ಅಂಕಣ ಸಂಗಾತಿ

ಒಲವ ಧಾರೆ

ಸೈನಿಕರೆಂಬ ದೇಶದ ತ್ಯಾಗ ಜೀವಿಗಳ 

ನೆನಪೇ ರೋಚಕ..!!

ಧೋ.. ಧೋ..ಎಂದು ಸುರಿಯುವ ಮಳೆಗೆ  ಮೈಯೊಡ್ಡಿಕೊಂಡು, ಕೈಯಲ್ಲಿರುವ ಹತ್ತು ಹದಿನೈದು ಕೇಜಿಯಷ್ಟು ತೂಕವಿರುವ ರೈಫಲ್..,  ಹೆಗಲಿಗೆ ನೇತಾಕಿಕೊಂಡಿರುವ  ದೊಡ್ಡ ಪ್ರಮಾಣದಲ್ಲಿರುವ ಚೀಲ…, ಕಾಲಿನಲ್ಲಿ ಟಕ್ ಟಕ್ ಎಂದು ಶಬ್ದ ಮಾಡುವ  ದೊಡ್ಡ ಪ್ರಮಾಣದ ಬೂಟು…!!  ತಲೆ ಮತ್ತು ಮುಖವನ್ನು ಮುಚ್ಚುವ ಟೊಪ್ಪಿಗೆ.. ನೀಳವಾದ ಪ್ಯಾಂಟ್, ನೀಲುವುಳ್ಳ ಕುರ್ತಾ…,

ವೈರಿಗಳೆಂದರೇ ಸದಾ ಉರಿಯುವ ಕಣ್ಣುಗಳು..! ದೇಶವೆಂದರೇ ಎದೆಯೊಳಗೆ ಬತ್ತದ ಪ್ರೀತಿ..!! ಸೂತ್ತಲಿನ ವಾತಾವರಣವನ್ನು ಗಟ್ಟಿಗೊಳಿಸುವ ಧೈರ್ಯ….!! ಆತ ಬೇರಾರೂ ಅಲ್ಲ ನಾವೆಲ್ಲ ಹೆಮ್ಮೆ ಪಡುವ ಭಾರತದ ವೀರ ಸೈನಿಕರು..!!!

ದೇಶದೊಳಗೆ ನಾವೆಲ್ಲ ಬೆಚ್ಚಗಿರಲು ಮುಖ್ಯ ಕಾರಣ ನಮ್ಮ ದೇಶದ ವೀರ ಸೈನಿಕರು.  ತಮ್ಮ ಮನೆ ಮಠಗಳನ್ನು ತೊರೆದು, ಕುಟುಂಬವನ್ನು ಬಿಟ್ಟು, ದೇಶದ ಒಳಿತಿಗಾಗಿ ಸದಾ ಗಡಿಗಳಲ್ಲಿ ಗುಡ್ಡಗಾಡುಗಳಲ್ಲಿ ಹೋರಾಟ ಮಾಡುತ್ತಾರೆ.  ವೈರಿಗಳ ಗುಂಡಿನ ಸುರಿಮಳೆಗೆ ಎದೆಗೊಟ್ಟು, ತಮ್ಮ ಪ್ರಾಣವನ್ನು ಲೆಕ್ಕಿಸದೆ, ದೇಶಕ್ಕಾಗಿ ಬದುಕನ್ನೇ ತ್ಯಾಗ ಮಾಡಿದ ಅವರ  ಬದುಕು ನಿಜಕ್ಕೂ ಸಾರ್ಥಕ…!! “ಜೈ ಜವಾನ್ ಜೈ ಕಿಸಾನ್”  ಎಂಬ ಘೋಷಣೆಯನ್ನು ನಮ್ಮ ದೇಶದ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರು ನೀಡಿರುವುದು ನಿಜಕ್ಕೂ ಶ್ಲಾಘನೀಯ.  ಈ ದೇಶದ ಬೆನ್ನೆಲುಬು ರೈತರನ್ನು ಎಂದು ಕರೆದುಕೊಂಡರೆ, ಈ ದೇಶದ  ತೋಳ್ಬಲವೆಂದರೇ  ಸೈನಿಕರು..!!  ಗಡಿಗಳಲ್ಲಿ, ಆಂತರಿಕ ಕಚ್ಚಾಟದಲ್ಲಿ, ವ್ಯವಹಾರಿಕ ಮುನಿಸು ಗಳಿರಲಿ, ಯಾವುದೇ ಒಂದು ದೇಶ ಇನ್ನೊಂದು ದೇಶದೊಡನೆ ಸೂಕ್ಷ್ಮವಾಗಿ ವ್ಯವಹರಿಸುವುದು ಒಳಿತು.  ಒಂದು ವೇಳೆ ವ್ಯವಹಾರದಲ್ಲಿ ಏನಾದರೂ ಲೋಪದೋಷಗಳು ಕಂಡು ಬಂದರೆ.. ಆ ದೇಶವು ಇನ್ನೊಂದು ದೇಶಕ್ಕೆ ವೈರಿಯಾಗಿ ಪರಿಣಮಿಸುತ್ತದೆ. ಆಗ ಸಾಮಾನ್ಯವಾಗಿ ಯುದ್ಧಗಳಾಗುತ್ತವೆ.

 ಭಾರತದ ಇತಿಹಾಸದ ಉದ್ದಕ್ಕೂ ನಾವು ಅವಲೋಕನ ಮಾಡಿಕೊಂಡಾಗ, ನಮ್ಮ ದೇಶದ ಸುತ್ತಲೂ ಇರುವ ಬಹುತೇಕ ರಾಷ್ಟ್ರಗಳಲ್ಲಿ ಪಾಕಿಸ್ತಾನ, ಚೀನಾ ಮುಂತಾದ ದೇಶಗಳು ಗಡಿಗಳ ವಿಷಯದಲ್ಲಿ ಇನ್ನೂ ಹೋರಾಟ ಮಾಡುತ್ತಿರುವುದು ಶೋಚನೀಯ. ಬಾನೆತ್ತರದ ಹಿಮಾಲಯದಲ್ಲಿ, ಕೊರೆಯುವ ಚಳಿಯಲ್ಲಿ, ಮೈಮನ  ಕೊರೆಯುತ್ತಿದ್ದರೂ, ಜೀವವನ್ನು ಲೆಕ್ಕಿಸದೆ ಹೋರಾಟ ಮಾಡುವ ಸೈನಿಕರ ಆತ್ಮಸ್ಥೈರ್ಯ ಮೆಚ್ಚುವಂತಹದ್ದು. ಅರಣ್ಯ ಪ್ರದೇಶಗಳಲ್ಲಿ, ಗುಡ್ಡಗಾಡುಗಳಲ್ಲಿ ಮುಳ್ಳು ಕಲ್ಲುಗಳನ್ನು ತುಳಿಯುತ್ತಲೇ ಒಂದು ಕಂದರದಿಂದ ಇನ್ನೊಂದಕ್ಕೆ ಕಂದರಕ್ಕೆ ಜಿಗಿಯುತ್ತಲೇ..ವೈರಿಗಳ ಎದೆಗೆ ಗುಂಡಿಟ್ಟು ಕೊಂದು ಹಾಕುವುದು ಸಾಮಾನ್ಯವಲ್ಲ..! ವೈರಿಗಳು ನಮ್ಮ ದೇಶದೊಳಗೆ ನುಸುಳದಂತೆ ಸದಾ ಕಣ್ಗಾವಲಾಗಿ ಕಾಯುವ ಸೈನಿಕರ ಶ್ರಮ ನಿಜಕ್ಕೂ ಅವರ್ಣನೀಯ..!! ಇವತ್ತು ನಮ್ಮ ದೇಶವು ಸ್ವಾತಂತ್ರ್ಯಗೊಂಡು 75 ವರ್ಷಗಳನ್ನು ಪೂರೈಸಿ, ಅಮೃತಮಹೋತ್ಸವವನ್ನು  ಆಚರಿಸುವ ಈ ಶುಭಗಳಿಗೆಯಲ್ಲಿ ಸೈನಿಕರ ತ್ಯಾಗ ಬಲಿದಾನಗಳನ್ನು ನೆನೆಯದೇ ಹೋದರೆ ನಾವು ಕೃತಘ್ನರಾಗಿದ್ದೇವೆಂದೇ ಅರ್ಥ.

 ಭಾರತದ ಇತಿಹಾಸದಲ್ಲಿ ಚೀನಾ ಆಕ್ರಮಣ ಮಾಡಿದಾಗಾಗಲಿ, ಪಾಕಿಸ್ತಾನ ಆಕ್ರಮಣ ಮಾಡಿದಾಗಾಗಲಿ, ಇತ್ತೀಚಿಗೆ ಜರುಗಿದ ಕಾರ್ಗಿಲ್ ಯುದ್ಧವಾಗಲಿ, ಯಾವ ಯುದ್ಧದಲ್ಲಿಯೂ ನಾವು ಸೋತಿಲ್ಲ…!! ನಮ್ಮ ಸೈನಿಕರು ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ಭಾರತಕ್ಕೆ ಜಯದ ಮಾಲೆಯನ್ನು ಹಾಕಿದ್ದಾರೆ. ನಮ್ಮ ದೇಶದ ಸೈನಿಕ ಪಡೆಯು ಅತ್ಯಂತ ಸುಸಜ್ಜಿತವಾಗಿದ್ದು, ಭೂದಳ, ವಾಯುದಳ, ನೌಕಾದಳಗಳಿಂದ ಕೂಡಿದ್ದು ಪ್ರತಿಯೊಂದು ವಲಯದಿಂದಲೂ ಸ್ಪೂರ್ತಿದಾಯಕ ಯುವಕರ ಪಡೆಯನ್ನು ಒಡಲಲ್ಲಿಟ್ಟುಕೊಂಡು, ವೈರಿಗಳ ಜೊತೆಗೆ ವ್ಯವಹರಿಸುತ್ತದೆ.

“ಯುದ್ಧಕ್ಕೆ ಕರೆಯುವುದಿಲ್ಲ ಬಂದರೆ ಬಿಡುವುದಿಲ್ಲ”

 ಎನ್ನುವ ಧ್ಯೇಯವಾಕ್ಯವನ್ನು ಯಾವತ್ತೂ ಮನದಲ್ಲಿ ಇಟ್ಟುಕೊಂಡೇ ನಮ್ಮ ರಕ್ಷಣಾತ್ಮಕ ವಿಷಯದಲ್ಲಿ ರಾಜಿಯಾಗದೆ, ಮಾನವೀಯತೆಯ ಪಂಚಶೀಲ ತತ್ವಗಳನ್ನು ಅಳವಡಿಸಿಕೊಳ್ಳಲಾಗಿದೆ.  ದೇಶದ ಗಡಿಗಳ ಕಾವಲು ಕಾಯುವ ಸೈನಿಕರ ಮನೋಧರ್ಮ ಅದ್ಭುತವಾಗಿದೆ.

ಅಂದಿನ  ಸಂದರ್ಭದಲ್ಲಿ ನಮ್ಮ ದೇಶದ ಯುವ ಮನಸ್ಸುಗಳು ಆಗತಾನೆ ಶಾಲಾ-ಕಾಲೇಜುಗಳನ್ನು ಮುಗಿಸಿಕೊಂಡು ಈ ದೇಶಕ್ಕಾಗಿ ಸೈನಿಕನಾಗಿ ಸೇವೆ ಸಲ್ಲಿಸಬೇಕು. ಭಾರತ ಮಾತೆಯ ಹೆಮ್ಮೆಯ ಪುತ್ರನಾಗಬೇಕೆಂಬ ಕನಸು ಇರುವುದು ಸಹಜ. ಇದಕ್ಕಾಗಿ ಹಗಲಿರುಳೆನ್ನದೆ ದೈಹಿಕ-ಮಾನಸಿಕ  ಪರೀಕ್ಷೆಗಳಿಗೆ ಹಗಲಿರುಳು ಶ್ರಮಪಟ್ಟು  ಪಾಸಾಗುತ್ತಾರೆ. ವೈದ್ಯಕೀಯ ತಪಾಸಣೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

“ಇಷ್ಟು ದಿನ ನನ್ನ ಮಗ, ಇನ್ನು ಮುಂದೆ ದೇಶದ ಮಗನೆಂಬ” ಹೆಗ್ಗಳಿಗೆ ತಂದೆತಾಯಿಗಳಿಗೆ ಇರುತ್ತದೆ. ಪ್ರೀತಿಯಿಂದಲೇ ಬೀಳ್ಕೊಟ್ಟ ಭಾರತದ ಪ್ರತಿಯೊಬ್ಬ ಸೈನಿಕರ ತಂದೆ ತಾಯಿಗಳು ದೇಶದ ಒಳಿತಿಗಾಗಿ ತಮ್ಮನ್ನು ತಾವು ಅರ್ಪಿಸಿ ಕೊಳ್ಳುವುದನ್ನು ಕಣ್ಣಾರೆ  ನೋಡುತ್ತಿರುತ್ತಾರೆ. ಹತ್ತರಿಂದ ಹನ್ನೆರಡು ವರ್ಷಗಳ ಕಾಲ ಸೈನದಲ್ಲಿ ಸೇವೆ  ಮಾಡುವ ಸಮಯದಿ ಯುದ್ಧದಲ್ಲಿ ಕೈಕಾಲು ಕಳೆದುಕೊಂಡಾಗ, ಭಯೋತ್ಪಾದಕರ ಗುಂಡಿಗೆ ದಾಳಿಯಾಗಿ ಪ್ರಾಣವನ್ನು ಕಳೆದುಕೊಂಡಾಗ, ಯುದ್ಧವನ್ನು ಮಾಡುವಾಗ ವೈರಿಗಳ ಗುಂಡಿಗೆ ಬಲಿಯಾಗಿ ಪ್ರಾಣವನ್ನು ಭಾರತ ಮಾತೆಗಾಗಿ ಅರ್ಪಿಸಿದಾಗ, ವೀರ ಸೈನಿಕರ ಕುಟುಂಬದ ರೋದನ ಹೇಳತೀರದು…!! ಮದುವೆಯಾಗಿ ಇನ್ನೂ ಎರಡು ವರ್ಷವೂ ಆಗಿಲ್ಲ. ಆಗಲೇ ವಿಧವೆಯ ಪಟ್ಟ..!! ಇಲ್ಲವೋ ಐದಾರು ವರ್ಷ ಆಗಿದ್ದರಂತೂ ಅದೇ ತಾನೇ ಹುಟ್ಟಿದ ಮಗನೋ ಇಲ್ಲವೋ ಮಗಳೋ…ಅನಾಥೆ..!

ಇಷ್ಟಾದರೂ ಸೈನಿಕನ ಮಡದಿಯು  ಆ ಮಹಾ ತಾಯಿಯಂದಿರ ಎದೆಯೊಳಗೆ ಭಾರತದ ಬಗ್ಗೆ ಬತ್ತದ  ವಾತ್ಸಲ್ಯ,  ಪ್ರೀತಿ, ಹೆಮ್ಮೆ ಉಕ್ಕಿ ಹರಿಯುತ್ತದೆ.

 “ತನ್ನ ಮನೆಗೆ ಬಂದ ಸುಪುತ್ರನನ್ನು ಮತ್ತೆ ನಾನೂ ಸೈನ್ಯಕ್ಕೆ ಕಳಿಸುತ್ತೇನೆ” ಎನ್ನುವ ಅರ್ಪಿತಾಮನೋಭಾವ ಅವರದು..!! ಸಾಮಾನ್ಯರಿಂದ ಇಂತಹ ವಿಚಾರಗಳು ಬರಲು ಸಾಧ್ಯವಿಲ್ಲ. ಇಂತಹ ಮನೋಭಾವದಿಂದಲೇ ಭಾರತದ ಪ್ರತಿಯೊಬ್ಬ ತಾಯಂದಿರು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸುವ, ಭಾರತಮಾತೆಯ ರಕ್ಷಣೆಯನ್ನು ಮಾಡುವ ಪ್ರತಿಜ್ಞೆಯನ್ನು ಮಾಡುತ್ತಾರೆ.

 ದೇಶದೊಳಗೆ ಸಂಭವಿಸುವ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಜನರನ್ನು ರಕ್ಷಿಸುವ ದೊಡ್ಡ ಹೊಣೆಗಾರಿಕೆಯನ್ನು ನಮ್ಮ ಸೈನಿಕರು ಇಟ್ಟುಕೊಂಡಿರುತ್ತಾರೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶದ ಒಳಗೆ, ದೇಶದ ಗಡಿಯೊಳಗೆ ದುಡಿಯುವ ಸೈನಿಕರ ಶ್ರಮ ನಿಜಕ್ಕೂ ಶ್ಲಾಘನೀಯ ಹೀಗೆ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಅನಾಥ ಪ್ರಜ್ಞೆಯನ್ನು ಅನುಭವಿಸುವ ವೃದ್ಧ ತಂದೆ ತಾಯಿಗಳ  ಪಾಡು ನಿಜಕ್ಕೂ ನೋವಿನ ಸಂಗತಿ. ಹಾಗೆಯೇ ತುಂಬು ವಯಸ್ಸಿನಲ್ಲಿರುವಾಲೇ ದೇಶಕ್ಕಾಗಿ ಗಂಡನನ್ನು ಕಳೆದುಕೊಂಡ ಸೈನಿಕರ ಮಡದಿಯರ ಎದೆಯೊಳಗಿನ ನೋವು ಅನುಭವಿಸಲಾರದಂತಹದ್ದು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಅನಾಥವಾದ ಮಗನಿಗೆ ಇಲ್ಲವೆ ಮಗಳಿಗೆ ತಂದೆಯ ಪ್ರೀತಿ ದಕ್ಕದೆ ಹೋದದ್ದು ವಿಪರ್ಯಾಸ..!!

ಸೈನ್ಯದಲ್ಲಿ ಗಾಯಗೊಂಡೋ ಅಥವಾ ಕೈ ಕಾಲುಗಳನ್ನು ಕಳೆದುಕೊಂಡೋ ಬಂದ ಸೈನಿಕರ ಪಾಡನ್ನು ನಾನು ಕಣ್ಣಾರೆ ಕಂಡವನು. ಅವರಿಗೆ ಸರಿಯಾದ ವೈದ್ಯಕೀಯ ಸೌಲಭ್ಯಗಳೂ ಕೆಲವು ಸಲ ಸಿಗದೇ ಹೋಗುತ್ತವೆ. ಪ್ರಜಾಸತ್ತಾತ್ಮಕ ಸರ್ಕಾರಗಳು ಸೈನಿಕರಿಗೆ ನೀಡುವ ಭರವಸೆಗಳು ಅವುಗಳು ಬಹು ಬೇಗನೆ ಕಾರ್ಯಗತಗೊಳ್ಳಬೇಕು. ಅವರ ಉಪಜೀವನಕ್ಕಾಗಿಯೇ ಸೌಲಭ್ಯಗಳನ್ನು ಕೊಡುತ್ತೇನೆಂದು ಭರವಸೆ ಕೊಟ್ಟ ಭೂಮಿಯಾಗಲಿ, ನೌಕರಿಯಾಗಲಿ, ಸರಿಯಾದ ಸಮಯಕ್ಕೆ ಕೊಟ್ಟಾಗಲೇ ಅದಕ್ಕೊಂದು ಬೆಲೆ ಬರುತ್ತದೆ. ಸೈನಿಕ ಕುಟುಂಬಗಳು ಸರ್ಕಾರಗಳ ಭರವಸೆಯಿಂದಲೇ ಇನ್ನೂ ನರಳುತ್ತಿರುವುದನ್ನು ನಾವು ಅಲ್ಲಲ್ಲಿ ಕಾಣುತ್ತೇವೆ, ಕೇಳುತ್ತೇವೆ. ಇನ್ನೂ ಯುದ್ಧದಲ್ಲಿ ವೀರ ಮರಣವನ್ನು ಹೊಂದಿದ ಸೈನಿಕರ  ಕುಟುಂಬಕ್ಕೆ ಸಾರ್ವಜನಿಕರಿಂದ ಅಪಾರ ನೆರವಿನ ಜೊತೆಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು. ಸೈನಿಕರ ಕುಟುಂಬದ  ವೃದ್ಧ ತಂದೆ-ತಾಯಿಗಳನ್ನು ನೋಡಿಕೊಳ್ಳುವ, ಸೈನಿಕರ ಮಡದಿಯವರಿಗೆ ಸೌಲಭ್ಯಗಳನ್ನು ತಲುಪಿಸುವ ಜವಾಬ್ದಾರಿ ಮಹತ್ವದ್ದು.  ಎಷ್ಟೋ ವರ್ಷಗಳ ನಂತರ ಅವರಿಗೆ ಸೌಲಭ್ಯಗಳು ಸಿಕ್ಕರೆ ಕಾಲ ಮಿಂಚಿಹೋಗಿರುತ್ತದೆ. ಹಾಗಾಗದಂತೆ ಸಕಾಲಕ್ಕೆ ಸರ್ಕಾರಿ ಸೌಲಭ್ಯಗಳು ಮಗನನ್ನು ಕಳೆದುಕೊಂಡ, ದುಃಖದಲ್ಲಿರುವ ಕುಟುಂಬಗಳಿಗೆ ಸಿಕ್ಕರೆ ಸ್ವಲ್ಪವಾದರೂ ಆಸರಾದೀತು.

“ದೇಶವೆಂದರೇ ಬರೀ ಮಣ್ಣಲ್ಲೋ ಅದು ಜನರ ಬದುಕು” ಜನರ ಬದುಕು ಹಸನಾಗಿರಬೇಕಾದರೇ ಸೈನಿಕರು ಸುಖವಾಗಿರಬೇಕು. ನಮಗಾಗಿ ತಮ್ಮನ್ನು ತಾವು ತ್ಯಾಗ ಮಾಡುವವರ ಬದುಕಿಗೊಂದು ಆಸರಾಗೋಣ…ತ್ಯಾಗವನ್ನು ಸ್ಮರಿಸೋಣ…

ಸರ್ವರಿಗೂ ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಯ ಶುಭಾಶಯಗಳು..


ರಮೇಶ ಸಿ ಬನ್ನಿಕೊಪ್ಪ

ಜೀವಸೂಚಿ :

ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ವೃತ್ತಿ : ಶಿಕ್ಷಕರು

ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ

ವಿದ್ಯಾಭ್ಯಾಸ : ಎಮ್ ಎ ಬಿಇಡಿ

ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ

ಅಂಕಣಗಳು ಬರಹಗಳು :

ವಿನಯವಾಣಿ ಪತ್ರಿಕೆಯಲ್ಲಿ

ಶೈಕ್ಷಣಿಕ ಸ್ಪಂದನ

ಯುವಸ್ಪಂದನ

ವಿಜಯ ವಿಕ್ರಾಂತ ಪತ್ರಿಕೆಯಲ್ಲಿ

ಒಲವಧಾರೆ

ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ

ವಿವಿಧ ಪತ್ರಿಕೆಯಲ್ಲಿ

ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)

ಪ್ರಕಟಿತ ಕೃತಿಗಳು:

ಹೆಜ್ಜೆ ಮೂಡದ ಹಾದಿ

(ಕವನ ಸಂಕಲನ)

ನೆಲ ತಬ್ಬಿದ ಮುಗಿಲು

(ಚುಟುಕು ಸಂಕಲನ)

ಕಾಣೆಯಾದ ನಗುವ ಚಂದಿರ

(ಕವನ ಸಂಕಲನ)

ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ

(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)

ಅಚ್ಚಿನಲ್ಲಿರುವ ಕೃತಿಗಳು :

ಚಿಟ್ಟೆಗೆಣೆದ ಬಟ್ಟೆ

(ಹಾಯ್ಕು ಸಂಕಲನ)

ಅನುದಿನ ಚಾಚಿದ ಬಿಂಬ

(ದ್ವೀಪದಿಗಳು)

ಶಿಕ್ಷಣವೆಂಬ ಹಾರೋ ಹಕ್ಕಿ

(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)

ಹಾಫ್ ಚಹಾ

(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.

Leave a Reply

Back To Top