ಅಂಕಣ ಸಂಗಾತಿ

ನೆನಪಿನದೋಣಿಯಲಿ

 ಆಷಾಢಮಾಸಬಂದಿತವ್ವ

ನಮ್ಮ ಜಾನಪದರು ಹಾಡುತ್ತಾರೆ “ಆಷಾಢಮಾಸ ಬಂದಿತವ್ವ ಅಣ್ಣ ಬರಲಿಲ್ಲ ಯಾಕೋ ಕರಿಯಾಕ “ಅಂತ .ಮದುವೆ ಮಾಡಿ ಹೆಣ್ಣನ್ನು ಗಂಡನ ಮನೆಗೆ ಕಳಿಸಿದ ಮೇಲೆ ಆಷಾಢ ಮಾಸದಲ್ಲಿ ಮತ್ತೆ ತವರಿಗೆ  ಕರೆದೊಯ್ಯುವ ಸಂಭ್ರಮ.  ಮದುವೆಯಾದ ಮೊದಲ ವರ್ಷ ಅತ್ತೆ ಸೊಸೆ ಹಾಗೂ ಅತ್ತೆ ಅಳಿಯ ಒಂದೇ ಬಾಗಿಲಿನಿಂದ  ಓಡಾಡಬಾರದು ಅಂದರೆ ಒಂದೇ ಮನೆಯಲ್ಲಿ ಇರಬಾರದು ಎಂಬುದು ಹಿರಿಯರ ನಂಬಿಕೆ . ಹಾಗಾಗಿಯೇ ತವರಿಗೆ ಹೆಂಡತಿಯನ್ನು ಕಳಿಸಿದ ಪತಿರಾಯ ತಾನು ಸಹ ಅತ್ತೆಯ ಮನೆಗೆ ಬರಲಾಗದ ಉಭಯ ಸಂಕಟ . ಕೆಲ ರಂಗೋಲಿಯ ಕೆಳಗೆ ತೂರುವ ಚಾಲಾಕಿಗಳು ಇಬ್ಬರ ಮನೆಯನ್ನು ಬಿಟ್ಟು ಮಧ್ಯದ ಇನ್ನೊಬ್ಬರು ಸಂಬಂಧಿಕರ ಮನೆಯಲ್ಲಿ ಭೇಟಿಯಾಗುತ್ತಿದ್ದುದು ಉಂಟು. 

ನಮ್ಮ ಹಿರಿಯರು ಮಾಡಿದ ಶಾಸ್ತ್ರ ಸಂಪ್ರದಾಯಗಳೆಲ್ಲ ವೈಜ್ಞಾನಿಕ ಹಾಗೂ ಮಾನವೀಯತೆಯ ತಳಹದಿಯ ಮೇಲೆ ನಿಂತಿರುವುದು. ಆಗ ತಾನೇ ಮದುವೆಯಾಗಿ ಹೋದ ಹೆಣ್ಣು ಮಗಳು ತನ್ನ ತವರನ್ನು ಜ್ಞಾಪಿಸಿಕೊಳ್ಳುತ್ತಿರುತ್ತಾಳೆ ನೋಡಲು ಬಯಸುತ್ತಾಳೆ ಎಂದರಿತು ಈ ಸಂಪ್ರದಾಯವನ್ನು ಮಾಡಿರಬಹುದು . ಅಲ್ಲದೆ ಮದ್ಯ ಮದ್ಯದ ಈ ಅಗಲಿಕೆ ಪ್ರೀತಿಯ ಕಾತುರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಒಬ್ಬರೊಬ್ಬರ ಬಾಂಧವ್ಯಕ್ಕೆ ಬುನಾದಿಯಾಗುತ್ತದೆ ಎಂಬುದು ಇನ್ನೊಽದರ್ಥ . ಈಗ ಹೊರ ಊರುಗಳಲ್ಲಿ ಹೊರದೇಶಗಳಲ್ಲಿ ಗಂಡ ಹೆಂಡತಿ ಇಬ್ಬರೇ ಸಂಸಾರ ಹೂಡಿರುವಾಗ ಆಷಾಡದ ವಿರಹದ ಬಿಸಿ ಯಾರಿಗೂ ತಟ್ಟುವುದಿಲ್ಲ ಬಿಡಿ……

ಆಷಾಢ ಎಂದರೆ ಆಕಾಶದಲ್ಲಿ ಕಾರ್ಮೋಡ ಸಣ್ಣನೆ ಬೀಸುವ ಕೆಲವೊಮ್ಮೆ ಜೋರಾಗಿ ಭೋರ್ಗರೆಯುವ ಗಾಳಿಯ ಆರ್ಭಟ . ಒಟ್ಟಿನಲ್ಲಿ ತಂಪು ತಂಪು ಸುತ್ತೆಲ್ಲ . ಹಾಗಾಗಿಯೇ 1ರೌಂಡ್ ಎಲ್ಲರೂ ನೆಗಡಿ ಕೆಮ್ಮು ಜ್ವರ ಎಂದು ಕಾಯಿಲೆ ಬೀಳುತ್ತಿದ್ದುದು ಸಾಮಾನ್ಯ. ಹತ್ತಿರದಲ್ಲಿಯೇ ಇದ್ದ ಡಾಕ್ಟರ್ ಬಳಿ ಹೋಗಿ ಕೆಂಪು ಬಣ್ಣದ ಸಿರಪ್ ದ್ರಾವಣವನ್ನು ತಂದು ಕುಡಿದರೆ ಸಾಕು ಜ್ವರ ಮಂಗಮಾಯ . ಒಂದೆರಡು ದಿನ ಬಿಸಿನೀರು ಕಾದಾರಿದ ನೀರು ಸೇವಿಸಿದರೆ ಸಾಕು . ಜ್ವರವಿದ್ದರೂ ಆಟವಾಡಲು ಹೋಗಬೇಕೆನ್ನುವ ಅಂದಿನ ಉತ್ಸಾಹ ನೆನೆಸಿಕೊಂಡರೆ “ಈಗಿರುವುದು ನಾವೇನಾ ಎಲ್ಲಿ ಹೋಯಿತು ಆ ಉತ್ಸಾಹದ ದಿನಗಳು” ಎನ್ನಿಸುತ್ತೆ . 

.ನಾವು ಪ್ರೈಮರಿಯಲ್ಲಿ ಓದುವಾಗ ಶಾಲೆ ಶುರುವಾಗಿ 1ತಿಂಗಳಾಗಿ ಮೊದಲ ಟೆಸ್ಟ್ ಬರುತ್ತಿತ್ತು ಆಷಾಢದ ವೇಳೆಗೆ . ಹೈಸ್ಕೂಲು ಕಾಲೇಜುಗಳಂತೂ ಜುಲೈನಲ್ಲೇ  ಆರಂಭ . ತಣ್ಣನೆ ಗಾಳಿಯಲ್ಲಿ ನಡುಗುತ್ತಾ ಆಗಾಗ ಮಳೆಯ ಹನಿಯ ಸಿಂಚನ ದಲ್ಲಿ ತೋಯುತ್ತಾ ಶಾಲೆ ಕಾಲೇಜುಗಳಿಗೆ ಹೋಗುತ್ತಿದ್ದದ್ದು ಇನ್ನೂ ನೆನಪಿನ ಭಿತ್ತಿಯಲ್ಲಿ ಹಸಿರು ಹಸಿರು . ದೊಡ್ಡ ಏಕಾದಶಿ (ಪ್ರಥಮ ಏಕಾದಶಿ) ಹಾಗೂ ಗಾಳಿಪಟದ ಹಬ್ಬಗಳು ಆಷಾಢ ಮಾಸದಲ್ಲೇ ಬರುತ್ತಿದ್ದವು .  ಉಪವಾಸದ ಹಬ್ಬದ ಸಜ್ಜಿಗೆ ಹುಳಿಯವಲಕ್ಕಿ ಹಣ್ಣುಗಳ ರಸಾಯನಕ್ಕೆ ಖುಷಿಯಿಂದ ಕಾಯುತ್ತಿರುತ್ತಿದ್ದೆವು .ಪಟದ ಹಬ್ಬದ ಕರಿಗಡುಬಿನ ಊಟ . ಅಲ್ಲದೆ ಪಟ ಹಾರಿಸುವ ಸಂಭ್ರಮ . ಮನೆಯಲ್ಲೇ ಕಾಗದ ತಂದು ಗಿಡಗಳ ಸಣ್ಣ ಕಡ್ಡಿಗಳನ್ನು ಕತ್ತರಿಸಿ ಪಟಗಳನ್ನು ತಯಾರಿಸುವುದು ಹಳೆಯಬಟ್ಟೆಯಿಂದ ಬಾಲಂಗೋಚಿ ಮಾಡುವುದು ಪಟದ ದಾರ ಮತ್ತೂ ಗಟ್ಟಿಯಾಗಲೆಂದು ಗಾಜಿನ ಚೂರುಗಳನ್ನು ಪುಡಿಮಾಡಿ ಅದಕ್ಕೆ ಅಂಟಿಸುವುದು ಒಂದೇ ಎರಡೇ ನಮ್ಮ ಸಾಹಸಗಳು . ನಮ್ಮ ಪಟಕ್ಕಿಂತ ಬೇರೆಯವರ ಪಟ ಮೇಲೆ ಬಂದಾಗ ಹತ್ತಿರಕ್ಕೆ ಹೋಗಿ ನಮ್ಮ ದಾರದಿಂದ ಸೋಕಿಸಿದರೆ ಸಾಕು ಗಾಜಿನ ಚೂರಿನ ಹರಿತಕ್ಕೆ ಅವು ತುಂಡಾಗುತ್ತಿದ್ದವು . ಎಷ್ಟು ಕೇಡಿಗ ಬುದ್ದಿ. ಆದರೆ ಆಗ ಅದು ಆಟದ ಒಂದು ಅಂಗ ಅಷ್ಟೆ . 

ಆಷಾಢ ಎಂದರೆ ಪೂಜೆ ಪುನಸ್ಕಾರ ಹಬ್ಬಗಳ ಸಾಲು ಆರಂಭವಾಯಿತೆಂದೇ ಅರ್ಥ. ಆಷಾಢ ಶುಕ್ರವಾರದಂದು ಮೈಸೂರಿನವರಾದ ನಮಗೆ ಚಾಮುಂಡೇಶ್ವರಿ ಪೂಜೆಯ ಸಂಭ್ರಮ . ಬೆಳಿಗ್ಗೆ ಬೇಗನೆ ಎದ್ದು  ಬೆಟ್ಟ ಕಾಲ್ನಡಿಗೆಯಲ್ಲಿ ಹತ್ತಿ ಹೋಗಿ ಅಮ್ಮನ ದರ್ಶನ ಮಾಡಿಕೊಂಡು ಬಂದರೆ ಏನೋ ಪುನೀತ ಭಾವ . ಬಹಳ ದಿನಗಳ ಕಾಲ ಅನೂಚಾನವಾಗಿ ನಡೆದು ಬಂತು ನಂತರ ಬಸ್ಸು ಸ್ವಂತ ವಾಹನಗಳಿದ್ದರೂ ಈಗ ಹೋಗಿಬರಲು ಏನೋ ಉದಾಸೀನ ಪಾಲುಮಾರಿಕೆ .  ಅಷ್ಟೊಂದು ಜನ ಜಂಗುಳಿಯಲ್ಲಿ ನುಗ್ಗಿ ಹೋಗುತ್ತಿದ್ದ ಮನಸ್ಸು ಈಗ “ಅಯ್ಯೋ ಜನ ಇರ್ತಾರಪ್ಪ ಬೇರೆ ಬಿಡುಬೀಸಿನ ದಿನದಲ್ಲಿ ಹೋಗಿ ದರ್ಶನ ಮಾಡೋಣ” ಅನ್ಸುತ್ತೆ . ಕಾಲಾಯ ತಸ್ಮೈ ನಮಃ …

ಇನ್ನೂ ಆಷಾಡದ ದಂಪತಿಗಳ ಅಗಲಿಕೆ ಕೆಲವು ಗೆಳತಿಯರದ್ದು ನೋಡಿದ್ದೆ.  ನಮಗಂತೂ ಆ ಅನುಭವ ಇಲ್ಲ ಒಂದೇ ಊರಿನಲ್ಲಿ ಬೇರೆ ಮನೆ ಮಾಡಿಕೊಂಡು ಇದ್ದ ನಾವು ಆ 1ತಿಂಗಳು ನಾನು ನಮ್ಮತ್ತೆಯ ಮನೆಗೆ ಹೋಗುತ್ತಿರಲಿಲ್ಲ . ಅವರು ನನ್ನ ತವರಿಗೆ ಕಾಲಿಡುತ್ತಿರಲಿಲ್ಲ ಮುಗಿಯಿತಲ್ಲ ಆಷಾಡದ ಅಗಲಿಕೆ . 

ಈಗ ನೆನೆಸಿಕೊಂಡರೆ ಅನ್ನಿಸುತ್ತೆ ಈ ಹಿರಿಯರ ಸಂಪ್ರದಾಯಗಳು ಜೀವನದ ರುಚಿಯನ್ನು ಹೆಚ್ಚಿಸುವಂಥ ಚೈತನ್ಯದ ಗುಳಿಗೆಗಳು . ಅರ್ಥವಿರದೆ ಯಾವುದೊಂದು ನಿಯಮವನ್ನು ಮಾಡಿರುವುದಿಲ್ಲ . ಅದನ್ನು ಬೆಕ್ಕಿಗೆ ಗಂಟೆ ಕಟ್ಟಿದಂತೆ ಕಣ್ಣು ಮುಚ್ಚಿಕೊಂಡು ಪಾಲಿಸುವ ಬದಲು ಅದರ ಹಿಂದಿರುವ ವೈಜ್ಞಾನಿಕ ಅರ್ಥ ತಿಳಿದರೆ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಆಚರಿಸಬಹುದು. 

ಮತ್ತೆ ಹೊರಗಡೆ ಅದೇ ಕುಳಿರ್ಗಾಳಿ ಬೀಸುತ್ತಿದೆ ಆಷಾಢ ಬಂದಿದೆ  ಕರೆದೊಯ್ಯುವ ಅಣ್ಣ ಇಲ್ಲ ಕರೆದು ಆದರಿಸುವ ಅಪ್ಪ ಅಮ್ಮನ ತವರು ಮೊದಲೇ ಇಲ್ಲ  .    ಯಾಂತ್ರೀಕೃತ ಬಿಡುವಿಲ್ಲದ ಬದುಕಿನ ಜಂಜಡದಲ್ಲಿ ಪೂಜೆ ಪುನಸ್ಕಾರ ಮೊದಲಿನ ರೀತಿ ಮಾಡಲು ವ್ಯವಧಾನವಿಲ್ಲ . ಒಟ್ಟಿನಲ್ಲಿ 1ತರಹ ಅನಾಥಪ್ರಜ್ಞೆ ಬೇಸರದ ಭಾವ ಕಾಡುತ್ತಿದೆ .

ಜೀವನದ ಸಂಭ್ರಮವನ್ನೆಲ್ಲ ಕೈಯಾರೆ ಚೆಲ್ಲಿ ಈಗ ಹಪಹಪಿಸುವ ಬದುಕು ನಮ್ಮದು . 


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

One thought on “

  1. ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು .

    ಸುಜಾತಾ ರವೀಶ್

Leave a Reply

Back To Top