ಪುಸ್ತಕ ವಿಮರ್ಶೆ

ಕಾಮೋಲವೆಂಬ ಅಂತರಂಗದ ಶೋಧ.

Image may contain: 1 person, close-up

ಸ್ಮಿತಾ ಅಮೃತರಾಜ್

ಕೃತಿ: ಕಾಮೋಲ (ಕಥಾ ಸಂಕಲನ)

ಲೇಖಕ: ಅಜಿತ್ ಹರೀಶಿ

ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ  ಬರಹಗಾರರಾಗಿರುವ ಡಾ. ಅಜೀತ್ ಹರೀಶಿ ಶಿವಮೊಗ್ಗದ ಸೊರಬದವರು. ಕೃಷಿ, ವೈದ್ಯವೃತ್ತಿಯ ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಕತೆ, ಕವಿತೆ ಬರೆಯುತ್ತಾ ತನ್ನ ಸೃಜನಶೀಲತೆಯನ್ನು ಬತ್ತದಂತೆ ಕಾಪಿಟ್ಟುಕೊಂಡಿರುವ  ಅಜೀತ್ ಹೆಗಡೆಯವರು ಈಗಾಗಲೇ ತಮ್ಮ ಬರಹಕ್ಕೆ ಅನೇಕ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡವರು.   ಅವರ  ವೈವಿಧ್ಯಮಯ ಬರಹದ ಓಘದ ಕುರಿತು ನನಗೆ ಯಾವೊತ್ತು ತೀರದ ಅಚ್ಚರಿ.

ಈಗಷ್ಟೇ ಓದಿ ಮುಗಿಸಿದ ,ವಿಶಿಷ್ಟ ಕುತೂಹಲ ಶಿರೋನಾಮೆ ಹೊಂದಿದ ಅವರ ಕಥಾಸಂಕಲನ ಕಾಮೋಲ. ಪ್ರೀತಿ,ಪ್ರೇಮ, ಕಾಮ,ಕ್ರೌರ್ಯ, ಹೀಗೆ  ಮನುಷ್ಯನ ಒಳಗೆ ಅಡಗಿರುವ ಅನೇಕ ಸುಪ್ತ ಭಾವಗಳನ್ನೆಲ್ಲಾ ಅನಾವರಣಗೊಳಿಸುತ್ತಾ ಹೋಗುತ್ತದೆ. ನಾವು ಕಂಡ ಕೆಲವೊಂದು ನಮ್ಮ ಸುತ್ತ ಮುತ್ತಲಿನ ಚರ್ಯೆಗಳು ಕೂಡ ಇದೇ ಕತೆಯ ಪಾತ್ರದಂತೆ ಭಾಸವಾಗುತ್ತದೆ. ಇದು ಅಜಿತ್ ರವರ ಕಥನಗಾರಿಕೆಯ ಕುಶಲತೆಗೆ ಸಾಕ್ಷಿ. ಮನುಷ್ಯನ ಪ್ರತಿಯೊಂದು ಕ್ರಿಯೆಯ ಹಿಂದೆ ಅವನಿಗೆ ದಕ್ಕಿದ ,ಬದುಕಿನಲ್ಲಿ ಘಟಿಸಿ ಹೋದ ಕೆಲವೊಂದು ಅಘಾತಕಾರಿ ಸಂಗತಿಗಳು ಆಳವಾಗಿ ಬೇರು ಬಿಟ್ಟು ಅವನಿಗೂ ಗೊತ್ತಿಲ್ಲದೆ  ಹೇಗೆ ಪ್ರಕಟಗೊಳ್ಳುತ್ತವೆ ಅನ್ನುವಂತದ್ದು ನಮಗೆ  ಕತೆಗಳನ್ನು ಓದುತ್ತಾ ಹೋದ ಹಾಗೆ ಮನದಟ್ಟಾಗುತ್ತದೆ. ಬಹುಷ; ತಮ್ಮ ವೃತ್ತಿಯಲ್ಲಿ ಅವರು ಇಂತಹ ವ್ಯಕ್ತಿತ್ವದವರಿಗೆ ಮುಖಾಮುಖಿಯಾಗುವ ಕಾರಣ ಜೊತೆಗೆ ವೈಜ್ಞಾನಿಕ ತಿಳುವಳಿಕೆ ಕೂಡ ಇರುವ ಕಾರಣ ಇಲ್ಲಿಯ ಕತೆಗಳು ಶೋಧನೆಗೆ ತೊಡಗುತ್ತವೆ. ಕಂಡುಂಡ ಘಟನೆಗಳನ್ನು ಕಲಾತ್ಮಕವಾಗಿ ಹೊರ ಹಾಕುವುದರಲ್ಲಿ ಅಜಿತ್ ಹೆಗಡೆಯವರು ಕುಶಲಿಗರು.  ಬದುಕಿನ ಪ್ರತಿಯೊಂದು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ದಿಟ್ಟಿಸುತ್ತಾ ಅದರ ಒಳ ಹೊರಗನ್ನು ಬಗೆಯುವ ಇಲ್ಲಿನ ಕತೆಗಳಲ್ಲಿ ಜೀವಂತಿಕೆ ಇದೆ. ಒಟ್ಟು ೧೪ ಕತಾಗುಚ್ಚವಿರುವ ಈ ಕತಾಸಂಕಲನದಲ್ಲಿ ಮನುಷ್ಯ ಸಂಬಂಧದ ವಿವಿಧ ಮಗ್ಗುಲುಗಳ ಪರಿಚಯವಿದೆ. ಲೌಕಿಕ ಬದುಕಿನಲ್ಲಿ ಪರಿಶುದ್ಧ ಪ್ರೇಮಕ್ಕೆ ಅವಕಾಶವಿಲ್ಲದಾಗ  ಅಕ್ಕನಂತೆ ಅಲೌಕಿಕ ಪೇಮದಲ್ಲೇ ಮನಸನ್ನು ನೆಲೆಗೊಳಿಸಿ ಅದರಲ್ಲಿ ನೆಮ್ಮದಿಯನ್ನು ಹುಡುಕುವ  ಇಲ್ಲಿನ ಕತೆ ಒಂದು ವಿಭಿನ್ನ ಪ್ರಯತ್ನ.  ಮನುಷ್ಯನ ಒಳಗಿನ  ಭಾವದ ಸೆಲೆ ಹೇಗೆ ಬದುಕನ್ನು ಅರಳಿಸಬಲ್ಲದು ಅನುವಂತದ್ದನ್ನು ಹೇಳುತ್ತಾ ಕವಿತೆಯ ಸೆಲೆ ಅನ್ನುವಂತದ್ದು ನೋವು ನಿವಾರಣೆಯಂತೆ ಅನ್ನುವಂತದ್ದನ್ನ ಬರೆಯುತ್ತಾರೆ. ಸ್ವತ; ಕತೆಗಾರರು ಕವಿಯಾದ ಕಾರಣ ಕವಿತೆಯ ಸಾಂಗತ್ಯದಿಂದ ಬದುಕು ಹಸನಾಗುವುದೆಬುದನ್ನು ಕಟ್ಟಿಕೊಡುತ್ತಾರೆ. ಇಲ್ಲಿಯ ಕಾಡುವ  ಆಯಿಯ ಕತೆಯ ತುಂಬಾ ವಿವರಣೆಯಂತೆ ಅನ್ನಿಸಿದರೂ ಓದಿ ಮುಗಿಸಿದಾಗ  ಅಲ್ಲಿರುವ ಅಂತ;ಕರಣ ಕಣ್ಣಂಚನ್ನು ತೇವಗೊಳಿಸಿ ಬಿಡುತ್ತದೆ. ಮನುಷ್ಯನ ವರ್ತನೆಗಳನ್ನು ವಿಭಿನ್ನ ನೆಲೆಯಲ್ಲಿ ಶೋಧಿಸುತ್ತಾ ಅಂತರಂಗದ ತುಮುಲಗಳನ್ನು ಚಿತ್ರಿಸುವ ಕೆಲಸವನ್ನ ಇಲ್ಲಿನ ಕತೆಗಳು ಮಾಡಿವೆ. ಹೊಸ ದೃಷ್ಟಿಕೋನದಿಂದ ಬದುಕನ್ನು ನೋಡಲು ಪ್ರೇರೇಪಿಸುವ ಇಲ್ಲಿನ ಕತೆಗಳು ಸ್ನೇಹಕ್ಕೆ ಯಾವುದೇ ಸಿದ್ಧಾಂತಗಳ ಕಟ್ಟುಪಾಡುಗಳಿರಬಾರದು  ಅನ್ನುವಂತದ್ದನ್ನ ಕಟ್ಟಿಕೊಡುತ್ತಾ ಮಾನವೀಯ ಪ್ರೇಮದ ನೆಲೆಯಲ್ಲಿ ಕತೆಗಳು ಪ್ರಕಟಗೊಳ್ಳುತ್ತವೆ. ಪ್ರಾಧೇಶಿಕ ಭಾಷೆಯನ್ನು ಕತೆಗಳ ಮೂಲಕ ಸಮರ್ಥವಾಗಿ ದುಡಿಸಿಕೊಂಡ  ಅಜಿತ್ ರವರ ಪ್ರತಿಭೆ, ಶ್ರದ್ಧೆ, ಶ್ರಮ ಶ್ಲಾಘನೀಯ. ಕಾಮೋಲ ಓದುತ್ತಾ ಹೋದಂತೆ ಮನುಷ್ಯನ ದು;ಖ, ಸಂಕಟ, ಪ್ರೇಮ,ಕಾಮ, ಎಲ್ಲ ತಳಮಳಗಳಿಗೂ  ಹೊಸ ಅರ್ಥ ಕಂಡುಕೊಳ್ಳುವಲ್ಲಿ ಕತೆ ಯಶಸ್ವಿಯಾಗಿವೆ.ಅಜಿತ್ ಹೆಗಡೆಯವರ ಕಥನ ಕುತೂಹಲ ಮತ್ತಷ್ಟು ಕತೆಗಳಿಗೆ ಸಾಕ್ಷಿಯಾಗಲಿ.

    ************

2 thoughts on “ಪುಸ್ತಕ ವಿಮರ್ಶೆ

  1. ಧನ್ಯವಾದಗಳು ಸ್ಮಿತಾ ಅಮೃತರಾಜ್. ಪ್ರಕಟಿಸಿದ ಸಂಗಾತಿ ಆನ್ಲೈನ್ ಪತ್ರಿಕೆಗೆ ಕೂಡ ಧನ್ಯವಾದಗಳು.

  2. ಪುಸ್ತಕಕ್ಕೆ ತಕ್ಕ ವಿಮರ್ಶೆ ಸ್ಮಿತಾ. ಅಭಿನಂದನೆ ಇಬ್ಬರಿಗೂ

Leave a Reply

Back To Top