ಅಂಕಣ ಸಂಗಾತಿ

ನೆನಪಿನದೋಣಿಯಲಿ

ಕಗ್ಗಮತ್ತುನಾನು

ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆಯೆಂದೇ  ಹೆಸರಾದ ಇದು ಜೀವನದ ಸಮ್ಯಗ್ದರ್ಶನ ಎಂದರೆ ತಪ್ಪಾಗಲಾರದು.  ಇದರಲ್ಲಿ ಏನುಂಟು ಏನಿಲ್ಲ ?ತಿಮ್ಮಗುರುವಿನ ಮೂಲಕ ಪ್ರಶ್ನೆಗಳನ್ನು ಹಾಕಿಸುತ್ತ ಅದಕ್ಕೆ ಸೂಕ್ತ ಉತ್ತರಗಳನ್ನು ನೀಡುತ್ತಾ ಜೀವನದ ಅರ್ಥ, ದೈವದ ಜತೆಗಿನ ಸಂಬಂಧ, ನಾವು ಹೇಗಿರಬೇಕು, ಹೇಗಿರಬಾರದು, ಸೌಂದರ್ಯ, ಭಕ್ತಿ ತತ್ತ್ವಗಳು, ಪುರುಷ ಸ್ವಾತಂ,ತ್ರ್ಯ ಬ್ರಹ್ಮಾನುಭವ, ಜೀವನದ ಲಲಿತಕಲೆ, ಮುಕ್ತನ ಲಕ್ಷಣಗಳು, ಶ್ರೇಯೋಮಾರ್ಗದ ಕಡೆಗೆ ಬಾಳು ಹೇಗಿರಬೇಕು, ಕೊನೆಯ ಕ್ಷಣಗಳನ್ನು ಹೇಗೆ ಕಳೆಯಬೇಕು  ಈ ಎಲ್ಲ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾ ಹೀಗೆ ಹುಟ್ಟಿನಿಂದ ಸಾವಿನವರೆಗೂ ಪ್ರತಿಯೊಂದು ಹೆಜ್ಜೆಯಲ್ಲೂ ಕೈಹಿಡಿದು ನಡೆಸಿಕೊಂಡು ಹೋಗುವಂತಹ ಮಾರ್ಗದರ್ಶಿ ಎಂದರೆ ಅತಿಶಯೋಕ್ತಿಯೇನಲ್ಲ . 

ಬೇರೆ ಏನಾದರೂ ಓದಿ ಅಥವಾ ಬಿಡಿ , ಮಂಕುತಿಮ್ಮನ ಕಗ್ಗವನ್ನು ಓದಿ ನಮ್ಮ ಅಳಿವಿಗೆ ತಿಳಿವಿಗೆ ಜ್ಞಾನವಿಸ್ತಾರಕ್ಕೆ ದಕ್ಕಿದಷ್ಟು ಒಗ್ಗಿಸಿಕೊಂಡು ಹೋದರೆ ಸಾಕು ಜೀವನದ ಸಾರ್ಥಕತೆ ಪಡೆಯಬಹುದು ಎಂದು ನನ್ನ ಅನಿಸಿಕೆ .

ಹೇಗೆ ಸಂಸ್ಕೃತದ ರಾಮಾಯಣ ಮಹಾಭಾರತ ಭಗವದ್ಗೀತೆಗಳನ್ನು ವಿವಿಧ ರೀತಿಗಳಲ್ಲಿ ವಿವಿಧ ಆಯಾಮದಲ್ಲಿ ವಿವಿಧ ಕಾಲಕ್ಕೆ ತಕ್ಕಂಥ ಪರಿಭಾಷೆಯಲ್ಲಿ ಅರ್ಥೈಸುತ್ತಲೇ ಹೋಗುತ್ತೇವೋ ಹಾಗೆಯೇ ಮಂಕುತಿಮ್ಮನ ಕಗ್ಗವು ಸಹ.  ಅವರವರ ಭಾವಕ್ಕೆ ಅವರವರ ಭಕುತಿಗೆ ನಿಲುಕುವಷ್ಟು ಸಿಲುಕುವಷ್ಟು ಈ ಬೃಹತ್ಸಾಗರದ ಹನಿಗಳನ್ನು ಬೊಗಸೆಯಲ್ಲಿ ನಾವು ಮೊಗೆದು ಕೊಂಡಷ್ಟು ನಮಗೆ ಲಭ್ಯ . 

ಬಾಲ್ಯದಿಂದಲೂ ಕಗ್ಗದ ಪದಗಳನ್ನು ಕಿವಿಗೆ ಬೀಳಿಸಿಕೊಳ್ಳುತ್ತಲೇ ಇರುವ ನಾನು ಅವುಗಳ ಅರ್ಥ ವೈವಿಧ್ಯತೆಯನ್ನು, ವಿವಿಧ ವಯೋಮಾನದಲ್ಲಿ ಅದು ಕೊಡುವ ವಿಶಿಷ್ಟ ಅನುಭೂತಿಗಳನ್ನು ಆಸ್ವಾದಿಸುತ್ತಾ ಬೆರಗು ಗೊಂಡಿದ್ದೇನೆ ಬೆಡಗಿಗೆ ಮರುಳಾಗಿದ್ದೇನೆ. ನನ್ನ ಪಾಲಿಗೆ ಕಗ್ಗ ಎಂದೂ ಪುಸ್ತಕದ ಬೀರುವಿನಲ್ಲಿ ಅಲಂಕಾರವಾಗಿ ಶೋಭಾಯಮಾನವಾಗಿರುವ ವಸ್ತುವೇ ಅಲ್ಲ. ನಮ್ಮ ಓದಿನ ಮೇಜಿನ ಮೇಲೆ ಕೈಗೆಟುಕುವಷ್ಟು ಅಳತೆಯಲ್ಲಿ ಸದಾ ಇರಲೇಬೇಕಾದ 1ಕೈಪಿಡಿ;  ನಿಘಂಟಿನಂತೆ.  

ನನ್ನ ಜೀವನದ ವಿವಿಧ ಘಟ್ಟಗಳಲ್ಲಿ ಕಗ್ಗದ ಪದಗಳನ್ನು ಅನುಭವಿಸಿದ, ಅದು ನನ್ನ ವಿಶ್ಲೇಷಣೆಗೆ ನಿಲುಕಿದ ಪರಿಯನ್ನು ಹೇಳುತ್ತೇನೆ.  ಒಂಬೈನೂರ ನಲವತ್ತೈದು ಮುಕ್ತಕಗಳಿರುವ ಈ ಪುಸ್ತಕ 1ಲೇಖನದ  ಮಿತಿಗೆ ಸಿಗುವಂತದು ಖಂಡಿತ ಅಲ್ಲವೇ ಅಲ್ಲ.  ಒಂದೊಂದು ಚೌಪದಿಯನ್ನು ಸಹ ಒಂದೊಂದು ಲೇಖನವನ್ನಾಗಿ ವಿಸ್ತರಿಸುವಷ್ಟು ಅರ್ಥ ವ್ಯಾಪ್ತಿ ಆಳ ಗಹನ  ಹೊಂದಿದಂತಹವು. 

ಬಾಲ್ಯದಲ್ಲಿ ಭಾವಗೀತೆ ಕಾರ್ಯಕ್ರಮಗಳಲ್ಲಿ ಶ್ರೀಯುತ ಅನಂತಸ್ವಾಮಿಯವರು ಹಾಡುತ್ತಿದ್ದ ಕಗ್ಗದ ಪದಗಳು ನನ್ನ ಜ್ಞಾನದ ಪರಿಮಿತಿಗೆ ಬಂದಿದ್ದವು.

ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ

ನಗುವ ಕೇಳುತ ನಗುವುದತಿಶಯದ ಧರ್ಮ

ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ ;

ಹುಟ್ಟುವಾಗ ನಾವು ಅಳುತ್ತಿರುತ್ತೇವೆ ಸುತ್ತಲಿನ ಜಗ ನಗುತ್ತಿರುತ್ತದೆ. ನಾವು ಹೋಗುವಾಗ ನಾವು ನಗುನಗುತ್ತ ತೆರಳುತ್ತೇವೆ ಸುತ್ತಲಿನ ಜಗ ಅಳುತ್ತಿರುತ್ತದೆ. ಇದು ಜೀವನಧರ್ಮ. ಇರುವ 

4 ದಿನಗಳಲ್ಲಿ ಮುಖ ಗಂಟು ಹಾಕಿಕೊಂಡು ಕೋಪ ಮಾಡಿಕೊಂಡು ಬಾಳುವುದರಿಂದ ಏನು ಪ್ರಯೋಜನ? ನಗುವು ಜೀವನದ ಸಹಜಧರ್ಮವಾಗಿ ಹೂವರಳಿ ನಗುವಷ್ಟು ಸೊಗವನ್ನು ಮುದವನ್ನು  ಸುತ್ತಲಿನ ಜನಕ್ಕೆ ತಂದರೆ ಸಾಕು ಅದುವೇ ಜೀವನ ಸಾಫಲ್ಯ . ಇದನ್ನು ಕೇಳುತ್ತ ಕೇಳುತ್ತಲೇ ನಗುತ್ತಾ ನಗಿಸುತ್ತಾ ಬಂದವಳು ನಾನು. ನನ್ನ ನೋವೆಲ್ಲಾ ನನಗಿರಲಿ ಜಗಕೆ ನಗು ಮೊಗವ ತೋರು  ಎಂಬ ಈ ತತ್ತ್ವ ಅರ್ಥವಾಗದಿದ್ದರೂ ಅನುಸರಿಸಲು ಈ ಸದ್ಯ ಕಾರಣವಾಯಿತು .  ಬಾಲ್ಯದ ಮಗು ಮನಗಳಿಗೆ ಅರ್ಥವಾಗುವಂತೆ ಕಗ್ಗದ ಪದಗಳನ್ನು ಹೇಳಿಕೊಡುತ್ತಿದ್ದ ನಮ್ಮ ತಂದೆಯವರನ್ನು ನೆನೆಯದಿದ್ದರೆ ತಪ್ಪಾದೀತು .  ಕಗ್ಗಕ್ಕೂ ನನಗೂ ಪ್ರೀತಿಯ ನಂಟು ಗಂಟು ಹಾಕಿದವರು ನನ್ನ ತಂದೆ . 

ಇನ್ನು ಜೀವನದ ಮುಂದಿನ ದಿನಗಳಲ್ಲಿ ಕಷ್ಟದ ಕೆಲವು ಕ್ಷಣಗಳು ಬಂದಾಗ ನೆನಪಿಗೆ ಬರುತ್ತಿದ್ದುದು ಧೈರ್ಯ ಸಾಂತ್ವನ ತರುತ್ತಿದ್ದುದು ಕಗ್ಗದ ಈ ಸಾಲುಗಳೇ 

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ 

ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ

4 ಜನ ರೊಡನೆ ಸೇರಿ ಬಾಳುವ ಕಷ್ಟಸುಖಗಳಿಗೆ ಹೊಂದುವ ಸಹಕಾರ ಕೊಡುವ ಗುಣ ಕಿಂಚಿತ್ತಾದರೂ ನನ್ನಲ್ಲಿ ಬೆಳೆಯಿತೆಂದರೆ ಅದಕ್ಕೆ ನಮ್ಮ ತಿಮ್ಮ ಗುರುವಿನ ಈ ಉಪದೇಶವೇ ಕಾರಣ . 

ಮುಂದೆ ಅಪ್ಪ ಅಮ್ಮನ ಸಾವು ಅಗಲಿಕೆ ದುಃಖ ತಡೆಯುವ ಶಕ್ತಿ ಬಂದದ್ದು ಅಣ್ಣ (ನಮ್ಮ ತಂದೆ) ಸದಾ ಹೇಳಿಕೊಳ್ಳುತ್ತಿದ್ದ ಕಗ್ಗದ ಈ ಸಾಲುಗಳನ್ನು ನಾನು ಮತ್ತೆ ಪದೇಪದೆ ಓದುತ್ತಾ ಇದ್ದಾಗ….

ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ

ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು

ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು 

ಪದಕುಸಿಯೆ ನೆಲವಿಹುದು ಮಂಕುತಿಮ್ಮ

ನಿಜ ಪದ ಕುಸಿಯೆ ನೆಲವಿಹುದು ಎಂದು ನಾನು ನಂಬಿಕೊಂಡಿದ್ದು ಏನೇ ಆದರೂ ಒರಗಲು ಅಪ್ಪದ ಹೆಗಲಿದೆ ಎಂಬ ಒಂದೇ ನಂಬಿಕೆಯಿಂದ.  ಆದರೆ  ಆ ನೆಲವೂ ನನ್ನ ಪಾಲಿಗೆ ಕುಸಿದಾಗ ಒರಗಲು ಸಿಕ್ಕಿದ್ದು ನನಗೆ ಕಗ್ಗದ ಸಾಲಿನ ಹೆಗಲು. 

ಮುಂದೆ ಜೀವನ ಪಥದಲ್ಲಿ ಸಾಗುತ್ತಿದ್ದಂತೆಲ್ಲಾ  ಮಾಡಿದ ಕೆಲಸಕ್ಕೆ ಪ್ರತಿಫಲ ಸಿಗಬೇಕು ನನ್ನನ್ನು 4 ಜನ ಗುರುತಿಸಬೇಕು ಎಂಬ ಆಸೆ ಬಂದಾಗಲೆಲ್ಲಾ ನಾನು ನನಗೆ ನಾನೇ ಎಚ್ಚರಿಕೆ  ಕೊಟ್ಟುಕೊಳ್ಳುತ್ತಾ  ಬರುತ್ತಿದ್ದೇನೆ ಕಗ್ಗದ ಈ ಸಾಲುಗಳನ್ನು ಗುನುಗಿಕೊಳ್ಳುತ್ತ 

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ಚಿನ್ನದಾತುರಕಿಂತ ಹೆಣ್ಣುಗಂಡೊಲವು ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ತಿನ್ನುವುದದಾತ್ಮವನೆ ಮಂಕುತಿಮ್ಮ .

ಡಿವಿಜಿಯವರು ಬರೆದ ವನಸುಮ ಕವಿತೆಯಲ್ಲಿನ 

“ಜನಕ್ಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ” ಸಾಲುಗಳು ಸಹ ಇದೇ ಸಂದೇಶವನ್ನು ನೀಡುತ್ತವೆ. 

ಅಲ್ಲದೇ ಗೀತೆ ಬೋಧಿಸುವುದೂ ಇದನ್ನೇ ತಾನೇ “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” ಆದರೆ ಅದನ್ನು ಅಳವಡಿಸಿಕೊಳ್ಳುವುದು ಕಷ್ಟ. ಜೀವನವಿಡೀ ಅಳವಡಿಕೆಯ ಪ್ರಯತ್ನದಲ್ಲಿ ಮುಂದೆ ಸಾಗಬೇಕು. 

ಜೀವನವೆಂದ ಮೇಲೆ ಕಷ್ಟ ಸುಖ ನೋವು ಸಂಕಟ ಅಸಮಾಧಾನಗಳ ಸಮ್ಮಿಶ್ರಣವೇ ತಾನೆ ಆದರೆ ಕಷ್ಟವೆಂದು ಲೋಕವ ವಿಚಾರವನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಆದರೆ ಅವುಗಳ ಸುಳಿಯಿಂದ ಆಚೆ ಬರಲು ಸಾಧ್ಯವಿಲ್ಲ ಅಂಟಿಯೂ ಅಂಟದಂತಿರಬೇಕು ಈ ಮಾರ್ಗವನ್ನು ಡಿವಿಜಿಯವರು ಈ ಪದ್ಯದಲ್ಲಿ ಎಷ್ಟು ಸೊಗಸಾಗಿ ಹೇಳುತ್ತಾರೆ ನೋಡಿ .

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ 

ಹೊರಕೋಣೆಯಲಿ ಲೋಗರಾಟಗಳನಾಡು

ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ 

ವರಯೋಗಸೂತ್ರವಿದು ಮಂಕುತಿಮ್ಮ.

ಹಾಗಾದರೆ ಜೀವನ ಅಂದರೆ ಹೇಗಿರಬೇಕು ಅದು ಸಹ ಡಿವಿಜಿಯವರ ಈ ಸಾಲುಗಳಲ್ಲಿ ವ್ಯಕ್ತವಾಗಿದೆ .

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು

ದೊರೆತುದ ಹಸಾದವೆಂದುಣ್ಣು ಗೊಣಗಿಡದೆ

ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ 

ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ 

ಇಡಿ ಭಗವದ್ಗೀತೆಯ ಸಾರವನ್ನು ಇದರಲ್ಲಿ ಹೇಳಿದಂತೆ ತೋರುತ್ತದೆ ಅಲ್ಲದೆ ಯಾವುದೇ ಕಾರ್ಯವಾಗಲಿ ನಮ್ಮ ಕರ್ತವ್ಯವೆಂದು ಮಾಡುತ್ತಾ ದೊರೆತುದು ಪ್ರಸಾದವೆಂದು ಸ್ವೀಕರಿಸಬೇಕು ಆಗ ಇದು ಹೆಚ್ಚು ಇದು ಕಡಿಮೆಯಾಗಿ ರುಚಿ ಇಲ್ಲ ಎನ್ನುವ ಪ್ರಶ್ನೆಗಳು ಬರುವುದಿಲ್ಲ ಎಲ್ಲದಕ್ಕೂ ದೈವಿಕತೆಯ ಪಾವಿತ್ರತೆ ದೊರಕುತ್ತದೆ . ಲೋಕದಲ್ಲಿ ಕಮಲದ ಪತ್ರದಂತೆ ಇದ್ದೂ ಇಲ್ಲದಂತೆ ಅಂಟಿಯೂ ಅಂಟದಂತೆ ನಡೆಯುತ್ತಾ ಮೇಲಿನಿಂದ ಕರೆ ಬರಲು ನಗುನಗುತ್ತಾ ಹೊರಟುಬಿಡಬೇಕು . ಹೀಗೆ ನಮ್ಮ ಜೀವನ ಆಗಲು ಎಷ್ಟು ಕಷ್ಟ ಕೋಟಲೆಗಳ ಅಗ್ನಿದಿವ್ಯವನ್ನು ದಾಟಿ ಬರಬೇಕು ಕರ್ತಾರನಕಮ್ಮಟದಲ್ಲಿ ಕುಲುಮೆಯಲ್ಲಿ ಬೇಯಬೇಕು.  

ಬಾಳಿನ ಕಡೆಯ ಕ್ಷಣಗಳು ಹೇಗಿರಬೇಕು ಎಂಬುದನ್ನು ಸಗ್ಗದ ಸಾಲುಗಳಲ್ಲಿ ಕೇಳಿ ಎಲ್ಲರ ಅಂತರಾತ್ಮನ ಅಪೇಕ್ಷೆಯೂ ಆಕಾಂಕ್ಷೆಯೂ ಕೋರಿಕೆಯು ಅದೇ ತಾನೇ?

ಆರ ಕೈತುತ್ತಿಗಂ  ನಿನ್ನ ಕಾಯಿಸದೆ ವಿಧಿ 

ಯಾರ ಭುಜಕಂ ನಿನ್ನ  ಭಾರವಾಗಿಸದೆ

ಆರ ಸೆಲೆ ಸುಳಿವುಮಂಟದವೊಲಾಗಿಸಿ ನಿನ್ನ ಪಾರುಗಾಣಿಸ ಬೇಡು _ ಮಂಕುತಿಮ್ಮ 

ವಿನಾ ದೈನ್ಯೇನ ಜೀವನಂ ಅನಾಯಾಸೇನ ಮರಣಂ ಎಂಬುದು ಎಲ್ಲರ ಕೊನೆಯ ಆಸೆ ಅದನ್ನು ಬೇಡಿಕೋ ಎನ್ನುತ್ತಾರೆ ತಿಂಮ ಗುರು.

Total Kannada - Largest Kannada Book Shop

ಹಾಗೆಯೇ ಇಷ್ಟು ದಿನ ಬಾಳಿದ ಜೀವನಕ್ಕೆ ಸಮಾಜಕ್ಕೆ ವಂದನೆ ಸಲ್ಲಿಸುವುದು ನಮ್ಮ ಕರ್ತವ್ಯವಲ್ಲವೇ? ಹಾಗಾದರೆ ಒಳಿತು ಮಾಡಿದವರಿಗಷ್ಟೇ ಧನ್ಯವಾದವೇ?  ಅಲ್ಲ ಕೆಡಕು ಮಾಡಿದವರೂ ನಮಗೆ ಪಾಠ ಕಲಿಸಿರುತ್ತಾರೆ. ಅವರಿಗೂ ನಮ್ಮ  ಕೃತಜ್ಞತೆ ಅರ್ಪಿಸಬೇಕು ಎಂದು ಹೇಳುವ ಈ ಪರಿ ಎಷ್ಟು ಚೆಂದ ನೋಡಿ

ಎಲ್ಲರಿಗಮೀಗ ನಮನ_ ಬಂಧುಗಳೆ ಭಾಗಿಗಳೆ ಉಲ್ಲಾಸವಿತ್ತವರೆ, ಮನವ ತೊಳೆದವರೆ 

ಟೊಳ್ಳು ಜಗ ಸಾಕು ಬಾಳ್_ಎನಿಸಿ ಗುರುವಾದವರೆ  

ಕೊಳ್ಳಿರೀ ನಮನವನುಮಂಕುತಿಮ್ಮ    

ಗೀತೆಯ ಸಾರವನ್ನೆಲ್ಲ ಸರಳವಾಗಿ ಸುಂದರವಾಗಿ ಪಾಮರನಿಗೂ ಅರ್ಥವಾಗುವ ರೀತಿಯಲ್ಲಿ ಹೇಳಿರುವುದೇ ಕಗ್ಗ ಅದಕ್ಕೆ ಇದನ್ನು ಕನ್ನಡದ ಭಗವದ್ಗೀತೆ ಎಂದು ಕರೆದಿರುವುದು ಖಂಡಿತ ಅತಿಶಯೋಕ್ತಿಯಲ್ಲ.  ಇತ್ತೀಚೆಗೆ ಗುರುರಾಜ ಕರಜಗಿ ಅವರು ತಮ್ಮ ವ್ಯಾಖ್ಯಾನಗಳಲ್ಲಿ ಭಗವದ್ಗೀತೆಯ ಪ್ರತಿಯೊಂದು ಅಧ್ಯಾಯಕ್ಕೂ ಸಂಬಂಧಪಟ್ಟ ಕಗ್ಗದ ಸಾಲುಗಳನ್ನು ಉದಾಹರಿಸಿದ್ದಾರೆ. ಈಗ ಸ್ವಲ್ಪ ಆಳವಾಗಿ ಅವುಗಳ ಬಗ್ಗೆ ಚಿಂತಿಸುತ್ತಿದ್ದೇನೆ . ಮತ್ತು ಆ ನಿಟ್ಟಿನಲ್ಲಿ ಅಧ್ಯಯನ ನಡೆಸುತ್ತಿದ್ದೇನೆ .  ಈ ಸಾಲಿನಲ್ಲಿ ಡಿವಿಜಿಯವರೇ ಇದನ್ನು ಹೇಳುತ್ತಾರೆ ಕೇಳಿ 

ವಿಶದಮಾದೊಂದು ಜೀವನ ದರ್ಶನವ_

ನುಸುರಿಕೊಳೆ ತನ್ನ ಮನಸಿಗೆ ತಾನೇ ಬಗೆದು

ನಿಸದವಂ  ಗ್ರಂಥಾನುಭವಗಳಿಂದಾರಿಸುತ ಹೊಸೆದನೀ ಕಗ್ಗವನುಮಂಕುತಿಮ್ಮ 

ಜೀವನ ಧರ್ಮದರ್ಶನ ಮಾಡಿಕೊಡುವ ವಿಚಾರಗಳನ್ನು ವಿವಿಧ ಗ್ರಂಥಗಳಿಂದ ಆರಿಸಿ ಈ ಕಗ್ಗವನ್ನು ಹೊಸೆದಿದ್ದೇನೆ ಎನ್ನುತ್ತಾರೆ ಕವಿ.  ಈ ಹೊಸೆದ ಕಗ್ಗದ ಹಾರದ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡರೆ ಎಷ್ಟು ಲೇಸು ಅಲ್ಲವೇ?

ಒಬ್ಬ ಪ್ರಸಿದ್ಧ ಸಾಹಿತ್ಯ ವಿಮರ್ಶಕರು ಕಗ್ಗದ ಬಗ್ಗೆ ಹೀಗೆ ಹೇಳುತ್ತಾರೆ “ಇದು ನಿಜವಾಗಿ ಕಗ್ಗವೂ ಅಲ್ಲ ಹಗ್ಗವೂ ಅಲ್ಲ, ಸಗ್ಗ;  ವೇದಾಂತ ಸಾರ ಸಂಗ್ರಹ.  ವಿದ್ವತ್ ಸಾಧಕರೊಬ್ಬರ ಅನುಭವಾಮೃತ.”

Dr. D.V. Gundappa (Kannada) | Exotic India Art

ಕಗ್ಗ ಮೊದಲು ಪ್ರಕಟವಾದದ್ದು ೧೯೪೩ ರಲ್ಲಿ.ನಂತರ ಅದು ೧೯೫೦,೧೯೫೮,೧೯೬೪,೧೯೬೯,೧೯೭೩,೧೯೭೭,೧೯೮೦,೧೯೮೭, ೧೯೮೮,೧೯೯೩ ೧೯೯೬ರಲ್ಲಿ ಸುಮಾರು 1ಲಕ್ಷ ಪ್ರತಿ ಗಳಿಗಿಂತ ಹೆಚ್ಚು ಮುದ್ರಿತವಾಗಿದೆ ಇಂತಹ ಜನಾನುರಾಗವನ್ನು ಸಂಪಾದಿಸಿರುವ ಕಗ್ಗದ ವೈಶಿಷ್ಟ್ಯತೆ ಕಗ್ಗದ ಸಾಲುಗಳಲ್ಲೇ ನೋಡಿ 

ಅವನರಿವಿಗೆಟಕುವೊಲೊಂದಾತ್ಮ ನಯವ ಹವಣಿಸಿದನಿದನು ಪಾಮರಜನರ ಮಾತಿನಲಿ

ಸರಳ ನುಡಿಗಳಲ್ಲಿ ನಮ್ಮ ಜೀವನದ ಅನುಭವಗಳನ್ನೇ ನಮ್ಮ ನಡೆ ನುಡಿಗಳಲ್ಲಿ ಅನುಸರಿಸಿಕೊಳ್ಳುವಂತಹ ನೀತಿಯಾಗಿ ಮಾರ್ಪಡಿಸಿ ಹೇಳುವ ಅಂದ ಕಗ್ಗದಲ್ಲಿ ಅಲ್ಲದೆ ಇನ್ನೆಲ್ಲಿ ಕಾಣಲು ಸಾಧ್ಯ ?

ರಾಷ್ಟ್ರಕವಿ ಕುವೆಂಪು ಅವರು ಡಿವಿಜಿಯವರ ಕಗ್ಗದ ಬಗ್ಗೆ ಹೇಳಿದ ನುಡಿಗಳಿವು 

ಹಸ್ತಕ್ಕೆ ಬರಿ ನಕ್ಕೆ; ಓದುತ್ತ ಓದುತ್ತ

ಮಸ್ತಕಕ್ಕಿಟ್ಟು ಗಂಭೀರವಾದೆ 

ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ ಪುಸ್ತಕಕೆ ಕೈಮುಗಿದೆ _ ಮಂಕುತಿಮ್ಮ  

ಪುಸ್ತಕದ ವಿಸ್ತಾರ ದರ್ಶನದ ಬಗ್ಗೆ, ಅನುಭಾವ ಸಾಕ್ಷಾತ್ಕಾರದ ಬಗ್ಗೆ ಅನುಭೂತಿಯ ವಿರಾಟ ಲೀಲೆಯ ಬಗ್ಗೆ ಈ ನುಡಿಗಳು ಪೂರ್ಣಪ್ರಮಾಣದ ನ್ಯಾಯವನ್ನು ಒದಗಿಸುತ್ತವೆ. 

ಜೀವನದ ನಲಿವಿನಲ್ಲಿರಲಿ ಸಂಕಷ್ಟದಲ್ಲಿರಲಿ ಪ್ರತಿಯೊಂದಕ್ಕೂ ನಮ್ಮ ಜೀವನದ ಜೊತೆಗೆ ಸಮೀಕರಿಸಿಕೊಳ್ಳಬಲ್ಲಂತಹ ಸಾಲುಗಳು ಕಷ್ಟದಲ್ಲಿ ಸಾಂತ್ವನ  ಹೇಳುವ ಪದಗಳು ತಪ್ಪಿದಲ್ಲಿ ಎಚ್ಚರಿಸುವ ನುಡಿಗಳು.  ನಿಜಕ್ಕೂ ಒಬ್ಬ ತಂದೆ ತಾಯಿ ಗುರು ಮಾರ್ಗದರ್ಶಕ ಮಿತ್ರ ಆಪದ್ಬಂಧು  ಆತ್ಮಸಂಗಾತಿ ಎಲ್ಲವನ್ನೂ ನಾನು ಕಗ್ಗದಲ್ಲಿ ಕಂಡುಕೊಂಡಿದ್ದೇನೆ . ಇಂತಹ ಉತ್ಕೃಷ್ಟ ಕೃತಿಯನ್ನು ಕನ್ನಡಿಗರಿಗೆ ಅರ್ಪಿಸಿದ ಡಿವಿಜಿಯವರಿಗೆ ಅದೆಷ್ಟು ಕೃತಜ್ಞತೆ ಧನ್ಯವಾದ ವಂದನೆಗಳನ್ನು ಸಲ್ಲಿಸಬಹುದೋ ನಾನರಿಯೆ . 

ಅಂತಹ ಶರಣರಿಗೆ ಅವರದೇ ಸಾಲುಗಳಿಂದ ನುಡಿ ನಮನ ಅರ್ಪಿಸಬಲ್ಲೆ ಅಷ್ಟೆ.  ಕಗ್ಗದ ಕಡೆಯ ಮಂಗಳ ಶಾಸನದಂತಿರುವ ಈ ಪದ್ಯದ ಮೂಲಕ ಚಿರಂತರ ನಿರಂತರ ಕವನ ಕಗ್ಗ ದ ಓದುವಿಕೆಯ ಅದರ ಅರ್ಥ ವೈಶಾಲ್ಯತೆಯ ಅರಿಯುವಿಕೆ ಪುನರ್ ಮನನ ಮತ್ತು ತೊದಲು ನುಡಿಗಳಲ್ಲಿ ಅದನ್ನು ಬರೆಯುವ  ಪ್ರಯತ್ನಕ್ಕೊಂದು ಅಲ್ಪವಿರಾಮ.  

ಶರಣುವೊಗು ಜೀವನ ರಹಸ್ಯದಲ್ಲಿ ಸತ್ತ್ವದಲಿ ಶರಣು ಜೀವನವ ಸುಮವೆನಿಪ ಯತ್ನದಲಿ ಶರಣಂತರಾತ್ಮ ಗಂಭೀರ ಶಾಂತಿಯಲಿ 

ಶರಣು ವಿಶ್ವಾತ್ಮದಲಿ ಮಂಕುತಿಮ್ಮ .

ಸರ್ವೇ ಜನಾಃ ಸುಖಿನೋ ಭವಂತು 


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು

One thought on “

  1. ಚೆಂದದ ಪ್ರಸ್ತುತಿ..ಕಗ್ಗ ಇದು ಕಗ್ಗವಲ್ಲ ನಮ್ಮೆಲ್ಲರ ಬಾಳಿನ ದೀವಿಗೆ

Leave a Reply

Back To Top