ಪುಸ್ತಕ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ನೆಲಮುಗಿಲು

ನೆಲಮುಗಿಲು   :  ಕಾದಂಬರಿ 

ಲೇಖಕರು        :  ಶ್ರೀ ವಿವೇಕಾನಂದ ಕಾಮತ್

ಪ್ರಕಾಶಕರು       : ಶ್ರೀಮತಿ ಸುಕನ್ಯಾ 

ಮೊದಲ ಮುದ್ರಣ ; ೨೦೧೨

ಕನ್ನಡ ನಿಯತಕಾಲಿಕೆಗಳನ್ನು ಓದುವ ಹವ್ಯಾಸವಿರುವವರಿಗೆ ಕಥೆ ಕಾದಂಬರಿಗಳನ್ನು ಆಸ್ವಾದಿಸುವವರಿಗೆ ಚಿರಪರಿಚಿತ ಹೆಸರು ಶ್ರೀ ವಿವೇಕಾನಂದ ಕಾಮರ್.  ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಪಡೆದು ಮಂಗಳೂರಿನಲ್ಲಿ ಸ್ವಂತ ಉದ್ಯೋಗದಲ್ಲಿರುವ ವಿವೇಕಾನಂದ ಕಾಮತರ ಜನನ ೨೧.೦೧.೧೯೭೬ ರಂದು . ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸದವರು.  

ಕೆಲವು ಲೇಖಕರಿಗೆ ತಾವು ಬರೆದ ಕಾದಂಬರಿಗಳು ಪತ್ರಿಕೆಗಳ ಮುಖಾಂತರ ದೊಡ್ಡ ಸಮುದಾಯ ತಲಪುವ ಅವಕಾಶ ಇರುವುದಿಲ್ಲ . ಆದರೆ ವಿವೇಕಾನಂದ ಕಾಮತ್ ಅವರ ಕತೆ ಕಾದಂಬರಿಗಳು ನಾಡಿನ ಎಲ್ಲ ಹೆಸರಾಂತ ಪತ್ರಿಕೆಗಳಾದ ಸುಧಾ ತರಂಗ ಮಂಗಳ ಕರ್ಮವೀರ ಕನ್ನಡಪ್ರಭ ಉದಯವಾಣಿ ಪ್ರಿಯಾಂಕಾ ರಾಗಸಂಗಮ ಮಂಜುವಾಣಿ ಗಳಲ್ಲಿ ಪ್ರಕಟವಾಗಿವೆ.  ವರ್ತಮಾನದ ಕನ್ನಡ ಕಾದಂಬರಿ ಲೋಕದಲ್ಲಿ ಜನಪ್ರಿಯ ಹೆಸರು ಇವರದು.ಜನಪ್ರಿಯತೆಯ ಹೆಗ್ಗಳಿಕೆಯ ಜತೆಗೆ ಸಂಕೀರ್ಣ ಕಥಾವಸ್ತುಗಳ ಹಂದರ ಹೊಂದಿರುವ ಪ್ರಬುದ್ಧ ಕಾದಂಬರಿಗಳ ಸೃಷ್ಟಿಕರ್ತ ಇವರು.  ನೂರಕ್ಕೂ ಹೆಚ್ಚು ಕತೆಗಳು ನಲವತ್ತಕ್ಕೂ ಹೆಚ್ಚು ಕಾದಂಬರಿಗಳು ಮತ್ತು ಇಪ್ಪತ್ತಕ್ಕೂ ಹೆಚ್ಚು ಮಿನಿಕಾದಂಬರಿಗಳು ಇವರ ಕಲ್ಪನೆಯ ಮೂಸೆಯಿಂದ ಹೊರಬಂದಿವೆ. ಇತ್ತೀಚಿನ ಇವರ ಅಜ್ಞಾತ ಕಾದಂಬರಿಯು ಸುಧಾದಲ್ಲಿ ಧಾರಾವಾಹಿಯಾಗಿ ಬಂದು ಪುಸ್ತಕವಾಗಿ ಅಚ್ಚಾಗಿ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಅಲಂಕರಿಸಿರುವುದನ್ನು ಇಲ್ಲಿ ನೆನೆಯಬಹುದು. ಇವರ “ಬೇಟೆ”  ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಾರಿಗೆ ಸಂಸ್ಥೆ ನೀಡುವ ಅರಳು ಪ್ರಶಸ್ತಿ (೨೦೧೦) ಸಂದಿವೆ “ದೂರ ದಾರಿಯ ತೀರ” ಕಾದಂಬರಿಗೆ ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ನೀಡುವ “ಲೇಖಿಕಾ ಶ್ರೀ” (೨೦೧೧) ಪ್ರಶಸ್ತಿ ದೊರಕಿದೆ .

ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಾತ್ರಗಳ ಮೂಲಕ ಮಾನವೀಯ ಮೌಲ್ಯಗಳನ್ನು ಮತ್ತು ಮನುಷ್ಯ ಸಂಬಂಧಗಳ ಎಳೆಗಳನ್ನು ಸೂಕ್ಷ್ಮವಾಗಿ ನಿರೂಪಿಸುತ್ತಾ ಹೋಗುವ ಇವರ ಕಾದಂಬರಿಗಳು ಕನ್ನಡ ಸಾರಸ್ವತ ಲೋಕದ ಓದುಗರನ್ನು ತನ್ನೆಡೆಗೆ ಸೆಳೆಯುವ ಎಲ್ಲಾ ಲಕ್ಷಣಗಳನ್ನು ಹೊಂದಿವೆ.  ಈ ಸರಳ ಸ್ನೇಹಜೀವಿ ಸದಾ ಹಸನ್ಮುಖಿ ಸಜ್ಜನ ನನಗೆ ಮುಖಹೊತ್ತಿಗೆಯ ಸ್ನೇಹಿತರು ಎಂದು ಹೇಳಿಕೊಳ್ಳಲು ನನಗೆ ತುಂಬಾ ಹೆಮ್ಮೆ.

ಪ್ರಸ್ತುತ ನೆಲಮುಗಿಲು ಕಾದಂಬರಿ ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿದ್ದಾಗ ಪ್ರತಿವಾರವೂ ಕುತೂಹಲದಿಂದ ಪತ್ರಿಕೆಗಾಗಿ ಎದುರು ನೋಡುತ್ತಿದ್ದುದು ನೆನಪಾಗುತ್ತದೆ . ವಿಶಾಲ ನೆಲೆಗಟ್ಟಿನ ಈ ಕಥೆ ತುಂಬಾ ಸುಖದಲ್ಲಿ ಬೆಳೆಸಿದ ಮಕ್ಕಳು ಹೇಗೆ ಅಡ್ಡ ಹಾದಿ ಹಿಡಿಯುತ್ತಾರೆ ಎಂಬುದನ್ನು ವಿವರಿಸುತ್ತಾ ಹೋಗುತ್ತದೆ .

ಪಿಡಬ್ಲ್ಯುಡಿ ಎ ದರ್ಜೆಯ ಗುತ್ತಿಗೆದಾರರಾದ ನಾಗೇಂದ್ರ ಹಾಗೂ ಸರಕಾರಿ ಉನ್ನತ ಹುದ್ದೆಯಲ್ಲಿರುವ ವಿದ್ಯಾ ಅವರ ಮಗ ರಾಮನಾಥ ಹೆಸರಿಗೆ ಒಂದು ಡಿಗ್ರಿ ಮಾಡಿಕೊಂಡು ಇಪ್ಪತ್ತೇಳು ವರ್ಷಗಳಾಗಿದ್ದರೂ ಯಾವ ಕೆಲಸಕ್ಕೂ ಹೋಗದೆ ತಂದೆಯ ವ್ಯವಹಾರಕ್ಕೂ ತಲೆಹಾಕದೆ ಗೆಳೆಯರು ಕುಡಿತ ಹುಡುಗಿಯರು ಡ್ರಗ್ಸ್ ನಲ್ಲಿ ಮುಳುಗಿ ಹೋಗಿರುತ್ತಾನೆ . ತಂದೆತಾಯಿ ತಮಗಿರದ ಸೌಲಭ್ಯವನ್ನು ಮಗನಿಗೆ ಒದಗಿಸುತ್ತಾ ಹಾಯಾಗಿರಲಿ ಎಂದು ಜವಾಬ್ದಾರಿ ಕಲಿಸದೆ ಆಮೇಲೆ ಮುಂದೆ ಇದೇ ಅವರಿಗೆ ಚಿಂತೆಯ ವಿಷಯವಾಗಿ ಮಾರ್ಪಟ್ಟಿರುತ್ತವೆ . ಈ ಮಧ್ಯೆ ರಾಮನಾಥ ಅಂಕಿತಾ ಎಂಬ ಹುಡುಗಿಯೊಂದಿಗೆ ಮೇರೆ ಮೀರಿ ವರ್ತಿಸಿ ನಂತರ ಮದುವೆಯಾಗಲು ನಿರಾಕರಿಸಿದಾಗ ಇವನ ಬಗ್ಗೆ ಬರೆದಿಟ್ಟು ಅವಳು ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ.  ಆ ವಿಷಯ ಟೀವಿಯಲ್ಲೆಲ್ಲ ಬಂದು ತಂದೆ ತಮ್ಮ ಮಾನ ಉಳಿಸಿಕೊಳ್ಳಲು ಅವಳನ್ನು ಸೊಸೆ ಮಾಡಿಕೊಳ್ಳಲು ಸಿದ್ಧರಾಗುತ್ತಾರೆ.  ಒಲ್ಲದ ಹೆಂಡತಿಯನ್ನ ದೂರವಿಟ್ಟು ಮತ್ತೆ ದುಶ್ಚಟಗಳಲ್ಲಿ ಮುಳುಗುತ್ತಾನೆ.   ತಂದೆಗೆ ಹೃದಯಾಘಾತವಾಗಿ ಅವರ ವ್ಯವಹಾರವನ್ನು ರಾಮನಾಥನೇ ನೋಡಿಕೊಳ್ಳಬೇಕಾಗುತ್ತದೆ ಇವನ ಅನನುಭವದಿಂದಾಗಿ ಹಾಗೂ ಕೆಲ ಹುಚ್ಚು ನಿರ್ಧಾರಗಳಿಂದಾಗಿ ಇಂಜಿನಿಯರ್  ಆಗ್ರಹಕ್ಕೆ ತುತ್ತಾಗಿ  ಕಾಂಟ್ರ್ಯಾಕ್ಟ್ ತಪ್ಪಿಹೋಗುತ್ತದೆ, ದೊಡ್ಡದೊಂದು ಅಪಘಾತವಾಗುತ್ತದೆ . ಎಲ್ಲಾ ಕಡೆ ನಷ್ಟವಾಗಿ ಮತ್ತೆ ನಿರಾಶೆಯ ಕೂಪದಲ್ಲಿದ್ದಾಗ ಡ್ರಗ್ಸ್ ಸಂಬಂಧ ಪೊಲೀಸರಿಗೆ ಸಿಕ್ಕಿ ಬೀಳುತ್ತಾನೆ.  ತಂದೆಯ ಪ್ರಯತ್ನದಿಂದಾಗಿ ಜೈಲು ತಪ್ಪಿದರೂ ತಂದೆತಾಯಿಗೆ ಇವನ ಈ ವಿಷಯ ಮರ್ಮಾಘಾತವನ್ನುಂಟು ಮಾಡುತ್ತದೆ.  ಹೇಗೋ ಇವನ ಜೊತೆ ಏಗುತ್ತಿದ್ದ ಹೆಂಡತಿಯು ಇದೇ ಕಾರಣ ಅವನನ್ನು ತೊರೆದು ಹೋಗುತ್ತಾಳೆ . ಕುಡಿತದ ಮತ್ತಿನಲ್ಲಿದ್ದಾಗ  ತಂದೆಗೆ ಮತ್ತೆ ಹೃದಯಾಘಾತವಾಗಿ ಸಕಾಲಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಗದೆ ಪ್ರಾಣಬಿಡುತ್ತಾರೆ.  ಇವೆಲ್ಲವುಗಳಿಂದ ಜರ್ಜರಿತನಾಗಿ ಕೊನೆಗೆ ಸ್ವಾಮಿಗಳೊಬ್ಬರ ಉಪದೇಶದಿಂದ ಶಾಂತಿ ಸಿಕ್ಕಿ ಅವರ ಆಶ್ರಮದಲ್ಲಿ ನೆಲೆಸಲು ತೆರಳುತ್ತಾನೆ.  ಅಲ್ಲಿಯೂ ಆ ಸ್ವಾಮಿ ಗೋಮುಖ ವ್ಯಾಘ್ರತನದ ಪರಿಚಯವಾಗಿ ಮತ್ತೆ ಭ್ರಮನಿರಸನ.  ಕೊನೆಗೆ ರಾಮನಾಥನ ತಾತ ಅವನನ್ನು ತಮ್ಮ ಹಳ್ಳಿಗೆ ಕರೆದೊಯ್ಯುತ್ತಾರೆ . ಅಲ್ಲಿನ ಪ್ರಶಾಂತತೆಗೆ ಮಾರು ಹೋಗಿ ಅಲ್ಲಿಯೇ ಇರುವ ನಿರ್ಧಾರ ಮಾಡುವವನಿಗೆ ಪರಿಸರ ನಾಶ ಮಾಡುವ ಸಮಾಜ ದ್ರೋಹಿಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗುತ್ತದೆ.  ಮುಂದೇನು?  ಅವನ ಪತ್ನಿ ಮತ್ತೆ ವಾಪಸ್ಸು ಬರುವಳೇ? ರಾಮನಾಥ ನೆಲೆ ಕಂಡುಕೊಳ್ಳುವನೇ?  ಇವೆಲ್ಲಾ  ತಿಳಿಯಲು ಖಂಡಿತ ನೀವು ಕಾದಂಬರಿ ಓದಲೇಬೇಕು . 

ಪ್ರಸ್ತುತ ಸಮಾಜದ ಯುವ ಜನಾಂಗ ಹಾದಿ ತಪ್ಪುತ್ತಿರುವುದನ್ನು , ಅವಶ್ಯಕತೆಗಿಂತ ಹೆಚ್ಚಿನ ಹಣ ಸಂಪಾದಿಸಿ ಮಕ್ಕಳನ್ನು ಮುದ್ದು ಮಾಡಿ  ಹಾಳುಗೆಡಹುವ ಪಾಲಕರನ್ನು ಎಚ್ಚರಿಸುವಂತಿದೆ . ಚಿಕ್ಕಂದಿನಿಂದಲೇ ಜೀವನಮೌಲ್ಯಗಳನ್ನು ಜವಾಬ್ದಾರಿಯನ್ನು ಕಲಿಸದೆ ಇದ್ದರೆ ಮುಂದೆ ಹೇಗೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂಬುದನ್ನು ನಾಗೇಂದ್ರ ಮತ್ತು ವಿದ್ಯಾ ದಂಪತಿಗಳ ಮೂಲಕ ಉದಾಹರಿಸಿದ್ದಾರೆ.  ನಿಯಮಿತ ಗುರಿ ಗಮ್ಯ ಇರದ ಯಾವುದಕ್ಕೂ ಕಷ್ಟಪಡಬೇಕಾಗದ ರಾಮನಾಥನಂತಹ ಶ್ರೀಮಂತ ಬೇಜವಾಬ್ದಾರಿ ಉಡಾಫೆತನದ ಹುಡುಗರಿದ್ದ ಹಾಗೆಯೇ ಬಡತನದಲ್ಲೇ ಓದಿ ಡಾಕ್ಟರಾಗಿ ಜೀವನದಲ್ಲಿ ಯಶಸ್ಸು ಕಾಣುವ ರಾಮನಾಥನ ತಂದೆ ಬಳಿ ಕೆಲಸ ಮಾಡುವ ಶಾಮಣ್ಣನವರ ಮಗ ವಸಂತನಂತಹವರೂ ಇರುತ್ತಾರೆ ಎಂದು ಚಿತ್ರಿಸಿದ್ದಾರೆ.  ರಾಮನಾಥನ ಗೆಳೆಯರು ಗೋಪಿ ಗಿರೀಶ್.  ಪರಿಸರವಾದಿಯಾಗಿ ಹೋರಾಡಲು ಹೋಗಿ ಕೊಲೆಯಾಗುವ ಗಿರೀಶ್,  ಕ್ಯಾಬರೆ ಡಾನ್ಸರ್ ರನ್ನು ಮದುವೆಯಾಗಿ ಬಾಳು ಕೊಡಲು ಹೋಗಿ ಅವಳಿಂದ ಮತ್ತೆ ಪರಿತ್ಯಕ್ತನಾಗುವ ಗೋಪಿ,  ಗೆಳೆತನ ವ್ಯಕ್ತಿತ್ವದ ಮೇಲೆ ಎಷ್ಟು ಪರಿಣಾಮ ಬೀರಬಲ್ಲದು ಎಂಬುದರ ಅರಿವು ಮೂಡಿಸುತ್ತದೆ.  ಇನ್ನು ರಾಮನಾಥನ ತಾತ ಅಜ್ಜಿಯರು ಕಣ್ಣಮುಂದೆ ಮಗನ ಸಾವನ್ನು ಕಂಡು ಮೊಮ್ಮಗನ ಅಧಃಪತನ ನೋಡಿದರೂ ಎಲ್ಲವನೂ ಸರಿಮಾಡುವ ಧೀಶಕ್ತಿ ಮತ್ತು ಹಳ್ಳಿಗೆ ಬಂದೊದಗಿದ ಆಪತ್ತಿಗೆ ಹೋರಾಡುವ ಧೀಮಂತರಾಗಿ  ಗೌರವ ಮೂಡಿಸುತ್ತಾರೆ.  ಇನ್ನು ರಾಮನಾಥನ ಪತ್ನಿ ಅಂಕಿತಾ ಮದುವೆಯಾಗುತ್ತೇನೆಂಬ ಸಲುಗೆಯಿಂದ ಮುಂದುವರಿದು ಅವನು ನಿರಾಕರಿಸಿದಾಗ ಸಾಯಲು ಹೊರಡುತ್ತಾಳೆ .ನಂತರ ಆದದ್ದೆಲ್ಲ ಆಯಿತು ಹೊಂದಿ ಬಾಳೋಣ ಎಂದು ಎಷ್ಟು ಪ್ರಯತ್ನಿಸಿದರೂ ಸುಮುಖನಾಗದ ಪತಿಯೊಂದಿಗೆ ಹೇಗೋ  ಸೈರಿಸಿಕೊಡಿದ್ದವಳು ಅವನು ಡ್ರಗ್ ಅಡಿಕ್ಟ್ ಅನ್ನುವ ವಿಷಯ ತಿಳಿದು ಇನ್ನು ಇವನೊಂದಿಗೆ ಬಾಳಲಾರೆ ಎಂದು ಗಂಡನನ್ನು ತ್ಯಜಿಸುತ್ತಾಳೆ . ಅವಳ ಎಲ್ಲ ಕೃತ್ಯಗಳ ಹಿಂದೆಯೂ ರಾಮನಾಥನ ಬಗೆಗಿನ ಉತ್ಕಟ ಪ್ರೀತಿ ಇದ್ದುದು ಮಾತ್ರ ಎದ್ದು ಕಂಡುಬರುತ್ತದೆ .

ಹೀಗೊಂದು ವಿಶಾಲ ಕ್ಯಾನ್ವಾಸ್ನಲ್ಲಿ ಪಿಡಬ್ಲ್ಯುಡಿ ಇಲಾಖೆಯಲ್ಲಿನ ಕಾರ್ಯವೈಖರಿ ಸಿವಿಲ್ ಕಾಂಟ್ರ್ಯಾಕ್ಟ್ ನ ಒಳ ವ್ಯವಹಾರಗಳು ಕ್ಲಬ್ ಅಲ್ಲಿನ ಡ್ಯಾನ್ಸರ್ಸ್ ಬಾರ್ ಡ್ರಗ್ ಅದನ್ನು ಸಪ್ಲೈ ಮಾಡುವ ಬಾಸ್ ಅಲ್ಲದೆ ಪರಿಸರ ನಾಶ ಮಾಡುವ,  ಅಫೀಮು ಬೆಳೆಯುವ ಸಮಾಜ ಘಾತುಕರ ವರ್ತುಲ,  ಫಾರೆಸ್ಟ್ ಇಲಾಖೆಯ ನಿರ್ಲಕ್ಷ್ಯತನ, ನಿಸರ್ಗ ಕಾಳಜಿ ವಹಿಸಿ ಮುನ್ನುಗ್ಗುವವರ ಅಮಾನುಷ ಕೊಲೆ,  ಎದುರಾದವರನ್ನು ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕೆ ಸರಿಸುವ ದೌರ್ಜನ್ಯ ಎಲ್ಲವನ್ನೂ ತುಂಬ ಅಚ್ಚುಕಟ್ಟಾಗಿ ಒಳ್ಳೆಯ ಚೌಕಟ್ಟಿನಲ್ಲಿ ಕೂಡಿಸಿದ ಹಾಗೆ ಮೂಡಿಬಂದಿದೆ.  ಪ್ರಾರಂಭಿಸಿದರೆ ಕೆಳಗಿಡುವ ಮನಸಾಗದಂತೆ ಓದಿಸಿಕೊಂಡು ಹೋಗುವ ಕಾದಂಬರಿಯು ಮಾನವೀಯತೆಯ ಸೆಲೆಯನ್ನು, ಕ್ರೌರ್ಯದ ಕರಾಳ ಮುಖವನ್ನು, ಆಷಾಢಭೂತಿತನ ಸಮಯಸಾಧಕರ ನಯವಂಚಕತೆಯ ಕಥೆಯನ್ನು ಪದರ ಪದರವಾಗಿ ಬಿಚ್ಚಿಡುತ್ತದೆ.  ಆಧ್ಯಾತ್ಮದ ಹಾದಿಗೆ ತನಗೆ ಗುರು ಎಂದುಕೊಂಡಿದ್ದ ನಿತ್ಯಾನಂದ ಸ್ವಾಮಿಗಳ ಮತ್ತೊಂದು ಮುಖ ಅದನ್ನು ಜಗತ್ತಿಗೆ ಬಿಚ್ಚಿಟ್ಟ ನಂಬಿಕೆದ್ರೋಹಿ ಮ್ಯಾನೇಜರ್ ಇಂತಹವರನ್ನು  ನಂಬಿದೆನಲ್ಲಾ ಎಂದು ಪರಿತಪಿಸಿ ಆಧ್ಯಾತ್ಮದ ಹಾದಿಯಲ್ಲಿ ಮುಂದೆ ಹೋಗಲಾರೆ ಎನ್ನುವ ರಾಮನಾಥ ಪರಿಸ್ಥಿತಿಯ ಶಿಶುಗಳಾಗುತ್ತಾರೆ ವಿಧಿಯ ದಾಳ ನಡೆಸುವ ಪಗಡೆಕಾಯಿಗಳೆನಿಸುತ್ತಾರೆ . 

ಕಾದಂಬರಿಯ ಶೀರ್ಷಿಕೆಯಂತೆ ನೆಲದ ಬೇರಾಗಿ ಹೆಮ್ಮರವಾಗಿ ಬೆಳೆಯಬೇಕು ಇಲ್ಲ ಮುಗಿಲ ಸ್ವಚ್ಛಂದತೆಯಲ್ಲಿ ಹಕ್ಕಿಯಂತೆ ಹಾರಾಡಬೇಕು. ಆದರೆ ಎರಡನ್ನೂ ಸಾಧಿಸಲಾಗದಿದ್ದರೂ ಭೂಮಿಯ ಮೇಲೆ ಸಾರ್ಥಕ ಬಾಳು ಹೇಗೆ ಬಾಳಬಹುದು ಎಂಬುದರ ಬಗ್ಗೆ ಬೆಳಕು ಚೆಲ್ಲುವ ಕಥಾನಕ.  ಕುತೂಹಲ ಕೆರಳಿಸುತ್ತಾ ಹೋಗುವ ಜೊತೆಜೊತೆಗೆ ಚಿಂತನೆಗೆ ಹಚ್ಚುವ ಒಂದು ಉತ್ತಮ ಕಾದಂಬರಿ.  ಮೌಲ್ಯಯುತ ಸಂದೇಶವನ್ನು ಕೊಡುತ್ತದೆ .


                            ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top