ಅಂಕಣ ಸಂಗಾತಿ

ನೆನಪಿನದೋಣಿಯಲಿ

ನಾನೂ ಸಂಗೀತ ಕಲಿತೆ 

ನನಗಿದ್ದಿದ್ದ  ಆಸೆಗಳಲ್ಲಿ ಒಂದು ಸಂಗೀತ ಕಲಿಯುವುದು .ದೈವದತ್ತವಾಗಿ ಹಾಡಕ್ಕೆ ಬರ್ತಿರಲಿಲ್ಲವಾದ್ದರಿಂದ ಸಂಗೀತ ಕಲಿತು ಎಕ್ಸಾಮ್ ಪಾಸಾದ್ರೆ ‘ಕೇಳಬಲ್’ ಆಗಬಹುದೇನೋ ಎಂಬ ದೂರಾಸೆ.(ದುರಾಸೆನೂ). ಅದು ಹೇಗೆ ನೆರವೇರಿತು ಅಂತ ಡಿಟೇಲಾಗಿ ಹೇಳ್ತೀನಿ ಕೇಳ್ರೀ.

ಪ್ರೈಮರಿ ಮಿಡಲ್ ಸ್ಕೂಲ್ನಲ್ಲಿ ಹಿಂಜರಿಕೆ ಇರಲಿಲ್ಲ ಎಲ್ಲದಕ್ಕೂ ದನಿ ಸೇರಿಸಿ ಸೇರ್ಕೊಂಡು ಬಿಡ್ತಿದ್ದೆ.  ರಾಷ್ಟ್ರಗೀತೆ ಹಾಡಲಾಗಲಿ ಪ್ರಾರ್ಥನೆಯಲ್ಲಾಗಲಿ ಮತ್ತು ಕೆಲವು ಸಮೂಹಗಾನಗಳಲ್ಲಿ ನಾನು ಇದ್ದೇ ಇರುತ್ತಿದ್ದೆ.  ಒಬ್ಬಳೇ ಮಾತ್ರ ಎಲ್ಲರೆದುರಿಗೆ ಹಾಡುತ್ತಿರಲಿಲ್ಲ.  ಮನೇಲಿ  ಹಾಡಿದ್ರೆ ಅಣ್ಣ “ಯಾಕೋ ಪುಟ್ಟ ಅಳ್ತೀಯಾ” ಅನ್ನೋರು ಅಷ್ಟೇ . ಎಲ್ಲದಕ್ಕೂ ಪ್ರೋತ್ಸಾಹಿಸುತ್ತಿದ್ದ ನಮ್ಮ ತಂದೆ ಅದ್ಯಾಕೆ ಈ ವಿಷಯದಲ್ಲಿ ಹಾಗೆ ಮಾಡ್ತಿದ್ರು ಅನ್ನೋದು ನನಗೆ ಅರ್ಥವಾಗಲೇ ಇಲ್ಲ . ಇರಲಿ ಮುಂದೆ ಮೇಲೆ ಹೋಗಿ ಮೀಟ್ ಮಾಡ್ತೀನಲ್ಲ  ಆಗ ಕೇಳೇ ಬಿಡ್ತೀನಿ.  ಇನ್ನು ಹೈಸ್ಕೂಲಿಗೆ ಬಂದ ಮೇಲೆ ನನ್ನ ಬ್ಯಾಚ್ನಲ್ಲಿ  ಉಮಾ ವೀಣಾ ಕೆಂಪಮ್ಮ ಸುಧಾ ಮುಂತಾದ ಒಳ್ಳೆಯ ಹಾಡುಗಾರ್ತಿಯರಿದ್ರಾ ……..  ಆ ಕೋಗಿಲೆಗಳ ಗುಂಪಿನಲ್ಲಿ ಈ ಕಾಗೆ ಬಾಯಿ ತೆಗೆಯಲೇ ಇಲ್ಲ . ನಮ್ಮ ಮನೆ ಬೇರೆ ಎಕ್ಸ್ಟೆನ್ಷನ್ನಲ್ಲಿ . ಹತ್ತಿರ ಸಂಗೀತ ಹೇಳಿಕೊಡುವವರು ಇರಲಿಲ್ಲ.  ಹಾಗಾಗಿ ಆಸೆ ಕನಸಾಗಿ ಉಳಿಯಿತು.  ಕಾಲೇಜಿಗೆ ಬಂದ ಮೇಲೆ ಕೋ ಎಡ್ . ಬಾಯಿ ಬಿಡಕ್ಕೆ ಸಾಹಸ ಮಾಡಲಿಲ್ಲ.  ಟೈಪಿಂಗ್ ಶಾರ್ಟ್ ಹ್ಯಾಂಡ್ ಟೈಲರಿಂಗ್ ಕ್ಲಾಸ್ಗಳ ಮಧ್ಯದಲ್ಲಿ ಸಂಗೀತಕ್ಕೆ ಪುರುಸೊತ್ತೇ ಸಿಗಲಿಲ್ಲ.  ಆಮೇಲೆ ಮದುವೆನಾ!  ನನ್ನ ಪತಿ ಮಹಾಶಯರೋ ತುಂಬಾ ಒಳ್ಳೆ ಸಿಂಗರ್ . ಅವರ ಮುಂದೆ ನಾನು ಹಾಡಿದರೆ ಸೂರ್ಯಂಗೇ ಟಾರ್ಚಾ.  ಸೋ ನನ್ನ ಹಾಡೋ ಕನಸೂ ಟುಸ್ಸು.  ಆಮೇಲೆ ಕೆಲಸ ಆಸ್ಪತ್ರೆ ಅಲೆದಾಟ ವೃತ್ತಿ ಪರೀಕ್ಷೆಗಳು ನೆವರ್ ಎಂಡಿಂಗ್ .  ಆದರೂ ನನ್ನವರೇ ಮುಕ್ತಾಫಲಗಳನ್ನು ಕೇಳಿದಾಗಲೆಲ್ಲಾ ನಾನೂ ಹಾಡಬೇಕು ಅನ್ನೋ ಛಲ ಹುಟ್ತಾ ಇತ್ತು, ಆದರೆ ಬೆಳೆಯೋಕೆ ಆಗ್ತಿರಲಿಲ್ಲ.  ನಾನು ಲಾಲಿ ಹಾಡು ಹಾಡಿದರೆ ಕೇಳಲಾಗದೆ ಮಕ್ಕಳು ಬೇಗ ಮಲಗುತ್ತುವಂತೆ,  ದೇವ್ರು ನನ್ನ ದೇವರನಾಮ ನಿಲ್ಲಿಸಿದ್ರೆ ಕೇಳಿದ ವರ ಕೊಡ್ತೀನಿ ಅಂತಾನಂತೆ.  ಅಕಟಕಟಾ ಅಂತ ಕಟಕಟ ಹಲ್ಲು ಕಡಿದು ಸುಮ್ಮನಾಗ್ತಿದ್ದೆ .

ಇಂತಿಪ್ಪ ಕಾಲದಲ್ಲಿ ಒಂದು ದಿನ ನಮ್ಮ ಆಫೀಸಿನ ಪಕ್ಕದ ರಸ್ತೇಲಿ “ಶಾರದ ಸಂಗೀತ ವಿದ್ಯಾಲಯ”  ಬೋರ್ಡು ರಾರಾಜಿಸುತ್ತಿದ್ದು ಕಾಣಿಸ್ತು . ಟಕ್ ಅಂತ  ಗಾಡಿ ನಿಲ್ಸಿ ಒಳಗೆ ಹೋದೆ.  ದೇವರ ನಾಮ ಕ್ಲಾಸ್ ಗೆ ನನ್ನ ಸೇರಿ ಆರು ಜನ ಕೊಲೀಗ್ಸ್ ಸೇರ್ಪಡೆಯಾದರು.  ಹೀಗೇ  ಸಂಗೀತ ಕಲಿಯುವ ಆಸೆ ಇತ್ತು ಅಂದಿದ್ದೇ  ಅಂಬಿಕಾ ವಿದ್ಯೆಗೂ ವಯಸ್ಸಿಗೂ ಸಂಬಂಧ ಇಲ್ಲ   ಕಲಿಯಿರಿ ಅಂತ ಶ್ರೀಕಾರ ಹಾಕಿದರು.  ನನ್ಜೊತೆ ಸಹೋದ್ಯೋಗಿ ಗೆಳತಿ ವೈದೇಹಿ ಸೇರಿದ್ದು ಹುಮ್ಮಸ್ಸು ಹೆಚ್ಚಾಯಿತು.  ಬೇಸಿಕ್ನಿಂದ ಕಲಿಯೋದು ಪರೀಕ್ಷೆಯೆಲ್ಲ ಬೇಡ ಅಂತ ಅಂದ್ಕೊಂಡಿದ್ದೆ . ಜತಿಸ್ವರ ಕಳೆಯುವಷ್ಟರಲ್ಲಿ ಮೇಡಮ್ಮು ಮನೆ ಬದಲಾಯಿಸಿ ಕ್ಲಾಸ್ ಕಥೆ ಮುಗಿದು ಹೋಯಿತು ಅನ್ಕೊಳ್ಳೋದ್ರಲ್ಲಿ ನಾವು ಹೊಸ ಮನೆಗೆ ಹೋದೆವು.  ಅಲ್ಲಿ ಹಿಂದುಗಡೆ ಮನೆಯಲ್ಲೇ ಸಂಗೀತ ಹೇಳ್ಕೊಡ್ತಿದ್ರು

  ಆಮೇಲೆ ಆಪ್ತ ಗೆಳತಿಯೂ ಆದ ವಾಣಿಯವರು ಜತಿಸ್ವರ ಕಲೀತಿರುವ ಮೂರು ಹುಡುಗರ ಬ್ಯಾಚಿದೆ ನೀವು ಬನ್ನಿ ಅಂತ ಹೇಳಿ ಬಾಡುತ್ತಿದ್ದ ಬಳ್ಳಿಗೆ ಮತ್ತೆ ನೀರೆರೆದರು .  ಆ ಮಕ್ಕಳು ಪರೀಕ್ಷೆ ತೊಗೋವಾಗ ನನ್ನನ್ನು ಬಲವಂತ ಮಾಡಿ ಕಟ್ಟಿಸಿದರು.  ಇನ್ನೇನು ಅಂತೀರಾ?  ಮೊದಲಿಂದ ಹಾಡಲಿಕ್ಕೆ ಕೀಳರಿಮೆ ಜ.ತೆಯಲ್ಲಿದ್ದಾಗ ಹೇಳುತ್ತಿದ್ದೆ . ಒಬ್ಬಳೇ ಹಾಡು ಅಂದ್ರೆ ಮಾತ್ರ ನನ್ನ ಹಾಡು ಏರಿಗೆ ಹೋದರೆ ಶ್ರುತಿ ಹಳ್ಳಕ್ಕೆ ಬೀಳುತ್ತಿತ್ತು . ಹೇಗೋ ಪ್ರಾಕ್ಟಿಕಲ್ ಕ್ಲಾಸಿಗೆ ಹೋದೆ.  ನಿಜ ಹೇಳ್ತೀನಿ ಎಷ್ಟು ಸಂದರ್ಶನ ಎದುರಿಸಿದ್ದೇನೆ ಆದರೆ ಸಂಗೀತ ಪರೀಕ್ಷೆಯ ಹಿಂದಿನ ದಿನ ಮಾತ್ರ ನಿದ್ದೇನೇ ಬರ್ಲಿಲ್ಲ.  ಹೇಗೋ ಹೇಳಿ ಆಚೆ ಬಂದೆ ಅಲ್ಲೊಂದು ಚಿಲ್ಟಾರಿ ಕೂತಿತ್ತು . ಅದು “ಆಂಟಿ ನೀವಾ ಈಗ ಹಾಡಿದ್ದು ಆ……… ದೇವರನಾಮ” ಅಂತು. “ಅಯ್ಯೋ ಖರಾಬಾಗಿತ್ತೇನೋ ಅದಕ್ಕೆ ಕೇಳಿದೆ” ಅನ್ಕೊಂಡು “ಹೂ ಮರಿ” ಅಂದೆ. “ತುಂಬಾ ಚೆನ್ನಾಗಿತ್ತು ಆಂಟಿ ” ಅನ್ನೋದಾ?  ಅಬ್ನಾ  ಇಷ್ಟು ಕೇಳಿಸಿಕೊಂಡೆನ್ನೆಲ್ಲ ಪರೀಕ್ಷೆಗೆ ಮಾರೋ ಗೋಲಿ ಅಂತ ಖುಷಿಯಾಗಿಬಿಟ್ಥೆ. ಆಮೇಲೆ ಥಿಯರಿ  ಪರೀಕ್ಷೆ ಬಿಡಿ ಖುಷಿಯಾಗಿ ಹೋಗಿ ಚೆನ್ನಾಗಿ ಬರೆದೆ . ಥಿಯರಿಯಲ್ಲಿ ನೂರಕ್ಕೆ ನೂರು ಬಂತು ಪ್ರಾಕ್ಟಿಕಲ್ ನಲ್ಲಿ ಮಾತ್ರ ಅರುವತ್ತು . ಪರವಾಗಿಲ್ಲ ಬಿಡು ಅಂತ ಎಂಕಾಮ್ ಸರ್ಟಿಫಿಕೇಟ್ ಗಿಂತ ಸಂಗೀತದ ಸರ್ಟಿಫಿಕೇಟ್ ನ ಜೋಪಾನವಾಗಿ ಇಟ್ಕೊಂಡಿದಿನಿ . 

ಇನ್ನು ನನ್ನ ಸಂಗೀತ ಪರೀಕ್ಷೆಯ ಸಂಗೀತ ಕ್ಲಾಸುಗಳ ತಮಾಷೆಯ ಘಟನೆ ಬರೆದರೆ ಕಾದಂಬರಿಯಾಗುತ್ತೆ.  ಅದು ಇನ್ಯಾವುದಾದರೂ ಥೀಮ್  ಕೊಡ್ತಾರಲ್ಲ ಶುಭ ಆಗ ಬರೀತೀನಿ . ಸದ್ಯಕ್ಕೆ ನಾನು ಸಾಧಿಸಿದ ಪರಾಕ್ರಮ ಇದು .

ಇಷ್ಟೆಲ್ಲಾ ಆದ ಮೇಲೆ ನಾನು ಚೆನ್ನಾಗಿ ಹಾಡಬಹುದು ಅಂದ್ಕೊಂಡಿದ್ದರೆ ನಿಮ್ಮದು  ೧೦೦ ಪರ್ಸೆಂಟ್ ತಪ್ಪು ಅಭಿಪ್ರಾಯ . ನನ್ನ ಕೇಸ್ ನಲ್ಲಿ ಆಪರೇಷನ್ ಸಕ್ಸಸ್ ಪೇಷಂಟ್  ಡೈಡ್.  ಮತ್ತೆ ಅದೇ ಹಿಂಜರಿಕೆ ಕೀಳರಿಮೆ ಬಿಟ್ಟೇ ಇಲ್ಲ . ಆದರೆ ಸಂಗೀತ ಪರೀಕ್ಷೆ ಪಾಸಾಗಿದೀನಿ ಅನ್ನೋ ಸಮಾಧಾನ ಅಷ್ಟೇ .


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು

Leave a Reply

Back To Top