನ ಯರವಡಾ ಜೈಲಿನಲ್ಲಿ ಇಟ್ಟು ಸ್ಥಳ ಇಲ್ಲದ ಕಾರಣ ಕ್ಯಾಂಪ ಜೈಲಿನಲ್ಲಿ ಇಟ್ಟರು.

ಜೈಲು ಎಂದರೆ ಅದೊಂದು ದೊಡ್ಡ ಆಶ್ರಮವಾಗಿತ್ತು.  ಹಿರಿಯ ಮಹಾ ಮುತ್ಸದ್ದಿಗಳೆಲ್ಲ ಅಲ್ಲಿ ಇದ್ದರು. ಅವರಿಂದ ಶಂಕರವರಿಗೆ ಏನು ಕೊಟ್ಟರೂ ದೊರೆಯದ ವಿಚಾರ, ಆಚಾರ ದೊರೆತು ಇವರ ವ್ಯಕ್ತಿತ್ವದ ಬೆಳವಣಿಗೆ ಆಯಿತು. ಅವರೆಲ್ಲ ಕ್ಲಾಸ ತೆಗೆದುಕೊಂಡು ಜ್ಞಾನ ದಾನ ಮಾಡುತ್ತಿದ್ದರು. ಅಂತೆಯೇ ಇವರ ಪಾಲಿಗೆ ಜೈಲು ವ್ಯಕ್ತಿತ್ವ ವಿಕಾಸನ ಕೇಂದ್ರವಾಗಿ ಪರಿಣಮಿಸಿತು.

ಆಚಾರ‍್ಯ ಭಾಗವತ ಬ್ರಹ್ಮಚಾರಿ, ವಿಚಾರವಂತ ಲೇಖಕ ಎಸ್.ಎಮ್. ಜೋಶಿ, ಗಾಂಧೀಜಿಯವರ ಮಗ ರಾಮದಾಸ, ಹಾಗೂ ಇನ್ನೂ ಅನೇಕ ಮಹನೀಯರ ಸಹವಾಸದೊಂದಿಗೆ ಅನೇಕ ವಿಚಾರ ವಿನಿಮಯ, ಚರ್ಚೆ ನಡೆಯುತ್ತಿತ್ತು.  ಬೌದ್ಧಿಕ ಬೆಳವಣಿಗೆ ಆಗುವುದರ ಜೊತೆಗೆ ವ್ಯಕ್ತಿತ್ವ ವಿಕಾಸವು ಆಯಿತು.

ಒಬ್ಬ ಶ್ರೀಮಂತ ಪುತ್ರನಾಗಿ ಜನಿಸಿ, ಸಮತಾವಾದಿಯಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ, ಖಾದಿಪ್ರೇಮಿಯಾಗಿ, ಬಾಳಿದ ಶ್ರೀ ಶಂಕರ ಕುರ್ತಕೋಟಿ ಯವರು ಹಲವಾರು ವ್ಯಕ್ತಿತ್ವ ತುಂಬಿದ ವ್ಯಕ್ತಿ.

(೨) ಸ್ವಾಭಿಮಾನದ ಶಿವಪುರ ರಾಷ್ಟ್ರಧ್ವಜ ಸತ್ಯಾಗ್ರಹ (ಮದ್ದೂರ ತಾಲೂಕ) :

            ಏಪ್ರಿಲ್ ೧೯೩೮ರಲ್ಲಿ ಸಿದ್ಧಲಿಂಗಯ್ಯ ಅಧ್ಯಕ್ಷತೆಯಲ್ಲಿ ಮಂಡ್ಯ ಜಿಲ್ಲೆ ಮದ್ದೂರ ತಾಲೂಕ ಶಿವಪುರ ಗ್ರಾಮದ ಶಿಂಷಾ ನದಿ ದಂಡೆ ಮೇಲೆ ಮೈಸೂರು ಕಾಂಗ್ರೆಸ್ ಮೊದಲನೇ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ನಾಯಕರು ಧ್ವಜವಂದನೆ ಆಯೋಜಿಸಿದ್ದರು. ಮೈಸೂರು ಮಹಾರಾಜರ ಪ್ರಭುತ್ವಕ್ಕೆ ಕುಂದು ಬರುವುದೆಂದು ಭಾವಿಸಿ ಮೈಸೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಧ್ವಜಾರೋಹಣ ನಿಷೇಧಿಸಿದರು. ೧೧, ೧೨, ೧೩ನೇ ಏಪ್ರಿಲ್ ೧೯೩೮ರಂದು ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾವ್ ನೇತೃತ್ವದಲ್ಲಿ ಮೈಸೂರು ಯೂತ್ ಲೀಗ್ ಸಮಾವೇಶ ನಡೆಯಿತು.  ಮರುದಿನ ಸಿದ್ಧಲಿಂಗಯ್ಯ ಧ್ವಜಾರೋಹಣ ಮಾಡಿದ ತಕ್ಷಣವೇ ದಸ್ತಗಿರಿ ಮಾಡಲಾಯಿತು. ಎಚ್.ಸಿ. ದಾಸಪ್ಪ ಅಧ್ಯಕ್ಷತೆ ಸ್ವೀಕರಿಸಿದರು. ಆಜ್ಞೆ ಉಲ್ಲಂಘಿಸಿದ ಕಾರಣಕ್ಕೆ ಪುರುಷರನ್ನು ದಸ್ತಗಿರಿ ಮಾಡಿದಾಗ ಮಹಿಳೆಯರು ತಮ್ಮನ್ನು ದಸ್ತಗಿರಿ ಮಾಡುವಂತೆ ಧೈರ್ಯ ಮೆರೆದರು. ರಾಷ್ಟ್ರಧ್ವಜ ರಕ್ಷಿಸುವಲ್ಲಿ ವೀರಸ್ವರ್ಗ ಸೇರಿದ ಎಂದು ಬಳ್ಳಾರಿ ಸಿದ್ದಮ್ಮ ಯುವಕರಿಗೆ ಕರೆ ನೀಡಿದ್ದರು. ಧ್ವಜ ರಕ್ಷಣೆಗೆ ಬಂದಿದ್ದ ಸ್ವಯಂಸೇವಕ ತಂಡದ ನಾಯಕಿಯಾಗಿ ಪಿ. ಸುನಂದಮ್ಮ ಇದ್ದರು. ಹೋರಾಟಕ್ಕೆ ತಿರುಮಲೇಗೌಡರು ೭ ಎಕರೆ ಜಾಗ ಬಿಟ್ಟುಕೊಟ್ಟಿದ್ದರು. ೧೪ನೇ ಫೆಬ್ರುವರಿ ೧೯೭೪ರಂದು ವಿಧಾನಸೌಧ ನಿರ್ಮಾತೃ ಕೆಂಗಲ್ ಹನಮಂತಯ್ಯ ಮೈಸೂರಿಗೆ ತೆರಳುವಾಗ ಶಿವಪುರದ ರೇಲ್ವೆ ಸ್ಟೇಶನ್ ವೃತ್ತದ ಬಳಿ ಕಾರು ನಿಲ್ಲಿಸುತ್ತಾರೆ. ಆಗ ಅವರಿಗೆ ತಾವು ಯುವ ವಕೀಲರಾಗಿ ಪಾಲ್ಗೊಂಡಿದ್ದ ೧೯೩೮ರ ರಾಷ್ಟ್ರಧ್ವಜ ಸತ್ಯಾಗ್ರಹ ನೆನಪಿಗೆ ಬರುತ್ತದೆ. ನೆನಪಿಗಾಗಿ ಇಲ್ಲೊಂದು ಸ್ಮಾರಕ ಭವನ ನಿರ್ಮಿಸಲು ನಿರ್ಧರಿಸುತ್ತಾರೆ.  ಹಲವರ ಸಹಾಯ ಪಡೆದು ಸೌಧ ನಿರ್ಮಿಸಿ ೨೯ನೇ ಸೆಪ್ಟೆಂಬರ್ ೧೯೩೯ರಂದು ಉದ್ಘಾಟಿಸಲಾಯಿತು. ಈ ಸಮಾರಂಭಕ್ಕೆ ಅಂದಿನ ಸಿ.ಎಂ. ದೇವರಾಜ ಅರಸು ಕಾರಣಾಂತರಗಳಿಂದ ಬರಲಿಲ್ಲ. ಕೇಂದ್ರ ರೇಲ್ವೆ ಮಂತ್ರಿ ಆಗಿದ್ದ ಕೆಂಗಲ್ ಹನುಮಂತಯ್ಯ ಪಾಲ್ಗೊಂಡಿದ್ದರು.

(೩) ವೀರರ ರಾಷ್ಟ್ರಧ್ವಜಾರೋಹಣ ವಿದುರಾಶ್ವತ್ಥ ಗ್ರಾಮ ಗೌರಿಬಿದನೂರು ತಾಲೂಕ (ಕರ್ನಾಟಕದ ಜಲಿಯನ್ ವಾಲಾಬಾಗ್) :

            ಪೌರಾಣಿಕ ಹಿನ್ನೆಲೆ ಹೊಂದಿರುವ ವಿದುರಾಶ್ವತ್ಥ ಸ್ವಾತಂತ್ರ್ಯ ಹೋರಾಟದಿಂದ ಗಮನ ಸೆಳೆದಿದ್ದು, ಕರ್ನಾಟಕದ ಜಲಿಯನ್ ವಾಲಾಬಾಗ್ ಎಂತಲೇ ಹೆಸರುವಾಸಿ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನಲ್ಲಿ ವಿದುರಾಶ್ವತ್ಥ ಇದ್ದು, ಧೃತರಾಷ್ಟ್ರನ ಮಂತ್ರಿಯಾದ ವಿದುರನು ಇಲ್ಲಿದ್ದ ಅಶ್ವತ್ಥ ಎಂಬ ಹೆಸರು ಬಂತು. ಶಿವಪುರ ರಾಷ್ಟ್ರಧ್ವಜ ಸತ್ಯಾಗ್ರಹದಿಂದ ಪ್ರೇರಣೆಗೊಂಡ ಹೋರಾಟಗಾರರು ಇಲ್ಲಿ ೨೫ನೇ ಏಪ್ರಿಲ್  ೧೯೩೮ರಂದು ರಾಷ್ಟ್ರಧ್ವಜ ಸತ್ಯಾಗ್ರಹ ಸ್ವಾತಂತ್ರ್ಯ ಹೋರಾಟ ಕೈಗೊಂಡಿದ್ದರು. ಆದರೆ ಇದಕ್ಕೆ ಅನುಮತಿ ನೀಡದ ಬ್ರಿಟಿಷ್ ಸರ್ಕಾರ ನಿಷೇಧಾಜ್ಞೆ ಘೋಷಿಸಿತ್ತು.  ಇದಕ್ಕೆ ಜಗ್ಗದ ದೇಶಭಕ್ತರು ವಂದೇ ಮಾತರಂ ಘೋಷಣೆಗಳೊಂದಿಗೆ ಧ್ವಜಾರೋಹಣ ನೆರವೇರಿಸಿ ಸತ್ಯಾಗ್ರಹ ನಡೆಸಿದರು. ಇದರಿಂದ ಕೆರಳಿದ ಬ್ರಿಟಿಷ್ ಪೊಲೀಸರು ವಿವೇಚನಾ ರಹಿತರಾಗಿ ಗೋಲಿಬಾರ್ ನಡೆಸಿದಾಗ ೩೨ ಮಂದಿ (ಆಂಗ್ಲರ ವರದಿ ಪ್ರಕಾರ ೯ ಮಂದಿ) ಬಲಿಯಾಗಿ ಹಲವರು ಗಾಯಗೊಂಡರು. ಈ ಪ್ರಕರಣವು ಪಂಜಾಬ್‌ನ ಜಲಿಯನ್ ವಾಲಾಬಾಗ್ ಮಾದರಿಯಲ್ಲೇ ನಡೆದದ್ದರಿಂದ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆ ಆಯಿತು. ಗಾಂಧಿ ಸೂಚನೆಯಂತೆ ಇಲ್ಲಿಗೆ ಸರ್ದಾರ್ ವಲ್ಲಭಭಾಯ್ ಪಟೇಲ್, ಆಚಾರ್ಯ ಕೃಪಲಾನಿ ಭೇಟಿ ನೀಡಿದರು. ಹೋರಾಟಗಾರರ ನೆನಪಿಗಾಗಿ ಇಲ್ಲಿ ವೀರಸೌಧ, ಸ್ಥೂಪ, ವೀರಗಲ್ಲು ನಿರ್ಮಿಸಲಾಗಿದೆ.  ಸ್ವಾತಂತ್ರ್ಯ ಹೋರಾಟ ನೆನಪಿಸುವ ಚಿತ್ರಪಟ ಗ್ಯಾಲರಿ, ಗ್ರಂಥಾಲಯ ಹಾಗೂ ಬಯಲು ರಂಗ ಮಂದಿರ, ಉದ್ಯಾನ ನಿರ್ಮಾಣದ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಪ್ರತಿವರ್ಷ ಸ್ವಾತಂತ್ರ್ಯ ದಿನ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಗುತ್ತದೆ.

(೪) ಏಸೂರು ಕೊಟ್ಟರೂ ಈಸೂರು ಕೊಡೆವು (ಈಸೂರು ಗ್ರಾಮ ಶಿಕಾರಿಪುರ ತಾಲೂಕ) :

            ೧೯೪೨ರಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟ ರೂಪುಗೊಂಡಾಗ ಮೊದಲು ಸ್ಪಂದಿಸಿದ್ದು ಶಿಕಾರಪುರ ತಾಲೂಕಿನ ಈಸೂರು ಗ್ರಾಮಸ್ಥರು, ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಘೋಷಣೆಯೊಂದಿಗೆ ಆ ಪುಟ್ಟ ಗ್ರಾಮದ ಜನರು ಬ್ರಿಟಿಷ್ ಸಾಮ್ರಾಜ್ಯಶಾಹಿಗೇ ಸೆಡ್ಡು ಹೊಡೆದರು. ಈಸೂರು ದಂಗೆ ಬಳಿಕ ಸ್ವಾತಂತ್ರ್ಯ ಹೋರಾಟಗಾರರ ನಾಡಾಗಿ ಗುರುತಿಸಿಕೊಂಡಿತು. ಶಿಕಾರಿಪುರ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಶಾನುಭೋಗರು, ಪಟೇಲರನ್ನು ಇಲ್ಲಿನ ಜನ ಬಹಿಷ್ಕರಿಸಿ ಸರ್ಕಾರಿ ಕಚೇರಿಗಳನ್ನು ಬಂದ ಮಾಡಿ ಕಡತಗಳನ್ನು ಸುಟ್ಟು ಹಾಕಿದರು. ಗ್ರಾಮದ ವೀರಭದ್ರಸ್ವಾಮಿ ದೇವಾಲಯ ಎದುರು ರಾಷ್ಟ್ರಧ್ವಜ ಹಾರಿಸಿ ಪ್ರತ್ಯೇಕ ಸರ್ಕಾರ, ಸಂವಿಧಾನ ಘೋಷಿಸಿಕೊಂಡರು. ಕಂದಾಯ ಪಾವತಿಗೆ ನಿರಾಕರಿಸಿದ ಪರಿಣಾಮ ಅಮಲ್ದಾರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಈಸೂರಿಗೆ ಬಂದು ರಾಷ್ಟ್ರಧ್ವಜವನ್ನು ಕಾಲಿನಿಂದ ಒದ್ದು ಅಪಮಾನಿಸಿದರು. ರೊಚ್ಚಿಗೆದ್ದ ಜನ ಅಧಿಕಾರಿಗಳನ್ನು ಥಳಿಸಿದರು. ಬ್ರಿಟ್ರಿಷ್ ಅಧಿಕಾರಿಗಳಿಗೆ ೫೦೦ ರೂ. ದಂಡ ಹಾಕಿದರು. ಒಂಟಿ ಕಾಲಿನಲ್ಲಿ ನಿಲ್ಲಿಸಿದರು. ಗೋಲಿಬಾರ್‌ಗೂ ಅಂಜದೇ ಹಲ್ಲೆ ನಡೆಸಿದ್ದರಿಂದ ಅಧಿಕಾರಿಗಳಿಬ್ಬರು ಸಾವಿಗೀಡಾದರು.  ಈ ಘಟನೆ ದೇಶವ್ಯಾಪಿ ಕಾಡ್ಗಿಚ್ಚಿನಂತೆ ಹರಡಿತು.  ಇಡೀ ಬ್ರಿಟಿಷ್ ಸಾಮ್ರಾಜ್ಯ ಈಸೂರು ದಂಗೆಯಿಂದ ತಲ್ಲಣಿಸಿ ಹೋಯಿತು. ಅಧಿಕಾರಿಗಳನ್ನು ಸಾಯಿಸಿದವರ ವಿರುದ್ಧ ಪ್ರತೀಕಾರಕ್ಕೆ ಬ್ರಿಟಿಷ್ ಆಡಳಿತ ಮುಂದಾಯಿತು. ಪೊಲೀಸರು ಊರಿಗೆ ನುಗ್ಗಿ ಸಿಕ್ಕವರ ಮೇಲೆ ಹಲ್ಲೆ ನಡೆಸಿದರು. ಲಾಠಿ ಏಟಿಗೂ ಅಳುಕದೇ ಇಲ್ಲಿನ ಜನ ಹೋರಾಡಿದರು. ದಂಗೆ, ಅಧಿಕಾರಿಗಳಿಬ್ಬರ ಹತ್ಯೆ ಆರೋಪದಲ್ಲಿ ೨೪ ಜನರನ್ನು ಬಂಧಿಸಿ, ಐವರಿಗೆ ಗಲ್ಲು, ೧೯ ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಕೆ. ಗುರಪ್ಪ, ಮಲ್ಲಪ್ಪ, ಸೂರ್ಯನಾರಾಯಣಾಚಾರ್, ಬಡಕಳ್ಳಿ ಹಾಲಪ್ಪ, ಶಂಕರಪ್ಪ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಬಲಿದಾನಗೈದರು.

(೫) ಅಗಷ್ಟ್ ೧೯೪೨ರಲ್ಲಿ ಧಾರವಾಡ ಜಿಲ್ಲೆಯಲ್ಲಿ ನಾಡೋಜ ಡಾ. ಪಾಟೀಲ್ ಪುಟ್ಟಪ್ಪನವರಿಂದ ರಾಷ್ಟ್ರಧ್ವಜಾರೋಹಣ

            ೧೯೩೦-೩೧ರ ಸಮಯ ಆಗ ದೇಶದಲ್ಲಿ ಸ್ವಾತಂತ್ರ್ಯ ಆಂದೋಲನದ ಬಿರುಗಾಳಿ ಬೀಸುತ್ತಿತ್ತು. ಗಾಂಧೀಜಿಯವರ ಮಾತಿಗೆ ಹಳ್ಳಿ ಹಳ್ಳಿಗಳೂ ಜಾಗೃತಗೊಂಡು ಅಸಹಕಾರದಲ್ಲಿ ತೊಡಗಿದ್ದವು. ಹಳ್ಳಿಗಳಲ್ಲಿ ಹೆಂಡದಂಗಡಿಗಳ ಮುಂದೆ ಪಿಕೆಟಿಂಗ್ ನಡೆಯುತ್ತಿತ್ತು. ಆಗ ಪುಟ್ಟಪ್ಪನವರಿಗೆ ೮-೯ ವರ್ಷವಿರಬಹುದು.  ಇವರ ದೊಡ್ಡಪ್ಪ ಲಿಂಗನಗೌಡರು ಶುದ್ಧ ಸ್ವದೇಶಾಭಿಮಾನ. ಬ್ರಿಟೀಷ ಸರಕಾರದ ಪಟೇಲಿಕೆ ಇದ್ದರೂ ದೇಶ ಸ್ವಾತಂತ್ರ್ಯಕ್ಕಾಗಿ ಸರಕಾರಕ್ಕೆ ತಮ್ಮ ಪ್ರತಿಭಟನೆ ತೋರಿಸಲು ಹಿಂಜರಿಯುತ್ತಿರಲಿಲ್ಲ.  ಇದ್ದರಿಂದ ಪ್ರೇರಿತರಾದ ಪುಟ್ಟಪ್ಪನವರು ತನ್ನ ಹಿರಿಯರು ಮಾಡುತ್ತಿದ್ದ ಪಿಕೆಟಿಂಗ್ ಚೆನ್ನಾಗಿ ಗಮನಿಸಿದ್ದರು. ತಾವು ತಮ್ಮ ವಾರಗೆಯ ಹುಡುಗರನ್ನು ಸೇರಿಸಿ ಹೆಂಡದಂಗಡಿಯ ಮುಂದೆ ‘ಮಹಾತ್ಮಾ ಗಾಂಧಿ ಕೀ ಜೈ’, ‘ಭಾರತ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿ ಹೆಂಡದಂಗಡಿಯವರು ನಾಚಿ ತಲೆ ತಗ್ಗಿಸುವಂತೆ ಮಾಡುತ್ತಿದ್ದರು.

ರಾಷ್ಟ್ರೀಯ ಪ್ರವೃತ್ತಿಯ ಲಿಂಗನಗೌಡರು ಒಬ್ಬ ಪಾರ್ಸಿ ವ್ಯಾಪಾರಿಯನ್ನು ಎದುರು ಹಾಕಿಕೊಂಡರು. ಆತ ಧಾರವಾಡ ಜಿಲ್ಲೆಯ ಅಬಕಾರಿ ವ್ಯಾಪಾರದ ಗುತ್ತಿಗೆ ಪಡೆದಿದ್ದ. ಧಾರವಾಡ ಜಿಲ್ಲೆಯ ಬೇರೆ ಬೇರೆ ಊರುಗಳಲ್ಲಿ ಅವನ ಹೆಂಡದಂಗಡಿಗಳಿದ್ದವು. ಅವನದೊಂದು ಅಂಗಡಿ ಹಲಗೇರಿಯಲ್ಲಿಯೂ ಇತ್ತು. ಭಾನುವಾರ ಹೆಂಡದಂಗಡಿ ಮುಚ್ಚಬೇಕೆಂದು ಸರಕಾರದ ಕಾನೂನು ಇತ್ತು. ಆದರೆ ಆ ಪಾರ್ಸಿ ರವಿವಾರವೂ ಅಂಗಡಿ ತೆರೆದಿಟ್ಟು ಕುಡುಕರ ಸಂಖ್ಯೆ ಬೆಳೆಸುತ್ತಿದ್ದ.  ಕಾರಣ ಅವನು ಮೇಲಿನವರ ದೋಸ್ತಿ ಮಾಡಿ, ಅವರ ಕೈ ಬೆಚ್ಚಗೆ ಮಾಡಿ ಕುಡುಕರನ್ನು ಭಾನುವಾರವೂ ದೋಚುತ್ತಿದ್ದ.  ಅವನ ಸುದ್ದಿಗೆ ಹೋಗಲು ದೊಡ್ಡ ದೊಡ್ಡ ಅಧಿಕಾರಿಗಳೂ ಅಂಜುತ್ತಿದ್ದರು.

“ಭಾನುವಾರ ಅಂಗಡಿ ಮುಚ್ಚಬೇಕು” ಎಂದು ದೊಡ್ಡಗೌಡರು ಹೇಳಿ ಕಳಿಸಿದರು. ಆ ಕಾಲದಲ್ಲಿ ಊರ ಪಟೇಲರಿಗೆ ‘ಸಮರಿ ಪರ‍್ಸ್’ ಇರುತ್ತಿತ್ತು.  ಅವರಿಗೆ ಸರಿ ಕಂಡವರನ್ನು ಹಿಡಿದು ಕೋಣೆಗೆ ತಳ್ಳಿ ಇಪ್ಪತ್ನಾಲ್ಕು ಗಂಟೆ ಇಡುವ ಅಧಿಕಾರವೂ ಇರುತ್ತಿತ್ತು. ಒಂದೆರಡು ವಾರಗಳಾದರೂ ಆತ ಭಾನುವಾರ ಅಂಗಡಿ ಮುಚ್ಚದಿರುವುದನ್ನು ಕಂಡು ಗೌಡರು ಕೆರಳಿ ಕೆಂಡವಾದರು. ‘ಬಂದು ಭೇಟಿಯಾಗಲು’ ಗೌಡರು ಹೇಳಿ ಕಳಿಸಿದರೂ ಅವನು ಬರಲಿಲ್ಲ. ತಮ್ಮ ಓಲೆಕಾರರನ್ನು ಕರೆದು ಆ ಪಾರ್ಸಿ ವ್ಯಾಪಾರಿಯನ್ನು ಹಿಡಿದು ತರಿಸಿ ಚಾವಡಿಯ ಕೋಣೆಯಲ್ಲಿ ತಳ್ಳಿದ್ದರು. ಈ ಸುದ್ದಿ ಜಿಲ್ಲೆಯಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತು.  ಧನಿಕನೂ, ಪ್ರತಿಷ್ಠಿತನೂ ಆದ ಅವನನ್ನು ಬಿಟ್ಟುಕೊಡಲು ಸರಕಾರ ಹೇಳಿದರೂ ಗೌಡರು ಒಪ್ಪಲಿಲ್ಲ. ಇದರಿಂದ ಸಾರ್ವಜನಿಕ ಕಣ್ಣಿನಲ್ಲಿ ಗೌಡರ ಪ್ರತಿಷ್ಠೆ ಬೆಳೆಯಿತು. ಬ್ರಿಟೀಷರ ಕಣ್ಣಿನ ಮುಳ್ಳಾದರು ಗೌಡರು. ಕೆಲವು ಸ್ವಾರ್ಥ ಸಾಧಕರು ಪಿತೂರಿ ಮಾಡುತ್ತಿದ್ದರು.

ಪುಟ್ಟಪ್ಪನವರ ದೊಡ್ಡಪ್ಪ ‘ಊರ ಗೌಡಿಕೆ’ಯನ್ನು ಬ್ರಿಟಿಷರ ಗುಲಾಮಗಿರಿಗೆ ಬಳಸಿಕೊಳ್ಳಲಿಲ್ಲ.  ಜೈಲಿನಲ್ಲಿದ್ದ ಪಾರ್ಸಿ ವ್ಯಾಪಾರಿಯನ್ನು ಸರ್ಕಸ್ಸಿನ ಪಂಜರದಲ್ಲಿದ್ದ ಹುಲಿಯನ್ನು ನೋಡಲು ಬರುವವರಂತೆ ಸಾರ್ವಜನಿಕರು ನೋಡಿ ಬರುತ್ತಿದ್ದರು. ಗೌಡರ ಧೈರ್ಯ, ದೇಶಪ್ರೇಮ ಕೊಂಡಾಡುತ್ತಿದ್ದ ಸ್ಥಳೀಯರನ್ನು ನೋಡಿದ ಪುಟ್ಟಪ್ಪನವರ ಹೃದಯದಲ್ಲಿ ದೇಶಭಕ್ತಿಯ ದೀಪ ಪ್ರಜ್ವಲಿಸಿತು.  ನಮ್ಮ ನಾಡು, ನಮ್ಮ ದೇಶ, ನಾವು ಭಾರತೀಯರು, ಬ್ರಿಟೀಷರು ಪರಕೀಯರು ಎಂಬ ಭಾವನೆ ಬೆಳೆಯಿತು.

ಅದೇ ಕಾಲಕ್ಕೆ ಹಲಗೇರಿ ನಾಟಕ ಕಂಪನಿ ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟಿತ್ತು. ಪೌರಾಣಿಕ, ಐತಿಹಾಸಿಕ ನಾಟಕಗಳನ್ನಾಡುತ್ತಿದ್ದ ಅಂದಿನ ದಿನಗಳಲ್ಲಿ ದೊಡ್ಡ ಧೈರ್ಯ ಮಾಡಿ ಅವರು ರಾಜಕೀಯ ವಸ್ತುವನ್ನಿಟ್ಟುಕೊಂಡು “ಬಿ.ಎ.”, “ಸ್ತ್ರೀ ಮೊದಲಾದ ಸಾಮಾಜಿಕ ನಾಟಕಗಳನ್ನು ರಂಗಭೂಮಿಗೆ ತಂದರು.  ಸರಕಾರದ ಕಟುವಾದ ಕಾನೂನುಗಳಿಗೂ ಬಗ್ಗದೆ ಜಗ್ಗದೆ ದೇಶಪ್ರೇಮವನ್ನು ಸಾರುವ ನಾಟಕಗಳನ್ನು ಪ್ರಯೋಗಿಸಿದರು.  ಅನಂತರ ಅನೇಕ ಕಂಪನಿಗಳು ಇವರ ದಾರಿ ತುಳಿದವು.

ಇದೇ ಸಮಯಕ್ಕೆ (೧೯೩೦) ಜವಾಹರಲಾಲ ನೆಹರು ಅವರು ಹುಬ್ಬಳ್ಳಿಗೆ ಬರುವವರಿದ್ದರು. ನೆಹರೂಜಿಯವರನ್ನು ಕಾಣಲೆಂದೇ ಪುಟ್ಟಪ್ಪನವರು ನಡೆದು ಹುಬ್ಬಳ್ಳಿ ಸೇರಿ ನಾಟಕ ಕಂಪನಿಯಲ್ಲಿ ಅಂದು ವಸತಿ ಮಾಡಿದರು. ಮರುದಿನ ಎದ್ದು ನೆಹರೂರವರು ಬರುವ ಸ್ಥಳಕ್ಕೆ ಹೋದರು. ಹತ್ತಿರದಿಂದ ನೆಹರೂರವರನ್ನು ನೋಡುವ ಉದ್ದೇಶದಿಂದ ಮುಂದೆ ಹೋಗಿ ಕುಳಿತರು. ನೆಹರೂಜಿಯವರನ್ನು ಹತ್ತಿರದಿಂದ ನೋಡಿದ ಪುಟ್ಟಪ್ಪನವರ ಹೃದಯದಲ್ಲಿ ಧನ್ಯತಾ ಭಾವ ಮೂಡಿತು.

ಪುಟ್ಟಪ್ಪನವರು ೧೯೪೧ರಲ್ಲಿ ಬೆಳಗಾಂವಿ ಲಿಂಗರಾಜ ಕಾಲೇಜಿನಲ್ಲಿ ಓದುವಾಗ ಫೀ ಹಣ ಹೊಂದಿಸಿಕೊಳ್ಳುವುದು ಕಠಿಣವಾಗುತ್ತಿತ್ತು. ಅದಕ್ಕೆ ಆಗ ಪ್ರೊ.ಎಸ್.ಸಿ.ನಂದಿಮಠರು ಪ್ರಿನ್ಸಿಪಾಲರಾಗಿದ್ದರು.  ಪುಟ್ಟಪ್ಪನವರು ‘ಫೀ ತುಂಬಲು ಕಾಲಾವಕಾಶ ಕೊಡಿ’ ಎಂದರು. ಅವರು ಸಿಟ್ಟಿಗೆದ್ದು ‘ಉದ್ರಿ ಕೇಳಾಕ ಇದೇನು ಕಿರಾಣಿ ಅಂಗಡಿ ಅಂತ ಮಾಡಿಯೇನು? ಫೀ ಕೊಡಾಕ ಆಗದಿದ್ರ ಕಾಲೇಜಿಗೆ ಯಾಕ ಬರ‍್ತೀ?’ ಎಂದು ಖಾರವಾಗಿ ನುಡಿದರು. ಆಗ ಪುಟ್ಟಪ್ಪನವರು ಸ್ನೇಹಿತರಿಂದ ಹಣ ಸಂಗ್ರಹಿಸಿ ಫೀ ಕಟ್ಟಬೇಕಾಯಿತು. ಇಲ್ಲದಿದ್ದರೆ ಕಾಲೇಜು ಬಿಟ್ಟು ಹೊರನಡೆಯಬೇಕಾಗುತ್ತಿತ್ತು.

ಒಮ್ಮೆ ೧೯೪೧ರಲ್ಲಿ ಅವರ ಕಾಲೇಜಿಗೆ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಕೆ.ಟಿ. ಶಾ ಎಂಬುವವರು ಬಂದಿದ್ದರು. ಆಗ ಪಾಟೀಲ ಪುಟ್ಟಪ್ಪನವರು “What is the future of charka” ಎಂದು ಕೇಳಿದಾಗ ಅವರು ತಕ್ಷಣ “It Will be a great museum piece” ಎಂದರು. ಅದೇ ವರ್ಷ ಸರ್ ಮಿರ್ಜಾ ಇಸ್ಮಾಯಿಲ್‌ರು ಬಂದಿದ್ದರು. ಅವರು ಸ್ವದೇಶಿ ಬಗ್ಗೆ ತುಂಬ ಚೆನ್ನಾಗಿ ಮಾತನಾಡಿದರು. ಅವರಷ್ಟು ಚೆನ್ನಾಗಿ ಅಂದಿನ ದಿನಗಳಲ್ಲಿ ಯಾವ ಕಾಂಗ್ರೆಸ್ಸಿಗನಿಂದಲೂ ಮಾತನಾಡಲು ಆಗುತ್ತಿರಲಿಲ್ಲವೆಂದು ಈಗಲೂ ಪುಟ್ಟಪ್ಪನವರು ಸ್ಮರಿಸುತ್ತಾರೆ. ಅದೊಂದು ಉದ್ಬೋಧಕ ಭಾಷಣವಾಗಿತ್ತು.

ಸರ್ ಮಿರ್ಜಾ ಇಸ್ಮಾಯಿಲ್‌ರು ಮಾತನಾಡುತ್ತ “ನಾನು ಬೆಳಿಗ್ಗೆ ಏಳುತ್ತೇನೆ. ಸಾಬೂನಿನಿಂದ ಮುಖ ತೊಳೆಯುತ್ತೇನೆ. ಅದು ಉದ್ಯೋಗವಾಗಿದೆ ಮೈಸೂರು ಸ್ಯಾಂಡಲ್ ಸೋಪ್, ಟಾವೆಲ್ಲಿನಿಂದ ಮುಖ ಒರೆಸಿಕೊಳ್ಳುತ್ತೇನೆ. ಅದು ಮೈಸೂರು ಕೃಷ್ಣ ರಾಜೇಂದ್ರ ಮಿಲ್ಲಿನಲ್ಲಿ ಆದದ್ದು.  ಆಮೇಲೆ ಕಾಫಿ ಬರುತ್ತದೆ. ಅದು ಮೈಸೂರ ಕಾಫಿ. ಅದರಲ್ಲಿ ಹಾಕಿದ ಸಕ್ಕರೆ ಮಂಡ್ಯರ ಸಕ್ಕರೆ. ಆ ಕಪ್‌ಬಸಿ ಮೈಸೂರು ಪಿಂಗಾಣಿ ಕಾರ್ಖಾನೆಯಲ್ಲಾದುದು.  ಅಷ್ಟರಲ್ಲಿ ವೃತ್ತಪತ್ರಿಕೆ ಬರುತ್ತದೆ. ಆ ವೃತ್ತ ಪತ್ರಿಕೆಯ ಕಾಗದ ಭದ್ರಾವತಿ ಕಾರ್ಖಾನೆಯಲ್ಲಾದುದು, ನಾನು ಸ್ವದೇಶಿಯಲ್ಲದ್ದನ್ನು ಯಾವುದನ್ನು ಉಪಯೋಗಿಸುವುದಿಲ್ಲ” ಎಂದರು. ಇಂಥ ಮಾತುಗಳು ಪುಟ್ಟಪ್ಪನವರ ಹೃದಯದಲ್ಲಿ ನೆಲೆ ನಿಂತವು.

ಇವರು ಕಾಲೇಜಿನಲ್ಲಿದ್ದಾಗ ವಾರ್ಷಿಕೋತ್ಸವಕ್ಕೆ ಕರೆಯುವವರ ಯಾದಿಯಲ್ಲಿ ಮಹಾತ್ಮಾ ಗಾಂಧಿ, ಜವಾಹರಲಾಲ ನೆಹರೂ, ನೇತಾಜಿ ಹೆಸರೂ ಇರುತ್ತಿತ್ತು. ಇವರು ಓದುತ್ತಿದ್ದ ಕಾಲೇಜಿನ ವಾರ್ಷಿಕೋತ್ಸವಕ್ಕೆ ವಿ.ಡಿ. ಸಾವರಕರರು ಬಂದಿದ್ದರು. ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು ಅಂದಿನ ಬೆಳದಿಂಗಳಲ್ಲಿ ಹೇಳಿದ ‘ರೋಮಿಯೊ ಜೂಲಿಯೆಟ್’ರ ಸೊಗಸಾದ ಕಥೆ ಇಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಪುಟ್ಟಪ್ಪನವರು.

೧೯೪೨ರಲ್ಲಿ ಇವರು ಮರಳಿ ಕರ್ನಾಟಕ ಕಾಲೇಜಿಗೆ ಬಂದರು. ಕಾಲೇಜಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ದಿ.ಆರ್.ಸಿ. ಹಿರೇಮಠ, ಬಿ.ಟಿ. ಸಾಸನೂರರು (ವಿಜಯ ಸಾಸನೂರರ ತಂದೆ) ವರ್ಗಮಿತ್ರರಾಗಿದ್ದರು. ಆಗ ಕರ್ನಾಟಕ ಕಾಲೇಜಿನಲ್ಲಿ ಎಂ.ಡಿ. ಭಟ್ಟ ಸಂಸ್ಕೃತಿ, ಎಸ್.ಜಿ. ಪಣಂದೀಕರ್ ಅರ್ಥಶಾಸ್ತ್ರ ವಿಷಯ ಕಲಿಸುತ್ತಿದ್ದರು. ಶ್ರೀರಂಗ, ಪ್ರೊ.ಎಸ್.ಎಸ್. ಮಾಳವಾಡ, ಪ್ರೊ. ಮಳಗಿ, ಪ್ರೊ. ರ‍್ಮಾಂಡೊ ಮೆನೆಝಿಸ್ ಇದ್ದರು. ಇವರೆಲ್ಲರ ಬಳಿ ಓದುವುದೇ ಒಂದು ಭಾಗ್ಯವೆನ್ನಬೇಕು. ಇವರೆಲ್ಲರೂ ಒಂದೊಂದು ವಿಷಯದಲ್ಲಿ ನುರಿತವರಾಗಿದ್ದರು.  ಪ್ರೊ.ಎ.ಸಿ. ಪ್ಯಾರನ್ ಎಂಬುವರು ಪ್ರಿನ್ಸಿಪಾಲರಾಗಿದ್ದರು. ಕಾಲೇಜಿನ ಪಾಠಗಳ ಜೊತೆಗೆ ಆಟ ಆಡುವುದರಲ್ಲಿಯೂ ಪುಟ್ಟಪ್ಪನವರು ಹಿಂದಿರಲಿಲ್ಲ. ೧೯೪೨ರಲ್ಲಿ ಇವರು ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅದಕ್ಕಿಂತ ಮೊದಲೇ ಫಣಿಯಾಡಿಯವರ ‘ಅಂತರಂಗ’ ಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದರು.  ಇವರು ಬರೆದ ಬೇಂದ್ರೆ, ಕುವೆಂಪು, ಶ್ರೀರಂಗರ ಕುರಿತ ಲೇಖನಗಳು ಅಂತರಂಗದಲ್ಲಿ ಪ್ರಕಟವಾಗುತ್ತಿದ್ದವು. ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿದ್ದ ವರ್ಷದಲ್ಲಿ, ೮ನೇ ಅಗಷ್ಟ್ ೧೯೪೨ರಂದು ರವೀಂದ್ರನಾಥ ಟಾಗೋರ ದಿನಾಚರಣೆ ನಡೆಯಿತು.  ೯ನೇ ಅಗಷ್ಟ್ ೧೯೪೨ರಂದು ಚಲೇಜಾವ್ ಚಳುವಳಿ ಆರಂಭವಾಯಿತು. ಇವರು ಮೆರವಣಿಗೆ ಸಂಘಟಿಸಿದರು. ಭಿತ್ತಿಪತ್ರ ಹಚ್ಚುವದು, ಬ್ಯಾನರ್ ಬರೆಯುವ ಕಾರ್ಯ ಮಾಡಿದರು. ರಾತ್ರಿಯ ಹೊತ್ತು ಡಾಂಬರ್‌ನಿಂದ ರಸ್ತೆಯ ಮೇಲೆ ಸ್ಲೋಗನ್ ಬರೆಯುತ್ತಿದ್ದರು. ಸಂಪೂರ್ಣವಾಗಿ ಚಳುವಳಿಯಲ್ಲಿ ಧುಮುಕಲು ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ.

೧೨ನೇ ಅಗಸ್ಟ್ ೧೯೪೨ರಂದು ಹಳ್ಳಿಕೇರಿ ಗುದ್ಲೆಪ್ಪನವರನ್ನು ಸರಕಾರ ಬಂಧಿಸಿತು. ಇದನ್ನು ಕಣ್ಣಾರೆ ಕಂಡು ಪುಟ್ಟಪ್ಪನವರಿಗೆ ‘ಈ ಧಡೂತಿ ಮನುಷ್ಯ ಇಷ್ಟು ಸುಲಭವಾಗಿ ಬ್ರಿಟೀಷರ ಕೈಗೆ ಸಿಗಬಾರದಿತ್ತು’ ಎಂದೆನಿಸಿತು. ಪುಟ್ಟಪ್ಪನವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಕೆಲಸ ಮಾಡುತ್ತಿರುವುದನ್ನು ಅರಿತ ಪ್ರಿನ್ಸಿಪಾಲರು “Dont enter in this college” ಎಂದು ಗದರಿಸಿದರು. ಇವರ ಗುಂಪು ಮಾತು ಕೇಳದೇ ಒಳಗೆ ನುಗ್ಗಿದಾಗ ಅವರು ಎಸ್.ಪಿ.ಗೆ ಪೋನಿಸಿದರು. ಅವರೂ ಗುಂಪಿನ ನೇತೃತ್ವ ವಹಿಸಿದ ಪುಟ್ಟಪ್ಪನವರು ಪ್ರಿನ್ಸಿಪಾಲರಿಗೆ ‘ಗಾಂಧಿ ಟೋಪಿ’ ತಲೆಗೆ ಹಾಕಿ “ಮಹಾತ್ಮ ಗಾಂಧೀ ಕೀ ಜೈ” ಎಂದು ಘೋಷಣೆ ಹಾಕಿದರು. ಗೋಪುರಕ್ಕಿದ್ದ ಯುನಿಯನ್ ಜಾಕ್‌ನ ಧ್ವಜ ಕೆಳಗೆ ಇಳಿಸಿ ನಮ್ಮ ರಾಷ್ಟ್ರಧ್ವಜ ಮೇಲೆ ಏರಿಸಿದರು. ಇದನ್ನೆಲ್ಲ ಪುಟ್ಟಪ್ಪನೇ ಮಾಡಿಸಿದ ಎಂದು ಇವರನ್ನು ಜೈಲಿಗೆ ಕಳಿಸುವ ಯೋಚನೆ ಪ್ರಿನ್ಸಿಪಾಲರು ಮಾಡಿದರು.  ಆದರೆ ಇವರಿಗೆ ಸೆರೆಮನೆಗೆ ಹೋಗುವ ಇಷ್ಟವಿರಲಿಲ್ಲ. ತಲೆ ಮರೆಸಿಕೊಂಡು ಉಳಿದರು. ಇದು ಕರ್ನಾಟಕ ಕಾಲೇಜಿನ ಇತಿಹಾಸದಲ್ಲಿ ಲಿಖಿತ ದಾಖಲೆ ಇದೆ.

ಇವರಿಗೊಬ್ಬ ಬಿ.ಆರ್. ಪಾಟೀಲ ಎಂಬ ಮಿತ್ರನಿದ್ದ.  ಬಡವರಿಗೆ ತುಂಬ ಸಹಾಯ ಮಾಡುತ್ತಿದ್ದ. ಅವನು ಸೂಚಿಸಿದ “ನೀನು ಇಲ್ಲಿರಬೇಡ. ಪೊಲೀಸರು ಬಂಧಿಸುವ ಅಪಾಯವಿದೆ. ಇಲ್ಲಿಂದ ತಕ್ಷಣ ಹೊರಬೀಳು” ಎಂದಿದ್ದಾರೆ.  ಅದೇ ರಾತ್ರಿ ಅಲ್ಲಿಂದ ಹೊರಬಿದ್ದು ಪುಟ್ಟಪ್ಪ ಒಂದು ವರ್ಷ ಅಜ್ಞಾತವಾಸ ಮಾಡಿದರು. ಒಂದೇ ಊರಿನಲ್ಲಿದ್ದರೆ ಪೊಲೀಸರು ಹುಡುಕಿ ಬರಬಹುದೆಂದು ಬೆಂಗಳೂರು, ಮೈಸೂರು ಮೊದಲಾದ ಕಂಡ ಕಂಡ ಊರು ಸುತ್ತಾಡುತ್ತ ವರ್ಷ ಕಳೆಯಬೇಕಾಯಿತು.

ಮಹಾದೇವಪ್ಪ ಮೈಲಾರ್, ವಾಲಿ ಚೆನ್ನಪ್ಪ ಮೊದಲಾದವರು ಆಗ ಭೂಗತರಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಚಳುವಳಿ ಸ್ವಲ್ಪ ತಣ್ಣಗಾಗಿತ್ತು. ೧ನೇ ಏಪ್ರೀಲ್ ೧೯೪೩ರಂದು ಹೊಸರಿತ್ತಿಯಲ್ಲಿ ಮಹಾದೇವಪ್ಪ ಮೈಲಾರರನ್ನು ಪೊಲೀಸರು ಗುಂಡಿಕ್ಕಿ ಕೊಂದರು. ಆಗ ಅನೇಕ ಕಾಂಗ್ರೆಸ್ ಕಾರ್ಯಕರ್ತರ ಎದೆ ಝಲ್ಲೆಂದಿತು.

೧೯೩೭ರಲ್ಲಿ ಮಹಾತ್ಮ ಗಾಂಧಿಜೀಯವರು ಮಹದೇವಪ್ಪ ಮೈಲಾರರನ್ನು ಒಬ್ಬ ಉತ್ತಮ ಸ್ವಾತಂತ್ರ್ಯ ಪ್ರೇಮಿಯೆಂದು ಆಯ್ಕೆ ಮಾಡಿದ್ದರು. ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾಪುರುಷ ಮಹಾದೇವಪ್ಪ ಮೈಲಾರರು ಗಬಗಬನೆ ಉಣ್ಣುವುದನ್ನು ಕಂಡ ಗಾಂಧೀಜಿಯವರು “ಹಲ್ಲು ಹೊಟ್ಟೆಯಲ್ಲಿವೆಯೇನು?” ಎಂದು ಕೇಳಿದ್ದರಂತೆ.

ದಾವಣಗೆರೆಗೆ ಹೋದಾಗಲೆಲ್ಲ ಪುಟ್ಟಪ್ಪನವರು ನಿಜಲಿಂಗಪ್ಪನವರನ್ನು ಕಾಣಲು ಚಿತ್ರದುರ್ಗಕ್ಕೆ ಹೋಗುತ್ತಿದ್ದರು. ನಿಜಲಿಂಗಪ್ಪನವರು ಆ ಪರಿಸರದ ದೊಡ್ಡ ಸ್ವಾತಂತ್ರ್ಯ ಯೋಧರಾಗಿದ್ದರು.  ಅವರು ಪಾಟೀಲ ಪುಟ್ಟಪ್ಪನವರಲ್ಲಿದ್ದ ಪುಸ್ತಕ ಪ್ರೇಮ, ದೇಶಭಕ್ತಿ, ಸ್ಪಷ್ಟೋಕ್ತಿಯನ್ನು ಕಂಡು ಮೆಚ್ಚಿಕೊಂಡಿದ್ದರು.

ಪುಟ್ಟಪ್ಪನವರು ಶತಮಾನ ಪೂರೈಸಿದರೂ ಅವರು ಸಾರ್ವಜನಿಕ ಸೇವೆ, ಸಮಾರಂಭಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಪ್ರಸ್ತುತ ಅವರು ದಶಮಾನದಿಂದಲೂ ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಮತ್ತು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ(ಫೆಡರೇಷನ್), ಬೆಂಗೇರಿ, ಹುಬ್ಬಳ್ಳಿಯ ಚೇರಮನ್‌ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಅವರ ಸೇವೆಗೆ ಕರ್ನಾಟಕ ಸರ್ಕಾರ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ.  ಅವರು ಉತ್ತರ ಕರ್ನಾಟಕದ ಹೆಮ್ಮೆಯ ಪ್ರಸಿದ್ಧ ಗಣ್ಯವ್ಯಕ್ತಿಯಾಗಿದ್ದಾರೆ.

೬)೧೯೪೭-೪೮ ರಲ್ಲಿ ಹೈದರಾಬಾದ ಸಂಸ್ಥಾನದ ವ್ಯಾಪ್ತಿಯಲ್ಲಿ ಪಂಚಪ್ಪ ಗುಡದೀರಪ್ಪ ಶೆಟ್ಟರ (ಗ್ರಾಮ ಅಳವಂಡಿ) ಯವರಿಂದ ರಾಷ್ಟ್ರಧ್ವಜ ಸತ್ಯಾಗ್ರಹ :

ಪಂಚಪ್ಪ ಗುಡದೀರಪ್ಪ ಶೆಟ್ಟರ ಅವರು ಅಳವಂಡಿ ಗ್ರಾಮ (ಮುಂಡರಗಿಯ ಹತ್ತಿರ) ದವರು.  ಅವರು ೨೨ ವರ್ಷದ ತರುಣನಾಗಿದ್ದರು. ಓದು ಮುಗಿಸಿ ವ್ಯವಹಾರ ಮಾಡುತ್ತಿದ್ದರು. ಆಗ ದೇಶಕ್ಕೆಲ್ಲ ಸ್ವಾತಂತ್ರ್ಯ ಸಿಕ್ಕಿದ್ದರೂ ಹೈದರಾಬಾದು ಸಂಸ್ಥಾನಕ್ಕೆ ಸಿಕ್ಕಿರಲಿಲ್ಲ.  ಗ್ರಾಮದಲ್ಲಿ ಹಾಗೂ ಪ್ರಾಂತ್ಯದಲ್ಲಿ ರಜಾಕಾರರು ಮತ್ತು ಪಠಾಣರು ಅತೀ ಕ್ರೂರಹೀನ ಕೃತ್ಯಗಳನ್ನು ಜನರ ಮೇಲೆ ಹರಿಬಿಟ್ಟಿದ್ದರು.  ಪಂಚಪ್ಪ ಶೆಟ್ಟರ ಅವರು ನಿಜಾಮ ಸರಕಾರದ ವಿರುದ್ಧ ಆಂದೋಲನಕ್ಕೆ ಕರೆಕೊಟ್ಟಿದ್ದರು. ಅವರು ಗ್ರಾಮದಲ್ಲಿ ಅವರು ಮತ್ತು ಅವರ ಮಿತ್ರನಾದ ಗಿರಿಯಪ್ಪ ಶೇಷಗಿರಿಯಪ್ಪ ನಾಗರಹಳ್ಳಿಯವರು ಮುಂದಾಳತ್ವ ವಹಿಸಿದ್ದರು.  ಇನ್ನಿತರ ಸ್ನೇಹಿತರೂ ಕೂಡಿಕೊಂಡರು.

ಮೊದಮೊದಲು ಅವರು ಊರಲ್ಲಿ ಉಳಿದುಕೊಂಡು ಅಲ್ಲಲ್ಲಿ ರಾಷ್ಟ್ರಧ್ವಜಗಳನ್ನು ಏರಿಸುತ್ತಿದ್ದರು.  ರಾತ್ರಿಯೆಲ್ಲ ಅವರ ಕಾರ‍್ಯಾಚರಣೆ ನಡೆಯುತ್ತಿತ್ತು.  ಬೆಳಗಾಗುವಷ್ಟರಲ್ಲಿ ನಿಜಾಮ ಪೊಲೀಸರು ಅವಹೇಳನಕರವಾಗಿ ಬೈಯ್ಯುತ್ತಾ ಧ್ವಜಗಳ್ನು ಕಿತ್ತು ಸುಟ್ಟುಬಿಡುತ್ತಿದ್ದರು. ಅವರ ಸ್ನೇಹಿತ ಗಿರಿಯಪ್ಪ ಮತ್ತು ಅವರೆಲ್ಲರ ಮೇಲೆ ಪೊಲೀಸರ ಹದ್ದಿನ ಕಣ್ಣು ಬಿದ್ದಿತ್ತು. ಅವರೆಲ್ಲರನ್ನು ದಸ್ತಗಿರಿ ಮಾಡುವ ಪ್ರಯತ್ನ ನಡೆಸಿದರು.

ಅಂದೇ ಅವರೆಲ್ಲರೂ ಅವರ ಗ್ರಾಮದ ಪಕ್ಕದಲ್ಲಿರುವ ನಾಕಾಕ್ಕೆ ಬೆಂಕಿ ಹಚ್ಚಿ ಅಡವಿ ಮಾರ್ಗವಾಗಿ ಊರನ್ನು ತ್ಯಜಿಸಿ ಮುಂಡರಗಿಗೆ ಬಂದಿದ್ದಾರೆ. ಶ್ರೀ ಶಿವಮೂರ್ತಿ ಸ್ವಾಮಿಗಳು ಅಳವಂಡಿ ಅವರು ಮುಂಡರಗಿಯಲ್ಲಿ ಹೈದರಾಬಾದ್ ವಿಮೋಚನಾ ಸ್ವತಂತ್ರ ಸೇನಾನಿಗಳ ಹಾಗೂ ನಿರಾಶ್ರಿತರ ಶಿಬಿರವನ್ನು ತೆರೆದಿದ್ದರು. ಅವರೆಲ್ಲರೂ ಅಲ್ಲಿ ಸೇರಿದ್ದಾರೆ. ಮುಂಡರಗಿ ಶಿಬಿರಕ್ಕೆ ೧೧ ಉಪಶಿಬಿರಗಳಿದ್ದವು. ಒಟ್ಟು ಶಿಬಿರಾರ್ಥಿಗಳ ಸಂಖ್ಯೆ ೨೦೦ ರಷ್ಟು ಇತ್ತು. ಅವರಲ್ಲಿ ೬೦ ಜನರು ಸೈನಿಕ ತರಬೇತಿ ಹೊಂದಿದ ಗೆರಿಲ್ಲಾ ಪದ್ಧತಿಯ ಸೈನಿಕರಿರುತ್ತಾರೆ. ಅವರಿಗೆ ಸುಭಾಷ್ ಚಂದ್ರ ಬೋಸ್‌ರ ಆಜಾದ್ ಹಿಂದ್ ಫೌಜ್‌ನಲ್ಲಿ ತರಬೇತಿ  ಹೊಂದಿದ ರಾಮಸಿಂಗ್ ಎಂಬ ಕಮ್ಯಾಂಡರ್ ಎಂಬ ಕಮ್ಯಾಂಡರ್ ಎಲ್ಲ ರೀತಿಯ ತರಬೇತಿ, ಶಿಸ್ತು ಮತ್ತು ಸಂಘಟನಾ ಕೌಶಲಗಳನ್ನು ಕಲ್ಪಿಸಿಕೊಟ್ಟಿರುತ್ತಾರೆ.

ಅವರ ಶಿಬಿರ ನೂರಾರು ಕಾರ್ಯಾಚರಣೆಗಳನ್ನು ನಡೆಸಿರುತ್ತದೆ.  ಕುಕನೂರ ಪೊಲೀಸ್ ಠಾಣೆಗೆ ನುಗ್ಗಿ ಅದನ್ನು ವಶಪಡಿಸಿಕೊಂಡಿದ್ದಾರೆ. ಯಲಬುರ್ಗಾ ತಹಸೀಲು ಕಛೇರಿ ಮೇಲೆ ದಾಳಿ ಮಾಡಿ ಅಲ್ಲಿ ಭಯಂಕರ ಮಾರಾಮಾರಿ ಯುದ್ಧ ಜರುಗಿ ಅವರ ಒಬ್ಬ ಸೈನಿಕನಿಗೆ ಬಾಂಬ್ ಸ್ಪೋಟ್‌ದಿಂದ ಪೆಟ್ಟು ಬಿದ್ದುದರಿಂದ ವಾಪಸ್ ಬಂದಿದ್ದಾರೆ.

ಬೆಳ್ಳಿಗಟ್ಟಿ ಪ್ರಕರಣವಂತೂ ಇತಿಹಾಸ ಪ್ರಸಿದ್ಧ. ಮೊದಲು ಅವರು ಬೆಳ್ಳಿಗಟ್ಟಿಯಲ್ಲಿ ೧೧ ಜನ ಪಠಾಣರನ್ನು ಹಾಳುಹಗೆಯಲ್ಲಿ ಹಾಕಿ ಮುಚ್ಚಿದ್ದಾರೆ. ಇವರಿಗೂ ಅವರಿಗೂ ಭಯಂಕರ ಮಾರಮಾರಿ ನಡೆದಿರುವದು.  ಪಠಾಣರು ೫೦ ಜನ ಇವರು ೯ ಜನ ಸೇನಾನಿಗಳು. ಇವರು ವೀರಾವೇಶದಿಂದ ಹೋರಾಡಿ ಕೊನೆಗೆ ಆ ಯುದ್ಧದಲ್ಲಿ ಜಯಶಾಲಿಗಳಾಗಿದ್ದಾರೆ.

ಹೀಗೆ ಹಲವಾರು ಪ್ರಕರಣಗಳನ್ನು ಸ್ಮರಿಸಬಹುದು.  ೧೯೪೮ರಲ್ಲಿ ಸರ್ದಾರ ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ ಪೊಲೀಸ್ ಕರ‍್ಯಾಚರಣೆ ನಡೆದು ಹೈದ್ರಾಬಾದ ಸಂಸ್ಥಾನವು ಸ್ವತಂತ್ರಗೊಂಡು ಅವರೆಲ್ಲ ತಮ್ಮ ತಮ್ಮ ಊರು ಸೇರಿದ್ದಾರೆ. ಆದರೆ ಅವರು ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.  ಮುಂದೆ ಹೇಗೋ ಜೀವನ ಸಾಗಿಸಿದ್ದಾರೆ.

ಪ್ರಸ್ತುತ ಕೇಂದ್ರ ಸರ್ಕಾರವು ಧ್ವಜ ಸಂಹಿತೆ-೨೦೦೨ ಕ್ಕೆ ತಿದ್ದುಪಡಿ ತಂದು ಖಾದಿ ಬಟ್ಟೆಯ ಬದಲು ಪಾಲಿಸ್ಟರ್ ಧ್ವಜಗಳಿಗೆ ಅನುಮತಿ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿಯೇ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ಮಾಡುವ ಮೂಲಕ ಗಾಂಧಿ ಆಶಯಗಳಿಗೆ ಧಕ್ಕೆ ತರಲಾಗಿದೇ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನವನ್ನು ಕೇಂದ್ರ ಸರಕಾರ ಕೈಗೊಂಡಿದೆ. ಈ ಕಾರ್ಯಕ್ರಮದ ಪರಿಣಾಮ ರಾಷ್ಟ್ರಧ್ವಜ ಖರೀದಿಗೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗಲಿದೆ. ಹಾಗಾಗಿ, ಕೇಂದ್ರ ಸರಕಾರ ಯೋಜನೆಗೆನುಸಾರ  ರಾಷ್ಟ್ರಧ್ವಜಗಳನ್ನು ಪೂರೈಸಲು ಸಾಧ್ಯವಾಗುವಂತೆ ರಾಷ್ಟ್ರಧ್ವಜ  ಸಂಹಿತೆಗೆ ತಿದ್ದುಪಡಿ ಮಾಡಿರುವದು ಪ್ರಸ್ತುತ ವಿವಾದಕ್ಕೆ ಕಾರಣವಾಗಿದೆ

ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಯ ಸಂದರ್ಭದಲ್ಲಿ ‘ರಾಷ್ಟ್ರಧ್ವಜ ಸಂಹಿತೆ’ ತಿದ್ದುಪಡಿ ಮಾಡಿರುವುದು ಗಾಂಧಿ ತತ್ವ ಮತ್ತು ಆಶಯಗಳಿಗೆ ವಿರುದ್ಧದ ನಡೆ. ಗ್ರಾಮೋದ್ಯೋಗವನ್ನು ನಾಶ ಮಾಡಲು ಅಧಿಕಾರ ವರ್ಗ ಹಾತೊರೆಯುತ್ತಿದೆ. ಗ್ರಾಮ ಸ್ವರಾಜ್ಯದ ಸಂಕೇತವಾದ ಖಾದಿಯನ್ನು ತ್ಯಜಿಸುವ ಮಾತೇ ಇಲ್ಲ ಎಂದು ಮೈಸೂರಿನ ರಂಗಕರ್ಮಿ ಪ್ರಸನ್ನ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 “ಖಾದಿಯಿಂದ ದೇಶದ ಆರ್ಥಿಕತೆಗೆ ಯಾವುದೇ ಲಾಭವಿಲ್ಲ. ನೀವು ಚರಕದಿಂದ ನೂತ ಖಾದಿ ನಮಗೆ ಬೇಕಿಲ್ಲವೆಂದು ಪರೋಕ್ಷವಾಗಿ ಸರ್ಕಾರ ಹೇಳಿದಂತಿದೆ. ಧ್ವಜದಿಂದಲೇ ಖಾದಿಯನ್ನು ಕಿತ್ತು ಹಾಕಲು ಸರ್ಕಾರ ಮುಂದಾಗಿದೆ. ಹೀಗೇ ಮುಂದುವರಿದರೆ ಶಿವಪುರ ಸತ್ಯಾಗ್ರಹದ ಚಳವಳಿ ಮಾದರಿಯಲ್ಲಿ ಬೆಂಗಳೂರು, ಧಾರವಾಡಗಳಲ್ಲಿ ಧ್ವಜ ಸತ್ಯಾಗ್ರಹದ ಚಳವಳಿ  ಮಾಡುತ್ತೇವೆ” ಎಂದು ಪ್ರಸನ್ನ ಎಚ್ಚರಿಕೆ ನೀಡಿದ್ದಾರೆ.

ಪಾಲಿಸ್ಟರ್ ರಾಷ್ಟ್ರಧ್ವಜದ ಉತ್ಪಾದನೆ ಮತ್ತು ಆಮದಿಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರದ ನಿರ್ಣಯ ವಿರೋಧಿಸಿ ಖಾದಿ ರಾಷ್ಟ್ರಧ್ವಜ ತಯಾರಿಕೆಗೆ ಖ್ಯಾತಿ ಪಡೆದ ಕರ್ನಾಟಕದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಜುಲೈ ೨೭ಕ್ಕೆ ಒಂದು ದಿನ ಸತ್ಯಾಗ್ರಹ ಘೋಷಿಸಿತ್ತು.  ಸರ್ಕಾರದ ರಾಷ್ಟ್ರಧ್ವಜ ಸಂಹಿತೆ ತಿದ್ದುಪಡಿ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿಗಳು, ಸರ್ವೋದಯ ಕಾರ್ಯಕರ್ತರು, ಖಾದಿ ಪ್ರೇಮಿಗಳು, ರಾಜ್ಯದ ಖಾದಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ  ಧ್ವಜ ತಯಾರಿಸುವ ಕೆಲಸಗಾರರು, ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ, ರಾಜ್ಯ ವ್ಯಾಪಿ ರಾಷ್ಟ್ರಧ್ವಜ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ಮಾಡುವ ಮೂಲಕ ಗಾಂಧಿ ಆಶಯಗಳಿಗೆ ಧಕ್ಕೆ ತರಲಾಗಿದೆ. ಸರಕಾರವೇ ಹೀಗೆ ಮಾಡಿದರೆ ನಾಳೆ ಖಾದಿ ಸಂಸ್ಕೃತಿಯನ್ನು ಕಾಪಾಡುವವರು ಯಾರು ?


Leave a Reply

Back To Top