ಅಂಕಣ ಸಂಗಾತಿ

ನೆನಪಿನದೋಣಿಯಲಿ

ನಂ ಸೋಮುಮಾವ

“ಅಮ್ಮ ಇಲ್ಲದಿದ್ದರೂ ಸೋದರಮಾವ ಇರಬೇಕಂತೆ” ನಿಜ ಈ ಮಾತು.  ಅಮ್ಮನ ಅಂತಃಕರಣಕ್ಕೆ ಸರಿಸಾಟಿಯಾಗಿ ಜೋಡಿಸಿಕೊಳ್ಳುವ ಅಮ್ಮನ ಕಣ್ಮಣಿಗಳಾದ ಅವಳ ಸೋದರರು ಅವಳ ಮಕ್ಕಳ ಪ್ರೀತಿ ಪಾತ್ರರಾಗದೆ ಇನ್ನೇನು?ನಮ್ಮಮ್ಮನಿಗೆ ಇಬ್ಬರು ಅಕ್ಕ  ಇಬ್ಬರು ತಂಗಿಯರು ಇಬ್ಬರು ಅಣ್ಣ ಹಾಗೂ ಒಬ್ಬ ತಮ್ಮ.

ಸತ್ಯ  ಅನ್ನೋ ಅಣ್ಣ ಅಮ್ಮನ ಮದುವೆಗೆ ಮುಂಚೆಯೇ ತೀರಿ ಹೋಗಿದ್ದರಂತೆ . ಅವರೊಡನಿನ ಅನುಭವವನ್ನು, ಇವರ ಗಂಡು ಬೀರಿತನಕ್ಕೆ ಸಾಥ್ ಕೊಡುತ್ತಿದ್ದ ವಹಿಸಿಕೊಳ್ಳುತ್ತಿದ್ದ ಅವರ ಬಗ್ಗೆ ಅಮ್ಮ ಸದಾ ಹೇಳುತ್ತಿದ್ದರು. ಹೇಳುತ್ತಾ ಹೇಳುತ್ತಾ ಅಳುವಿನ ಕೋಡಿಯು ಹರಿದಿರುತ್ತಿತ್ತು . ನಮ್ಮ ಕಣ್ಣುಗಳಲ್ಲೂ.   ಅಮ್ಮನ ಅಣ್ಣ ನಂಜುಂಡರಾವ್.  ಮನೆಯಲ್ಲಿ ಅಜ್ಜಿ ತಾತ ಮಿಕ್ಕೆಲ್ಲರೂ ಶಾಮಿ ಎನ್ನುತ್ತಿದ್ದರಿಂದ ನಮಗೆ ಅವರು ಶಾಮಿ ಮಾವ.  ಅಮ್ಮನಿಗಂತೂ ಅವರ ಕಂಡರೆ ತುಂಬಾ ಗೌರವ ಪ್ರೀತಿ ಆದರ. ಹೆಚ್ಚಿನ ಸಲಿಗೆ ಇರಲಿಲ್ಲ. ಸ್ವಲ್ಪ ಭಯ ತುಂಬಿದ ಭಾವ. ಹಾಗಾಗಿ ಅವರನ್ನು ಕಂಡರೆ ನಮಗೂ ಸಲಿಗೆ ಕಡಿಮೆ.  ಆದರೆ ಶಿರಸ್ತೇದಾರರಾಗಿ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದ ಅವರ ಮನೆಗೆ ಬೇಸಿಗೆ ರಜೆಯಲ್ಲಿ ಭೇಟಿ ಮಾತ್ರ  ನಮ್ಮದೇ ಓರಿಗೆಯ ಅವರ ಮಕ್ಕಳಂತೆಯೇ ನಮ್ಮನ್ನು ಕಂಡು ಪ್ರೀತಿಸುತ್ತಿದ್ದ ಹಿರಿಯ ಜೀವ ಅವರು.  ನಮ್ಮ ಉನ್ನತಿ ಕಂಡು ಹರಸಿ ಹಾರೈಸಿದವರು.  

ಅಮ್ಮನ ತಮ್ಮ ಅವರೇ ನಮ್ಮ ಪ್ರೀತಿಯ ಸೋಮು ಮಾವ ಸೋಮಶೇಖರ ರಾವ್.  ಅವರು ಎಸ್ ಬಿಐನಲ್ಲಿ ಮೈಸೂರಿನಲ್ಲೇ ಕೆಲಸದಲ್ಲಿದ್ದುದರಿಂದ ಬಳಕೆಯೂ ಹೆಚ್ಚು.  ಹುಟ್ಟಿದಾಗಿನಿಂದ ನಮ್ಮನ್ನು ಎತ್ತಿ ಆಡಿಸಿದ ಸೋಮು ಮಾವನೆಂದರೆ ನಾವು ಮೂವರು ಅಕ್ಕ ತಂಗಿಯರಿಗೂ ಸಲುಗೆ ಪ್ರೀತಿ .ಅವರು ಅಷ್ಟೇ ನಮಗೆ ತುಂಬು ಮಮತೆ ನೀಡಿದವರು.  ಅವರ ಮದುವೆಯಾದ ಮೇಲೆ ಅತ್ತೆಯೂ ಸಹ ಅದೇ ತರಹ ಪ್ರೀತಿ ತೋರಿಸಿದವರು. ನಮ್ಮ ಶಾಲೆಯ ಬಳಿಯೇ ಅವರ ಮನೆ  ಇದ್ದುದರಿಂದ  ಮಧ್ಯಾಹ್ನದ ಊಟ ಅವರ ಮನೆಯಲ್ಲೇ.  ಅದೇ ರೀತಿ ಎಷ್ಟೋ ವರ್ಷ ನಡೆಯಿತು . ನಮ್ಮ ಮಾವತುಂಬಾ ತಮಾಷೆ . ಅವರು ನಮ್ಮ ತಂದೆ ಸೇರಿದರಂತೂ ರಾತ್ರಿ ಹನ್ನೆರಡಾದರೂ ಹಾಸ್ಯ ಚಾಟಿಕೆ ನಿಲ್ಲುತ್ತಿರಲಿಲ್ಲ. ಹಾಗೇ ಗಳಿಗೆಗೊಮ್ಮೆ ಕಾಫಿ ಕುಡಿಯುವ ಚಟ ಭಾವ ಮತ್ತು ಮೈದುನರದು .ಚೌಕಭಾರ, ಪಗಡೆ ಕಡೆಗೆ ಇಸ್ಪೀಟಾಟ ನನಗೆ ಕಲಿಸಿದವರು ಸೋಮು ಮಾವಾನೇ.   ಜೀಟೀಆರ್ ನಲ್ಲಿ ಮಸಾಲೆದೋಸೆ ಕೊಡಿಸಲು ದುಂಬಾಲು ಬೀಳುತ್ತಿದ್ದುದು ಈ ಮಾವನಿಗೇನಾವುಗಳು.  ಸಿಟಿ ಬಸ್ಸ್ಟ್ಯಾಂಡ್ ಕಡೆ ಹೋದರೆ ಬ್ಯಾಂಕಿನ ಬಳಿಯ ಫಲಾಮೃತದಲ್ಲಿ ಫ್ರೂಟ್ ಸಾಲಡ್ ಕೊಡಿಸಿಯೇ ಕೊಡಿಸುತ್ತಿದ್ದರು.  ನಮ್ಮೆಲ್ಲರ ವಿದ್ಯಾಭ್ಯಾಸ ಪ್ರಗತಿಗಳಲ್ಲಿ ಅಪ್ಪ ಅಮ್ಮನಂತೆಯೇ ಖುಷಿಪಟ್ಟವರು ನಮ್ಮ ಮಾವ. ಈಗ ಇದು ನನ್ನ ಬರವಣಿಗೆಯನ್ನು ನೋಡಿ ಅದೆಷ್ಟು ಖುಷಿಪಡುತ್ತಿದ್ದರೋ ಏನೋ….. 

ಸೋಮು ಮಾವ ಅಂದ್ರೆ 1ಪ್ರಸಂಗ ನೆನಪಿಗೆ ಬರುತ್ತೆ

ಇದು ನಾನು ಐದು ಆರು ವರ್ಷದವಳಿದ್ದಾಗ ನಡೆದ ಘಟನೆ ನಮ್ಮ ಸೋದರಮಾವನ ಮದುವೆ ನಿಶ್ಚಯವಾಗಿತ್ತು ನಿಶ್ಚಿತಾರ್ಥ ಅಂತ ಏನೂ ಆಗಿರಲಿಲ್ಲ . ನಮ್ಮ ಅಜ್ಜಿ ಮನೆ ಚಿಂತಾಮಣಿಯಲ್ಲಿ ಇತ್ತು. ನಾವು ಮತ್ತು ಮಾವ ಮೈಸೂರಿನಲ್ಲಿ. ನಮ್ಮ ಭಾವಿ ಅತ್ತೆಯ ಮನೆ ಬೆಂಗಳೂರಲ್ಲಿ ಇತ್ತು. ಅತ್ತೆ ಮನೆಯಲ್ಲಿ ಏನೋ ಸಣ್ಣ ಸಮಾರಂಭ .ರಜೆಗೆ ಮಾವ ನನ್ನನ್ನು ಚಿಂತಾಮಣಿಗೆ ಕರೆದುಕೊಂಡು ಹೋಗುವ ಕಾರ್ಯಕ್ರಮವಿತ್ತು .on the way ನನ್ನನ್ನು ಕರೆದುಕೊಂಡು ಅತ್ತೆ ಮನೆಗೆ ಹೋಗಿ ಸಮಾರಂಭ ಊಟ ಎಲ್ಲ ಮುಗಿಸಿದೆವು. ಮೊದಲ ಬಾರಿ ಭೇಟಿ. ನನಗಂತೂ ಅತ್ತೆ ಇಷ್ಟ ಆದರು. ಅವರಿಗೂ ಅಷ್ಟೇ ಈಗಲೂ ನನ್ನನ್ನು ಕಂಡರೆ ತುಂಬಾ ಅಭಿಮಾನ. ಆದರೆ ಕಹಾನಿ ಮೆ ಟ್ವಿಸ್ಟ್ ಇರೋದು ಇಲ್ಲಿ .ನಮ್ಮ ಅಜ್ಜಿ ಸ್ವಲ್ಪ ಸ್ಟ್ರಿಕ್ಟ್. ನಮ್ಮ ಮಾವನಿಗೆ ಮದುವೆಗೆ ಮುಂಚೆ ಹುಡುಗಿಯ ಮನೆಗೆ ಹೋಗಬಾರದು ಎಂದು ತಾಕೀತು ಮಾಡಿದ್ದರಂತೆ. ಅವರಿಗೆ ತಿಳಿಯದ ಹಾಗೆ ಅವತ್ತು ಮಾವನ ಭೇಟಿ ನನ್ನ ಜತೆ. ದಾರಿಯಲ್ಲಿ ಹೋಗುವಾಗ ಅಜ್ಜಿಗೆ ಈ ವಿಷಯ ಹೇಳಬಾರದು ಅಂತ ತಲೆಗೆ ತುಂಬಿದ್ದರು ಮಾವ .ನಾನೂ ತಲೆ ಆಡಿಸಿದ್ದೆ. ಒಂದೆರಡು ದಿನ ಹಾಗೆಯೇ ಕಳೆಯಿತು. ಇನ್ನೊಂದು ದಿನ ಚಿಕ್ಕಮ್ಮ ಮತ್ತು ಅಜ್ಜಿ ಅತ್ತೆ ವಿಷಯ ಮಾತನಾಡುತ್ತಾ ಮಾಡುವಾಗ ವಾಚಾಳಿ ನಾನು ಬಾಯಿ ಹಾಕಬೇಕೇ “ಅತ್ತೆ ಬೆಳ್ಳಗೆ ಚೆನ್ನಾಗಿದ್ದಾರೆ .ಉದ್ದ ಮೂಗು. ಜಡೆಯಂತೂ ಎಷ್ಟು ಚೆನ್ನಾಗಿದೆ ಅಲ್ವಾ” ಅಂತ .ಸರಿ! ಆಮೇಲೆ ಕೋರ್ಟ್ ಮಾರ್ಷಲ್ . ನನಗೂ ನನ್ನ ಜೊತೆ ಮಾವನಿಗೂ ಪಾಪ. ಅಜ್ಜಿಯ ವಟವಟ ಮುಂದುವರಿದೇ ಇತ್ತು.  ತಾತ ಬಂದು “ಹೋಗಲಿ ಬಿಡೆ. ಹುಡುಗು ವಯಸ್ಸು ನೋಡೋ ಆಸೆ ಮಾತಾಡೋ ಆಸೆ. ಹೋಗಿದ್ದಾನೆ. ಅದಕ್ಕ್ಯಾಕೆ ಹೀಗೆ ಆಡ್ತೀಯಾ” ಅಂತ ಅನ್ನೋ ತನಕ.ಕಡೆಯವರೆಗೂ ಮಾವ ನನ್ನ ರೇಗಿಸ್ತಾನೇ ಇದ್ದರು. “ಯಾವ ಗುಟ್ಟಿನ ವಿಷಯವನ್ನು ಇವಳಿಗೆ ಹೇಳಬೇಡಿ. ಇವಳ ಬಾಯಲ್ಲಿ ಗುಟ್ಟು ನಿಲ್ಲಲ್ಲ” ಅಂತ. ಇದನ್ನ ಅತ್ತೆ ಓದಿದರೆ ಅವರ ತುಟಿಯಂಚಲಿ ನಗು ತುಳುಕದೆ ಇರಲ್ಲ. ಆದ್ರೂ ಈ ವಿಷಯ ಇಷ್ಟು ದಿನ ಯಾರಿಗೂ ಹೇಳಿರಲಿಲ್ಲ ಕಣ್ರೀ ಗ್ರೇಟ್ ಅಲ್ವಾ ನಾನು ?

ಈಗ ಅಮ್ಮನೂ ಇಲ್ಲಾ ಮಾವಂದಿರೂ  ಇಲ್ಲ . ಚಿಕ್ಕ ಅತ್ತೆ ಮಾತ್ರ ಇದ್ದಾರೆ ನಮ್ಮನ್ನು ಕಂಡರೆ ಈಗಲೂ ಅದೇ ಅವ್ಯಾಜ ಅಂತಕರಣ ಇಬ್ಬರು ಮಾವಂದಿರ ಎಲ್ಲ ಮಕ್ಕಳೂ ನಮ್ಮ ಜತೆ ಪ್ರೀತಿ ವಿಶ್ವಾಸದಿಂದಿದಾರೆ ಸುಖ ಸಂಕಟಗಳಲ್ಲಿ ಜತೆ ಕೊಡುತ್ತಾರೆ ಇಷ್ಟು ಸಾಕಲ್ಲವೇ ಮಮತೆಯ ಹಣತೆಗೆ ತೈಲವೆರೆಯಲು?


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು

One thought on “

  1. ತುಂಬಾ ಧನ್ಯವಾದಗಳು ಸಂಪಾದಕರಿಗೆ

    ಸುಜಾತಾ ರವೀಶ್

Leave a Reply

Back To Top