ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಆ್ಯಸಿಡ್‍ದಾಳಿಗೆ ಒಳಗಾದ

ಲಕ್ಷ್ಮಿ ಅಗರವಾಲ್(1990)

ಆ್ಯಸಿಡ್‍ದಾಳಿಗೆ ಒಳಗಾದ ಲಕ್ಷ್ಮಿ ಅಗರವಾಲ್(1990)

         ಲಕ್ಷ್ಮಿ ಅಗರವಾಲ್ ಸುಂದರವಾದ ಹುಡುಗಿ.  1 ಜೂನ  1990 ರಂದು ದೆಹಲಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಸಿದಳು. ಈಕೆಯ ಬಾಲ್ಯ ತುಂಬಾ ಸುಂದರವಾದದ್ದು. ಈಕೆ ಶಾಂತ ಸ್ವಭಾವದವಳಾಗಿದ್ದು, ಯಾರೊಂದಿಗೂ ಹೆಚ್ಚಿನ ಮಾತುಕತೆ ಇಲ್ಲ. ಈಕೆ ದಿನಾಲೂ ಶಾಲೆಗೆ ಹೋಗಿ ಬರುವ ಸಮಯದಲ್ಲಿ ಒಬ್ಬ ವಿಕೃತ ಮನಸ್ಸಿನ ಹುಡುಗನ ಕಣ್ಣಿಗೆ ಬೀಳುತ್ತಾಳೆ. 32 ವರ್ಷದ ಹುಡುಗ ದಿನಾಲೂ ಶಾಲೆಗೆ ಹೋಗುವ ಬೀದಿಯಲ್ಲಿ ಬಂದು ತನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ. ಈ ವಿಷಯವನ್ನು ಮನೆಯವರಿಗೆ ಈಕೆ ತಿಳಿಸುವುದಿಲ್ಲ. ತಿಳಿಸಿದರೆ ಶಾಲೆ ಬಿಡಿಸಬಹುದು ಎಂಬ ಭಯದಿಂದ ಮನೆಯವರಿಗೆ ತಿಳಿಸದೆ ದಿನಾ ತಾನೇ ಸಹಿಸಿಕೊಂಡು, ಆ ಹುಡುಗನಿಗೆ ಮದುವೆಯಾಗುವುದಿಲ್ಲ ಎಂದು ನಿರಾಕರಿಸುತ್ತಾಳೆ. ಆತ  ದಾರಿಯಲ್ಲಿ ಅವಾಚ್ಯಶದ್ದಗಳಿಂದ ಬೈಯುವುದು ಕೆನ್ನೆಗೆ ಹೊಡೆಯುವುದನ್ನು ಸುಮ್ಮನೆ ಸಹಿಸಿಕೊಂಡಿದ್ದಳು. ಸತತವಾಗಿ ಹತ್ತು ತಿಂಗಳಗಳು ಬೆನ್ನು ಬಿಡದೆ ಕಾಡಿದರೂ ಈಕೆಯು ಮದುವೆಯಾಗಲು ನಿರಾಕರಿಸಿದ್ದಳು. ಅದಕ್ಕೆ ಹುಡುಗ ಹತಾಶನಾಗಿ ಸೇಡು ತೀರಿಸಿಕೊಳ್ಳಲು ಸಂಚು ಹಾಕಿ, ಶಾಲೆಯಿಂದ ಈಕೆ ಬರುತ್ತಿರುವಾಗ ಇತನು ಮತ್ತು ಆತನ ಪರಿಚಯಸ್ಥ ಹುಡುಗಿ ಸೇರಿಕೊಂಡು ಕೆಳಗೆ ತಳ್ಳಿ ಮುಖಕ್ಕೆ ಆಸಿಡ್ ಹಾಕಿ ಓಡಿಹೋಗುತ್ತಾರೆ. ಜೋರಾಗಿ ಕೆಳಗೆ ತಳ್ಳಿದ್ದರಿಂದ ಈಕೆಗೆ ಪ್ರಜ್ಞೆ ತಪ್ಪುತ್ತದೆ. ಎಚ್ಚರವಾದಗ ಮೈಯಲ್ಲಾ ಉರಿ ಎಂದು ಒಂದೆ ಸಮ ಚಿರಾಡುತ್ತಾಳೆ. ಮುಖದ ಚರ್ಮ ಮೆಣದ ತರಹ ಕರಗುತ್ತಾ ಕೆಳಗೆ ಬೀಳುತ್ತಿರುವುದನ್ನು ಜನ ಸುಮ್ಮನೆ ನೋಡುತ್ತಿದ್ದರೆ , ವಿನಃ ಯಾರು ಸಹಾಯ ಮಾಡುವುದಿಲ್ಲ. ಒಬ್ಬ ವಯಸ್ಸಾದ ವ್ಯಕ್ತಿ ಬಂದು ತನ್ನ ಬಳಿಯಿದ್ದ ಒಂದು ಬಾಟಲ ನೀರನ್ನು ಈಕೆಯ ಮುಖಕ್ಕೆ ಹಾಕಿ, ಆಬ್ಯುಂಲೆನ್ಸಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲು ಮಾಡುತ್ತಾನೆ. ಅನಂತರ ತಂದೆ ತಾಯಿ ಆಸ್ಪತ್ರೆಗೆ ಬರುತ್ತಾರೆ. ತಂದೆಗೆ ಅಪ್ಪಿಕೊಂಡು ಅಳುವಾಗ ತಂದೆಯ ಶರ್ಟ್ ಸುಟ್ಟು ಹೋಗುತ್ತದೆ. (ಈ ಘಟನೆ ನಡೆದಿದ್ದು 2005ರಲ್ಲಿ)

      ಆಸ್ಪತ್ರೆಯಲ್ಲಿ ಸುಮಾರು 25 ಬಕೇಟ ನೀರನ್ನು ಹಾಕಿ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ. ಈಕೆ ಆ ಸಮಯದಲ್ಲಿ ಅನುಭವಿಸಿದ್ದ ನರಕಯಾತನೆಯನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲದ ಸಂಗತಿ. ಆರು ತಿಂಗಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಮನೆಗೆ ಬಂದಾಗ ಲಕ್ಷ್ಮಿ ತಂದೆ ಮನೆಯಲಿರುವ ಕನ್ನಡಿಗಳನ್ನು ತಗೆದು ಹಾಕಿಸಿದ್ದರು. ಈಕೆಗೆ ನೋಡಿದ ಸಂಬಂಧಿಕರು ಮತ್ತು ಸ್ನೇಹಿತರು ಭಯಪಟ್ಟು ಮನೆಗೆ ಬರುತ್ತಿರಲಿಲ್ಲ. ಸುಮಾರು ಎರಡು ವರ್ಷ ಮನೆಯಲ್ಲಿ ಇದ್ದಳು. ಜನ ಈಕೆಯನ್ನು ನೋಡಿ ‘ಯಾರು ಮದುವೆಯಾಗುತ್ತಾರೆ? ಯಾರು ಜೀವನ ಪರ್ಯಂತ ನೋಡಿಕೊಳ್ಳುತ್ತಾರೆ? ಭೂಮಿಗೆ ಭಾರ’ ಹೀಗೆ ಹಲವಾರು ಮಾತುಗಳಿಂದ ಮನನೋಯಿಸುವವರೆ! ಹಾಗಾಗಿ ಒಂದು ದಿನ ತನ್ನ ಮುಖವನ್ನು ನೋಡಿಕೋಳ್ಳಬೇಕೆಂದು, ಪ್ರಯತ್ನಪಟ್ಟು ಕನ್ನಡಿಯನ್ನು ಹುಡುಕಿ ನೋಡುತ್ತಾಳೆ. ಈಕೆಗೆ ನಂಬಿಕೆಯಿಲ್ಲದಂತೆ ಮುಖ ವಿಕಾರವಾಗಿ ಸುಟ್ಟು ಹೋಗಿರುತ್ತದೆ. ತಾನು ಹೌದಾ! ಅಲ್ಲವಾ ಅಂದುಕೊಂಡು ವೀಪರಿತ ದುಖಿಃಸುತ್ತಾಳೆ. ಆತ್ಮ ಹತ್ಯೆ ಮಾಡಿಕೊಳ್ಳಬೇಕೆಂದು ಪ್ರಯತ್ನಪಡುತ್ತಾಳೆ. ಆ ಸಮಯದಲ್ಲಿ ತಂದೆ ತಾಯಿಯರ ಕುರಿತು ಆಲೋಚನೆ ಮಾಡುತ್ತಾಳೆ. ಅಷ್ಟೊಂದು ಕಷ್ಟದ ನಡುವೆಯೂ ಎಲ್ಲ ಸಂಬಂಧಿಕರನ್ನು ಎದುರಿಸಿಕೊಂಡು ತನ್ನನ್ನು ಬದುಕಿಸಿದ್ದಾರೆ. ಅಂತಹ ತಂದೆ ತಾಯಿಗೆ ಮೋಸ ಮಾಡುವುದು ಬೇಡವೆಂದುಕೊಂಡು, ತಂದೆಗೆ ಹೋಗಿ ಪ್ರಶ್ನಿಸುತ್ತಾಳೆ. ‘ಅಪ್ಪಾ ಇಂಥಹ ಮುಖ ಇಟ್ಟುಕೊಂಡು ಬದುಕುವುದಕ್ಕಿಂತಲೂ ಸಾಯುವುದು ಒಳ್ಳೆಯದಲ್ಲವೆ? ಎಂದಾಗ ತಂದೆಯು ಈಕೆಯನ್ನು ತಬ್ಬಿಕೊಂಡು ಇಲ್ಲ ಮಗಳೇ ನೀನು ಸಾಯಬಾರದು. ಈ ಜಗತ್ತಿನಲ್ಲಿ ಇಂದು ನಿನ್ನ ಮುಖ ನೋಡಿ ದೂರ ಓಡುವ ಜನ, ಮುಂದೆ ಒಂದು ದಿನ ನಿನ್ನನೋಡಬೇಕೆಂದುಕೊಂಡೆ ಬರುತ್ತಾರೆ. ನೀನು ಧೈರ್ಯದಿಂದ ಓಡಾಡಬೇಕು. ನೀನು ಯಾವ ತಪ್ಪು ಮಾಡಿಲ್ಲ. ತಪ್ಪು ಮಾಡಿದವರು ಮುಖ ಮುಚ್ಚಿಕೊಂಡು ಓಡಾಡಬೇಕು ಎಂದರು’. ಅಂದಿನಿಂದ ಈಕೆಯು ದೈರ್ಯದಿಂದ ಮನೆಯಿಂದ ಹೊರಗಡೆ ಓಡಾಡಿ ಆಸಿಡ್ ಹಾಕಿದ ಹುಡುಗನ ವಿರುದ್ಧ ಕೇಸ್ ದಾಖಲಿಸಿ ಅವನಿಗೆ ಶಿಕ್ಷೆ ಕೊಡಿಸುತ್ತಾಳೆ.

        ಅರ್ಧಕ್ಕೆ ನಿಂತ ತನ್ನ ಶಿಕ್ಷಣವನ್ನು ಮುಂದೆ ವರಿಸಿ 2007ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆಯುತ್ತಾಳೆ. ಹತ್ತನೇ ತರಗತಿ ಮುಗಿದ ಬಳಿಕ ಕಂಪ್ಯೂಟರ್ ತರಬೇತಿ ಪಡೆಯುತ್ತಿರುವಾಗಲೇ ತಂದೆಯು ಹೃದಯಾಘಾತದಿಂದ ವಿಧಿವಶರಾಗುತ್ತಾರೆ. ಈಕೆಯ ತಂದೆಯು ಕುಟುಂಬದ ಸಂಪೂರ್ಣ ಜವಾದ್ಬಾರಿಯನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರು. ತಂದೆಯ ಮರಣದ ನಂತರ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟವಾಗುತ್ತದೆ. ಆಗ ಅನಿವಾರ್ಯವಾಗಿ ಕೆಲಸ ಹುಡಕಲು ಪ್ರಾರಂಭಿಸುತ್ತಾಳೆ. ಆದರೆ ಕೆಲಸ ಹುಡುಕಲು ಹೋದಾಗ ಜನ ಕೆಲಸ ಕೊಡುವುದರ ಬದಲಿಗೆ ಅವಮಾನ ಮಾಡಿ ಕಳುಹಿಸುತ್ತಿದ್ದರು. ಅಂತಹ ದುಖಃದ ಸಮಯದಲ್ಲಿ “ಸ್ಟಾಪ್ ಆಸಿಡ್ ಅಟ್ಯಾಕ್” (Sಂಂ- Sಣoಠಿ ಂಛಿiಜ ಂಣಣಚಿಛಿಞ) ಎಂಬ ಆಂದೋಲನವು ಈಕೆಗೆ ಬೆಂಬಲವಾಗಿ ನಿಲ್ಲುತ್ತದೆ. ಈ ಆಂದೋಲನವು ಆಲೋಕ ದಿಕ್ಷಿತ್ ಅವರ ನಾಯಕತ್ವದಲ್ಲಿ ನಡೆಯುತಿತ್ತು. ಆಸಿಡ್ ದಾಳಿಗೆ ಒಳಗಾದ ಮಹಿಳೆಯರನ್ನು ವಿಕ್ಟಮ್ ಆಗಿ ನೋಡಬಾರದು ಅವರನ್ನು ಸರ್ವೈವರ್‍ನಂತೆ ನೋಡಬೇಕು. ಆಸಿಡ್ ದಾಳಿಗೆ ಒಳಗಾದ ಹೆಣ್ಣುಮಕ್ಕಳಿಗೆ ಪುರ್ನವಸತಿಯನ್ನು ಕಲ್ಪಸಿಕೊಡಬೇಕು. ಆಸಿಡ್ ಮಾರಾಟದ ಮೇಲೆ ನಿರ್ಬಂಧನೆಗಳನ್ನು ಹೇರಬೇಕೆಂದು ಹೋರಾಟ ಪ್ರಾರಂಭಿಸುತ್ತಾರೆ. ಈ ಹೋರಾಟದಲ್ಲಿ ಲಕ್ಷ್ಮಿಯು ಆಸಿಡ್ ದಾಳಿಗೆ ಒಳಗಾದ ಮಹಿಳೆಯರ ನೆತೃತ್ವವನ್ನು ವಹಿಸುತ್ತಾಳೆ. ಅಂದಿನಿಂದ ಲಕ್ಷ್ಮಿಯು ಮಹಿಳಾ ಪರವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತಾಳೆ. ಇವರು ಮಾಡಿದ ಆಂದೋಲನದ ಫಲವಾಗಿ ಆಸಿಡ್ ಮಾರಾಟ ಮಾಡುವವರು ಲೈಸನ್ಸ್ ಪಡೆದಿರಬೇಕು ಮತ್ತು ಆಸಿಡ್ ಖರೀದಿಸುವವರು ಕಡ್ಡಾಯವಾಗಿ ತಮ್ಮ ಗುರುತಿನ ಚೀಟಿಯನ್ನು ನೀಡಬೇಕು ಎಂದು ಸುಪ್ರಿಮ್ ಕೋರ್ಟ ನಿರ್ಬಂಧನೆಯನ್ನು ಹೇರುತ್ತದೆ.

       ಲಕ್ಷ್ಮೀಯು ಆಸಿಡ್ ದಾಳಿಗೆ ಒಳಗಾದ ಮಹಿಳೆಯರನ್ನು ಕುರಿತು ಆಂದೋಲನದ ಜೊತೆಗೆ ಸಿರೋಸ್( Sheroes) ಎಂಬ ಸಂಸ್ಥೆಯನ್ನು ಪ್ರಾರಂಭಿಸುತ್ತಾಳೆ. ಹೇಗೆ ಈ ಸಮಾಜದಲ್ಲಿ ಹೀರೋಜ್ (Heroes) ಇದ್ದಾರೆ ಅದೇ ರೀತಿ ಸಿರೋಜ್ ಯಾಕೆ ಆಗಬಾರದೆಂದುಕೊಂಡು ತನ್ನ ಸಂಸ್ಥೆಯನ್ನು ಪ್ರಾರಂಭಿಸಿದ್ದಾಳೆ. ಜೊತೆಗೆ ಟಿ.ವ್ಹಿ ಚಾನಲೊಂದರಲ್ಲಿ ಉಡಾನ್ ಎಂಬ ಕಾರ್ಯಕ್ರಮವನ್ನು ಕೂಡ ನಿರ್ವಹಣೆ ಮಾಡಿದ್ದಾಳೆ. ಈಕೆ ಮಾಡಿದ ಕೆಲಸವನ್ನು ನೋಡಿ ಅಮೇರಿಕಾ ಸರ್ಕಾರ ಈಕೆಗೆ 2014ರಲ್ಲಿ ಇಂಟರ್‍ನ್ಯಾಷನಲ್ ವುಮೇನ್ ಆಫ್ ಕರೇಜ್ ಅವಾರ್ಡನ್ನು ನೀಡಿ ಗೌರವಿಸಿದೆ. ಭಾರತ ಸರ್ಕಾರವು 2017ರಲ್ಲಿ ವುಮೇನ್ ಟ್ರಾನ್ಸಫರ್‍ಮಿಂಗ್ ಇಂಡಿಯಾ ಅವಾರ್ಡನ್ನು ನೀಡಿ ಗೌರವಿಸಿದೆ. 

       ಸಮಾದಲ್ಲಿ ಪುರುಷರು ಎಂತಹ ಘೋರ ಕೃತ್ಯಗಳನ್ನು ಮಾಡಿದರೂ ಸಮಾಜ, ಕುಟುಂಬ ಅವರನ್ನು ಅಪರಾಧಿಯಂತೆ ಕಾಣುವುದಿಲ್ಲ. ಏನು ತಪ್ಪು ಮಾಡದೇ ಇರುವಂತಹ ಮಹಿಳೆಯನ್ನು ಅಪರಾಧಿಯಂತೆ ಕಾಣುತ್ತ್ತದೆ. ಅಪರಾಧ ಮಾಡಿದ ತಪ್ಪಿಗೆ ತಲೆ ತಗ್ಗಿಸಿ ಓಡಾಡಬೇಕಾದ ಪುರಷ, ಅವನು ತಲೆ ಎತ್ತಿ ಓಡಾಡುತ್ತಾನೆ. ಅದೇ ನಿರಾಪರಾಧಿಯಾದ ಮಹಿಳೆಗೆ ಇಲ್ಲಸಲ್ಲದ ಅಪಾದನೆಗಳನ್ನು ಹೊರಿಸಿ ಚುಚ್ಚು ಮಾತುಗಳಿಂದ ಮನನೋವಿಸುವಂತಹದ್ದನ್ನು ಕಾಣಬಹುದು. ಮುಖ ಮುಚ್ಚಿಕೊಂಡು ಓಡಾಡಬೇಕು, ಆತ್ಮ ಹತ್ಯೆ ಮಾಡಿಕೊಳ್ಳಬೇಕು, ಭೂಮಿಗೆ ಭಾರ, ಯಾರು ಮದುವೆಯಾಗುತ್ತಾರೆ, ಉಪಯೋಗವಿಲ್ಲದವಳು ಎಂದು ನಿರ್ಬಂಧನೆಗಳನ್ನು ಸಮಾಜ ಮಹಿಳೆಯ ಮೇಲೆ ಹೇರುತ್ತದೆ. ಅಪರಾಧಿ ಪುರುಷ ಜಾಮೀನನ ಮೇಲೆ ಹೊರಗೆ ಬಂದ ತಕ್ಷಣ ಮದುವೆ ಮಾಡಿಕೊಳ್ಳುತ್ತಾನೆ. ಇಂತಹ ಅಪರಾಧಿಗಳಿಗೆ ಹೆಣ್ಣು ಕೊಟ್ಟು ಮದುವೆ ಮಾಡುವುದನ್ನು ನೋಡಿದರೆ ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಯಾವ ರೀತಿ ಸ್ಥಾನಮಾನ ಇದೆ ಎಂಬುದು ತಿಳಿಯುತ್ತದೆ. 


ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top