ಗಜಲ್ ದುನಿಯಾ

ಗಜಲ್ ದುನಿಯಾ

ಗಜಲ್

ಸುಜಾತಾ ರವೀಶ್

ಸಿಡಿವ ಮೇಘವು ಕರುಣೆ ತೋರಲು ವರುಣನ ಕೇಳಬೇಕಿದೆ ನಾವು 
ಜಡಿವ ಮಳೆಯ ಹನಿಗೆ ಪಡೆಯಲು ವಿರಾಮ ಹೇಳಬೇಕಿದೆ ನಾವು 

ನೆರೆಯ ನೀರಿಗೆ ಸಿಲುಕಿ ಕೊಚ್ಚಿ ಹೋಗುತಿದೆ ರೈತನ ಪೈರುಗಳು 
ಮೆರೆವ ವರ್ಷದ ಆರ್ಭಟ ತಗ್ಗಲು ಪ್ರಾರ್ಥನೆ ಮಾಡಬೇಕಿದೆ ನಾವು 

ಅರಿತು ರಕ್ಷಿಸಿ ಪ್ರಕೃತಿ ಹೊಂದುತ ನಾವು ಬಾಳಬೇಕಿತ್ತಲ್ಲವೇ 
ಮರೆತು ನಿಯಮ ಮೀರಿ ನಡೆದಿರೆ ಕ್ಷಮೆಯ ಕೋರಬೇಕಿದೆ ನಾವು 

ಎಚ್ಚರದಿಂದ ಮುಂದಡಿಯಿಡುತ ಪರಿಸರಕೆ ಕಾಳಜಿಯ ತೋರಬೇಕು 
ನಿಚ್ಚಳದಿ ನೋಡುತ ಮುಂದಿನ ಅನಾಹುತಕೆ ತಡೆಯ ಹಾಕಬೇಕಿದೆ ನಾವು 

ಸುಜಿಯು ಬಲ್ಲಳು ಭೂತಾಯಿಯ ಸಹನೆಗೂ ಮಿತಿಯಿದೆ ಎಂದು 
ನಿಜವ ತಿಳಿದು ಸ್ವಾರ್ಥದ ಪೊರೆಯನು ಕಳಚಿ ನೋಡಬೇಕಿದೆ ನಾವು 


ಸುಜಾತಾ ರವೀಶ್ 

Leave a Reply

Back To Top