ಕಥಾ ಸಂಗಾತಿ
ಮತ್ತೆವಸಂತ…..
ರಾಘವೇಂದ್ರ ಮಂಗಳೂರು
ಕಾಲಿಂಗ್ ಬೆಲ್ ಎರಡು ಮೂರು ಸಾರಿ ಎಡೆಬಿಡದೆ ಬಾರಿಸಿದ್ದು ಕೇಳಿ ನಿಧಾನವಾಗಿ ಎದ್ದು ಬಂದು ಬಾಗಿಲು ತೆಗೆದಳು ಸರಿತಾ ದೇವಿ. ” ಏನು ರಾತ್ರಿ ಎಲ್ಲ ನಿದ್ದೆ ಮಾಡಿದಂಗಿಲ್ಲ ಅಮ್ಮನವರೇ… ಅದಕ್ಕೆ ಬೆಳಿಗ್ಗೆ ಬೇಗ ಎದ್ದಿಲ್ಲ ಅಂತ ಅನಿಸುತ್ತೆ…. ” ಎಂದು ಒಳಗೆ ಬಂದಳು ಕೆಲಸದಾಕೆ ಕಮಲಮ್ಮ. ಆಕೆಗೆ ಸಮಾಧಾನ ಕೊಡುವಷ್ಟು ಶಕ್ತಿ ಕೂಡ ಇಲ್ಲದೇ ಒಂದೆರಡು ಹೆಜ್ಜೆ ಹಾಕಿ ಸೋಫಾದ ಮೇಲೆ ಕುಸಿದು ಕೂತಳು ಸರಿತಾ ದೇವಿ. “ಅಮ್ಮೋರೆ ಅಮ್ಮೋರೆ..” ಎಂದು ಮೂರು ನಾಲ್ಕು ಸಲ ಕೂಗಿದರೂ ಸರಿತಾ ದೇವಿ ಕಣ್ಣು ತೆಗೆಯಲಾರದ್ದು ನೋಡಿ ಗಾಬರಿಗೊಂಡಳು ಕಮಲಮ್ಮ.
ಕಮಲಮ್ಮನಿಗೆ ಟೆನ್ಶನ್ ಹೆಚ್ಚಾಗಿ ಸರ ಸರ ಮೇಲಿನ ಅಂತಸ್ತಿನಲ್ಲಿ ಇರುವ ಶ್ರೀಲತಾಳನ್ನು ಕರೆದುಕೊಂಡು ಬಂದಳು. ಸರಿತಾ ದೇವಿಯ ಕೈ ಹಿಡಿದು ನೋಡಿದಳು ಶ್ರೀಲತಾ. ತುಂಬಾ ಬಿಸಿ ಇತ್ತು. ಬಹುಷಃ ಜ್ವರ ಬಂದಂತೆ ಕಾಣುತ್ತದೆ ಎಂದೆನಿಸಿತು..ಕಮಲಮ್ಮನ ಸಹಾಯದಿಂದ ಸರಿತಾ ದೇವಿಯನ್ನು ಆಕೆಯ ಬೆಡ್ ರೂಮಿಗೆ ತಂದು ಮಲಗಿಸಿದಳು ಶ್ರೀಲತಾ.
“ಕಮಲಮ್ಮ… ನೀನಿಲ್ಲೆ ಇರು. ಹತ್ತು ನಿಮಿಷದಲ್ಲಿ ವಾಪಾಸು ಬರುತ್ತೇನೆ ” ಎಂದು ಹೇಳಿ ಶ್ರೀಲತಾ ಮನೆಗೆ ಹೋದಳು. ” ಯಾವತ್ತೂ ಎಲ್ಲರನ್ನು ನಗುತ್ತಾ ಮಾತಾನಾಡಿಸುತ್ತಿದ್ದ ಸರಿತಮ್ಮಗೆ ಇವೊತ್ತು ಏನಾಯಿತು ಭಗವಂತ….” ಎಂದು ಕೆಳಗೆ ನೆಲದ ಮೇಲೆ ಕುಳಿತು ಯೋಚನೆಗೆ ಸಿಲುಕಿದಳು ಕಮಲಮ್ಮ…ಸ್ವಲ್ಪ ಹೊತ್ತಿನ ಬಳಿಕ ಗಂಡನೊಂದಿಗೆ ವಾಪಾಸು ಬಂದ ಶ್ರೀಲತಾ ಥರ್ಮಾಮೀಟರ್ನೊಂದಿಗೆ ಸರಿತಾ ದೇವಿಯ ಜ್ವರ ಚೆಕ್ ಮಾಡಿದರೆ 102 ಡಿಗ್ರಿ ಇತ್ತು.
ಗಂಡ ಮತ್ತು ಹೆಂಡತಿ ಪರಸ್ಪರ ಮುಖ ನೋಡಿಕೊಂಡರು ಏನು ಮಾಡಬೇಕೋ ತಿಳಿಯದೆ. ಕಮಲಮ್ಮನಿಗೆ ಮುಸುರೆ ಪಾತ್ರೆಗಳನ್ನು ತಿಕ್ಕಿ ಕೊಡು ಎಂದು ಹೇಳಿದಳು ಶ್ರೀಲತಾ.
ಆಗಲಿ ಎನ್ನುವಂತೆ ತಲೆ ಆಡಿಸಿ ಹೋದಳು ಕಮಲಮ್ಮ.
“ಏನು ಮಾಡೋಣ..” ಎಂದು ಹೆಂಡತಿಯ ಕಡೆ ನೋಡಿದ ಗಂಗಾಧರ್.
“ಸರಿತಾ ದೇವೀ ಅವರ ಮಗಳಿಗೆ ಫೋನ್ ಮಾಡ್ತೀನಿ ” ಎಂದು ಶ್ರೀಲತಾ ಫೋನು ಮಾಡಿದಳು. ಆ ಕಡೆಯಿಂದ ‘ಹಲೋ’ ಎಂದು ಕೇಳಿದಾಕ್ಷಣ ” ನಾನು ಶ್ರೀಲತಾ ಮಾತಾಡುತ್ತಿರುವೆ. ನಿಮ್ಮ ತಾಯಿಗೆ 102 ಡಿಗ್ರಿ ಜ್ವರ ಬಂದಿದೆ . ಒಂದು ಸಾರಿ ನೀನು ಬಂದು ಹೋಗಮ್ಮ… ” ಎಂದು ಹೇಳಿದಳು.
ಶ್ರುತಿ ಒಂದೆರಡು ನಿಮಿಷಗಳ ಬಳಿಕ ಉತ್ತರಿಸಿದಳು. ” ಮಾಮೂಲು ಜ್ವರ ಇದ್ದಂತಿದೆ. ಪ್ಯಾರಸಿಟಮಲ್ ಮಾತ್ರೆ ಕೊಡಿ. ಜ್ವರ ಕಡಿಮೆಯಾಗುತ್ತದೆ. ಸಾಯಂಕಾಲ ಒಂದು ಸಾರಿ ಫೋನ್ ಮಾಡಿ” ಎಂದು ಫೋನ್ ಇಟ್ಟುಬಿಟ್ಟಳು.
ಶ್ರೀಲತಾಳ ಮನಸ್ಸಿಗೆ ಬಹಳ
ತಾಪವೆನಿಸಿತು ಶ್ರುತಿಯ ಮಾತು ಕೇಳಿ. ನೀವು ಇಲ್ಲೇ ಇರಿ ಎಂದು ಗಂಡನಿಗೆ ಹೇಳಿ ತಾನು ಮನೆಗೆ ಹೋಗಿ ಹಾಲನ್ನು ಬಿಸಿ ಮಾಡ್ಕೊಂಡು ಗ್ಲಾಸಿನಲ್ಲಿ ಹಾಕಿಕೊಂಡು ಪ್ಯಾರಸಿಟಮಲ್ ಮಾತ್ರೆ ತೆಗೆದುಕೊಂಡು ಕೆಳಗೆ ಬಂದಳು. ಅಷ್ಟರಲ್ಲಿ ಕಮಲಮ್ಮ ಪಾತ್ರೆಗಳನ್ನು ತೊಳೆದು ತಂದಳು. ಇಬ್ಬರೂ ಸೇರಿ ಸರಿತಾ ದೇವಿಯನ್ನು ಎಬ್ಬಿಸಿ ಮಾತ್ರೆ ಕೊಟ್ಟು ಹಾಲು ಕುಡಿಸಿದರು. ಸರಿತಾ ದೇವಿ ಅತೀ ಕಷ್ಟದಿಂದ ಕಣ್ಣನ್ನು ತೆಗೆದು ನಿಮಗೆ ತೊಂದರೆ ಕೊಡುತ್ತಿದ್ದೇನೆ. ಕ್ಷಮಿಸಿ ಎಂದು ಹೇಳಿ ಮತ್ತೆ ನೋವಿನಿಂದ ಕಣ್ಣು ಮುಚ್ಚಿದಳು.
ಜ್ವರದ ತಾಪ ಹೆಚ್ಚಿದ್ದಕಾರಣ ಏನೂ ಮಾತನಾಡಲಿಕ್ಕೆ ಆಗುತ್ತಿಲ್ಲ ಸರಿತಾ ದೇವಿಗೆ. ಮತ್ತೆ ಸರಿಯಾಗಿ ಹಾಸಿಗೆ ಮೇಲೆ ಮಲಗಿಸಿ ಅರ್ಧ ಘಂಟೆಯಲ್ಲಿ ಬರ್ತೀನಿ ಎಂದು ಕಮಲಮ್ಮನಿಗೆ ಹೇಳಿ ಗಂಡನೊಂದಿಗೆ ಮನೆಗೆ ಹೋದಳು ಶ್ರೀಲತಾ.
ಟಿಫನ್ ಮಾಡಿ ಗಂಗಾಧರ್ ಬ್ಯಾಂಕಿಗೆ ಹೋದ. ತಾನೂ ಕೂಡ ಟಿಫನ್ ಮಾಡಿ ಮಗನಿಗೆ ಜಾಗ್ರತೆ ಹೇಳಿ ಮೊಬೈಲ್ ಮತ್ತು ಒಂದು ವಾರಪತ್ರಿಕೆ ತೆಗೆದುಕೊಂಡು ಸರಿತಾ ದೇವಿಯ ಮನೆಗೆ ಬಂದಳು ಶ್ರೀಲತಾ. ಕಮಲಮ್ಮ ಮತ್ತೆ ಸಾಯಂಕಾಲ ಬರ್ತೇನೆ ಎಂದು ಹೇಳಿ ಹೋದಳು. ಶ್ರೀಲತಾ ವಾರಪತ್ರಿಕೆ ನೋಡುತ್ತಾ ಸರಿತಾ ದೇವಿಯ ಪಕ್ಕದಲ್ಲಿ ಚೇರ್ ಹಾಕಿಕೊಂಡು ಕೂತಳು. ಒಂದು ತಾಸು ಆಗುವದರೊಳಗೆ ಸರಿತಾ ದೇವಿ ಜ್ವರದ ತಾಪಕ್ಕೆ ಸಣ್ಣಗೆ ನರಳಲು ಶುರು ಮಾಡಿದಳು. ಸರಿತಾ ದೇವಿಯ ಹಣೆ ಮುಟ್ಟಿ ನೋಡಿದಳು ಶ್ರೀಲತಾ . ನಿಗಿ ನಿಗಿ ಕೆಂಡವನ್ನು ತಾಕಿದ ಅನುಭವವಾ ಯಿತು ಶ್ರೀಲತಾಗೆ. ಕೂಡಲೇ ಒಂದು ಕರವಸ್ತ್ರ ನೀರಿನಲ್ಲಿ ತೊಯಿಸಿ ಹಣೆಯ ಮೇಲೆ ಇಟ್ಟಳು. ಮಧ್ಯಾಹ್ನ ಒಂದು ಘಂಟೆಗೆ ಮಗ ಗಣಪತಿಯನ್ನು ಫೋನ್ ಮಾಡಿ ಕೆಳಗೆ ಕರೆಸಿ ಅವನನ್ನು ಸರಿತಾ ದೇವಿಯ ಬಳಿ ಇರುವಂತೆ ಹೇಳಿ ತಾನು ಊಟ ಮಾಡಿ ಬಂದಳು. ನಂತರ ಫ್ಲಾಸ್ಕಿನಲ್ಲಿನ ಹಾಲನ್ನು ಗ್ಲಾಸಿಗೆ ಹಾಕಿ ಮತ್ತೊಮ್ಮೆ ಕುಡಿಸಿದಳು ಸರಿತಾ ದೇವಿ. ನಂತರ ಗಂಡನಿಗೆ ಫೋನ್ ಮಾಡಿ ” ಮೇಡಂ ಅವರಿಗೆ ಜ್ವರ ಕಡಿಮೆ ಆಗಿಲ್ಲ. ನಿಮಗೆ ಗೊತ್ತಿರುವ ಯಾವ ಡಾಕ್ಟರ ನ್ನಾದರೂ ಕರೆದುಕೊಂಡು ಬನ್ನಿ… “ಎಂದು ಹೇಳಿದಳು ಶ್ರೀಲತಾ. ಗಂಗಾಧರ್ ಆಗಲಿ ಎಂದು ಉತ್ತರಿಸಿದ.
ಸಾಯಂಕಾಲ ಶ್ರುತಿಗೆ ಫೋನ್ ಮಾಡಿ ” ನಿಮ್ಮ ತಾಯಿಗೆ ಇನ್ನೂ ಜ್ವರ ಕಡಿಮೆಯಾಗಿಲ್ಲ.. ಇಲ್ಲೇ ಹತ್ತಿರವಲ್ಲ.. ಒಂದು ಸಾರಿ ಬಂದು ಹೋಗಿ ” ಎಂದು ಹೇಳಿದಳು ಶ್ರೀಲತಾ. ” ನೀವು ಟೆನ್ಶನ್ ತಗೊಂಡು ನಮಗೂ ಟೆನ್ಶನ್ ಮಾಡಬೇಡಿ. ಇಂದು ಇಲ್ಲದಿದ್ದರೆ ನಾಳೆ ಕಡಿಮೆ ಆಗುತ್ತೆ. ಇಲ್ಲಿ ಮಗನಿಗೆ ಆನ್ಲೈನ್ ಕ್ಲಾಸ್ ನಡೀತಿದೆ. ಅವನೊಬ್ಬನನ್ನು ಬಿಟ್ಟು ಬರೋಕೆ ಆಗೋದಿಲ್ಲ. ರಾತ್ರಿ ಕೆಲಸದ ಹೆಂಗಸಿಗೆ ಜೊತೆಗೆ ಮಲಗಲಿಕ್ಕೆ ಹೇಳಿ..” ಎಂದು ಫೋನ್ ಕಟ್ ಮಾಡಿಬಿಟ್ಟಳು.
ಆಕೆಯ ಮಾತು ಕೇಳಿ ಅರೆ ಕ್ಷಣ ಅವಕ್ಕಾ ದಳು ಶ್ರೀಲತಾ. ವಾಸ್ತವವಾಗಿ ಶ್ರುತಿ ಮನೆಯಿಂದ ಇಲ್ಲಿಗೆ ಬರೋದಕ್ಕೆ ಮೂವತ್ತು ನಿಮಿಷ ಸಾಕು. ತಾಯಿಯನ್ನು ನೋಡಿಕೊಂಡು ಹೋಗುವದಕ್ಕೂ ಪುರಸೊತ್ತು ಇಲ್ಲ ಎಂದಿದ್ದು ಕೇಳಿ ಮನಸಿಗೆ ತುಂಬಾ ಬೇಸರವಾಯಿತು.
ಸರಿತಾ ದೇವಿಯ ಮಗ ಸತೀಶ್ ಮುಂಬೈಯಲ್ಲಿ ಇರುತ್ತಾನೆ. ವರ್ಷಕ್ಕೊಂದು ಬಾರಿ ಬಂದು ಒಂದೆರಡು ದಿವಸ ಇದ್ದು ಹೋಗಿಬಿಡುತ್ತಾನೆ. ಸರಿತಾ ದೇವಿಯ ಗಂಡ ಶಂಕರ್ ಸತ್ತು ನಾಲ್ಕು ವರ್ಷವಾಯಿತು. ಆಗಿನಿಂದ ಸರಿತಾ ದೇವಿ ಒಬ್ಬಳೇ ಕೆಳಗಿನ ಮನೆಯಲ್ಲಿ ವಾಸಿಸುತ್ತಿದ್ದಳು. ಮೇಲಿನ ಮಹಡಿಯ ಮನೆಯಲ್ಲಿ ವಾಸಿಸುವ ಶ್ರೀಲತಾ – ಗಂಗಾಧರ್ ದಂಪತಿಗಳು ಆ ಮನೆಗೆ ಬಂದಾಗ ಇನ್ನೂ ಶಂಕರ್ ಬದುಕಿದ್ದರು.
ಸಾಯಂಕಾಲ ಬ್ಯಾಂಕಿನಿಂದ ಬರುವಾಗ ತನಗೆ ಗೊತ್ತಿದ್ದ ಡಾಕ್ಟರ್ ಅವರನ್ನು ಕರೆದುಕೊಂಡು ಬಂದ ಗಂಗಾಧರ್. ಸರಿತಾ ದೇವಿಯನ್ನು ಪರೀಕ್ಷಿಸಿದ ಡಾಕ್ಟರ್ ಇದು ವೈರಲ್ ಫೀವರ್. ಇನ್ನೂ ಮೂರು ನಾಲ್ಕು ದಿನ ಇರುತ್ತದೆ ಗಾಭರಿ ಆಗುವ ಅವಶ್ಯಕತೆ ಇಲ್ಲ ಎಂದು ಇಂಜೆಕ್ಷನ್ ಮಾಡಿ ಕೆಲವು ಮಾತ್ರೆಗಳನ್ನು ಬರೆದುಕೊಟ್ಟರು ಡಾಕ್ಟರ್. ಗಂಗಾಧರ್ ಎಲ್ಲ ಔಷದಗಳನ್ನು ತಂದು ಶ್ರೀಲತಾ ಕೈಗೆ ಕೊಟ್ಟ. ಗಂಗಾಧರ್ ನನ್ನು ಸರಿತಾ ದೇವಿಯ ಕಾವಲಿಗೆ ಬಿಟ್ಟು ಶ್ರೀಲತಾ ಹೋಗಿ ಅಡುಗೆ ಮಾಡಿ ಬಂದಳು. ಸಾಯಂಕಾಲ ಬರ್ತೀನಿ ಎಂದು ಹೇಳಿದ್ದ ಕಮಲಮ್ಮ ಬರದೇ ಕೈಕೊಟ್ಟಳು…
ಮರು ದಿನ ಬೆಳಿಗ್ಗೆ ಶ್ರುತಿ ಫೋನ್ ಮಾಡಿದಳು ಶ್ರೀಲತಾಗೆ. ” ನಮ್ಮ ಅಮ್ಮನಿಗೆ ಹೇಗಿದೆ.. ” ಅಂತ ಕೇಳಿದಳು. ಅದಕ್ಕೆ ” ಇನ್ನೂ ಕಡಿಮೆ ಆಗಿಲ್ಲ ” ಎಂದು ಉತ್ತರಿಸಿದಳು ಶ್ರೀಲತಾ.
” ನೀವು ನಮ್ಮ ಅಮ್ಮನಿಗೆ ಜ್ವರ ಕಡಿಮೆ ಆಗಿಲ್ಲ ಎನ್ನುವ ಕಾತುರದಲ್ಲಿ ಅವರನ್ನು ದಯವಿಟ್ಟು ಕಾರ್ಪೊರೇಟ್ ಹಾಸ್ಪಿಟಲ್ ಗೆ ಸೇರಿಸಬೇಡಿ. ಅವರು ಲಕ್ಷಗಟ್ಟಲೆ ಬಿಲ್ ಮಾಡ್ತಾರೆ…ನಿಮಗೆ ನಾನು ವಾಟ್ಸಪ್ಪ್ ಮೆಸೇಜ್ ಮಾಡಿರುವೆ..ಆ ಲೀಸ್ಟ್ ಪ್ರಕಾರ ಔಷಧಿ ಕೊಡಿ.. ಸಾಯಂಕಾಲ ನಾನು ಬಿಡುವು ಮಾಡಿಕೊಂಡು ಬರ್ತೇನೆ.. ” ಎಂದು ಫೋನ್ ಇಟ್ಟಳು ಶ್ರುತಿ.
ಆಕೆಯ ಮನಸ್ಥಿತಿಗೆ ಮತ್ತೊಮ್ಮೆ ಶಾಕ್ ಆದಳು ಶ್ರೀಲತಾಗೆ. ವಾಟ್ಸಪ್ಪ್ ಮೆಸೇಜ್ ನೋಡಿದಳು. ಅವು ಕರೋನ ಪಾಸಿಟಿವ್ ಇದ್ದ ಪೇಷಂಟ್ ಬಳಸಬೇಕಾದ ಔಷದಗಳು. ಅದನ್ನು ನೋಡಿ ಸಣ್ಣಗೆ ನಿಟ್ಟುಸಿರಿಟ್ಟಳು ಶ್ರೀಲತಾ.
ಶ್ರೀಲತಾ , ಗಂಗಾಧರ್ ಮತ್ತು ಗಣಪತಿ ಸರದಿಯ ಪ್ರಕಾರ ಸರಿತಾ ದೇವಿಯನ್ನು ಮೂರು ನಾಲ್ಕು ದಿನ ಆರೈಕೆ ಮಾಡಿದರು. ಐದನೇಯ ದಿನಕ್ಕೆ ಸರಿತಾ ದೇವಿಯವರ ಆರೋಗ್ಯದಲ್ಲಿ ಕೊಂಚ ಸುಧಾರಣೆಯಾಯಿತು. ಕಳೆದ ನಾಲ್ಕು ದಿನಗಳಿಂದ ಶ್ರೀಲತಾ ದಿನಾ ರಾತ್ರಿ ಅಲ್ಲಿಯೇ ಮಲಗಿ ತನ್ನನ್ನು ಬಾತ್ ರೂಮಿಗೆ ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದುದನ್ನು ನೋಡಿ ಕಣ್ಣಂಚಿನಲ್ಲಿ ನೀರು ತುಂಬಿ ಬಂತು ಸರಿತಾ ದೇವಿಗೆ.
ತನ್ನ ಸ್ವಂತ ಮಗಳು ಈ ಐದು ದಿನಗಳಲ್ಲಿ ಒಮ್ಮೆ ಕೂಡ ಬರಲಿಲ್ಲ. ಒಂದು ವೇಳೆ ಬಂದರೆ ತನಗೆ ಎಲ್ಲಿ ರೋಗ ಬರುತ್ತದೋ ಎಂಬ ಭಯದಿಂದ ಈ ದಿಕ್ಕಿಗೆ ತಲೇನೆ ಹಾಕಿಲ್ಲ.
ಆದರೆ ಶ್ರೀಲತಾ ಸ್ವಂತ ಮಗಳಿಗಿಂತ ಹೆಚ್ಚು ಕಾಳಜಿಯಿಂದ ಸೇವೆ ಮಾಡಿದ್ದಾಳೆ. ರೋಗದ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೆ ಪ್ರೀತಿಯಿಂದ ಅಕ್ಕರೆಯಿಂದ ತನ್ನನ್ನು ನೋಡಿಕೊಂಡು ತಾನು ರೋಗಮುಕ್ತಳಾಗುವಂತೆ ನೋಡಿಕೊಂಡಳು. ಶ್ರೀಲತಾ ತನಗೆ ತನ್ನ ಸ್ವಂತ ತಾಯಿಯಂತೆ ಕಂಡಳು. ಹಾಲನ್ನು ಗ್ಲಾಸಿನಲ್ಲಿ ಹಾಕಿ ಬಿಸಿ ಅರಿಸುತ್ತಿದ್ದ ಶ್ರೀಲತಾಳನ್ನು ಬಾ ಎಂದು ಕರೆದಳು ಸರಿತಾ ದೇವಿ.
ಆಕೆಯ ಎರಡೂ ಹಸ್ತಗಳನ್ನು ತನ್ನ ಕಣ್ಣಿಗೆ ಒತ್ತಿಕೊಂಡಳು ಸರಿತಾ ದೇವಿ. ಕೂಡಲೇ ತನ್ನ ಕೈಗಳನ್ನು ಹಿಂದೆ ತೆಗೆದುಕೊಂಡಳು ಶ್ರೀಲತಾ.
” ಮೇಡಂ.. ನೀವು ದೊಡ್ಡವರು ಹೀಗೆ ಮಾಡುವದು ಸರಿನಾ? ” ಎಂದು ಪ್ರಶ್ನಿಸಿದಳು ಶ್ರೀಲತಾ
” ಲತಾ…. ನೀನು ವಯಸಿನಲ್ಲಿ ಚಿಕ್ಕವಳಿರಬಹುದು ಆದರೆ ಮಾನವತೆಯಲ್ಲಿ ನೀನು ತುಂಬಾ ದೊಡ್ಡವಳು. ನೀನು ನನ್ನ ಅಮ್ಮನಂತೆ ಆರೈಕೆ ಮಾಡಿ ಮತ್ತೆ ನನ್ನನ್ನು ಮನುಷ್ಯಳನ್ನಾಗಿಸಿರುವೆ. ನಿನ್ನ ಉಪಕಾರಕ್ಕೆ ನಾನು ಸದಾ ಚಿರಋಣಿ. ಸ್ವಂತ ಮಗಳು ಇಲ್ಲೇ ಹತ್ತಿರದಲ್ಲಿದ್ದರೂ ನನ್ನನ್ನು ನೋಡಲು ಬರಲಿಲ್ಲ. ಇನ್ನೂ ಮಗ ಅಂತೂ ಒಮ್ಮೆಯೂ ಫೋನ್ ಮಾಡಲಿಲ್ಲ. ರಕ್ತ ಸಂಭಂದಕ್ಕಿಂತ ಮಾನವ ಸಂಬಂಧ ದೊಡ್ಡದು ಎಂದು ನಿನ್ನ ಇಡೀ ಕುಟುಂಬ ತೋರಿಸಿಕೊಟ್ಟಿದೆ.
ನಾನು ನಿಮಗೆ ಕೃತಜ್ಞತೆ ಹೇಳೋದು ಕೂಡ ತಪ್ಪೇನು?.. ” ಎಂದು ಭಾರವಾದ ಹೃದಯದಿಂದ ಹೇಳಿದಳು ಸರಿತಾ ದೇವಿ . ಆಕೆಯ ಕಣ್ಣಲ್ಲಿ ಸಣ್ಣಗೆ ಅಶ್ರುಧಾರೆ. ಅದನ್ನು ನೋಡಿದ ಶ್ರೀಲತಾ ಮೆಲ್ಲಗೆ ಸಮಾಧಾನ ಮಾಡಿದಳು.
” ಮೇಡಂ, ನಿಮಗೆ ಇವೊತ್ತಿನಿಂದ ಊಟ ಕೊಡಲು ಹೇಳಿದ್ದಾರೆ ಡಾಕ್ಟರ್. ಅನ್ನ, ಸೌತೆಕಾಯಿ ಪಲ್ಯ ಮತ್ತು ತಿಳಿ
ಸಾರು ಆಗಬಹುದೇ ಅಥವಾ ಏನಾದರೂ ಬದಲಾವಣೆ ಮಾಡ್ತೀರಾ….. ” ಎಂದು ನಗುತ್ತಾ ಕೇಳಿದಳು ಶ್ರೀಲತಾ.
” ಏನಿಲ್ಲ… ನಿನಗೆ ಏನು
ಮಾಡಬೇಕೆನಿಸುತ್ತದಯೋ ಅದನ್ನೇ ಮಾಡು ” ಸರಿತಾ ದೇವಿ ಬಿಸಿ ಹಾಲನ್ನು ಕುಡಿದು ಟೇಬಲ್ ಮೇಲಿಡುತ್ತಾ ಶ್ರೀಲತಾಗೆ ಹೇಳಿದಳು. ಗ್ಲಾಸನ್ನು ತೆಗೆದುಕೊಂಡು ಮಹಡಿಯ ಮೇಲಿನ ತಮ್ಮ ಮನೆಗೆ ಹೋದಳು.
ಗಂಗಾಧರ್ ಬ್ಯಾಂಕಿಗೆ ಹೋಗುವ ಮುಂಚೆ ಸರಿತಾ ದೇವಿ ಅವರ ಅರೋಗ್ಯ ವಿಚಾರಿಸಿಕೊಂಡು ಹೋದ.
ಎರಡು ದಿನಗಳ ಬಳಿಕ ಸರಿತಾ ದೇವಿ ತನ್ನ ಕೆಲಸವನ್ನು ತಾನೇ ಮಾಡಲು ಶುರು ಮಾಡಿದಳು.
ಶ್ರುತಿ ಒಂದು ದಿನ ಆಕೆಯ ಅಮ್ಮನಿಗೆ ಫೋನ್ ಮಾಡಿ “ಅರೋಗ್ಯ ಈಗ ಹೇಗಿದೆ ” ಅಂತ ಕೇಳಿದಳು. “ಈಗ ಹುಷಾರಾಗಿರುವೆ.. ಜ್ವರ ಕಡಿಮೆಯಾಗಿದೆ ಅಂತ ” ಹೇಳಿದಳು ಸರಿತಾ ದೇವಿ.
“ನೀನು ಯಾವ ಔಷಧ ಬಳಸಬೇಕು ಅಂತ ಶ್ರೀಲತಾಗೆ ಹೇಳಿದ್ದೆ… ಆಕೆಗೆ ಬಹಳ ಅವಸರ…ಸರಿ.. ಏನಾದರಾಗಲಿ ನಿನಗೆ ಜ್ವರ ಕಡಿಮೆ ಆಯ್ತಲ್ಲ ಅಷ್ಟು ಸಾಕು..ಇನ್ನು ಮುಂದೆ ಅರೋಗ್ಯ ಚೆನ್ನಾಗಿ ನೋಡಿಕೋ.. ನಾನು ಒಂದು ವಾರದ ಬಳಿಕ ಬರ್ತೇನಿ.. ಈಗ ಫುಲ್ ಬ್ಯುಸಿ ಆಗಿದ್ದೀನಿ ” ಎಂದು ಹೇಳಿ ಫೋನ್ ಇಟ್ಟಳು.
ಸರಿತಾ ದೇವಿಗೆ ಮಗಳ ಮಾತು ಕೇಳಿ ನಗು ಬಂತು. ಅಂದರೆ ತನಗೆ ಕರೋನ ಬಂದಿದೆ ಅಂದುಕೊಂಡು ಮತ್ತೊಂದು ವಾರದ ಬಳಿಕ ಬರ್ತೀನಿ ಅಂತ ಹೇಳುತ್ತಿದ್ದಾಳೆ.
ಮನುಷ್ಯರಲ್ಲಿ ಎಷ್ಟೊಂದು ಬದಲಾವಣೆ. ತಮ್ಮ ತಮ್ಮ ಪ್ರಾಣದ ಮೇಲೆ ಅಷ್ಟೊಂದು ವ್ಯಾಮೋಹವೇ..ಹೆತ್ತ ತಂದೆ ತಾಯಿಗಳನ್ನು ನೋಡೋಕೆ ಕೂಡ ಭಯವೇ?…
ಮತ್ತೆ ಹಾಗಿದ್ರೆ ಶ್ರೀಲತಾಗೆ ಯಾಕೆ ಇಲ್ಲ ಜೀವ ಭಯ…ತನಗೆ ಹಗಲೂ ರಾತ್ರಿ ಆರೈಕೆ ಮಾಡಿದಳು…ಇಡೀ ಅವರ ಕುಟುಂಬ ಸದಸ್ಯರೆಲ್ಲರೂ ತನಗೆ ಸೇವೆ ಮಾಡಿದರು… ಅವರು ನನಗೇನೂ ಬಂಧುಗಳಲ್ಲ.. ಅವರು ಮನುಷ್ಯತ್ವ ಇದ್ದ ಮನುಷ್ಯರು ಅಷ್ಟೇ….ಇನ್ನೊಬ್ಬರ ಕಷ್ಟ ಸುಖಕ್ಕೆ ಸ್ಪಂದಿಸುವವರು….ಅವರಿಗೆ ತನ್ನ ಹೆತ್ತ ಮಕ್ಕಳಿಗೆ ಅಷ್ಟೇ ವ್ಯತ್ಯಾಸ ಅಂದುಕೊಂಡಳು.
ಸರಿತಾ ದೇವಿ ಎಲ್ಲ ವಿಭಿನ್ನ ದೃಷ್ಟಿ ಕೋನಗಳಿಂದ ಆಲೋಚಿಸಿ ಒಂದು ನಿರ್ಧಾರಕ್ಕೆ ಬಂದಳು. ಫೋನ್ ಮಾಡಿ ಇಬ್ಬರು ಮೂವರನ್ನು ಸಂಪರ್ಕಿಸಿದಳು.
ಮರುದಿನ ಒಬ್ಬ ವ್ಯಕ್ತಿ ಕಾರಿನಲ್ಲಿ ಬಂದು ಸರಿತಾ ದೇವಿಯನ್ನು ಭೇಟಿ ಮಾಡಿ ವಿಷಯ ಚರ್ಚಿಸಿ ಹೋದ. ಅಂದು ಸಂಜೆ ಇಬ್ಬರು ಮೋಟಾರ್ ಸೈಕಲ್ ಮೇಲೆ ಇಬ್ಬರು ಬಂದು ಸರಿತಾ ದೇವಿಯನ್ನು ಭೇಟಿಯಾಗಿ ಹೋಗಿದ್ದನ್ನು ತನ್ನ ಮನೆಯ ವರಾಂಡದಿಂದ ನೋಡಿದಳು. ಸರಿತಾ ದೇವಿ ಸರ್ಕಾರದ ಗೆಜೆಟೆಡ್ ಆಫೀಸರ್ ಆಗಿ ಸೇವೆ ಸಲ್ಲಿಸಿ ನಿರ್ವತ್ತಿ
ಆಗಿದ್ದಳು. ಹೀಗಾಗಿ ಆಕೆ ಜೊತೆ ಕೆಲಸ ಮಾಡಿದ ಸಹೋದ್ಯೋಗಿಗಳು ಬಂದಿರಬೇಕೆಂದು ಭಾವಿಸಿದಳು ಶ್ರೀಲತಾ.
ಪ್ರತಿ ದಿನವೂ ಯಾರೋ ಒಬ್ಬಿಬ್ಬರು ಬಂದು ಸರಿತಾ ದೇವಿಯ ಜೊತೆ ಮಾತಾಡಿ ಹೋಗುವದನ್ನು ಗಮನಿಸುತ್ತಿದ್ದಳು ಶ್ರೀಲತಾ.
ಒಂದು ವಾರ ಆಯಿತು. ಸರಿತಾ ದೇವಿಯ ಅರೋಗ್ಯ ಮೊದಲಿನ ಸ್ಥಿತಿಗೆ ಬಂತು.
“ಇವೊತ್ತು ಸ್ವಲ್ಪ ಕೆಲಸ ಇದೆ. ಬರೋದು ಹೊತ್ತಾಗುತ್ತೆ. ಆದರೆ ನೀನು ಗಾಬರಿಯಾಗಬೇಡ ” ಎಂದು ಸರಿತಾ ದೇವಿ ನಗುತ್ತಾ ಹೇಳಿದಳು.
“ಆಗಲಿ ಮೇಡಂ… ಅದಕ್ಕೇನಂತೆ ” ಎಂದಳು ಶ್ರೀಲತಾ.
ಬೆಳಿಗ್ಗೆ ಹೋದ ಸರಿತಾ ದೇವಿ ಮಧ್ಯಾಹ್ನ ಎರಡಕ್ಕೆ ಮನೆಗೆ ಬಂದಳು. ಶ್ರೀಲತಾಗೆ ಸಾಯಂಕಾಲ ಫೋನ್ ಮಾಡಿ ಒಂದು ಸಾರಿ ಬಂದು ಹೋಗಲು ಹೇಳಿದಳು. ಐದು ನಿಮಿಷದಲ್ಲಿ ಶ್ರೀಲತಾ ಕೆಳಗೆ ಬಂದಳು.
“ಲತಾ … ನಾಳೆ ಬೆಳಿಗ್ಗೆ ನಿಮ್ಮವರು ಬ್ಯಾಂಕಿಗೆ ಹೋದ ಮೇಲೆ ನಾವಿಬ್ಬರು ಒಂದು ಕಡೆ ಹೋಗಬೇಕಾಗಿದೆ. ನೀನು ಬರ್ತಿಯಲ್ಲ…” ಎಂದು ಕೇಳಿದಳು ಸರಿತಾ ದೇವಿ.
“ಆಗಲಿ ಮೇಡಂ.. ತಪ್ಪದೆ ಬರ್ತೀನಿ ” ಎಂದು ಹೇಳಿ ಅದೂ ಇದೂ ಎಂದು ಸ್ವಲ್ಪ ಹೊತ್ತು ಮಾತನಾಡಿ ಮನೆ ಸೇರಿದಳು ಶ್ರೀಲತಾ.
ಮರುದಿನ ಬೆಳಿಗ್ಗೆ ಶ್ರೀಲತಾಳನ್ನು ಸರ್ಕಾರದ ಒಂದು ಅನಾಥ ಶರಣಾಲಯಕ್ಕೆ ಕರೆದುಕೊಂಡು ಹೋದಳು. ಅಲ್ಲಿಯ ಅಧಿಕಾರಿಣಿ ಜಯಂತಿ ಇಬ್ಬರನ್ನೂ ಅದರದಿಂದ ಸ್ವಾಗತಿಸಿದಳು…
ಬಳಿಕ ಬೆಲ್ ಮಾಡಿ ಒಬ್ಬ ಅಟೆಂಡರ್ ನ್ನು ಕರೆದು ” ನಿನ್ನೆ ನಿನಗೆ ಹೇಳಿದ್ದೇನೆಲ್ಲ… ಆ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಾ ” ಎಂದು ಅಜ್ಞಾಪಿಸಿದಳು. ಸ್ವಲ್ಪ ಹೊತ್ತಿಗೆ ಆಕೆ ಇಬ್ಬರು ಹುಡುಗಿಯರನ್ನು ಕರೆ ತಂದಳು.
” ಮೇಡಂ ಈ ದೊಡ್ಡ ಹುಡುಗಿಯ ಹೆಸರು ರಕ್ಷಿತಾ.. ವಯಸ್ಸು ಏಳು ವರ್ಷ. ಚಿಕ್ಕ ಹುಡುಗಿಯ ಹೆಸರು ಪ್ರಶಾಂತಿ ಆಕೆಗೆ ಈಗ ಆರು ವರ್ಷ. ಹೋದ ವರ್ಷ ಕರೋನ ಬಂದು ಇಬ್ಬರ ತಾಯಿ – ತಂದೆ ಅಸು ನೀಗಿದರು. ಇವರನ್ನು ಜೋಪಾನ ಮಾಡಲಿಕ್ಕೆ ಇಲ್ಲಿಯವರೆಗೆ ಅವರ ಯಾವ ಬಂಧುಗಳು ಬರಲಿಲ್ಲ. ಹೀಗಾಗಿ ಸದ್ಯ ನಮ್ಮಲ್ಲೇ ಇದ್ದಾರೆ. ಇವರುಗಳು ಓಕೆನಾ… ” ನಗುತ್ತಾ ಕೇಳಿದಳು ಜಯಂತಿ. ಮಕ್ಕಳಿಬ್ಬರೂ ನೋಡಲು ತುಂಬಾ ಮುದ್ದಾಗಿದ್ದರು . ಅವರಿಬ್ಬರಿಗೆ ತಾನು ತಂದ ಚಾಕೋಲೇಟ್ ಕೊಟ್ಟಳು. ಅಷ್ಟಕ್ಕೇ ಖುಷಿಯಾಗಿ ” ಥ್ಯಾಂಕ್ ಯು ಮೇಡಂ ” ಎಂದು ಕೊರಸ್ ಹಾಡಿದರು ಮಕ್ಕಳು.
“ಮೇಡಂ ಅಲ್ಲ… ಅಮ್ಮ ಎಂದು ಕರೆಯಬೇಕು. ನಿಮ್ಮಿಬ್ಬರನ್ನು ಈ ಅಮ್ಮನೇ ಬೆಳೆಸುತ್ತಾರೆ. ಚೆನ್ನಾಗಿ
ಓದಿಸ್ತಾರೆ…. ಸರಿನಾ ಮಕ್ಕಳೇ ” ಎಂದು ನಗುತ್ತಾ ನುಡಿದಳು ಜಯಂತಿ.
ಮಕ್ಕಳಿಬ್ಬರೂ ಸಂತೋಷದಿಂದ ‘ಓಕೆ’ ಎನ್ನುವಂತೆ ತಲೆ ಆಡಿಸಿದರು.
“ಗೀತಾ.. ಅವರಿಬ್ಬರ ಬಟ್ಟೆಗಳನ್ನು ಬೇರೆ ಬೇರೆ ಬ್ಯಾಗಿನಲ್ಲಿ ಹಾಕಿ ತೆಗೆದುಕೊಂಡು ಬಾ..” ಎಂದು ಆಕೆಯ ಜೊತೆ ಮಕ್ಕಳನ್ನು ಕಳಿಸಿದಳು ಜಯಂತಿ.
ಜಯಂತಿ ಇಷ್ಟರಲ್ಲಿ ದತ್ತು ಸ್ವೀಕಾರ ಮಾಡಲು ಬೇಕಾದ ಪೇಪರುಗಳಿಗೆ ಸಹಿ ಹಾಕಿಸಿದಳು ಸರಿತಾ ದೇವಿಯಿಂದ. ಸ್ವಲ್ಪ ಹೊತ್ತಿನ ಬಳಿಕ ಗೀತಾ ಮಕ್ಕಳಿಬ್ಬರಿಗೆ ಬೇರೆ ಡ್ರೆಸ್ ಹಾಕಿ ಕರೆ ತಂದಳು. ಆಟೋದಲ್ಲಿ ಮಕ್ಕಳನ್ನು ಕೂಡಿಸಿಕೊಂಡು ಶ್ರೀಲತಾಳೊಂದಿಗೆ ಮನೆಗೆ ಬಂದಳು ಸರಿತಾ ದೇವಿ.
ಮಕ್ಕಳಿಬ್ಬರಿಗೆ ಮನೆ ಬಹಳ ಹಿಡಿಸಿತು.. ಕಾಂಪೌಂಡ್ ಒಳಗಡೆ ಹೂವಿನ ಗಿಡಗಳು…ಅದರ ಹತ್ತಿರದ ಹ್ಯಾಂಗಿಂಗ್ ಉಯ್ಯಲೆ ಅವರ ಮನಸ್ಸನ್ನು ತುಂಬಾ ಆಕರ್ಷಸಿದವು. ಶ್ರೀಲತಾಳನ್ನು ಮಕ್ಕಳಿಗೆ ಪರಿಚಯಿಸಿದಳು ಸರಿತಾ ದೇವಿ.
“ಇವರು ಶ್ರೀಲತಾ ಆಂಟಿ. ನನಗೆ ಮಗಳಿದ್ದಂತೆ. ಮೇಲಿನದ್ದೇ ಇವರ ಮನೆ. ಆ ಮನೆಯಲ್ಲಿ ಕೂಡ ಸಾಕಷ್ಟು ಗೊಂಬೆಗಳಿವೆ. ನೀವು ಅವರ ಮನೆಗೆ ಅಡಲಿಕ್ಕೆ ಯಾವಾಗ ಹೋದರೂ ಬೇಡ ಅನ್ನೋದಿಲ್ಲ…ಸರಿನಾ..” ಎಂದು ನಗುತ್ತಾ ನುಡಿದಳು ಸರಿತಾ ದೇವಿ.
ಗೊಂಬೆ ವಿಷಯ ಹೇಳಿದ್ದಕ್ಕೆ ಅವರ ಮುಖಗಳು ಸಂತೋಷದಿಂದ ಅರಳಿದವು. ಎರಡು ಮೂರು ದಿನಗಳಲ್ಲೇ ರಕ್ಷಿತಾ – ಪ್ರಶಾಂತಿ ಇಬ್ಬರೂ ಬೇಗ ಸರಿತಾ ದೇವಿಯೊಂದಿಗೆ ಹೊಂದಿಕೊಂಡು ಬಿಟ್ಟರು.
“ಅಮ್ಮಾ… ಅಮ್ಮಾ” ಎನ್ನುವ ಕರೆ ಪುಟ್ಟ ಮಕ್ಕಳಿಂದ ಕೇಳಿ ಸರಿತಾ ದೇವಿಯ ಮನಸಿಗೆ ತುಂಬಾ
ಸಂತೋಷವಾಗುತ್ತಿತ್ತು. ಆಗ ಒಂದು ಕ್ಷಣ ಹೃದಯ ತುಂಬಿ ಬಂದು ಆನಂದದ ಲೋಕದಲ್ಲಿ ವಿಹರಿಸುತ್ತಿದ್ದಳು ಸರಿತಾ ದೇವಿ….
ಎರಡು ತಿಂಗಳು ಕಳೆದವು. ಈ ಅವಧಿಯಲ್ಲಿ ಸರಿತಾ ದೇವಿ ಮತ್ತು ಶ್ರೀಲತಾ ತೋರುತ್ತಿದ್ದ ಪ್ರೀತಿ ಅದರಣೆಗೆ, ಅವರು ಹೇಳುತ್ತಿದ್ದ ಕಥೆಗಳಿಗೆ, ಹೊರಗೆ ಕರೆದೋಯ್ದು ಸುತ್ತಾಡಿಸುವದಕ್ಕೆ ಮಕ್ಕಳಿಬ್ಬರೂ ಸಂತೋಷದಿಂದ ತಮ್ಮ ಹಳೆಯ ನೋವುಗಳನ್ನು ಪೂರ್ತಿಯಾಗಿ ಮರೆತರು. ಒಂದು ದಿನ ರಾತ್ರಿ ಮಕ್ಕಳಿಬ್ಬರೂ ಊಟ ಮಾಡಿ ಮಲಗಿದ ಮೇಲೆ ಸರಿತಾ ದೇವಿ ಫೋನ್ ಮಾಡಿದಳು ಶ್ರೀಲತಾಗೆ ಸಾಧ್ಯವಾದರೆ ಒಮ್ಮೆ ಬಂದು ಹೋಗುವಂತೆ. ಸರಿ ಎಂದು ಸ್ವಲ್ಪ ಹೊತ್ತಿನಲ್ಲೇ ಶ್ರೀಲತಾ ಬಂದ ಬಳಿಕ ಇಬ್ಬರೂ ಹಾಲಿನಲ್ಲಿ ಕೂತರು.
” ಲತಾ…. ಇಲ್ಲಿಯವರೆಗೆ ನಾನು ನನ್ನ ಸಲುವಾಗಿ ಮತ್ತು ಕುಟುಂಬಕ್ಕಾಗಿ ಬದುಕಿದೆ. ಇನ್ನು ಮೇಲೆ ಸಮಾಜಕ್ಕಾಗಿ ಬದುಕಬೇಕೆಂದಿರುವೆ. ನಮ್ಮ ಯಜಮಾನರು ಪ್ರೈವೇಟ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿ ರಿಟೈರ್ ಆದರು. ನಾನು ಗೆಜೆಟೆಡ್ ಆಫೀಸರ್ ಆಗಿ ಸರಕಾರದಲ್ಲಿ ಸೇವೆ ಸಲ್ಲಿಸಿ ನಿರ್ವತ್ತಿ ಅದೆ. ಮಗ, ಮಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಅವರಿಗೆ ತಕ್ಕ ಸಂಬಂಧಗಳನ್ನು ಆರಿಸಿ ಮದುವೆ ಮಾಡಿದ್ದೇವೆ. ನನ್ನ ಗಂಡ ರಿಟೈರ್ ಆದಮೇಲೆ ಮಕ್ಕಳಿಬ್ಬರಿಗೆ ಒಂದೊಂದು ಫ್ಲಾಟ್ ಕೊಡಿಸಿದರು. ನಾನು ರಿಟೈರ್ ಆದ ಮೇಲೆ ಇಬ್ಬರು ಮಕ್ಕಳಿಗೆ ತಲಾ ಇಪ್ಪತ್ತೈದು ಲಕ್ಷ ಹಣ ನೀಡಿದೆ. ನಮ್ಮ ಯಜಮಾನರು ತೀರಿದ ಬಳಿಕ ನನ್ನನ್ನು ಈ ಮನೆಯಲ್ಲೇ ವಾಸಿಸಲು ಬಿಟ್ಟರೇ ಹೊರೆತು ಅವರ ಮನೆಯಲ್ಲಿ ಇರೋದಿಕ್ಕೆ ಬಿಡಲಿಲ್ಲ. ಮೊನ್ನೆ ನನಗೆ ಜ್ವರ ಬಂದ ಮೇಲೆ ನನ್ನ ಮಕ್ಕಳ ವರ್ತನೆಯನ್ನು ನೀನು ಗಮನಿಸಿರುವೆ. ಅವರಿಗೆ ನಾನು ಸಂಪಾದನೆ ಮಾಡಿದ ಹಣ ಆಸ್ತಿ ಬೇಕೇ ಹೊರತು ನಾನು ಬೇಕಾಗಿಲ್ಲ. ಅದಕ್ಕಾಗಿಯೇ ರಕ್ಷಿತಾ ಮತ್ತು ಪ್ರಶಾಂತಿಯನ್ನು ದತ್ತಕ್ಕೆ ತೆಗೆದುಕೊಂಡಿರುವೆ. ನನಗೆ ಈಗ ಐವತ್ತು ಸಾವಿರ ತಿಂಗಳ ಪೆನ್ಷನ್ ಬರ್ತಿದೆ. ಅವರನ್ನು ಸಾಕುವದಕ್ಕೆ ಅಷ್ಟು ಸಾಕು ಅಂದುಕೊಳ್ತೀನಿ.
ನನ್ನ ಮಕ್ಕಳಿಗೆ ಗೊತ್ತಾಗದಂತೆ ಬಹಳ ವರ್ಷಗಳ ಕೆಳಗೆ ಒಂದು ಪ್ಲಾಟ್ ಖರೀದಿಸಿರುವೆ. ನನ್ನ ಎಪ್ಪತ್ತನೇ ವರ್ಷದಲ್ಲಿ ಮಕ್ಕಳಿಬ್ಬರಿಗೆ ಸರ್ಪ್ರೈಸ್ ಗಿಫ್ಟ್ ಆಗಿ ಹಂಚಬೇಕು ಎಂದು ಅಂದುಕೊಂಡಿದ್ದೆ. ಈಗ ನನ್ನ ಪ್ಲಾನ್ ಬದಲಿಸಿ ಮೊನ್ನೆ ಅದನ್ನು ಎಂಭತ್ತು ಲಕ್ಷಕ್ಕೆ ಮಾರಿದೆ. ಈಗ ಆ ಹಣವನ್ನು ರಕ್ಷಿತಾ ಮತ್ತು ಪ್ರಶಾಂತಿ ಹೆಸರಲ್ಲಿ ಸ್ಟೇಟ್ ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಿರುವೆ. ಅವುಗಳಿಗೆ ಗಾರ್ಡಿಯನ್ ಆಗಿ ನಿನ್ನನ್ನು ನೇಮಕ ಮಾಡಿದ್ದೇನೆ ” ಎಂದು ಅಲ್ಮರಾದಲ್ಲಿದ್ದ ಎಫ್ ಡಿ ಬಾಂಡುಗಳನ್ನು ತೆಗೆದು ತೋರಿಸಿದಳು.
ಅಚ್ಚರಿಗೊಂಡಳು ಮೇಡಂ ಮಾಡಿದ ಕೆಲಸಕ್ಕೆ. ಅದನ್ನೇ ಹೇಳಿದಳು. ” ಮೇಡಂ… ಇದೆಲ್ಲಾ ಯಾಕೆ.. ನನ್ನ ಮೇಲೆ ಅಷ್ಟೊಂದು ಭಾರ ಯಾಕೆ ಹಾಕಿದಿರಿ.. “
ಶ್ರೀಲತಾಳ ಭುಜದ ಮೇಲೆ ಅಪ್ಯಾಯತೆಯಿಂದ ಕೈ ಹಾಕಿ ಹೇಳಿದಳು ಸರಿತಾ ದೇವಿ ” ಈಗಿನ ಕ್ಲಿಷ್ಟ ಪರಿಸ್ಥಿತಿಯಲ್ಲಿ ಮನುಷ್ಯ ಹೇಗೆ ಇರ್ತಾನೋ ಹೇಳಲಿಕ್ಕೆ ಯಾರಿಗೂ ಸಾಧ್ಯವಿಲ್ಲ. ನನಗೀಗ ಅರವತ್ತಾರು ವರ್ಷ. ಅಕಸ್ಮಾತ್ ನನಗೆ ಏನಾದರೂ ಆಗಬಾರದ್ದು ಆಗಿಬಿಟ್ಟರೆ ರಕ್ಷಿತಾ ಮತ್ತು ಪ್ರಶಾಂತಿ ಅವರ ಓದು ಅರ್ಧಕ್ಕೆ ನಿಂತು ಹೋಗಿಬಿಡುತ್ತದೆ ಮತ್ತೆ ಆ ಮಕ್ಕಳು ಅನಾಥರಾಗಿಬಿಡುತ್ತಾರೆ. ಅಲ್ಲದೇ ಅವರ ಭವಿಷ್ಯ ಮಸುಕಾಗಿಬಿಡುತ್ತದೆ.. . ಅನಾಥರಾದ ಮಕ್ಕಳ ಓದು ಅರ್ಧಕ್ಕೆ ನಿಲ್ಲುವಂತಾ ಗಬಾರದು….. ಅವರಿಂದ ಸಮಾಜಕ್ಕೆ ಏನಾದರೂ ಉಪಯೋಗವಾಗುವಂತಿರಬೇಕು.
ನಿನ್ನಲ್ಲಿ ಅವರನ್ನು ಉತ್ತಮ ಪ್ರಜೆಗಳನ್ನಾಗಿಸುವ ಸಾಮರ್ಥ್ಯವಿದೆ.
ಅದಕ್ಕೆ ನೀನು ಸಹಾಯ ಮಾಡಲೇಬೇಕು.. ” ಎಂದು ಭಾವುಕಳಾಗಿ
ಕಣ್ಣೀರು ಹರಿಸಿದಳು ಸರಿತಾ ದೇವಿ
ಶ್ರೀಲತಾ ಮೇಡಂಳ ಕಣ್ಣೀರು ಒರೆಸುತ್ತ
“ನೀವು ಮಾಡುತ್ತಿರುವ ಅತ್ಯುತ್ತಮ ಕೆಲಸದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿದ್ದೀರಿ. ಅದಕ್ಕೆ ಧನ್ಯವಾದಗಳು. ನಿಮ್ಮಈ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೆ ಏರುವದನ್ನು ನೀವು ಖಂಡಿತ ನೋಡುತ್ತೀರಿ. ಆ ಭರವಸೆ ನನಗಿದೆ ಮೇಡಂ…” ಎನ್ನುತ್ತಾ ಸರಿತಾ ದೇವಿ ಕೈಯೊಂದಿಗೆ ತನ್ನ ಕೈ ಜೋಡಿಸಿದಳು.
ಶ್ರೀಲತಾಳ ಭರವಸೆ ಕಂಡು ಸರಿತಾ ದೇವಿಯ ಮನಸು ಹಗುರಾಯಿತು. ಈಗ ಆಕೆಯ ಕಣ್ಣಲ್ಲಿ ಆನಂದಭಾಷ್ಪ!
ಧನ್ಯವಾದಗಳು
NIMMA BRAVANIGE HIDITA TUMBA CHANNAGIDE, BHAVAGAL ANAVARANA, NIMMA NARRATION , DESCRIPTION METHOD TUMBA CHANDA. MURALIDHAR JOSHI, GANGAVATHI
ಧನ್ಯವಾದಗಳು
ಉತ್ತಮ ಬರಹ. ಎರಡು ವರ್ಷಗಳಿಂದ ಕಾಡುತ್ತಿರುವ ರೋಗ ಮನುಷ್ಯ ಮನುಷ್ಯರ ಮಧ್ಯ ಬಿರುಕು ತಂದುದಲ್ಲದೇ ನಂಬಿಕೆಯನ್ನೇ ಅಲುಗಾಡಿಸಿ ಬಿಟ್ಟಿದೆ. ರಕ್ತ ಸಂಬಂಧಗಳು ಕೂಡ ಮಹತ್ವವನ್ನು ಕಳೆದುಕೊಂಡು ಧನದಾಹ ಪ್ರಾಮುಖ್ಯತೆ ಪಡೆದಿದೆ.
ಉತ್ತಮ ಕಥೆ. ಶುಭಾಶಯಗಳು.
ರಕ್ತ ಸಂಭಂಧ ಕ್ಕಿಂತ ಮಾನವ ಸಂಭಂಧ ದೊಡ್ಡದು. ಇನ್ನೊಬ್ಬರ ಕಷ್ಟ ಕ್ಕೆ ಸ್ಪಂದಿಸುವಲು ಇದನ್ನು ಕಥಾ ರೂಪದಲ್ಲಿ ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ. ವಯಸ್ಸಾದ ಸರಿತಾದೇವಿ ಅವರು ಜ್ವರದಿಂದ ಬಳಲುತ್ತಿರುವ ಸಮಯದಲ್ಲಿ ಮೇಲಂತಸ್ತಿನಲ್ಲಿ ಇರುವ ಶ್ರೀ ಲತಾ ಕೆಳಗೆ ಬಂದು ಆರೈಕೆ ಮಾಡಿ ಮಾನವೀಯತೆಯನ್ನು ತೋರಿಸಿದರು. ಮೂವತ್ತು ನಿಮಿಷಗಳಲ್ಲಿ ಬರಬಹುದಾದ ಮಗಳು ಶೃತಿ ಬರಲೇ ಇಲ್ಲ. ಶೃತಿ ಬರದೇ ತಾಯಿಗೆ ಕೋವಿಡ್ ಆಗಿರುವ ಶಂಕೆ ಮಾಡಿ ಅದಕ್ಕೆ ಬೇಕಾಗುವ ಮಾತ್ರೆ ತೆಗೆದು ಕೊಳ್ಳುವಂತೆ ಹೇಳಿದಳು. ಬಹುಶಃ ಆಕೆ ತಾಯಿಗೆ ಕೋವಿಡ್ ಆಗಿರುವ ಸಂಶಯದಿಂದ ಬರಲೇ ಇಲ್ಲ. ಮುಂಬಯಿ ಯಲ್ಲಿ ಇರುವ ಮಗ ಸತೀಶ ಕೂಡಾ ತಾಯಿಯನ್ನು ನೋಡಲು ಬರಲಿಲ್ಲ. ಇದರಿಂದ ನೊಂದ ಸರಿತಾ ಅನಾಥಾಶ್ರಮದಿಂದ ಇದ್ದ ಕೋವಿಡ್ ನಲ್ಲಿ ತಂದೆ ತಾಯಿ ಕಳೆದುಕೊಂಡ ಪುಟ್ಠ ಬಾಲಕಿಯರು ರಕ್ಷಿತಾ ಹಾಗೂ ಪ್ರಶಾಂತಿ ಇಬ್ಬರನ್ನೂ ದತ್ತು ತೆಗೆದುಕೊಂಡು ರಕ್ತ ಸಂಭಂಧ ಕ್ಕಿಂತ ಮಾನವ ಸಂಭಂಧ ದೊಡ್ಡದು ಎಂದು ಸಿದ್ಧ ಮಾಡಿದರು.
ಶ್ರೀ ಲತಾ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವರು ಎನ್ನುವ ಕೀರ್ತಿಗೆ ಪಾತ್ರರಾದರು.
ಕಥೆ ನನಗೆ ತುಂಬಾ ಹಿಡಿಸಿತು.
ಶುಭಾಶಯಗಳು
ಧನ್ಯವಾದಗಳು ಸರ್
ಮಾನವೀಯತೆಯ ಸಾರಹೊತ್ತ ಕಥೆ ಚೆನ್ನಾಗಿ ಮೂಡಿಬಂದಿದೆ.
ಅಭಿನಂದನೆಗಳು