ಅಂಕಣ ಸಂಗಾತಿ

ಸಂಗಾತಿ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಸಾಹಿತ್ಯದ  ನಂತರ ಇತರೆ ಸೃಜನಶೀಲ ರಂಗಗಳ ಬಗ್ಗೆ ಬರಹಗಳನ್ನು ಹಾಕುವ ದಿಸೆಯಲ್ಲಿ ಮೊದಲ ಹೆಜ್ಜೆ ಇಟ್ಟಿದ ಸಿನಿಮಾ ಬಗ್ಗೆ  ಸಿನಿ ಸಂಗಾತಿ  ಅಂಕಣ ಈ ವಾರದಿಂದ ಆರಂಭವಾಗುತ್ತಿದೆ.ಸಿನಿಮಾ  ಬಗ್ಗೆ ಅಪಾರ ಆಸಕ್ತಿ ಇರುವ ಕುಸುಮಾ ಮಂಜುನಾಥ್ ಇದನ್ನು ಪ್ರತಿ ಸೋಮವಾರ ಬರೆಯಲಿದ್ದಾರೆ. ಎಂದಿನಂತೆ ಓದು, ನಿಮ್ಮ ಅನಿಸಿಕೆ ನಮಗೆ ಮುಖ್ಯ.@ ಸಂಪಾದಕರು

ಸಿನಿ ಸಂಗಾತಿ

777 ಚಾರ್ಲಿ

ಒಂದು ಸುಂದರ ಅನುಭೂತಿ

777 ಚಾರ್ಲಿ- ಸಿನಿಮಾ ವಿಮರ್ಶೆ-ಚಾರ್ಲಿ ಒಂದು ಸುಂದರ ಅನುಭೂತಿ

ನಾಡಿನ ಮುಖ್ಯಮಂತ್ರಿ  ಆ ಸಿನಿಮಾ ನೋಡುತ್ತಾರೆ .ಗಳಗಳ ಕಣ್ಣೀರು ಹಾಕುತ್ತಾರೆ. ಮೆಚ್ಚಿಗೆ ಸೂಸಿ ಸಿನಿಮಾದ ವೀಕ್ಷಣೆಗೆ ನೂರು ಪರ್ಸೆಂಟ್ ತೆರಿಗೆ ವಿನಾಯಿತಿ ಘೋಷಿಸುತ್ತಾರೆ .ಎಲ್ಲರ ಬಾಯಲ್ಲೂ ಆ ಸಿನಿಮಾದ ಬಗ್ಗೆ ಚರ್ಚೆ.” ಚಾರ್ಲಿ ಚಾರ್ಲಿ ಚಾರ್ಲಿ” ನಾವೆಲ್ಲ “ಚಾರ್ಲಿ “ಅಲೆಯಲ್ಲಿ ಮಿಂದಿದ್ದೇವೆ .ಚಾರ್ಲಿ ಮೇನಿಯಾಗೇ ಸಿಲುಕಿದ್ದೇವೆ .ಚಾರ್ಲಿ ಪ್ರಭಾವಕ್ಕೆ ಸಿಲುಕಿ ಅಲ್ಲೊಬ್ಬರು ತಮ್ಮ ನಾಯಿಗೆ ಸೀಮಂತ ಮಾಡಿದ್ದಾರೆ.ಮತ್ತೊಬ್ಬರು ತಮ್ಮ ನಾಯಿಯ ಹುಟ್ಟುಹಬ್ಬ ಆಚರಿಸಿ ಊಟ ಹಾಕಿಸಿದ್ದಾರೆ.

     ಹಾಗಿದ್ದರೆ ಏನಿದು? ಯಾವುದು? ಮನುಷ್ಯ ಹಾಗೂ ಪ್ರಾಣಿ ನಡುವೆಯೆ ಬಾಂಧವ್ಯ?!

    ಕುವೆಂಪುರವರ “ಮಲೆಗಳಲ್ಲಿ ಮದುಮಗಳು” ವಿನ ‘ಗುತ್ತಿ -ಹುಲಿಯರ ‘ಜೋಡಿ ,ಪೂರ್ಣಚಂದ್ರ ತೇಜಸ್ವಿಯವರ “ಕರ್ವಾಲೊ” ಹಾಗೂ “ಪರಿಸರದ ಕಥೆ”ಗಳಲ್ಲಿ ಕಿವಿ ಹಾಗೂ ತೇಜಸ್ವಿಯವರ ಒಡನಾಟದ ಚಿತ್ರಿಕೆ ನಮ್ಮ ನೆನಪಿನಲ್ಲಿವೆ .ಚಾರ್ಲಿ ಸಿನಿಮಾ ಮತ್ತೊಮ್ಮೆ ಮನುಷ್ಯ ಹಾಗೂ ನಾಯಿಯ ಒಡನಾಟ ವನ್ನು ಚೆನ್ನಾಗಿ ತಿಳಿಸುತ್ತದೆ. ಚಾರ್ಲಿ ಒಂದು ಸುಂದರ ಯಾತ್ರೆ, ನಿಷ್ಕಲ್ಮಶ ಪ್ರೀತಿಯ ಸಿಂಚನ ಇಲ್ಲಿದೆ.

       ಧರ್ಮನೆಂಬ ಒರಟು ಒಂಟಿ ನಾಯಕ ಕರಗಿ

ನೀರಾಗಿ ಚಾರ್ಲಿಗಾಗಿ ಮಿಡಿಯುವ  ಪರಿ ಹೃದಯಸ್ಪರ್ಶಿ.

ಚಾರ್ಲಿ ಸಿನಿಮಾ ಒಂದು ಭಾವತೇರಿನ ಯಾತ್ರೆ .ಸೂಕ್ಷ್ಮತೆಗಳ ಹಂದರ. ಇಲ್ಲಿ ಮೌನವಾಗಿ ಪ್ರೀತಿಯ ಅರ್ದತೆಯನ್ನು ತಿಳಿಸುತ್ತಾರೆ .ಅದು ನಮ್ಮನ್ನು ಚಕಿತಗೊಳಿಸುತ್ತದೆ.

      ಬಾಲ್ಯದಲ್ಲೇ ತನ್ನ ತಂದೆ-ತಾಯಿ ಕುಟುಂಬವನ್ನು ಕಳೆದುಕೊಳ್ಳುವ ನಾಯಕ ಒಂಟಿಯಾಗಿ ಬೆಳೆಯುತ್ತಾನೆ .ತನ್ನ ಸುತ್ತಲೂ ಒಂದು ಕೋಟೆಯನ್ನು ನಿರ್ಮಿಸಿಕೊಂಡಬಿಡುತ್ತಾನೆ .ತಾನು ತನ್ನ ಕೆಲಸ ಫ್ಯಾಕ್ಟರಿ ತನ್ನ ಮನೆ ಇಷ್ಟೇ ಅವನ ಪ್ರಪಂಚ .ಮನೆ ಯಾದರೂ ಒಂದು ಕೊಳಕು ತಾಣ. ಎಲ್ಲೆಡೆ ಸಿಗರೇಟ್ ತುಂಡುಗಳು ,ಬಿಯರ್ ಬಾಟಲ್ ಗಳು ಚೆಲ್ಲಾಡಿ ಅಸ್ತವ್ಯಸ್ತ .ಹೊರಗಡೆಯ ಜನಸಂಪರ್ಕವನ್ನು ಇಷ್ಟಪಡದ ನಾಯಕ ಧರ್ಮ ಎಲ್ಲರ ಬಾಯಲ್ಲಿ ‘ಹಿಟ್ಲರ್’.ನಗುವನ್ನೇ ಕಾಣದ ಒರಟು ನಾಯಕ ಸದಾ ನೋಡುವುದು ಮಾತ್ರ ‘ಚಾರ್ಲಿ ಚಾಪ್ಲಿನ್’ನ ಹಾಸ್ಯ. ಹೀಗೆ ಒಂದು ರೀತಿಯ ಕಾಠಿಣ್ಯವನ್ನು ತನ್ನಲ್ಲಿ ಆವಾಹನೆ ಮಾಡಿಕೊಂಡ ನಾಯಕನ ಜೀವನದಲ್ಲಿ  ಹೆಣ್ಣು ನಾಯಿ ಪ್ರವೇಶಿಸ್ತಾಳೆ . ನಂತರ ‘ಚಾರ್ಲಿ’ ಎಂದು ನಾಯಿಗೆ ಅವನೇ ನಾಮಕರಣ ಮಾಡುತ್ತಾನೆ .ಅವಳನ್ನು ಎಷ್ಟೇ  ನಿರ್ಲಕ್ಷಿಸಿದರು ಅವಳು ಮಾತ್ರ ಅವನಿಗೇ ನಿಷ್ಠೆ ತೋರುತ್ತಾಳೆ .ಪ್ರೀತಿ ನೀಡುತ್ತಾಳೆ. ತಿಳಿಯದೆಲೇ ಅವಳ ಮೋಡಿಗೆ ನಾಯಕ ಸಿಲುಕುತ್ತಾನೆ .ಅಲ್ಲಿಂದ ಅವನ ಜೀವನ ಪೂರ್ತಿಯಾಗಿ ಬದಲಾಗುತ್ತದೆ. ಪ್ರೀತಿಯನ್ನು ಒಳಗೆ ಬಿಟ್ಟುಕೊಳ್ಳದ ನಾಯಕ ಚಾರ್ಲಿಗೆ ಸೋಲುತ್ತಾನೆ .ಚಾಲ್ಲಿಯನ್ನು ತನಗೆ ಅರಿವಿಲ್ಲದೆ ಪ್ರೀತಿಸುತ್ತಾನೆ .ಅವರಿಬ್ಬರ ನಡುವೆ ಒಂದು ಅನೂಹ್ಯ ಸಂಬಂಧ ಏರ್ಪಡುತ್ತದೆ.

        ಈ ಹಂತದಲ್ಲಿ ಅನಿರೀಕ್ಷಿತ ತಿರುವುಗಳಿಂದ ತಾನು ಅತಿಯಾಗಿ ಪ್ರೀತಿಸುವ ಚಾರ್ಲಿಯನ್ನು ಕಳೆದುಕೊಳ್ಳಬಹುದಾದ ಸಂದರ್ಭ ಬರುತ್ತದೆ. ಅವಳಿಗಾಗಿ ಅವಳ ಆಸೆಯನ್ನು ಈಡೇರಿಸಲು ಕಾಶ್ಮೀರದ ಹಿಮದ ರಾಶಿಗೆ ಅವಳನ್ನು ಕರೆದೊಯ್ಯುತ್ತಾನೆ ನಮ್ಮ ಹೀರೋ.

    ಚಾರ್ಲಿಯನ್ನು ಹಿಂಸಿಸಿದವನನ್ನು ಧರ್ಮ ಚೆನ್ನಾಗಿ ಥಳಿಸುತ್ತಾನೆ .ಬಾಬ್ಬೀ ಸಿಂಹ ರವರ ನಾಯಿ ಪ್ರೀತಿ .ಡ್ಯಾನಿಶ್ ಸೇಠ್ ಅವರ ಪ್ರವೇಶವು ಕಥೆಯನ್ನು ಕಟ್ಟಲು ಪೂರಕವಾಗಿವೆ .”ಡಾಗ್ ಷೋ’ ಒಂದು ರೂಪಕದಂತೆ ಚಿತ್ರತವಾಗಿದೆ .ಮನಸ್ಸನ್ನು ತಟ್ಟುತ್ತದೆ .ಹೀಗೆ ಚಾರ್ಲಿ ಗಾಗಿ ಕಥೆ ಹುಟ್ಟಿದೆ, ಬೆಳೆದಿದೆ ,ಮುಗಿದಿದೆ..

       ಚಿತ್ರದ ಕೆಲವೊಂದು ಭಾವನಾತ್ಮಕ ಸನ್ನಿವೇಶಗಳು ಆರ್ದ್ರಿತವಾಗಿವೆ. ಸಣ್ಣ ಮಗುವಿನಂತೆ ಓಡಿಬಂದು ನಿಂತು ಕಾಲು ಚಾಚಿ ಧರ್ಮ ನನ್ನು ಅಪ್ಪಿಕೊಳ್ಳುವ ಚಾರ್ಲಿಯೂ ಮೌನವಾಗಿ ಪ್ರೀತಿಯನ್ನು ದಾಟಿಸುತ್ತಾಳೆ. ಧರ್ಮನ ಪಾತ್ರದಲ್ಲಿ ‘ರಕ್ಷಿ ತ್ ಶೆಟ್ಟಿ’ ಸೇರಿಕೊಂಡು ಬಿಟ್ಟಿದ್ದಾರೆ. ಸರಾಗವಾಗಿ ಅಭಿನಯಿಸಿದ್ದಾರೆ.ಧರ್ಮನಲ್ಲಿ ಪ್ರೀತಿಯ ಸಿಂಚನವನ್ನು ತುಂಬುವ ಪುಟ್ಟ ಬಾಲಕಿ ಆದ್ರಿಕ ಗಮನ ಸೆಳೆಯುತ್ತಾಳೆ .ಚಾರ್ಲಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮುದಿ ದಂಪತಿಗಳಾಗಿ ಭಾರ್ಗವಿ ನಾರಾಯಣ್ ಹಾಗೂ ನಾಗೇಶ್ ಗಮನ ಸೆಳೆಯುತ್ತಾರೆ. ಪಶು ವೈದ್ಯರಾಗಿ ರಾಜ್ ಶೆಟ್ಟಿ ಅವರ ಅಭಿನಯ  ಲವಲವಿಕೆಯಿಂದ ಕೂಡಿದೆ .ನಾಯಕಿ ಸಂಗೀತ ಶೃಂಗೇರಿ ಶ್ವಾನ ರಕ್ಷಕ ಆಫೀಸರ್ ಪಾತ್ರದಲ್ಲಿದ್ದಾರೆ. ಅವರಿಗಿಂತ ಚಾರ್ಲಿಯೇ ರಕ್ಷಿತ್ ಗೆ ನಾಯಕಿಯಾಗಿ ಹೆಚ್ಚಿನ ಅವಕಾಶಗಿಟ್ಟಿಸಿದ್ದಾಳೆ.

   ಒಂದೊಂದು ಕೋನದಲ್ಲಿಯೂ ಚಾರ್ಲಿಯ ಹಾವಭಾವ. ತುಂಟಾಟ. ಮುಗ್ದತೆ .ನೋಟ ಅತ್ಯಾಯಮಾನವಾಗಿದೆ .”ಆಹ!ನಾವು ಇಂತಹದೊಂದು ನಾಯಿಯನ್ನು ತರಬೇಕು,ಸಾಕಬೇಕು, ಮುದ್ದು ಮಾಡಬೇಕು” ಎನ್ನುವಂತಾಗುತ್ತದೆ.

    ಕೇವಲ ಮನುಷ್ಯರಿಗಾಗಿ ಮಾತ್ರ ಈ ಪ್ರಪಂಚದಲ್ಲಿ ಜಾಗವಲ್ಲ .ಇಲ್ಲಿರುವ ಸಕಲ ಪ್ರಾಣಿಗಳಿಗೂ ಈ ಭೂಮಿಯ ಮೇಲೆ ವಾಸಿಸುವ ಹಕ್ಕಿದೆ ಎಂದು ಈ ಚಿತ್ರ ಪ್ರತಿಪಾದಿಸುತ್ತದೆ. ಪ್ರಾಣಿಗಳನ್ನು ರಕ್ಷಿಸಬೇಕು ಅವುಗಳನ್ನು ದತ್ತುತೆಗೆದುಕೊಳ್ಳಬೇಕೆಂಬ ಸಂದೇಶ ನೀಡುತ್ತದೆ.

     ಕಿರಣ್ ರಾಜ್ ರವರ ನಿರ್ದೇಶನ ಮೆಚ್ಚುವಂತದ್ದಾಗಿದೆ .”ರಕ್ಷಿತ್- ಕಿರಣ್ ರಾಜ್ “ಜೋಡಿ ಮೋಡಿ ಮಾಡಿದೆ. ಹಿನ್ನೆಲೆ ಸಂಗೀತ ನೀಡಿರುವ “ನೋಬಿನ್ ಪೌಲ್ “ಚಿತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ . ಆಯಾ ಪ್ರದೇಶದ ಜಾನಪದ ಹಾಡುಗಳನ್ನು ಬಳಸಿಕೊಂಡಿರುವುದು ಸೊಗಸಾಗಿದೆ .”ಅರವಿಂದ್ ಕಶ್ಯಪ್” ಛಾಯಾಗ್ರಹಣ ಹಿತಕರವಾಗಿದೆ. ಸುಂದರ ಅನುಭೂತಿಯನ್ನು ನೀಡುತ್ತದೆ. ಸಿನಿಮಾ ತಂಡದ ಮೂರು ವರ್ಷಗಳ ಸತತ ಪರಿಶ್ರಮ ಫಲ ನೀಡಿದೆ.

   ಚಿತ್ರದ ಮೊದಲಾರ್ಧ ಭಾಗ ವೇಗವಾಗಿದ್ದು, ಎರಡನೆಯ ಭಾಗ ಸ್ವಲ್ಪ ಉದ್ದವೆನಿಸುತ್ತದೆ .ಆದರೆ ಚಾರ್ಲಿ ನೋಡಲು ನಮ್ಮ ಮನಸ್ಸನ್ನು ಶಾಂತವಾಗಿ ಇಟ್ಟು ತಯಾರಾಗಬೇಕಾಗುತ್ತದೆ.

ಇಲ್ಲಿ ಕೆಲವೊಂದು ಸಣ್ಣ ಸಣ್ಣ ವಿಷಯಗಳು ಮುಖ್ಯವಾಗಿವೆ. ತಟ್ಟೆಯಲ್ಲಿ, ಕಾಫಿಯಲ್ಲಿ ಬೀಳುವ ನೋಣ, ನಾಯಕನ ಚೆಡ್ಡಿ, ಲುಂಗಿ ,ನ್ಯೂಸ್ ಪೇಪರ್ ಎಲ್ಲವು ಚಿತ್ರತ..

     ಹೊಡಿ, ಬಡಿ, ಕಡಿ ಎನ್ನುವಂತಹ ಅಬ್ಬರದ ರಕ್ತಚೆಲ್ಲಾಟದ ಚಿತ್ರಗಳ ನಡುವೆ ಚಾರ್ಲಿ ಸಿನಿಮಾ ತಂಗಾಳಿಯಾಗಿ ಬೀಸುತ್ತದೆ. ಸುಂದರ ಕಾವ್ಯವಾಗಿ ಮನಸ್ಸನ್ನು ಆವರಿಸುತ್ತದೆ…. ಕಾಡುತ್ತದೆ….


ಕುಸುಮಾ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

One thought on “

Leave a Reply

Back To Top