ಅಂಕಣ ಸಂಗಾತಿ
ನೆಲಸಂಪಿಗೆ
ಕಾಡಿನ ಸಂಗೀತ
ಅವತ್ತೊಂದು ವಿಚಿತ್ರ ಅನುಭವವಾಯಿತು. ಮನುಷ್ಯನ ಸುಪ್ತ ಮನಸ್ಸನ್ನು ಗ್ರಹಿಸಲು ಇದು ಒಳ್ಳೆಯ ಉದಾಹರಣೆ. ಅಂದು ಫೆಬ್ರವರಿ ಎರಡು. ಮನೆಯೆದುರಿನ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾದ ನಮ್ಮದಾಸುಮರಿ ಸತ್ತಿರುವುದು ನಿಜವೆಂದು ಒಪ್ಪಿಕೊಳ್ಳಲು ನನಗೆ ಎರಡು-ಮೂರು ಗಂಟೆಗಳೇ ಬೇಕಾದವು. ಅಷ್ಟು ಹೊತ್ತು ಅದರ ಶವವನ್ನು ಕಾಲ ಮೇಲೆ ಹಾಕಿಕೊಂಡು ಚಿಕ್ಕ ಮಕ್ಕಳ ತರಹ ಅತ್ತಿದ್ದೆ. ಆಮೇಲೆ ಒತ್ತಾಯಪೂರ್ವಕವಾಗಿ ಮನಸ್ಸಿಲ್ಲದ ಮನಸ್ಸಿನಿಂದ ಮನೆಯವರೆಲ್ಲರ ಜೊತೆ ಸೇರಿ ದಾಸುವನ್ನು ಮಣ್ಣು ಮಾಡಿ ಸ್ನಾನ ಮಾಡಿಕೊಂಡು ಬಂದು ಹೊರಗೆ ಕಾಡನ್ನು ನೋಡುತ್ತ ಸುಮ್ಮನೇ ನಿಂತಿದ್ದಾಗ ರಾತ್ರಿ ಸುಮಾರು ಎಂಟು ಗಂಟೆ. ಆ ಹೊತ್ತಿಗೆ ಸರಿಯಾಗಿ ಮನೆಯ ಎಡಗಡೆ ಹಾಡಿಯಿಂದ ಅಂದರೆ ದಾಸುವನ್ನು ಮಣ್ಣು ಮಾಡಿದ ಮೂಲೆ ಇರುವ ಕಡೆಯಿಂದಲೇ ಎರಡು ಗುಮ್ಮಗಳ ದನಿ ಕೇಳಿಸಿತು! “ಊಹೂಂ ಹೂಂ” “ಊಂ ಹೂಂ” ಎಂಬ ಆ ಸ್ವರಗಳು ಅಚ್ಚರಿಯೆಂಬಂತೆ ಮನೆಗೆ ತೀರಾ ಹತ್ತಿರದಲ್ಲೇ ಗಟ್ಟಿಯಾಗಿ ಕೇಳುತ್ತಿತ್ತು. ಈ ಮನೆಗೆ ಬಂದ ಮೇಲೆ ಅಷ್ಟು ಹತ್ತಿರದಲ್ಲಿ ಸ್ಪಷ್ಟವಾಗಿ ಗುಮ್ಮನ ದನಿ ಕೇಳಿರಲಿಲ್ಲ. ದೂರದಿಂದ ಮೂರ್ನಾಲ್ಕು ಸಲ ಬೇರೆ ವಿಧದ ಗುಮ್ಮನ ಕೂಗು ಕೇಳಿಸಿದ್ದಿದೆ. ಜೀವಂತಿಕೆಯಿಂದ ಪುಟಿಯುತ್ತಿದ್ದ ದಾಸು ಕ್ಷಣವೊಂದರಲ್ಲಿ ಸಾವಿನ ಮನೆಗೆ ನಡೆದ ದುರಂತವನ್ನು ಚಿಂತಿಸಿ ಶೂನ್ಯ ಆವರಿಸಿದ್ದ ನನ್ನಲ್ಲಿ ಯಾವ ಉತ್ಸಾಹವೂ ಉಳಿದಿರಲಿಲ್ಲ. ಇಲ್ಲವಾಗಿದ್ದರೆ ಅಷ್ಟು ಹೊತ್ತಿಗೆ ಆ ಧ್ವನಿಯನ್ನು ರೆಕಾರ್ಡ್ ಮಾಡುವ ಆತುರ ತೋರಿಸಿಯಾಗಿರುತ್ತಿತ್ತು ನಾನು. ಆದರೂ ಇನ್ನಷ್ಟು ಸ್ಪಷ್ಟವಾಗಿ ಕೇಳಿಸಿಕೊಳ್ಳುವ ಎಂದು ಮುಂದೆ ಮುಂದೆ ಹೋದೆ. ಆಗ ಕಿಟಕಿಯಲ್ಲಿ ಹಣಕಿದ ಮನೆಯವರು “ಅಲ್ಲೇಕೆ ಹೋಗುತ್ತೀ, ಕತ್ತಲಲ್ಲಿ?” ಎಂದರು. “ಗುಮ್ಮಕೂಗುತ್ತಿದೆ” ಎಂದೆ. “ಹೂಂ, ಗುಮ್ಮಅಲ್ಲ; ಬಾ ಒಳಗೆ” ಅಂದರು ಗಂಭೀರವಾಗಿ! ಅವರ ಆ ಒಂದೇ ಮಾತಿಗೆ ಅರೆಗಳಿಗೆ ನಾನು ಬೆಚ್ಚಿಬಿದ್ದು ಹೆದರಿ ಹೋದೆ. ಇಡೀ ಮೈಯ್ಯೆಲ್ಲ ಭಯ ವ್ಯಾಪಿಸಿತು…ಆಚೀಚೆ ನೋಡಿದೆ, ಕಗ್ಗತ್ತಲನ್ನು ದಿಟ್ಟಿಸಿದೆ; ಏನೋ ಆತಂಕವೆನಿಸಿತು. ಭೂತ, ಪ್ರೇತ, ಪಿಶಾಚಿ ಎಂಬೆಲ್ಲ ನಂಬಿಕೆಗಳು ಯಾವತ್ತೂ ನನಗಿಲ್ಲ. ಆದರೆ ಆವತ್ತು ಮಿಂಚಿನಂತೆ ನನ್ನೊಳಗೆ ದಾಸುವಿನ ಸಮಾಧಿ, ಕೂಗುತ್ತಿರುವ ಗುಮ್ಮಗಳು, ಗಾಢ ಕತ್ತಲು, ದೆವ್ವ ಹೀಗೆ ಏನೇನೋ ಕಲಸುಮೇಲೋಗರ ನಡೆದಿರಬೇಕು. ಬಹುಶಃ ಯಾವತ್ತೋ ಎಲ್ಲೋ ಕೇಳಿದ, ಓದಿದ ‘ಗುಮ್ಮಗಳು ಸತ್ತವರನ್ನು ಪ್ರತಿನಿಧಿಸುತ್ತವೆ’ ಎಂಬರ್ಥ ಬರುವ ಮಾತು ದಾಸು ಗುಮ್ಮಗಳ ರೂಪದಲ್ಲಿ ಸಂಭಾಷಿಸುತ್ತಿರಬಹುದು ಎಂದು ನನಗೆ ಅರ್ಥ ಮಾಡಿಸಿತ್ತು! ಆದರೆ ಮನೆಯವರು ಹೇಳಿದ್ದು ಕತ್ತಲಲ್ಲಿ ಹಾವು ಮುಂತಾದವು ಇರಬಹುದು ಎಂಬರ್ಥದಲ್ಲಿ! ಸ್ವಲ್ಪ ಹೊತ್ತಿನಲ್ಲಿ ನನ್ನ ಪ್ರಜ್ಞೆ ಎಚ್ಚೆತ್ತುಕೊಂಡಿತು! ಎಂಥಾ ಯೋಚನೆ ನನ್ನದು ಎಂದು ಮೈ ಕೊಡವಿಕೊಂಡು ತುಸು ಹೊತ್ತು ಗುಮ್ಮಗಳ ದನಿ ಕೇಳಿ ಯಾವುದನ್ನೂ ಆಸ್ವಾದಿಸಲು ಸಾಧ್ಯವಿಲ್ಲದ ಮನಸ್ಥಿತಿಯಲ್ಲಿ ಒಳಗೆ ಹೋದೆ. ದುರ್ಬಲ ಮನಸ್ಸು ಎಷ್ಟು ಬೇಗ ಮೌಢ್ಯದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಎಂಬ ಸತ್ಯ ಸಾಕ್ಷಾತ್ ಅನುಭವದ ರೂಪದಲ್ಲೇ ಮನದಟ್ಟಾಯಿತು.
ಗಾಳಿ ಮಳೆ ಭೋರಿಡುತ್ತಿರುವ ಈ ದಿನಗಳಲ್ಲಿ ರೋಮಾಂಚನಗೊಳಿಸುವ ಗುಮ್ಮಗಳ ಧ್ವನಿಯನ್ನು ಕೇಳಿಸಿಕೊಳ್ಳಲು ಆಸೆಯಾಗುತ್ತಿದೆ. ಆದರೆ ಯಾಕೋ ನಾಲ್ಕು ತಿಂಗಳಿನಿAದ ಅವುಗಳ ಸುದ್ಧಿಯಿಲ್ಲ. ಸುತ್ತಮುತ್ತ ಸ್ವಲ್ಪ ಕಾಡು ಗುಡ್ಡ ಇರುವುದರಿಂದ ಇಲ್ಲಿ ಗುಮ್ಮಗಳ ಕೂಗಿನ ವಿಶಿಷ್ಟ ಸುಖ ನಮಗಿದೆ ಎನ್ನುವುದೇ ಒಂದು ದೊಡ್ಡ ಸಂತಸ. ಮೊದಲು ಪೇಟೆಯ ಆಸುಪಾಸಿನಲ್ಲಿ ನಾವಿದ್ದ ಬಾಡಿಗೆ ಮನೆಗಳಲ್ಲಿ ಈ ಸೌಲಭ್ಯ ಇರಲಿಲ್ಲ. ನನ್ನ ಬಾಲ್ಯದ ರಾತ್ರಿಗಳಂತೂ ಗುಮ್ಮನ ಕೂಗು, ಮಳೆಗಾಲದ ಕಪ್ಪೆಗಳ ಸಂಗೀತದೊಂದಿಗೆ ಗಾಢವಾಗಿತ್ತು. ಸಣ್ಣವಳಿದ್ದಾಗ ಗುಮ್ಮಎಂದರೆ ಹಕ್ಕಿ ಎಂದು ನನಗೆ ಗೊತ್ತಿರಲೇ ಇಲ್ಲ. ಗುಮ್ಮನ ಚಿತ್ರ ಬಿಡಿಸು ಎಂದು ಹಿರಿಯರು ಹೇಳಿದರೆ ಪುಟ್ಟ ಕೈಗಳಲ್ಲಿ ಎರಡು ದೊಡ್ಡ ಕಣ್ಣುಗಳುಳ್ಳ ಮುಸುಕುಧಾರಿ ವೇಷವನ್ನು ಬರೆಯುತ್ತಿದ್ದೆ. ದೆವ್ವ, ಭೂತದಂತೆ ಏನೋ ಒಂದು ಹೆದರಿಸುವ ಜೀವಿಯೇ ಗುಮ್ಮ ಎಂಬ ಕಲ್ಪನೆ ಎಲ್ಲ ಮಕ್ಕಳಂತೆ ನನಗೂ ಇತ್ತು. ತೋಟದ ಕಡೆಯಿಂದ ಗುಮ್ಮಗಳ ಕೂಗು ಕೇಳಿದಾಗ ಅಮ್ಮಮ್ಮನ ಜೊತೆ ಹೊದಿಕೆಯನ್ನು ಗಟ್ಟಿಯಾಗಿ ಮುಚ್ಚಿಕೊಂಡು ಹಾಸಿಗೆಯಲ್ಲಿ ಅಡಗಿಕೊಳ್ಳುತ್ತಿದ್ದೆ. ಸಾಲದ್ದಕ್ಕೆ ಏನಾದರೂ ಹಟ ಮಾಡಿದಾಗ ಆಚೆಮನೆ ದೊಡ್ಡಮ್ಮ ಗುಮ್ಮನಂತೆ ಕೂಗಿ ಹೆದರಿಸುತ್ತಿದ್ದುದೂ ಇತ್ತು! ದೊಡ್ಡ ಆದ ಮೇಲೆ ಗುಮ್ಮ ಒಂದು ನಿರುಪದ್ರವಿ, ಪರಿಸರ ಸ್ನೇಹಿ ಹಕ್ಕಿ ಎಂದು ತಿಳಿದ ಮೇಲೂ ಬಾಲ್ಯದಲ್ಲಿ ದಾಖಲಾದ ವಿಸ್ಮಯ, ನಿಗೂಢ ಕಲ್ಪನೆಗಳು ಕಳೆದುಹೋಗದೆ ಹಾಗೇ ಉಳಿದವು.
ನಮ್ಮೂರಿನ ಗದ್ದೆಯಲ್ಲಿ ಹಗಲು ಹೊತ್ತಿನಲ್ಲೂ ಒಂದೆರಡು ಸಲ ಗೂಬೆಯನ್ನು ನೋಡಿರುವೆ. ನನ್ನ ಬಾಲ್ಯದ ಎಂಬತ್ತು ತೊಂಬತ್ತರ ದಶಕದಲ್ಲಿ ಗುಮ್ಮಗಳ ಸಂಖ್ಯೆ ಜಾಸ್ತಿಯಿತ್ತು. ಆಗೆಲ್ಲ ಮನೆಯೆದುರಿನ ತೆಂಗಿನಮರಕ್ಕೇ ಬಂದು ಕೂಗಿದ್ದೂ ಇದೆ. ಬೆಕ್ಕುಗಳನ್ನು ಸಾಕಲು ಗುಮ್ಮನ ಉಪದ್ರ ಇತ್ತು. ಎಳೆ ಬೆಕ್ಕಿನ ಮರಿಯ ಕಣ್ಣುಗಳನ್ನೇ ಕುಕ್ಕಿ ಕುರುಡು ಮಾಡುತ್ತವೆ ಗುಮ್ಹಕ್ಕಿಗಳುಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಆಶ್ಚರ್ಯವೆಂದರೆ ಈಗ ಐದಾರು ತಿಂಗಳ ಹಿಂದೆ ನಾವು ಆಸೆಯಿಂದ ತಂದ ಎರಡು ಬೆಕ್ಕಿನ ಮರಿಗಳಲ್ಲಿ ಒಂದು ಮರಿ ಎರಡೇ ದಿನದಲ್ಲಿ ಕಾಣೆಯಾಯಿತು. ಅದನ್ನು ಗುಮ್ಮನೇ ಕಚ್ಚಿ ಒಯ್ದಿದೆ ಎಂದು ಅಕ್ಕಪಕ್ಕದವರು ಅಂದಾಜಿಸಿದ್ದನ್ನು ನಾವೂ ಒಪ್ಪಿಕೊಳ್ಳಬೇಕಾಗಿದೆ. ಏಕೆಂದರೆ ಇದೇ ಸಂದರ್ಭದಲ್ಲಿ ಮನೆ ಹತ್ತಿರವೇ ಗುಮ್ಮಕೂಗಿತ್ತು ಮತ್ತು ಬೆಕ್ಕಿನ ಮರಿ ರಾತ್ರಿ ಬೆಳಗಾಗುವುದರೊಳಗೆ ಮಾಯವಾಗಿತ್ತು. ಹಳೆಯ ಕಾಲದಲ್ಲಿ ನಮ್ಮೂರಲ್ಲಿ ಹೆದರಿಕೆ ಹುಟ್ಟಿಸುವಂತೆ ಕೂಗುವ ‘ಭೂತಹಕ್ಕಿ’, ‘ಜಕ್ಣಿಹಕ್ಕಿ’ಗಳಿದ್ದವು ಎಂದು ನಮ್ಮ ಅಮ್ಮಮ್ಮ ಹೆಸರಿಸುತ್ತಿದ್ದರು. ಇವುಗಳು ವಿಭಿನ್ನ ರೀತಿಯಲ್ಲಿ ಕೂಗುವ ಗೂಬೆಗಳು. ರಾತ್ರಿಯ ಹೊತ್ತು ಅವುಗಳ ಕರ್ಕಶ ಕೂಗು ಹೆದರಿಸಿದ್ದರಿಂದಾಗಿ ಇಂತಹ ಹೆಸರುಗಳು ಅವಕ್ಕೆ ಬಂದಿರಬೇಕು.
ಗೂಬೆಗಳಲ್ಲಿ ಒಟ್ಟು ನೂರ ಮೂವತ್ತಮೂರು ಪ್ರಭೇದಗಳಿವೆ ಎಂದು ಗುರುತಿಸಲಾಗಿದೆ. ಇವು ಪ್ರಪಂಚದಾದ್ಯಂತ ಹರಡಿವೆ. ಅಂಟಾರ್ಟಿಕ್ ಖಂಡದಲ್ಲಿ ಮಾತ್ರ ವಾಸವಾಗಿಲ್ಲ. ಇತರ ಹಕ್ಕಿಗಳಂತಲ್ಲದೆ ವಿಶಿಷ್ಟ ದೇಹ, ಕೂಗು, ವಾಸಸ್ಥಾನ ಮುಂತಾದವುಗಳಿಂದಾಗಿ ಗೂಬೆಗಳ ಕುರಿತು ಜನರಲ್ಲಿ ಭೀತಿಯ ಆಲೋಚನೆಗಳು, ಅಪಶಕುನ ಎಂಬ ಮೂಢನಂಬಿಕೆ ಸೃಷ್ಟಿಯಾಗಿವೆ. ಕೊಂಬಿನ ಗೂಬೆ, ಮೀನುಗೂಬೆ, ಕಣಜದ ಗೂಬೆ, ಕಿರುಗೂಬೆ ಅಥವಾ ಹಾಲಕ್ಕಿ ಇವುಗಳು ಭಾರತದಲ್ಲಿ ಸಾಮಾನ್ಯವಾಗಿರುವ ಗುಮ್ಮಗಳ ಪ್ರಭೇದಗಳು. ಗುಮ್ಮಗಳು ರಾತ್ರಿ ಹೊತ್ತೇ ಬೇಟೆಯಾಡಲು ಪ್ರಮುಖ ಕಾರಣವೆಂದರೆ ಇವುಗಳ ಮುಖ್ಯಆಹಾರವಾದ ಇಲಿಗಳು ಆ ಹೊತ್ತಿನಲ್ಲೇ ಓಡಾಡುವುದು. ಗುಮ್ಮಗಳಿಗೆ ಹಗಲಿನಲ್ಲಿ ಕಣ್ಣುಕಾಣುವುದಿಲ್ಲ ಎನ್ನುವುದು ಸುಳ್ಳು. ಇವುಗಳ ಕಣ್ಣು, ಕಿವಿ ತುಂಬಾ ಚುರುಕಿದ್ದು ಹಗಲಿಗೂ ಚೆನ್ನಾಗೇ ಕಾಣಿಸುತ್ತದೆ. ಪಾಳು ಬಿದ್ದ ಕಟ್ಟಡಗಳು, ಮರದ ಪೊಟರೆ ಇವುಗಳ ವಾಸಸ್ಥಾನ. ಕೆಲವೊಮ್ಮೆ ಗೂಡುಗಳನ್ನೂ ನಿರ್ಮಿಸುತ್ತವೆ. ಹದ್ದು, ಕಾಗೆಗಳು ಬಿಟ್ಟ ಖಾಲಿ ಗೂಡನ್ನು ಉಪಯೋಗಿಸುವುದೂ ಇದೆ. ಒಂದರಿಂದ ಏಳರ ತನಕ ಎಷ್ಟಾದರೂ ಮೊಟ್ಟೆಗಳನ್ನಿಡುತ್ತವೆ. ಗಂಡು ಹೆಣ್ಣು ಎರಡೂ ಕಾವು ಕೊಡುತ್ತವೆ. ಇವುಗಳ ಮರಿಗಳಂತೂ ನೋಡಲು ಬಹಳ ಮುದ್ದು ಮುದ್ದು. ಇಲಿ, ಹೆಗ್ಗಣಗಳು, ಸಣ್ಣ ಸಸ್ತನಿಗಳು, ಹಕ್ಕಿಗಳು, ಓತಿಕ್ಯಾತ, ಏಡಿ, ಮೀನು, ಕೀಟಗಳು
ಇವುಗಳ ಆಹಾರ. ಮೀನುಗೂಬೆಗಳು ಮಾತ್ರ ಮೀನುಗಳನ್ನು ಹಿಡಿದು ತಿನ್ನುವುದರಲ್ಲಿ ವಿಶೇಷ ಪರಿಣತಿ ಪಡೆದಿವೆ. ಬೇಟೆಯನ್ನು ಇಡಿಯಾಗಿ ನುಂಗುವುದು ಗುಮ್ಮಗಳ ವಿಶೇಷತೆ. ಇವುಗಳ ಕತ್ತು ಹೆಚ್ಚು ಬಳುಕುವ, ತಿರುಗುವ ಸಾಮರ್ಥ್ಯ ಹೊಂದಿದೆ. ಗುಮ್ಮಗಳು ಇಲಿ, ಹೆಗ್ಗಣ, ಸರೀಸೃಪ, ಕೀಟಗಳನ್ನು ಹತೋಟಿಯಲ್ಲಿಡುವುದರಿಂದರೈತರಿಗಂತೂ ಬಹಳ ಉಪಕಾರಿ. ಆದರೆ ದೊಡ್ಡ ಕಾಡುಗಳೆಲ್ಲ ನಾಶವಾಗಿ ಈಗ ಗುಮ್ಮಗಳ ಸದ್ದು ಬಹುತೇಕ ಕಡಿಮೆಯಾಗಿದೆ. ಇವುಗಳ ಕೂಗಿಗಿರುವ ರೋಮಾಂಚನಕಾರಿ ಶಕ್ತಿ ಬಹುಶಃ ಇನ್ಯಾವುದೇ ಹಕ್ಕಿಯ ಕೂಗಿಗಿಲ್ಲ ಎನ್ನುವುದು ಸತ್ಯ.
ಮೊದಲೆಲ್ಲ “ಊಂ ಹೂಂ ಹೂಂ” ಎನ್ನುವ ಕೂಗು ಮಾತ್ರ ಗುಮ್ಮನದ್ದು ಎನ್ನುವುದು ನನ್ನ ಸೀಮಿತ ತಿಳುವಳಿಕೆಯಾಗಿತ್ತು. ಆಮೇಲೆ ಇವುಗಳ ಕುರಿತು ಸ್ವಲ್ಪ ಮಾಹಿತಿ ತಿಳಿಯುತ್ತ ಹೋದಂತೆ ಯೂಟ್ಯೂಬಿನಲ್ಲಿ ಹುಡುಕಿ ಇವುಗಳ ಕೂಗು ಕೇಳಿಸಿಕೊಂಡೆ. ಆಗ ತಿಳಿದದ್ದೇನೆಂದರೆ ʼಊಂ ಹೂಂʼ ಎಂದು ಕೂಗುವುದು ಮೀನುಗೂಬೆ ಎಂಬ ಪ್ರಕಾರದ್ದು, ಉಳಿದಂತೆ ಪ್ರಪಂಚದಾದ್ಯಂತ ಬೇರೆ ಬೇರೆ ತರ ಕೂಗುವ ಗೂಬೆಗಳೂ ಇದ್ದಾವೆ… ಹಾಗೇ ಭಾರತದಲ್ಲೂ ನಾಲ್ಕೈದು ವಿಧದ ಗೂಬೆಗಳಿವೆ ಎನ್ನುವುದು. ‘ಔಲ್ಸ್ ಹೂಟಿಂಗ್’ ಎಂದು ಯೂಟ್ಯೂಬಲ್ಲಿ ಹುಡುಕಿದರೆ ಗುಮ್ಮಗಳ ಒಂದು ವಿಸ್ತಾರ ಜಗತ್ತಿಗೆ ಸಣ್ಣ ಕಿಂಡಿ ತೆರೆದಂತಾಗುತ್ತದೆ. ವಿಚಿತ್ರವಾಗಿ ಕೂಗುವ ಗುಮ್ಮಗಳ ಕೂಗನ್ನು ಆಲಿಸಬಹುದು, ನೋಡಬಹುದು. ಇದು ಅತ್ಯಂತ ಸುಲಭದ ವಿಧಾನ. ನಾನು ಏನಾದರೂ ಕೆಲಸ ಮಾಡುವಾಗಲೋ, ಮಳೆಗಾಲದ ರಾತ್ರಿಗಳಲ್ಲಿ ಸುಮ್ಮನೆ ಕುಳಿತಾಗಲೋ ಇಂತಹ ಗುಮ್ಮಗಳ ‘ಸಂಗೀತ’ವನ್ನು ಹಾಕಿಕೊಂಡು ಕೇಳುವುದಿದೆ. ಇದು ಕೊಡುವ ನೆಮ್ಮದಿ ಅದ್ಭುತವಾದದ್ದು. ಹಿಂದೆ ಕಾಡಿನ ಮಗ್ಗುಲಲ್ಲೇ ಮನೆಗಳಿದ್ದವು. ದಿನ ಬೆಳಗೆದ್ದರೆ ಹಕ್ಕಿಗಳ ಹಾಡು ಕೇಳುತ್ತಿತ್ತು. ಸಂಜೆ, ರಾತ್ರಿಯಾದೊಡನೆ ನತ್ತಿಂಗ, ಗುಮ್ಮಗಳು ದನಿಗೂಡಿಸುತ್ತಿದ್ದವು. ಆದರೀಗ ಬಹುತೇಕ ಎಲ್ಲರೂ ಪೇಟೆ, ಪಟ್ಟಣ ಸೇರಿದ್ದೇವೆ. ಕಾಡುಗಳೂ ಮನುಷ್ಯನ ಆಕ್ರಮಣಕ್ಕೆ ಒಳಗಾಗಿ ವಿರಳವಾಗಿವೆ. ನಮ್ಮ ಇಂದಿನ ಯುವಜನತೆಗೆ, ಮಕ್ಕಳಿಗೆ ಅಂದಿನ ಪರಿಸರದ ಚಿತ್ರಣ ಕಟ್ಟಿಕೊಡುವುದು ಮತ್ತು ಮರಳಿ ಅಂದಿನ ನಿಸರ್ಗವನ್ನು ತಂದುಕೊಡಲು ಶ್ರಮಿಸುವುದು… ಹೀಗೆ ದೊಡ್ಡ ಜವಾಬ್ದಾರಿಯೇ ನಮ್ಮ ಮೇಲಿದೆ!
ವಿಜಯಶ್ರೀ ಹಾಲಾಡಿ
ಹುಟ್ಟೂರು: ಮುದೂರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಬಳಿ ಗ್ರಾಮ..ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಸೇವೆ ಮಾಡಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ..ಆಸಕ್ತಿಯ ಕ್ಷೇತ್ರಗಳು:ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಮುಂತಾದವು.–ಕೃತಿಗಳು :ಬೀಜ ಹಸಿರಾಗುವ ಗಳಿಗೆ,ಓತಿಕ್ಯಾತ ತಲೆಕುಣ್ಸೆ,ಅಲೆಮಾರಿ ಇರುಳು, ಪಪ್ಪುನಾಯಿಯ ಪೀಪಿ, ಸೂರಕ್ಕಿ ಗೇಟ್, ಜಂಬಿಕೊಳ್ಳಿ ಮತ್ತು ಪುಟ್ಟವಿಜಿ,ಸಾಕು ಬೆಳಕಿನ ಮಾತು , ಪ್ರಕಟಿತ ಕೃತಿಗಳು.ಪಪ್ಪುನಾಯಿಯ ಪೀಪಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.ಜಿ.ಬಿ. ಹೊಂಬಳ ಸಾಹಿತ್ಯ ಪುರಸ್ಕಾರ, ಡಿಸೋಜ- ಎಚ್ಚೆಸ್ವಿ ಪುಟಾಣಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ , ಶಾರದಾ ರಾವ್ ದತ್ತಿನಿಧಿ ಬಹುಮಾನ ಇನ್ನಿತರ ಕೆಲ ಪ್ರಶಸ್ತಿಗಳು ಬಂದಿವೆ. ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ, ಲೇಖನಗಳು ಪ್ರಕಟವಾಗಿವೆ.ಎರಡು ಮಕ್ಕಳ ಕವಿತೆಗಳು ಸಿಬಿಎಸ್ ಸಿ ಸಿಲೆಬಸ್ ಲ್ಲಿ ಪಠ್ಯವಾಗಿದ್ದವು.ಈಗ ಏಳನೇ ತರಗತಿ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಮಕ್ಕಳ ಪದ್ಯವೊಂದು ಪಠ್ಯವಾಗಿದೆ.