ಅಂಕಣ ಸಂಗಾತಿ
ಒಲವ ಧಾರೆ
ಬೀದಿ ಬದಿಯ ವ್ಯಾಪಾರಿಗಳ ಬದುಕು
ಬೀದಿ ಪಾಲಾಗದಿರಲಿ
.ಬೀದಿ ಬದಿಯ ವ್ಯಾಪಾರಿಗಳ ಬದುಕು ಬೀದಿ ಪಾಲಾಗದಿರಲಿ
ಒಂದು ವರ್ಷದ ಕೂಸನ್ನು ಎತ್ತಿಕೊಂಡು ಮಹಿಳೆಯೊಬ್ಬಳು ರಸ್ತೆಯ ಬದಿಯಲ್ಲಿ ಬಾಳೆಹಣ್ಣು ಮಾರುತ್ತಿದ್ದಾಳೆ. ವ್ಯಕ್ತಿಯೊಬ್ಬ ಅವಳೊಡನೆ ಚೌಕಾಸಿ ಮಾಡುತ್ತಾನೆ. ಅವಳು ಮುಂಜಾನೆಯಿಂದ ವ್ಯಾಪಾರವಾಗಿಲ್ಲ. ಇದರಿಂದ ಲಾಭ ಬರೋದೇ ಅಷ್ಟೇ ಪರವಾಗಿಲ್ಲ ಎನ್ನುತ್ತಾ…
ಹಣ್ಣು ಮಾರುವವರು, ಟೀ ಮಾರುವವರು, ಚಪ್ಪಲಿ ಮಾರುವರು, ಹಲವಾರು ಸ್ಟೇಷನರಿ ಸಾಮಾನುಗಳನ್ನು ಬೀದಿಯಲ್ಲಿಟ್ಟು ಕೂಗಿ ಕೂಗಿ ಕರೆದು ಮಾರುವುದು. ಅಂಡಾಕರಿ, ಕುಷ್ಕಾ, ಚಿಕನ್ ಪಕೋಡ, ಮುಂತಾದ ತಿನಿಸುಗಳ ಬಂಡಿಗಳು, ರಸ್ತೆಬದಿಯಲ್ಲಿ ಹೂವು ಮಾರುವುದು, ಬ್ರೆಡ್ಡು ಬನ್ ಗಳನ್ನು ಕೆಲವು ಸಲ ಬೀದಿಬದಿಯಲ್ಲಿ ಮಾರುತ್ತಾರೆ. ಮಹಿಳೆಯರಿಗೆ ಬೇಕಾದ ಸಾಮಾನುಗಳನ್ನು ಮಾರುವವರು ಉಂಟು. ಗಿಡಮೂಲಿಕೆಗಳನ್ನು, ವನಸ್ಪತಿ ಔಷಧಗಳನ್ನು ಬೀದಿ ಬದಿಯಲ್ಲಿ ಇಟ್ಟು ಮಾರುವನ್ನು ನೋಡಿರುತ್ತೇವೆ. ರಾಷ್ಟ್ರೀಯ ನಾಯಕರ, ಸಿನಿಮಾ ನಾಯಕರ, ದೇವರುಗಳ ಫೋಟೋಗಳು ರಸ್ತೆಬದಿಯಲ್ಲಿ..
ಅದರಲ್ಲೂ ಇತ್ತೀಚೆಗೆ ಸಂಪರ್ಕ ಮಾಧ್ಯಮದ ಅತಿಯಾದ ಸ್ಪರ್ಧಾ ಮನೋಭಾವದಿಂದ ವಿವಿಧ ಕಂಪನಿಗಳ ಸಿಮ್ ಗಳನ್ನು ಕೂಡ ಮಾರುವ ಏಜೆನ್ಸಿಗಳು ಬೀದಿಬದಿಯಲ್ಲಿ ನಿಂತು ಕೂಗಿ ಕೂಗಿ ಮಾರುವುದನ್ನು ನಾವು ನೋಡುತ್ತೇವೆ. ಬೀದಿಯಲ್ಲಿ ಅಲ್ಲಲ್ಲಿ ಸೈಕಲ್ ಪಂಚರ್ ಶಾಪ್ ಗಳ, ವಾಹನಗಳ ರಿಪೇರಿಯ ಸಾಮಾನುಗಳು ಅಲ್ಲದೆ ಬೀದಿಬದಿಯಲ್ಲಿ ದುಡಿಯುವ ಹಮಾಲಿಗಳು, ಕಾರ್ಮಿಕರು, ಬೀದಿ ಬೀದಿಯಲ್ಲಿ ಬಿದ್ದು ಅಲ್ಲಿಯೇ ಹೊಟ್ಟೆಪಾಡಿಗಾಗಿ ಬದುಕನ್ನು ಮಾಡುವ ಅಲೆಮಾರಿ ಮಾರಾಟಗಾರರು….
ಒಂದೇ ಎರಡೇ ಹತ್ತು ಹಲವಾರು. ಜನರಿಗೆ ಬೇಕಾದ ಸಾಮಾನುಗಳು ಜನಸಾಮಾನ್ಯರಿಗೂ ಕೈಗೆಟುಕುವಂತೆ ಸುಲಭವಾಗಿ ಸಿಗುವಂತೆ ರಸ್ತೆಬದಿಯಲ್ಲಿ ವ್ಯಾಪಾರ ಮಾಡುವುದನ್ನು ನೋಡುತ್ತೇವೆ. ಬದುಕಿಗಾಗಿ ಹತ್ತು ಹಲವಾರು ಉದ್ಯೋಗವನ್ನು ಆರಸುತ್ತಾ..ಸ್ಥಿರವಾದ ಮತ್ತು ನಿಗದಿತವಾದ ಉದ್ಯೋಗ ಸಿಗದೇ ಹೋದಾಗ ವ್ಯಕ್ತಿಗಳು ಸ್ವಲ್ಪ ಬಂಡವಾಳದಲ್ಲಿ ಸಣ್ಣಪುಟ್ಟ ಅಂಗಡಿಗಳನ್ನು ರಸ್ತೆಬದಿಯಲ್ಲಿ ಇಟ್ಟುಕೊಂಡು ಇಲ್ಲವೇ ಹೂವು ಹಣ್ಣು ತರಕಾರಿಗಳ ಬಂಡಿಗಳನ್ನು ಸಾಗಿಸುತ್ತಾ ವ್ಯಾಪಾರವನ್ನು ಪ್ರಾರಂಭ ಮಾಡುತ್ತಾರೆ.
ಜೀವನವನ್ನು ಕಟ್ಟಿಕೊಳ್ಳುವ ಪ್ರತಿಯೊಬ್ಬ ನಿರುದ್ಯೋಗಿಯೂ ಉದ್ಯೋಗ ಅರಸುವ ಪ್ರಾರಂಭದಲ್ಲಿ ಸುಲಭವಾದ ಮಾರ್ಗವೆಂದರೇ ಬೀದಿಬದಿಯ ವ್ಯಾಪಾರವೆಂದು ಹೇಳಬಹುದು.
ಯಾಕೆ ದೊಡ್ಡ ದೊಡ್ಡ ಅಂಗಡಿಗಳನ್ನು, ದೊಡ್ಡ ದೊಡ್ಡ ಮಳಿಗೆಗಳಲ್ಲಿ ಝಗಮಗಿಸುವ ವಿದ್ಯುತ್ ದೀಪಗಳೊಂದಿಗೆ ವ್ಯಾಪಾರವನ್ನು ಇಂತಹ ವರ್ಗದವರು ಮಾಡುವುದಿಲ್ಲವೆಂದು ನಾವು ಅವಲೋಕಿಸಿದಾಗ…
ಅಲ್ಲಿ ಕಂಡುಬರುವುದು ಆರ್ಥಿಕ ಪರಿಸ್ಥಿತಿ..!! ಸಾಮಾನ್ಯವಾಗಿ ಓದು ಮುಗಿದ ತಕ್ಷಣವೇ ಕೆಲವು ಯುವಕರು ಯುವತಿಯರು ಉದ್ಯೋಗವನ್ನು ಹುಡುಕುತ್ತಾ, ಬೇರೆಬೇರೆ ಕಂಪನಿಗಳಿಗೆ ಅಲೆಯುತ್ತಾರೆ. ಕಂಪನಿಯ ನೂರಾರು ಷರತ್ತುಗಳಿಗೆ ಅವರು ಒಪ್ಪಿಕೊಳ್ಳಬೇಕಾಗುತ್ತದೆ. ಕಂಪನಿಯ ಕೆಲಸದಲ್ಲಿ ಅತಿಯಾದ ಒತ್ತಡಗಳು, ಸ್ವಾತಂತ್ರ್ಯ ಇರದೇ ಇನ್ನೊಬ್ಬರ ಅಧೀನದಲ್ಲಿರುವ ವಾತಾವರಣವು ಇವರಿಗೆ ಹಿಡಿಸದೇ ಹೋಗುತ್ತದೆ. ಏಕೆಂದರೆ ಇಲ್ಲಿಯವರೆಗೆ ಸ್ವಾತಂತ್ರ್ಯದ ಹಕ್ಕಿಯಂತೆ ಎಲ್ಲಿ ಬೇಕೆಂದರಲ್ಲಿ ತಿರುಗಾಡಿದ ಹುಡುಗುತನದ ಬುದ್ಧಿ. ಇನ್ನೊಬ್ಬರ ಮಾತು ಕೇಳಲಾರದ ವಯಸ್ಸು. ಇಂತಹ ಸಮಯದಲ್ಲಿ ಸ್ವತಂತ್ರವಾಗಿ ಬದುಕಲಿಕ್ಕೆ ಮನಸ್ಸು ಹಾತೊರೆಯುತ್ತದೆ. “ಏನಾದರೊಂದು ವ್ಯಾಪಾರ ಮಾಡೋಣ”ವೆಂದು ಮನಸ್ಸು ಮಾಡುತ್ತಾರೆ. ಆದರೆ ಮನೆಯವರಿಂದ ನೂರಾರು ತಕರಾರುಗಳು. ಬಂಡವಾಳದ ಕೊರತೆ, ಜಾಗದ ಕೊರತೆ, ಇವೆಲ್ಲವನ್ನೂ ಮನಗಂಡ ಅವರುಗಳು “ಏನೇ ಆಗಲಿ ನಾನು ಸ್ವಂತದೊಂದು ಸಣ್ಣ ವ್ಯಾಪಾರವನ್ನು ಮಾಡಿಬಿಡುತ್ತೇನೆ.” ಎಂದು ಹಟಕ್ಕೆ ಬಿದ್ದವರಂತೆ ಸಣ್ಣ ವ್ಯಾಪಾರವನ್ನು ಪ್ರಾರಂಭ ಮಾಡುತ್ತಾರೆ. ವ್ಯಾಪಾರವಿರಲಿ ಎನಾದರೂ ಚಿಂತೆಯಿಲ್ಲ ಎಂದು ಶುರುಮಾಡುತ್ತಾರೆ.
ಹೀಗೆ ಬೀದಿಯ ವ್ಯಾಪಾರದಲ್ಲಿಯೂ ವ್ಯಾಪಾರ ಮಾಡಿ ಬದುಕಿಗೆ ನೆಲೆ ಕಂಡವರು ಸಾಕಷ್ಟು ಜನ ಇದ್ದಾರೆ. ಅಲ್ಲದೆ ಇದರಲ್ಲಿಯೇ ದುಡಿದು ಮುಂದೆ ದೊಡ್ಡ ದೊಡ್ಡ ವ್ಯಾಪಾರವನ್ನು ಕಟ್ಟಿಕೊಂಡವರನ್ನು ನಾವು ಕಾಣುತ್ತೇವೆ. ಸಣ್ಣ ಬೀದಿ ಬೀದಿಯಲ್ಲಿ ಹೊಟೇಲ್ ಹಾಕಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರು ದೊಡ್ಡ ಉದ್ದಿಮೆಯಾಗಿ ಬೆಳೆದಿರುವುದನ್ನು ನಾವು ಕಾಣುತ್ತೇವೆ.
‘ಬದುಕಿನಲ್ಲಿ ನಿಷ್ಠೆ ಮತ್ತು ಪರಿಶ್ರಮ’ ಇದ್ದರೆ ವ್ಯಕ್ತಿಗಳು ಏನನ್ನಾದರೂ ಸಾಧಿಸಬಹುದು.
ಆದರೆ ನಾವು ಅಂದುಕೊಂಡಷ್ಟು ಬೀದಿಬದಿಯ ವ್ಯಾಪಾರವು ಸುಲಭವಾಗಿಲ್ಲ ನಿಗಧಿತ ಅವಧಿಯೊಳಗೆ ವ್ಯಾಪಾರವನ್ನು ಪ್ರಾರಂಭ ಮಾಡಿ, ನಿಗದಿತ ಸಮಯದೊಳಗೆ ವ್ಯಾಪಾರವನ್ನು ಮುಗಿಸಬೇಕು. ಆಗಾಗ ಬಂದು ಕಾಡುವ ಪುರಸಭೆ ನಗರಸಭೆಯವರು, ಅಲ್ಲದೆ ಇಂತಿಷ್ಟೇ ಸಮಯದಲ್ಲಿ ವ್ಯಾಪಾರ ಮುಗಿಸಬೇಕು ರಾತ್ರಿಯಾದರೆ ಪೊಲೀಸರ ಕಾಟ, ಅಲ್ಲದೆ ಬೀದಿ ಬದಿಯಲ್ಲಿ ಹೆಣ್ಣುಮಕ್ಕಳು ವ್ಯಾಪಾರ ಮಾಡಿದರೆ ಪುಂಡ ಪೋಕರಿಗಳ ಕಾಟ. ನೂರೆಂಟು ತಾಪತ್ರಯಗಳು…!!
ಹಾಕಿದ ಬಂಡವಾಳಕ್ಕನುಗುವಾಗಿ ಬಂದ ಸಾಮಾನುಗಳು, ವಸ್ತುಗಳು, ಲಾಭದಾಯಕವಾಗಿ ಮಾರಾಟವಾದರೆ ಕ್ಷೇಮ. ಒಂದುವೇಳೆ ಖರೀದಿಸಿದ ಸಾಮಾನುಗಳು ಕೊಳೆತು ಹೋಗುವಂತಿದ್ದರೆ, ಹಾಳಾಗುವಂತಿದ್ದರೆ, ಕೆಟ್ಟುಹೋಗುವಂತಿದ್ದರೆ ತುಂಬಾ ಕಷ್ಟದಾಯಕ.ವ್ಯಾಪಾರ ಮಾಡುವಾಗ ಬರುವಾಗ ಗಿರಾಕಿ(ಗ್ರಾಹಕರು)ಗಳು ಅಷ್ಟೇ ಸಾಮಾನ್ಯ ವರ್ಗದವರು. ಬೀದಿಬದಿಯ ವ್ಯಾಪಾರವನ್ನು ಮಾಡಲು ಇಷ್ಟಪಡುತ್ತಾರೆ. ಯಾಕೆಂದರೆ ಅವರು ಕೂಡ ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಇರುವ ಹಣಕಾಸಿನಲ್ಲಿ “ಸಸ್ತಾ ಮೇ ಜಾಸ್ತಿ ಸಾಮಾನ್” ಎನ್ನುವ ಪರಿಕಲ್ಪನೆಯಲ್ಲಿ ವ್ಯಾಪಾರ ಮಾಡುವಾಗ ನೂರೆಂಟು ಚೌಕಾಸಿಗಳು..! ಒಂದು ರೂಪಾಯಿ, 50 ಪೈಸೆ ಗೂ ಹಿಂದೆ ಮುಂದೆ ನೋಡಿ ವ್ಯಾಪಾರ ಮಾಡುತ್ತಾರೆ. ಮುಂಜಾನೆಯಿಂದ ಸಂಜೆಯವರೆಗೆ ಕುಳಿತು ವ್ಯಾಪಾರ ವಾಗಿಲ್ಲ ಎನ್ನುವ ಸಂಕಟದಿಂದಲೋ, ತಂದ ವಸ್ತುಗಳು ಹಾಳಾಗಿ ಹೋಗುತ್ತೇವೆಯೋ ಎನ್ನುವ ನೋವಿನಿಂದಲೋ, ವ್ಯಾಪಾರವಾಗಲಿ ಎನ್ನುವ ಒಂದೇ ಕಾರಣಕ್ಕೆ ಸಿಕ್ಕ ವ್ಯಾಪಾರವನ್ನು ಬಿಡದೆ ವ್ಯಾಪಾರ ಮಾಡಿಬಿಡುತ್ತಾರೆ. ನಂತರ ರಾತ್ರಿಯಾದಂತೆ ಹಾಕಿದ ಬಂಡವಾಳವೂ ಮರಳಿಬಾರದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಪ್ರತಿಯೊಬ್ಬ ಬೀದಿ ಬದಿಯ ವ್ಯಾಪಾರಿಗಳ ನೋವಿನ ಸಂಗತಿ. ಈಗೀಗ ಆನ್ಲೈನ್ ವ್ಯಾಪಾರ ವಹಿವಾಟು ಜೋರು ಬೇರೆ, ಹೋಮ್ ಡಿಲೇವರಿ, ವಿಲೇವರಿ…ಒಂದೇ ಎರಡೇ…!!
ಹಾಗಂತ ಎ
ಎಲ್ಲಾ ಬೀದಿಬದಿ ವ್ಯಾಪಾರಿಗಳು ಪ್ರಾಮಾಣಿಕರಾಗಿರುವ ಇರುವುದಿಲ್ಲ. ಕೆಲವರು ಒಂದಕ್ಕೆರಡು ರೇಟಿನಂತೆ ದುಪ್ಪಟ್ಟು ಬೆಲೆಯನ್ನು ಹಾಕಿ, ಅಮಾಯಕ ಜನರನ್ನು ಯಾಮಾರಿಸಿ ವ್ಯಾಪಾರ ಮಾಡಿದ್ದುಂಟು..!! ಒಂದು ಸಲವೋ ಇಲ್ಲವೇ ಎರಡು ಸಲವೋ ಇಂತಹ ಅವಘಡಗಳಿಗೆ ತುತ್ತಾದ ಗಿರಾಕಿಗಳು ನಂತರ ಅವರ ಅಂಗಡಿಯ ಕಡೆಗೆ ಮುಖ ಎತ್ತಿಯು ನೋಡುವುದಿಲ್ಲ..
ಬದುಕಿನ ಅನಿವಾರ್ಯತೆಗೆ, ಕುಟುಂಬದವರ ಒಲವ ಪ್ರೀತಿಗೂ,ಅಂತೂ ಇಂತೂ ಬಾಳಿನ ಬಂಡಿಯನ್ನು ದುಡಲೇಬೇಕು. ಹಾಗಾಗಿ ನಿತ್ಯವೂ ವ್ಯಾಪಾರವೂ ಮಾಡಲೇಬೇಕು. ಬೀದಿಬದಿ ವ್ಯಾಪಾರಿಗಳು ದೊಡ್ಡ ಲಾಭವನ್ನು ಗಳಿಸುವುದಿಲ್ಲ. ಮುಂಜಾನೆಯಿಂದ ಸಂಜೆಯವರೆಗೂ ವ್ಯಾಪಾರಕ್ಕಾಗಿ ಹಾತೊರೆಯುವ ಪ್ರತಿಯೊಂದು ಬೀದಿ ಬದಿಯ ವ್ಯಾಪಾರಿಗಳು ಧೂಳಿನ ಕಣಗಳನ್ನು ಕುಡಿದು, ವಾಹನಗಳ ಹೊಗೆಯನ್ನು ಕುಡಿದು, ಬದುಕಿಗಾಗಿ ಹೋರಾಡುತ್ತಲೇ ಇರುತ್ತಾರೆ. ಒಂದು ಹಂತಕ್ಕೆ ಬರವಾಗಲೇ ಮಕ್ಕಳು ಓದು, ಅಭ್ಯಾಸ, ಮದುವೆ, ಅವರ ಜೀವನವನ್ನು ಒಂದು ದಡಕ್ಕೆ ಸೇರಿಸುತ್ತದೆ. ಬದುಕಿನಲ್ಲಿ ತುಂಬಾ ದಣಿದು ಬಿಡುತ್ತಾರೆ.
ಸ್ಥಳೀಯ ಸರಕಾರಗಳು ಇವರನ್ನು ಯಾವಾಗ ಒಕ್ಕಲೆಬ್ಬಿಸುತ್ತಾರೆಯೋ, ಇಲ್ಲವೇ ಹೆಚ್ಚು ಸುಂಕವನ್ನು ಹಾಕುತ್ತಾರೆಯೋ, ಇಲ್ಲವೇ ಪೊಲೀಸರ ಅತಿಯಾದ ಕಾಟವೋ ಅಥವಾ ರಸ್ತೆಯ ಅಗಲೀಕರಣಕ್ಕೋ, ಬಿರುಸಾದ ಬರೆಯ ಹೊಡೆತಗಳು… ಒಂದಿಲ್ಲ ಒಂದು ಆತಂಕದಲ್ಲಿಯೇ ಬದುಕನ್ನು ದೂಡುವ ಬೀದಿ ಬದಿಯ ವ್ಯಾಪಾರಿಗಳ ಬದುಕು ಅತಂತ್ರವಾಗಿರುವದು ಅಷ್ಟೇ ಸತ್ಯ..!! ಸ್ಥಳೀಯ ಸರಕಾರಗಳಿಗೆ ಸುಂಕವನ್ನು ಕಟ್ಟುತ್ತಾರೆ. ಕೆಲವು ವ್ಯಾಪಾರಿಗಳು ನೆಲದ ಬಾಡಿಗೆಯನ್ನು ಕಟ್ಟುತ್ತಾರೆ. ಪ್ರಜಾಸತ್ತಾತ್ಮಕ ಸರಕಾರಗಳು “ಪ್ರಜೆಯ ಸುಖವೇ ಅಂತಿಮ” ಎನ್ನುವ ಜನಕಲ್ಯಾಣದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಾಗ ಕೊನೆಯ ಪಕ್ಷ ಬೀದಿ ಬದಿಯ ವ್ಯಾಪಾರಿಗಳನ್ನು ಸಂಪೂರ್ಣವಾಗಿ ಅಸಂಘಟಿತ ವಲಯದ ಕಾರ್ಮಿಕರು ಎಂದು ಘೋಷಿಸಬೇಕು. ಅವರಿಗೆ ಕಾರ್ಮಿಕರ ಗುರುತಿನ ಚೀಟಿಯನ್ನು ಕೊಡಬೇಕು. ಸರಕಾರದಿಂದ ಕಾರ್ಮಿಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಬೀದಿಬದಿಯಲ್ಲಿ ಅವರಿಗೆ ನಿಗದಿತವಾದ ಸ್ಥಳವನ್ನು ಮೀಸಲಿರಿಸಬೇಕು. ಯಾಕೆಂದರೆ ಅವರನ್ನು ನಂಬಿಕೊಂಡಿರುವ ಕುಟುಂಬವು ಇರುತ್ತಾರಲ್ಲವೇ..?? ಬೀದಿ ಬದಿಯ ವ್ಯಾಪಾರಿಗಳ ಬದುಕು ಬೀದಿಗೆ ಬರಬಾರದು. ಅವರ ಬದುಕು ಹಸನಾಗಲಿ ಎನ್ನುವುದೇ ನಮ್ಮ ಸದಾಶಯ.
ರಮೇಶ ಬನ್ನಿಕೊಪ್ಪ ಹಲಗೇರಿ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.
ಸೂಪರ್ ಮಿತ್ರ