ಕವನ ಸಂಕಲನ : ಮನವೀಣೆಯ ಮೀಟು

ಪುಸ್ತಕ ಸಂಗಾತಿ

ಕವನ ಸಂಕಲನ : ಮನವೀಣೆಯ ಮೀಟು

ಕವಯಿತ್ರಿ : ಶ್ರೀಮತಿ ಸುಜಾತ ರವೀಶ್

ಕವನ ಸಂಕಲನ : ಮನವೀಣೆಯ ಮೀಟು

ಕವಯಿತ್ರಿ : ಶ್ರೀಮತಿ ಸುಜಾತ ರವೀಶ್

“ಭಾವನೆಗಳ ಮೊಸರು ಚಿಂತನೆಗಳ ಕಡೆಗೋಲಿನಲ್ಲಿ ಮನ ಮಂಥನವಾದಾಗ ಬರುವ ನವನೀತವೆ ಕವನ”.. ಇದು ಸ್ವತಃ ಕವಯಿತ್ರಿಯ ಅಂಬೋಣ. ಹೌದು, ಮುಖಪುಟದ ಮೂಲಕ ಪರಿಚಿತರಾದ ಬರಹಗಾರ್ತಿ ಹಾಗೂ ಸಾಹಿತ್ಯೋತ್ಸವ ಬಳಗದ ನಿರ್ವಾಹಕಿ ಶ್ರೀಮತಿ ಸುಜಾತ ರವೀಶ್ ರವರ ಲೇಖನಿಯಿಂದ ಮೂಡಿ ಬಂದ ಅದೆಷ್ಟೋ ಕವನ, ಲೇಖನಗಳು ಓದುಗರಲ್ಲಿ ಸಂಚಲನ ಮೂಡಿಸಿವೆ.. ಅಂತೆಯೇ ಅವರ ಎರಡನೆಯ ಕೃತಿ ಮನವೀಣೆಯ ಮೀಟು ಕವನ ಸಂಕಲನದ ತುಂಬೆಲ್ಲ ವೈವಿಧ್ಯಮಯ ರಚನೆಗಳು ಮನದ ವೀಣೆಯನ್ನು ಮೀಟಿ ಹೊಸತೊಂದು ತರಂಗವನ್ನು ಹೊಮ್ಮಿಸುವುದರಲ್ಲಿ ಸಂದೇಹವಿಲ್ಲ.

ಆರಂಭದಲ್ಲೇ ಅಮ್ಮನ ನೆನಪು ಕೃತಿಗೆ ಹೆಚ್ಚಿನ ಶೋಭೆ ಕೊಟ್ಟಿದೆ.

ಅಮ್ಮನ ನೆನಪು ಎಂದರೆ

ಮುಂಜಾವದ ಪಾರಿಜಾತದ ಗಂಧ

ಮೈಸೂರು ಮಲ್ಲಿಗೆಯ ಸುಗಂಧ

ಮೊದಲ ಮಳೆ ತಂದ ಮೃದ್ಗಂಧ

ಎಂಬ ಸಾಲುಗಳೇ ಅಮ್ಮನ ನೆನಪುಗಳಿಗೆ ಮತ್ತಷ್ಟು ಚಿತ್ತಾರವನ್ನು ಹೆಣೆದಿವೆ. ಅಮ್ಮನ ಮಡಿಲಿನಲ್ಲಿ ಆಡಿ ಬೆಳೆದ ಜೀವ ಎಂದೂ ಅಮ್ಮನನ್ನು ಮರೆಯಲು ಸಾಧ್ಯವಿಲ್ಲ. ಹೇಗೆ ಪಾರಿಜಾತದ ಕಂಪು ಮೈ ಮನವನ್ನು ಹಗುರಾಗಿಸುತ್ತದೋ ಹಾಗೆ ಅಮ್ಮ ಎಂಬ ಒಂದು ಪದ ಸಾಕು ಹೃದಯದಲ್ಲಿ ಮಮತಾ ಮೂರ್ತಿಯನ್ನು ಪೂಜಿಸಲು..

ಈ ಬದುಕು ಎಂಬುದು ಒಂದು ಓಟವಿದ್ದಂತೆ. ಗುರಿ ಮುಟ್ಟುವವರೆಗೆ ನಿಲ್ಲುವ ಹಾಗಿಲ್ಲ. ಅದನ್ನೇ ಕವಯಿತ್ರಿ ತನ್ನ “ಈ ವೇಗದ ಓಟದಲ್ಲಿ” ಕವನದಲ್ಲಿ ಬಿಂಬಿಸಿದ್ದಾರೆ.

ಏತಕ್ಕಾಗಿ ಈ ಓಟ? ತಿಳಿಯುತ್ತಿಲ್ಲ

ಯಾರಿಗಾಗಿ ಈ ಪರದಾಟ? ಗೊತ್ತಿಲ್ಲ

ಹೋಗಲಿ ಗಮ್ಯ ಯಾವುದು? ಊಹೂಂ ಬೇಕಿಲ್ಲ

ಓಡುವ ತೆವಲೋ, ಅನಿವಾರ್ಯತೆಯೋ

ಅಂತೂ ಓಡುತ್ತಿದ್ದೇನೆ, ಎಲ್ಲರೊಡನೆ ಓಡುತ್ತಿದ್ದೇನೆ

ಎಲ್ಲರೂ ಗಮ್ಯವ ಅರಸಿ ಓಡುವವರೇ, ಅವರ ನಡುವೆ ನಾವು ಸುಮ್ಮನೆ ಇರುವಂತಿಲ್ಲ.. ಓಡಲೇಬೇಕು, ಹುಟ್ಟಿನಿಂದ ಸಾವಿನ ಕದ ತಟ್ಟುವವರೆಗೂ.. ಅದು ಅನಿವಾರ್ಯವೂ ಹೌದು.

ಹಾಗೆಂದು ಓಡುವ ಭರದಲ್ಲಿ ಹಿಂತಿರುಗಿ ನೋಡಲಾರೆ ಎಂಬ ಭಾವ ಇಲ್ಲಿಲ್ಲ.. ಅದಕ್ಕೆಂದೇ ನೆನಪುಗಳ ಮಾತು ಮಧುರ ಕವನ, ನಮ್ಮನ್ನು ನೆನಪಿನಾಳಕ್ಕೆ ಹೊತ್ತೊಯ್ಯುತ್ತದೆ..

ನವಿಲು ಗರಿ ಮರಿ ಹಾಕಿದೆ

ನೋಡು ಬಾ ಗೆಳತಿ

ನೀ ಕಟ್ಟಿದ ಕಪ್ಪೆ ಗೂಡಿದೆ

ಆಡು ಒಂದು ಸರತಿ

ಬಾಲ್ಯದ ಆಟಗಳೇ ನಮ್ಮನ್ನು ಇಂದಿಗೂ ಪದೇ ಪದೇ ಕಾಡುತ್ತವೆ.. ನವಿಲು ಗರಿಯನ್ನು ಪುಸ್ತಕದ ಮಧ್ಯೆ ಇಟ್ಟು ನಿತ್ಯವೂ ಮರಿ ಹಾಕಿದೆಯೇ ಎಂದು ನೋಡುವ ಮುಗ್ಧ ಭಾವ ಯಾರಲ್ಲಿ ಇರಲಿಲ್ಲ ಹೇಳಿ. ಆ ಮೆಲುಕುಗಳೇ ಸುಂದರ.

ತಿರುಗಿ ದೇಶದ ಆಗಿಹೋಗುಗಳತ್ತ ಕಣ್ಣು ಹಾಯಿಸುವಾಗ

ಕಂಡು ಬರುವ ವಿದ್ಯಮಾನಗಳು ಕವಯಿತ್ರಿಯ ಮನದಲ್ಲಿ ಚಿಂತನೆಗಳ ಅಲೆಗಳನ್ನು ಎಬ್ಬಿಸುತ್ತವೆ. ತಮ್ಮ ಭಾರ(ತ ) ಕವನದಲ್ಲಿ..

ಹಾರಿಸಿದೆವು ಎಷ್ಟೋ ಕ್ಷಿಪಣಿಗಳ ಬಾಹ್ಯಾಕಾಶಕ್ಕೆ

ಜೊತೆಯಲ್ಲೇ ಎಲ್ಲದರ ಬೆಲೆಯೂ ಅಂತರಿಕ್ಷಕ್ಕೆ

……

…..

ಅಂದು ಕಣ್ಣಿಗೆ ಕಾಣುತ್ತಿದ್ದ ವೈರಿ ಪರಕೀಯ

ಇಂದು ಅಂತಃಶತ್ರುಗಳಂತೂ ಪೂರಾ ನಿರ್ಭಯ..

ತುಂಬ ಅರ್ಥಪೂರ್ಣ, ಚಿಂತನಾರ್ಹ ಕವನ.. ಒಂದೊಂದು ಸಾಲುಗಳು ಕೂಡ ದೇಶದಲ್ಲಿ ನಡೆಯುವ ಸನ್ನಿವೇಶಗಳಿಗೆ ಕನ್ನಡಿ ಹಿಡಿದಂತೆ. ಎಂದಿಗೂ ಅಲ್ಲಗಳೆಯುವಂತಿಲ್ಲ..

ಹೀಗೆಯೇ ಒಂದೊಂದು ಕವನಗಳನ್ನು ಓದುತ್ತಿದ್ದಂತೆ ಮನಸ್ಸಿನ ಮೂಲೆಯಲ್ಲಿ ಒಂದು ಸಣ್ಣ ಕಿಡಿ ಒಮ್ಮೆಲೇ ಪ್ರಜ್ವಲಿಸಿದಂತೆ ಭಾಸವಾಗುವುದು. ಬೋಳು ಮರದೊಂದಿಗೆ ತನ್ನನ್ನು ಹೋಲಿಸಿಕೊಂಡ ಪರಿ ಜೀವನದ ಸತ್ಯವನ್ನು ಹೇಳುತ್ತದೆ. ಪ್ರೇಮಪಾಶದಲ್ಲಿ ಸಿಲುಕಿ ಬದುಕನ್ನು ದುರಂತಕ್ಕೆ ತಳ್ಳಿ ಪರಿತಪಿಸುವವರಿಗೆ ಕಿವಿಮಾತು ಹೇಳಿದ್ದಾರೆ..ಕಾಲನಿಗೂ ಉತ್ತರಿಸುವ ಕವಯಿತ್ರಿ, ತಡೆ, ಹಾಗೆ ಕರೆಯುತ್ತಿರಬೇಡ, ಇನ್ನೂ ಬದುಕಿನ ಲೆಕ್ಕಾಚಾರ ಮುಗಿದಿಲ್ಲ, ನೀನು ನನ್ನ ಗೆಳೆಯನೇ ಆದರೂ, ಎಲ್ಲರಿಗೂ ವಿದಾಯ ಹೇಳುವಷ್ಟು ಕಾಲಾವಕಾಶ ನೀಡು ಎಂಬುದಾಗಿ ವಿನಂತಿಸಿಕೊಂಡಿದ್ದಾರೆ. ಇದಂತೂ ಬಹಳವಾಗಿ ಚಿತ್ತವನ್ನು ಕಲಕುವಂತಿದೆ.

ಒಟ್ಟಿನಲ್ಲಿ ಕೃತಿಯ ತುಂಬೆಲ್ಲ ಬಾಲ್ಯದಿಂದ ಹಿಡಿದು ಅಂತಿಮ ಘಟ್ಟದವರೆಗಿನ ಪಯಣದಲ್ಲಿ ಎದುರಿಸುವ, ಅನುಭವಿಸುವ, ಆಶಿಸುವ ಬೇರೆ ಬೇರೆ ಸ್ಥಿತಿಗಳನ್ನು ಸುಂದರ ಪದಪುಂಜಗಳಿಂದ ಹೆಣೆದು, ಪುಸ್ತಕದ ರೂಪ ಕೊಟ್ಟು ನಮ್ಮ ಮುಂದಿರಿಸಿದ್ದಾರೆ. ಓದಿ ಆಸ್ವಾದಿಸುವ, ಅನುಭವದ ಜೊತೆ ಸಮೀಕರಿಸಿ ನೋಡುವ ಮನ ನಮ್ಮದಾಗಬೇಕು ಅಷ್ಟೇ. ಈ ಕೃತಿಯನ್ನು ತನ್ನ ಹೆತ್ತು ಹೊತ್ತ ಅಪ್ಪ ಅಮ್ಮನಿಗೆ ಅರ್ಪಿಸುವ ಮೂಲಕ ಕೃತಿ ಧನ್ಯತೆಯನ್ನು ಪಡೆದಿದೆ. ಶ್ರೀ ರಾಜೇಂದ್ರ ಪಾಟೀಲರವರ ಮುನ್ನುಡಿ ಹಾಗೂ ಶ್ರೀಮತಿ ವೈಶಾಲಿ ನರಹರಿ ರಾವ್ ಅವರ ಬೆನ್ನುಡಿ ಕೃತಿಗೆ ಹಾರ ತೊಡಿಸಿದಂತಿದೆ. ಕವಯಿತ್ರಿ ಸ್ವತಃ ತನ್ನ ಮಾತಿನಲ್ಲಿ ತನ್ನ ಸಾಹಿತ್ಯ ಪಯಣದ ಕಿರು ಪರಿಚಯವನ್ನು ನೀಡಿದ್ದಾರೆ. ಹೆಚ್ ಎಸ್ ಆರ್ ಎ ಪ್ರಕಾಶನದ ಮೂಲಕ ಸುಂದರವಾಗಿ ಮುದ್ರಿಸಲ್ಪಟ್ಟ ಕೃತಿ ಓದುಗರನ್ನು ತಣಿಸಲಿ, ಮುಂದೆಯೂ ಹೆಚ್ಚು ಕೃತಿಗಳು ಕವಯಿತ್ರಿಯ ಮೂಲಕ ಕನ್ನಡ ತಾಯಿಗೆ ಹಾರವಾಗಲಿ ಎಂದು ಆಶಿಸುತ್ತೇನೆ..


ಹರಿನರಸಿಂಹ ಉಪಾಧ್ಯಾಯ

4 thoughts on “ಕವನ ಸಂಕಲನ : ಮನವೀಣೆಯ ಮೀಟು

  1. ನನ್ನ ಕವನ ಸಂಕಲನವನ್ನು ಕವಿ ಭಾವವನ್ನು ಅರಿತು ತುಂಬಾ ಸೂಕ್ತವಾಗಿ ವಿಮರ್ಶಿಸಿರುವ ಶ್ರೀ ಹರಿ ನರಸಿಂಹ ಉಪಾಧ್ಯಾಯ ಅವರಿಗೆ ತುಂಬು ಹೃದಯದ ಧನ್ಯವಾದಗಳು . ಪ್ರಕಟಿಸಿದ ಸಂಪಾದಕರಿಗೆ ವಂದನೆಗಳು .

    ಸುಜಾತಾ ರವೀಶ್

  2. ಕೃತಿ ಪರಿಚಯ ಪ್ರಕಟಿಸಿದ ಸಂಪಾದಕರಿಗೆ ಅನಂತ ಧನ್ಯವಾದಗಳು

  3. ತುಂಬಾ ಉತ್ತಮ ವಿಮರ್ಶೆ ಚಂದದ ವಿಶ್ಲೇಷಣೆ ಸರ್ ❤

  4. ಹಾದಿ೯ಕ ಅಭಿನಂದನೆಗಳು ಸುಜಾತಾ
    ನಿಮ್ಮ ಸಾಹಿತ್ಯ ಪಯಣಕ್ಕೆ ಶುಭ ಹಾರೈಕೆ ಗಳು ಸಖಿ

Leave a Reply

Back To Top