ಮೌನದಲ್ಲಿಯ ಮಾತು ಹೃದಯ ತಲುಪಿತು

ಲೇಖನ

ಮೌನದಲ್ಲಿಯ ಮಾತು ಹೃದಯ ತಲುಪಿತು

ಮಾಜಾನ್ ಮಸ್ಕಿ

maajaan

ಮೌನದಲ್ಲಿಯ ಮಾತು ಹೃದಯ ತಲುಪಿತು

ಸರಿಯೋ ತಪ್ಪೋ ಗೊತ್ತಿಲ್ಲ, ಆದರೆ ಮಾತು, ಭಾಷೆ, ಜಾತಿ, ದೇಶ ಇವುಗಳೆಲ್ಲವನ್ನು ಮೀರಿದ್ದು ಮನಸ್ಸಿನ ಭಾವನೆ ಭಾವನೆ. ಹಿಡಿ ಗಾತ್ರದ ಹೃದಯ ದೈತ್ಯ ದೇಹವನ್ನು ಆಳುವಂತೆ ಇದರ ಪೂರಕವಾಗಿ ಭಾವನೆಗಳು. ಮನುಷ್ಯನನ್ನು ಅಥವಾ ಪ್ರಪಂಚವನ್ನೇ ಆಳುತ್ತೆ ಮತ್ತು ಭಾವನೆಗಳ ಆಳ್ವಿಕೆಯಲ್ಲಿಯೇ ಎಲ್ಲರೂ ಹೃದಯದ ಮಿಡಿತದ ತುಳಿತಕ್ಕೆ ಒಳಗಾಗಿದ್ದೇವೆ. ಪ್ರತಿಯೊಂದು ಸಂಬಂಧದಲ್ಲಿಯೂ ಅಂದರೆ ಅಜ್ಜ -ಅಜ್ಜಿ,ತಂದೆ -ತಾಯಿ, ಸಹೋದರ -ಸಹೋದರಿ, ಅತ್ತೆ -ಮಾವ, ಭಾವ -ಮೈದುನ, ಅಳಿಯ -ಸೊಸೆ, ಪ್ರೇಮಿ -ಸ್ನೇಹಿತ ಇನ್ನು ಹಲವಾರು ಸಂಬಂಧಗಳಲ್ಲಿಯೂ ಈ ತುಡಿತದಲ್ಲಿ ಸಿಲುಕಿ, ಬಳಲಿದ್ದೇವೆ ಬಳಲುತ್ತಿದ್ದೇವೆ ಬಳಲೇಬೇಕು. ಮಿಂಚಿನ ಓಟಕ್ಕಿಂತಲೂ ಮನಸ್ಸಿನ ಭಾವನೆಯ ವೇಗ ಅತೀ ತೀವ್ರ ವೇಗ ಆಗಿರುವುದು. ಕ್ಷಣ ಮಾತ್ರದಲ್ಲಿಯೇ ನಾವು ನೆನಪಿಸಿಕೊಂಡ ವ್ಯಕ್ತಿಯನ್ನು ಭಾವನೆಗಳಿಂದ ಹೃದಯದಿಂದ ಹೃದಯಕ್ಕೆ ತಲುಪುತ್ತೇವೆ. ಇಂತಹ ಸಂಧರ್ಭದಲ್ಲಿಯೋ ಏನೋ ಬಿಕ್ಕಳಿಕೆ ಬರುತ್ತೆ ಅಥವಾ ಇದಕ್ಕಿದಂತೆ ವ್ಯಕ್ತಿ ನೆನಪಾಗುತ್ತೆ ಇದು ಸಾಮಾನ್ಯ ವ್ಯಕ್ತಿಯ ಅನುಭವ.

ಭಾರತ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಋಷಿ ಮುನಿಗಳು, ಸಾಧು -ಸಂತರು ದಿವ್ಯ ದೃಷ್ಟಿಯಿಂದ ಕುಳಿತಲ್ಲಿಯೇ ಕುಳಿತು ಎಲ್ಲವನ್ನು ನೀಡುತ್ತಿದ್ದರಂತೆ, ಈಗಲೂ ಹಿಮಾಲಯ ಪರ್ವತದಲ್ಲಿ ನೂರಾರು ವರ್ಷಗಳವರೆಗೆ ಬರಿಯ ಗಾಳಿ ಸೇವಿಸಿ ತಪಸ್ಸು ಮಾಡುತ್ತ ಜೀವಿಸುತ್ತಿರುವರು. ಅವರಲ್ಲಿಯ ದಿವ್ಯ ದೃಷ್ಟಿಯಿಂದ  ನಡೆದ ನಡೆಯುತ್ತಿರುವ ನಡೆಯಬಹುದಾದನ್ನು ತಿಳುದುಕೊಳ್ಳುವರಂತೆ. ರಾಜಯೋಗ, ಹಠಯೋಗದ ಸತತ ಅಭ್ಯಾಸದಿಂದ ತಮ್ಮ ದೇಹದಿಂದ ಹೊರ ಬಂದು ಬೇರೆ ದೇಶದಲ್ಲಿದ್ದರೂ ತಮಗೆ ಬೇಕಾದವರನ್ನು ಭೇಟಿ ಆಗಿರುವ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ, ಇದನ್ನು ನಂಬಬಹುದು ನಂಬದೇ ಇರಬಹುದು ಇದು ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು, ವಿದೇಶಿಯವರು ಸಹ ಪ್ರಭಾವಿತಾಕ್ಕೋಳಗಾಗಿದ್ದಾರೆ. ಅಂದರೆ ನಾವುಗಳು ನಮ್ಮ ನಮ್ಮವುಗಳ ರೀತಿಯಲ್ಲಿ ಆತ್ಮ ಶಕ್ತಿಯ ಬಲದ ಮೇಲೆ ಬದುಕುತ್ತಿದ್ದೇವೆ.

ಯಾವುದೇ ಕೆಲಸವಾಗಲಿ ಸಾಧನೆ ಆಗಲಿ ಮಾಡಲು ನಮ್ಮ ದೃಢ ನಿರ್ಧಾರ, ಏಕಾಗ್ರತೆ ಮುಖ್ಯ. ಒಬ್ಬ ವಿದ್ಯಾರ್ಥಿ ಓದಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಅಥವಾ ಉತ್ತೀರ್ಣನಾಗಲು ಓದಿನ ಕಡೆಗೆ ಮಾತ್ರ ಬೇಕು. ಅತ್ತಿತ್ತ ಓಡುವ ಮನಸ್ಸನ್ನು ಓದಿನ ಕಡೆಗೆ ನಿಲ್ಲಿಸುವುದು ಅಂದರೆ ಏಕಾಗ್ರತೆ ಅವರವರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಲ್ಲಿ ಮಾಡುವವರಲ್ಲಿ ದೃಢವಾದ ನಿರ್ಧಾರ, ಗುರಿ ಮುಟ್ಟುವ ಛಲ ಏಕಾಗ್ರತೆ… ಇತ್ತು ಇದೆ ಇರಲೇಬೇಕು. ತಿಳಿಯಾದ ನೀರಿಗೆ ಕಲ್ಲೇಸೆದಾಗ ಸ್ವಲ್ಪ ಹೊತ್ತು ಕದಡುತ್ತದೆ ಅದರ ಪಾಡಿಗೆ ಅದಕ್ಕೆ ಬಿಟ್ಟಾಗ ಸ್ವಲ್ಪ ಸಮಯದ ನಂತರ ತನ್ನ ಮೊದಲಿನ ಸ್ಥಿತಿಗೆ ಪ್ರಶಾಂತತೆಗೆ ಬರುತ್ತದೆ, ಮನಸ್ಸು ಕೂಡ ಹಾಗೇನೇ. ಜೀವನದಲ್ಲಿ ಸಮಸ್ಯೆ, ಸಂತೋಷ, ನೋವು ಬರುತ್ತವೆ ಹೋಗುತ್ತವೆ. ಸಮಸ್ಯೆಗಳು ಬಂದಾಗ ದುಗುಡು, ಆತಂಕ, ಅದೈರ್ಯಕ್ಕೆ ಒಳಗಾಗಿ ಇಲ್ಲದ ಅನಾಹುತಕ್ಕೆ ಒಳಗಾಗಿ ಜೀವವು ಕಳೆದುಕೊಂಡ ಘಟನೆಗಳು ನಡೆದಿವೆ ನಡೆಯುತ್ತಿವೆ ಇನ್ನು ಇನ್ನು ಸಾವಿನಿಂದ ಹೊರ ಬಂದು ಅದ್ಭುತ ಜೀವನ ನಡೆಸಿದ್ದಾರೆ, ನಡೆಸುತ್ತಿದ್ದಾರೆ.

ಮಹಾನ್ ಚೇತನ ದೈವಿಗಳು, ಶರಣರು ವಿವೇಕರ ನಡೆದು ನುಡಿದ ವಾಣಿಗಳಿವೆ, ಅಂತಹವರ ಜೀವನ ಚರಿತ್ರೆಗಳು ನಮ್ಮ ಕಣ್ಣ ಮುಂದೆ ಇವೆ. ಅವರು ಜೀವನದಲ್ಲಿ ಸಾಕಷ್ಟು ಸಂಕಟ, ಸಮಸ್ಯೆಗಳನ್ನು ಅನುಭವಿಸುತ್ತ, ಎದುರಿಸುತ್ತ ತಾವು ಹಿಡಿದ ದಾರಿ ಬಿಡದೆ ನಂಬಿಕೆ, ಧೈರ್ಯ, ಆತ್ಮಸ್ಥೈರ್ಯದಿಂದ ತಾವು ಇಟ್ಟ ಹೆಜ್ಜೆಗಳನ್ನು ಗಟ್ಟಿಗೊಳಿಸುತ್ತ ನಡೆದಿದ್ದಾರೆ. ಎಷ್ಟೋ ಅಂಗವಿಕಲರು ಈಜುಗಾರರು, ಓಟಗಾರರಾಗಿ ವಿಶ್ವದಲ್ಲಿಯೇ ದಾಖಲೆ ಮಾಡಿದ್ದಾರೆ. ಅಂತಹವರಲ್ಲಿ ನನಗೀಗ ನೆನಪಾಗುತ್ತಿರುವುದು ಡಾ. ಡೇವಿಡ್ ಹರ್ಟ್ಮಾವ್ ಇವರು ಹುಟ್ಟು ಕುರುಡರು, ತಮ್ಮ 13ನೇ ವಯಸ್ಸಿನಲ್ಲಿ ತಾನೊಬ್ಬ ಡಾಕ್ಟರ್ ಆಗಬೇಕು ಎಂದು ನಿರ್ಧರಿಸಿದರು. ಇವರು ತಮ್ಮ ವಿದ್ಯಾಭ್ಯಾಸ ಮುಂದುವರೆಸುತ್ತ ವೈದ್ಯಕೀಯದ 10 ಕಾಲೇಜುಗಳಲ್ಲಿ 9 ಕಾಲೇಜುಗಳಲ್ಲಿ ತಿರಸ್ಕರಿಸಲ್ಪಟ್ಟರು ಒಂದರಲ್ಲಿ ಆಯ್ಕೆಯಾಗಿದರು, ರೋಗಿಯನ್ನು ಕಣ್ಣಿಂದ ನೋಡಿ ಪರೀಕ್ಷಿಸಲು, ಸೂಕ್ಷ್ಮದರ್ಶಕದಲ್ಲಿ ನೋಡಲು ಸಾಧ್ಯವಿಲ್ಲ ಆದರೂ ಪ್ರತಿಭಾವಂತ ವಿದ್ಯಾರ್ಥಿ ಎಂದೆನಿಕೊಂಡರು. ಇವರು ರೋಗಿಯ ಎದೆಯ ಮೇಲೆ ಸ್ಟೇಟಸ್ಕೊಪ್ ಇಟ್ಟರೆ ಯಾರು ಕೇಳದ ಮಾತು ಡೇವಿಡ್ ಅವರ ಕಿವಿಗೆ ಕೇಳುತ್ತಿತಂತೆ. ಇನ್ನು ಎಷ್ಟೋ ಮೋಟಿವೇಷನ್ ಸ್ಪೀಕರ್ ಗಳು ತಮ್ಮ ಅಂಗಾಂಗಗಳಲ್ಲಿ ಸ್ವಾದಿನವೇ ಇಲ್ಲದೆ ವ್ಹಿಲ್ ಚೇರ್ ಮೇಲೆಯೇ ಕುಳಿತು ತಮ್ಮ ಮಾತುಗಳಿಂದಲೇ ಎಷ್ಟೋ ಜನಕ್ಕೆ ಸ್ಫೂರ್ತಿದಾಯಕರಾಗಿದ್ದಾರೆ… ಹೇಗೆ?

ಜಗತ್ತನ್ನೇ ಗೆಲ್ಲುವ ಶಕ್ತಿ, ನಮ್ಮನ್ನು ನಾವು ಗೆಲ್ಲುವ ಶಕ್ತಿ ನಮ್ಮಲ್ಲಿಯೇ ಇದೆ ಆದರೆ ಸಂಬಂಧಗಳನ್ನು ಉಳಿಸಿಕೊಳ್ಳವಲ್ಲಿ ನಾವುಗಳು ಯಾಕೆ ಸೋಲುತ್ತಿದ್ದೇವೆ, ಯಾಕೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳದೆ ಪರಸ್ಪರ ಆರೋಪ ಹೋರಿಸುತ್ತಲೇ ಬದುಕುತ್ತಿವೆ.

ಹೌದು, ಮನುಷ್ಯ ಸಂಘ ಜೀವಿ, ಸಮಾಜ ಬಿಟ್ಟು ಬಾಳಲಾರ, ಹಾಗೇನಾದ್ರೂ ಬಾಳುತ್ತಿದ್ದರೆ ಅವನು ದೇವರಾಗಿರಬೇಕು ಇಲ್ಲ ದೆವ್ವನಾಗಿರಬೇಕು ಎಂದು ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಹೇಳಿದ್ದಾರೆ. ಅಸೂವೆ ಎಂಬುವುದು ಮನುಷ್ಯನ ಸಹಜ ಗುಣ. ನಾನೇ ಹೆಚ್ಚು ಎಂಬ ಕ್ಷುಲ್ಲಕ ಗುಣ, ದುರಾಭಿಮಾನ, ದುರಂಕಾರ ಕೆಲವೊಬ್ಬರಲ್ಲಿ ಇದು ಅತಿ ಹೆಚ್ಚಾಗಿಯೇ ಇರುತ್ತದೆ. ಪ್ರೀತಿ ಪ್ರೇಮ, ವಾತ್ಸಲ್ಯ, ಮಮಕಾರ, ತಾಳ್ಮೆ, ಕರುಣೆ, ಹೊಂದಾಣಿಕೆ ಗುಣಗಳು ನಮ್ಮಲ್ಲಿಯೇ ಇವೆ. ಆದರೂ ಇವುಗಳನ್ನು ಕಡೆಗಣಿಸುತ್ತಿದ್ದೇವೆ. ವಿಶಾಲವಾದ ಪ್ರಪಂಚವನ್ನು ಸಂಕುಚಿತಗೊಳಿಸುತ್ತಿದ್ದೇವೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯ ಜೊತೆ ಕ್ಷಣ ಮಾತ್ರದಲ್ಲಿ ನೇರವಾಗಿ ನೋಡುತ್ತಾ ಮಾತನಾಡುತ್ತೇವೆ, ವ್ಯವಹಾರಗಳನ್ನು ನಡೆಸುತ್ತಿದ್ದೇವೆ. ಹಾಂ, ಇದು ಜಾಗತೀಕರಣ ಯುಗ. ಮೊಬೈಲ್ ಬಂದಾಗಿನಿಂದಲಂತೂ ನಮ್ಮದೇ ಪ್ರಪಂಚ, ಅದರಿಂದ ಸಾಕಷ್ಟು ಲಾಭ ಅನುಕೂಲಗಳಿವೆ ಬಳಸುವವರ  ಮೇಲೆ ಅವಲಂಬನ. ಇನ್ನು ಮೆಟಾವರ್ಸ್ ಬರುತ್ತದೆ, ಕಣ್ಣ ಮುಂದೆ ಬ್ರಹ್ಮಾಂಡ. ಆ ಬ್ರಹ್ಮಾಂಡದಲ್ಲಿ ಕುಳಿತ್ತಿದ್ದ ಜಾಗದಲ್ಲಿ ಕುಳಿತು ಆ ಬ್ರಹ್ಮಾಂಡವನ್ನೇ ಸುತ್ತಬಹುದು . ನಾವು ನಡೆಸುವಂತಹ ಜೀವನ ಅಲ್ಲಿ ನಡೆಸಬಹುದು ಯಾವುದೇ ಅಡೆತಡೆ ಇಲ್ಲದೆ. ಏನೆಲ್ಲಾ ಆಯ್ಕೆ ಮಾಡಿಕೊಳ್ಳುವ ಸ್ವತಂತ್ರ ಅಲ್ಲಿದೆ, ತಾವು ಇಷ್ಟ ಪಟ್ಟವರನ್ನು ಮದುವೆಯಾಗಬಹುದು, ಇದೊಂದು ಕಲ್ಪನಾ ಲೋಕದ ಜಗತ್ತು. ಕಲ್ಪಿನಾ ಲೋಕದಲ್ಲಿ ಜೀವಿಸುತ್ತ ಹೋದರೆ ನಮ್ಮ ಬದುಕಿನ ಗತಿ ಏನು?

ಪಕ್ಷಿಗಳ ರೆಕ್ಕೆಗಳು ಬಲಿತ ಮೇಲೆ ಹಕ್ಕಿ ಹಾರಿ ಹೋಗುವಂತೆ, ಸಮರ್ಥರಾದಂತೆ ಸಂಬಂಧಗಳನ್ನು ಕಳಚುತ್ತಾ ಹೋಗುತ್ತಿದ್ದೇವೆ. ದ್ವೇಷ, ಅಸೂವೆ, ಮೋಸ, ವಂಚನೆ ಹೆಚ್ಚಾದಾಗ, ಪ್ರೀತಿ, ಪ್ರೇಮ, ಮಮತೆ, ಕರುಣೆ, ಹೊಂದಾಣಿಕೆಗಳಿಗೆ ಬೆಲೆ, ಅವಕಾಶ ಎಲ್ಲಿದೆ? ಜ್ಞಾನಿ ಆದವನಲ್ಲಿ ಈ ಕೆಟ್ಟ ಗುಣಗಳು ಸೊಕುವುದಿಲ್ಲ ಯಾಕೆಂದರೆ ತನ್ನನ್ನು ತಾನು ಅರಿತುಕೊಳ್ಳುವ ಮತ್ತು ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವ ಗುಣ. ಒಳ್ಳೆಯವರಲ್ಲಿ ಈ ಗುಣ ಇತ್ತು ಇದೆ ಇರಲೇಬೇಕು. ನಮ್ಮ ದೃಢತೆ ನಮ್ಮ ಸಂಬಂಧಗಳನ್ನು ಉಳಿಸುತ್ತಾ ಬೆಳೆಸುತ್ತಾ, ಸೋಲಿನಿಂದ ಪ್ರೇರಣೆ ಪಡೆಯುತ್ತಾ ವಾಸ್ತವದ ಬದುಕಿನಲ್ಲಿ ಭೇಟಿ ಆಗೋಣ.


ಮಾಜಾನ್ ಮಸ್ಕಿ

Leave a Reply

Back To Top