ವಿಶೇಷ ಲೇಖನ
ನಿಜ ಶರಣ ಘಟ್ಟಿವಾಳಯ್ಯ
ಅನುಪಮವೂಮತ್ತುಅನನ್ಯವೂಆದ
ನಿಜಶರಣಘಟ್ಟಿವಾಳಯ್ಯ —
ಘಟ್ಟಿವಾಳಯ್ಯ ಶರಣರ ಅನುಭಾವದ ಅರಿವಿನಲ್ಲಿ; ದೇವರ ಕುರಿತಾದ ಆ ನಿಜದ ನೆಲೆಯ ಪರಿಕಲ್ಪನೆಯೇ ಒಂದು ವಿಶೇಷ ಗ್ರಹಿಕೆಯ ನೆಲೆಯಲ್ಲಿ ರೂಪಗೊಂಡಿದೆ..!
ನಿಜಕ್ಕೂ ಅದು ಅನುಪಮವೂ ಮತ್ತು ಅನನ್ಯವೂ ಆದ ಸಂಗತಿಯೇ ಆಗಿದೆ..!
ಇಲ್ಲಿ ಒಂದು ಪ್ರಸ್ತುತ ವಚನದಲ್ಲಿ ಅವರೇ ಹೇಳುವಂತೆ; —
ಅಸ್ಥಿಗತರು ಚರ್ಮಗತರು ರುಧಿರಗತರು ಮಾಂಸಗತರು ಗತವಾದರೊ ಗತವಾದರೊ..!
ಅತಿಶಯದ ಅನುಪಮದ ನಿಜವನರಿಯದೇ..!
ಅಂದರೆ ಒಟ್ಟಾರೆ, ನಿಜವ(ದೇವರ)ನ್ನರಿಯಲು; ಮೂಳೆ, ಚರ್ಮ, ರಕ್ತ , ಮಾಂಸ ಗತರಾದಂಥಾ ನರ ಮನುಷ್ಯರಿಂದ ಸಾಧ್ಯವಿಲ್ಲವೂ..!
ಇಂಥವರು ಈ ಕಾರ್ಯಕ್ಕೆ ಕೈ ಹಾಕಿದವರು ಯಾರೂ ಯಶಸ್ವಿಯಾಗಿ ಉಳಿದಿಲ್ಲವೂ..! ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಆದರೆ, (ಘಟ್ಟಿವಾಳಯ್ಯ) ಶರಣರ ಪರಿಕಲ್ಪನೆಯಲ್ಲಿನ ದೇವರು ಮಾತ್ರ ಜಗದಗಲ ಮುಗಿಲಗಲ ಮಿಗೆಯಗಲದ ಅಗಮ್ಯ, ಅಗೋಚರ ಅಪ್ರತಿ ಮನಾಗಿರುವನು..!
ಇಂತಹ ಬಯಲು ಸ್ವರೂಪದ ಶೂನ್ಯ(ದೇವ)ವನ್ನು ಕಾಣುವ ಕುವ್ವತ್ತು ಕೇವಲ ಮೂಳೆ ಮಾಂಸದ ನರರಿಗೆ ಸಾಧ್ಯವಿಲ್ಲವೂ..! ಇದನ್ನು ಸಾಧಿಸಲು ಹೋದವರೆಲ್ಲಾ ಸತ್ತುಹೋಗಿದ್ದಾರೆ.
ಮನ ಮುಟ್ಟದ ಲಿಂಗವ
ಉಳಿ ಮುಟ್ಟಬಲ್ಲುದೆ..? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ. ಇಲ್ಲವೋ ಎಂದಿದ್ದಾರೆ..!
ಅಂದರೆ,ಅಮೂರ್ತ ಸ್ವರೂಪದಲ್ಲಿ ಇರುವ ದೇವರನ್ನು ಮನಸ್ಸೂ ಮುಟ್ಟಲು ಸಾಧ್ಯವಿಲ್ಲ. ಅಂಥಾದ್ದರಲ್ಲಿ ಉಳಿಯಿಂದ ಕೆತ್ತಿ ಮೂರ್ತಿ ಮಾಡಲೆಂದಿಗೂ ಸಾಧ್ಯವಿಲ್ಲ ಇಲ್ಲ ಎನ್ನುವರು ಅವರು..!
ಆದರೆ, ಅಪ್ಪ ಬಸವಾದಿ ಶರಣರು ಇಂಥ ಶೂನ್ಯ ಸ್ವರೂಪದ ಬಯಲು (ದೇವರ)ನ್ನೇ ಪ್ರತೀಕವಾಗಿ ಗ್ರಹಿಸಿ ಮನದಲ್ಲಿಟ್ಟು ಅದನ್ನೇ ‘ಇಷ್ಟಲಿಂಗ’ ಎನ್ನು ಮೂಲಕ ಅಂಗೈಯಲ್ಲಿಟ್ಟು ಪೂಜಿಸಿ ಧ್ಯಾನಿಸಿ ಭಾವಿಸಿ ಆ ನಿಜದ ನೆಲೆಯನ್ನು ಸಾಧಿಸಿ ಶರಣರಾಗಿ ಅನುಭಾವಿಗಳಾಗಿ ಅಲ್ಲಿ ತಮಗೆ ದಕ್ಕಿದಂಥಾ ಆ ಅನುಭಾವದ ಅಡುಗೆಯನ್ನೇ ಕನ್ನಡ ನುಡಿ ಗಡಿಗೆಯಲ್ಲಿಟ್ಟರು..!
ಅದುವೇ ‘ವಚನ ಸಾಹಿತ್ಯ’ವೆಂಬ ಹೆಸರಿನಲ್ಲಿ ಅಮರಜ್ಯೋತಿಯಾಗಿ ಜಗದ ಜನ ಮನ ಬೆಳಗಲು ಕಾರಣವಾಗಿದೆ..!
ಹಾಗಾಗಿ, ಈ ನಿಜವನ್ನು ಭೌತಿಕವಾಗಿ ಮುಟ್ಟಲು ನರರಿಗಂತೂ ಸಾಧ್ಯವೇ ಇಲ್ಲ ಎಂಬ ಸತ್ಯವನ್ನು ಘಟ್ಟಿವಾಳಯ್ಯನವರು ಪ್ರಸ್ತುತ ವಚನದಲ್ಲಿ ಅತ್ಯಂತ ಸೂಕ್ಷ್ಮವಾಗಿ ಸಂಕ್ಷಿಪ್ತವಾಗಿ ನಿಖರವಾಗಿಯೇ ಹೇಳಿರುವುದು ಕಂಡುಬರುತ್ತದೆ..!
# ಘಟ್ಟಿವಾಳಯ್ಯನವರ ಸಂಕ್ಷಿಪ್ತ ಪರಿಚಯವೂ —
ಘಟ್ಟಿವಾಳಯ್ಯ ಶರಣರದು ವಿಷಮ ದಾಂಪತ್ಯ..!
ಇದರಿಂದ ಬೇಸತ್ತು ವಿರಕ್ತರಾಗುತ್ತಾರೆ ಅವರು. ಅಲ್ಲಿಂದಲೇ ಕಾಲಜ್ಞಾನವನ್ನು ಸಾರುತ್ತ ಕಲ್ಯಾಣದ ಕಡೆಗೆ ಪಯಣ ಮಾಡುತ್ತಾರೆ..!
ಇವರ ಕಾಯಕ ಗಂಧ ತೇಯುವುದು ಮತ್ತು ಮದ್ದಳೆ ನುಡಿಸಿ ನರ್ತಿಸುವುದು. ಶರಣರ ಸಂಗಡ ಒಡನಾಟವಾದ ನಂತರ ಇವರು ಅನುಭವ ಮಂಟಪದ 770 ಅಮರ ಗಣಂಗಳಲ್ಲೊಬ್ಬ ವಚನಕಾರ ಶರಣರಾಗುತ್ತಾರೆ..!
‘ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು’. ಎಂಬ ಅಂಕಿತದಲ್ಲಿ ರಚಿಸಿದ ಇವರ 150 ವಚನಗಳು ದೊರೆತಿವೆ..!
ಅವುಗಳಲ್ಲಿ; ತತ್ವನಿಷ್ಠೆ, ಸತ್ಯನಿಷ್ಠುರತೆ, ತಮ್ಮ ಸಮಕಾಲೀನ ಶರಣರ ಬಗ್ಗೆ ಗೌರವ, ಹಾಗೂ ಕೆಲವು ಚಾರಿತ್ರಿಕ ಸಂಗತಿಗಳು ಅಳವಟ್ಟಿವೆ..!
ಘಟ್ಟಿವಾಳಯ್ಯನವರು ತಮ್ಮ ವ್ಯಕ್ತಿತ್ವದಿಂದ ಅಂದಿನ ಶರಣರ ನಡುವೆ ಗಮನಾರ್ಹ ಸ್ಥಾನ ಗಳಿಸಿಕೊಂಡವರು..!
ಅಲ್ಲಮಪ್ರಭುಗಳ ವಚನದಲ್ಲಿ; “ಅಂಗದಮೇಲಣ ಲಿಂಗಕ್ಕಿಂತ ಅಂಗದೊಳಗಣ ಲಿಂಗವ ಹಿಂಗದಂತಿರಬೇಕು ಘಟ್ಟಿವಾಳಯ್ಯ ನಂತೆ” ಎಂದರೆ..!
ಚೆನ್ನಬಸವಣ್ಣನವರು — “ಕೂಡಲ ಚೆನ್ನಸಂಗಾ, ನಿನ್ನ ಶರಣ ಘಟ್ಟಿವಾಳಯ್ಯನಲ್ಲದೇ ನೆರೆ ಅರಿವವರಾರೋ ” ಎಂದಿದ್ದಾರೆ. ಹಾಗೆಯೇ ‘ಮೋಳಿಗೆಯ ಮಾರಯ್ಯ’ನವರು- “ಲೆಕ್ಕವಿಲ್ಲದ ಆಸೆ ಮನದೊಳಗೆ ಹೊಕ್ಕು ತಿರುಗಾಡುತಿಹ ಚಿಕ್ಕ ಮಕ್ಕಳಿಗೆಲ್ಲಿಯದೋ ನಿರ್ವಾಣ, ಘಟ್ಟಿವಳಂಗಲ್ಲದೆ”-ಎಂದು ಅಭಿಮಾನದ ಮೆಚ್ಚುಗೆಯನ್ನಾಡಿದ್ದಾರೆ..!
ಶೂನ್ಯ ಸಂಪಾದನೆಯಲ್ಲಿ ಇವರಿಗೆಂದೇ ಒಂದು ಅಧ್ಯಾಯ ಮೀಸಲಾಗಿಡಲಾಗಿದೆಯಂದರೆ; ಇವರ ಘನತೆ ಎಷ್ಟೆಂಬುದನ್ನು ಗ್ರಹಿಸಬಹುದು. ಘಟ್ಟಿವಾಳಯ್ಯನವರು ನರ್ತನ ಕಾಯಕದಲ್ಲಿ ತೊಡಗಿರುವಾಗಲೇ ಒಂದಿನ ತಮ್ಮ ಕೊನೆಯ ಉಸಿರನ್ನೆಳೆದು ಲಿಂಗೈಕ್ಯರಾದ ಸಂಗತಿ ತಿಳಿದುಬರುತ್ತದೆ..!
ಹೀಗಿದೆ ಶರಣ ಘಟಿವಾಳಯ್ಯನವರ ಸಂಕ್ಷಿಪ್ತವಾದ ಕಥೆಯು..!
ಕೆ.ಶಿವು.ಲಕ್ಕಣ್ಣವರ