ವಿನ್ನಿ ಮತ್ತು ಪಾರಿವಾಳ

ಕಥಾ ಸಂಗಾತಿ

ವಿನ್ನಿ ಮತ್ತು ಪಾರಿವಾಳ

ಬಿ.ಟಿ.ನಾಯಕ್

ವಿನ್ನಿ ಮತ್ತು ಪಾರಿವಾಳ

ವಿನ್ನಿ ಪೀಟರ್ ಇಪ್ಪತ್ತರ ಚೆಲುವೆ. ಆಕೆಯ ತಾಯಿ ನ್ಯಾನ್ಸಿ ಪೀಟರ್ ನಿವೃತ್ತ ಶಿಕ್ಷಕಿ. ಅವರಿಬ್ಬರೂ ಕಾರವಾರದ ಬೀಚಿನ ಹತ್ತಿರ ಇರುವ ಮನೆ ‘ಪ್ರೈಡ್’ನಲ್ಲಿ ವಾಸವಿರುವುದು.ಅವರ ಮನೆ ಒಂದು ದೊಡ್ಡ ಕುಟೀರದ ತರಹನೇ ಇದೆ. ಆ ಕುಟೀರದ ಸುತ್ತಮುತ್ತಲೂ ಗಿಡಮರಗಳು ಮತ್ತು ಹತ್ತು ಹಲವು ಬಣ್ಣದ ಹೂವು ಸಸಿ ಬಳ್ಳಿಗಳು ಇವೆ.  ಆ ಹಚ್ಚ  ಹಸುರಿನ ವಾತಾವರಣದಲ್ಲಿ ಎಷ್ಟೋ ಪಕ್ಷಿಗಳು ಸಾಯಂಕಾಲ ಬಂದು ವಾಸ ಮಾಡಿ ಬೆಳಗ್ಗೆ ಹಾರಿ ಹೋಗಿ ಬಿಡುತ್ತವೆ.

ಹಾಗಿರುವಾಗ ಒಂದು ದಿನ ಆ ಸ್ಥಳಕ್ಕೆ ಒಂದು ಬಿಳಿ ಪಾರಿವಾಳವೊಂದು ಹಾರಿ ಬಂದು ಕುಳಿತದ್ದು ವಿನ್ನಿಗೆ ಕಾಣಿಸಿಕೊಂಡಿತು. ಅದು ತುಂಬಾ ಮುದ್ದಾಗಿತ್ತು. ಆ ಪಾರಿವಾಳಕ್ಕೆ ವಿನ್ನಿ ಆಕರ್ಷಿತಳಾದಳು. ಇನ್ನಷ್ಟು ಹತ್ತಿರ ಹೋಗಿ  ಅದನ್ನು ನೋಡಿ ಆನಂದಿತಗೊಂಡಳು. ಏಕೋ ಏನೋ ಅದು ಅಲ್ಲಿಯೇ ಸುತ್ತುತ್ತಿತ್ತು.

ಅದನ್ನು ಗಮನಿಸಿದ ವಿನ್ನಿ ಒಂದು ದೊಡ್ಡ ಬಟ್ಟಲಿನಲ್ಲಿ ಕಾಳುಗಳನ್ನು ಹಾಕಿ, ಇನ್ನೊಂದು ಮಣ್ಣಿನ ಪಾತ್ರೆಯಲ್ಲಿ ಕುಡಿಯುವ ನೀರನ್ನು ಜೋಡಿಸಿ ಇಟ್ಟಳು. ಆಗ ಆಪಾರಿವಾಳ ಸರ್ರನೇ ಹಾರಿ ಬಂದು ಕಾಳುಗಳನ್ನು ತಿನ್ನತೊಡಗಿತು ಮತ್ತು ನೀರನ್ನೂ ಕುಡಿಯುತ್ತಿತ್ತು.  ಅದು ಎಷ್ಟು ಹೊತ್ತು ಕಳೆದರೂ ಅಲ್ಲಿಂದ ಹೋಗಲೇ ಇಲ್ಲ. ಅಲ್ಲಿಯೇ ಪಟ ಪಟನೇ ಹಾರುವದು ಮತ್ತು ಮರದ ಕೆಳಗೆ ಕುಳಿತು ಕೊಳ್ಳುವುದು ಹೀಗೆಯೇ ಮಾಡುತ್ತಿತ್ತು. ಸಾಯಂಕಾಲದ ಹೊತ್ತಿಗೆ ಅದು ಅಲ್ಲಿಂದ ಹಾರಿ ಹೋಯಿತು. ಅದು ಹಾರಿ ಹೋಗುತ್ತಿರುವಾಗ ವಿನ್ನಿ ಅದನ್ನೇ ಗಮನಿಸುತ್ತಾ ನಿಂತಳು.  ಆಮೇಲೆ ಅದು ಆಕಾಶದಲ್ಲಿ ಮರೆಯಾಯಿತು.

ಮಾರನೆಯದಿನ ಬೆಳಗ್ಗೆ ಏಳು ಘಂಟೆಗೆ ಆ ಪಾರಿವಾಳ ಮತ್ತೆ ಪ್ರತ್ಯಕ್ಷವಾಯಿತು ! ಅದನ್ನು ನೋಡಿದ ವಿನ್ನಿ ಹಿಂದಿನ ದಿನ ಇಟ್ಟ ಬಟ್ಟಲಿಗೆ ಮತ್ತಷ್ಟು ಕಾಳುಗಳನ್ನು ಸುರಿದಳು ಮತ್ತು ಮಣ್ಣಿನ ಪಾತ್ರೆಗೆ ನೀರನ್ನು ಹಾಕಿದಳು. ಆಮೇಲೆ ಏನೋ ಅರಿತು ಕೆಲವು ಒಣಗಿದ ಹಣ್ಣಿನ ಚೂರುಗಳನ್ನೂ ಬಟ್ಟಲಲ್ಲಿ ಸೇರಿಸಿದಳು. ಇಡೀ ದಿನ ಪಾರಿವಾಳ ಅಲ್ಲೇ ಇತ್ತು. ಬೇರೆಡೆಗೆ ಎಲ್ಲೂ ಹೋಗಲೇ ಇಲ್ಲ. ಆದರೇ, ಸಂಜೆಯ ಹೊತ್ತಿಗೆ ಅದು ಯಥಾಪ್ರಕಾರ ಅಲ್ಲಿಂದ ಹಾರಿ ಹೋಯಿತು. ವಿನ್ನಿಗೋ ಆನಂದವೇ ಆನಂದ. ಒಂದು ಪಕ್ಷಿಯನ್ನು ಸಾಕಿದ ನೆಮ್ಮದಿ ಆಕೆಗೆ ಆಯಿತು. ಆ ಪಾರಿವಾಳ ಪ್ರಾತಃ ಸಮಯದಲ್ಲಿ ಬರುವುದು ಮತ್ತು ಸಾಯಂಕಾಲ ಹೊರಟು ಹೋಗುವುದು ಅದರ ರೂಢಿಯಾಯಿತು.

ಹೀಗೆಯೇ, ಪಾರಿವಾಳದ ದಿನಚರಿ ನಡೆಯಿತು. ಒಂದು ದಿನ ಅದೇ ಪಾರಿವಾಳ ಬಂದು ಮರದ ಕೆಳಗೆ

ಕುಳಿತು ಕೊಂಡಿತು.  ಆದರೇ, ವಿಶೇಷತೆ ಏನೆಂದರೇ, ಅದರ ಒಂದು ಕಾಲಿಗೆ ಪಟ್ಟಿಯನ್ನು ಕಟ್ಟಲಾಗಿತ್ತು.

ಬಹುಷಃ ಅದಕ್ಕೆ ಏನೋ ತೊಂದರೆಯಾಗಿರ ಬಹುದೇನೋ ಅಥವಾ ಅದರ ಕಾಲು ಮೂಳೆ ಮುರಿದಿರ ಬಹುದೇನೋ ಎಂದು ವಿನ್ನಿ ಅದರ ಹತ್ತಿರ ಹೋಗಿ ನೋಡಿದಳು. ಅದು ಅವಳಿಗೆ ರೂಢಿ ಯಾಗಿದ್ದರಿಂದ, ಅದರ ತಲೆ ನೇವರಿಸಿ ಎರಡೂ ಕೈಯಿಂದ ಅದನ್ನು ಎತ್ತಿ ಕೊಂಡಳು. ಆಮೇಲೆ ಪ್ರೀತಿಯಿಂದ ಮುತ್ತಿಕ್ಕಿದಳು. ಅದು ‘ಗೋರ್ಗೋರ್’ ಎಂದು ಕತ್ತನ್ನು ಹೊರಳಿಸುತ್ತಲೇ ಇತ್ತು.  ಅದಕ್ಕೇನೂ ನೋವು ಇರಲಿಲ್ಲ ಎಂದು ವಿನ್ನಿಗೆ ಅನಿಸಿತು. ಏಕೆಂದರೇ ಅದು ಕುಂಟುತ್ತಾ ಇರಲಿಲ್ಲ. ಬದಲಿಗೆ ಚೆಂಗನೇ ಹಾರುತ್ತಿತ್ತು. ವಿನ್ನಿಯ ಗಮನ ಈಗ ಪಟ್ಟಿಯ ಕಡೆ ಹೋದಾಗ, ಮೆಲ್ಲಗೆ ಅದನ್ನು ಬಿಚ್ಚಲು ನೋಡಿದಳು.  ಅಲ್ಲಿ ಒಂದು ಅಂಟಿನ ಟೇಪು ಇತ್ತು.  ಅನುಮಾನ ತುಂಬಾ ಆದಾಗ ಅದನ್ನು ಮತ್ತೇ ಸುತ್ತಿದರಾಯಿತು ಎಂದು ತೆಗೆಯಲು ಆರಂಭಿಸಿದಳು. ಆಗ ಆ ಪಾರಿವಾಳ ಅದಕ್ಕೆ ಪ್ರತಿರೋಧವೇನೂ ತೋರಲಿಲ್ಲ.

ಹಾಗೆಯೇ,ಬಿಚ್ಚುತ್ತಾ ಹೋದಾಗ ಅದು ಸುಮಾರು ನಾಲ್ಕೈದು ಇಂಚುಗಳಷ್ಟಾಯಿತು. ಪೂರ್ತಿ ತೆಗೆದ ಮೇಲೆ ಅದರ ಕಾಲುಗಳನ್ನು ನೋಡಿದಳು. ಕಾಲು ಮುರಿತದ ಲಕ್ಷಣಗಳೇನೂ ಆಕೆಗೆ ಕಾಣಲಿಲ್ಲ. ಆ ಟೇಪನ್ನೇ ಆಚೆ ಈಚೆ ಹೊರಳಿಸಿ ನೋಡಿದಳು.  ಏನೋ ಅಕ್ಷರಗಳು ಕಂಡವು. ಆಕೆ ಕೂಲಂಕುಷವಾಗಿ ನೋಡಿದಾಗ ಅದರಲ್ಲಿ ಈ ರೀತಿ ಬರೆದಿತ್ತು;

‘ನನ್ನ ಪಾರಿವಾಳ ಹಗಲು ಹನ್ನೆರಡು ತಾಸು ನಿಮ್ಮ ಬಳಿಯೇ ಇರುತ್ತದೆ ಎಂದರೇ, ಅದನ್ನು ನೀವು ತುಂಬಾ ಪ್ರೀತಿಸುತ್ತಿರಬೇಕು. ಅದು ನನ್ನಲ್ಲಿಗೆ ಮರಳಿ ಬಂದಾಗ ಏನನ್ನೂ ತಿನ್ನುವುದಿಲ್ಲ ಮತ್ತು ಕುಡಿಯುವದಿಲ್ಲ. ಅದರ ಹೊಟ್ಟೆ ತುಂಬಿಸಿದ ನಿಮಗೆ ಧನ್ಯವಾದಗಳು ‘.

ಆಕೆ ನಕ್ಕು ಅದನ್ನು ಹಾಗೆಯೇ ಹಾರಿ ಬಿಟ್ಟಳು. ಆದರೇ, ಆ ಸಂದೇಶದ ಟೇಪನ್ನು ತನ್ನ ಬಳಿ  ಇಟ್ಟು ಕೊಂಡಳು.

ಆ ಪಾರಿವಾಳ ಹಾಗೆಯೇ ಸಾಯಂಕಾಲದವರೆಗೆ ಇದ್ದು, ಆನಂತರ ಮೇಲಕ್ಕೆ ಪಟ ಪಟನೆ ಹಾರಿ ಹೋಯಿತು.

ಮಾರನೇ ದಿನ ಆ ಪಾರಿವಾಳ ಮತ್ತೇ ಹಾರುತ್ತಾ ಬಂದಿತು.  ಈ ಬಾರಿ ಅದು ವಿನ್ನಿಯ ತೊಡೆಯ ಮೇಲೆ ಕುಳಿತು ಕೊಂಡಿತು. ಆಕೆ ಅದರ ಕಾಲುಗಳನ್ನು ಪರೀಕ್ಷಿಸಿದಳು. ಮತ್ತೇ ಅದೇ ಪ್ರಕಾರ ಸಂದೇಶವನ್ನು ಟೇಪಿನ ಮೂಲಕ ಹೊತ್ತು ತಂದಿತ್ತು. ಅದು ಈ ಕೆಳಗಿನಂತಿತ್ತು;

‘ನೀವು ನನ್ನ ಸಂದೇಶ ಪಡೆದಿದ್ದೀರೆಂದರೇ, ನನ್ನ ಒಕ್ಕಣಿಕೆ ನಿಮಗೆ ಇಷ್ಟವಾಗಿದೆ ಎಂದರ್ಥ. ಧನ್ಯವಾದಗಳು ‘ ಎಂದಿತ್ತು.  ಅದೇ ರೀತಿ ಆ ಟೇಪನ್ನೂ ಕೂಡ ಬಳಿಯಲ್ಲಿ ಇಟ್ಟು ಕೊಂಡು ಪಾರಿವಾಳವನ್ನು ಹಾರಿಬಿಟ್ಟಳು.

ಹೀಗೆಯೇ, ಸಂದೇಶಗಳು ಬರುತ್ತಲೇ ಇದ್ದವು ಮತ್ತು ಆಟೇಪುಗಳನ್ನು ವಿನ್ನಿ ..ಜೋಡಿಸುತ್ತಲೇ ಹೋದಳು.

ಒಂದು ದಿನ ವಿನ್ನಿಯ ಸ್ನೇಹಿತ ಮತ್ತು ದೂರದ ಸಂಬಂಧಿ ಡೇವಿಡ್ ಗೋವಾಕ್ಕೆ ಹೋದಾಗ ಸ್ಕಾಚನ್ನು ತಂದಿದ್ದ. ಅದನ್ನು ವಿನ್ನಿಗೆ ಉಡುಗೊರೆಯಾಗಿ ಕೊಡಲು ಬಂದ. ವಿನ್ನಿಯನ್ನು ಕಂಡು ಹೀಗೆ ಮಾತಾಡಿದ;

‘ಹಾಯ್ ..ವಿನ್ನಿ ಹೇಗಿದ್ದೀಯಾ ? ನಾನು ನಿನಗಾಗಿ ವಿಶೇಷವಾದ ಡ್ರಿಂಕ್ಸ್ ತಂದಿದಿದ್ದೇನೆ, ಅಲ್ಲದೇ ಫ್ರೆಶ್ ಕ್ಯಾಶ್ಯೂ ಕೂಡ ತಂದಿದ್ದೇನೆ, ಎಲ್ಲಿ ಮಮ್ಮಿ ?’ ಏಂದ.

‘ಅದೆಷ್ಟು ಪ್ರಶ್ನೆಗಳು ನಿನ್ನಿಂದ ಬರ್ತಿವೆ. ನಾನು ಹ್ಯಾಪಿ, ನೀನು ತಂದ ಸ್ಕಾಚಗೆ ಧನ್ಯವಾದಗಳು. ನನ್ನ ಮಮ್ಮಿ ಇಲ್ಲೇ ಪಕ್ಕದ ಮೇರಿ ಮನೆಯಲ್ಲಿ ಇದ್ದಾಳೆ’ ಎಂದು ಹೇಳಿ’ ನಿನಗಾಗಿ ಜೂಸ್ ತರುತ್ತೇನೆ’ ಎಂದು ಕಿಚೆನ್  ಕಡೆಗೆ ಹೋದಳು.

ಆತ ಮನೆ ತುಂಬಾ ಅಡ್ಡಾಡಲು ಪ್ರಾರಂಭಿಸಿದ. ಆತನಿಗೆ ಪಾರಿವಾಳದ ಟೇಪುಗಳು ಕಣ್ಣಿಗೆ ಬಿದ್ದವು. ಅವುಗಳನ್ನೆಲ್ಲಾ ಓದಿದ. ಆತನಿಗೆ ಅಸೂಯೆಯಾಯಿತು. ತಾನುಬೆಸ್ಟ ಫ್ರೆಂಡ್ ಮತ್ತು ಫಿಯಾನ್ಸಿ ಕೂಡಾ, ಇವನ್ಯಾರೋ ರೈಟರ್ ಮೂರನೆಯವ ‘ ಎಂದು ಕೋಪ ಗೊಂಡ. 

ಒಳಗಿನಿಂದ ಬಂದ ವಿನ್ನಿ ಅವನಿಗೆ ಜೂಸ್  ಕೊಟ್ಟಳು, ತಾನೂ ಕುಡಿದಳು. ಆಗ ಡೇವಿಡ್ ಆಕೆಗೆ ಪ್ರಶ್ನಿಸಿದ;

‘ವಿನ್ನಿ ಡಾರ್ಲಿಂಗ್, ಯಾರಿದು ನಿನಗೆ ಈ ಸಂದೇಶಗಳನ್ನು  ಕಳಿಸಿದವನು ?’  

ಅಯ್ಯೋ, ಅವನು ಯಾರು ಎಂದು ನನಗೆ ತಿಳಿದಿಲ್ಲ. ಬೇಕಾದರೇ ನೀನು ಅವನನ್ನು ‘ನನ್ನ ಪ್ರೀತಿ ಪಾತ್ರ ಎಂದುಕೋ’ ಎಂದು ನಗು ನಗುತ್ತಾ ಹೇಳಿದಳು. 

‘ವಾಟ್.?. ಅಟ್ಟರ್ ನಾನ್ಸೆನ್ಸ… ‘ ಎಂದ. ಅವನ ಕೋಪ ಹೆಚ್ಚಾಯಿತು. 

‘ಅರೇ , ಅದಕೇಕಿಷ್ಟು ಕೋಪ.’ ಎಂದು ಪಾರಿವಾಳದ ಕಥೆಯನ್ನು ಹೇಳಿದಳು.

‘ಒಹ್ .. ಹಾಗೋ.  ಸಂದೇಶಗಳು ಇನ್ನೂ ಬರ್ತಿವೆಯಾ ಅಥವಾ ನಿಂತಿವೆಯಾ ?’ ಎಂದ.

‘ಪ್ರತಿದಿನ ಬಂದೇ ಬರುತ್ತೆ. ಕೆಲವು ಹಿತವಾದ ಸಂದೇಶಗಳನ್ನು ತೆಗೆದು ಇಟ್ಟಿದ್ದೇನೆ ಅಷ್ಟೇ ‘

‘ಒಳ್ಳೆಯ ಸಂದೇಶಗಳು ಎಂದರೆ ಲವ್ವಾ ?’ ಎಂದು ಕೇಳಿದ.

‘ಹಾಗೆಯೇ ಎಂದು ತಿಳಿದುಕೋ ತಪ್ಪೇನಿದೆ. ನಾನು ಆತನ ಮುಖ ಇಲ್ಲಿಯವರೆಗೂ ನೋಡಿಲ್ಲ. ಆದರೂ ಆತನ ಸಂದೇಶಗಳು ನನ್ನ ಮನಸ್ಸಿಗೆ ಮುದ ನೀಡಿವೆ.’  ಎಂದಾಗ  ಡೇವಿಡ್ಗೆ  ಕಸಿ ವಿಸಿಯಾಯಿತು.

‘ಸ್ವಲ್ಪ ತಾಳು .. ನಾನು ಮಮ್ಮಿಯನ್ನು  ಕರೆದು ತರುತ್ತೇನೆ’ ಎಂದು ಹೊರಗೆ ಹೊರಟಳು.  ಆಗ ಆ ಪಾರಿವಾಳ ಆಕೆಯ ಕಾಲಿನ ಬಳಿಯೇ ಬಂದಿತು. ಅದನ್ನು ಆಕೆ ಕೈಯಲ್ಲಿ ತೆಗೆದುಕೊಂಡು ಮುದ್ದಿಸಿದಳು.

ಆಗ ಡೇವಿಡ್ಗೆ ಈ  ರೀತಿ ಹೇಳಿದಳು;

‘ನೋಡು ಇದೇ ಪಾರಿವಾಳ ಆತನ ಸಂದೇಶವನ್ನು ಪ್ರತಿದಿನ ತರುತ್ತಿರುವುದು ‘ ಎಂದಳು. ಅದನ್ನು ಅಲ್ಲಿಯೇ ಬಿಟ್ಟು

ಸರಸರನೇ ತನ್ನ ಮಮ್ಮಿಯನ್ನು ಕರೆಯಲು ಹೋದಳು.

ಡೇವಿಡ್ ಗೆ ಆ ಪಾರಿವಾಳವನ್ನು ನೋಡಿ ಕೆಟ್ಟ ಕೋಪ ಬಂತು. ಈಗೇನೋ ಸಂದೇಶಗಾರ ಯಾರು ಎಂದು ತಿಳಿದಿಲ್ಲ. ಬಹುಷಃ ಅವನೇ ಬಂದು ವಿನ್ನಿಯನ್ನು ಹಾರಿಸಿಕೊಂಡು ಹೋದರೆ ? ಎಂಬ ಕೆಟ್ಟ ಯೋಚನೆ ಆತನಲ್ಲಿ ಮೂಡಿತು.

ವಿನ್ನಿ ಮನೆಯ ಗೇಟು ದಾಟಿ ಹೋದಕೂಡಲೇ, ಡೇವಿಡ್ ಆ ಪಾರಿವಾಳವನ್ನು ಹೊಂಚು ಹಾಕಿ ಹಿಡಿದ. ಅದರ ಕತ್ತನ್ನು  ತಿರುಗಿಸಿ ಕೊಂದೇ ಬಿಟ್ಟ ! ಮನೆಯ ಹಿಂಭಾಗಕ್ಕೆ ಹೋಗಿ ಜೋರಾಗಿ ಎಸೆದ. ಆಮೇಲೆ ಮನೆಯೊಳಗೇ ಹೋಗಿ ಕೈ ತೊಳೆದುಕೊಂಡ. ಸ್ವಲ್ಪಹೊತ್ತಿನ ನಂತರ ತಾಯೀ ಮಗಳು ಇಬ್ಬರೂ ಬಂದರು. ಡೇವಿಡ್ ಒಂದು ಮೂಲೆಯಲ್ಲಿ

ಮಂದಸ್ಮಿತನಾಗಿ  ಕುಳಿತಿರುವುದನ್ನು ನೋಡಿ ವಿನ್ನಿ ಹೀಗೆ ಕೇಳಿದಳು; 

‘ಡೇವಿಡ್, ಏನಾಯಿತು. ? ಯಾಕೆ ಅಷ್ಟು ಡಲ್ ಆಗಿದ್ದೀಯ ?’

‘ಏನಿಲ್ಲ.. ಏನಿಲ್ಲ.. ಎಲ್ಲ ನಾರ್ಮಲ್ ‘ ಎಂದ.

‘ಓಕೆ .. ನಿನ್ನನ್ನು ನೋಡಲು ನನ್ನ ಮಮ್ಮಿ ಬಂದಿದ್ದಾಳೆ’ ಎಂದು ಹೇಳಿ ಒಳಗೆ ಹೊರಟು ಹೋದಳು. ಆಕೆಯ ಮಮ್ಮಿ ಕೂಡ ಡೇವಿಡ್ ನನ್ನು ಮಾತಾಡಿಸಿದಳು. ‘

 ‘ಏನು ಮಗ ಚೆನ್ನಾಗಿ ಇದ್ದೀಯ ? ಯಾವಾಗ ಬಂದೆ ಗೋವಾದಿಂದ ?’ ಎಂದಳು.

‘ನಿನ್ನೆಯೇ ಬಂದೆ ಮಮ್ಮಿ ‘ಎಂದ.

ಆ ಮೇಲೆ ವಿನ್ನಿಗೆ ‘ಮತ್ತೇ  ಬರುತ್ತೇನೆಂದು’ ಹೇಳಿ ಡೇವಿಡ್  ಹೊರಟುಹೋದ.

ಸ್ವಲ್ಪ ಸಮಯದ ನಂತರ ವಿನ್ನಿ ಹೊರಗೆ ಬಂದು ಆಪಾರಿವಾಳವನ್ನು ಹುಡುಕತೊಡಗಿದಳು. ಅದು ಅಲ್ಲಿ ಕಾಣಲೇ ಇಲ್ಲ.

ಎಲ್ಲಿ ಕೂತಿರಬಹುದು.? ಎಂದು ತಮ್ಮ ಮನೆಯ ಹಿಂದೆ, ಮುಂದೆ ಪಕ್ಕದಲ್ಲಿ ನೋಡಿದಳು. ಎಲ್ಲೂ ಕಾಣಲೇ ಇಲ್ಲ.

ಆಕೆ ಯೋಚಿಸಿದಳು  ಅದು ಸಾಯಂಕಾಲದ ಸಮಯದವರೆಗೆ ಹೋಗಲಾರದು. ಅದು ಹೇಗೆ ಕಾಣಲಾಗುತ್ತಿಲ್ಲ ? ಸ್ವಲ್ಪ ಚಿಂತಿತಳಾದಳು. ಅಲ್ಲದೇ ಕಾಳುಗಳನ್ನು ಹಾಕಿದ ಬಟ್ಟಲನ್ನು ಮತ್ತು ಪಕ್ಕದ ನೀರು ಇಟ್ಟ ಮಣ್ಣಿನ ಪಾತ್ರೆಯನ್ನೂ ನೋಡಿದಳು.  ಆದರೇ, ಕಾಳುಗಳು ಹಾಗೆಯೇ ಉಳಿದಿದ್ದವು ಮತ್ತು ನೀರು ಕೂಡ ಮೊದಲಿನಷ್ಟೇ ಇತ್ತು.’

ಆ ರಾತ್ರಿ ಹೇಗೋ ಕಳೆದಳು. ಮಾರನೇ ದಿನ ಬೆಳಗ್ಗೆ ಬೇಗ ಎದ್ದು ಪಾರಿವಾಳದಬರುವಿಕೆಗೆ ಕಾಯ್ದಳು.  ಅದು ಬರಲೇ ಇಲ್ಲ. ಅವಳ ಚಿಂತೆ ದ್ವಿಗುಣವಾಯಿತು. ಇಡೀ ದಿನ ಕಳೆಯುವುದು ಆಕೆಗೆ ಕಷ್ಟವಾಯಿತು.

ಆಗ ಡೇವಿಡ್ ನ ಆಗಮನವಾಯಿತು. ವಿನ್ನಿ ಬೇಜಾರಿನಿಂದ ಇದ್ದದ್ದು ಆತ ಗಮನಿಸಿದ ಮತ್ತು ಕೇಳಿದ.

‘ವಿನ್ನಿ ಏನಾಯಿತು ಯಾಕೆ ಡಲ್ ಆಗಿದ್ದೀಯಾ ?’

‘ಡೇವಿಡ್, ಆಪಾರಿವಾಳ ನಿನ್ನೆ ಸಾಯಂಕಾಲದವರೆಗೆ ಇರಬೇಕಾದದ್ದು, ಅಷ್ಟು  ಬೇಗ ಕಾಣದ ಹಾಗೆ ಹೊರಟುಹೋಗಿದೆ, ಅಲ್ಲದೇ , ಅದು ಇಂದು ಬಂದೇ ಇಲ್ಲ ‘ ಎಂದಳು.

‘ಹೋಗಲಿ ಬಿಡು ಆ ಪ್ರಾಣಿ ಪಕ್ಷಿಗೆ ಅಷ್ಟೇಕೆ ನೊಂದು ಕೊಳ್ಳಬೇಕು ? ಅದು ಎಲ್ಲೋ ಸತ್ತಿರಬೇಕು ‘ ಎಂದ.

‘ ನೋ.. ನೋ.. ಹಾಗೆ ಸಾಧ್ಯವಿಲ್ಲ ‘ ಎಂದಳು.

‘ಜೀವಂತ ಇದ್ದರೇ ಬರುತ್ತಿರಲಿಲ್ವೆ ?’

‘ಅದು ಸತ್ತು ಹೋಗಿದೆ ಎಂದು ನಿನಗೆ ಯಾಕೆ ಅನ್ನಿಸುತ್ತಿದೆ ಡೇವಿಡ್ ‘ ಎಂದಳು.

‘ಇಲ್ಲಾ.. ಇಲ್ಲಾ.. ಒಂದು ಅಂದಾಜು ಮೇಲೆ ಹೇಳಿದೆ ಅದು ಇಲ್ಲಾ ಎಂದರೇ ಸತ್ತಿರಬಹುದು ಎಂದು ನನ್ನ ಅರ್ಥ ‘ ಎಂದ.

ವಿನ್ನಿ ಈಗ ಕಣ್ಣೀರು ಹಾಕುವುದಕ್ಕೆ ಪ್ರಾರಂಭಿಸಿದಳು. ಅವಳನ್ನು ಸಮಾಧಾನಿಸಲು ಆಗದೇ ಡೇವಿಡ್‘ ಆಮೇಲೆ ಬರ್ತೇನೆ’ ಎಂದು ಹೇಳಿ ಹೊರಟು ಹೋದ.

ಆಗ ವಿನ್ನಿಯ ತಾಯೀ ಪೊರಕೆ ಹಿಡಿದು ಕಸ ತೆಗೆಯುವಾಗ ಸಿಕ್ಕಿದ್ದು ಎಂದು ಹಲವು ಕಸಗಳನ್ನು ಸರಿಸುತ್ತಿದ್ದಳು  ಅದನ್ನು ಕೂಲಂಕುಷವಾಗಿ ನೋಡಿದ ವಿನ್ನಿ ಕೆಳಕ್ಕೆ ಬಗ್ಗಿ ,ಪೇಪರ್ ಮುದ್ದೆಗಳನ್ನು ಕೈಗೆ ಎತ್ತಿಕೊಂಡಳು.  ಅವು ಎಲ್ಲಾ ಪಾರಿವಾಳ ತಂದ ಸಂದೇಶದ ಚೀಟಿಗಳೇ ಆಗಿದ್ದವು. ಆಗ ಆಕೆ ಮಮ್ಮಿ ಮೇಲೆ ಸಿಟ್ಟಿಗೆ ಬಂದು ಹೀಗೆ ಹೇಳಿದಳು;

‘ಏನು ಮಮ್ಮಿ ಎಲ್ಲವನ್ನೂ ಕಸ ಎಂದು ಕೊಂಡರೆ ಹೇಗೆ ?’

‘ಏನು ಸಮಸ್ಯೆ ನಿನ್ನದು ? ‘ನ್ಯಾನ್ಸಿ ಮಮ್ಮಿಕೇಳಿದಳು.

‘ಅಯ್ಯೋ ನನ್ನ ಜೀವವನ್ನೇ ಕಸದಲ್ಲಿ ತಳ್ಳುತ್ತೀಯಲ್ಲ ‘ ಎಂದಳು ವಿನ್ನಿ. 

‘ಇಲ್ಲಮ್ಮ ನಾನು ಅದನ್ನು ಈಗಲೇ ನೋಡಿರೋದು. ಬಹುಷಃ ಕಿಟಕಿಯಲ್ಲಿ ಇರೋದು ಕೆಳಗೆ ಬಿದ್ದಿವೆ ಅಂತ ಅನ್ನಿಸುತ್ತೆ ‘ ಎಂದಳು ಮಮ್ಮಿ.

ಅವುಗಳನ್ನು ಜೋಪಾನವಾಗಿ ಒಂದು ಕಡೆ ಕೂಡಿಟ್ಟಳು. ಆಕೆ ಅದರ ಬಗ್ಗೆ ವಿಚಾರ ಮಾಡುತ್ತಾ ಕುಳಿತಳು. ಲೆಕ್ಕಾಚಾರವನ್ನು ಹಾಕಿದಳು.

ಇದೆಲ್ಲಾ ಡೇವಿಡ್  ಬಂದ ಮೇಲೆ ಆಗಿದೆ. ಅವನು ಸಂದೇಶದ ಬಗ್ಗೆ ಖಾರವಾದ ಮಾತುಗಳನ್ನು ಆಡಿದ್ದು ನೆನಪಿಗೆ ಬಂತು.  ಅಲ್ಲದೇ,ತಾನು ಮಮ್ಮಿಯನ್ನು ಕರೆತರಲು ಹೋದಾಗ ಏನಾದರೂ ಕಿತಾಪತಿ ಮಾಡಿರಬಹುದೇ ಎಂದು ಅವನ ಮೇಲೆಯೇ ಗಹನವಾದ ಅನುಮಾನ ಮೂಡಿತು. ಆಗ ಆಕೆಗೆ ಸಮಾಧಾನವಾಗಲಿಲ್ಲ. ತಮ್ಮ ಮನೆಯಸುತ್ತ ಒಂದು ಸುತ್ತು ಹಾಕಿದಳು. ಹಾಗೆ ಮಾಡುವಾಗ ಕೂಲಂಕುಷವಾಗಿ ಸ್ಥಳವನ್ನು ಗಮನವಿಟ್ಟು ನೋಡುತ್ತಾ ಹೋದಳು. ಆಗ ವಿನ್ನಿಯ ಕಣ್ಣಿಗೆ ಆಪಾರಿವಾಳಬಿತ್ತು ! ಅದು ಸತ್ತು ಹೋಗಿತ್ತು.

ಅವಳು ಸತ್ತಿದ್ದ ಪಾರಿವಾಳವನ್ನು ಕೈಯಲ್ಲಿ ಎತ್ತಿಕೊಂಡಳು. ಅದರಿಂದ ಕೊಳೆತ ವಾಸನೆ ಬರತೊಡಗಿತ್ತು. ಅಲ್ಲದೇ, ಅದರ ಕತ್ತು ಹೊರಳಿತ್ತು. ಆಕೆ ತುಂಬಾ ದುಃಖಿತಳಾದಳು.

ಆಗ ಅವಳ ಅನುಮಾನ ನಿಜ ಎಂದೆನಿಸಿತು. ಆಮೇಲೆ ಡೇವಿಡ್ಗಾಗಿ ಕಾಯ್ದಳು.  ಆತ ಒಂದೆರಡು ದಿನ ಆಕಡೆ ಬರಲೇ ಇಲ್ಲ. ನಂತರ ನಾಲ್ಕೈದು ದಿನಗಳ ನಂತರ ಮೆಲ್ಲಗೆ ಸದ್ದು ಮಾಡದೇ ವಿನ್ನಿ ಮನೆಗೆ ಕಾಲಿಟ್ಟ. ಆಗ ವಿನ್ನಿನೇ

ಹೀಗೆ ಕೇಳಿದಳು;

‘ಡೇವಿಡ್..ಇಷ್ಟು ದಿನ ಈ ಕಡೆ ಏಕೆ ಬರಲಿಲ್ಲ. ? ಏನು ಕಾರಣ ವಿರಬಹುದು ?’ ಆಗ ಆತ;

‘ವಿನ್ನಿ ನಾನು ಮತ್ತು ಮೈಕಲ್ ಸಮೀಪದ ಚರ್ಚ್ನಲ್ಲಿ ರಿಸೆಪ್ಷನ್ ಹೋಗಿದ್ದೇವು.’ಎಂದ. 

ಆತ ಸುಳ್ಳು ಹೇಳುತ್ತಿರುವನೆಂದು ತಿಳಿಯಿತು. ಆಗ ಮತ್ತೇ ಅವಳು ಪ್ರಶ್ನಿಸಿದಳು;

‘ಈ ಹದಿನೈದು ದಿನಗಳಿಂದ ಮೈಕೇಲ್ ಊರಲ್ಲಿ ಇಲ್ಲವೇ ಇಲ್ಲ. ಇದು ನಿನಗೆ                   ತಿಳಿದಿಲ್ಲವೇ ?’

‘ಒಹ್.. ಸಾರಿ.. ಗಡಿ ಬಿಡಿಯಲ್ಲಿ ಮೈಕಲ್ ಹೆಸರುಹೇಳಿದೆ.. ಆದರೇ, ಅವನುನಿಜವಾಗಿ ‘ ರಾಜುಮೊಸಸ್’ಎಂದ.

‘ಹೌದಾ , ಮೊಸಸ್ ಬ್ರೋಗೆ ಕರೆಮಾಡಲೇ ?’ ಎಂದಳು.

‘ಬೇಡ ಬೇಡ ಅವನು ಬ್ಯುಸಿ ಇರ್ತಾನೆ. ನಾನೇ ಕರೆಯುತ್ತೇನೆ ‘ ಎಂದ.

‘ಅವನೂ ಕೂಡ ಊರಲ್ಲಿ ಇಲ್ಲವೆಂದು ನಿನಗೆ ತಿಳಿಯದೆ ?’

‘ಅದೇನು ಹಾಗೆ ಹೇಳುತ್ತೀ ‘ ಎಂದ ಡೇವಿಡ್.

‘ನನಗೆ ತಿಳಿದಿದೆ, ಅವನು ನಿನ್ನ ಜೊತೆ ಎಲ್ಲಿಗೂ ಬಂದಿಲ್ಲ, ಅಲ್ಲದೇ ಚರ್ಚ್ನಲ್ಲಿ ರಿಸೆಪ್ಶನ್ ನಡೆದೇಇಲ್ಲ ‘ ಎಂದಳು.

‘ಇರಲಿಬಿಡು.. ನಿನ್ನ ಜೊತೆ ನಾನು ಚರ್ಚೆ ಮಾಡಲು ಸಿದ್ಧನಿಲ್ಲ. ಸ್ಟಾಪ್ ಹಿಯರೋನ್ಲೀ’ ಎಂದ.

‘ಈಗ ನೇರ ಪ್ರಶ್ನೆ ಕೇಳುತ್ತೇನೆ, ಉತ್ತರವನ್ನು ನೇರವಾಗಿ ಹೇಳು ‘ ಎಂದಳು.

ಅವನು ಕೊಂಚ ಗಾಬರಿಯಾದ !

‘ಅದೇನು ?’ ಎಂದುಕೇಳಿದ. ‘

‘ಆಪಾರಿವಾಳವನ್ನು ಏಕೆ ಕೊಂದೆ ?’ ಕೋಪದಿಂದ ಕೇಳಿದಳು. ಆಗ ಇವಳಿಗೆ ತನ್ನ ಮೇಲೆ ಅನುಮಾನ ಮೂಡಿರಬಹುದು ಅಥವಾ ನಾನೇ ಕೊಂದೆ ಎಂದು ತಿಳಿದಿರಬಹುದು’ ಎಂದುಕೊಂಡು;

‘ಇಲ್ಲ.. ನಾನಲ್ಲ.. ಬೇರೆ ಯಾರೋ ಕೊಂದಿರಬೇಕು ‘ ಎಂದ. ಆಕೆ ಇತ ಮತ್ತೊಂದು ಸುಳ್ಳು ಹೇಳುತ್ತಿದ್ದಾನೆ ಎಂದು ಅರಿತಳು. ಆಗ ಆಕೆ; 

‘ನನಗೆ ಚೆನ್ನಾಗಿ ಗೊತ್ತು, ನಾನು ನೇರವಾಗಿ ನೋಡಿಲ್ಲವಾದರೂ, ಕೇಳಿದ್ದೇನೆ ‘ ಎಂದಳು. ಆಗ ಅವನು ಮತ್ತೂ ಗಾಭರಿಯಾದ !ಯಾರು ನೋಡಿ ಈಕೆಗೆ ಹೇಳಿರಬಹುದು ಎಂದು ಯೋಚಿಸ ತೊಡಗಿದ. ಇದನ್ನು ಹೆಚ್ಚಿಗೆ ಬೆಳೆಸಲು ಹೋಗುವುದು ಬೇಡ ಎಂದುಕೊಂಡು,

 ‘ ಸಾರಿ, ಅದು ನನ್ನ ಕೈಕಚ್ಚಿತು. ಕೋಪ ಬಂದು ಅದನ್ನು ನೆಲಕ್ಕೆ ಕುಕ್ಕರಿಸಿದೆ. ಆಗ ಅದು ಸತ್ತೇ ಹೋಯಿತೇನೋ ‘ ಎಂದ.

‘ಅದು ಹಾಗಾಗಿಲ್ಲ, ಅದರ ಕತ್ತನ್ನು ತಿರುವಿ ಅದನ್ನು ಕೊಲೆ ಮಾಡಿದ್ದೀಯಾ ‘ ಎಂದಳು.

‘ಸಾರಿ, ಅದನ್ನು ಕೊಲ್ಲುವ ಉದ್ದೇಶ ನನಗಿರಲಿಲ್ಲ. ಆಕಸ್ಮಿಕವಾಗಿ ಕೆಳಗೆ ಬಿತ್ತು. ಸಾರಿ.. ಸಾರಿ… ‘ ಎಂದ.

,ನೋ .. ನೋ.. ಯು ಆರ್ ಕಿಲ್ಲರ್’. ಕೋಪದಿಂದಲೇ ಹೇಳಿದಳು.

‘ಸಾರಿ ಅಂತ ಹೇಳಿದೆನಲ್ಲ. ಒಂದು ಪಕ್ಷಿಯ ಸಲುವಾಗಿ ನಿನ್ನ ಬೆಸ್ಟ್ ಫ್ರೆಂಡ್ ನನ್ನು ಹೀಗಳೆಯುವದೇ ?’

‘ಡೇವಿಡ್ ನೀನು ಆ ಮೆಸೇಜಗಳನ್ನು ನೋಡಿಯಾದ ಮೇಲೆ, ಆ ಕಾಗದಗಳನ್ನು ಮುದ್ದೆಮಾಡಿ ಎಸೆದಿದ್ದೀಯಾ. ಆಗಿನಿಂದಲೇ ನನಗೆ ಅನುಮಾನ  ಬಂತು’ ಎಂದಳುವಿನ್ನಿ.

‘ಹೌದು ! ನಿಜ. ನನ್ನ ಪ್ರೀತಿಯ ಹುಡುಗಿಯನ್ನು ಯಾರೋ ಹೊಗಳಿದರೆ ನನಗೆ ಸಹಿಸಲಾಗದು’ ಎಂದು ಹೇಳಿ ಸರ್ರನೆ  ಹೊರಗೆ ಹೊಗ ತೊಡಗಿದ.  ಆಗ ವಿನ್ನಿ ಅವನನ್ನು ತಡೆದು ಹೀಗೆ ಹೇಳಿದಳು;

‘ನೀನು ನನಗೆ ಇನ್ನೊಮ್ಮೆ ಮುಖ ತೋರಿಸಬೇಡ, ಇದೇ ಕೊನೆಯಾಗಲಿ’ ಎಂದಳು. ಆಗ ಹೊರಟು ಹೋದವನು

ಮರಳಿ ಬರಲೇ ಇಲ್ಲ.

ಆಮೇಲೆ,ವಿನ್ನಿ ತನ್ನ ಪರಿಚಯದ ಲೂಯಿಸ್ ನನ್ನು ಕರೆದು ಮನೆಯ ಹಿಂದೆ ಒಂದು ಚಿಕ್ಕದಾದ  ಗುಂಡಿಯನ್ನು ತೊಡಿಸಿ

ಆ ಪಾರಿವಾಳವನ್ನು ಅದರಲ್ಲಿ ಬರಿಯಲ್ ಮಾಡಿಸಿ  ಮೇಲೊಂದು ಶಿಲುಬೆಯನ್ನು ಇರಿಸಿದಳು. ಆಕೆ ಪ್ರತಿ ಭಾನುವಾರದ ಪ್ರೇಯರ್ ಮುಗಿಸಿ ಆ ಸ್ಥಳಕ್ಕೆ ಆಗಮಿಸಿ ಒಂದು ನಿಮಿಷ ಮೌನವಾಗಿ ನಿಂತು ಹೋಗುತ್ತಿದ್ದಳು.


ಬಿ.ಟಿ.ನಾಯಕ್

3 thoughts on “ವಿನ್ನಿ ಮತ್ತು ಪಾರಿವಾಳ

  1. ಸಂಗಾತಿ ಅಡ್ಮಿನ್ ಮತ್ತು ಬಳಗಕ್ಕೆ ಧನ್ಯವಾದಗಳು.
    -ಬಿ.ಟಿ.ನಾಯಕ್.

  2. ಸೊಗಸಾದ ನಿರೂಪಣೆಯ ಕಥೆ. ಅಭಿನಂದನೆಗಳು

  3. ಶ್ರೀಯುತ ರಾಘವೇಂದ್ರ ಅವರೇ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

Leave a Reply

Back To Top