ಕಥಾ ಸಂಗಾತಿ
ಅವಸ್ಥೆ
ಅರುಣಾ ರಾವ್
ಮೆಜೆಸ್ಟಿಕ್ಕಿನ ಕೆಂಪೇಗೌಡ ರಸ್ತೆಯಲ್ಲಿ ಬಿರಬಿರನರ ಹೆಜ್ಜೆ ಹಾಕುತ್ತಿದ್ದಳು ದಿಶಾ. ಈಗಾಗಲೇ ರಾತ್ರೀ ಎಂಟೂವರೆ. ಎಷ್ಟು ಬೇಗಬೇಗ ಹೆಜ್ಜೆ ಹಾಕಿದರೂ ಇಲ್ಲಿಂದ ಕೆಂಪೇಗೌಡ ಬಸ್ ನಿಲ್ಧಾಣಕ್ಕೆ ಕನಿಷ್ಟ ಪಕ್ಷ ಇಪ್ಪತ್ತು ನಿಮಿಷಗಳಾದರೂ ಬೇಕು ಎಂದು ಅನುಭವದಿಂದ ಅರಿತಿದ್ದಳು. ರಸ್ತೆಯ ಇಕ್ಕೆಲಗಳಲ್ಲಿ ಮಾರುತ್ತಿದ್ದ ವಸ್ತುಗಳನ್ನು ಗಮನಿಸುವ ಸ್ಥಿತಿಯಲ್ಲಿ ಅವಳಿರಲಿಲ್ಲ. ಬಿ.ಎ ಪಾಸು ಮಾಡಿ ಯಾವುದೋ ಒಂದು ಖಾಸಗಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸಕ್ಕೆ ಸೇರಿದ್ದ ಅವಳಿಗೆ, ಎಕನಾಮಿಕ್ಸ್ನಲ್ಲಿ ಎಂ.ಎ ಮಾಡಬೇಕೆಂಬ ಆಸೆ. ಅದಕ್ಕಾಗಿಯೇ ಕರೆಸ್ಪಾಂಡೆನ್ನಲ್ಲಿ ಎಂ.ಎಗೆ ಕಟ್ಟಿದ್ದಳು. ಸದಾಶಿವ ನಗರದಲ್ಲಿದ್ದ ಶಾಲೆ ನಾಲ್ಕು ಗಂಟೆಗೆ ಮುಗಿಯುತ್ತಿದ್ದಂತೆ ಬಿಎಂಟಿಸಿಯನ್ನೇರಿ ಮೆಜೆಸ್ಟಿಕ್ಕನ್ನು ತಲುಪಿ, ಅಲ್ಲಿಂದ ನಡೆದುಕೊಂಡು ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಸೆಂಟ್ರಲ್ ಕಾಲೇಜಿನ ಲೆಕ್ಚರ್ ಹಾಲ್ ತಲುಪುತ್ತಿದ್ದಳು. ಹೆಚ್ಚು ಮಾತುಗಾತಿಯಲ್ಲದ ಅವಳಿಗೆ ಗೆಳೆಯರಾರೂ ಇರಲಿಲ್ಲ. ಲೆಕ್ಚರರ್ ಬರುವವರೆಗೆ ಅಲ್ಲಿರುವ ವಿದ್ಯಾರ್ಥಿಗಳು ಗುಂಪುಕಟ್ಟಿಕೊಂಡು ಹರಟುತ್ತಾ ಮಧ್ಯೇ ಮಧ್ಯೇ ಜೋರಾಗಿ ನಗುತ್ತಿರುವುದನ್ನು ಕೇಳುತ್ತಾ ಹತ್ತು ಹದಿನೈದು ನಿಮಿಷ ಕುಳಿತುಕೊಳ್ಳುವಷ್ಟರಲ್ಲಿ ಲೆಕ್ಚರರ್ ಬಂದು ತಮ್ಮ ಉಪನ್ಯಾಸವನ್ನು ಆರಂಭಿಸುತ್ತಿದ್ದರು. ಏಳು ಗಂಟೆಗೆ ಮತ್ತೊಬ್ಬರದು. ಸುಮಾರು ಎಂಟು ಗಂಟೆಗೆ ತರಗತಿ ಮುಗಿಸಿಕೊಂಡು ಅಲ್ಲಿಂದ ಹೊರಟು, ಮೆಜಸ್ಟಿಕ್ಕಿನಲ್ಲಿ ನರಸಿಂಹರಾಜ ಕಾಲೋನಿ ಬಸ್ಸುಗಳು ನಿಲ್ಲುವ ಫ್ಲಾಟ್ಫಾರ್ಮಗೆ ಬಂದು ಬಸ್ಸಿಡಿದು ಮನೆ ತಲುಪುವಷ್ಟರಲ್ಲಿ ಹೆಚ್ಚು ಕಡಿಮೆ ಒಂಭತ್ತು ಗಂಟೆಯಾಗುತ್ತಿತ್ತು.
ಆ ದಿನದ ಲೆಕ್ಚರರ್ ಪಾಠ ಮಾಡುತ್ತಾ ಮಾಡುತ್ತಾ ಸಮಯದ ಪರಿವೆಯನ್ನೇ ಮರೆತಂತಿತ್ತು. ತರಗತಿಯಲ್ಲಿ ಕುಳಿತ ದಿಶಾ ನಿಮಿಷ ನಿಮಿಷಕ್ಕೂ ತನ್ನ ಕೈ ಗಡಿಯಾರವನ್ನು ನೋಡಿಕೊಳ್ಳುತ್ತಿದ್ದಳು. ಎಂಟೂ ಮುವ್ವತ್ತೈದರ ಸುಮಾರಿಗೆ ಅವರು ತಮ್ಮ ಉಪನ್ಯಾಸ ಮುಗಿಸಿ, “ಥ್ಯಾಂಕ್ಯೂ ಮೈ ಡಿಯರ್ ಸ್ಟೂಡೆಂಟ್” ಎಂದು ಹೇಳಿ ಬಾಗಿಲಿನಿಂದ ಹೊರಬಿದ್ದದ್ದೇ ತಡ, ಇವಳು ಅಲ್ಲಿಂದ ಹೊರಬಿದ್ದು ನಡೆಯತೊಡಗಿದಳು. ಫುಟ್ ಪಾತಿನಲ್ಲಿ ತಲೆತಗ್ಗಿಸಿ ನಡೆಯುತ್ತಿದ್ದವಳಿಗೆ ಎದುರಿನಿಂದ ವ್ಯಕ್ತಿಯೊಬ್ಬ ಜೋರಾಗಿ ಡಿಕ್ಕಿ ಹೊಡೆದನು. ಹೊಡೆದಾಗ ಅವನ ಕೈ ಅವಳ ಎದೆಯನ್ನು ಬಲವಾಗಿ ಒತ್ತಿತು. ಕ್ಷಣ ಆಘಾತವಾದರೂ ಸಾವರಿಸಿಕೊಂಡು ಅವನ ಕಡೆಗೆ ಕ್ರೂರವಾಗಿ ನೋಡಿದಳು. ಸುಖವಾದ ಅನುಭೂತಿ ಪಡೆದವನಂತೆ ಗೆಲುವಿನ ನಗೆಯನ್ನು ಬೀರುತ್ತಿದ್ದ ಮಧ್ಯ ವಯಸ್ಸಿನ ಆ ಗಂಡಸನ್ನು ನೋಡಿ ಅವಳಿಗೆ ಹೆದರಿಕೆಯಾಯಿತು. ಮತ್ತೆ ಅವನೆಡೆಗೆ ತಿರುಗಿ ನೋಡದೆ ತನ್ನ ನಡಿಗೆಯ ವೇಗವನ್ನು ಹೆಚ್ಚಿಸಿದಳು. ಅಲಂಕಾರ್ ಪ್ಲಾಸಾದ ಮುಂದೆ ಹಾಸಿ, ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಸೇರುವಷ್ಟರಲ್ಲಿ ತಾನು ಪ್ರತಿದಿನ ಹೋಗುತ್ತಿದ್ದ ಬಸ್ ಹೊರಟು ಹೋಗಿ ಸುಮಾರು ಸಮಯವಾಗಿತ್ತು. ಮತ್ತೊಂದು ಬಸ್ಸಿಗಾಗಿ ಜನ ಕಿಕ್ಕಿರಿದು ನೆರೆದಿದ್ದರು. ಗಂಡಸರೇ ಹೆಚ್ಚಾಗಿದರೂ ಅಲ್ಲಿ ಇಬ್ಬರು ಹೆಂಗಸರು ನಿಂತಿರುವುದನ್ನು ಗಮನಿಸಿ, ತಾನೂ ಅವರ ಬಳಿಗೆ ಹೋಗಿ ನಿಂತು ಕೊಂಡಳು. ಬಸ್ ಸ್ಟಾಂಡನ್ನು ಸೇರುವ ಆತುರದಲ್ಲಿದ್ದ ಅವಳಿಗೆ ಆ ದಾಂಡಿಗ ಅಮುಕಿದ ಎದೆ ನೋವಾಗುತ್ತಿದ್ದದ್ದು ಗಮನಕ್ಕೆ ಬಂದಿತು. ಅದರ ಜೊತೆಜೊತೆಗೆ ಅವನ ದೃಷ್ಟಿಯೂ ನೆನಪಾಗಿ ಅಸಹ್ಯದಿಂದ ಮುಖ ಕಿವುಚಿದಳು.
ನಿಂತು ಐದಾರು ನಿಮಿಷಗಳಲ್ಲೇ ತನ್ನನ್ನು ಯಾರೋ ಗಮನಿಸುತ್ತಿರುವಂತೆ ಭಾಸವಾಗಿ ಒಮ್ಮೆ ಸುತ್ತುಲೂ ಕಣ್ಣಾಡಿಸಿದಾಗ ಅವಳಿಂದ ಕೆಲವು ಹೆಜ್ಜೆಗಳ ಅಂತರದಲ್ಲಿ ಮತ್ತದೇ ವ್ಯಕ್ತಿ, ತನ್ನನ್ನೇ ನುಂಗುವಂತೆ ನೋಡುತ್ತಿದ್ದಾನೆ. ಮತ್ತೆ ಅವನೆಡೆಗೆ ತಿರುಗಿ ನೋಡುವ ಸಾಹಸಕ್ಕೆ ಕೈ ಹಾಕದೆ, ಬಸ್ ಬೇಗ ಬಂದರೆ ಸಾಕೆಂದು ಮನದಲ್ಲೇ ದೇವರಿಗೆ ಕೈ ಮುಗಿದಳು. ಅಲ್ಲಿ ನಿಂತಿದ್ದ ಪ್ರತಿ ಕ್ಷಣ ದಿನನಿತ್ಯ ನ್ಯೂಸ್ ಪೇಪರ್ರಿನಲ್ಲಿ ಓದುತ್ತಿದ್ದ ಅತ್ಯಾಚಾರ ಪ್ರಕರಣಗಳೆಲ್ಲ ನೆನಪಾಗಿ ಮತ್ತಷ್ಟು ಹೆದರಿಕೆಯಾಯಿತು. ಮನೆಗೆ ಫೋನ್ ಮಾಡೋಣವೆಂದು ಮೊಬೈಲ್ ಹೊರತೆಗೆದರೆ ಚಾರ್ಜಿಲ್ಲದೆ ಅದು ನಿಸ್ತೇಜವಾಗಿತ್ತು. ಅಷ್ಟರಲ್ಲಿ ಬಸ್ ಬಂದು ಆ ನೂಕು ನುಗ್ಗಲಿನಲ್ಲಿ ಹತ್ತಿ ಸೀಟು ದೊರಕದೆ, ಡೈವರ್ನ ಹಿಂಭಾಗದ ಕಂಬಿಯನ್ನಿಡಿದು ನಿಂತಳು. ಅವನೇನಾದರೂ ಹತ್ತಿದನೇ! ಎಂದು ನೋಡಬೇಕೆನಿಸಿದರೂ ಮತ್ತೊಮ್ಮೆ ಅವನನ್ನು ನೋಡಲು ಹೆದರಿ, ತನ್ನ ಪ್ರಯತ್ನಕ್ಕೆ ಕಡಿವಾಣ ಹಾಕಿದಳು. ಬಸ್ ನರಸಿಂಹ ರಾಜ ಕಾಲೋನಿಯ ಬಸ್ ನಿಲ್ದಾಣವನ್ನು ತಲುಪಿದಾಗ ಸುಮಾರು ಹತ್ತು ಗಂಟೆ. ದಿಶಾ ಬಸ್ಸಿನಿಂದಿಳಿದು ಮನೆಯ ಕಡೆಗೆ ಹೋಗೋಣವೆನ್ನುವಷ್ಟರಲ್ಲಿ ಮತ್ತದೇ ಮುಖ ಅಲ್ಲಿಯೂ ಪ್ರತ್ಯಕ್ಷವಾಗುವುದೇ? ಸಣ್ಣದಾಗಿ ನಡುಕ ಪ್ರಾರಂಭವಾಗಿ ತನ್ನ ನಡಿಗೆಯ ಬೇಗವನ್ನು ಹೆಚ್ಚಿಸಿದಳು.
“ದಿಶಾ, ದಿಶಾ ನಿಂತುಕೋಮ್ಮ” ತನಗೆ ಚಿರಪರಿಚಿತವಾದ ದನಿ ಕೇಳಿ ಹಿಂತಿರುಗಿದಳು. ಸ್ವೆಟ್ಟರ್, ಮಫ್ಲರ್ಗಳನ್ನು ಧರಿಸಿದ್ದ ತಂದೆ ಅವಳ ಬಳಿಗೆ ಬರುತ್ತಾ, ನಿನ್ನ ಫೋನ್ ಏನಾಗಿದೆಯಮ್ಮ? ದಿನಾ ಒಂಭತ್ತು ಗಂಟೆಗೆ ಬರುತ್ತಿದ್ದವಳು ಇಷ್ಟು ಹೊತ್ತಾದರೂ ಬರದೇ ಇದ್ದುದ್ದು ಕಂಡು, ಫೋನ್ ಮಾಡೀ ಮಾಡೀ ಸಾಕಾಯಿತು. ಸ್ವಿಚ್ಡ್ ಆಫ್ ಅಂತ ಬರ್ತಾ ಇದೆ. ಅದಕ್ಕೆ ನಾನೇ ಬಸ್ ಸ್ಟ್ಯಾಂಡಿಗೆ ಬಂದೆ” ಎನ್ನುತ್ತಾ, ಅವಳ ಬಳಿಗೆ ಬಂದರು. ಇದೆಲ್ಲವನ್ನು ದೂರದಿಂದ ಗಮನಿಸುತ್ತಿದ್ದ ವ್ಯಕ್ತಿ ಕತ್ತಲಿನಲ್ಲಿ ಕಣ್ಮರೆಯಾದದನ್ನು ನೋಡಿದ ದಿಶಾ ನೆಮ್ಮದಿಯ ನಿಟ್ಟುಸಿರೊಂದನ್ನು ಚಲ್ಲಿ, ತಂದೆಯೊಡನೆ ಹೆಜ್ಜೆ ಹಾಕಿದಳು.
ಅರುಣಾ ರಾವ್
ಕಥೆ ತುಂಬಾ ಚನ್ನಾಗಿದೆ ದಿನ ನಿತ್ಯ ನಡೆಯುವ ಸಂಗತಿ ಇಂಥ ಅನುಭವ ಎಷ್ಟು ಹೆಣ್ಣು ಮಕ್ಕಳು ದಿನಕೆ ಅನುಭವಿಸುತ್ತಾರೋ ಈ ಕಥೆಯನ್ನು ಓದಿ ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವುದನ್ನು ನಿಲ್ಲಿಸಲಿ ಧನ್ಯವಾದಗಳು
ಹೌದು!! ಹಾಗಾದರೆ ಎಷ್ಟು ಚೆನ್ನ ಅಲ್ಲವೇ!!
Very nice story…wish to read more stories j
ಧನ್ಯವಾದ
ಸದ್ಯ, ಭರವಸೆಯ ನೆಮ್ಮದಿಯ ಅಂತ್ಯ ಮಾಡಿದ್ರಿ, ಮುಂದೆ ಏನು ಮಾಡುತ್ತಾನೋ ಅಂತ ಭಯ ನನಗೆ ಆವರಿಸಿ ಕುತೂಹಲದಿಂದ ಓದುತ್ತಿದ್ದೆ. ಮಗಳ ಕಾಯುವ ಕಾವಲುಗಾರ ಅಪ್ಪ – hero ಎಂಟ್ರಿ ಯಿಂದ ದಿಶಾ ಪಾರಾದಳು…
ಧನ್ಯವಾದ ಶ್ವೇತಾ… ಎಲ್ಲರ ಜೀವನದಲ್ಲಿಯೂ ಇಂಥ ಅನುಭವಗಳು ಆಗಿಯೇ ಇರುತ್ತದೆ. ಆಗ ನಮಗಮ ರಕ್ಷಕರಾಗುವುದು ನಮ್ಮ ಪೋಷಕರು ಮಾತ್ರವಲ್ಲವೇ!!!!
ತುಂಬಾ ತುಂಬಾ ಧನ್ಯವಾದಗಳು…. ವಿವರಣೆ ಚೆನ್ನಾಗಿದೆ…
ಧನ್ಯವಾದ ಸರ್