ನಿಗೂಢ ಶಕ್ತಿ-ಲಕ್ಷ್ಮಿದೇವಿಪತ್ತಾರ

ಕಥಾ ಸಂಗಾತಿ

ನಿಗೂಢ ಶಕ್ತಿ

ಲಕ್ಷ್ಮಿದೇವಿಪತ್ತಾರ

ಯೋಗಿತಾ ತಾವರೆ ಹೂವಿನಂತಹ ಸುಕೋಮಲ, ಸಾತ್ವಿಕ, ಸುಂದರ ಹುಡುಗಿ. ಅವಳು ನಕ್ಕರೆ ಹೂ ಅರಳಿದಂತೆ.ಅವಳನ್ನು ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಎನಿಸುವಂತೆ ಇದ್ದಳು.ಅವಳು ಮುಂದೆ ಬಂದರೆ ಹೆಣ್ಣು ಮಕ್ಕಳೇ  ನೋಡುತ್ತಾ ನಿಲ್ಲುತ್ತಿದ್ದರು.ಇನ್ನು ಯುವಕರನ್ನು ಕೇಳಬೇಕೆ . ಯೋಗಿತಾ ಹೊರಗೆ ಬರುವುದೇ ದಿನಕ್ಕೆರಡು ಬಾರಿ.ಬೆಳಿಗ್ಗೆ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಮರಳುವಾಗ.ಅವಳು ಹೊರಗೆ ಬಂದರೆ ಸಾಕು ಯುವಕರು ಅವಳ ಹಿಂದೆ ಮುಂದೆ ಸುಳಿದಾಡುತ್ತಾ ಅವಳ ಕಣ್ಣು ನಮ್ಮ ಮೇಲೆ ಬೀಳಲೆಂದು ಬಕಪಕ್ಷಿಯಂತೆ ಕಾಯುತ್ತಿದ್ದರು.

             ಅವಳೀಗ ಹತ್ತನೇ ತರಗತಿ ಮುಗಿಸಿ ಕಾಲೇಜು ಕಟ್ಟಿ ಹತ್ತುವ     ಆತುರದಲ್ಲಿದ್ದಾಳೆ.ಓದುವದರಲ್ಲಿ ಜಾಣೆಯಾದ ತನ್ನ ಮುದ್ದಿನ ಮಗಳನ್ನು ಅವಳಪ್ಪ ತಮ್ಮ ಸೋಮನಳ್ಳಿಯಿಂದ ಎಂಟು ಕಿಲೋಮೀಟರ್ ದೂರದಲ್ಲಿ ಇರುವ ಕೃಷ್ಣಪುರಿ ನಗರದ ಪ್ರತಿಷ್ಠಿತ ಸಾಯನ್ಸ್ ಕಾಲೇಜಿಗೆ ಸೇರಿಸುತ್ತಿದ್ದಾನೆ. ಅದೂ ಮಗಳು ಒತ್ತಾಯಕ್ಕೆ.ಅವಳನ್ನು ಬೇಸರಪಡಿಸಲು ಅವರಪ್ಪನಿಗೆ ಸುತಾರಾಂ ಇಷ್ಟವಿಲ್ಲ.ಇರುವ ಇಬ್ಬರು ಮಕ್ಕಳಲ್ಲಿ ಹಿರಿಯವಳು ಯೋಗಿತಾ ಅವಳ ತಮ್ಮ ಯೋಗರಾಜ.ಆದರೆ  ಅವಳ ರೂಪಕ್ಕೂ ಅವಳ ಗುಣಕ್ಕೂ ಮನೆಯಲ್ಲಿ ಎಲ್ಲರಿಗೂ ಇವಳೆಂದರೆ ಅಚ್ಚುಮೆಚ್ಚು. ಹಾಸ್ಟೆಲಿಗೆ ಸೇರಿಸಲು ಅವರಾರಿಗೂ ಇಷ್ಟವಿಲ್ಲ. ಮಗಳನ್ನು ಬಿಟ್ಟಿರಲು ತಂದೆ-ತಾಯಿಯರಿಗೆ ಒಪ್ಪುತ್ತಿಲ್ಲ .ಹಾಗೆ ಅವರ ಮಗಳಿಗೂ ಅವರಿಂದ ದೂರವಿರುವದೆಂದರೆ ಹಸಿದು ಉಣ್ಣುವವನಿಂದ ಅನ್ನ ಕಿತ್ತುಕೊಂಡಂತೆ ಹಿಂಸೆ. ಕೃಷ್ಣ ಪುರಿಗೆ ಹೋಗುವ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಇವರ ಹಳ್ಳಿಗೆ  ಸಾಕಷ್ಟು ಬಸ್ಸುಗಳು ಓಡಾಡುತ್ತಿರುತ್ತವೆ. ಅದಕ್ಕಾಗಿ ಯೋಗಿತಾ ಕಾಲೇಜಿಗೆ ಬಸ್ನಲ್ಲಿ ಓಡಾಡಲೆಂದು ಅವಳಪ್ಪ. ನಿರ್ಧರಿಸಿದ್ದು,ತಾನೇ ಬಸ್ ನಿಲ್ದಾಣಕ್ಕೆ ಬಿಡುವುದು, ಕರೆದುಕೊಂಡು ಬರುವುದು ಮಾಡುತ್ತಾನೆ. ಅವಳನ್ನು ಅಲ್ಲಿಗೆ ಹಾಕಿದ್ದು ಕಂಡು ಅವಳ ಬಹು ಆತ್ಮೀಯ ಸ್ನೇಹಿತೆ ಸುಜಾತಳು ಹಠ ಹಿಡಿದು ಅದೇ ಕಾಲೇಜಿಗೆ ಸೇರಿಕೊಂಡಿದ್ದಾಳೆ. ಜೋತೆಯಾಗಿ ಹೋಗಿಬರುತ್ತಾರೆ ಎಂಬ ಸಮಾಧಾನ ಇಬ್ಬರ ಪಾಲಕರಿಗೂ ಇದೆ. ಹೀಗೆ ಯೋಗಿತಾ ಮತ್ತು ಅವಳ ಗೆಳತಿ ಸುಜಾತ ಕಾಲೇಜಿನ ಹೋಸ ಹೋಸ ಅನುಭವಗಳಿಗೆ ತೆರೆದು ಕೊಳ್ಳುತ್ತಾ,ಹೊಂದಿಕೊಳ್ಳುತ್ತಾ  ಹೋಗುತ್ತಿರುವಾಗಲೇ ಅವಳ ಬೆನ್ನ ಹಿಂದೆ ದುಷ್ಟ ಹುಳುಗಳು ಬಲಿ ಹೆಣಿಯುತ್ತಿದ್ದಿದ್ದು ಯಾರಿಗೂ ಗೋಚರಿಸದೆ  ಹೋಯಿತು.

ಕೃಷ್ಣಪುರಿಯ ಶ್ರೀಮಂತ ಗೌಡರ ಮಗನಾದ ನಾಗೇಶನು ದೂರದ ಹುಬ್ಬಳ್ಳಿಯಲ್ಲಿ  ಡಿಪ್ಲೋಮಾವನ್ನು ಪೂರ್ಣಗೊಳಿಸದೆ ಊರು ಸೇರಿದ್ದನು. ಶಿಕ್ಷಣ ಪೂರ್ಣ ಗೊಳಿಸದೆ ಮನೆಗೆ ಬಂದು ಸೇರಿದ ಮಗನನ್ನು ಬೈಯ್ಯದೆ “ವಿದ್ಯೆ ತಲೆ ಹತ್ತಿಲಿಲಂದರ ಯಾಕೆ ಚಿಂತೆ ಮಾಡ್ತಿ.ನಮ್ಮ ಆಸ್ತಿ ನಿಭಾಯಿಸಿದರ ಸಾಕ ಬಿಡಲೇ  ಮಗನ.ನಿನಗ ಒಂದು ಮಸ್ತ್ ಗಾಡಿ ಕೊಡಿಸ್ತೀನಿ.ಆಳು ಕರಕೊಂಡು ಗದ್ದೆ, ತೋಟ ನೋಡಿಕೊಂಡಿರು”. ಎಂದು ಹೇಳಿದಂತೆ ಗೌಡ ತನ್ನ ಹೊಲ ಗದ್ದೆಯನ್ನು ನೋಡಿಕೊಂಡಿರಲು  ಮಗನಿಗೆ ಒಂದು ಹೋಸ ಮಾದರಿ ಬೈಕ್ ಕೊಡಿಸಿದ್ದ . ಮಗ ಹೊಲ-ಮನೆ ನೋಡಿಕೊಳ್ಳದೇ ಉಂಡಾಡಿಗುಂಡನಾಗಿ, ರೌಡಿ ರಂಗಣ್ಣನಾಗಿ ಬೀದಿಬೀದಿ ಸುತ್ತುತ್ತಾ ಹುಡುಗಿಯರನ್ನು ಚುಡಾಯಿಸುತ್ತಿದ್ದ.ಅದೂಂದು ದಿನ ಬೈಕ್ ಮೇಲೆ ಬರುತ್ತಿದ್ದ ಅವನಿಗೆ ಎದುರಿನಲ್ಲಿ ಯೋಗಿತಾ ಮತ್ತು ಅವಳ ಗೆಳತಿಯರು ನಗುನಗುತ್ತಾ ಶಾಲೆ ವಿಷಯವನ್ನು ಮಾತನಾಡಿಕೊಳ್ಳುತ್ತ ಬರುವುದು ಕಂಡ.ಯೋಗಿತಾಳ ಆ ನಗು, ಚೆಲುವು ಕಂಡು ಮೋಹಿತನಾದ ನಾಗೇಶ್ ಆಕೆಯ ಹಿಂದೆ ಮುಂದೆ ಹಲ್ಲು ಕಿರಿದು ಕೊಂಡು ತಿರಗಲಾರಂಭಿಸಿದ.ಅದೊಂದು ದಿನ ಬೇಕು ಬೇಕಂತಲೇ ಅವಳ ಸೂಕ್ಷ್ಮ ಭಾಗವನ್ನು ತಾಗಿಸಿಕೊಂಡು ಮುಂದೆ ಹೋಗುವಷ್ಟರಲ್ಲೆ ಎಲ್ಲಿಂದ ಬಂತೋ ಕೋಪ ಯೋಗಿತಾಳಿಗೆ “ಏ ತಲೆ ಕೆಟ್ಟವನೆ ಕಣ್ಣು ಕಾಣೊದಿಲ್ವಾ.ಇನ್ನೊಮ್ಮೆ ಏನಾದರೂ ಇಂತಹ ಹಲ್ಕಾ ಕೆಲಸ ಮಾಡಿದಿಯೊ ನಮ್ಮಪ್ಪನಿಗೆ ಹೇಳಿ ದನ ಬಡಿದಂಗೆ ಬಡಿಸುವೆ.ಎಚ್ಚರ!”ಎಂದು ಅವಾಜ್ ಹಾಕಿದಳು.ನಿಜಕ್ಕೂ ತುಂಬಾ ಸೂಕ್ಷ್ಮ ದ ಹುಡುಗಿ ಯೋಗಿತಾಳಿಗೆ ತಪ್ಪು ಕಂಡರೆ ಸಿಡಿದು ನಿಲ್ಲುವ ಸ್ವಭಾವ ಅವಳಿಗೇ ಗೊತ್ತಿಲ್ಲದಂತೆ ಸ್ಪೋಟವಾಗುತ್ತಿತ್ತು.ಆ ಊರಿನ ಪ್ರತಿಷ್ಠಿತ, ಗೌರವಾನ್ವಿತ ವ್ಯಕ್ತಿಯಾದ ಅವರಪ್ಪನನ್ನು ಎದುರುಹಾಕಿಕೊಳ್ಳುವುದು ಸರಿಯಲ್ಲವೆಂದು ಸ್ವಲ್ಪ ದಿವಸ ಅವಳ ಅಕ್ಕ ಪಕ್ಕ ಸುಳಿಯುವುದನ್ನು ಬಿಟ್ಟಿದ್ದ.ಆದರೆ ಅವಳು ಎಲ್ಲರೂ ಮುಂದೆ ಅವಮಾನ ಮಾಡಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡು “ಅವಳಿಗೆ ಸರಿಯಾದ ಸಮಯ ನೋಡಿ  ಬುದ್ಧಿ ಕಲಿಸುವೆ”ಎಂದು ಗೆಳೆಯರ ಮುಂದೆ ಹೇಳಿಕೊಂಡಿದ್ದ.

ಅದೊಂದು ದಿನ ಯೋಗಿತಾಳ ಗೆಳತಿ ಅನಾರೋಗ್ಯದಿಂದ ಕಾಲೇಜಿಗೆ ಬಂದಿರಲಿಲ್ಲ.ಇದರ ಸುಳಿವು ಅರಿತ ನಾಗೇಶ್ ಮತ್ತು ಅವನ ಮೂವರು ಮನೆಹಾಳು ಗೆಳೆಯರು  ಸಾಯಂಕಾಲ ಆಗುವದನ್ನೆ ಕಾದು ಅವಳು ಕಾಲೇಜು ಮುಗಿಸಿಕೊಂಡು ಬಸ್ಟಾಪ್ ಹತ್ತಿರ ನಡೆದುಕೊಂಡು ಬರುವುದನ್ನು ನೋಡಿ ಹಿಂಬಾಲಿಸುತ್ತ ಬಂದರು. ಅದು ಕಾರ್ತಿಕ ಮಾಸ ಚಳಿಗಾಲ ಬೇರೆ, ಬೇಗ ಕತ್ತಲಾಗುತ್ತಿತ್ತು. ಸರಸರ ನಡೆದುಕೊಂಡು ಬರುತ್ತಿದ್ದ ಅವಳಿಗೆ ತನ್ನ ಹಿಂದೆ ಯಾರೋ  ಹಿಂಬಾಲಿಸುವುದದರ ಗುಮಾನಿ ಬಂತು.ಹಿಂತಿರುಗಿ ನೋಡಿದರೆ  ಯಾರು ಕಾಣಿಸಲಿಲ್ಲ. ಜೊತೆಗೆ ಗೆಳತಿ ಇಲ್ಲ,  ಕತ್ತಲೂ ಆವರಿಸಿಕೊಳ್ಳುತ್ತಿರುವದರಿಂದ

ಭಯಭೀತಳಾಗಿ ಯೋಗಿತಾ  ಚಳಿಗಾಲದಲ್ಲೂ ಸಣ್ಣಗೆ ಬೇವರಲಾರಂಬಿಸಿದಳು. ಹೆಚ್ಚುಕಡಿಮೆ  ಓಡುತ್ತಾ ನಡೆಯಲಾರಂಭಿಸಿದಳು.ಒಮ್ಮಿಂದೂಮ್ಮಲೆ ಬುಜದ ಮೇಲೊಂದು,ಸೊಂಟ ಕೊಂದು ಕೈ ಹರಿದಾಡಿದವು.ಕೈಕಾಲು ತಣ್ಣಾಗಾದಂತೆ ಆಗಿ ತಲೆ ತಿರುಗಿ ಬೀಳುವದೂಂದೆ ಬಾಕಿ.ಮುಂದೇನಾಯಿತೊ ಅವಳಿಗೆ ಅಸ್ಪಷ್ಟ, ಅಗೋಚರ.ಆದರೆ ಮೈಕೈ ನೋವು ಮಾತ್ರ ಕಾಣಲಾರಂಭಿಸಿತು.ಮುದ್ದಿನ ಮಗಳು ಒಬ್ಬಳೇ ಕಾಲೇಜಿಗೆ ಹೋಗಿದ್ದು ಗೊತ್ತಿದ್ದ ಅವಳ ಅಪ್ಪ ಗಾಡಿ ತೆಗೆದುಕೊಂಡು ಎದುರಿಗೆ ಬಂದಾಗ  ಯೋಗಿತಾಳ ರಾವಗೆದ್ದ ,ಕುದುಲು ಕೆದರಿದ ಎಂದೂ ನೋಡದ ವಿಚಿತ್ರ ಮುಖಮಂಡಲ ಕಂಡಿತು. ತನ್ನಪ್ಪನನ್ನು ನೋಡಿದ ತಕ್ಷಣ ಅವಳಿಗೆ  ನೋವು, ಭಯ ,ಸಂಕಟ, ಅಳು ಒಮ್ಮೆಲೆ ಉಮ್ಮಳಿಸಿ  ಬಂದವು.ಅಳುತ್ತಲೆ “ಅಪ್ಪ “ಎನ್ನುತ್ತಾ ತಬ್ಬಿಕೊಂಡಳು.”ಏನಾಯಿತು ಮಗಳೇ”ಎಂದು ಕಕ್ಕುಲಾತಿಯಿಂದ ಕೇಳಿದ್ದಕ್ಕೆ ಅವಳ ಅಳುನೇ ಉತ್ತರವಾಯಿತು.ಸಮಾದಾನಪಡಿಸುತ್ತಾ ಮನೆಯಲ್ಲಿ ಕೇಳಿದರಾಯಿತೆಂದು ಗಾಡಿ ಮೇಲೆ ಕೂರಿಸಿಕೊಂಡು ಮನೆಗೆ ಹೋದರು.

ಮನೆಗೆ ಹೋಗಿ ವಿಚಾರಿಸಿದಾಗ ತಿಳಿದಿದ್ದು ಯೋಗಿತಾಳಿಗೆ ಮೂರ್ನಾಲ್ಕು ಯುವಕರು ಮೈಮೇಲೇರಿ ಬಂದಿದ್ದು, ಅವಳ ಬಟ್ಟೆ ಎಳೆದಾಡಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾಗಿ ಗೊತ್ತಾಯಿತು. ಇದನ್ನು ಕೇಳಿ ಅವಳ ತಂದೆ-ತಾಯಿ ನಡುಗಿಹೋದರು. ಆತಂಕ ಭಯದಲ್ಲೆ ಅವರಿಗೆ ಸಮಾಧಾನ ತಂದ ಸಂಗತಿಯೆಂದರೆ ಅವಳಿಗೆ ಏನು ಆಗದಿರುವುದು.ಆದರೆ ಈ ಚಮತ್ಕಾರ ನಡೆದಿದ್ದಾದರೂ ಹೇಗೆ ಎಂದು ವಿಚಾರಿಸಲು, ಯೋಗಿತಾ”ನನಗೆ ಆ ಯುವಕರು ಮೈಮೇಲೆ ಏರಿ ಬಂದಿದ್ದು ನೋಡಿ ತುಂಬಾ ಭಯವಾಗಿ ಒಂದು ಕ್ಷಣ ತಲೆಸುತ್ತಿ ಬಂದಂತಾಯಿತು.ಅವರು ಬೇರೆ ಯಾರು ಅಲ್ಲ . ನಮ್ಮಊರಿನ ಗೌಡರ ಮಗ ಮತ್ತು ಅವನ ಗೆಳೆಯರು.ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿರುವದು ಅವರ ಮಾತಿನಿಂದ ಗೊತ್ತಾಗಿ ತಕ್ಷಣ ಅಜ್ಜ ಹೇಳುತ್ತಿದ್ದ ದೇವಿ ಮಂತ್ರ ಜಪಿಸಿದೆ . ಶ್ರೀದೇವಿಯನ್ನೇ ಸ್ಮರಿಸಲಾರಂಭಿಸಿದೆ.ಮುಂದೆ ಏನಾಯಿತು ನನಗೆ ತಿಳಿಯದು.ಆದರೆ ಕೆಳಗೆ ಬಿದ್ದವಳು ಎಚ್ಚರವಾಗಿ ನೋಡುವಷ್ಟರಲ್ಲಿ ಅಲ್ಲಿ ಯಾರು ಇರಲಿಲ್ಲ .ಗಾಬರಿಯಿಂದ ಓಡಿ ಬರುವಾಗ ಎದುರಿಗೆ ನೀವು ಬಂದಿರಿ”ಎಂದಳು. ಮರುದಿನ ಆ ಊರಲ್ಲಿ  ದೊಡ್ಡ ಆಘಾತದ ಬರಸಿಡಿಲು ಬಡಿದಿತು.ಊರಗೌಡನ ಮಗ ನಾಗೇಶ್ ಆತನ ಮೂವರು ಗೆಳೆಯರು ಮಾರಣಾಂತಿಕ ಹಲ್ಲೆ ಗೊಳಗಾಗಿ ಹಾಸ್ಪಿಟಲ್ಗೆ ಎಡ್ಮೀಟ್ ಆಗಿರುವ ಸುದ್ದಿ ಇಡೀ ಹಳ್ಳಿಯನ್ನೆ ಆಶ್ಚರ್ಯಗೊಳಿಸಿತು. ಮಕ್ಕಳು ಸಾವು ಬದುಕಿನ ಹೋರಾಟದಲ್ಲಿರುವುದು ಹೆತ್ತ ತಂದೆ ತಾಯಿಗೆ ಮಾತ್ರ ಆಘಾತ ತಂದಿತ್ತು.ಆದರೆ ಈ ಆತಂಕಕಾರಿ ಸುದ್ದಿ ಆ ಊರಿನ ಹದಿಹರೆಯದ ಹೆಣ್ಣುಮಕ್ಕಳಿರುವ ಹೆತ್ತವರಿಗೆ ಹೊಳಿಗೆ ತುಪ್ಪ ಸವಿದಷ್ಟು ಸಂತೋಷ ಉಂಟು ಮಾಡಿತ್ತು.  ಆ ನಾಲ್ವರು ಯುವಕರು ಇಲ್ಲಿವರಿಗೆ ತಮ್ಮ ಮೇಲೆ ಯಾರು ಈ ಪರಿ ಹಲ್ಲೆ ಮಾಡಿದರೆಂದು ಬಾಯ್ಬಿಡದಿರುವುದು ಊರ ಜನತೆಗೆ ವಿಚಿತ್ರವೆನಿಸಿತ್ತು. ಯಾರಿಂದಾದರೂ ಆಗಲಿ ಒಟ್ಟಿನಲ್ಲಿ ಅವರ ಹಾರಾಟ, ಸೊಕ್ಕು ಅಡಗಿತಲ್ಲ ಅಷ್ಟೇ ಸಾಕು ಎಂದು ಸಮಾಧಾನ ಪಟ್ಟರು. ಹಾಗೇ ಅಂತ ಶ್ರೀಮಂತರ, ಪ್ರಭಾವಿ ಮಕ್ಕಳನ್ನು ಹಲ್ಲೆ ಮಾಡಿದವರು ಬಹಳ ಧೈರ್ಯವಂತ, ವಿಶೇಷ ಶಕ್ತಿ ಉಳ್ಳವರೆ ಆಗಿರಬೇಕು ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು.

     ಇತ್ತ ಆಸ್ಪತ್ರೆಯಲ್ಲಿ ನರಳುತ್ತಾ ಮಲಗಿದ್ದ ನಾಗೇಶ ಮತ್ತು ಆತನ ಗೆಳೆಯರಿಗೆ ಹೆಣ್ಣುಮಕ್ಕಳು ಪಕ್ಕದಲ್ಲಿ ಬಂದರೆ ಸಾಕು ಮೆಟ್ಟುಬೀಳುವಷ್ಟು ಭಯ ಬೀತರಾಗಿದ್ದರು.ಅವರಿಗೆ ಅವಳ ಉಗ್ರ ರೂಪವೇ  ಕಣ್ಣಿಗೆ ಕಟ್ಟಿದಂತಾಗಿತ್ತು.ಎಂದೂ ಊಹಿಸಿದ  ಆ ಭಯಂಕರ ರೂಪ,ಆ ಅಗಾಧ ಶಕ್ತಿ ಅವಳಿಗೆ ಹೇಗೆ ಬಂತು ಎಂದೇ ಅವರ ಯೋಚನೆ ಸಾಗುತ್ತಿತ್ತು.ಆ ದಿನದ ಘಟನೆ ನೆನಪಿಸಿಕೊಂಡ ನಾಗೇಶ್ “ನಾವು ಮುಂದೆ ಹೋಗುತ್ತಿದ್ದವಳನ್ನು ಹಿಂಬಾಲಿಸಿ ಅವಳ ನಡು ಮತ್ತು ಹೆಗಲಿಗೆ ಕೈ ಹಾಕಿದೆವು. ಭಯದಿಂದ ನಡುಗಿ ಕೆಳಗೆ ಬಿದ್ದವಳು ಹೇಗೆ ಚೇತರಿಸಿಕೊಂಡು ಮೇಲೆದ್ದಳು ಕಾಳಿ ರೂಪವನ್ನು ತಾಳಿ ಕಣ್ಣು ಕೆಂಪಗೆ ಮಾಡಿಕೊಂಡು ಮೋದಲೇ ಕೆಂಪುಮುಖದವಳ ಮುಖವೆಲ್ಲ ರಕ್ತದ ಉಂಡಿಯಂತಾಗಿ, ಅದರುವಂತೆ ಹಲ್ಲು ಕಡಿಯುತ್ತಾ ಪಕ್ಕದಲ್ಲಿ ಸಿಕ್ಕ ದೊಡ್ಡ ಕಲ್ಲನ್ನು ಎತ್ತಿ ನಮ್ಮ ಮೇಲೆ ಎಸೆದಳು.ಅದರ ರಭಸದ ಹೊಡೆತಕ್ಕೆ ನನ್ನ ತಲೆ ಒಡೆದು ರಕ್ತ ಸುರಿಯಲಾರಂಭಿಸಿತು.ಅವಳ ಮೇಲೆ ಆಕ್ರಮಣ ಮಾಡಲು ಹೋದ ನನ್ನ ಗೆಳೆಯರಿಗೂ ಅಕ್ಕ ಪಕ್ಕದ ಕಲ್ಲನೆತ್ತಿ ಒಗೆದಿದ್ದಲ್ಲದೆ ,ಅಲ್ಲೆ ಆಕಳನ್ನು ಕಟ್ಟಿಹಾಕಿದ್ದ ಕೋಲನ್ನು ಕಿತ್ತು ನಮ್ಮನ್ನು ದನ ಬಡಿದಂತೆ ಬಡಿಯಲಾರಂಬಿಸಿದಳು.ನಮಗೆ ಮರು ಆಕ್ರಮಣಕ್ಕೂ ಅವಕಾಶ ಕೊಡದೆ ಅಬ್ಬಾ! ಹೇಗೆ ಹೋಡಿದಳೆಂದರೆ ನಮ್ಮದು ಹುಚ್ಚು ನಾಯಿ ಪಾಡಾಗಿತ್ತು. ನಾವು ಗಂಡಸರು ಹೆಣ್ಣಿನಿಂದ ಹೋಡಸಿಕೊಳ್ಳುವದನ್ನು ಯಾರು ನೋಡಬಾರದೆಂದು ಚೀರದೆ ಅವಳ ಮಿಂಚಿನ ಹೊಡೆತ- ಬಡಿತ   ತಿನ್ನುತ್ತಾ ಪ್ರಾಣ ಉಳಿಸಿಕೊಳ್ಳಲು ಓಟಕಿತ್ತೆವು.ಈಗಲೂ ಅವಳ ಮಾರಿ ರೂಪ ಕಣ್ಣು ಮುಂದೆ ಬಂದರೆ ಒಂದಾಕ,ಎರಡಾಕ ಎರಡೂ ಬರುತ್ತವೆ”.

         ಆದ ಘಟನೆ ಯಾರಿಗೂ ಹೇಳಲಾಗದ ಸಂದಿಗ್ಧತೆ ನೆನೆಸಿ ಕೊಂಡು ನೋವು ಉಣ್ಣುತ್ತಾ ಕಣ್ಣಿರು ಹರಿಸಲಾರಂಭಿಸಿದ.ಪಕ್ಕದಲ್ಲಿದ್ದ ತಂದೆ-ತಾಯಿಗಳು ಚಿಂತಿತರಾಗಿ ಮಗನ ಮುಖವನ್ನು ನೋಡುತ್ತಾ” ಯಾಕೆ ಅಳುವೆ ಬಹಳ ನೋವು ಆಗ್ತಾ ಇದಿಯಾ .ಈಗಲಾದರೂ ಬಾಯಿಬಿಡು. ಯಾರು ಹೀಗೆ ಮಾಡಿದರು ಅವರನ್ನು ಮಾತ್ರ ನಾನು ಸುಮ್ಮನೆ ಬಿಡುವುದಿಲ್ಲ. ನನ್ನ ರಾಜಕೀಯ ವಿರೋಧಿಗಳು ಹೀಗೆ ಮಾಡರಬೇಕು. ಹೇಳು ಮಗ ನೀನು ಯಾವುದಕ್ಕೂ ಭಯಪಡಬೇಡ ನಾನಿರುವೆ “ಎಂದು ಅವರಪ್ಪ ಹೇಳುತ್ತಲೆ ಇದ್ದ.ಆದರೆ ನಾಗೇಶನಿಗೆ ಒಂದೇ ಸಮನೆ ಅವಳಿಗೆ ಆ ಶಕ್ತಿ ಬಂದಿದ್ದಾದರೂ ಹೇಗೆ ಎಂಬ ಯೋಚನೆಯ ಗುಂಗಿಹುಳು ಕೊರೆಯಲಾರಂಭಿಸಿತು.ಹಾಗಾದರೆ ಯೋಗಿತಾಳಿಗೆ ಆ ಶಕ್ತಿ ಹೇಗೆ ಬಂತು! ?.

ಯೋಗಿತಾಳ ತಂದೆ ರಾಮಣ್ಣನವರಿಗೆ  ಒಂದು ವಿಚಾರ ಸ್ಪಷ್ಟವಾಯಿತು.ಅದನೇಂದರೆ ಇಂದು ತಮ್ಮ ಮಗಳು ಸುರಕ್ಷಿತವಾಗಿ ಬಂದಿರುವುದಕ್ಕೆ ಕಾರಣ ಅವರ ತಂದೆಯೆಂದು.

   ರಾಮಣ್ಣನವರ  ಮನೆತನಕ್ಕೆ ಒಂದು ಒಳ್ಳೆಯ ಇತಿಹಾಸ ಇತ್ತು. ಅವರ ಮನೆತನದಲ್ಲಿ ಪೂರ್ವಿಕರು ನಾಟಿವೈದ್ಯರಾಗಿದ್ದರು. ಶ್ರೀದೇವಿಯ ಪರಮಭಕ್ತರು ,ಆರಾಧಕರಾಗಿದ್ದರು. ಊರಿನ ಜನಕ್ಕೆ  ಯಾವುದೇ ಖಾಯಲೆ ಇರಲಿ ಇವರ ಮನೆ ಮದ್ದಿನಿಂದ ನಿವಾರಣೆಯಾಗುತ್ತಿತ್ತು. ಅಲ್ಲದೆ ಗಾಳಿಶಕ,ದೋಷ, ಭೂತ ಭಯ ನಿವಾರಣೆಗೆ ತಾಯತ ಕಟ್ಟುತ್ತಿದ್ದರು.ಪೂಜೆಮಾಡಿ ಕೊಡುತ್ತಿದ್ದರು. ಅದರಲ್ಲೂ ರಾಮಣ್ಣ ಅವರ ತಂದೆ ನಾರಾಯಣಚಾರ್ಯರು ಪ್ರಸಿದ್ಧ ನಾಟಿವೈದ್ಯರು, ಜೋಯಿಸರು, ದೇವಿ ಆರಾಧಕರೆಂದು ಸುತ್ತಮುತ್ತಲ ಹಳ್ಳಿಗೆ ಪ್ರಸಿದ್ಧರಾಗಿದ್ದರು.  ಅವರಿಗೆ ತಮ್ಮ ಹಿರಿಯ ಮೊಮ್ಮಗಳ ಮೇಲೆ ತುಂಬಾ ಪ್ರೀತಿ ಮಮತೆ ಇತ್ತು.ಅವಳು ದೇವಿ ಕೃಪೆಯಿಂದ  ರಾಮಣ್ಣನವರಿಗೆ ಬಹಳ ದಿನಗಳ ಪೂಜೆಯ ನಂತರ ಬಹಳ ವರ್ಷದ ಮೇಲೆ ಹುಟ್ಟಿದ್ದಳು. ಹೀಗಾಗಿ ನಾರಾಯಣಾಚಾರ್ಯರು ಮೊಮ್ಮಗಳಿಗೆ ಬಾಲ್ಯದಿಂದಲೇ ದೇವಿಯ ಮಂತ್ರಗಳನ್ನು ,ಪೂಜೆ ಮಾಡುವುದನ್ನು ಕಲಿಸಿಕೊಡುತ್ತಿದ್ದರು ನಾರಾಯಣಾಚಾರ್ಯರು. ಮೊಮ್ಮಗಳನ್ನು ಬಿಟ್ಟು ಸರಿಯುತ್ತಿದಿದ್ಧೆ ಇಲ್ಲ .ತಾವು ಮಾಡುವ ಎಲ್ಲಾ ಕೆಲಸವನ್ನು ಮೊಮ್ಮಗಳನ್ನು ಕರೆದುಕೊಂಡೇ ಮಾಡುತ್ತಿದ್ದರು. ಅವರು ಮಾಡುವ ಎಲ್ಲಾ ಕೆಲಸ ಕಾರ್ಯಗಳನ್ನು ಯೋಗಿತಾ ಬಾಲ್ಯದಿಂದಲೇ ಸೂಕ್ಷ್ಮವಾಗಿ ಗಮನಿಸುತ್ತಾ ಅವರನ್ನೇ ಅನುಕರಿಸುತ್ತಾ ಬೆಳೆದಳು. ಅವರ ಪೂಜಾಕಾರ್ಯದಲ್ಲಿ, ಗಿಡಮೂಲಿಕೆ ತಯಾರಿಕೆಯಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದಳು. ದಸರಾ ದಲ್ಲಂತೂ 10 ದಿನಗಳ ದೇವಿ ಪುರಾಣವನ್ನು ತುಂಬಾ ಶ್ರದ್ಧಾಭಕ್ತಿಯಿಂದ ನಾರಾಯಣಚಾರ್ಯ ಮಾಡುತ್ತಿದ್ದಾರೆ ಯೋಗಿತ ಸಹ ಅಷ್ಟೇ ಶ್ರದ್ದಾ.ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದಳು. ಅವರು ಹೇಳುವ ದೇವಿ ಪುರಾಣದ ಕಥೆಗಳನ್ನು ಕೇಳಿ ಕೇಳಿ ಅವಳಿಗೆ ಬಾಯಿ ಪಾಠವಾಗಿ ಬಿಟ್ಟಿದ್ದವು .ದೇವಿಯ ಎಲ್ಲ ಮಂತ್ರಗಳನ್ನು ಮತ್ತು ಹಾಡುಗಳನ್ನು ತುಂಬಾ ಚೆನ್ನಾಗಿ ಹೇಳುತ್ತಿದ್ದಳು. ಅಷ್ಟು ಸುಕೋಮಲ, ಮುಗ್ಧಳಾಗಿದ್ದರೂ ಅವಳಿಗೆ ಕೆಟ್ಟದನ್ನು ಕಂಡರೆ ಪ್ರತಿಭಟಿಸುವ ಧೈರ್ಯ ಶಕ್ತಿ ಸ್ಪೋಟ ಗೊಳ್ಳುತ್ತಿದ್ದದ್ದು ಆ ದೇವಿ ಮಹಿಮೆಯಿಂದಲೇ. ಅವಳ ಮೈಮನದಲ್ಲಿ ದೇವಿ ಆವರಿಸಿಕೊಂಡು ಬಿಡುತ್ತಿದ್ದಳು. ಇಂದು ಸಹ ಆದ ಘಟನೆಯಲ್ಲೂ  ಯೋಗಿತಾ ಎದುರಿಸಿದ್ದು ದೇವಿ ಮಹಿಮೆಯಿಂದಲೇ.ಅಂದು ರಾತ್ರಿ ಆದ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಅವಳ ಕುಟುಂಬದವರು ಮಲಗಿದರು.ಆ ರಾತ್ರಿ ಅವಳಿಗೆ ಸಿನಿಮಾದ ದೃಶ್ಯಗಳಂತೆ ಆದ ಘಟನೆಯ ಪ್ರತಿ ದೃಶ್ಯವೂ ಎಳೆಎಳೆಯಾಗಿ ಕಾಣಲಾರಂಭಿಸಿತು.ಅವಳಿಗೆ ತನ್ನ ಅದ್ಭುತ ಶಕ್ತಿಯನ್ನು ನೋಡಿ ಆನಂದಾಶ್ಚರ್ಯ ಮುಗಿಲು ಮುಟ್ಟಿತು. ಎಂದಿನಂತೆ ಮುಂಜಾನೆ ಕಾಲೇಜಿಗೆ ಕರೆಯಲು ಬಂದ ಗೆಳತಿ ಸುಜಾತ ಉದ್ವೇಗ ,ಗಾಬರಿಗಳಿಂaದ “ಕೇಳಿದೆಯಾ ಸುದ್ದಿ ಯೋಗಿತಾ, ನಮ್ಮನ್ನು ಚುಡಾಯಿಸುತ್ತಾ ಹಿಂದೆ ಮುಂದೆ ಸುತ್ತುತ್ತಿದ್ದ ನಾಗೇಶ್ ಮತ್ತು ಅವನ ಗೆಳೆಯರಿಗೆ ಎಂತಹ ಮಾರಣಾಂತಿಕ ಹಲ್ಲೆಯಾಗಿದೆ ಎಂದರೆ ಅವರು ಬದುಕುಳಿಯುವುದು ಕಷ್ಟ ಎನ್ನುತ್ತಿದ್ದಾರಂತೆ ವೈದ್ಯರು. ಊರಲ್ಲೆಲ್ಲ ಬರೆ ಅದೇ ಸುದ್ದಿ ಅದರದೆ ಮಾತು. ಹಾಳಾಗಿ ಹೋಗಲಿ ಆ ರಾಕ್ಷಸರು. ಅವರು ಉಪಟಳ ನಮಗೆ ಅಲ್ಲದೆ ಎಷ್ಟು ಹುಡುಗಿಯರಿಗೂ , ಮಹಿಳೆಯರಿಗೂ ಆಗಿತ್ತು. ಸತ್ತರೆ  ನಮ್ಮ ಊರಿನ ಕಂಟಕ ಅಳಿದು ಊರ ಜನತೆ  ನೆಮ್ಮದಿಯಿಂದ ಉಸಿರಾಡುವರು “.ಎಂದಳು. ಅದಕ್ಕೆ ಪ್ರತಿಯಾಗಿ ಯೋಗಿತಾ ಏನು ಅರಿಯದವಳಂತೆ ಒಂದು ಮುಗುಳ್ನಗೆಯನ್ನು ಹೊರಸೊಸಿದಳು. ತನ್ನಲ್ಲಿರುವ ವಿಶೇಷ ಶಕ್ತಿಯನ್ನು ತೀರ್ಥಯಾತ್ರೆಗೆ ಹೋಗಿರುವ ತನ್ನ ಅಜ್ಜನಿಗೆ ಬಂದ ತಕ್ಷಣ ತಿಳಿಸಬೇಕೆಂದು ಹಾಗೂ ತನಗಲ್ಲದೆ ಯಾವುದೇ ಹೆಣ್ಣುಮಕ್ಕಳಿಗೂ ಅನ್ಯಾಯವಾದರೂ ತನ್ನ ಅಂತಃ ಶಕ್ತಿಯಿಂದ ಅರಿತು ಅನ್ಯಾಯ ಮಾಡುವ ಗಂಡಸರಿಗೆ ಇದೇ ಶಿಕ್ಷೆ ನೀಡಬೇಕೆಂದು ನಿರ್ಧರಿಸಿದಳು ಯೋಗಿತಾ.ನಿಜವಾಗಿ ಅವಳ ಇಚ್ಛೆಯಂತೆ  ಅವಳ ಊರಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ಅತ್ಯಾಚಾರಗಳು ನಡೆದ ಸುದ್ದಿ ಬರಲೇ ಇಲ್ಲ. ಹೆಣ್ಣುಮಕ್ಕಳಿಗೆ ಅನ್ಯಾಯ ಅತ್ಯಾಚಾರ ಮಾಡುವ  ಮಾಡಬೇಕೆಂದವರ ಗಂಡಸರಿಗೆ ಒಂದು ಅವ್ಯಕ್ತ ಭಯ ಮನೆಮಾಡಿತ್ತು. ನಾಗೇಶನ ತಂಡದಿಂದ ಅವರಂಥವರಿಗೆ ನಿಜಸಂಗತಿ  ತಲುಪಿತ್ತು.ಅಪ್ಪಿತಪ್ಪಿ ತಪ್ಪು ಮಾಡಿದವರಿಗೆ ನಾಗೇಶನಿಗಾದ ಗತಿಯೇ ಆಗುತ್ತಿತ್ತು. ಅವರು ಮುಂದೆ ತಪ್ಪು ಮಾಡುವದಿರಲಿ ಹೆಣ್ಣುಮಕ್ಕಳ ಸುದ್ದಿಗೆ ಅವರ ಸಮೀಪಕ್ಕೆ ಹೋಗುತ್ತಿರಲಿಲ್ಲ.ವಿಚಿತ್ರವೆಂದರೆ ಮುಂದೆಯೂ ಯೋಗಿತಾಳಿಂದಲೇ ತಮಗೆಲ್ಲ ರಕ್ಷಣೆ ಆಗುತ್ತಿರುವುದು ಯಾವ ಮಹಿಳೆಯರಿಗೂ ಗೊತ್ತಾಗಲಿಲ್ಲ. ಆದರೆ   ಆ  ಊರ ಜನ ಆ ನಿಗೂಢ ಶಕ್ತಿಗೆ ನಾರಾಯಣಾಚಾರ್ಯರ ಸಲಹೆಯಂತೆ ದಿನನಿತ್ಯ ಪೂಜೆ ಸಲ್ಲಿಸುತ್ತಾ ನಿರಾಳದಿಂದ ನಿರಾಂತಕವಾಗಿ ಇರಲಾರಂಭಿಸಿದರು.a


Leave a Reply

Back To Top