ಅಪ್ಪನ ದಿನದ ವಿಶೇಷ

ಲೇಖನ

ಅಪ್ಪ ಕಲಿಸಿದ ಜೀವನ ಪ್ರೀತಿ

ನಾಗರಾಜ್ ಹರಪನಹಳ್ಳಿ.

ಅಪ್ಪ ಕಲಿಸಿದ ಜೀವನ ಪ್ರೀತಿ

ಅಪ್ಪ ಎಂದಾಕ್ಷಣ ಥಟ್ಟನೆ ಹೊಳೆವುದು ನನಗೆ  “ಸಹನೆ” ಎಂಬ ಭಾವ..ಅಪ್ಪ ಎಂದೂ ನನ್ನ ಮೇಲೆ ತನ್ನ ಅಭಿಪ್ರಾಯಗಳನ್ನು ಹೇರಲಿಲ್ಲ. ಹೀಗೆ ಮಾಡು ಎಂದು ಆದೇಶಿಸಲಿಲ್ಲ. ಒಬ್ಬ ವ್ಯಕ್ತಿ ಎಷ್ಟರ ಮಟ್ಟಿಗೆ ಸ್ವಾತಂತ್ರ್ಯ ನೀಡಬಹುದು ಎಂದು ನನಗೆ ಗೊತ್ತಾದುದು ನನ್ನ ಅಪ್ಪ ನನ್ನ ಅಂತರ್ಜಾತಿ ವಿವಾಹಕ್ಕೆ ಸಮ್ಮತಿ ನೀಡಿದಾಗ.

ಇಷ್ಟೆಲ್ಲಾ ಪಲ್ಲವಿ ಹೇಳಿದ ಮೇಲೆ , ಮುಂದಿನ ಕತೆ ಹೇಳಲೇ ಬೇಕು.

ಜೂ. ೧೯ ಅಪ್ಪಂದಿರ ದಿನ ಎಂದು ವ್ಯಾಟ್ಸಪ್, ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿತ್ತು. ಅದನ್ನು ನೋಡಿದಾಕ್ಷಣ ನನಗೆ , ನನ್ನ ಮತ್ತು ನನ್ನ ಮಗನ ಪೋಟೋಗಳು, ನನ್ನ ಅಪ್ಪ ದೂರದ ಹರಪನಹಳ್ಳಿ ಯಿಂದ ಕಾರವಾರಕ್ಕೆ ವರ್ಷಕ್ಕೆ ಒಮ್ಮೆ ಬರುತ್ತಿದ್ದಾಗ ತೆಗೆದ ಪೋಟೋಗಳು ನೆನಪಾದವು. ಸರಿ ನೆನಪಾದ ಮೇಲೆ , ಅಪರೂಪದ ಆ ಪೋಟೋ ಹುಡುಕಿ ಸ್ಟೆಟಸಗೆ ಹಾಕಿದೆ. ಇದನ್ನು ಕಂಡ ಪತ್ನಿ , “ಪೋಟೋ ಯಾಕ ಹಾಕಿ ಮುಗಸ್ತಿ” ನಿನ್ನ ಅಪ್ಪನ ನೆನಪುಗಳ ಬರೀ ಅಂದ್ಲು.

ಅಪ್ಪ ಕಳೆದ ವರ್ಷ ಮೇ.೧೬ ರಂದು ಎರಡನೇ ಕೋವಿಡ್ ಅಲೆಯಲ್ಲಿ ಹಠಾತ್ತಾಗಿ ಅನಾರೋಗ್ಯಕ್ಕೆ ಈಡಾದರು. ಊರಿಂದ ಸಂಬಂಧಿಕರ ಪೋನು ಬಂತು‌ .ತುರ್ತಾಗಿ ಬನ್ನಿ, ಹನುಮಂತ ಗೌಡ್ರು ಸೀರಿಯಸ್  ಆಗ್ಯಾರಾ. ಮಾತಾಡುತ್ತಿಲ್ಲ, ಉಸಿರಾಟದ ತೊಂದರೆ ಅಂತ ಚಿಕ್ಕಮ್ಮನ ಮಗ ಆಕಡೆಯಿಂದ ಒಂದೇ ಉಸಿರಲ್ಲಿ ಹೇಳಿದ.  ಒಂದು ಕ್ಷಣ ಆಶ್ಚರ್ಯ ವಾಯಿತು ‌.‌ ಎರಡು ದಿನದ ಹಿಂದೆಯಷ್ಟೇ ನನ್ನ ಅಪ್ಪ  ದೂರವಾಣಿಯಲ್ಲಿ ಮಾತಾಡಿದ್ದರು. ಎಂದಿನಂತೆಯೇ ಅವರ ಮಾತಲ್ಲಿ ಆತ್ಮವಿಶ್ವಾಸವಿತ್ತು. ಸಹಜವಾಗಿ ಆರೋಗ್ಯ ಮತ್ತು ಊರಿನ ವಿಷಯ ಕೇಳಿ ಪೋನ್ ಇಟ್ಟಿದ್ದರು‌ . ಮುಂದಿನ ದಿನಗಳಲ್ಲಿ ಕಾರವಾರಕ್ಕೆ ಬಂದು ನೆಲೆಸುವ ಬಯಕೆ ವ್ಯಕ್ತಪಡಿಸಿದ್ದರು.

ಸಂಬಂಧಿಕರ ಆತಂಕ ಕೇಳಿದ ನಾನು ” ಈಗಲೇ ಹೊರಡುವೆ. ನೀವು ಆಸ್ಪತ್ರೆಗೆ ಕರಕೊಂಡು ಹೋಗಿ, ಹಣದ ವ್ಯವಸ್ಥೆ ಮಾಡುವೆ ಅಂದೆ”.

ಆಸ್ಪತ್ರೆಗಳು ಭರ್ತಿಯಾಗಿವೆ. ಬೆಡ್ ಸಿಗುತ್ತಿಲ್ಲ. ನೀವು ಬೇಗ ಬನ್ನಿ ಎಂದು ಆ ಕಡೆಯಿಂದ ಉತ್ತರ ಬಂತು. ಕಾರ್ ನಲ್ಲಿ ಮಗನ್ನ ಜೊತೆ ಮಾಡಿಕೊಂಡು, ಡ್ರೆವರ್ ಜೊತೆ ಹೊರಟೆ.

ಅಪ್ಪನ ಮನೆ ತಲುಪಿದಾಗ ಸಂಜೆ. ಸ್ಥಳೀಯ ವೈದ್ಯರ ಸಲಹೆ ಪಡೆದು , ಆಸ್ಪತ್ರೆಗೆ ಹೋದರೆ, ಅಲ್ಲಿ ಬೆಡ್ ಸಮಸ್ಯೆ. ಆಸ್ಪತ್ರೆಗೆ ಅಂಬುಲೆನ್ಸನಲ್ಲಿ ಬಂದವರೋರ್ವರು ಸ್ಟ್ರಚರ್ ನಲ್ಲೇ ಪ್ರಾಣಬಿಟ್ಟರು. ಅರ್ದಗಂಟೆಗೆ ಒಂದು ಸಾವು. ಸತ್ತ ವ್ಯಕ್ತಿಯ  ಶವ ಸ್ಥಳಾಂತರ ಮಾಡಿದ ಕ್ಷಣದಲ್ಲಿ ಆ ಬೆಡ್ ಇನ್ನೋರ್ವ ರೋಗಿಗೆ. ಅದು ಸಾವಿನ ಬಾಗಿಲು ಹಾಗೂ ಬದುಕಿನ ಬಾಗಿಲುಗಳ ನಡುವಿನ ಹೋರಾಟದ ಸಮಯ. ಅಂತೂ ಆಸ್ಪತ್ರೆಯ ಆವರಣದಲ್ಲಿ ಒಂದು ತಾಸು ಕಾದ ನಂತರ ಬೆಡ್ ಸಿಕ್ಕಿತು. ಆಕ್ಸಿಜನ್ ಹಾಕಿದರು. ಸಾವು ಬದುಕಿನ‌ ಮಧ್ಯೆ ಹೋರಾಟ ಶುರುವಾಯಿತು.‌ರಾತ್ರಿ ಹತ್ತರಿಂದ ಆರಂಭವಾದ ಹೋರಾಟ   ಬೆಳಗಿನ ಹತ್ತರವರೆಗೂ ಇತ್ತು.  ಪಲ್ಸ ರೇಟ ಹೆಚ್ಚು ಕಡಿಮೆಯಾಗುತ್ತಲೇ ಇತ್ತು . ಮಧ್ಯಾಹ್ನ ೧.೩೦ ರ ಸಮಯ ಅಪ್ಪ ಕೊನೆಯುಸಿರೆಳೆದರು. ವೈದ್ಯರು ನನ್ನ ಕರೆದು ಸಾವಿನ ಘೋಷಣೆ ಮಾಡಿದರು. ಅಪ್ಪನ ಜೊತೆಗೆ ಮಾತಾಡಲು ನನಗೆ ಆಗಲೇ ಇಲ್ಲ. ಅವರ ಹಣೆಗೂ ಮುತ್ತಿಡಲಾಗಲಿಲ್ಲ.  ಕೋವಿಡ್ ಕಾಯಿಲೆ ನೆಪದಲ್ಲಿ ಅಂತ ಭಯ ಸೃಷ್ಟಿಯಾಗಿ ಬಿಟ್ಟಿತ್ತು‌ .ಆದರೆ ಅದಕ್ಕೂ ಮುನ್ನ ಆಸ್ಪತ್ರೆಗೆ ಕರೆ ತರುವ ಮುನ್ನ ಮನೆಯಲ್ಲಿ ಅವರ ಹಣೆ ಮುಟ್ಟಿ, ಸಣ್ಣ ಮಗುವಿನ ತಲೆ ನೇವರಿಸುವಂತೆ ಅವರನ್ನು ಮುಟ್ಟಿದ್ದೆ. ಅಪ್ಪ ನನ್ನ ನೋಡುತ್ತಿದ್ದರು. ಆದರೆ ಅವರಿಗೆ ಮಾತಾಡಲು ಸಾಧ್ಯವಾಗದ ಸ್ಥಿತಿ ತಲುಪಿದ್ದರು. ” ಅಪ್ಪ  ನಾನು ಬಂದಿದ್ದೇನೆ. ನೋಡಿಲ್ಲಿ. ಧೈರ್ಯವಾಗಿರು. ಏ‌ನೂ ಆಗಲ್ಲ. ಆರಾಮಾಗುವೆ” . ಇಷ್ಟೇ ನನ್ನಿಂದ ಹೊರಟ ಮಾತು. ಆದರೆ ನನ್ನ ಮಾತು ನಿಜವಾಗಲಿಲ್ಲ. ಅಪ್ಪ  ೧೬ ಮೇ ೨೦೨೧ ರಂದು ಹೊರಟು ಹೋದರು. ಮೈದೂರಿನ ಮಣ್ಣಲ್ಲಿ ಅಪ್ಪನನ್ನು ಅದೇ ರಾತ್ರಿ ಬಿತ್ತಿದೆವು. ಭೂಮಿ ತಾಯಿ ಅವರನ್ನು ಶಾಶ್ವತ ನಿದ್ರೆಗೆ ಕರೆದುಕೊಂಡಳು. ಆದರೆ ಅವರು ನನ್ನೊಳಗೆ ಶಾಶ್ವತವಾಗಿ ಉಳಿದರು. 

ಒಮ್ಮೆಯೂ ಪೆಟ್ಟುಕೊಡಲಿಲ್ಲ:

ಅಪ್ಪ ಮತ್ತು ನನ್ನ ನೆನಪಿನ ಬುತ್ತಿ ಆರಂಭವಾಗುವುದು ಹರಪನಹಳ್ಳಿ ಯಿಂದ. ಆಗಿನ್ನು ನನಗೆ ೮ ವರ್ಷ. ಮಸುಕು ಮಸುಕಾದ ನೆನಪುಗಳಿವೆ. ಶಾಲೆಗೆ ಹೋಗಲ್ಲ ಅಂತ ಹಠ ಮಾಡಿದ ನೆನಪು ನನಗೆ. ಸಣ್ಣ ಕೋಲು ಹಿಡಿದು ಅಪ್ಪ ಜೋರು ಮಾಡುತ್ತಾ ನನ್ನ ಶಾಲೆಗೆ ಕಳಿಸಿದ್ದರು. ಅದೊಂದು ಘಟನೆ ಬಿಟ್ಟರೆ ಅಪ್ಪ ನನ್ನ ಎಂದೂ ಹೊಡೆದ ನೆನಪಿಲ್ಲ. ಆದರೆ ಕಣ್ಣಲ್ಲೇ ಸಿಟ್ಟು ಕೋಪ ಮಾಡಿಕೊಂಡದ್ದು ನೆನಪಿದೆ. ನಾನು ೧೮ ತಿಂಗಳ ಮಗುವಾಗಿದ್ದಾಗ ನನ್ನ ತಾಯಿ ಕ್ಷಯಕ್ಕೆ ಬಲಿಯಾಗಿದ್ದರು. ಹಾಗಾಗಿ ಅಪ್ಪ “ನನ್ನ ಪಾಲಿನ ಅವ್ವನೂ ಆಗಿ” ನನ್ನ ಬೆಳಸಿದರು.

ಸಾಮಾನ್ಯ ನೌಕರಿ ಅವರದ್ದು, ಟೆಲೆಪೊನ್ ಇಲಾಖೆಯಲ್ಲಿ ಲೈನ್ ಮನ್ ಆಗಿದ್ದರು. ಲೈನ್ ಮನ್ ಆಗಿ,  ಮುಂದೆ ಕೇಬಲ್ ಜಾಯಿಂಟರ್ ಆಗಿ ಮಹಾರಾಷ್ಟ್ರ,  ಗುಜರಾತ್ , ಮಧ್ಯಪ್ರದೇಶ, ಓರಿಸ್ಸಾ ರಾಜ್ಯಗಳಲ್ಲಿ ಕೆಲಸ ಮಾಡಿ, ಕೊನೆಗೆ ದಾವಣಗೆರೆಗೆ ಬಂದು ನಿವೃತ್ತರಾದರು. ನಿವೃತ್ತಿ ನಂತರ ಹದಿನಾರು ವರ್ಷ ಬದುಕಿದ್ದರು.

ಕೃಷಿಗೆ ಎತ್ತುಗಳ ಕೊಡಿಸಲಿಲ್ಲ ಎಂದು ಮನೆ ಬಿಟ್ಟಿದ್ದರಂತೆ:

ಅಪ್ಪ ಹದಿಹರೆಯದಲ್ಲಿದ್ದಾಗ ಕೃಷಿ ಮಾಡುತ್ತಿದ್ದರು. ಆ ಕಾಲಕ್ಕೆ ೭ ನೇ ತರಗತಿ ತನಕ ಓದಿ ಶಾಲೆ ಬಿಟ್ಟಿದ್ದರು. ೧೯೬೩ ಸಮಯ.  ನಂತರ ವ್ಯವಸಾಯ. ಅವರ ಅಪ್ಪನ ಬಳಿ ( ನನ್ನ ಅಜ್ಜ ಬೂದಿಹಾಳ ಈಶ್ವರಪ್ಪನ ಬಳಿ) ಕೃಷಿಗೆ ಎತ್ತುಗಳ ತರುವ ಬೇಡಿಕೆಯಿಟ್ಟರು.ಹಣಕಾಸಿನ ಕೊರತೆ ಕಾರಣ ಎತ್ತುಗಳ ತರಲು  ಅವರ ತಂದ ನಿರಾಕರಿಸಿದರಂತೆ. ಈ ವಿಷಯದಲ್ಲಿ ಅಪ್ಪ  ಭರಮಣ್ಣ ನಾಯಕನ ದುರ್ಗದ ತನ್ನ ಮನೆಯಲ್ಲಿ   ಅವರ ಅಪ್ಪನ ( ನನ್ನ ಅಜ್ಜನ)  ಜೊತೆ ಜಗಳ ಮಾಡಿ ಮನೆ, ಊರು ತ್ಯಜಿಸಿದರು. ನಂತರ ಚಿತ್ರದುರ್ಗಕ್ಕೆ  ಬಂದು ಕಾಫಿ ಅಂಗಡಿಯಲ್ಲಿ ಕಾಫಿ ಪುಡಿ ಮಾರಾಟ ಮಾಡಿದರು. ನಂತರ ದಾವಣಗೆರೆಗೆ ತೆರಳಿ  ಟೆಲಿಫೋನ್ ಇಲಾಖೆಯಲ್ಲಿ ಕಾರ್ಮಿಕನಾಗಿ ಕೆಲಸ ಸೇರಿದರು. ನಂತರ ಲೈನ್ ಮನ್ ಹುದ್ದೆ .ಮೊದಲ ಅಪಾಯಿಂಟ್ಮೆಂಟ್ ಚಾಮರಾಜನಗರಕ್ಕೆ. ಅಲ್ಲಿ ಸೇವೆಗೆ ಸೇರಿ ನನ್ನ  ತಾಯಿಯನ್ನು ಮದುವೆಯಾದರು. ಆ ಕಾಲಕ್ಕೆ ಅದು ಬಂಡಾಯದ ಮದುವೆ. ಚಾಮರಾಜನಗರದ ಪಕ್ಕದ ಗ್ರಾಮ ಮಂಗಲ ನನ್ನ ತಾಯಿಯ ಊರು‌ ‌. ಚಾಮರಾಜನಗರದಲ್ಲಿ ಎರಡು ವರ್ಷ ಸೇವೆ ನಂತರ ಹರಪನಹಳ್ಳಿಗೆ ವರ್ಗಾವಣೆ. ಇದು ನನ್ನ ಮತ್ತು ಹರಪನಹಳ್ಳಿ ನಂಟಿಗೆ ಕಾರಣ.

ನನ್ನ ಶಿಕ್ಷಣದ ಬಗ್ಗೆ ಸಹ ಅಪ್ಪ ಮೌನವಾಗಿದ್ದರು:

ನಾನು ಪಿಯುಸಿ ಓದನ್ನು ಕೊಟ್ಟೂರಿನಲ್ಲಿ ಮುಗಿಸಿದಾಗ  ಅಪ್ಪ ಹುಬ್ಬಳ್ಳಿ, ಬೆಳಗಾವಿಯಲ್ಲಿ ನೌಕರಿ ಮಾಡುತ್ತಿದ್ದರು. ನಾನು ಪದವಿ ಕಲಿಯಲು ಧಾರವಾಡ ಸೇರುವ ಬಯಕೆ ವ್ಯಕ್ತಪಡಿಸಿದೆ. ಆಗಲಿ ಎಂದರು‌ .ಧಾರವಾಡದ ಮಾಳಮಡ್ಡಿಯಲ್ಲಿ ಬಾಡಿಗೆ ರೂಂ ಮಾಡಿದೆ. ನನ್ನ ಊರಿಂದ ಟ್ರಂಕ್ ಹಿಡಿದು , ಕಳಿಸಲು ಬಂದರು. ಧಾರವಾಡ ಬಸ್ ನಿಲ್ದಾಣ ದಿಂದ ಕರ್ನಾಟಕ ಕಾಲೇಜು ಮುಂಬಾಗದಿಂದ ಹಾದು ಮಾಳಮಡ್ಡಿ ತಲುಪಿದ್ದು ಕುದುರೆ ಟಾಂಗಾದಲ್ಲಿ.  ನಂತರ ನನಗೆ ಖಾನಾವಳಿ ಊಟದ ವ್ಯವಸ್ಥೆ ಮಾಡಿ, ಬೆಳಗಾವಿಗೆ ಹೋದರು‌ . ಅಲ್ಲಿಂದ ಅಪ್ಪ ನನ್ನ ನಡುವೆ ಪತ್ರ ವಹಿವಾಟು ಇತ್ತು. ಅಪ್ಪನಿಗೆ ಕೊಲ್ಲಾಪುರ, ಸಾಂಗ್ಲಿಗೆ ವರ್ಗಾವಣೆ ಆಯಿತು‌ .ನಾನು ಬಿಎ ಅಂತಿಮ ವರ್ಷ ತಲುಪಿದಾಗ ಜಾಲ್ನಾ, ಅಹಮದಾಬಾದ್ ನಲ್ಲಿದ್ದರು. ಎಂಎ ಕಲಿಯುವ ಹೊತ್ತಿಗೆ ಔರಂಗಾಬಾದ್ , ಭೂಪಾಲ್ ನಲ್ಲಿ ಸಹ ಕರ್ತವ್ಯ ಮಾಡಿದರು. ಎಂ.ಎ .ಮುಗಿಸಿ ಮುಂದೇನು ಮಾಡಲಿ ಎಂಬ ಹಂತದಲ್ಲಿ ನಾ ಇದ್ದೆ. ಆಗ ಅಪ್ಪ ದಾವಣಗೆರೆಗೆ ಮರಳಿ ಬಂದು ನೌಕರಿ  ಮುಂದುವರಿಸಿದರು.

ಆ ಹೊತ್ತಿಗೆ ನಾ ಅಂತರ್ಜಾತಿ ವಿವಾಹಕ್ಕೆ ಸಜ್ಜಾಗಿದ್ದೆ. ಅಪ್ಪ ಒಪ್ಪಿದರು. ಆದರೆ ಒಂದು ಕಂಡೀಶನ್ ಹಾಕಿದರು. ನಾನು ಕರೆಯುವತನಕ ಮನೆಗೆ ಬರಬಾರದು ಎಂದು . ನಾನು ಸಹ ಒಪ್ಪಿದೆ. ಆ ವೇಳೆಗೆ ಕಾರವಾರ ಬಳಿ ಸದಾಶಿವಗಡ ದ ಕಾಲೇಜೊಂದರಲ್ಲಿ ಉಪನ್ಯಾಸಕ ಕೆಲಸ ಸಿಕ್ಕಿತ್ತು. ಆಗ ನನ್ನ ಬಿಡಲು ಬಂದದ್ದು ಅಪ್ಪ. ಆಗಲೂ ಸಹ ಹೆಚ್ಚು ಮಾತಾಡದೆ,ನನ್ನ ನಿರ್ಧಾರ ನಿಲುವುಗಳನ್ನು ಬೆಂಬಲಿಸಿದರು. “ನಿನ್ನ ನಂಬಿದ ಕಡೆ  ನಂಬಿಕೆ ಉಳಿಸಿಕೊ. ಕೊಟ್ಟ ಮಾತು ತಪ್ಪಬೇಡ”  ಎಂದರು. ಹಾಗೆ ನಾನು ಸಹ ನಡೆದುಕೊಂಡೆ. ೨೭ ವರ್ಷಗಳ ಪಯಣದಲ್ಲಿ ಅಪ್ಪ ಅನೇಕ ಸಲ ಬಂದು ನಮ್ಮ ಬದುಕನ್ನು ನೋಡಿ ಹೋಗಿದ್ದರು. ತುಂಬಾ ಪ್ರೀತಿ ಮತ್ತು ಗೌರವ ನಮ್ಮಿಬ್ಬರಲ್ಲಿತ್ತು.‌ ನಾವದನ್ನು ನಮ್ಮೊಳಗೆ ಅನುಭವಿಸಿದೆವು.

ಕೊನೆಯ ಸಲ ಅವರು ಇಲ್ಲಿಗೆ ಬಂದಾಗ ರಾಣೇಬೆನ್ನೂರತನಕ ನಾನು ,‌ನನ್ನ ಮಗ ಹೋಗಿ ಕಾರ್ ನಲ್ಲಿ ಕರೆತಂದಿದ್ದವು. ಪ್ರತಿ ಸಲ ಬಂದಾಗ ಅವರು ಮತ್ತು ನಾನು ಕಾರವಾರದ ಕೆಲ ಹೋಟೆಲ್ ಗಳಲ್ಲಿ ತಿಂಡಿ ತಿಂದು,  ಚಹಾ ಕುಡಿದು ನಂತರ ಬೀಚ್ ಗೆ ಹೋಗುತ್ತಿದ್ದೆವು. ಬೀಚ್ ನ ಮಯೂರವರ್ಮ ವೇದಿಕೆಯಲ್ಲಿ ಕಾರ್ಯಕ್ರಮ ಇದ್ದಾಗ ನೋಡಿ ಮನೆಗೆ ಮರಳುತ್ತಿದ್ದೆವು. ಮತ್ತೆ ಅವರು ಊರಿಗೆ ಮರಳುವುದು ಬಸ್ ಪ್ರಯಾಣದಲ್ಲೇ. ಬೆಳಿಗ್ಗೆ ಎದ್ದು ಬೇಗ ರೆಡಿಯಾಗಿರುತ್ತಿದ್ದರು‌ .ಉಡುಪಿ ಕೃಷ್ಣ ವಿಲಾಸದಲ್ಲಿ ಎರಡು ಇಡ್ಲಿ ತಿಂದು ಚಹಾ ಕುಡಿದು,ಬಸ್ ಹತ್ತಿದರೆ , ಹತ್ತು ಗಂಟೆಗೆ ಶಿರಸಿ ತಲುಪಿರುತ್ತಿದ್ದರು. ಅಲ್ಲಿಂದ ಒಂದು ಕಾಲ್  (ದೂರವಾಣಿ ಕರೆ )ಮಾಡಿ ಮಾತಾಡುತ್ತಿದ್ದರು. ನಂತರ ಸಂಜೆ ೪ .೩೦ ಕ್ಕೆ ಹರಪನಹಳ್ಳಿ ಹತ್ರ  ಮೈದೂರು ಮನೆ ತಲುಪಿರುತ್ತಿದ್ದರು.

ಹೀಗೆ ಬಹಳ ಸಲ ವರ್ಷಕ್ಕೆ ಒಂದು ಸಲ ಅವರ ಪಯಣ ಬದುಕಿನ ಭಾಗವಾಗಿರುತ್ತಿತ್ತು. ೨೦೨೧ ಮಾರ್ಚ್ ಮಧ್ಯಭಾಗದಲ್ಲಿ ಕಾರವಾರಕ್ಕೆ ಬಂದದ್ದು ಅವರ ಕೊನೆಯ ಪ್ರಯಾಣವಾಗಿತ್ತು ಎಂಬುದ‌ ಈಗ ನೆನೆದರೆ ಬದುಕಿನ ಅನಿಶ್ಚಿತತೆ ಎದುರು ನಿಲ್ಲುತ್ತದೆ. ಮಾರ್ಚ್‌ನಲ್ಲಿ ಬಂದು ಹೋದವರು, ಮೇ ೧೨ ಕ್ಕೆ ನನ್ನ ಜೊತೆ ದೂರವಾಣಿಯಲ್ಲಿ ಸಹಜವಾಗಿ ಮಾತಾಡಿದ ಅಪ್ಪ ಹಠಾತ್ತಾಗಿ ಮರಳಿ‌ಬಾರದ ಲೋಕಕ್ಕೆ ಹೊರಟು ಹೋದರು.‌ಆದರೆ ಆ ಅನುಪಸ್ಥಿತಿಯನ್ನು ಇಂದಿಗೂ ನನಗೆ ಒಪ್ಪಿಕೊಳ್ಳಲಾಗಿಲ್ಲ.

ಒಂದು ಜೀವತಂತು ನನ್ನ ಮತ್ತು ಅಪ್ಪನಮಧ್ಯೆ ಇದೆ ಎಂದೇ ನನಗೆ ಅನಿಸುತ್ತಿದೆ.

ಅಪ್ಪ ನನ್ನೊಳಗೆ ಜೀವಂತ ಚಲನೆಯಾಗಿದ್ದಾರೆ ಎಂಬುದೇ ಸತ್ಯ.


ನಾಗರಾಜ್ ಹರಪನಹಳ್ಳಿ.

3 thoughts on “ಅಪ್ಪನ ದಿನದ ವಿಶೇಷ

 1. ಅಪ್ಪ ನನ್ನೊಳಗೆ ಜೀವಂತ. ಅಪ್ಪನ ಸಾವನ್ನು ಎಂದಿಗೂ ಹಂಚಿ ಕೊಳ್ಳಲಾರೆ ಅಂದಿದ್ದು ನೆನಪಾಯಿತು. ಅಪ್ಪ ಹಂಚಿ ಕೊಂಡು ಮುಗಿಸಲಾರದ ನೆನಪು. ಅವರು ಸದಾ ನನ್ನೊಳಗೂ ಇರುತ್ತಾರೆ. . .. ಓದಿ ಭಾವುಕ ವಾಯ್ತು ಮನ. ಅಪ್ಪನಿಗೆ ನಮನ

  1. ಏನೂ ಹೇಳಲಿ…

   ಮೌನವೇ …..ದೀರ್ಘ ನಿಟ್ಟುಸಿರು ಮಾತ್ರ ಸಾಧ್ಯ.

  2. ಅಪ್ಪ ನನ್ನೊಡನೆ ಜೀವಂತ ಚಲನೆಯಾಗಿದ್ದಾರೆ ಎನ್ನುತ್ತಾ,
   ಅಪ್ಪನ ಕುರಿತಾಗಿ ಬರೆದ
   ಚೆಂದದ ಬರಹಕ್ಕೆ ಕಣ್ಣಾದೆ ; ಕಣ್ಣೀರಾದೆ .

Leave a Reply

Back To Top