ಅಂಕಣ ಸಂಗಾತಿ
ಸಕಾಲ
ಅವಿನಾಭಾವ ಸಂಗಾತಿ….
ನಮಗೂ ಮನಸ್ಸಿದೆ,ಅದಕೂ ಒಂದಿಷ್ಟು ಕನಸಿದೆ ಅನ್ನುವುದೆಲ್ಲ ವಾಸ್ತವವಾದರೂ ಅದನು ಆಗಾಗ ಹಂಚಿಕೊಳ್ಳುವುದು ಅನಿವಾರ್ಯ.ಆದ್ರೆ ಒತ್ತಾಸೆಯ ಗೂಡಿನಲ್ಲಿ ಬೆಚ್ಚಗೆ ಗರಿಬಿಚ್ಚಿಕೊಳ್ಳುವ ಹನಿಗಳ ಆದ್ರತೆ ಕಂಗಳಿಂದ ಜಾರಿ ಗಲ್ಲದ ಗುಳಿಯೊಳಗೆ ಇಂಗಿ ವಾತಾವರಣದ ಕಲ್ಮಶಗಳನ್ನು ಮಾತ್ರ ಬೆರೆಸಿ ಲವಣಾಂಶಗಳಲಿ ತೇಲಿಸಿ ತುಟಿಯಂಚಲಿ ಇಂಗಿದಾಗ ಅದೇನೋ ಉಲ್ಲಾಸ,ಅದೇನೋ ಕಹಿ ಕನಸು, ನೋವಿನ ಬಾಧೆಯನ್ನು ಮರೆಮಾಚಲು ಒಳಸುಳಿವ ಕಣ್ಣಂಚಿನ ಧಾರೆಯನ್ನು ಕಣ್ಣೀರೆಂದು ಭಗವಂತ ಸೃಷ್ಟಿ ಮಾಡಿದನೋ ಎನೋ ಅದಕೆ ಇರಬೇಕು,ಅಳು ಹುಟ್ಟಿನಿಂದಲೇ ನಮ್ಮ ಅವಿನಾಭಾವ ಸಂಗಾತಿ. ಪರಿಣತನೊಬ್ಬನು ಶಿಶುಗಳ ಅಳುವನ್ನು ಆಹಾರ ಪೂರೈಸುವ “ಹೊಕ್ಕಳ ಬಳ್ಳಿಗೆ” ಹೋಲಿಸಿದ್ದಾನೆ. ಆದರೆ, ನಾವು ದೊಡ್ಡವರಾಗುತ್ತಾ ಹೋದಂತೆ ಬೇರೆ ವಿಧದಲ್ಲಿ ಸಂವಾದ ಮಾಡಲು ಕಣ್ಣೀರು ಸುರಿಸುತ್ತೇವೆ.
ಸಂತೋಷ, ಸಮಾಧಾನ, ಸಾಧನೆಯಂಥ ಸನ್ನಿವೇಶಗಳು ಕೂಡ ಭಾವನಾತ್ಮಕ ಕಣ್ಣೀರು ತರಿಸುತ್ತೆ ಆದರೆ ಇವು ಬರಿ ಕಣ್ಣೀರಲ್ಲ ಆನಂದಬಾಷ್ಪಗಳು. ಕೆಲವೊಮ್ಮೆ ಒಬ್ಬರು ಅಳುವುದನ್ನು ನೋಡಿ ಇನ್ನೊಬ್ಬರಿಗೆ ಕಣ್ಣೀರು ಬರುತ್ತದೆ. “ಯಾವುದೇ ಕಾರಣಕ್ಕೇ ಇರಲಿ, ಯಾರಾದರು ಅಳುವುದನ್ನು ನೋಡಿದರೆ ಸಾಕು ನನಗೂ ಅಳು ಬಂದು ಬಿಡುತ್ತದೆ” ಎಂದು ಅನೇಕರು ಉಧ್ಘರಿಸಿದ್ದಿದೆ. ಸಿನಿಮಾ ಅಥವಾ ಪುಸ್ತಕದಲ್ಲಿ ಇರುವ ಕಾಲ್ಪನಿಕ ಸನ್ನಿವೇಶಗಳು ಸಹ ನಾವು ಅಳುವಂತೆ ಮಾಡುತ್ತವೆ.
“ಅಳುವುದಕ್ಕೆ ಕಾರಣ ಏನೇ ಆಗಿರಲಿ, ಇದೊಂದು ಪ್ರಭಾವಶಾಲಿ ಮೌನ ಭಾಷೆ. “ಕೆಲವೇ ಕ್ಷಣಗಳಲ್ಲಿ ಅನೇಕ ವಿಷಯಗಳನ್ನು ತಿಳಿಯಪಡಿಸುವ ಬೇರೆ ಕೆಲವು ವಿಧಾನಗಳೂ ಇವೆ” ಎಂದು ಅಡಲ್ಟ್ ಕ್ರೈಯಿಂಗ್” ಎಂಬ ಪುಸ್ತಕ ವಿವರಿಸುತ್ತದೆ. ಕಣ್ಣೀರು ನಮ್ಮೊಳಗಿನ ಮೃದು ಮನಸ್ಸನ್ನು ಪ್ರತಿಕ್ರಿಯಿಸುವಂತೆ ಪ್ರಚೋದಿಸುತ್ತದೆ.ಯಾರಾದರೂ ಅಸಹಜ ಸ್ಥಿತಿಯಲ್ಲಿ ಕರಳು ಕಿವುಚುವಂತೆ ರೋಧಿಸುವಾಗ, ಅವರು ಕಷ್ಟದಲ್ಲಿದ್ದಾರೆಂದು ಎಚ್ಚರಿಸುತ್ತದೆ. ಹಾಗಾಗಿ, ಒಬ್ಬರು ದುಃಖದಿಂದ ಕಣ್ಣೀರು ಹಾಕುವಾಗ ಅದನ್ನು ನೋಡಿಯೂ ನೋಡದಂತೆ ಇರಲು ಅನೇಕರಿಗೆ ಕಷ್ಟ. ಆ ಸಮಯದಲ್ಲಿ ನಾವು ಅಳುತ್ತಿರುವವರಿಗೆ ಸಾಂತ್ವನ ನೀಡುತ್ತೇವೆ ಅಥವಾ ನೆರವಾಗುತ್ತೆವೆ. ಕಣ್ಣೀರ ಧಾರೆ
ನಮ್ಮ ಭಾವನೆಗಳನ್ನು ಹೊರಹಾಕ ಸಹಾಯಕ ಅಸ್ತ್ರ.
ಅಳುವನ್ನು ತಡೆಯುವ ರೂಢಿ ಆರೋಗ್ಯಕ್ಕೆ ಹಾನಿಕರ ಎನ್ನುವುದು ಕೆಲವು ಪರಿಣತರ ನಂಬಿಕೆ. ಅಳುವುದರಿಂದಾಗುವ ಶಾರೀರಿಕ ಅಥವಾ ಮಾನಸಿಕ ಪ್ರಯೋಜನಗಳು ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎನ್ನುವುದು ಇನ್ನು ಕೆಲವರ ವಾದ.85℅ ಸ್ತ್ರೀಯರು ಮತ್ತು 73 ℅ ಪುರುಷರು ಅತ್ತ ನಂತರ ಮನಸ್ಸು ಹಗುರವಾಗುತ್ತದೆಂದು ವರದಿ ಮಾಡಿರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಸುಮ್ಮಸುಮ್ಮನೆ ಅಳೋದು ಒಂದು ಕಲೆ.ಅದು ಎಲ್ಲರಿಗೂ ಬರದು.ಸಿನಿಮಾ, ರಂಗಭೂಮಿ ಕಲಾವಿದರು ಕಲೆಗಾಗಿ ತಮ್ಮ ಜೀವನವನ್ನೇ ಮೀಸಲಾಗಿಟ್ಟಿರುವರು.ಅವರು ಕಣ್ಣೀರು ಬರಿಸಲು ಬಳಸುವ ಸಾಧನ ಕೃತಕವಾದರೂ ಕಣ್ಣೀರು ಕೃತಕವಲ್ಲ.ಕಲಾವಿದ ತನ್ನ ಪಾತ್ರದೊಳು ಲೀನವಾಗಿ ಅಭಿನಯಿಸಿದಾಗ ನಮ್ಮ ಕಂಗಳು ನಮಗರಿವಿಲ್ಲದೆ ತೇವಗೊಂಡಿರುತ್ತವೆ.ಮನಸ್ಸನ್ನು ಕರಗಿಸುವ ಅಧ್ಬುತ ಶಕ್ತಿ ಮಾತ್ರ ಕಣ್ಣೀರಿಗಿದೆ.
“ಕೆಲವೊಮ್ಮೆ ಅಳಬೇಕೆಂದು ಅನಿಸುತ್ತದೆ. ಕಾರಣ ಬೇಕಿಲ್ಲ,ಯಾರಾದರೂ ಸುಮ್ಮನೆ ಗದರಿದರೂ ಸಾಕು,ದೊಡ್ಡ ಕಣ್ಣು ಬಿಟ್ಟರೂ ಸಾಕು,ಎಲ್ಲರೆದುರು ಒಂದ ಮಾತು ನೋವಾಗುವಂತೆ ಅಂದರೂ ಸಾಕು ದಳದಳ ಅಕ್ಷಿಪಟಲ ಜಲಧಾರೆ ಸುರಿಸದೇ ಇರದು. ಮನಸೋಯಿಚ್ಛೆ ಅತ್ತಷ್ಟು,ಅತ್ತ ನಂತರ ನಿರಾಳವೆನ್ನಿಸದೆ ಇರದು.ಈ ನಿರಾಳ ಅನಿಸಿಕೆ ಕೇವಲ ಅಳುವುದರ ಮೇಲೆಯೇ ಹೊಂದಿಕೊಂಡಿಲ್ಲ. ನಾವು ಅತ್ತಾಗ ಇತರರು ಪ್ರತಿಕ್ರಿಯಿಸುವ ರೀತಿ ಕೂಡ ಅವಲಂಬಿಸಿದೆ.ಉದಾ.ನಾವು ಕಣ್ಣೀರು ಹಾಕಿದಾಗ ಇತರರು ಸಾಂತ್ವನ ಅಥವಾ ಸಹಾಯ ನೀಡಿದರೆ ನಮಗೆ ನಿರಾಳ ಅನಿಸುತ್ತದೆ. ಆದರೆ, ನಾವು ಕಣ್ಣೀರಿಟ್ಟಾಗ ಇತರರು ಸರಿಯಾಗಿ ಪ್ರತಿಕ್ರಿಯಿಸದಿದ್ದರೆ ನಿರ್ಲಕ್ಷ್ಯಮಾಡುತ್ತಿದ್ದಾರೆಂದು ಅತ್ತು ಅತ್ತು ನರಳಬಹುದು.
ಕಣ್ಣೀರ ಹಿಂದಿರುವ ರಹಸ್ಯ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಆದರೆ ನಮಗೆ ಗೊತ್ತಿರುವುದಿಷ್ಟೇ, ಕಣ್ಣೀರು ಸುರಿಸುವುದು ದೇವರು ಕೊಟ್ಟಿರುವ ಒಂದು ಭಾವನಾತ್ಮಕ ಪ್ರತಿಕ್ರಿಯೆ. ಸಾಮಾನ್ಯವಾಗಿ ನವಜಾತ ಶಿಶು ಅಳುವಾಗ ಕಣ್ಣೀರು ಸುರಿಸುವುದಿಲ್ಲ. ಕಣ್ಣುಗಳನ್ನು ಸಂರಕ್ಷಿಸಲು ಬೇಕಾದಷ್ಟು ತೇವಾಂಶ ಶಿಶುಗಳಲ್ಲಿರುತ್ತದೆ. ಕೆಲವು ವಾರಗಳು ಕಳೆದ ನಂತರ ಅವುಗಳ ಕಣ್ಣೀರ ಗ್ರಂಥಿ ಸಂಪೂರ್ಣವಾಗಿ ವಿಕಸಿಸಿದಾಗ ಕಣ್ಣೀರು ಬರಲು ಆರಂಭವಾಗುತ್ತದೆ. ಅಳುವುದಕ್ಕೂ ವಿಧಗಳಿವೆ ಎಂಬುದೇ ವಿಶೇಷ.
*ಕನಿಷ್ಟ ಮಿತಿಯ ಕಣ್ಣೀರು :-ಕಣ್ಣೀರಿನ ಗ್ರಂಥಿಯಿಂದ ನಿರಂತರವಾಗಿ ಉತ್ಪತ್ತಿಯಾಗುವ ತಿಳಿ ದ್ರವವಾಗಿದ್ದು. ಇದು ಕಣ್ಣನ್ನು ಸಂರಕ್ಷಿಸಿ, ತೇವದಿಂದಿರಿಸುತ್ತದೆ. ಅಲ್ಲದೆ, ನಮ್ಮ ದೃಷ್ಟಿಯನ್ನು ಸಹ ವೃದ್ಧಿಸುತ್ತದೆ. ಕಣ್ಣು ಮಿಟುಕಿಸಿದಾಗೆಲ್ಲ ಈ ದ್ರವವು ನಮ್ಮ ಕಣ್ಣುಗಳನ್ನು ಆವರಿಸುತ್ತದೆ.
*ಪ್ರತಿಕ್ರಿಯಾತ್ಮಕ ಕಣ್ಣೀರು:- ಯಾವುದೇ ವಸ್ತು ಅಥವಾ ಧೂಳು ಕಣ್ಣಿಗೆ ಬಿದ್ದಾಗ ಬರುವಂಥದ್ದೇ ಈ ಪ್ರತಿಕ್ರಿಯಾತ್ಮಕ ಕಣ್ಣೀರು. ಇದು ನಾವು ಆಕಳಿಸುವಾಗ ಮತ್ತು ನಗುವಾಗ ಸಹ ಈ ಕಣ್ಣೀರು ಬರುತ್ತದೆ.
*ಭಾವನಾತ್ಮಕ ಕಣ್ಣೀರು:-ಈ ಕಣ್ಣೀರು “ಮನುಷ್ಯರಿಗೆ” ಮಾತ್ರ ಬರುವಂಥದ್ದು. ನಾವು ಭಾವನಾತ್ಮಕವಾಗಿ ಕುಗ್ಗಿಹೋದಾಗ ಈ ಕಣ್ಣೀರನ್ನು ಸುರಿಸುತ್ತೇವೆ. ಪ್ರತಿಕ್ರಿಯಾತ್ಮಕ ಕಣ್ಣೀರಿಗಿಂತ ಈ ಕಣ್ಣೀರಲ್ಲಿ ಪ್ರೋಟೀನ್‍ನ ಅಂಶ ಸುಮಾರು 24℅ ಹೆಚ್ಚಿರುತ್ತದೆ. ಒಮ್ಮೊಮ್ಮೆ ಅನುಸಿದ್ದಿದೆ ಮನುಷ್ಯ ನ ಹೊರತು ಪಡಿಸಿ ನಾವು ಸಾಕುವ ನಾಯಿ,ಬೆಕ್ಕು,ಆಕಳು ಇತ್ಯಾದಿ ಇವು ಕೂಡ ಸಹವಾಸ ದೋಷದಿಂದ ನಮ್ಮಂತೆ ಭಾವನಾತ್ಮಕ ಬುದ್ಧಿವಂತಿಕೆ ಹೊಂದಿದ್ದು ಅವು ಕಣ್ಣೀರು ಸುರಿಸುವುದು ಇದೆ.
ಅಳುವುದೂ ಒಬ್ಬ ವ್ಯಕ್ತಿಗೆ ಕಡ್ಡಾಯ ಮತ್ತು ಇದು ಮನಸ್ಸನ್ನು ಹಗುರಗೊಳಿಸುವುದಲ್ಲದೆ, ದೇಹಕ್ಕೆ ಲಾಭವನ್ನೂ ನೀಡುತ್ತದೆ.ದೇಹದಿಂದ ವಿಷವನ್ನು ಹೊರ ಹಾಕಲಾಗುತ್ತದೆಒಬ್ಬ ವ್ಯಕ್ತಿ ಒತ್ತಡಕ್ಕೆ ಒಳಗಾದಾಗ ದೇಹದಲ್ಲಿ ಅನೇಕ ವಿಷಕಾರಿ ವಸ್ತು ಉತ್ಪತ್ತಿಯಾಗುತ್ತದೆ. ಈ ವಿಷಕಾರಿ ಅಂಶಗಳು ದೇಹದಿಂದ ಹೊರ ಹೋಗಲು ಸಾಧ್ಯವಾಗದಿದ್ದರೆ, ಅವು ದೇಹಕ್ಕೆ ಹಾನಿಯುಂಟು ಮಾಡಬಹುದು. ಆದುದರಿಂದ ಅಳುವುದು ಮುಖ್ಯ.ಗಂಡುಮಕ್ಕಳು ಕಣ್ಣೀರು ಹಾಕಿದರೆ ಅಪಶಕುನವೆಂದು ಭಾವಿಸುವುದಿದೆ.ಅವರಿಗೆ ಗಂಡೆದೆಯ ಗುಂಡಿಗೆ ಇದೆಯೆಂದು ಚಿತ್ರಿಸಿ ಅವರನ್ನು ಕಲ್ಲಿಗೆ ಹೋಲಿಸಿದ್ದು ವಿಶೇಷವಲ್ಲ.ಪಾಪ ಅವರಿಗೂ ಮನಸ್ಸಿದೆ.ದುಃಖ ದುಮ್ಮಾನಗಳಿವೆ.ಹೀಗಾಗಿ ಅವರು ತಮ್ಮಷ್ಟಕ್ಕೆ ತಾವು ಮೌನವಾಗಿ ಒಂಟಿಯಾಗಿ ಒಳಗೊಳಗೆ ಕಣ್ಣೀರು ಹಾಕಿ ಮನಸ್ಸನ್ನು ಹಗುರಮಾಡಿಕೊಳ್ಳುತ್ತಾರೆ.ಹೆಣ್ಣು ಮಕ್ಕಳಂತೆ ಡಂಗುರ ಸಾರಿದಂತೆ ಅಳುವುದಿಲ್ಲ ಅಷ್ಟೇ.
ಉತ್ತಮ ನಿದ್ರೆಗೆ ಅಳುವೇ ಹರದಾರಿ.ಅತ್ತ ಮೇಲೆ ನಿದ್ದೆ ಚೆನ್ನಾಗಿ ಬರುತ್ತೆಂದು ಅಧ್ಯಯನವೊಂದು ತೋರಿಸಿದೆ. ವಾಸ್ತವವಾಗಿ ಅಳುವುದು ವ್ಯಕ್ತಿಯ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಅವನನ್ನು ನಿದ್ರೆಗೆ ಜಾರುವಂತೆ ಮಾಡುತ್ತದೆ.ಅಳು ಬಂದಾಗಿ ಮನಸ್ಸಿನಲ್ಲಿರುವ ಎಲ್ಲಾ ಯೋಚನೆ, ಚಿಂತೆಗಳು ದೂರ ಆಗುತ್ತವೆ. ಮನಸ್ಸು ಸಮಾಧಾನ ಆಗುತ್ತದೆ. ಮಕ್ಕಳು ಅಳು ಬಂದ ನಂತರ ನಿದ್ರೆಗೆ ಜಾರಿರುವುದನ್ನು ಕಾಣಬಹುದು.ಒಬ್ಬ ವ್ಯಕ್ತಿಗೆ ಅಳು ಬಂದರೆ, ಆತನಿಗೆ ಹಗುರವಾದ ಅನುಭವವಾಗುತ್ತದೆ ಮತ್ತು ಆತನ ಒತ್ತಡವೂ ನಿವಾರಣೆಯಾಗುತ್ತದೆ.
ಮನುಷ್ಯನ ದೇಹದಲ್ಲಿ ಆಕ್ಸಿಟೋಸಿನ್ ಮತ್ತು ಎಂಡೊರ್ಫಿನ್ ಎಂಬ ರಾಸಾಯನಿಕಗಳನ್ನು ಬಿಡುಗಡೆ ಮಾಡಿ, ಮನುಷ್ಯನ ಮನಸ್ಥಿತಿಯನ್ನು ಸುಧಾರಿಸಲು ಅಳು ನೆರವಾಗುತ್ತದೆ.ಹೆಚ್ಚುತ್ತಿರುವ ಮಾಲಿನ್ಯ ಮತ್ತು ತಂತ್ರಜ್ಞಾನದ ಬಳಕೆ ಕಣ್ಣಿಗೂ ಪರಿಣಾಮ ಬೀರುತ್ತಿದೆ. ಒಬ್ಬ ವ್ಯಕ್ತಿ ಒಮ್ಮೆಯಾದರೂ ಅತ್ತರೆ,ಕಣ್ಣೀರು ಕಣ್ಣಿಂದ ಮಾಲಿನ್ಯವನ್ನು ತೆಗೆಯಲು ಮತ್ತು ಕಣ್ಣುಗಳನ್ನು ಸ್ವಚ್ಛ ಮಾಡಲು ಸಹಾಯ ಮಾಡುತ್ತದೆ.ಕಣ್ಣು ಹೆಚ್ಚು ಡ್ರೈ ಆಗಿರುವುದು ಉತ್ತಮವಲ್ಲ. ಇದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದುದರಿಂದ ಅಳುವುದು ಮುಖ್ಯ. ಇದರಿಂದ ಕಣ್ಣುಗಳಿಗೆ ಅತ್ಯಂತ ಪ್ರಮುಖವಾದ ದ್ರವತ್ವವು ಕಣ್ಣುಗಳಲ್ಲಿ ಇರುವಂತೆ ಮಾಡುತ್ತದೆ.
ಕಣ್ಣಿನ ಭಾಷೆ ಅರಿತವನೆ ಬಲ್ಲ ಕಣ್ಣೊಳಗೆ ಅವಿತ ಹಾವ ಭಾವ.ಭಗವಂತನ ಲೀಲೆ ಅಪಾರ. ದೇಹದ ಸುಬುದ್ದಿಗೆ ಕಣ್ಣೀರು ಅರ್ಥಗರ್ಭಿತ.ಮೋಸ ವಂಚನೆಯ ಮೀರಿ ಬೆಳೆದ ಕಣ್ಣೀರು ಪ್ರೇಮಾಮೃತವ ಸಾರುವ ಪವಿತ್ರ ಅಮೃತ ಬಿಂದು…ಆಗಾಗ ಹಸಿನಗೆಯ ಚಟಾಕಿಯಲ್ಲಿ ಅಳಬೇಕು ನಯನಕ್ಕೊಂದು ಹುಮ್ಮಸ್ಸು ತುಂಬಲು.
ಶಿವಲೀಲಾ ಹುಣಸಗಿ
ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ
Kanniru yastu mahatavadu anta yalla tarahadinda sogasagi varnisididri..superb article
ಚೆನ್ನಾಗಿದೆ
ಭಾವನಾತ್ಮಕ ಭಾವನೆಗಳೇ ಹಾಗೆ.
Nice madam
ಕಣ್ಣೀರ ಧಾರೆಗಿರುವ ಮಹತ್ವ, ಹಿನ್ನೆಲೆ, ಬಗೆಗಳು ತುಂಬಾ ಸುಂದರವಾಗಿ ಮೂಡಿ ಬಂದಿದೆ ರೀ ಮೇಡಂ
ನಿಜ,ಕಣ್ಣೀರು ಹರಿಯುವ ಸಂದರ್ಭಗಳು ಬೇರೆ ಬೇರೆ ತೆರನಾಗಿದ್ದರೂ,ಭಾವನೆಯ ಪರಾಕಾಷ್ಠೆಯ ರೂಪವೆನ್ನಬಹುದು.ಅದನ್ನು ವೈಚಾರಿಕವಾಗಿ ಸೊಗಸಾಗಿ ಮನಮುಟ್ಟುವಂತೆ ತಿಳಿಸಿದ್ದೀರಿ.
ಕಣ್ಣೀರಿಗೂ… ಹೃದಯದ ಭಾವನೆ ಗಳಿಗೂ ಇರುವ ಅವಿನಾ ಭಾವ ಸಂಬಂಧ ವನ್ನು ಬಹಳ ಮಾರ್ಮಿಕ ವಾಗಿ ವಿವರಿಸಲಾಗಿದೆ. ಸೂಪರ್ ಗೆಳತಿ.
ಸುಂದರ ಅವಿನಾಭಾವ ಸಂಬಂಧದ ಈ ಕಣ್ಣೀರು ಚೆನ್ನಾಗಿದೆ…
ಕಣ್ಣೀರು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಿವ ಒಂದು ಪ್ರಬಲ ಸಾಧನ, ಒಡೆದು ಹೋದ ಸಂಬಂಧಗಳನ್ನು ಬೆಸೆಯುವ ಶಕ್ತಿ ಕಣ್ಣೀರಿಗಿದೆ, ದುಃಖವನ್ನು ಕಡಿಮೆ ಮಾಡುವ ಶಕ್ತಿ ಕಣ್ಣೀರಿಗಿದೆ, ಕಣ್ಣೀರಿನ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ,
Good job
Nagaraj aachari