ಡಾ.ಜಾಜಿ ದೇವೇಂದ್ರಪ್ಪನವರ ಸಾಹಿತ್ಯದ ಬೆಳಕಿನ ಬೆಳೆಯನ್ನರಸಿ

ಲೇಖನ

ಡಾ.ಜಾಜಿದೇವೇಂದ್ರಪ್ಪನವರ

ಸಾಹಿತ್ಯದಬೆಳಕಿನಬೆಳೆಯನ್ನರಸಿ

ಶರಣಪ್ಪತಳ್ಳಿಕುಪ್ಪಿಗುಡ್ಡ

ಡಾ.ಜಾಜಿ ದೇವೇಂದ್ರಪ್ಪನವರ ಸಾಹಿತ್ಯದ ಬೆಳಕಿನ ಬೆಳೆಯನ್ನರಸಿ

*******

ಕನ್ನಡ ನಾಡಿನ ಸಂಶೋಧನಾ ಸಮೃದ್ಧಿ ಮತ್ತು ಇತಿಹಾಸದ ಸಂಪತ್ತು,ನಮ್ಮ ನಾಡಿನ ಮಹತ್ವದ ಸವಾಲುಗಳ ಕುರಿತು,ಕನ್ನಡ ಭಾಷೆಯಲ್ಲಿ ಅಸಂಖ್ಯಾತ ಅಧ್ಯಯನ ಕೃತಿಗಳು ಬಂದಿವೆ.ಕನ್ನಡ ಭಾಷೆ ಎಂದರೆ ನಾಡಿನ ಉನ್ನತಿಯ ಪರಮ ಸಾಧ್ಯತೆಗಳನ್ನು ಶೋಧಿಸುವ ಸಂಸ್ಕೃತಿಯಾಗಿದೆ.ಈ ಶೋಧದಲ್ಲಿಯಾಗಲಿ,ಭೋಧದಲ್ಲಿಯಾಗಲಿ,ಪರಿಣಿತರನ್ನು ಕೈ ಹಿಡಿದು ನಡೆಸಿದ್ದು ಮಾತ್ರ ಕನ್ನಡ ಭಾಷೆ ಎಂದರೆ ತಪ್ಪಾಗಲಿಕ್ಕಿಲ್ಲ.ಈ ಕನ್ನಡ ಭಾಷೆ ಭಾವನೆಗಳಿಗೆ ಆಶ್ರಯವಾದ ಮಾತೃ ಸ್ವರೂಪವು,ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚರಿತ್ರೆಯ ಕಣ್ಣು ತೆರೆಸುವ,ಪುನಃ ಪುನಃ ಅಧ್ಯಯನಕ್ಕೆ ಲಭಿಸುವ ವಿಧ್ಯುಕ್ತವಾದ ವೇಗ ಪಡೆದಿದೆ.

ಸಾಹಿತ್ಯ ಎಂದು ಯಾವ ಬರಹಕ್ಕೆ ಹೇಳಬಹುದು-? ಸಾಹಿತ್ಯ ಭಾಷೆಯ ಬಳಕೆ,ಅರ್ಥಪೂರ್ಣ ಅನುಭವ ನೀಡುವ ಬರಹವು ಓದುಗರಿಗೆ,ಅಧ್ಯಯನದ ವಿಸ್ತಾರ ಮತ್ತು ಆಳವು ಕೈಗೆಟುಕಬಹುದಾದ್ದೇ ಸಾಹಿತ್ಯವೆ? ಅಥವಾ ಯಾವ ಪುಸ್ತಕಗಳನ್ನು ಓದಿದರೆ ಸ್ಪಷ್ಟ ಪರಿಜ್ಞಾನ ಪಡೆಯಬಹುದು? ಎಂಬ ಪ್ರಶ್ನೆಗಳು ನಮಗೆ ನಿರಂತರ ಕಾಡಿವೆ,ಕಾಡುತ್ತಲೇ ಇರುತ್ತವೆ.

ಯಾವುದೇ ಸಾಹಿತ್ಯ ಕೃತಿಯಿರಲಿ.ಸಂಶೋಧನೆ,ವಿಮರ್ಶೆ,ವೈಚಾರಿಕ ಮತ್ತು ಕಾವ್ಯ ಕಥೆ ಗ್ರಂಥಗಳಿರಲಿ,ಓದಿ ಅರಗಿಸಿಕೊಳ್ಳುವ,ಮನನ ಮಾಡಿಕೊಳ್ಳುವ ಹವ್ಯಾಸವಾಯಿತೆಂದರೆ ಅಧ್ಯಯನವು ಅಳತೆಗೆ,ತೂಕಕ್ಕೆ,ಎಣಿಕೆಗೆ ಸಿಗದಂತೆ ಶಿಖರಪ್ರಾಯವಾದ ಪ್ರಜ್ಞೆ ಬೆಳೆದುಬಿಡುತ್ತದೆ.ಯಾವುದೇ ಸಮಯದಲ್ಲಾಗಲಿ,ಯಾವುದೇ ಕೃತಿಯಾಗಲಿ,ಕಾಟಾಚಾರಕ್ಕೆ ಓದುಬಾರದು.ಒಂದು ವಿಶಿಷ್ಟ ರೀತಿಯಲ್ಲಿ ಓದುತ್ತಾ…..ತಂತ್ರಾಂಶಗಳನ್ನು ನಿಯಂತ್ರಣದಲ್ಲಿರಿಸಿ, ಬುದ್ಧಿ ಶಕ್ತಿಯನ್ನು ಎಚ್ಚರದಿಂದ ವಿನಿಯೋಗಿಸಿ,ಲಭಿಸುವ ಮೌಲ್ಯಗಳ ಪ್ರತಿಫಲ ಪಡೆಯಬೇಕು.ಒಂದು ವ್ಯವಸ್ಥಿತವಾದ ಅನುಭವ ಪಡೆಯುವುದು,ಕಲಿಕೆ ಮತ್ತು ಅರ್ಥ ವಿನ್ಯಾಸವು ಅರಿವಿಗೆ ದಕ್ಕುತ್ತದೆ ಎನ್ನುವುದು ನಾವು ಕಂಡುಕೊಂಡ ಸತ್ಯವಾಗಿದೆ.

ಕನ್ನಡ ನಾಡಿನ ಉದ್ದಗಲ ವ್ಯಾಪಿಸಿಕೊಂಡಿರುವ ಸಂಶೋಧನಾ ಕೃತಿಗಳಲ್ಲಿ ಡಾ.ಜಾಜಿ ದೇವೇಂದ್ರಪ್ಪನವರ  ಕೃತಿಗಳು ಸಹ ಸಾಹಿತ್ಯ ಚರಿತ್ರೆಯಲ್ಲಿ ಸೇರ್ಪಡೆಯಾಗಿ ಕಲಿಕೆಗೆ ಪ್ರೇರಣೆಯಾಗಿವೆ.ಇವರು ಸಾಹಿತ್ಯಿಕ ಚಟುವಟಿಕೆಗಳ ಪೋಷಕರು,ಸಲಹೆಗಾರರು ಮತ್ತು ಕನ್ನಡ ನಾಡಿನ ಸಾಹಿತ್ಯಿಕ ವಾತಾವರಣವನ್ನು ಬೆಸೆಯುವ ಧ್ಯೇಯವುಳ್ಳವರಾದ ಸಂಶೋಧಕರು, ಹಿರಿಯ ಸಾಹಿತಿಗಳು,ಅತ್ಯಂತ ಗಣನೀಯವಾದ ಶಿಷ್ಯಬಳಗ ‌ಹೊಂದಿದ ಡಾ.ಜಾಜಿ ದೇವೇಂದ್ರಪ್ಪನವರು ನಿರಂತರವಾಗಿ ಅಧ್ಯಯನ,ಸಂಶೋಧನೆ,ಭೋಧನೆಯಲ್ಲಿರುತ್ತಾರೆ.

ಕ್ರಿ.ಶ.11 ರಿಂದ 18 ನೆಯ ಶತಮಾನದ ಅವಧಿಯೆಂದರೆ ಇತಿಹಾಸದ ಕನ್ನಡಿಯೆನ್ನಬಹುದು.ಜನ ಜೀವನದ ತಲ್ಲಣಗಳ ಮನೋಭಾವವು ವಿಷಮ ಸ್ಥಿತಿಯಲ್ಲಿ ದ್ವಂದ್ವಕ್ಕೆ ಒಳಗಾದ ಚರಿತ್ರೆಯನ್ನು ಒಕ್ಕಣಿಸುವುದೆಂದರೆ ಒಂದು ಸಾಹಸದ ಕಾರ್ಯವೇ ಸರಿ.ಮಧ್ಯಕಾಲಿನ ಯುಗದ ವಿಜಯನಗರ ಸಾಮ್ರಾಜ್ಯದ ಚರಿತ್ರೆಯಾಗಲಿ.,ಅಧ್ಯಾತ್ಮಿಕ ವಿಚಾರ ಸಾಹಿತ್ಯವಾಗಲಿ.,ಲೌಕಿಕ ವಿಚಾರ ಸಾಹಿತ್ಯವಾಗಲಿ.,ವ್ಯಕ್ತಿಯಾಧರಿತ ವೈಚಾರಿಕ ಸಾಹಿತ್ಯವಾಗಲಿ.,ಸ್ತ್ರೀವಾದ ವೈಚಾರಿಕ ಸಾಹಿತ್ಯವಾಗಲಿ.,ಮತ್ತು ಸಮೂಹ ಮಾಧ್ಯಮ ವಿಚಾರ ಸಾಹಿತ್ಯವಾಗಲಿ ಬರೆಯುವಾಗಿನ ನಿರ್ಧಿಷ್ಟ ಜೀವಂತಿಕೆ ಮತ್ತು ಸ್ಪೂರ್ತಿಯನ್ನು ಹಿಡಿದಿಟ್ಟುಕೊಳ್ಳುವಿಕೆಯಿದೆಲ್ಲಾ……?

ಅದೊಂದು ವ್ರತವಿದ್ದ ಹಾಗೆ.(ಸಂಶೋಧನಾ ಸ್ವರೂಪ ಮತ್ತು ಅಧ್ಯಯನ ಕಾರ್ಯಗಳ ಕುರಿತು ಡಾ.ಜಾಜಿಯವರ ದೇವರ ರಾಜಕೀಯ ತತ್ವ ಎಂಬ ಅನುವಾದದ ಕೃತಿಯಲ್ಲಿ ಲೇಖಕರ ನುಡಿಗಳಲ್ಲಿ ಆಧಾರವನ್ನೊದಗಿಸಿದೆ.ಹಾಗೆನೇ ಸಂಶೋಧನಾ ಸಾಹಿತ್ಯದಲ್ಲೂ ಸ್ಪಷ್ಟ ಕಲ್ಪನೆ ಅವರಲ್ಲಿತ್ತು.)  

ಬರೆಯುವಾಗ ಭಾವನಾತ್ಮಕ ಅಭಿಪ್ರಾಯಗಳು ಮತ್ತು ಹಲಕೆಲವು  ಬುಡಕಟ್ಟು ಜನಾಂಗದ ಜನಪದ ಕಲಾ ಕೌಶಲಗಳ ಸಂಗತಿಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವುದೇ ಅಧ್ಯಯನ ಪ್ರಬಂಧವಾಗಿದೆ. ಈ ನಿಟ್ಟಿನಲ್ಲಿ-

 ಪ್ರಸ್ತಾಪನ ಎಂಬ ತೌಲನಿಕ ಉತ್ಕೃಷ್ಟ ಗ್ರಂಥವು ಐತಿಹಾಸಿಕ ಸಂಗತಿಗಳನ್ನು,ಶೈವ,ವೀರಶೈವ (ಕಾಳಮುಖ) ಪಾಶುಪತರ ಇತರ ಬಹುಮುಖಿಯಾದ ಸಂಸ್ಕೃತಿ,ಮತ್ತು ಸಮಗ್ರ ನಿದರ್ಶನಗಳ ಮೂಲಕ ಅಂದಿನ ಸ್ಥಳನಾಮಾವಳಿಗಳು,ಪಾರಂಪರಿಕ ಲಕ್ಷಣಗಳು, ಪ್ರಭಾವ ಮತ್ತು ಒತ್ತಡಗಳ ಗಾಢ ವಿಷಯಗಳ ಮಹತ್ವದ ಅಂಶಗಳನ್ನು ದಾಖಲಿಸುತ್ತಾ ಸಾಗುವ ಡಾ.ಜಾಜಿ ದೇವೇಂದ್ರಪ್ಪನವರು,ಹಲವಾರು  ವಿಷಯಗಳ ಕುರಿತು ಸೂಕ್ಷ್ಮವಾಗಿ ಮಂಡಿಸಿ,ಅಧ್ಯಯನಶೀಲರಿಗೆ ಕೊಡುಗೆ ನೀಡಿದ್ಥಾರೆ. ಈ ಅಧ್ಯಯನದ ಪುಸ್ತಕವು ಚರಿತ್ರೆಯಲ್ಲಿ ದಾಖಲಾಗುವ (ಸಂಶೋಧನ) ಉಪನ್ಯಾಸ ನೀಡಲು ಸಹಕಾರಿಯುಳ್ಳ ಶೈಲಿಯಲ್ಲಿ ರಚಿತವಾಗಿದೆ.ಇತಿಹಾಸದ ಮೂಲ ಹುಟ್ಟು,ಪರಂಪರೆ ಮತ್ತು ಕಾಲದಿಂದ ಕಾಲಕ್ಕೆ ಪರಿವರ್ತನೆಯಾದ ನಿರೂಪಣೆಯನ್ನನುಸರಿಸಿ  ಪ್ರಸ್ತಾಪನ ಕೃತಿಗೆ ವಿಸ್ತೃತವಾದ ಪ್ರಜ್ಞಾ ಪ್ರವಾಹವನ್ನರಿಸಿದ್ದಾರೆ.

ಕ್ರಿ.ಶ.1440 ರಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಮಂತ್ರಿ ದಂಡನಾಯಕನಾಗಿದ್ದ ಲಕ್ಕಣ್ಣ ದಂಡೇಶನು ಬರೆದ “ಶಿವತತ್ವ ಚಿಂತಾಣಿ” ಎಂಬ ಧಾರ್ಮಿಕ ಪಂಥದ ಕೃತಿಯ ಕುರಿತಾಗಿ,ಲಕ್ಕಣ್ಣ ದಂಡೇಶನ ಶೈವನಿಷ್ಟ ಶಿವತತ್ವ ಚಿಂತಾಮಣಿಯ ಕಾವ್ಯವು ಕನ್ನಡಕ್ಕೆ ಏಕೈಕ ಪಾಶುಪತ ಕಾವ್ಯ ಎಂಬುದನ್ನು ಕೃತಿಕಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಹಾಗೆಯೇ ಲಕ್ಕಣ್ಣ ದಂಡೇಶನು,ತನ್ನ ಗುರು ಮಲ್ಲಿಕಾರ್ಜುನನನ್ನು ಪಾಶುಪತನೆಂದು ಸ್ಮರಿಸುತ್ತಾನೆ ಎಂಬುದಾಗಿ ಕ್ರಿ.ಶ.15 ನೆಯ ಶತಮಾನದವರೆಗೆ ವ್ರತಧಾರಿಗಳಿದ್ದರೆಂಬುದಕ್ಕೆ ಇದು ಸ್ಷಷ್ಟ ಆಧಾರ.ಅಲ್ಲದೇ ಈ ವಿಶೇಷ ಕೃತಿ ಶಿವತಾಂತ್ರಿಕರನ್ನು ಅನೇಕ ಸಂಧರ್ಭಗಳಲ್ಲಿ ಹೆಸರಿಸುತ್ತದೆ ಎಂದು ಡಾ.ಜಾಜಿ ದೇವೇಂದ್ರಪ್ಪನವರು ಉಲ್ಲೇಖಿಸಿದ್ದಾರೆ.

         ಶಿವತತ್ವ ಚಿಂತಾಮಣಿಯ ಧಾರ್ಮಿಕ ಸಂವಾದಗಳನ್ನು ನಿರೂಪಿಸುವದೆಂದರೆ ಪ್ರಯಾಸದ ಕಾರ್ಯ.ಲಕ್ಕಣ್ಣ ದಂಡೇಶನ ಸಾಹಿತ್ಯ ಪ್ರಕಾರ,ಲಕ್ಷಣ ಸ್ವರೂಪ,ಹುಟ್ಟು ,ಪರಂಪರೆಯನ್ನನುಸರಿಸಿ,ಐತಿಹಾಸಿಕ ಉಲ್ಲೇಖಾರ್ಹ ವಿಚಾರಗಳನ್ನು ನಮ್ಮಂತ ಹವ್ಯಾಸಿ ಬರಹಗಾರರು ಅರಗಿಸಿಕೊಳ್ಳಲಾರದೆ ಓದುವ ಕೃತಿಯನ್ನು ಅರ್ಧದಲ್ಲಿ ಬಿಟ್ಟುಬಿಡುತ್ತೇವೆ.ಅತ್ಯಂತ ಶ್ರೀಮಂತ ಭಾಷೆಯಲ್ಲಿ ತಾತ್ವಿಕ ಸಿದ್ಧಾಂತಗಳನ್ನು ಡಾ.ಜಾಜಿ ದೇವೇಂದ್ರಪ್ಪನವರು ಸತ್ವವಾಗಿ ಅರಳಿಸಿದ್ದಾರೆ ಮತ್ತು ಅವರೇ ಅಭಿಪ್ರಾಯಪಟ್ಟಂತೆ….‌.

“ಹರಿಹರಾದಿ ಕವಿಯ ರಗಳೆ,ಕಾವ್ಯಗಳಲ್ಲಿ ಸೂಕ್ಷ್ಮವಾಗಿ ಧಾರ್ಮಿಕ ಸಂಘರ್ಷಗಳನ್ನು ಗುರುತಿಸಬಹುದಾಗಿದೆ.ಮುಖ್ಯವಾಗಿ ಹರಿಹರ ಕವಿಯು ತನ್ನೆಲ್ಲಾ ಬರವಣಿಗೆಯಲ್ಲಿ ವೀರಶೈವ ಧರ್ಮರ್ದೊಂದಿಗಿನ ಅನ್ಯಧರ್ಮದ ಸಮರ್ಥನೆಯನ್ನು ಒತ್ತಿ ಹೇಳುತ್ತಾನೆ. ಈತ (ಲಕ್ಕಣ ದಂಡೇಶನು) ಹಲವಾರು ಶರಣರ ಕಥೆಗಳನ್ನು ಆ ಮೂಲಕ ಕಟ್ಟುತ್ತಾನೆ.ಲಕ್ಕಣ್ಣ ದಂಡೇಶ ಕವಿಯೂ, ಹರಿಹರನು ಪ್ರಸ್ತಾಪಿಸಿದ ಕೆಲವು ಶರಣರ ಸಂಗತಿಗಳನ್ನು ಪ್ರಸ್ತಾಪಿಸುತ್ತಾನೆ.ಅಲ್ಲದೆ  ಶೈವದಲ್ಲಿಯೇ ಆದ ಕೆಲವು ಹೊಸ ವಿಷಯಗಳನ್ನು ಹೇಳುತ್ತಾನೆ.ಆ ಮೂಲಕ ಸಮಕಾಲಿನ ವಿಜಯನಗರ ಕಾಲದ ಧಾರ್ಮಿಕ ಸಂವಾದವೊಂದನ್ನು ಬಸವಾದಿ ಚಾರಿತ್ರ್ಯಿಕ ವ್ಯಕ್ತಿಗಳೊಂದಿಗೆ ಸಮೀಕ್ಷೆಗೆ ಒಳುಗು ಮಾಡುತ್ತಾನೆ ಎಂದು ಪ್ರಸ್ತಾಪನ  ಕೃತಿಯ 15 ನೆಯ ಪುಟದಲ್ಲಿ ಕೆಲವು ಅಂಶಗಳನ್ನು 33 ಸಂದಿಯಲ್ಲಿ ಬಸವಣ್ಣನನ್ನು ಮೀಮಾಂಸಕರ ಹತ್ತಿರ ಗೆಲ್ಲುವಂತೆ ಮಾಡುತ್ತಾನೆ ಎಂದು ಹೇಳುತ್ತಾರೆ” ಈ ಕೃತಿಯಲ್ಲಿ ಶಿವತತ್ವ ಚಿಂತಾಮಣಿಯ ತಿರುಳನ್ನು ಸಂಗ್ರಹಿಸಿ,ಜೊತೆಗೆ ಲಕ್ಕಣ್ಣ ದಂಡೇಶನ ಪೂರ್ವ ಕಥೆಯನ್ನು ವಿಸ್ತರಿಸುವುದರ ಮೂಲಕ ಡಾ.ಜಾಜಿ ದೇವೇಂದ್ರಪ್ಪನವರು,ಸ್ನಾತಕೊತ್ತರ ಪದವಿ ಓದುವವರಿಗೆ ಒಳ್ಳೆಯ ಅಧ್ಯಯನವನು,ಸಾರಂಶವನ್ನು ಒದಗಿಸಿಕೊಟ್ಟಿದ್ದಾರೆ.ಬರಹದ ಶೈಲಿಯು ಮನನ ಮಾಡಿಕೊಳ್ಳುವಂತಿದೆ.ಸಂಶೋದನಾ ದೃಷ್ಟಿಯಲ್ಲಿ ಲಕ್ಕಣ್ಣ ದಂಡೇಶನ ಕಾವ್ಯ ಪ್ರಯೋಗಗಳನ್ನು ಬಿಂಬಿಸಿದ್ದಾರೆ.ಆತನ ಕಾಲಮಾನದ ಮಾಹಿತಿಗಳನ್ನು ಅಮುಲಾಗ್ರವಾಗಿ ಅಭ್ಯಸಿಸಿ   ನೀಡಿದ್ದಾರೆ.ದೇಸೀ ಸಾಹಿತ್ಯ  ಪ್ರಕಾರಗಳ ಮೂಲವನ್ನು ಶೋಧಿಸುತ್ತಾ ಹೊರಟ ಸಂಶೋಧಕರು,ಶರಣರ ಆತ್ಮಾನುಭವ ಮತ್ತು ಅವರ ಕಾಲಮಾನದ ಹೊಸ ಹೊಸ ಆಯಾಮಗಳನ್ನು,ಸಿದ್ಧಾಂತಗಳನ್ನು  ಚಿಂತಕರು ಪ್ರಸ್ತಾಪನೆ ಮಾಡಿದ್ದಾರೆ.

ಕಲ್ಯಾಣ ಕ್ರಾಂತಿಯ ಬಹು ಮುಖ್ಯ ಶರಣರೆಂದರೆ ಬಸವಣ್ಣನವರು. ಹಲವಾರು ಹಿರಿಯ ಸಾಹಿತಿಗಳು ತಮ್ಮ ತಮ್ಮ ಸಾಹಿತ್ಯಿಕ ಕೃತಿಗಳಲ್ಲಿ ಬಸವಣ್ಣನವರ ಕುರಿತು ಬಿಂಬಿಸಿದ್ದಾರೆ. ನುಡಿದಂತೆ ನಡೆದ ಕಾರಣಿಕ ಪುರುಷ  ಎಂಬುವುದರಲ್ಲಿ ಯಾವ  ಸಂದೇಹವೂ ಇಲ್ಲ. ಬಸವಣ್ಣನವರಲ್ಲಿದ್ದ ಜಾಗೃತ ಸಮಾಜ ಪ್ರಜ್ಞೆ.,ಹೊಣೆಯ ಹೊತ್ತು ಸ್ವೀಕರಿಸುವ ಗುಣ.,ಸಾಮಾಜಿಕ ಧಾರ್ಮಿಕ ಭಕ್ತಿಮಾರ್ಗದಲ್ಲಿ  ದೈನಂದಿನ .ಸಮಾನತೆ ಅಳವಡಿಸಿಕೊಳ್ಳಬಹುದಾದ ನಯ ವಿನಯ.,ಮತ್ತೆ ಮತ್ತೆ…ನಿತ್ಯವೂ ಶಿವಶರಣರಲ್ಲಿ ತೋರುವ ನಮ್ರತೆ ಮತ್ತು ಪ್ರಾಮಾಣಿಕತೆ,ಲೋಕದ ವಿಚಾರ ವಸ್ತುಗಳನ್ಶು ಶಿವಶರಣರಲ್ಲಿ ಹಂಚಿಕೊಳ್ಳುವಾಗಿನ ವಿಧೆಯತೆ.,ಅಧ್ಯಾತ್ಮ ಮಾರ್ಗವನು ಅನುಸರಿ‌ಸಿ  ನಡೆಯುವುದು ‌ವ್ಯವಹಾರಿಕವಲ್ಲ. ಕಾಯಕದ ಒಂದು ಸ್ವಯಂ ಪ್ರಜ್ಞೆ.ಆದರ್ಶ ಗುಣಗಳ ಕಾರ್ಯತತ್ವ ಎನ್ನಬಹುದು. 11 ಮತ್ತು 12 ನೆಯ ಶತಮಾನದಲ್ಲಿ ಸಾಮಾಜಿಕ ಸತ್ಯದ ನಾಡಿಯನ್ನು ಬಸವಣ್ಣನವರು ಪವಿತ್ರಿಕರಣಗೊಳಿಸಿದ ಮಹಾತ್ಮರು.ಆದರೂ ಸಹ ಕಲ್ಯಾಣ ಕ್ರಾಂತಿ ಎಂಬುದು  ಸಮಾಧಾನಕರವಾಗಿಲ್ಲ.ಕಾಕತಾಳಿಯವಾದದ್ದು.ಆ ಯುಗದ ಅಂತ್ಯವು ಬಸವಣ್ಣನನ್ನು,ಮತ್ತು ಬಹು ಸಂಖ್ಯಾತ ಶರಣರನ್ನು ಬಲಿಪಡೆದದ್ದಂತೂ ಸತ್ಯ.ಬಸವಣ್ಣನವರ ಅಂತಿಮ  ಬದುಕಿನ ಗಳಿಗೆಯನ್ನು ಯಾರೂ ಸಮಂಜಸ ರೂಪ ಕೊಟ್ಟಿಲ್ಲವೆಂದಾದರೂ ಅವರವರ ಅಧ್ಯಯನಕ್ಕೆ ದಕ್ಕಿದ  ಕಲ್ಪನೆಯಲ್ಲಿ ಸಾಹಿತಿಗಳು ಬಿಂಬಿಸಿದ್ದಾರೆ.

( ಪಡಿಪದಾರ್ಥ ಸಾಹಿತ್ಯ ಚಿಂತನೆ ಎಂಬ ಕೃತಿಯ “ತೆಲುಗು ಸಾಹಿತ್ಯದಲ್ಲಿ ಬಸವಣ್ಣ” ಪುಟ ಸಂಖ್ಯೆ -39 ರಲ್ಲಿ ಚಿಂತಕರು ಲೇಖಿಸದ ವಿಷಯ ಸಂಗ್ರಹವನ್ನು ಯಥಾವತ್ತಾಗಿ ಸ್ವೀಕರಿಸಲಾಗಿದೆ.

ಮಲ್ಲಿಕಾರ್ಜುನ ಪಂಡಿತಾರಾಧ್ಯರು ದ್ರಾಕ್ಷಾರಾಮದಲ್ಲಿ 12 ನೇ ಶತಮಾನದಲ್ಲಿ ಜೀವಿಸಿದ್ದನು.ಇವರ ಅನುಯಾಯಿಗಳು ಆರಾಧ್ಯರು ಲಿಂಗಧಾರಿಗಳು.ಪಂಡಿತಾರಾಧ್ಯನ ಶಿಷ್ಯ ಪಾಲ್ಕುರಿಕೆ ಸೋಮನಾಥ.ಇವನು ಅತ್ಯಂತ ಚಾಣಾಕ್ಷ.ಪಾಶುಪತ ಶೈವರಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವರ ಪೂಜಾಧಿಕಾರವನ್ನು ವೀರಶೈವರಿಗೆ ವರ್ಗಾಯಿಸುವಲ್ಲಿ ಸೋಮನಾಥನ ತಂತ್ರಗಾರಿಕೆ ಫಲಿಸುತ್ತದೆ. ಸೋಮನಾಥ ಕವಿಪಂಡಿತನ ಪರಮ ಅನುಯಾಯಿ.ಕಾಕತೀಯ ಪ್ರತಾಪ ರುದ್ರದೇವನನ್ನು ತನ್ನ ಪ್ರತಿಭಾ ಕೌಶಲದಿಂದ ಓಲೈಸಿದ.ಬಸವಣ್ಣನ ಪರಮ ಆರಾಧಕನಾದ ಪಾಲ್ಕುರಿಕೆ ಸೋಮಣ್ಣ ವೀರಶೈವರ ಏಳಿಗೆಗೆ,ಪೂಜಾಧಿಕಾರಕ್ಕೆ ಸೂಕ್ಷ್ಮ ರಾಜಕಾರಣವನ್ನು ಮಾಡಿ,ಇಂದಲೂರಿ ಅನ್ನಯ್ಯ,ರುದ್ರಯ್ಯ ಎಂಬುವವರನ್ನೂ ಬಳಸಿಕೊಂಡ ಮೇಧಾವಿ.ವೀರಶೈವರಿಗೆ ಪೂಜಾಧಿಕಾರ ಬಂದ ತರುವಾಯ ಪಾಶುಪತ ಮಠಗಳಿಗೆ ಸೇರಿದ ಎಲ್ಲ ಶಾಸನಗಳನ್ನು,ಪಾಶುಪತರ ಮಠಗಳಗಳನ್ನು ನಾಶಮಾಡಿದರೆಂದು ತಿಳಿಯುತ್ತದೆ.ಶ್ರೀಶೈಲದಲ್ಲಿ ಈ ಪ್ರಕ್ಷುಬ್ಧ ಕಾಲದಲ್ಲಿ ವಾಸವಾಗಿದ್ದ ಈಶ್ವರ ಶಿವಾಚಾರ್ಯ ಮುಂತಾದವರು ಓಡಿಹೋಗಬೇಕಾಯಿತು.ಈ ಘಟನೆಯ ನಂತರ ತ್ರಿಪುರಾಂತಕೇಶ್ವರ ದೇವಾಲಯ ಮತ್ತು ಉಮಾಮಹೇಶ್ವರ ದೇವಾಲಯದ ಪೂಜಾಧಿಕಾರವು ವೀರಶೈವರಿಗೆ ಹಸ್ತಾಂತರವಾಯಿತು.ಇದು ಕ್ರಿ.1313 ರಲ್ಲಿ ನಡೆಯಿತು.ಮುಂದೆ ವೀರಶೈವ ಧರ್ಮವನ್ನು ಪ್ರಚಾರ ಮಾಡಲು ಪಾಲ್ಕುರಿಕೆ ಸೋಮನಾಥ ಕವಿಯು ತಾನು ಬರೆದ ಬಸವ ಪುರಾಣವನ್ನು ಆಂಧ್ರದ ಓರೆಂಗಲ್ಲು ಕೋಟೆಯ ಸ್ವಯಂಭೂ ದೇವಾಲಯದಲ್ಲಿ ಓದಿಸಿ,ಅರ್ಥೈಸಿದನೆಂದು ತಿಳಿಯುತ್ತದೆ.ಈ ಬಸವ ಪುರಾಣ ವಾಚನ,ವಾಖ್ಯಾನವನ್ನು ಸ್ವತಃ ಸೋಮನಾಥ ಕವಿ ಮಾಡಿದ.ಅದನ್ನು ರಾಜಾ ಪ್ರತಾಪ ರುದ್ರದೇವ ಕುಳಿತು ಆಲಿಸಿದನೆಂದು ಪಿಡುಪರ್ತಿ ಸೋಮನ ಎಂಬ ಕವಿಯು ಉಲ್ಲೇಖಿಸಿದ್ದಾನೆ.ಈ ಬಸವ ತತ್ವ ಆಲಿಸಿದ ಪ್ರತಾಪ ರುದ್ರದೇವ ವೀರಶೈವರಿಗೆ ಸಕಲ ಅಧಿಕಾರಗಳನ್ನು ನೀಡಿದನು.ಮುಂದೆ ಕನ್ನಡ ನಾಡಿನ ಕಲಚೂರಿ ಬಿಜ್ಜಳ ಕಾಕತೀಯ ಪ್ರತಾಪರುದ್ರನನ್ನು ತನ್ನ ಪಕ್ಷಕ್ಕೆ ಅಹ್ವಾನಿಸಿದನೆಂದು ತಿಳಿಯುತ್ತದೆ.ಬಸವಣ್ಣನನ್ನು ಆಂಧ್ರದ ಕವಿಗಳು ತಮ್ಮ ಕಾವ್ಯಗಳಲ್ಲಿ ಹಲವು ಬಗೆಯಲ್ಲಿ ಚಿತ್ರಿಸಿದ್ದಾರೆ.

       ಆಂಧ್ರದಲ್ಲಿ ಬಸವಣ್ಣನನ್ನು ಮೊದಲು ಸ್ತುತಿಸಿದವನು ಮಲ್ಲಿಕಾರ್ಜುನ ಪಂಡಿತಾರಾಧ್ಯ.ಈತ ಬಸವಣ್ಣನ ಸಮಕಾಲೀನವಾಗಿದ್ದ.ಆದರೆ ಬಸವಣ್ಣನನ್ನು ಪ್ರತ್ಯಕ್ಷವಾಗಿ ನೋಡಿರಲಿಲ್ಲ.ಕನ್ನಡ ನಾಡಿನಲ್ಲಿ ನಡೆದ ಬಸವಣ್ಣನ ಸಮಾಜೋಧಾರ್ಮಿಕ ಚಳುವಳಿಯನ್ನು,ಪವಾಡಗಳನ್ನು, ಭಕ್ತಿ ತನ್ಮಯತೆಯಿಂದ ಕೇಳಿದ್ದ.ಅಲ್ಲದೇ ಬಸವಣ್ಣನ ಅನುಯಾಯಿಯೂ ಆಗಿದ್ದ.ಪಂಡಿತಾರಾಧ್ಯ “ಶಿವತತ್ವಸಾರ” ಎಂಬ ಕಾವ್ಯ ಬರೆದಿದ್ದಾನೆ.ಇದರಲ್ಲಿ 489 ಪದ್ಯಗಳಿವೆ.ಮೂರು ಪದ್ಯಗಳಲ್ಲಿ ತನ್ನ ಪ್ರೀತಿಯ ಬಸವಣ್ಣನನ್ನು ಕುರಿತು ಪ್ರಸ್ತಾಪಿಸಿದ್ದಾನೆ.ಬಸವಣ್ಣನ ಭಕ್ತಿ ರಸ ಪಂಡಿತನ ಮೈಮನವೆಲ್ಲಾ ಸೂರೆಗೊಂಡಿತ್ತು.ಕಲ್ಯಾಣದಿಂದ ಬಸವಣ್ಣ ಕಳಿಸಿದ ವಿಭೂತಿಯನ್ನು ಒಮ್ಮೆ ಪಂಡಿತನು ಸ್ಪರ್ಶಿಸಿದನಂತೆ.ತಕ್ಷಣವೇ ಕನ್ನಡ ಭಾಷೆಯನ್ನು ಮಾತಾನಾಡಲಾರಂಬಿಸಿದ.ಇದೊಂದು ದೊಡ್ಡ ಪವಾಡವೇ.ಬಸವಣ್ಣನನ್ನು ನೋಡುವ ಹಂಬಲ ಹೆಚ್ಚಾಗಿ ಪಂಡಿತನು ದ್ರಾಕ್ಷಾರಾಮದಿಂದ ಶ್ರೀಶೈಲಕ್ಕೆ ಬಂದು,ಕಲ್ಯಾಣದ ಕಡೆಗೆ ಹೋಗುವವನಿದ್ದ.ಆದರೆ ದಾರಿಯಲ್ಲಿ ಬರುವಾಗ ಬಸವಣ್ಣ ಲಿಂಗೈಕ್ಯನಾದನೆಂಬ ಸುದ್ಧಿ ಕೇಳಿ ಅತ್ಯಂತ ದುಃಖಿತನಾದನಂತೆ )

ಬಸವಣ್ಣನ ಈ ಸಾರಾಂಶವು ಹಳಬರಿಗೆ ಶ್ರದ್ಧೆ ಇದ್ದಂತೆ.ಹೊಸಬರಿಗೆ ಅಂದಶ್ರದ್ಧೆ ಇದ್ದಂತೆ.ವಿಚಾರಯುಕ್ತರಾದ ಡಾ.ಜಾಜಿಯವರ ಬರಹವು ಧಾರ್ಮಿಕ ದೃಷ್ಟಿ ಮತ್ತು ಮಾನವತವಾದದ ಆದರ್ಶಗಳನ್ನೇ ತೋರಿದೆ.ತೆಲುಗು ಸಾಹಿತ್ಯದ ಸಂಪತ್ತನ್ನು ನಮಗೆ ಹೊಸ ಹೊಸ ವಿದ್ಯೆಯಿಂದ ಮಾರ್ಗದರ್ಶಿಯಾಗುತ್ತದೆ.

ಒಟ್ಟಿನಲ್ಲಿ “ಶಿವತತ್ವ ಚಿಂತಾಮಣಿ” ಎಂಬ ಕೃತಿಯಲ್ಲಿ ಬಸವಣ್ಣನವರ ಪ್ರಭಾವ ಬಿಂಬಿಸಿದ ಲಕ್ಕಣ್ಣ ದಂಡೇಶನ ವಿವರಾತ್ಮಕ ವಿಷಯಗಳನ್ನು ಸಂಶೋಧಕರು ಲೇಖಿಸಿದ್ದಾರೆ.

ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠದ ಹಸ್ತಪ್ರತಿ ಲಿಪಿಕಾರರು ಎಂಬ ಅಧ್ಯಾಯನದಲ್ಲಿ ಮಠದ ಉದಯ ಮತ್ತು ವಿರಕ್ತ ಮಠಗಳ ವ್ಯಾಪಕ ಬೆಳವಣಿಗೆ,ನಿರ್ಮಾಣವಾದುದರ ಸಾಂಸ್ಥಿಕ ರೂಪವನ್ನು ನೀಡಿದ್ದಾರೆ. ಪ್ರಸ್ತಾಪನ ಕೃತಿಯೊಳಗೆ ಕಾಣಿಸಿರುವ ಹಲವಾರು ಕೃತಿಕಾರರ ಹಸ್ತಪ್ರತಿಯ,ತಾಳೆಗರಿ ಪ್ರತಿಯ ಕಟ್ಟುಗಳನ್ನು, ಕಾಲಮಾನದೊಂದಿಗೆ ವಿವರಿಸಿದ್ದಾರೆ. ಶರಣಲೀಲಾಮೃತ.,ಚೋರಬಸವ ಚರಿತ್ರೆ.,ಬಸವ ಶಿಖಾಮಣಿ.,ಶೀಲವಂತಯ್ಯನ ತ್ರಿವಿಧಿ.,ಬಸವ ಪುರಾಣ.,ಅನುಭವ ಶಿಖಾಮಣಿ.,ಪ್ರಭುಲಿಂಗಲೀಲೆ.,ಫ್ರೌಢರಾಯನ ಕಾವ್ಯ- ಹೀಗೆ ಅಧಿಕ ಪ್ರಮಾಣದ ಪ್ರತಿಗಳು ಸಿಕ್ಕಿವೆಯಾದರೂ ಬಹಳಷ್ಟು ಕೃತಿಗಳು ಅಸಮಗ್ರವಾಗಿವೆ ಎಂದು ಡಾ.ಜಾಜಿ ದೇವೇಂದ್ರಪ್ಪನವರು ಅಭಿಪ್ರಾಯಪಟ್ಟಿದ್ದಾರೆ.ಪ್ರಸ್ತುತ 600 ಕೃತಿಗಳು ಲಭಿಸಿದರೂ ಹಸ್ತಪ್ರತಿ ಭಂಡಾರವನ್ನು ಸಮಗ್ರವಾಗಿ ಪರಿಶೀಲಿಸಿ ಉಲ್ಲೇಖಿಸಿ,68 ಲಿಪಿಕಾರರ ಚರಿತ್ರೆ ಮಾತ್ರ ಅಧ್ಯಯನಕ್ಕೆ ಸಿಕ್ಕಿದೆಂದು ಸಂಶೋಧಕರು ತೃಪ್ತಿಪಟ್ಟಿದ್ದಾರೆ.

ಪ್ರಸ್ತಾಪನ ಎಂಬ ಶಿರ್ಷಿಕೆ ಸೂಚಿಸುವಂತೆ ಈ ಗ್ರಂಥವು ಕನ್ನಡಕ್ಕೆ ಹೊಸಬಗೆಯ ಸಂಶೋಧನಾ ಕೃತಿಯಾಗಿದೆ.ಸಂಶೋಧನಕಾರರು,ತಮ್ಮ ಕ್ಷೇತ್ರ ಅಧ್ಯಯನದಲ್ಲಿ  ನಿಖರವಾದ ದಾಖಲೆಗಳನ್ನು,ಪಂಥಗಳ ಸಿದ್ಧಾಂತಗಳನ್ನು,ವಿಜಯನಗರ ಕಾಲದಲ್ಲಿನ ಹೋರಾಟದ ಸ್ವರೂಪವನ್ನು  ಮಂಡಿಸಿದ್ದಾರೆ.ಮಧ್ಯಕಾಲಿನ ಕನ್ನಡ ನಾಡಿನ ರಾಜಕೀಯ,ಧಾರ್ಮಿಕ,ಮತ್ತು ಸಾಮಾಜಿಕ ನೆಲೆಯಲ್ಲಿ ಬರಹಗಾರರಾದ ಲಕ್ಕಣ್ಣ ದಂಡೇಶನ ತತ್ವದರ್ಶನ ವಿವರಿಸುವ ಚಾರಿತ್ರಿಕ ಸಂಗತಿಗಳನ್ನು ಈ ಕೃತಿಯಲ್ಲಿ ತಿಳಿಯಬಹುದಾಗಿದೆ. ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠದ ಹಸ್ತಪ್ರತಿ ಲಿಪಿಕಾರರು,ನೇಕಾರ ಮಹಿಳೆ,ಸಂಸ್ಕೃತಿ,ವಿಚಾರ ಸಾಹಿತ್ಯ.,ಜಾಗತಿಕರಣ ಮತ್ತು ಸಾಂಸ್ಕೃತಿಕ ಪಲ್ಲಟಗಳು.,ಅಧ್ಯಯನ ಪ್ರಬಂಧ ಮತ್ತು ಸಿದ್ಧತಾ ವಿಧಾನ.,ಚರಿತ್ರೆ ಮತ್ತು ಸ್ಥಳನಾಮಗಳ ಹಿನ್ನೆಲೆಯಲ್ಲಿ ಭಾಷೆಯ ಅವಸ್ಥಾಂತರದ ಕುರುಹುಗಳು.,ಶ್ರೀಶೈಲ ಮತ್ತು ವಿಜಯನಗರ ಸಾಂಸ್ಕೃತಿಕ ಅನನ್ಯತೆ.,ಬಳ್ಳಾರಿಯ ಕನ್ನಡ.,ಮೀನಗೊಂದಿಯ ಬಡಿಗೆ ಹಬ್ಬ.,ವಿಜಯನಗರದ ಯೋಧ ಪರಂಪರೆಯ ಪ್ರತೀಕ..?., ‘ಸತಿಸೂಳೆ’-ನವ ಸಮಾಜದ ನಿರ್ಮಾಣದ ಆಶಯ.,ಜೀವನ ಶ್ರದ್ಧೆಯ ಕಥನ.,ಈಗೇನ್ ಮಾಡೀರಿ..?., ತೆಲುಗಿನ ಮೇಲಿನ ಕನ್ನಡ ಭಾಷೆಯ ಪ್ರಭಾವ.,ಸಿರುಗುಪ್ಪ ತಾಲೂಕಿನ ಶಾಸನೋಕ್ತ ಸ್ಥಳನಾಮಗಳು.,ಸ್ಥಳನಾಮಗಳು ಜಾನಪದೀಯ ಅಧ್ಯಯನದ ಹೊಸ ಸಾಧ್ಯತೆಗಳು.,ಹೀಗೆ 15 ಅಧ್ಯಾಯನಗಳು ಶೋಧನೆಯ ನೆಲೆಯಲ್ಲಿ ಚರಿತ್ರೆಯ ಸಾಹಿತ್ಯವಾಗಿದೆ.ಸಂಶೋಧನಕಾರರ ಪ್ರತಿಯೊಂದು ಕೃತಿಯೂ ಅಧ್ಯಯನಶೀಲರಿಗೆ ಅವಶ್ಯಕತೆ ಇದೆ ಎಂಬುದು ಮುಖ್ಯವಾಗುತ್ತದೆ. ಬೇರೆ ಬೇರೆ ಸ್ಥರಗಳಲ್ಲಿ ವಿಸ್ತೃತ ಹೊಂದಿದ  ವಿಷಯಗಳು ಗದ್ಯ ಶೈಲಿಯಲ್ಲಿ ಅನುಪಮವಾಗಿದೆ.ಒಟ್ಟಾರೆಯಾಗಿ ಕಲಿಕಾ ಮಾರ್ಗವಿದೆ.ಓದುವವರಿಗೆ ಅನೇಕ ವಿಷಯ ಸಂಗ್ರಹಿಸಲು ಅವಕಾಶವಿದೆ.ಇವರ  ಸಂಶೋಧನಾ ಸಾಹಿತ್ಯ,ಚಿಂತನೆ,ಸಂಸ್ಕೃತಿ,ವಿಮರ್ಶಾ ಸಾಧನೆ ಓದಿದರೆ, ನಮಗೆ ಅರಿವು ಮೂಡುತ್ತದೆ.ನಾಡಿನ ಹಿರಿಯ ಚಿಂತಕರು,ಸಂಶೋಧನಾಕಾರರು ಡಾ.ಜಾಜಿಯವರಿಗೆ ಚಿರಪರಿಚಿತರು.ಇವರು,ಕನ್ನಡ ಸಾಹಿತ್ಯ ಪರಂಪರೆಯ ಅರಿವು ನೀಡುವವರಲ್ಲಿ ಮತ್ತು ಹಳೆಯ ಕಾಲದ ಮೂಲಭೂತ ತತ್ವಗಳನ್ನು ಆಧುನಿಕ ಕಾಲದಲ್ಲಿ ಪರಿಜ್ಞಾನ ನೀಡುವವರಲ್ಲೊಬ್ಬರಾದ ಡಾ.ಜಾಜಿ ದೇವೇಂದ್ರಪ್ಪನವರು,ಹಳೆಯ,ನವೋದಯ ಮತ್ತು ನವ್ಯೇತರ  ಸಂಸ್ಕೃತಿ ಮತ್ತು ಸಂವೇದನೆಗಳನ್ನು  ನಿರಂತರವಾಗಿ ಅಧ್ಯಯನ ಮಾಡುತ್ತಾ,ಸಮರ್ಥವಾಗಿ ನಿದರ್ಶನಗಳೊಂದಿಗೆ ಸಾಹಿತ್ಯ ಮತ್ತು ಸಾಹಿತ್ಯ ಪ್ರಜ್ಞೆಯ ಮೌಲ್ಯಮಾಪನ  ಮಾಡುತ್ತಲೇ ವಿಮರ್ಶಕ ವೃತ್ತಿಯಲ್ಲಿ ಪ್ರಭಾವಿತರಾದವರು.ಇವರ ಎಲ್ಲಾ ಕೃತಿಗಳಲ್ಲೂ  ಕಲಿಕೆ ಇದ್ದೇ ಇರುತ್ತದೆ.ಮಹತ್ವದ ಒಳನೋಟಗಳನ್ನು ಉದಾಹರಿಸಿ ಮಾರ್ಗದರ್ಶನ ನೀಡುವಂತವುಗಳಾಗಿವೆ.

 ಈ ಕೃತಿಯೊಳಗೆ ಹಸ್ತ ಪ್ರತಿ ಲಿಪಿಕಾರರ ಬಹುದೊಡ್ಡ ಸಂಖ್ಯೆಯಿದೆ.‌ಸಂಶೋಧಕರು 68 ಲಿಪಿಕಾರರ  ಹೆಸರು ಸೂಚಿಸಿದ್ದಾರೆ.ಅವರ ಶಕ್ತಿಜ್ಞಾನ.,ಸಾಹಿತ್ಯದ ಸಾಧನೆ.,ಕೃತಿ ರಚಿಸಿದ ಸಂವತ್ಸರ.,ಯಾವ….ಯಾವ ಮಠದ  ಪಟ್ಟಾಧಿಕಾರಿಯಾಗಿದ್ದಾರೆಂಬುದು ಹಸ್ತ ಲಿಪಿಕಾರರ ಉಲ್ಲೇಖ ನೀಡಿದ್ದರಲ್ಲಿ ಕೆಲವು  ಲಿಪಿಕಾರರ ಹೆಸರು ಕಾಣಿಸಲಾಗುವುದು.( ಸಂಶೋಧಕರ ಪುಸ್ತಕದಲ್ಲಿರುವಂತೆ ಯಥಾವತ್ತಾಗಿ  ಬರೆಯಲಾಗಿದೆ.)

ಅಗಡಿ ಮಠದ ಚೆನ್ನಬಸವಯ್ಯ : ಇವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಯಾದವಾಡ ಗ್ರಾಮದ ಅಗಡಿ ಮಠದ ಅಧಿಪತಿ. ಪ್ರೌಡರಾಯನ ಕಾವ್ಯ ಬರೆದಿದ್ದಾರೆ.

ಈರಸಂಗಯ್ಯ : ಬೀಳಗಿ ಹಿರೇಮಠದ ಪಟ್ಟಾಧಿಕಾರಿ.ಇವರು ಕ್ರಿ.ಶ.1657 ರಲ್ಲಿ “ಷಡಕ್ಷರನ ರಾಜಶೇಖರ ವಿಳಾಸ” ಎಂಬ ಕೃತಿಯನ್ನು ಲಿಪಿಸಿದ್ದಾರೆ.

ಓದಿಸುವ ಬಸ್ಸಯ್ಯ: ಪಾಠ ಪ್ರವಚನ ಮಾಡುವ ಮನೆತನದಲ್ಲಿ ಜನಿಸಿದ ಬಸ್ಸಯ್ಯನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದ ನಿವಾಸಿ. “ಶರಣ ಲೀಲಾಮೃತ” ಕೃತಿಯನ್ನು 1871ರಲ್ಲಿ ಲಿಪಿಸಿದ್ದಾರೆ.

ಕಂಪ್ಲಿ ಹನುಮಂತಪ್ಪ: ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಹನುಮಂತಪ್ಪ (ಹನುಮಂತಯ್ಯ) ನು ಕ್ರಿ.ಶ.1871 ರಲ್ಲಿ  “ದೀಪದ ಕಲಿಯರ ಕಾವ್ಯ” ಎಂಬ ಕೃತಿಯನು ಲಿಪಿ ಮಾಡಿರುತ್ತಾರೆ.

ಕಂಬಿ ಮಹಾಲಿಂಗಯ್ಯ : ಮುಧೋಳ ತಾಲೂಕಿನ ಮಹಾಲಿಂಗಪುರದ ನಿವಾಸಿಯಾದ ಕಂಬಿ ಮಹಾಲಿಂಗಯ್ಯ (ಕ್ರಿ.ಶ.1812 ರಿಂದ 1890 ರವರೆಗೆ) “ಅರವತ್ತು ಮೂರು ಪುರಾಣ” ಗ್ರಂಥವನ್ನು ಲಿಪಿಗೊಳಿಸಿದ್ದಾರೆ.

ಕೆಂಚೀರಪ್ಪ : ಕೆಂಚೀರಪ್ಪ ತಂದೆ ಹೊಳೆ ಹೊನ್ನೂರು ರುದ್ರಪ್ಪ ,ಈ ಲಿಪಿಕಾರರ  ಊರು ಬಿಲ್ಲಗಣೆ.01:04:1907 ರಂದು “ಅದೃಶ್ಯ ಕವಿಯ ಫ್ರೌಢರಾಯನ ಕಾವ್ಯ” ವನ್ನು ಲಿಪಿಗೊಳಿಸಿದ್ದಾರೆ.

ಗುರುಬಸ್ಸಯ್ಯ : 21.10.1869 ರಲ್ಲಿ  “ಶಂಕರ ಕವಿಯ ಚೋರಬಸ ಚಾರಿತ್ರ”ಎಂಬ ಕಾವ್ಯವನ್ನು ಲಿಪಿ ಮಾಡಿದ. ಗುರುಬಸಯ್ಯನ ಊರು ಭೂಸನೂರು.ಹಿರೇಮ್ಯಾಗೇರಿ ಗ್ರಾಮದ ಗುರಿಕಾರ ಗವಿಯ್ಯ ನ ದೊಡ್ಡ ಬಸವ.

ಗುರುಸಿದ್ಧಪ್ಪ: ಕ್ರಿ.ಶ.1730 ಪ್ರಭವನಾಮ ಸಂವತ್ಸರ ಕಾರ್ತಿಕ ಮಾಸ 1808 ರಲ್ಲಿ “ಶಿವಾಧಿಕ್ಯ ಪುರಾಣ” ವನ್ನು ಲಿಪಿ ಮಾಡಿದ್ದಾರೆ.

ಗುರುಸಿದ್ಧ ದೇವರು: ಬೆಳಗಾವಿ ಜಿಲ್ಲೆಯ ಖಾನಪೂರು ತಾಲೂಕಿನ ಇಟ್ಟಗಿ ಗ್ರಾಮದ ನಿವಾಸಿಯಾದ ಗುರುಸಿದ್ಧ ದೇವರು “ಹರಿಹರನ ಗಿರಿಜಾ ಕಲ್ಯಾಣ” ಮತ್ತು “ಷಡಕ್ಷರ ದೇವನ ಶಬರ ಶಂಕರ ವಿಳಾಸ” ಎನ್ನುವ ಎರಡು ಕೃತಿಗಳನ್ನು ಮರುಪ್ರತಿಗಾಗಿ ಲಿಪಿಗೊಳಿಸಿದ್ದಾರೆ.

ಗುರುಸಂಗಯ್ಯ: (ಕ್ರಿ.ಶ.1748 ರಿಂದ 13:07:1826) “ಬ್ರಹ್ಮೋತ್ಮರ ಖಾಂಡ” (ಶೌನಕ ಸಂವಾದ ಕಾರಣ) ಎನ್ನುವ ಕೃತಿಯ  ಲಿಪಿಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

ಹೀಗೇ ಕನ್ನಡ ನಾಡಿನಲ್ಲಿ ಕಂಡು ಬರುವ ಮಠಗಳಲ್ಲಿ- ಚಿಕ್ಕಬಸ್ಸಯ್ಯ, ಚನ್ನಬಸ್ಸಯ್ಯ, ಚೆನ್ನಬಸವದೇವರು, ಚೆನ್ನಮಲ್ಲಪ್ಪ, ಚೆನ್ನಮಮಲ್ಲಿಕಾರ್ಜುನದೇವರು, ಚರಲಿಂಗಯ್ಯ, ಜವಳಿ ಸಂಗನಬಸವ, ಜವಳಿ ಸಣ್ಣ ಬಸ್ಸಪ್ಪ, ಬಸವಲಿಂಗದೇವರು, ಮಲ್ಲಪ್ಪದೇವರು, ರಾಚೋಟಯ್ಯ, ರುದ್ರಯ್ಯ, ವಾಲಿಬಸ್ಸಪ್ಪ, ಶಂಕರದೇವರು, ಸಿದ್ಧದೇವರು, ಮುದುಗಲ್ಲ ಕರಿಬಸ್ಸಪ್ಪನವರು, ಇನ್ನೂ  ಹಲವಾರು ಸ್ವಾಮಿಗಳು ಕೃತಿಗಳನ್ನು ಲಿಪಿಮಾಡಿಕೊಟ್ಟ ಉದಾಹರಣೆಯನ್ನು,ಮಠದ ಐತಿಹಾಸಿಕ ನೆಲೆಯನ್ನು, ಲಿಪಿಕಾರರ ಕೃತಿಗಳ, ಹಿಂದಿನ ಕಾಲದಿಂದಲೂ ಕನ್ನಡದ ಹಿರಿಮೆಯನ್ನು ಹೆಚ್ಚಿಸಿವೆ.ಕನ್ನಡ ಭಾಷೆಗೆ ಸ್ಥಾನಮಾನ ಸಿಗುವಲ್ಲಿ ನಾವಿಲ್ಲಿ ಲಿಪಿಕಾರರನ್ನು ಮರೆಯುವಂತಿಲ್ಲ. ಈ ದಿಶೆಯಲ್ಲಿ ಡಾ.ಜಾಜಿಯವರು ಪೂರ್ವ ಕನ್ನಡ ಸಾಹಿತಿಗಳ ಸಾಹಿತ್ಯಿಕ ಲೇಖನಗಳನ್ನು ಬಹು ಕಾಳಜಿಯಿಂದ ಉದಾಹರಣೆಯೊಂದಿಗೆ ಮಂಡಿಸಿದ್ದಾರೆ. ಈ ಪ್ರಸ್ತಾಪನ ಕೃತಿಯಲ್ಲಿ ಪ್ರತಿಯೊಂದು ಅಧ್ಯಯನವೂ ಆಳವಾದ ವಿಚಾರ ಪ್ರಜ್ಞೆ ಲಭಿಸುತ್ತದೆ.ಸಂಶೋಧನಾ ವಿದ್ಯಾರ್ಥಿಗಳೇ ಓದಬೇಕು ಎಂಬ ನಿಯಮವಿಲ್ಲ.,ಪ್ರಜ್ಞಾವಂತ ಬರಹಗಾರರೂ,ಹವ್ಯಾಸಿ ಲೇಖಕರಿಗೂ ಸತ್ವದ ಬೆಳಕು ಕಾಣುವ,ಪ್ರೇರಕ ಶಕ್ತಿ ಪಡೆಯುವ ಚಿಂತನಗಳಿವೆ.

 ಇದೇ ಸಂಶೋಧಕರ  ಕೆಲವು ಕೃತಿಗಳಲ್ಲಿ ಹನ್ನೊಂದು ಮತ್ತು ಹನ್ನೆರಡನೆಯ ಶತಮಾನದಲ್ಲಿನ ಭಾರತದ ಇತಿಹಾಸದ ಹೊಸ ಬದಲಾವಣೆಯನ್ನು ತಂದ ಕಾಲಘಟ್ಟದ ಕೆಲವು ಅಧ್ಯಯನಗಳು ಓದಲು ಲಭ್ಯವಿವೆ.ವೈದಿಕಶಾಹಿಯ ಅಮಾನವೀಯತೆಯ ವಿರುದ್ಧ ನಿಂತು ಮಾನವೀಯ ನೆಲೆಯ ಹೊಸ ಮಾರ್ಗವನ್ನು  ಕಂಡುಕೊಂಡಿರುವ ,ಮತ್ತು ಅವಶ್ಯಕವಾದ ಸಾಂಸ್ಕೃತಿಕ ಚರಿತ್ರೆಯ ಮೇಲೆ ಪ್ರಭಾವ ಬೀರುವ ಮಹತ್ವದ ಲೇಖನಗಳು ಕೆಲವು ಕೃತಿಯಲ್ಲಿ ಓದಲು ಸಿಗುತ್ತವೆ. ಸಂಶೋದಕರು ತಮ್ಮ ಅತ್ಯಂತ ಜಾಣತನ ಹಾಗೂ ಸಾಮರ್ಥ್ಯದಿಂದ  ಕನ್ನಡ ನಾಡಿನ ಮೇರೆಗಳನ್ನ    ಗುರುತಿಸುವುದು,ಗುಣವರ್ಣನೆ ಮಾಡುವ ಅಂಶಗಳನ್ನು  ಮರೆತಿಲ್ಲ. ಕರ್ನಾಟಕ-ಆಂಧ್ರ ಗಡಿ ಪ್ರದೇಶದಲ್ಲಿ   ಬಾಲ್ಯವನು ಕಳೆದ ಸಂಶೋಧಕರು,ತಮ್ಮ ಮಾತೃ ಭಾಷೆ ಕನ್ನಡವಾದರೂ,ಬಳ್ಳಾರಿ,ಸಿರಗುಪ್ಪ,ಯಳ್ಳಾರ್ತಿ  ಆಂಧ್ರದ ಗಡಿಭಾಗದ ಕರ್ನೂಲು ಅನಂತಪುರದ ತೆಲುಗು ಭಾಷೆಯ ನಂಟು ಹೊಂದಿದವರಾಗಿದ್ದಾರೆ.ಆಂಧ್ರ ಪ್ರದೇಶದ ಸ್ಥಳನಾಮಗಳ ಅಧ್ಯಯನ ಮತ್ತು  ತೆಲುಗಿನ ಹೆಸರಾಂತ ಸಾಹಿತಿಗಳಾದ ಕಂಚ ಐಲಯ್ಯನವರಂತ ಸಾಹಿತಿಗಳ ಕೃತಿಗಳನ್ನು ಅನುವಾದಿಸಿ,ಬಹುಭಾಷಾ ಪರಿಣಿತರಾದ ಡಾ.ಜಾಜಿಯವರು ಆಂಧ್ರಪ್ರದೇಶದ ಭಾಷಾಸಾಹಿತ್ಯವನ್ನರಗಿಸಿಕೊಂಡವರು.ಈಗಾಗಿ ಬಳ್ಳಾರಿ ಕನ್ನಡಕ್ಕೆ ತೆಲುಗಿನ ಪ್ರಭಾವವು ಅನನ್ಯ ಸಂಬಂಧವಿದ್ದ ಕಾರಣ ಇವರ ತೆಲುಗು ಸಾಹಿತ್ಯ ಅನುವಾದ ಕೃತಿಗಳು ಹೆಚ್ಚು ಮಹತ್ವ ಪಡೆದಿವೆ.

ಈ ಹಿನ್ನೆಲೆಯಿಂದಾಗಿ ಬಹು ಭಾಷಾ ಪಂಡಿತರಾದ ಡಾ.ಜಾಜಿ ದೇವೇಂದ್ರಪ್ಪನವರು ಕನ್ನಡ ಮತ್ತು ತೆಲುಗು ಸಾಹಿತ್ಯವನ್ನು ದ್ವಿಭಾಷಿಕ ಮಾತೃಭಾಷೆಯಂತೆ ಸ್ವೀಕರಿಸಿ,ಈ ಎರಡೂ ಭಾಷೆಯಲ್ಲಿ ತರ್ಜುಮೆ ಮಾಡುತ್ತಾ, ಕನ್ನಡದ ಪ್ರಭಾವವನ್ನು ತೆಲುಗು ಭಾಷೆಗೆ, ತೆಲುಗು ಭಾಷೆಯ ಪ್ರಭಾವವನ್ನು ಕನ್ನಡಕ್ಕೆ ಅನುವಾದಿಸಿ,ಕನ್ನಡದ ವೈಶಿಷ್ಟ್ಯತೆಯನ್ನು ವಿಶಾಲವಾಗಿಸಿದ್ದಾರೆ.ತೆಲುಗು ಮತ್ತು ಕನ್ನಡದ ಆಚಾರ,ವಿಚಾರ,ಆಹಾರ,ಜನ ಜೀವನ,ಭಾಷೆಯ ಸಂಬಂಧಗಳನ್ನು ಒಂದುಗೂಡಿಸುವ,ಅರ್ಥವಿವರಣೆ ನೀಡಿದ ಕೀರ್ತಿ ಡಾ.ಜಾಜಿಯವರಿಗೆ ಸಲ್ಲುತ್ತದೆ.ಯಾವತ್ತೂ ಡಾ.ಜಾಜಿಯವರು ವಾಸ್ತವ ಮಾತ್ರ ಚಿತ್ರಿಸುವುದಿಲ್ಲ.,ಕ್ಷೇತ್ರಾಧ್ಯಯನದಲ್ಲಿ ಶ್ರಮಿಸಿದರೂ ಸಹ ಇದ್ದಕ್ಕಿದ್ದಂತೆ ವಿಷಯ ವಸ್ತುಗಳನ್ನು ಸ್ವೀಕರಿಸುವುದಾಗಲಿ, ಒಮ್ಮಿಂದೊಮ್ಮೆಲೆ ನಂಬುವದಾಗಲಿ,ಸಾರಾಸಗಟಾಗಿ ತಿರಸ್ಕರಿಸುವುದಾಗಲಿ ಮಾಡಲಾರರು.ಪ್ರತ್ಯಕ್ಷ ಕಂಡು,ಅಧ್ಯಯನದಲ್ಲಿ ಕಂಡುಕೊಳ್ಳದೆ ಸಂಶೋಧನೆಗಿಳಿಯುವುದು ಅವರ ಮನೋಧರ್ಮವಾಗಿಲ್ಲ. ಚಿಂತನೆಶೀಲತೆಯಿಂದ,ಪ್ರಮಾಣಿಕ ಶೋಧನೆ ಮಾಡುವ ಅವರ ವೈಶಿಷ್ಟ್ಯತೆ ಮಾತ್ರ ಅವರ ಗ್ರಹಿಕೆಯಲ್ಲಿ ಎನ್ನಬಹುದು.

ಇವರ ಅತ್ಯಂತ ಯಶಸ್ವೀ ಅನುವಾದ ಕೃತಿ ದೇವರ ರಾಜಕೀಯ ತತ್ವ ತೆಲುಗಿನ ಮೇರು ಸಾಹಿತಿ ಕಂಚ ಐಲಯ್ಯನವರು ಮೂಲ ಲೇಖಕರು.ಕನ್ನಡಕ್ಕೆ ಅನುವಾದಿಸಿದ ದೇವರ ರಾಜಕೀಯ ತತ್ವ ಪುಸ್ತಕವು ವಿಚಾರಯುಕ್ತವಾಗಿದೆ. ಧರ್ಮ,ಪ್ರಾಚೀನ ಕಾಲದ ತತ್ವ,ಬುದ್ಧನ ಪೂರ್ವ ಸಮಾಜ ಮತ್ತು ಜೀವನ ಹಾಗೂ ತಾತ್ವಿಕ ಪಥ.,ರಾಜಕೀಯ ವಿಧಿ ವಿಧಾನಗಳ ಹಕ್ಕುಗಳು,ಪ್ರಜಾತಂತ್ರಪಾಲನೆ.,ಇಂತ ಎಲ್ಲಾ ಅಧ್ಯಯನಗಳು ಬೆಳಕಿನ ಪಥಗಳಾಗಿವೆ., ಪ್ರತೀಕಗಳಾಗಿವೆ.ಪ್ರತಿಯೊಂದು ಅಧ್ಯಯನವೂ ಆಳವಾದ ತಿಳುವಳಿಕೆಯಿಂದ ವ್ಯಾಖ್ಯಾನಿಸಿದ್ದಾರೆ.

ಭಾರತೀಯ ಸಾಹಿತ್ಯ ಪರಂಪರೆ ಮತ್ತು ಭಾಷಾಶಾಸ್ತ್ರ ಕ್ಷೇತ್ರಗಳಲ್ಲಿ ಸುಮಾರು 66 ಗ್ರಂಥಗಳನ್ನು ಹಳೆಗನ್ನಡ,ಐತಿಹಾಸಿಕ ದಾಖಲೆಗಳು ಸೇರಿ ಹಲವಾರು ಆಕರಗಳಿಂದ ಡಾ.ಜಾಜಿಯವರು ಪ್ರಭಾವಿತರಾಗಿದ್ದಾರೆ.ತಮ್ಮ ಕ್ಷೇತ್ರ ಅಧ್ಯಯನದಲ್ಲಿ ಕಾಲ,ದೇಶ,ಗಹನವಾದ ತಾತ್ವಿಕತೆ,ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯನ್ನು,ವಿಮರ್ಶಾವಿನ್ಯಾಸವನ್ನು,ಚಾರಿತ್ರ್ಯಿಕ ಸನ್ನಿವೇಶಗಳನ್ನು,ತಮ್ಮ ಕೃತಿಗಳ ಮುಖೇನ ಪ್ರಸ್ತುತಪಡಿಸಿದ್ದಾರೆ.ಪ್ರಯೋಗಶೀಲತೆ ಮತ್ತು ಪ್ರಸ್ತುತತೆಯಲ್ಲಿ ಪಕ್ವತೆಯ ಅಂಶಗಳಿವೆ.ಓದುಗ ವಿದ್ಯಾರ್ಥಿಗಳು  ಲಕ್ಷ್ಯದಲ್ಲಿಟ್ಟುಕೊಂಡರೆ ಮುಂದೊಂದು ದಿನ ಪರಿಣಿತರಾಗುತ್ತಾರೆ ಎಂಬುದಕ್ಕೆ ಎರಡು ಮಾತಿಲ್ಲ.

(ಕೊನೆಯ ಉದಾಹರಣೆ ಪಡಿಪದಾರ್ಥ ಪುಸ್ತಕದೊಳಗಿನ ಸಂಭಾಷಣೆ ಮತ್ತು ವಿವರಣೆಯನ್ನು  ಬಳಸಿಕೊಳ್ಳಲಾಗಿದೆ)

“ಏ ದೇವೇಂದ್ರಪ್ಪ ಸಂಶೋಧನಾ ಅದ ಅಲ್ಲ ಅದು ಕಾಲ ಕೆಳಗಿನ ಬೆಂಕಿ.ಆದ್ರ ಅದನ್ನ ಲಕ್ಷಿಸಬಾರದು ಕಣ್ಣ ಮುಂದೆ ಬೆಳಕು ಇರ್ತದ ಅದನ್ನ ಲಕ್ಷ್ಯ ಕೊಟ್ಟು ನೋಡಬೇಕ ಇಲ್ಲಾಂದ್ರ ಕತ್ತಲು ಬರೀ ಕತ್ತಲು”

“ಜಾಜಿ ಏನ ಬಾ ಕುತುಗೋ ಏನ್ ನಡಿಸಿಯೋ ವಿದ್ವಾಂಸ.ನೀ ಹೋಗಿ ಭಾಷಾಭಿವೃದ್ಧಿ ವಿಭಾಗದ ಸೇರಿದಿ.ಏನಾರ ಹೊಸದು ಮಾಡ್ಲಕ್ಕದೇನು ವಿಚಾರ ಮಾಡು.ನಿಮ್ ಮೇಷ್ಟ್ರುಗಳ್ಯಾರು ಸೂಕ್ಷ್ಮವಾಗಿ ಓದಿಲ್ಲನ್ನಸ್ತದ.ಯುವಕರಾದ ಅವರು ನೀ ಏನಿದ್ರು ಆ ಕೆ.ವಿ.ನಾರಾಯಣ ಹತ್ರ ಚರ್ಚೆ ಮಾಡು.ನಾರಾಯಣ ಭಾಷಾದೊಳಗೆ ಹೊಸತು ನೋಡುತಾನು.ಯುವ ಅಧ್ಯಾಪಕರಿಗೆ ಕೆಲಸ ಹಚ್ಚತೀನಿ ಇರು ಇರು”

“ದೇವೇಂದ್ರಪ್ಪ ನೀ ಲಿಂಗಾಯತ ಇದ್ದೀಯೇನು.ಅದಕ್ಕಂತ ನೀ ನನ್ನ ಹತ್ರ ಜಾಸ್ತಿ ಮನೀಗೆ ಬರ್ತಿ…? ಇಲ್ಲ ಇಲ್ಲ ಅದಿರುಬಾರ್ದು ಬಸವಣ್ಣ ಎಂದೋ ಅದನ್ನ ಓಡಿಸಲಿಕ್ಕೆ ಪ್ರಯತ್ನಿಸಿದ್ದು.ಲಿಂಗಾಯತ ಧರ್ಮದಲ್ಲ ಇದನ್ನು ನಮ್ಮ ಮಧ್ಯಕಾಲೀನ ಕವಿಗಳೇ ದಾರಿ ತಪ್ಪಿಸ್ತಾರ ಗೊತ್ತೇನ ನಿನಗ.ಇವೆಲ್ಲ ತಿಳಕೋಬೇಕು.ಬಸವ ಪುರಾಣ ಬರೆಯೋ ಮೂಲಕ ಪಾಲ್ಕುರಿಕೆ ಸೋಮನಾಥ ಬಸವಣ್ಣನ ಚರಿತ್ರೆ ತಿಳಿಯೋವಾಂಗ ಮಾಡಿದ.ಆದರೆ ವೈದಿಕ ಪುರಾಣದ ಹಾದಿ ಹಿಡಿದ.ಇದರಿಂದ ಶ್ರೇಷ್ಠ ಮಾನವ ದೇವರಂತಾದ ಬಸವಣ್ಣ ಇದೇ ಕವಲುದಾರಿ.ಶೈವ ಮತವನ್ನು ಆಂಧ್ರದಲ್ಲಿಯೂ ಅಪ್ಪಿಕೊಂಡೋರು ಇದ್ದರು.ಆರಾಧ್ಯ ಮಲ್ಲಿಕಾರ್ಜುನ ಪಂಡಿತ ಮತ್ತು ಅವನ ಶಿಷ್ಯರು ಇದನ್ನು ಬೆಳೆಸಿದರು.ಇಂತಹ ಕೆಲಸ ಆಂಧ್ರ  ತೆಲುಗಿನಲ್ಲಿ ಏನದ ಅನ್ನೋದು ಕನ್ನಡಕ್ಕ ಬರಬೇಕಾಗ್ಯಾದ.ಮಾಡ್ತಿಯೇನು ಕೆಲ್ಸ ಹಾ.ಹಾ. ಇದಕ್ಕೆಲ್ಲಾ ಶ್ರಮಬೇಕೋ ಜಾಜಿ.ಶಕ್ತಿ ಅಂದ್ರ ನಿಷ್ಠೆ ಇದ್ರೆ ಮಾಡೋದು.”

“ಜಾಜಿ ಲಕ್ಕಣ್ಣ ದಂಡೇಶನ ಕಾವ್ಯ ಓದಿಯೇನು ಶಿವತತ್ವ ಚಿಂತಾಮಣಿ ಬರದನಲ್ಲ ಅವ ಗುಡ್ಡವ್ವೆ ಪ್ರಸಂಗದಲ್ಲಿ ಜೈನ-ಶೈವ ಸಂಘರ್ಷವನು ಹೇಳ್ಯಾನ ಓದಬೇಕು ನೀನು ಇಂಥವೆಲ್ಲ,ಈಗೇನು ಬನಶಂಕರಿದೇವಿ,ಬಳ್ಳಾರಿ ದುರ್ಗಮ್ಮ ಅದಾವ ಇವೆಲ್ಲ ಜೈನ ಲಕ್ಷ್ಮೀಯರು,ನಿಮ್ ಹುಲಿಗಿ ದೇವತೆ ಕೂಡ.ಇದು ಚರಿತ್ರೆ,ಕಾಲಗರ್ಭದಲ್ಲಿ ನಿಜವಾದದ್ದು ಅಡಗಿ ಕೂತದ.ಬೂದಿ ಮುಚ್ಚಿದ ಕೆಂಡ ಅದು.ಉರಿದರೆ ಬೆಂಕಿ ಕಾಣಸ್ತದೋ ಹಾ.ಹಾ. ಯಾರು ಯಾರೂ ಹೇಳೋರು,ಜನ ಕೇಳ್ತಾರ ಇಲ್ಲೋ ಆದ್ರ ಹೇಳಬೇಕು.ನಿಮ್ಮ ತಲೆಮಾರೇನದು ಬೆಂದು ಅದು ಶಕ್ತಿ ಇಲ್ಲ.ನೀವೆಲ್ಲ ಸಂಶೋಧನೆಯೊಳಗೆ ಸತ್ಯ ಹೇಳೋರಲ್ಲೋ ಸಂಶೋಧನೆಯೊಳಗ ನೌಕರಿ ಹುಡುಕೋರು,ಯಾಕ ನಗ್ತೀ ಖರೆ ಅದಾ ಇದು ಖರೇ ಅದಾ.ಏಕಾಂತ ರಾಮಯ್ಯ ಅದಾನಲ್ಲ ಅವನ್ದು ಇದೇ ಉಗ್ರಭಕ್ತಿ,ಅವ ಜೈನರಿಗೆ ಬಹಳ ತ್ರಾಸು ಮಾಡ್ತಾನವ.ಬಸವಣ್ಣನ ನಂತರ ವೀರಶೈವ ಧರ್ಮ ಚೌಕಟ್ಟು ಸೇರೋಹಂಗ ಮಠೀಯ ವ್ಯವಸ್ಥೆ ಮಾಡಿತು.ನಮ್ಮ ಸ್ವಾಮಗೋಳು,ಮಠಾದೀಶರು ಓದಿಲ್ಲ.ಸುಮ್ನ ಪೀಠದ ಮ್ಯಾಲ ಕೂತಾವ.ಇದಕ್ಕೆಲ್ಲಾ ವಿವೇಕಬೇಕು.ನೀರು ಹರಿಸಬೇಕು ನಿಲ್ಲಬಾರದು”

(ತೀರಾ ಈಚೆಗೆ 2015 ರ ಮಾರ್ಚ್ ತಿಂಗಳು ಬೆಳಿಗ್ಗೆ 6:30 ಕ್ಕೆ ಡಾ.ಜಾಜಿಯವರಿಗೆ ಫೋನ್ ಬರುತ್ತದೆ)

“ಏ ಜಾಜಿ ಮಲಗಿಯೇನು,ನಿನಗ ಮತ್ತೊಂದು ಕೆಲಸ ಅದ ವೆಂಗಿಯ ಚಾಲುಕ್ಯರು ತೆಲುಗಿನಲ್ಲಿದೆಯಂತೆ ಹುಡುಕಿ ಅನುವಾದಿಸು”

2015 ಜುಲೈ ಮೂವತ್ತರಂದು ಆಶ್ಚರ್ಯಕರವೆಂಬಂತೆ ಅನಂತಪುರದ ವಿದ್ವಾಂಸ ಡಾ.ಆರ್ ಶೇಷಶಾಸ್ತ್ರಿ ಅವರು

“ಜಾಜಿ…….ವೆಂಗಿಯ ಚಾಲುಕ್ಯರು ಬುಕ್ ಸಿಕ್ಕಿದೆ ಅನುವಾದಿಸಪ್ಪ ನಾನು ಕಳಿಸ್ತೀನಿ”ಎಂದರು.

ಡಾ.ಜಾಜಿಯವರು ಅತ್ಯಂತ ಪರಮಾನಂದದಿಂದ ತಮ್ಮ ಮಾನಸ ಗುರುಗಳಿಗೆ ತಿಳಿಸಬೇಕು ಎನ್ನುವಾಗಲೇ ಆ ವಿಧಿಯ ಅಟ್ಟಹಾಸ ಅಂದೇ ಹಂತಕರು ಸತ್ಯಸಂಶೋಧಕ ದೇವರ ಜೀವ ತೆಗೆದಿದ್ದರು. ಸತ್ಯಶೀಲ ಶೋಧಕರು,ಮಹಾನ್ ವಿದ್ವಾಂಸಕರು,ಕನ್ನಡದ ಪಥಿಕರಾದ ಡಾ.ಎಂ.ಎಂ ಕಲಬುರ್ಗಿಯವರನು ಈ ಘಾತುಕ ಸಮಾಜ ಬಲಿ ತೆಗೆದುಕೊಂಡಿತು.

ಸುಮಾರು ಹದಿನೈದು ವರುಷಗಳತನಕ ತಮ್ಮ ಮಾನಸ ಗುರುಗಳ ನಿರ್ವ್ಯಾಜ್ಯ ಪ್ರೀತಿ,ಕಾಳಜಿ,ಜೀವನ ಪ್ರೀತಿ ಪಡೆದ ಡಾ.ಜಾಜಿಯವರಿಗೆ ಅದೆಷ್ಟು ನೋವಾಗಿರಬಹುದು. ಪಡಿಪದಾರ್ಥ ಪುಸ್ತಕದೊಳಗೆ ಡಾ.ಎಂ.ಎಂ.ಕಲಬುರ್ಗಿಯವರ  ಕುರಿತು ಬರೆದ ಲೇಖನ ಓದಿ ಕಣ್ಣಂಚು ಒದ್ದೆಯಾಯಿತು.

 ಹೀಗೆ ಕನ್ನಡ ನಾಡು ನುಡಿಯ ಭಾಷಾ ವಿದ್ವಾಂಸರಾಗಿ,ಅಧ್ಯಯನ ವಿಭಾಗದ ಸಂಯೋಜಕರಾಗಿ,ಹಸ್ತಪ್ರತಿ,ಹಳಗನ್ನಡ ಕ್ಷೇತ್ರದಲ್ಲಿ ದುಡಿಯುತ್ತಿರುವ ಡಾ.ಜಾಜಿಯವರು ಸಂಶೋಧನೆ ಮತ್ತು ಅನುವಾದದಲ್ಲಿ ಹೆಚ್ಚು ಹೊತ್ತುಕೊಟ್ಟು ಹೆಸರು ಮಾಡಿದ ವಿದ್ವಾಂಸರಲ್ಲಿ ಒಬ್ಬರು. ಇವರ ಪ್ರಬಂಧ  ವಸ್ತು ವಿಷಯಗಳು ಕ್ರಿಯಾಶೀಲ ಮತ್ತು ತಾರ್ಕಿಕ ಚಿಂತನೆಗಳಾಗಿವೆ.ಇಂಥಹ  ಮೇಧಾವಿಗಳ  ಜ್ಞಾನ ದರ್ಪಣದ ಕೃತಿಗಳಿಗೆ ಅವಲೋಕನ ನುಡಿ ಬರೆಯಲು ನಮ್ಮಂತ ಹವ್ಯಾಸಿ ಬರಗಾರರಿಂದ ಸಾಧ್ಯವಾಗದು.

ಹೆಚ್ಚೆಂದರೆ ಮೆಲುಕು ನುಡಿಯನ್ನಾಡಬಹುದು.

********

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

2 thoughts on “ಡಾ.ಜಾಜಿ ದೇವೇಂದ್ರಪ್ಪನವರ ಸಾಹಿತ್ಯದ ಬೆಳಕಿನ ಬೆಳೆಯನ್ನರಸಿ

  1. ಮೌಲಿಕ ಕೃತಿ ಪರಿಚಯ ಮತ್ತು ಅಷ್ಟೇ ಸುದೀರ್ಘವಾದ ಹಲವು ಒಳನೋಟಗಳನ್ನು ಕೊಟ್ಟ ಲೇಖನ… ಕೃತಿಕಾರರಿಗೂ ಪರಿಚಯ ಮಾಡಿಕೊಟ್ಟ ಉತ್ತಮ ಬರಹಗಾರರಾದ ಶರಣಪ್ಪ ತಳ್ಳಿ ಸರ್….ಅಭಿನಂದನೆಗಳು

Leave a Reply

Back To Top