ಪುಸ್ತಕ ಸಂಗಾತಿ
ಎದೆನೆಲದ ಕಾವು
ಡಾ. ರತ್ನಾಕರ ಸಿ. ಕುನಗೋಡು
ಲೇಖಕರು- ಡಾ. ರತ್ನಾಕರ ಸಿ. ಕುನಗೋಡು
ಪ್ರಕಾಶಕರು- ಕಾಳಿಂಗ ಪ್ರಕಾಶನ
ಬೆಲೆ- 150
ಪುಸ್ತಕಕ್ಕಾಗಿ- 9449951746
ಡಾ. ರತ್ನಾಕರ ಸಿ. ಕುನಗೋಡು ಮೂಲತಃ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಎರೆಕೊಪ್ಪದವರು. ಪ್ರಸ್ತುತ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಿಪ್ಪನ್ ಪೇಟೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಂಶೋಧನಾ ಮಹಾ ಪ್ರಬಂಧ ‘ಬೇರು ಬಿಳಲು’ ಈಗಾಗಲೇ ಪ್ರಕಟವಾಗಿದೆ.
ಈಗ ನಾನು ಪರಿಚಯಿಸಲು ಹೊರಟಿರುವ ಅವರ ಕವನ ಸಂಕಲನ “ಎದೆನೆಲದ ಕಾವು” ಹಸ್ತಪ್ರತಿ ೨೦೨೨ನೇ ಸಾಲಿನ ಕಡೆಂಗೋಡ್ಲು ಕಾವ್ಯಪ್ರಶಸ್ತಿಯನ್ನ ಮುಡಿಗೇರಿಸಿಕೊಂಡು ತನ್ನ ಹಿರಿಮೆಯ ಗರಿಯನ್ನ ನಾಡಿನಾದ್ಯಂತ ಸಾರಿದೆ. ಇವರ ಕವಿತೆಗಳೇ ಹಾಗೆ, ವಿಭಿನ್ನ ರೀತಿಯ ಒಳತೋಟಿಗಳನ್ನ ಹೊಂದಿ ಸಾಮಾನ್ಯ ವಿಷಯವನ್ನ ಹೊಸ ಚಿಂತನೆಗಳೊಂದಿಗೆ ಮುಖಾಮುಖಿಯಾಗಿಸುತ್ತವೆ. ಇಲ್ಲಿಯ ಕವಿತೆಗಳು ಯಾವ ಒಂದು ವಲಯ, ದೃಷ್ಟಿಕೋನಕ್ಕೆ ಅಂಟಿಕೊಳ್ಳದೆ ಮಲೆನಾಡಿನ ಮಣ್ಣಿನ ಘಮದಿಂದ ಕೈಲಾಸದವರೆಗೂ ಚಾಚಿಕೊಂಡಿವೆ. ಒಲವು, ಸಮಾನತೆ, ದಲಿತ, ಪುರುಷ ಪ್ರಧಾನತೆ, ಹೆಣ್ಣಿನ ಒಳತುಡಿತ ಎಲ್ಲವನ್ನೂ ಅವರ ಕವಿತೆಗಳ ಕಟ್ಟಿನೊಳಗೆ ಪೇರಿಸಿದ್ದಾರೆ.
ಕವಿಯ ಕಾವ್ಯಕುಸುರಿ ಯಾಕೆ ಎಲ್ಲರನ್ನೂ ಹೀಗೆ ಆಯಸ್ಕಾಂತದಂತೆ ಸೆಳೆಯುತ್ತದೆ ಎಂದರೆ ಅವರು ಕಟ್ಟಿಕೊಡುವ ರೀತಿಗಳಿಂದ. ನಮಗೆಲ್ಲ ರಾವಣ ಒಬ್ಬ ಖಳನಾಯಕ ಅಷ್ಟೇ!, ನಮ್ಮೆಲ್ಲರ ಮನದಲ್ಲಿ ರಾಮ ಮಾತ್ರ ಹೀರೋ ಆಗಿ ಉಳಿಯುತ್ತಾನೆ. ಆದರ್ಶ ಪುರುಷನಾಗಿ ಕಾಣುತ್ತಾನೆ. ಆದರೆ ರಾವಣನ ಒಳಮನವ ಕಂಡವರಾರು, ಇಲ್ಲಿ ‘ಸ್ವಗತ-ಸ್ವಾಗತ’ ಪದ್ಯದ ಹಂದರದೊಳಗೆ ರಾವಣನನ್ನೂ ಒಬ್ಬ ಪ್ರೀತಿಯ ಪತಿಯಾಗಿ, ತಾಯಿಯ ಮಮತೆಯ ಮಗನಾಗಿ, ತಂಗಿಗೆ ಅಭಯದ ಅಣ್ಣನಾಗಿ, ಸುಖೀ ರಾಜ್ಯದ ರಾಜನಾಗಿ ಕಾಣುತ್ತಾನೆ. ಇದರಲ್ಲಿ ತಾಯಿಗಾಗಿ ತುಡಿದ ಒಂದೆರಡು ಸಾಲುಗಳು ಹೀಗಿವೆ.
ತಾಯಿಯ ಶಿವಪೂಜೆಗೆ ಭಂಗವಾದೊಡೆ
ಕೈಲಾಸವನೇ ಎತ್ತಿ
ತನ್ನೊಡಲನ್ನೇ ಹೊಸೆದು
ಬತ್ತೀಸರಾಗವನು ಮೀಟಿ
ಆತ್ಮಲಿಂಗವ ಪಡೆದ ಹಠಯೋಗಿ
ಹೆತ್ತವಳಿಚ್ಚೆಗೆ ಇವ ಯಾವ ತ್ಯಾಗಕ್ಕೂ ಸಿದ್ದ
ಅವ್ವನೆಂದರೆ ಅವನಿಗೆ ಪೂಜ್ಯ ಜೀವ…
ಒಂಚೂರು ನಮ್ಮ ಅವಧಾನವನ್ನು ಅತ್ತಿತ್ತಾಗಿಸದೆ ಓದಿಸಿಕೊಳ್ಳುವ ಕವಿತೆ ‘ಮಹಾಪರಿತ್ಯಾಗ’ ಕಥನ ಕವಿತೆಯಂತಿರುವ ಈ ಕವಿತೆಯ ಪಾತ್ರದೊಳಗೆ ನಮ್ಮನ್ನ ಮೀಯಿಸಿ ಆಳುತ್ತದೆ. ನಾವು ಅದರೊಳಗೆ ಲೀನರಾಗಿ ಆ ಹುಣ್ಣಿಮೆಯ ಚಿತ್ರಣದೊಳಗಿನ ಪಾತ್ರಗಳಾದ ಬುದ್ದನೋ, ಚನ್ನನೋ, ಯಶೋದೆಯೋ ಆಗಿ, ಎಲ್ಲ ಬಿಟ್ಟು ಹೊರಟವನ ಕೊನೇ ರಾತ್ರಿಯ ಮರುಕಳಿಸಿ ಕಣ್ಣಂಚಲಿ ಹನಿ ಪಸೆಯೊಡೆತ್ತವೆ. ಈ ಸಾಲುಗಳನ್ನ ಗಮನಿಸೋಣ ಬನ್ನಿ
ಜಗದೆದೆಯ ತೆರೆಸಲು
ತೊರೆಯುವುದು ಅನಿವಾರ್ಯ
ಬಿಟ್ಟೆದ್ದು ಹೊರಟವಗೆ ತೊಡರುಗಾಲೊಡ್ಡದಿರು
ಸದ್ದಾಗದಂತೆ ರಥವ ಸಿದ್ದಗೊಳಿಸು ಚನ್ನ
ಹೊತ್ತು ಮೂಡುವ ಮುನ್ನ
ಈ ಕಲಹದ ಕತ್ತಲೆ ದಾಟಬೇಕಿದೆ ನಾನು
ಪೂರ್ಣಿಮೆಯ ಹಾಲುದಿಂಗಳ ಬೆಳಕಿನಲಿ.
ಅಪ್ಪನ ಕುರಿತು ಎಲ್ಲರೂ ಕವಿತೆ ಬರೆಯುತ್ತಾರೆ, ಅಪ್ಪನನ್ನೇ ಕವಿತೆಯಾಗಿಸುವುದು ರತ್ನಾಕರ ಸರ್ ಅಂತವರಿಗೆ ಮಾತ್ರ ಸಾಧ್ಯ. ಅಪ್ಪ ಯಾವತ್ತೂ ಪದಕೆಟಕದ ಬರಹ, ಸೂರ್ಯನಂತೆ ಸುಟ್ಟು ಬೆಳಗುಣಿಸುವಾತ. ಸಹಜ, ಸುಂದರವಾಗಿ ತೀರಾ ಸಾಮಾನ್ಯವಾಗಿ ಬದುಕುಕಟ್ಟಿಕೊಡುವ ಆತ ಯಾವುದೇ ಪದವಿ, ಪುರಸ್ಕಾರ, ಪಟ್ಟ ಎನನ್ನೂ ಬಯಸದೆ ಅವನು ಎಲ್ಲವನ್ನೂ ಇದ್ದಲ್ಲಿಯೇ ಪಡೆದು ಸಾವನ್ನೂ ಕೂಡ ಸುಖವಾಗಿಯೇ ಬರಮಾಡಿಕೊಂಡ ಎನ್ನುವ ಭಾವ; ಕೇವಲ ಒಂದು ಬದುಕು, ಒಂದು ಪಾತ್ರ, ಒಂದು ಸಂಬಂಧವನ್ನು ಮಾತ್ರ ಹೇಳುವುದಿಲ್ಲ. ಇಲ್ಲೊಂದು ಅಮೂಲ್ಯತೆ, ಶಕ್ತಿ, ಹೋಲಿಸಲೇ ಆಗದ ದಿವ್ಯ ವ್ಯಕ್ತಿಯ ಕುರಿತಾಗಿನ ಸಾಲುಗಳನ್ನ ನಾವು ಕಾಣಬಹುದು. ಅದರ ಒಂದೆರಡು ತುಣುಕು ಕೆಳಗಿನಂತಿದೆ.
ಹಳ್ಳದಲ್ಲಿ ಈಜಿದ
ಹಕ್ಕಿಯೊಂದಿಗೆ ಹಾಡಿದ
ಕಾಡು-ನಾಡಿನ ನಡುವೆ ಕಾಲಾಡಿಸಿದ
ಅಕ್ಷರ ಕಲಿಯಲಿಲ್ಲ ಪದವಿ ಪಡೆಯಲಿಲ್ಲ
ಪದವನೊರೆಯುತ ಕತೆಯ ಕಣಜ ತುಂಬುತಾ
ತಾನೇ ದಂತಕಥನವಾದನಲ್ಲ.
ಅಕ್ಕಮಹಾದೇವಿ ಯಾರಿಗೆ ಗೊತ್ತಿಲ್ಲ ಹೇಳಿ?. ಅವಳ ಕುರಿತು ನಾವು ಎಷ್ಟೊಂದು ಬರಹ, ಕವಿತೆಗಳಲ್ಲಿ ಓದಿದ್ದೇವೆ. ಸ್ವತಃ ಅವಳದೇ ಸಾಹಿತ್ಯದ ಮೂಲಕ ಅವಳನ್ನ, ಸತ್ಯವನ್ನ ಕಂಡಿದ್ದೇವೆ. ಆದರೆ ಕವಿ ಅವಳೊಂದಿಗೆ ಮಾತಿಗಿಳಿಯುವ ಪರಿಯಿದೆಯಲ್ಲಾ ಅದು ಮಾಮೂಲಿಯಾಗಿಲ್ಲ. ಒಬ್ಬ ಆತ್ಮೀಯನಂತೆ ಅವಳೊಂದಿಗೆ ವಿಹಾರ ನಡೆಸುತ್ತಾ ತನ್ನೊಳಗಿನ ತುಡಿತಗಳನ್ನ ಒಂದಷ್ಟು ಬಿಚ್ಚಿಟ್ಟು, ಒಂದಷ್ಟು ಕೇಳಿಯೂ ಕೇಳದೆ ಅವಳನ್ನ ಬೀಳ್ಗೊಡುವಾಗ ಆ ಸನ್ನಿವೇಶ ಈಗ ತಾನೆ ನಡೆದಿರಬೇಕು ಅನ್ನಿಸುವಷ್ಟು ಆಪ್ತವಾಗಿ ಆವರಿಸಿಬಿಡುತ್ತದೆ. ಒಮ್ಮೆ ಓದಿದರೆ ಸಾಕು ಸದಾ ಹಸಿರಾಗಿರುವ ಈ ಕವಿತೆಯ ಸಾಲುಗಳನ್ನ ಕವಿ ಹೀಗೆ ಬರೆಯುತ್ತಾರೆ.
ಇನ್ನೊಮ್ಮೆ ಸಿಗೋಣವೆಂದು
ಬೆನ್ನುತಟ್ಟಿ ಮೇಲಕ್ಕೆದ್ದಳು
ನೆಲ ನೀರು ಬಾನು ಸಂಧಿಸುವ ದಿಕ್ಕಿನತ್ತ
ದಿಟ್ಟಿನೆಟ್ಟು ನಡೆಯತೊಡಗಿದಳು ಗಟ್ಟಿಗಿತ್ತಿ…
ಮಿಕ್ಕು ಮೀರಿ ಹೋಗುವವಳ
ಬೆಂಬತ್ತುವುದು ತರವಲ್ಲವೆಂದು
ತಿರುತಿರುಗಿ ನೋಡುತ್ತಾ ಮರಳಿದೆ
ಮರುಳನಂತೆ…
ಈ ಹೊತ್ತಿಗೆ ಕತನ ಕವಿತೆ, ಗದ್ಯ ಕವಿತೆಗಳನ್ನು ಮಾತ್ರ ಹೊಂದಿರದೆ ತತ್ವ ಪದ, ಗೀತೆಗಳನ್ನೂ ಹೂರಣವಾಗಿಸಿಕೊಂಡು ಓದುಗರಿಗೆ ಸಿಹಿ ಬಡಿಸಿದೆ. ಅದರಲ್ಲಿ ‘ ಅಂಗಳಕೆ ಬಂದಾನೊ ಚಂದೀರ’ ಕೂಡ ಒಂದು. ಅಪ್ಪಟ ದೇಸೀ ಸೊಗಡನ್ನು ಹೊತ್ತು ನಿಂತ ಕವಿತೆ ‘ ದೂರದೂರಿನ ನೆಂಟ’. ಇನ್ನು ಚರಿತ್ರೆ ನಮ್ಮನ್ನು ಕ್ಷಮಿಸುವುದಿಲ್ಲ ಕವಿತೆಯಲ್ಲಿ ನಮ್ಮ ಈ ಸುಖಕ್ಕಾಗಿ ಎಷ್ಟು ಜನ ಹೋರಾಡಿ, ಸತ್ಯ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮರೆಯಾದವರಿಗೆ ನಾವು ಎಸಗುತ್ತಿರುವ ಸ್ವಯಂ ಕೃತ ಅಪರಾಧಗಳು, ನಮ್ಮ ತನವನ್ನ ಕೊಂದು ಯಾರದೋ ಸುಳ್ಳು ವಂಚನೆಗಳೊಂದಿಗೆ ರಾಜಿಯಾಗಿ ಹೇಡಿಗಳಂತೆ ಬದುಕುವ ನಮ್ಮನ್ನ ಅವರು ಎಂದೂ ಕ್ಷಮಿಸಲಾರರು ಎಂದು ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.
‘ಕುಳಿತು ಓದುವುದೆಂದರೆ’ ಕವನದ ಶೀರ್ಷಿಕೆಯೇ ಎಷ್ಟೆಲ್ಲ ವಿಷಯವನ್ನ ಮೆಲುಕುಗೊಳಿಸುತ್ತದೆ ಅಲ್ಲವೇ. ಹಾಗಾದರೆ ಕುಳಿತು ಓದುವುದೆಂದರೆ ಏನು?. ಕವಿ ಇಲ್ಲಿ ಓದುವುದನ್ನು ಸಂಬ್ರಮಿಸಿ, ಅನುಭವಿಸುವ ಬಗೆಯನ್ನ ಎಷ್ಟು ಚಂದವಾಗಿ ಹೇಳಿದ್ದಾರೆ ನೋಡಿ. ಕುಳಿತು ಓದುವುದೆಂದರೆ ಯಾಂತ್ರಿಕವಲ್ಲ. ಅದು ನಾವು ಕಳೆದು ಹೋಗುವ ಕಾಲ, ಅದೊಂದು ಚೇತನ, ಬರೆದವರಿಗೆ ಸಲ್ಲಿಸುವ ಗೌರವ, ಹೀಗೆ ಪ್ರತಿಸಾಲುಗಳನ್ನೂ ಜೀವಿಸುವ ಕವಿತೆಯ ಸಾಲುಗಳು ಹೀಗಿವೆ.
ಕುಳಿತು ಓದುವುದೆಂದರೆ
ಬಯಲ ಸುಂದರಿಗೆ
ಮುತ್ತಿಡುವ ಧ್ಯಾನ
ರಸ ಪ್ರಣಯದ ಪಯಣ
ಒಳ ಹೊರಗಿನ ಸಂಘರ್ಷ ಯಾನ
ಮೇವು ರಕ್ತವಾಗುವ ಸಂಚಯನ
ಹೀಗೆ ಹೊಸ ಹೊಸ ಹೊಳಹುಗಳ ಮೂಲಕ ಕಾಣಸಿಗುವ ಕವಿಯ ಸಾಲುಗಳು ಓದಿದಷ್ಟೂ ಇಂಗದ ದಾಹ. ಅವರ ಪ್ರೌಢ ಹೆಣಿಗೆಯ ಶೈಲಿ, ಅದ್ಬುತ ಪದ ಸಂಪತ್ತು. ಓದಿನ ಹರಿವು. ಅನೇಕ ಪ್ರಶ್ನೆಗಳನ್ನು ಪದ್ಯದಮೂಲಕ ಜನರಿಗೆ ತಲುಪಿಸಿ ಅನ್ಯಾಯದ ವಿರುದ್ದ ಮೆತ್ತಗೆ ಹೋರಾಡುವ ರೀತಿ ವಿಶಿಷ್ಠವಾಗಿದೆ. ‘ ಧ್ಯಾನಿಸು ಮನವೇ’, ‘ಬಾಹು-ಬಲಿ’, ‘ನೆಲದ ಹಾದಿ’, ‘ ನೀಳ್ದನಿ’, ‘ವಿಮೋಚನೆ’ ಹೀಗೆ ಅವರ ಕವಿತೆಗಳು ಓದಿದ ನಂತರವೂ ಗುನುಗಿಸಿ ಒಳಗೊಂದು ಸಂಚಲವನ್ನ ಮೂಡಿಸುತ್ತವೆ. ಮೊದಲೇ ಹೇಳಿದಹಾಗೆ ಪ್ರಕಟಣೆಗೂ ಮುನ್ನವೇ ತನ್ನ ಗಟ್ಟಿತನವನ್ನ ಸಾರಿದ ಕೃತಿಯ ಕುರಿತು ಹೇಳುವು ಕಷ್ಟಸಾಧ್ಯದ ಕೆಲಸ. ಇಂತಹ ಉತ್ತಮ ಸಂಕಲನಗಳು ಎಲ್ಲರ ಮನೆ ಮನವ ಸೇರಲಿ ಎಂದು ಆಶಿಸುವೆ.
ಡಾಲಿ ವಿಜಯ ಕುಮಾರ್.