ಚಂದ್ರನ ಬೆಳಕನರಸುವ ” ಚೆಂಬೆಳಕ ದಾರಿಯಲಿ”

ಪುಸ್ತಕ ಸಂಗಾತಿ

ಚಂದ್ರನಬೆಳಕನರಸುವ ” ಚೆಂಬೆಳಕದಾರಿಯಲಿ

ಚಂಪೂ ( ಚಂದ್ರಶೇಖರಪೂಜಾರ ಅವರ ಗಜಲ್ ಸಂಕಲನ)

          – ಇಂದು ಗಜಲ್‌ ಪ್ರಕಾರವನ್ನು‌ ಭರವಸೆಯಿಂದ ಮುಂದುವರೆಸುವ ಬರಹಗಾರರ ದಂಡೇ ನಮಗೆ ಕಾಣಿಸುತ್ತದೆ.ಹಾಗೆ ನೋಡಿದರೆ ಕನ್ನಡದಲ್ಲಿ ಅತ್ಯಂತ ಶಕ್ತವಾಗಿ ಮೂಡಿಬರುತ್ತಿರುವ ಕಾವ್ಯ ಸಾಹಿತ್ಯ‌ ಪ್ರಕಾರದಲ್ಲಿ ಗಜಲ್ ಗೆ ಪ್ರಥಮ ಸ್ಥಾನ ಸದ್ಯಕ್ಕೆ ಸಲ್ಲುತ್ತದೆ ಎಂದರೆ ಅತಿಶಯೊಕ್ತಿ ಏನಲ್ಲ.

ಗಜಲ್ ಬರೆಯುವದು ಮಾತ್ರವಲ್ಲದೆ ಗಜಲ್ ಸಂಹಿತೆಯನ್ನು‌ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಬರೆಯಬಲ್ಲ‌ ಲೇಖಕರೂ ಈ ಕಾವ್ಯ ಪ್ರಕಾರಕ್ಕೆ ದಕ್ಕಿರುವದು ಈ ಕಾವ್ಯಪ್ರಕಾರದ ವಿಶಿಷ್ಟತೆಯಾಗಿದೆ.ಹಿರಿಯರನ್ನು ಹೊರತು‌ ಪಡಿಸಿಯೂ ಯುವಕರಲ್ಲಿಯೂ ಅನೇಕರು ಗಜಲ್ ಕುರಿತು ಪ್ರಬುದ್ಧ ವಾಗಿ ಮಾತನಾಡುತ್ತಾರೆ , ಬರೆಯುತ್ತಾರೆ

ಈ ಎಲ್ಲ‌ ಮಾತುಗಳು ಗಜಲ್ ಕಾರ ಚಂಪೂ (ಚಂದ್ರಶೇಕರ ಯಲ್ಲಪ್ಪ ಪೂಜೇರ) ರವರಿಗೆ ಸಲ್ಲುತ್ತದೆ.ಅವರ ಎರಡು ಗಜಲ ಸಂಕಲನಗಳು ಪ್ರಕಟವಾಗಿದ್ದು ಎರಡಲ್ಲಿಯೂ ಗಜಲ್ ಸಂಹಿತೆ ಅಂದರೆ ಗಜಲ್‌ಕಾವ್ಯ ಮೀಮಾಸೆ ಅಪಾರವಾಗಿಯೇ ಬಂದಿದೆ.

“ಚಂಪೂ” ಎಂಬ ಕಾವ್ಯನಾಮದಿಂದ ಹೆಸರಾದ ಚಂದ್ರಶೇಖರ ಯಲ್ಲಪ್ಪ ಪೂಜಾರ ಅವರು ಮೂಲತಃ ಬದಾಮಿ ತಾಲೂಕಿನ‌ ಕೆರೂರಿನವರು.ಸದ್ಯ ಬೈಲಹೊಂಗಲ ತಾಲೂಕಿನ ದೇಶನೂರಿನ ಪ್ರೌಡಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿರುವ ಇವರು ಸಾಹಿತ್ಯಕ್ಷೇತ್ರಕ್ಕೆ ಹಲವು ರಚನೆಗಳನ್ನು ಕೊಟ್ಟವರು .ಅವರು  ಬರೆದ ವ್ಯಾಕರಣ ಗ್ರಂಥ ಕನ್ನಡಕ್ಕೆ ಅಪರೂಪದ ಕೊಡುಗೆ .ಆದರೆ ಎಂದೂ ದನಿ ಎತ್ತಿ ಮಾತನಾಡದ ಸಂಭಾವಿತ ಕವಿ ಅವರು.. ವೇದಿಕೆಗಳೆಂದರೆ ದೂರ ಇರುವ  ತಮ್ಮ ಪಾಡಿಗೆ ತಾವು ಬರೆಯುತ್ತಿರುವ ಕಾವ್ಯ ಜೀವಿ ಚಂಪೂ. ಹಾಗೆಯೆ ಎರಡು ಕವನ ಸಂಕಲನ ಒಂದು ಅಪರೂಪದ ವಿಮರ್ಶಾ ಕೃತಿ ಕೂಡ ಅವರಿಂದ ಬಂದಿದೆ.

“ಚೆಂಬೆಳಕ ದಾರಿಯಲ್ಲಿ” ಮೊದಲ ಗಜಲ್ ಸಂಕಲನ ವಾ ದರೂ ಗಜಲ್ ಮೀಮಾಂಸೆಯ ಎಲ್ಲ ನಿಯಮಗ ಳನ್ನು ಪಾಲಿಸಿದ ರಚನೆಗಳು ಇಲ್ಲಿರುವದು ಅತಿ ಮುಖ್ಯ ವಿಚಾರವಾಗಿದೆ.

ಗಜಲ್ ಎಂಬುದು ಒಲವಿನ ಧಾರೆ.ಒಲವಿನ ನೋವಿಗೆ ನಲಿವಿಗೆ ಮುಖ್ಯ ವಕ್ತಾರನಾಗಿ ರಚನೆಯಾದುದೆ ಹೆಚ್ಚು. ಆದರೆ ಗಜಲ ಕಾವ್ಯಕ್ಕೆ ನೋವನ್ನು ,ಬಡತನದ ಸಂಕಟವನ್ನು ತರುವದು ಮುಖ್ಯ ಎಂದುಕೊಂಡ ಕವಿಗಳಲ್ಲಿ ಚಂಪೂ ಅವರ ಹೆಸರು ಅಗ್ರಗಣ್ಯವಾಗಿ ಬರುತ್ತದೆ.

ಬದುಕಿನ ಆಳ ಚಿಂತನೆ  ಗಜಲ್ ಗಳಲ್ಲಿ ಚರ್ಚಿತ ವಾಗಿದೆಯಂಬುದು ಬಹಳ ಮಹತ್ವದ ಅಂಶ.

ಮೊದಲ ಗಜಲ್ ದಿಂದಲೆ ಬದುಕಿನ ತಾತ್ವಿಕತೆ ಇಲ್ಲಿ ಚರ್ಚಿತವಾಗುತ್ತ ಹೋಗುತ್ತದೆ.

ಬದುಕೊಂದು ಕಾಣದ ತಿರುವುಗಳ ತೋರಣ ಎಂಬುದು ಸಾಬೀತಾಗಿದೆ

ನವ ವಸಂತದಿ ನಾವು ಬೆಳಕನ್ನೆ ಬಯಸುವ ಚಕೋರ ವಾಗಬೇಕಿದೆ ಗಾಲಿಬ್

ಎನ್ನುವ ಕವಿ ಹೊತ್ತಿ ಉರಿಯುವ ಭೂಮಿಯ ದುಃಖ ನಂದಿಸುವದರತ್ತಲೂ ಗಮನ ಕೊಡುತ್ತಾನೆ. ಭೂಮಿ ಈ ಕವಿಗೆ ಬರೀ ಮಣ್ಣಲ್ಲ ,ಹೆತ್ತೊಡಲು,  ಅಲ್ಲಿ ಈಗ ಬೆಂಕಿ ಬಿದ್ದುದಕ್ಕೆ ವಿಷಾದ ಕವಿಗೆ ಕಾಡುತ್ತಿದೆ.

ಗಜಲ್ ೨ ರಲ್ಲಿ ಕವಿ ಈ ಬೆಂಕಿಯ ನಂದಿಸುವವರ ವಿಳಾಸ ಹುಡುಕುತ್ತಿದ್ದಾರೆ.ಚಂಪೂ ಅವರ ಗಜಲ್ ವಿಶೇಷವಾಗೋದೇ ಇಲ್ಲಿ. ಅವರಿಗೆ ಕವಿತೆ ವಯಕ್ತಿಕ ನೋವಿನ ಅಹವಾಲು ಮಾತ್ರವಲ್ಲ, ಅದು ಸಮುದಾಯದ ನೋವನ್ನೂ ಹೇಳುವ ಮಾಧ್ಯಮ ಎಂಬ ಅರಿವಿದೆ.

ಹೆತ್ತೊಡಲ ಬಡಬಾಗ್ನಿಯ ನಂದಿಸುವವರಿದ್ದರೆ ಚೂರು ವಿಳಾಸ ಕೊಡಿ

ನಿಂತ ನೆಲದ ನೋವಿಗೆಮರುಗುವವರಿದ್ದರೆ ಚೂರು ವಿಳಾಸ ಕೊಡಿ

ಎನ್ನುವ  ಚಂಪೂ ಮುಂದಿನ  ಗಜಲ್ ನಲ್ಲಿಯೂ ಇದೇ ಪ್ರಶ್ನೆ ಮುಂದುವರಿಸುತ್ತಾರೆ.

ಊರ್ವಿಯ ಮೈತುಂಬ ಬಾಸುಂಡೆ ಬೆಂಕಿಯ ಮುದ್ರೆ ಮನೆಮಾಡಿದೆ ಸಾಕಿ

 ನೀರು ಕೂಳು ಕಾಳಿಲ್ಲದೆ ಹೆಣವಾಗಿಮಲಗಿದ ಚಿತ್ರ  ಅವಳೆದೆಯಲ್ಲಿದೆ ಸಾಕಿ

ಹೀಗೆ ಗಜಲ್ ೨ ಮತ್ತು ೩ ರಲ್ಲಿ ಹೊತ್ತಿ ಉರಿಯುವ ಜಗತ್ತಿ ನದೆ ಚಿಂತೆ‌ ಕವಿಗೆ. ನೆಲ ಹೊತ್ತಿ ಉರಿದರೆ ಉಳಿಯಲೆಲ್ಲಿ ದೆ  ದಾರಿ? ಎಂಬ ಪ್ರಶ್ನೆ ಕವಿಯದು ಮಾತ್ರವೇ ಅಲ್ಲ, ಎಲ್ಲ ಸಹೃದಯಿ ಮನಸ್ಸುಗಳದೂ ಆಗಿದೆ.

ಸಂಕಟಗಳೇ ತುಂಬಿರುವಾಗ ಕವಿತೆ ಎಂದಿಗೆ ಖುಷಿಯ ಮಾತಾಗಲು ಸಾಧ್ಯ? .ಗಜಲ್ ಕವಿ  ಚಂಪೂ ತಾವುಂಡ ನೋವುಗಳನ್ನು ಗಜಲ್ ಆಗಿಸಿದ್ದಾರೆ.ಕವಿ ಬದುಕನ್ನು ಬಿಟ್ಟು ಬದುಕಲಾರ .ಚಂಪೂ ಅವರು ವಚನಕಾರರಂತೆ ತಮ್ಮ ವೃತ್ತಿ ಬದುಕಿನ ವಿವರಗಳನ್ನು ಬಳಸಿ ಗಜಲ್ ಕಟ್ಟುವುದು ಇಡೀ ಗಜಲ್ ಸಾಹಿತ್ಯ ದಲ್ಲಿಯೇ ವಿಶೇಷವಾಗಿದೆ. ಇಂದೇನೋ ತನ್ನ ಮೂಲ ವೃತ್ತಿಯಿಂದ ಕವಿ ದೂರ ಬಂದಿರಬಹುದು. ಆದರೆ ತನ್ನವರ ಮೂಲ ಬದುಕಾದ ಆ ವೃತ್ತಿಯನ್ನು ಹೇಗೆ ಮರೆಯಬಲ್ಲ? ಹಾಗಾಗಿ

ತಾಗಾ ಗಳಿಗೆ ಖನಾ ಖಂಡಿಕಿ ಸಾಕಳಾಗುಬ್ಬಿ ಚಕ್ರಗಳನ್ನೇ ಹೊದ್ದುಮಲಗುವ ಆಸೆ

ಪಂಚರಂಗಿಯನು ಜಗಕೆ ಹಂಚಿ ಹಲುಬಿದರೂ ಕತ್ತಲೆ ಬಾಯ್ದೆರೆದು ನಗುತ್ತಿದೆ ಸಾಕಿ

ಇಡೀ ಜಗತ್ತಿಗೆ ಮೈಗೆ ಬಟ್ಟೆ ಹಂಚುವ  ನೇಕಾರ ಮಾತ್ರ ತಾನು ಮೈಗೆ ಬಟ್ಟೆ ಇಲ್ಲದಂತೆ ಬದುಕುವದು ವಿಷಾದದ ಸಂಗತಿಯಾದರೂ ಸತ್ಯವೇ ಆಗಿದೆ.”ದೀಪದ ಕೆಳಗೆ ಕತ್ತಲೆ” ಎನ್ನುವ ಹಾಗೆ ಇಂದು ದುಡಿಯುವವರೇ ಹೊಟ್ಟೆ ತುಂಬ ಅನ್ನವಿಲ್ಲದೆ ಬದುಕುವ ದುರಂತ ಚಿತ್ರ ಗಜಲ್ ನಲ್ಲಿದೆ. ತಾಗಾ,ಲಾಳಿ ,ಖನಾ, ಖಂಡಿಕಿ, ಸಾಕಳ್ಯಾ ,ಗುಬ್ಬಿ  ಎನ್ನುವವು ಅರಿವೆ ನೇಯುವವರ ( ನೇಕಾರಿಕೆಯ)ಪಾರಿಭಾಷಿಕ ಪದಗಳು.ಇಲ್ಲಿ ಅವುಗಳನ್ನು ಚಂಪೂ ಎಷ್ಟು ಅರ್ಥವತ್ತಾಗಿ ಹೆಣೆದಿದ್ದಾರೆ ಎಂದರೆ ಅವರ ಗಜಲ್ ಗೆ ವಿಶೇಷ ಶಕ್ತಿ ದಕ್ಕಿದ್ದೇ ಈ ವೃತ್ತಿ ಮೂಲದ ಪದಗಳಿಂದಾಗಿ ಎಂದರೆ ತಪ್ಪಿಲ್ಲ.

ಜಗತ್ತು ತುಂಬ ಕ್ರೂರಿ. ಇದ್ದಾಗ ಅನ್ನ ಕೊಡದೆ ಹಸಿವೆಯಿಂದ ಕೊಂದು, ಸತ್ತ ಮೇಲೆ ಸತ್ತವರಿಗಾಗಿ ಅಳುವ ನಾಟಕ ಮಾಡುವ ಜಗತ್ತಿದು. ಇಂತಹದೊಂದು ಚಿತ್ರ ಗಜಲ್ ೫ ರಲ್ಲಿದೆ.

ನನ್ನ ಶವದ ಮೇಲಿರುವ ಹೂವುಗಳೇ ಇವರು ಇಂದಿಲ್ಲಿ ಏಕೆ ಅಳುತ್ತಿದ್ದಾರೆ

ಹಿಡಿ ಅನ್ನ ಹಾಕದೇ ಬೀದಿಗೆ ತಳ್ಳಿದವರು ನಿಂತಿಲ್ಲಿ ಏಕೆ ಅಳುತ್ತಿದ್ದಾರೆ

ಎನ್ನುವ ಶೇರ್ ನ ಸಾಲುಗಳು ಮನುಷ್ಯರ ಅನ್ಯಾಯ ವನ್ನು ಆಕ್ರೋಶಪೂರ್ವಕವಾಗಿ ಬಣ್ಣಿಸಿದೆ.”ಬಾಯಾರಿ ಬಿಕ್ಕುವಾಗ ಕೈಯೆತ್ತಿನೀರು ಹಾಕಿದವರಿಲ್ಲ ಇಂದು ನನ್ನ ಹೆಣಕ್ಕೆ ಎಣ್ಣೆ ಗಂಧ ತೇದು ಇಷ್ಟಿಲ್ಲಿ ಏಕೆ ಅಳುತ್ತಿದ್ದಾರೆ” ಎನ್ನು ಷೇರ್ ಮನುಷ್ಯನ ಸ್ವಾರ್ಥಮಯ‌ ನಡವಳಿಕೆ ಯನ್ನು ಇನ್ನಷ್ಟು ಪ್ರಶ್ನಿಸಿದೆ.

ಚಂಪೂ ಅವರ ಗಜಲ್ ಗಳ ವಸ್ತು ವೈವಿಧ್ಯ ತುಂಬ ವ್ಯಾಪಕ. ತನ್ನೊಡಲಲ್ಲಿ  ಮಗು ಮೂಡದ ತಾಯಿಯ ದುಃಖ ಯಾರೂ ಊಹಿಸದ್ದು .ಅದು ಜಗತ್ತಿನ ಅತಿದೊಡ್ಡ ದುಃಖ.ಇಲ್ಲೊಬ್ಬ ತಾಯಿ ತನಗೊಂದು‌ ಮಗು ಕರುಣಿಸುವಂತೆ ಕಾಣದ ದೇವರಿಗೆ ಬೇಡುತ್ತಿದ್ದಾಳೆ (.ಗಜಲ್ ೬) ಬಹುಶಃ ಇದ್ದ ಒಬ್ಬ ಕಂದನನ್ನು ಕಳೆದುಕೊಂಡು ಮತ್ತೊಂದು‌ ಮಗುವನ್ನು‌ ಕರುಣಿಸು ಎಂಬ ಬೇಡಿಕೆ ಅವಳದು ಕಾಣಿಸುತ್ತದೆ.

ಸಾವಿಲ್ಲದಮನೆಯ ಸಾಸುವೆಕೇಳದೆ ಕರುಳ ಬಳ್ಳಿಯ ಕಣ್ಣು ತೆರೆಸಿ ಬಿಡು ಹುಜೂರ್

ಸಕ್ಕರೆ ಸವಿಗಾರ ವೀಳ್ಯದ ರುಚಿಗಾರನ ನನ್ನ ಉಡಿಯೊಳು ಹಾಕಿ ಬಿಡು ಹುಜೂರ್

ಗಜಲ್ ಕವಿ ಕೂಡ ನಮ್ಮ ಹಿಂದಿನ ಸಾಹಿತ್ಯವನ್ನು ಹೇಗೆ ತನ್ನದಾಗಿಸಿಕೊಳ್ಳಬಹುದು ಎನ್ನುವದಕ್ಕೆ ಚಂಪೂ ಅವರ ಗಜಲ್ ಗಳೇ ಸಾಕ್ಷಿ .‌ಅವರ ಹಿಂದಿರುವ ಅಪಾರ ಓದು ಅವರಿಂದ ಹೊಸ ಹೊಸ ರೂಪಕಗಳನ್ನು ಕೊರೆಯಿಸಿದೆ. ಹಳೆಯ ನುಡಿಗಟ್ಟು ಹೊಸತಾಗಿ ರೂಪಗೊಂಡಿವೆ . ಉದಾಹರಣೆಗೆ  “ಗೆಜ್ಜಿ ಸಪ್ಪಳ ಕೇಳಿ ನಿಬ್ಬಣದೆತ್ತು ಬೆದರಿಸುವ”:ರೂಪಕ,” ಗುಲಗಂಜಿ ಗಿಡಕ ಗುರಿಯಿಟ್ಡು ಆಡುವ ” ಇಂಥವು ಜನಪದ ಸಾಹಿತ್ಯದ ಓದಿನ ಹಿನ್ನೆಲೆಯಿಂದ ಪಡೆದವು.ಅವನ್ನು ಬಳಸಿ ಕೊಂಡು ಕವಿ ಸೃಷ್ಟಿಸುವ ಹೊಸ ರೂಪಕಗಳು ಮನ ತಣಿಸುತ್ತವೆ.

ಕವಿಯ ಸಾಮಾಜಿಕ ಪ್ರಜ್ಞೆ ಮೆಚ್ಚುವಂಥದು. ಅವರನ್ನು ಚಿಂದಿ ಆಯುವ ಹುಡುಗಿಯ ಬದುಕೂ ಚಿತ್ರಿಸಲ್ಪಡುವ ಬದುಕಾಗಿ ಕಾಣಿಸುತ್ತದೆ.ಅವಳ ಬಡತನ ನೋವು ,ಕಾಡಿದೆ. ಮನುಷ್ಯರಿಗಿಂತ ಪಕ್ಷಿಗಳೇ ಜಾಸ್ತಿ ಹೃದಯವಂತರು ಎನ್ನುವ ಸತ್ಯ ಗಜಲ್ ಆಗಿದೆ.ಚಿಂದಿ ಆಯುವ ಹುಡುಗಿಯ ಸುತ್ತ ಸೊರಗಿದ ಕನಸುಗಳನ್ನು ಹುಡುಕುವ ಕವಿ ಗೆ ಅನ್ನ ಎಸೆಯುವ ಸಿರಿವಂತರಿಗಿಂತ ಕಾಗೆಗಳೇ ಶ್ರೇಷ್ಠ ಎನ್ನಿಸಿವೆ.

ಸಿರಿವಂತರೆಸೆದ ಅನ್ನ ತಿನ್ನಲು ಕೂಡಿದ ಕಾಗೆ ಗುಬ್ಬಿಗಳ ದಂಡು

ಇವಳಿಗೂ ಚೂರು ಕೊಡೊಣವದು ಕೂಗಿ ಕೂಗಿ ಕರೆಯುತ್ತಿವೆ ಸಾಕಿ

ಎನ್ನುವಲ್ಲಿ ಪ್ರಾಣಿಗಳೇ ಎಷ್ಟೋ ಮೇಲು ಎನ್ನುವ ಮನೊಭಾವವೇ ಇದೆ.ಇಂದು ಮನುಷ್ಯರಿಗಿಂತ ಪಕ್ಷಿಗಳ ದಾರಿಯೇ ಶ್ರೇಷ್ಠ ಎಂದು ಗಜಲ್ ಸಾರುತ್ತದೆ.

ತನ್ನಮನಸ್ಸನ್ನು ತಾನು ಪರಿಕ್ಷಿಸಿ ನೋಡುವ ,ತಾನು ನಡೆದುದೆ ಸರಿಯೋ ತಪ್ಪೋ ಎಂದು ನಿಕಷ ಕ್ಕೊಳಪಡಿಸುವ ಸಾಹಿತ್ಯಕ್ಕೆ ವಚನಕಾರರೇ ಉದಾಹರಣೆ .ಅವರ ಹಾಗೆ ತಮ್ಮನ್ನು ತಾವು ಪರೀಕ್ಷೆಗೊಡ್ಡಿದವರಿಲ್ಲ. ಇಲ್ಲಿ ಬುದ್ದನಿಗೆ ಕವಿ ವಿನಂತಿಸುತ್ತಿದ್ದಾನೆ ಎಲ್ಲ ರೊಳಗೆ ಅಂಗುಲಿಮಾಲ ನ ಅಂಶ ಒಂದಿಷ್ಟಾದರೂ ಇದ್ದೇ ಇದೆ. ದೇವರು‌ ಮತ್ತು ಸೈತಾನರ ಮಿಶ್ರಣವೇ ಮನುಷ್ಯ. ಆದ್ದರಿಂದಲೇ ಗಜಲ್ ೯ ರಲ್ಲಿ

ನನ್ನೊಳಗಿನಅಂಗುಲಿಮಾಲನಿಗೆ ಕರೆದು ಚೂರು ಬುದ್ದಿಹೇಳು  ಬುದ್ಧ ಪ್ರಭುವೆ

ಶಾಂತಿ ಕಡಲ ಕದಡುವ ಕೋಪಿಷ್ಠನಿಗೆ ಕೂರಿಸಿ ಪಾಠ

ಹೇಳು ಬುದ್ದ ಪ್ರಭುವೆ .

ಎನ್ನುವ  ಶೇರ್ ನ ಸಾಲುಗಳು ತನ್ನೊಳಗಿನ ಅಹಂಕಾರ ವನ್ನು,ಶಾಂತಿ ಕದಡುವ ದುಷ್ಟತನವನ್ನು ನಾಶಗೊಳಿಸು ಎಂದು ಬೇಡಿಕೊಳ್ಳುತ್ತವೆ.

   ಇಲ್ಲಿನ ಗಜಲ್ ಗಳಲ್ಲಿ ತನ್ನ ಪ್ರೇಮಿಗೆ ಸಲ್ಲಿಸುವ ಪ್ರೀತಿಯ ನಿವೇದನೆ‌ ಇಲ್ಲವೆಂದು ಭಾವಿಸ ಬಾರದು. ಅದೇ ತಾನೇ ಅರಳಿದ ತಾಜಾ ಹೂವಿನಂತಹ ಸೊಗಸಾದ ಪ್ರೇಮದ ಗಜಲ್ಗಳ ಗುಚ್ಚವೇ ಇಲ್ಲಿದೆ.ತನ್ನ ಪ್ರೇಮಿಗೆ ನವಿರಾಗಿ

ಮೋಹಕರಾತ್ರಿಗಳಲಿ ಚುಕ್ಕಿಗಳು ಪುಟಿಪುಟಿದು ಚಿಮ್ಮುವಾಗ

ಹಚ್ಚ ಹಸುರಿನ ಗರಿಕೆಯಮೇಲೆ ಅಂಗಾಲು ಇಟ್ಟಂತೆ ಈಜಿ ಬಿಡು ಗೆಳತಿ

ಎಂದು ಬಿನ್ನವಿಸುತ್ತಾ‌ನೆ. ತಾನು ಬಡವನೆನ್ನುತ್ತಲೇ ತನ್ನ ಎದೆಯ ಸಿರಿವಂತಿಕೆಯ ಗಜಲ್ ನಲ್ಲಿ ತುಂಬಿ ವಿವರಿಸಿದ ರೀತಿ‌ ಮೋಹಕವಾಗಿದೆ.ಚಂಪೂ ಕಟ್ಟುವ ರೂಪಕಗಳು ತುಂಬ ಹೊಸತೂ, ನವಿರು ತುಂಬಿದ ಅಲರಿನಂತೆಯೋ ಮಧುರ ವಾಗಿವೆ.

ಉಸಿರ ತಿತ್ತಿಯಲೆ ನಿನ್ನ ಹೆಸರ ಜಪ ಮಾಡುವ ಬರಿಗೈ ಫಕೀರನ ಜೋಳಿಗೆ ನನ್ನದು

ಹರಿದ ಜೇಬಿದ್ದರೂ ಕಣ್ಣ ಬಿಂದು ಕೆಳಜಾರದಂತೆ ಕಾಯುವ ಬಡವ ನಾನು(ಗಜಲ್೧೬)

ಒದ್ದೆಯಾಗುವ ಕಣ್ಣಂಚುಗಳ ಒರೆಸುವ ನಿನ್ನೆದೆಯ ಚೌಕಿದಾರ ನಾನು

ನಿನ್ನ ಕನಸುಗಳ ಅಯನದಲಿ ಪಾಲ್ಗೊಳ್ಳುವ ನಿನ್ನೆದೆಯ ಚೌಕಿದಾರ ನಾನು(ಗಜಲ್ ೪೩)

ಹೀಗೆ ಇಲ್ಲಿನ ಮಧುರ ಪ್ರೇಮದ ಆಲಾಪದ ಶೇರ್ ಗಳೂ ಇವೆ. ಒಮ್ಮೆ ” ಒಲವ ಹೊಳೆಯಲಿ ಪ್ರೀತಿ ದೋಣಿ ತೇಲಿಸುವೆ ಅಂಜದಿರು ಮೊಹಬ್ಬತ್” ಎಂದ ಪ್ರೇಮಿಯೇ ಮಗದೊಮ್ಮೆ ವಿರಹದ ನೋವಿಗೆ ತುತ್ತಾಗುತ್ತಾನೆ.ಮತ್ತೆ ನೋವಿಲ್ಲದ ಪ್ರೇಮವದೆಲ್ಲಿದೆ? ಅಗಲಿಕೆಯ ತಾಪಕ್ಕೆ ಬೆಂದು ಹೋಗದ ಪ್ರೇಮ ವಿದ್ದೀತೇ? ಇಲ್ಲಿಯೂ ಆ ನೋವಿನ ಉರಿಯ ಅಲೆಗಳಿವೆ.”ಜಗವೆಲ್ಲ ಹುಡುಕಿದರೂ ಎಲ್ಲೂ ಕಾಣದ ಕುಂಕುಮವತಿಯನು ಹುಡುಕಿಯೇ ಹುಡುಕಿದರೂ ಕಡೆಗೂ ಆಕೆ ಸಿಗದ ನೋವೂ”  ಇಲ್ಲಿದೆ.

ಚಂಪೂ ಅವರ ಗಜಲ್ಗಳ ವ್ಯಾಪ್ತಿ‌ ಕಣ್ಕುಕ್ಕುವಂತಹದು ಬುದ್ಧ ನನ್ನು ಎಳೆದುತಂದ ಕವಿ ಇನ್ನೊಂದರಲ್ಲಿ ಅಂಬೇಡ್ಕರ್ ಅವರ ಚಿತ್ರವನ್ನು ಅರ್ಥವತ್ತಾಗಿ ಸೆರೆ ಹಿಡಿದಿದ್ದಾನೆ.ಅಂಬೆಡ್ಕರ್ ಅವರನ್ನು ಕೇವಲ ದಲಿತರ ಪ್ರತಿನಿಧಿ ಎಂದು ಹೊಗಳುವ ಇಷ್ಟ ಕವಿಗೂ ಇಲ್ಲ. ಅದಕ್ಕೆ ಗಜಲ್ ೨೫ ರಲ್ಲಿ ಅಂಬೆಡ್ಕರ್ ಅವರ ವ್ಯಕ್ತಿತ್ವವನ್ನು ಹಿಡಿಯ ಬಯಸಿದ ಕವಿ

ನಿನ್ನನ್ನು ದಲಿತ ಬಲಿತಕ್ಕೆ ಸೀಮಿತ ಮಾಡಿ ಹೊಗಳುವ . ಮಂಡೂಕ ನಾನಲ್ಲ.

ಜಗದಗಲ ಮಿಗಿಲಗಲ, ಬಾನಗಲ,ತಬ್ಬಿ ಹರಡುದವ ನೀ ಭೀಮ

ಎಂದೂ ಆ ಆಸೀಮ ವ್ಯಕ್ತಿತ್ವವನ್ನು ಹಿಡಿಯುವ ಪ್ರಯತ್ನ ವನ್ನು‌ ಮಾಡಿದ್ದಾರೆ.

ಅವ್ವನಿಲ್ಲದ ಕವಿತೆ ಇರಲು ಸಾದ್ಯವೇ? ಜಗತ್ತಿನ ಎಲ್ಲ ಸೃಷ್ಟಿಯ ಹಿಂದೆ ತಾಯಿ ಇದ್ದಾಳೆ.ಚಂಪೂ ಅವರ ಒಂದು ಗಜಲ್ ಅವ್ವನ ಚಿತ್ರವನ್ನು ತುಂಬ ಶಕ್ತಿವತ್ತಾಗಿ ಚಿತ್ರಿಸಿದೆ.ಅವ್ವ ಬಡತನದಲ್ಲೂ ತನ್ನೆಲ್ಲ ಬಳಗವನ್ನು ಸಾಕಿದ ಅಮೃತನಿಧಿ. “ಹೊಕ್ಕಳ ಹೂವಿಗೆ ಹೊತ್ತಿನ‌ ಕೂಳು ಹೊಂದಿಸಲು ಅವಳು” ಸದಾ ಕಷ್ಟಪಡುತ್ತಾಳೆ. ಅವ್ವನ ಆ ಶ್ರೀಮಂತ ಚಿತ್ರ ಇದು-

ನಮ್ಮವ್ವನ ಸೆರಗಲಿ ಬಿಚ್ಚು ನುಡಿಯ ಬಂಡಾರದ ಗಂಟಿದೆ ಸಾಕಿ

ತೊಟ್ಟಿಲಂತೆ ತೂಗುವ ಎಲೆ ಅಡಿಕೆ ಚೀಲವೇ ಚಿರಾಸ್ತಿಯಾಗಿದೆ.

ಬಂಡಾರದ ಗಂಟು ಸಾಮಾನ್ಯವಾದದ್ದಲ್ಲ.ಅದು ಶಕ್ತಿದೇವತೆ ಯಲ್ಲಮ್ಙನ  ಗಂಟು.ಇನ್ನು ಅವಳ ನಡೆದಾಗಲೊಮ್ಮೆ ನಡುವಿನಲಿರುವ ಎಲೆ ಅಡಿಕೆ ಚೀಲ ತೂಗುತ್ತದೆ ಅದು ಜಗತ್ತಿನ  ಜೀವವನ್ನೇ ತೂಗುವ ತೊಟ್ಟಿಲು ಎಂಬ ರೂಪಕದಲ್ಲಿ ಹಿಡಿಯುವ ಯತ್ನ ಮಾಡುತ್ತಾರೆ. ಲಂಕೇಶರ ಅವ್ವನ ಪ್ರಭಾವದಿಂದ ಯಾವ ಯುವ ಕವಿಯೂ ಪಾರಾಗಿಲ್ಲ..ಅಲ್ಲಿಯೂ ಅವ್ವ ಸತ್ತ ಎಮ್ಮೆಗೆ ಕಳೆದ ಕರುವಿಗೆ ಅಳುತ್ತಾಳೆ . ಇಲ್ಲಿಯೂ ದನ -ಕರು,ಕುರಿ – ಕೋಳಿಗಳನ್ನು ಚೊಚ್ಚಲ‌ ಮಕ್ಕಳಂತೆ‌ ಸಾಕಿ ಸತ್ತಾಗ ಅಳುವ ತಾಯಿ ಇದ್ದಾಳೆ.

ದಲಿತರ ನೋವಿಗೂ ಚಂಪೂ ಅವರ ಗಜಲ್‌ ಮಿಡಿದಿವೆ .ಇಲ್ಲಿ ಚೋಮನ ಹಾಡು ಇನ್ನೂ ನಿಂತಿಲ್ಲ. .ಊರ ಕೇರಿ ಕೇರಿಗಳಲ್ಲಿ ಚೋಮನ ನೋವಿದೆ. ಗದ್ದುಗೆ ದೇವರನು ಇನ್ನೂ ಮುಟ್ಟದ ಕಥೆಗಳು ಊರು ಊರಲ್ಲೆಲ್ಲ ಇವೆ.ಅದೇ ವಿಷಾದ-

ಸೋತ ಬದುಕನು ಶಪಿಸಿ ಗುಳೆ ಹೊರಡುವದು ಇನ್ನು ತಪ್ಪಿಲ್ಕ. ಚೋಮ

ದಲಿತದಲಿತನೆಂದೇ ಹುರಿದು ಮುಕ್ಕುವದು ಇನ್ನೂಮುಗಿದಿಲ್ಲ ಚೋಮ

ಎನ್ನುವ  ಶೇರನಲ್ಲಿ ತುಂಬಿ ಬಂದಿದೆ.ದೇವರೂ ಇಲ್ಲಿ ಉಳ್ಳವರ ಪರವಾಗಿಯೇ ಇರುವದನ್ನು ಗಜಲ್‌ ಕವಿ ಚಂಪೂ ಕಾಣಿಸುತ್ತಾರೆ.ಅಷ್ಟೇ ಅಲ್ಲ,  ದೇವರಂಥ ದೇವರೂ ಕುದುರೆ ಆನೆ ಹುಲಿಗಳ ಬಿಟ್ಟು ಮೇಕೆ‌ಮರಿ ಬಲಿ ಬೇಡುವದರ ಹಿಂದಿನ ಹುನ್ನಾರವನ್ನು ಬಯಲಿ ಗೆಳೆಯುತ್ತಾರೆ.

ಚಂಪೂ ಅವರ ಭಾಷಾ ಪಾಂಡಿತ್ಯದ ಅನಾವರಣ ಇಲ್ಲಿನಗಜಲ್ ಗಳಲ್ಲಿ  ಸಾಕಷ್ಟಾಗಿದೆ.‌ಪ್ರತಿ ಗಜಲ್ ನಲ್ಲೂ ಕನ್ನಡದ ಅಪರೂಪದ ಪದಗಳನ್ನು ಬಳಸಿ ಅವಕ್ಕೆ ಗಜಲ್ ಕೆಳಗೆ ಅರ್ಥವನ್ನು ಅವರು ಕೊಟ್ಟು ಉಪಕರಿಸಿದ್ದಾರೆ.ಹೊಸ ಹೊಸ ಹೋಲಿಕೆ ನುಡಿಗಟ್ಟು ಪ್ರತಿಮೆ ರೂಪಕಗಳ ಸೃಷ್ಟಿಯಲೂ ಅವರು ಹಿಂದೆ ಸರಿದಿಲ್ಲ.

ಅನೇಕ ಹೊಸತನದ ಗುಚ್ಛವಾಗಿರುವ ಗಜಲ್ ಗಳ ಕಟ್ಟನ್ನು‌ಕೊಟ್ಟ ಈ ಗಜಲ್ ಕವಿಯ ಎರಡನೆಯ ಸಂಕಲನವನ್ನೂ ನಾವು ಕುತೂಹಲದಿಂದ ಗಮನಿಸಬೇಕಿದೆ.ನಿತ್ಯವೂ ಹರಿದು ಬರುವ ಗಜಲ್ ಗಳ ನಡುವೆ ಚಂಪೂ ತುಸು ಭಿನ್ನರಾಗಿಯೇ ನಿಲ್ಲುವ ಮೂಲಕ ಗಜಲ್ ಕೋವಿದರ ಗಮನಸೆಳೆದಿದ್ದಾರೆ.ಅವರ ಗಜಲ್ ಯಾಣ ಮುಂದುವರೆಯಲಿ ಎಂದು ಹಾರೈಸುತ್ತೇನೆ.


ಯಾಕೊಳ್ಳಿ

One thought on “ಚಂದ್ರನ ಬೆಳಕನರಸುವ ” ಚೆಂಬೆಳಕ ದಾರಿಯಲಿ”

Leave a Reply

Back To Top