ಅಂಕಣ ಸಂಗಾತಿ

ಸಿನಿ ಸಂಗಾತಿ

ಅಮ್ಮಚ್ಚಿ ಎಂಬ ನೆನಪು”

Buy/Rent Ammachi Yemba Nenapu Movie Online in HD - BMS Stream

“ನಿನ್ನ ಯೌವ್ವನದ ದಿನಗಳಲ್ಲಿ ದೇಹದ ಹಸಿವು ಬಾಯಾರಿಕೆಗಳನ್ನು ಹೇಗೆ  ನಿಗ್ರಹಿಸಿದೆ!?” ಹೀಗೆ ಚಿತ್ರದ ವಯಸ್ಸಾದ  ವಿಧವೆ ಪಾತ್ರವನ್ನು ಮತ್ತೊಂದು ಸ್ತ್ರೀ ಪಾತ್ರ ಕೇಳುತ್ತದೆ. ನಡುವಯಸ್ಸಿನ ಹೆಣ್ಣುಮಗಳು ಮತ್ತೊಂದು ದೃಶ್ಯದಲ್ಲಿ “ಅಪ್ಪ ನನಗೂ ಮದುವೆ ಮಾಡು “”ಎಂದು ಕೇಳುತ್ತಾಳೆ. “ಆಗೋ ಅಲ್ಲಿ ಮರದ ಮೇಲೆ ನಿನ್ನ ಗಂಡ ಕುಳಿತಿದ್ದಾನೆ ಹೋಗು, ಕರಿ “ಎಂದು ಹೇಳುತ್ತಾನೆ ಆಕೆಯ ಅಣ್ಣ.

     ಇಂತಹ ಮನಕಲಕುವ ದೃಶ್ಯಗಳನ್ನು ಒಳಗೊಂಡ ಚಿತ್ರ “ಅಮ್ಮಚ್ಚಿ ಎಂಬ ನೆನಪು”

        ಖ್ಯಾತ ಲೇಖಕಿ ವೈದೇಹಿಯವರು ರಚಿಸಿರುವ ನಾಟಕ “ಅಕ್ಕು”ಹಾಗೂ ಅವರದೇ ಸಣ್ಣ ಕಥೆಗಳನ್ನು ಸೇರಿಸಿ ಚಿತ್ರವನ್ನಾಗಿಸಿದ್ದಾರೆ ಚಂಪಾ ಶೆಟ್ಟಿ,” ಅಮ್ಮಚ್ಚಿ ಎಂಬ ನೆನಪು ” ಸಿನಿಮಾವಾಗಿ.

     ಮೂರು ವಿಭಿನ್ನ ವಯೋಮಾನದ ಸ್ತ್ರೀ ಪಾತ್ರಗಳ ಹೋರಾಟದ ಚಿತ್ರಣ ಇಲ್ಲಿದೆ. ಬಾಲ್ಯದಲ್ಲಿ ಗಂಡನನ್ನು ಕಳೆದುಕೊಂಡು ವಿಧವೆಯಾಗಿ ಶೇಷಮ್ಮನವರ ಆಶ್ರಯದಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಾ ತನ್ನ ಬದುಕನ್ನು ಸಾಗಿಸುವ ಪುಟ್ಟಮ್ಮತ್ತೆಯ ಜೀವನದಲ್ಲಿ ಇರುವ  ಏಕೈಕ ಭರವಸೆ ಅವಳ ಮೊಮ್ಮಗಳು ಅಮ್ಮಚ್ಚಿ, ತನ್ನ ಬಡತನದಲ್ಲೇ ಒಳ್ಳೆ ಮನೆತನಕ್ಕೆ ಅಮ್ಮಚ್ಚಿಯನ್ನು ಸೇರಿಸಬೇಕೆಂಬ ಆಸೆ ಅವಳಿಗೆ.

       ಅಮ್ಮಚ್ಚಿ ಚಿತ್ರದ ನಾಯಕಿ. 16 -17ರ ಪ್ರಾಯದ ಬಾಲೆ, ಸ್ವತಂತ್ರ ಮನೋಭಾವದವಳು, ಹಕ್ಕಿಯಂತೆ ಹಾರಾಡುತ್ತಾ, ತನ್ನಿಚ್ಛೆಯಂತೆ ಬದುಕನ್ನು ರೂಪಿಸಿಕೊಳ್ಳಬೇಕೆಂಬ ನಿರೀಕ್ಷೆ ಉಳ್ಳವಳು..

  ಇವರಿಬ್ಬರ ಜೊತೆಗೆ “ಅಕ್ಕು “ಎಂಬ ಮಧ್ಯವಯಸ್ಸಿನ ಹೆಣ್ಣುಮಗಳು. ತಾನು ಮದುವೆಯಾದ ಉಡಾಫೆ ಗಂಡ ಕೈ ಕೊಟ್ಟು ಓಡಿದಾಗ ತಂದೆ ಮನೆ ಸೇರಿ ಮನೋವಿಕಲ್ಪಕ್ಕೆ ಒಳಗಾಗುತ್ತಾಳೆ, ತಾನು ಬಸುರಿ ಎಂಬ ಭ್ರಮೆ ಅವಳಿಗೆ, ಹುಚ್ಚು ಹಿಡಿದವಳಂತೆ, ಅಲೆದಾಡುವ ಅವಳನ್ನು ಹೊಡೆದು ಬಡೆದು ಕೋಣೆಯಲ್ಲಿ ಕೂಡಿ ಹಾಕುತ್ತಾರೆ ಅಣ್ಣಂದಿರು, ಸರಪಳಿಗಳ ನಡುವೆಯೇ ಅವಳ ಜೀವನ. ಹೀಗೆ ಈ ಮೂವರು ಹೆಣ್ಣು ಮಕ್ಕಳು ಪುರುಷರಿಂದ ಶೋಷಿತರಾದ ಪರಿಸ್ಥಿತಿಯ ಶಿಶುಗಳು.

       ಈ ಮೂರು ಪಾತ್ರಗಳ ಸುತ್ತ ಸುತ್ತುವ ಚಿತ್ರವು ಕಾಲಾಂತರಗಳಿಂದಲೂ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಅವಲಂಬನೆ, ಶೋಷಣೆಗಳನ್ನು ಸೂಚ್ಯವಾಗಿ ತೋರಿಸುತ್ತದೆ.

     ಬಾಲ್ಯ ವಿಧವೆ ಪುಟ್ಟಮ್ಮತ್ತೆ ಯ ಬದುಕಿನ ದುರಂತಗಳು ಅಡುಗೆ ಮನೆಯಲ್ಲಿ ಅವಳು ಸವೆಸುವ ದಿನಗಳು ಇವುಗಳ ಬವಣೆ  ಇಲ್ಲಿ ಚೆನ್ನಾಗಿ ಚಿತ್ರಿತವಾಗಿದೆ.

         ಅನಿರೀಕ್ಷಿತವಾಗಿ  ನಡೆಯುವ ಘಟನೆಯಿಂದ ಅಮ್ಮಚ್ಚಿ ತನ್ನ ಮೇಲೆ ಸದಾ ಅಧಿಕಾರ ಚಲಾಯಿಸಲು ಕಾಯುವ ವೆಂಕಪ್ಪಯ್ಯನನ್ನೇ ಮದುವೆಯಾಗಬೇಕಾದ ಪರಿಸ್ಥಿತಿ ಉಂಟಾಗುತ್ತದೆ.

      ಹುಚ್ಚು ಹಿಡಿದಂತೆ ಓಡಾಡುವ ಅಕ್ಕುವನ್ನು ಅವಳ ಗಂಡನೊಂದಿಗೆ ಬಲವಂತವಾಗಿ ವಾಪಸ್ಸು ಕಳುಹಿಸುವ ಯತ್ನ ನಡೆಯುತ್ತದೆ. ಆದರೆ ಅಕ್ಕು ಅದನ್ನು ಬಲವಾಗಿ ವಿರೋಧಿಸುತ್ತಾಳೆ.

      ಹೀಗೆ ಹೆಣ್ಣು ಮಕ್ಕಳ ದಾರುಣ ಸ್ಥಿತಿಯ ಅನಾವರಣ ಚಿತ್ರದುದ್ದಕ್ಕೂ ಆಗಿದೆ.

   ವೈದೇಹಿಯವರ ಸಣ್ಣ ಕಥೆಗಳನ್ನು ಹೆಣೆದು 2 ಗಂಟೆಯ ಚಿತ್ರವನ್ನಾಗಿಸುವ ಕಸುಬುಗಾರಿಕೆಯಲ್ಲಿ ನಿರ್ದೇಶಕಿ “ಚಂಪಾ ಶೆಟ್ಟಿ” ಯಶಸ್ವಿಯಾಗಿದ್ದಾರೆ. ಅವರ ರಂಗಭೂಮಿಯ ಹಿನ್ನೆಲೆ ಸ್ತ್ರೀ ಸಂವೇದನೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ಫಲಕಾರಿಯಾಗಿದೆ. ಚಿತ್ರದ ಸಿನಿಮೇಟೋಗ್ರಾಫಿ ನವೀನ್ ಕುಮಾರ ರವರಿಂದ ಅತ್ಯುತ್ತಮವಾಗಿದೆ. ಮಲೆನಾಡಿನ ಮನೆಗಳ ದೃಶ್ಯಗಳು ಸುಂದರ ಪರಿಸರ ಕ್ಯಾಮರಾದ ಚಲನೆಗಳು ಬಹಳ ಪರಿಣಾಮಕಾರಿಯಾಗಿದ್ದು ಬಹಳ ಸಹಜವಾಗಿದ್ದು ಎಲ್ಲಾ ಪಾತ್ರಗಳು ನಮ್ಮ ಕಣ್ಣು ಮುಂದೆ ಇರುವಂತೆ ಭಾಸವಾಗುತ್ತವೆ.

         ವೈದೇಹಿಯವರು ರಚಿಸಿರುವ “ಹೊಳೆವ ಹೊಳೆಯಾಚೆಗೆ”, “ಸರಪಳಿಗಳ ನಡುವೆ” ಗೀತೆಗಳು ಕಾಶಿನಾಥ್ ಪತ್ತಾರ್ ಅವರ ಸಂಗೀತ ನಿರ್ದೇಶನದಲ್ಲಿ ಮತ್ತೆ ಮತ್ತೆ ಕೇಳುವಂತಿವೆ, ಚಿತ್ರದ ಕಥೆಗೆ ಪೂರಕವಾಗಿವೆ.

80 -90 ರ ದಶಕದಲ್ಲಿ ಕಡಲ ತೀರದ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ನಡೆಯುವ ಕಥೆ ಇದಾಗಿದೆ. ಚಿತ್ರದಲ್ಲಿ ಕುಂದಾಪುರದ ಕನ್ನಡದ ಬಳಕೆಯಾಗಿದೆ. ಚಿಣ್ಣಿ  ಮಣೆ ಆಟ, ಬೀಸುವ ಕಲ್ಲು, ತಾಮ್ರದ ಪರಿಕರಗಳು ಮಲೆನಾಡಿನ ಮನೆಗಳನ್ನು ನೆನಪಿಸುತ್ತವೆ. ಕೊಟ್ಟೆ ಕಡುಬು ಕಟ್ಟುವುದು ದೀಪಾವಳಿ ಹಬ್ಬದ ಆಚರಣೆ ಭಜನೆಗಳು ಮಲೆನಾಡಿನ ಆಚರಣೆಗಳ ಪರಿಚಯ ಮಾಡಿಸುತ್ತದೆ.

          ಕಲಾತ್ಮಕ ಅಂಶಗಳನ್ನು ಹೊಂದಿದ್ದು ಕಮರ್ಷಿಯಲ್ ಚಿತ್ರಗಳ ಸಾಲಿಗೆ ಚಿತ್ರವನ್ನು ಸೇರಿಸಲು ಸಾಧ್ಯವಿಲ್ಲ. ಹೆಣ್ಮನಗಳ ತಲ್ಲಣಗಳು, ಗೋಳಾಟವೇ ಚಿತ್ರದ ಜೀವ ನಾಡಿಯಾ ಗಿದ್ದು ಚಿತ್ರವನ್ನು ಅತಿ ಸೂಕ್ಷ್ಮ ಸಂವೇದನೆಯ ಚಿತ್ರಗಳಸಾಲಿಗೆ ಸೇರಿಸುತ್ತದೆ.

       ಅಮ್ಮಚ್ಚಿ ಪಾತ್ರದಲ್ಲಿ ವೈಜಯಂತಿ ಅಡಿಗ , ಅಕ್ಕುವಿನ ಪಾತ್ರದಲ್ಲಿ ದೀಪಿಕಾ ಆರಾಧ್ಯ ಪುಟ್ಟಮ್ಮತ್ತೆಯ ಪಾತ್ರದಲ್ಲಿ ರಾಧಾಕೃಷ್ಣ ಊರಳ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ರಾಜ್ ಬಿ ಶೆಟ್ಟಿ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ.

      ಕಮರ್ಷಿಯಲ್ ಚಿತ್ರದ ಅಂಶಗಳನ್ನು ಹುಡುಕಿ ಹೋದವರಿಗೆ ಸಿನಿಮಾ ನಿರಾಶೆ ನೀಡುತ್ತದೆ. ಹಲವು ಸನ್ನಿವೇಶಗಳಲ್ಲಿ ಮತ್ತೆ ಮತ್ತೆ ಪುನರಾವರ್ತನೆಯಾಗುವ ಗೀತೆಗಳು ತುಸು ಹೆಚ್ಚಾದವೇನೋ ಎಂದು ಅನ್ನಿಸದಿರದು. ಚಿತ್ರದುದ್ದಕ್ಕೂ ಬಳಸಿರುವ ಕುಂದಾಪುರದಅ ಕನ್ನಡ ಹಲವರಿಗೆ ಅರ್ಥ ಮಾಡಿಕೊಳ್ಳಲು ಕಷ್ಟವೂ ಆಗಬಹುದು.

         ಚಿತ್ರದ ಕೊನೆಯ ದೃಶ್ಯದಲ್ಲಿ ಗಂಡನನ್ನು ಕಳೆದುಕೊಂಡ ಅಮ್ಮಚ್ಚಿ ಪುಟ್ಟಮ್ಮತ್ತೆಯ ಮನೆಗೆ ಮರಳುತ್ತಾಳೆ.  ತನ್ನ ಗಂಡ “ವೆಂಕಪ್ಪಯ್ಯ ಸತ್ತ “ಎಂದು ಹೇಳುವಾಗ ಅವಳ ಮುಖದಲ್ಲಿ ಕಾಣುವ ನಗು , ನಿರಾಳ ಭಾವ  ನಮ್ಮಲ್ಲಿಹಲವು ಪ್ರಶ್ನೆಗಳನ್ನು ಮೂಡಿಸುವುದರೊಂದಿಗೆ ಸಿನಿಮಾ ಮುಗಿಯುತ್ತದೆ.

ಅಮೆಜಾನ್ ಪ್ರೈಮ್ ನಲ್ಲಿ  ಸಿನಿಮಾ ,ಲಭ್ಯವಿದ್ದು ಉತ್ತಮ ಗುಣಮಟ್ಟದ ಸಿನಿಮಾದ ನಿರೀಕ್ಷೆಯಲ್ಲಿದ್ದರೆ ಸಿನಿಮಾ ನಿರಾಶೆಗೊಳಿಸುವುದಿಲ್ಲ.


                        ಕುಸುಮ ಮಂಜುನಾಥ.

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top