“ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ”

ಪುಸ್ತಕ ಸಂಗಾತಿ

“ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ”

ಡಾ ಪ್ರಕಾಶ ಖಾಡೆಯವರಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ

ಖಾಲಿಯಾಗದ

ಒರತೆ

ಒಡನಿರುವ

ಕವಿತೆ

ಎಂದು ನಂಬಿ ಬರೆಯುತ್ತಿರುವ ಕವಿ ಬಾಗಲಕೋಟೆಯ ಡಾ.ಪ್ರಕಾಶ ಖಾಡೆಯವರು.ಅವರು ಸಂಶೋಧನೆ ವಿಮರ್ಶೆ ,ಜಾನಪದ,ಸಂಪಾದನೆ  ಇತ್ಯಾದಿ ಹಲವು ಪ್ರಕಾರಗಳಲ್ಲಿ  ಕೃತಿ ರಚನೆ ಮಾಡಿದ್ದರೂ ಮುಖ್ಯವಾಗಿ ಕವಿಗಳು ಎಂಬುದನ್ನು ಮರೆಯಲಾಗದು.ಕವಿತೆಯನ್ನು ತುಂಬ ಗಂಭೀರವಾಗಿ ತಗೆದುಕೊಂಡಿರುವ  ಡಾ.ಖಾಡೆ ಯವರು ಇತ್ತಿಚೆಗಂತೂ ತುಂಬ ಸಾಮಾಜಿಕ ಜಾಲತಾಣ ದಲ್ಲಿ ಸಕ್ರೀಯವಾಗಿದ್ದಾರೆ‌.

    ಅಂತರ್ಜಾಲದ ಬ್ಲಾಗ್,ಪೇಸ್ಬುಕ್ ಮೊದಲಾದ ಮಾಧ್ಯಮಗಳಲ್ಲಿ  ನಿತ್ಯವೂ ಬರೆಯುತ್ತಿರುವ ಈ ಕವಿ ಬರೆದಿರುವ ಚೆಂದನೆಯ ೩೦೬  ಹನಿಗಳನ್ನು ಸಂಗ್ರಹಿಸಿ “ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ “ಎಂಬ ಸುಂದರ ಸಂಕಲನವನ್ನು ೨೦೧೬ ರಲ್ಲಿಯೆ ಬಾಗಲಕೋಟೆಯ ಅನಿಕೇತ ಪ್ರಕಾಶನದಿಂದ ಹೊರತಂದಿದ್ದಾರೆ.

ಇವು ಹನಿಗವಿತೆಗಳೇ?,ಮಿನಿಗವಿತೆಗಳೇ? ಚುಟುಕುಗಳೇ ? ಏನು ಎಂಬುದನ್ನು ಹೇಳುವದು ಕಷ್ಟದ ಕೆಲಸ .ಆದರೆ ಕವಿತೆಗಳೆಂಬುದು ಮಾತ್ರ ನೂರಕ್ಕೆ ನೂರು ನಿಜ.ಇಲ್ಲಿ ಏನೆಲ್ಲ ಸಮಾಹಿತವಾಗಿದೆ ಎನ್ನುವದನ್ನು ಮುನ್ನುಡಿ ಬರೆದ ವಿಮರ್ಶಕ ಗೆಳೆಯ ರಾಗಂ ಅವರು‌

-” ಇಂಗ್ಲೀಷಿನ‌ ಮೆಟಾಪಿಜಿಕಲ್ ,ಚೈನಾ ಝೆನ್,ಜಪಾನಿನ ಹಾಯ್ಕು,ಭಾರತದ ದೋಹೆಗಳ ಒಟ್ಟು ಶ್ರಮವನ್ನು ಸೌಂದರ್ಯವನ್ನು ಗರ್ಭೀಕರಿಸಿಕೊಂಡ ನುಡಿಕಿಡಿಗಳು” ಎಂದು ವ್ಯಾಖ್ಯಾನಿಸಿದ್ದಾರೆ.

ಈ ಸಂಕಲನವನ್ನು ತಂದುದರ  ಹಿಂದಿನ ಉದ್ದೇಶವನ್ನುಸ್ವತಃ ಕವಿಯೆ – ಈ ಫೇಸ್ ಬುಕ್‌ಎಂಬ ಮಾಯೆ ನಿಜವಾಗಿಯೂ ನನ್ನಲ್ಲಿ ಹಲವು ಭಾವಗಳ ರೆಕ್ಕೆಗೆ ಆಡುಂಬೋಲವಾಯಿತು.ಪದ್ಯಗಳ ಹುಟ್ಟಿಗೆ ಹರವಿಕೊಂಡ ಭಿತ್ತಿಯಾಯಿತು.ದೇಶ ವಿದೇಶಗಳಲ್ಲಿ‌ಕನ್ನಡದ ಜನ  ಓದಿ ,ಸಂಭ್ರಮಿಸಿ ಹಂಚಿಕೊಂಡ ಒಡಲಾಳದ ಮಿಡಿತಗಳೇ ನನ್ನೊಳಗೆ ನಿತ್ಯವೂ ಪದ್ಯಗಳ ಹೊಸೆವ ನವಿರತೆಗೆ ಸಾಕ್ಷಿಯಾಯಿತು.ಹೀಗೆ ನಿತ್ಯ ಹುಟ್ಟಿಕೊಂಡ ಪದ್ಯಗಳ ಸೂಡು ಕಟ್ಟಿ ಒಟ್ಟಿಗೆ ಈ ಸಂಕಲನ ಮೂಲಕ ತಮಗೆ ಒಪಗಪಿಸುತ್ತಿದ್ದೇನೆ” ಎಂದು ನಿವೇದಿಸಿಕೊಂಡಿರು ವದರಲ್ಲಿ ಅವರ ಉದ್ದೇಶ ಸ್ಪಷ್ಟವಾಗಿದೆ.ಇಲ್ಲಿನ ಕವಿತೆಗಳ ವ್ಯಾಪ್ತಿ ಮೂರು ಸಾಲಿನಿಂದ ಆರು ಸಾಲುಗಳವರೆಗಿದೆ.ಆದರೆ ಹೆಚ್ಚಿನ ಚುಟುಕುಗಳು ನಾಲ್ಕು ಸಾಲಿನಲ್ಲಿಯೇ ಇರುವದು ವಿಶೇಷ.

        ಈ‌ ನಾಲ್ಕು ಸಾಲಿನ ನುಡಿಗಳ ವ್ಯಾಪ್ತಿ “ಹಿಡಿದರೆ ಹಿಡಿ ತುಂಬ ಬಿಟ್ಟರೆ ಜಗ ತುಂಬ” ಎನ್ನುವ ರೀತಿಯದ್ದು.ನಾಲ್ಕು ಸಾಲಿನ ಪದ್ಯವನ್ನು ವಿಸ್ತರಿಸ ಹೋಗುವದು ಕಷ್ಟಕರವೇ‌ .ವಿಸ್ತರಿಸದಿದ್ದರೂ ಕಷ್ಟವೇ ಎನ್ನುವ  ಸಂಕಷ್ಟ ನಮ್ಮಂತಹ ಓದುಗರದ್ದು. ಈ‌ ಕವಿತೆಗಳಿಗೆ ನಮಗೆ ಗೊತ್ತಿಲ್ಲದಂತೆಯೆ ಜಗತ್ತಿನ ತುಂಬಾ ಓದುಗರಿರುತ್ತಾರೆ.ನಮಗರಿವಿಲ್ಲದಂತೆಯೇ ಓದಿ ಪ್ರೇರಣೆ ಪಡೆದವರಿರುತ್ತಾರೆ.ಲೈಕ್ ಮಾಡುವ ಕಾಮೆಂಟ್ ಮಾಡುವ ಕೆಲವರನ್ನು ಬಿಟ್ಟರೂ ಓದಿ ಸುಮ್ಮನೆ ಇರುವವವರ ಸಂಖ್ಯೆ ಸಾವಿರಾರು.ಆದರೆ ಪೇಸ್ ಬುಕ್ಕಿನಲ್ಲಿ ಬರುವ‌ ಲೈಕು‌,ಕಾಮೆಂಟುಗಳು‌ ಪುಕ್ಕಟೆ ಸಿಗಲಾರವು.ಅಲ್ಲಿ ಓದಿ ಸ್ಪಂದಿಸಿರುವಲ್ಲಿ ಒಂದು‌ ಕಾವ್ಯ‌ಪ್ರಿಯ ಮನಸ್ಸು‌ ಇರುತ್ತದೆ ಎಂಬುದಕ್ಕೆ

ಪ್ರತಿಲೈಕಿನ

ಜೊತೆಗೆ ಒಂದು

ಜೀವ ಮಿಡಿತದ

ಉಸಿರಿದೆ

ಎಂಬ ಸಾಲುಗಳೇ ಸಾಕ್ಷಿ. ಇಂದು‌ ಕವಿತೆಯನ್ನು ಓದುವ,ಸ್ಪಂದಿಸುವ  ರೀತಿ ಕೂಡ ಭಿನ್ನವಾಗಿದೆ  ಎನ್ನುವದನ್ನು‌ ಈ ಕಾಲದ ಕವಿಗಳು ಅರಿಯುವದು ಅನಿವಾರ್ಯವಾಗಿದೆ.

  ಇಂದು ಪತ್ರಿಕೆಗಳಲ್ಲಿ ಈ ಸಾಲುಗಳು ಬರಬೇಕೆಂದರೆ ನೂರಾರು ದಿನ ಕಾಯಬೇಕು.ಅದೂ ಅವಕಾಶ ಸಿಕ್ಕರೆ ಸಿಗಬಹುದು, ಇಲ್ಲದಿದ್ದರೆ ಇಲ್ಲ..ಆದರೆ ಈ ಮುಖಪುಟಕ್ಕೆ ಅಂಥ‌ ಯಾವ‌ ಮಿತಿಗಳೂ ಇರುವದಿಲ್ಲ‌.ಆಯಾ ಪತ್ರಿಕೆಗಳಿಗೂ ತನ್ನದೇ ಆದ‌ ಲೇಖಕ ಬಳಗ‌ವಿರುತ್ತದೆ.ಹೀಗಾಗಿ ಬಹುಸಂಖ್ಯಾತ ಪ್ರತಿಭಾವಂತ‌ ಲೇಖಕರು ಪತ್ರಿಕೆಗಳಲ್ಲಿ ತಮ್ಮ‌ ಲೇಖಗಳು ಬರುವದರಿಂದ ವಂಚಿತರಾಗುತ್ತಲೇ ಇರಬೇಕಾಗುತ್ತದೆ. ಹೀಗಾಗಿ ಇಂದು ಸಾವಿರಾರು‌ ಲೇಖಕರಿಗೆ ಇದು ಅವಕಾಶ ಕೊಡುವ ವೇದಿಕೆಯಾಗಿದೆ.  ಆದರೆ ಲೇಖಕರು ಅಷ್ಟಕ್ಕೆ ಸಮಾಧಾನಿತರಾಗದೇ ಗಂಭೀರವಾಗಿ ತಾವು ಬರೆದುದನ್ನು  ಮುದ್ರಣ ಮಾಧ್ಯಮಕ್ಕೆ ತರುವ ಪ್ರಯತ್ನವನ್ನು‌ ನಿರಂತರವಾಗಿ ಜಾರಿಯಿಡಬೇಕಾಗುತ್ತದೆ.

      ಇಲ್ಲಿನ ಹನಿಗಳಲ್ಲಿ ಓದಿದೊಡನೆ ಖುಷಿ ಕೊಡುವ ಹಲವಾರು ಪದ್ಯಗಳಿವೆ. ನಮ್ಮ‌ ಮನದಲ್ಲಿ ಒಂದು ಬಗೆಯ ಬೆಳಕು ಜಗ್ಗೆಂದು ಹೊತ್ತಿ ಪ್ರಕಾಶ ಬೀರಿ ಒಂದು ಸಮಾಧಾನ ನೆಮ್ಮದಿ,ಮೂಡುತ್ತದೆ. ದೀರ್ಘ‌ ಕವಿತೆಯೆ ಇರಲಿ ಚುಟುಕು ಕಾವ್ಯವೇ ಇರಲಿ ಓದುಗನಲ್ಲಿ ಮೂಡುವ ಈ ಸಂತೃಪ್ತಿಯೇ ಕಾವ್ಯದ ಅಂತಿಮ ಉದ್ದೇಶ. ಇದನ್ನೆ ವರಕವಿ ಬೇಂದ್ರೆ‌ ‘ಕಲ್ಲು ಸಕ್ಕರೆಯಂತಹ ಎದೆಯು‌ ಕರಗಿ ನೀರಾಗಿ ಹರಿಯುವದು ‘ಎಂದಿದ್ದರು.ಅಂತಹ ಸಂತೃಪ್ತ ಭಾವ ಇಲ್ಲಿನ ಅನೇಕ ಪದ್ಯಗಳನ್ನು ಓದಿದಾಗ‌ ಖಂಡಿತ ಆಗುತ್ತದೆ.  ಉದಾಹರಣೆಗೆ ಗಮನಿಸುವದಾದರೆ

ಅಗಳು

ಹುಡುಕಿಕೊಂಡು

ಬಂದ ಕಾಗೆ ;

ಬಳಗ ಕಟ್ಟಿಕೊಂಡಿತು

ಈಜಿ

ಜಯಿಸಿದವರು

ಮೈಲುಗಲ್ಲುಗಳ

ನೆಟ್ಟರು

ಇಂಥ ಹನಿಗಳನ್ನು ಓದಿದಾಗ ಆಗುವ ಸಂತೋಷ ಬಣ್ಣನೆಗೆ ನಿಲುಕದ್ದು.

    ಕವಿ  ವರ್ಡ್ಸವರ್ಥ್  Our sweetest songs are those ,which are our saddest thoughts “ದುಃಖದ ಮನಸ್ಸುಗಳ ಭಾವ ದೀಪ್ತಿ‌ ಮಾತ್ರ ಸುಂದರ ಕಾವ್ಯವಾಗಬಹುದು” ಎಂದಿದ್ದ ಮಾತು ಎಲ್ಲ ಕಾಲದ ಸತ್ಯವೇ .ನೋವಿನ ತೀವ್ರತೆ ಮಾತ್ರ ಉತ್ತಮ ಕಾವ್ಯ ಸೃಷ್ಟಿಸಬಲ್ಲುದು.ನೋವು ಕಡಿಮೆಯಾದಂತೆ ,ಕಾವ್ಯ ಕರಗುತ್ತಾ ಹೋಗುತ್ತದೆ ಎನ್ನುತ್ತಾರೆ ಒಂದು‌ ಹನಿಯಲ್ಲಿ

ಗಾಯದ ನೋವು

ಮಾಯುತ್ತಾ ಬಂದಂತೆ

ಕವಿತೆ ಕರಗುತ್ತಾ ಹೋಗುತ್ತದೆ

ಎನ್ನುತ್ತಾರೆ‌.ಅವರ ಕವಿತೆಗಳಲ್ಲಿರುವ ನವಿರಾದ ಭಾವಕ್ಕೆ ಉದಾಹರಣೆ ಈ ಕೆಳಗಿನ ಸಾಲು

ಮಗು

ಮಲಗಿತು ಎಂದಳು;

ಲಾಲಿ ಹಾಡು

ಬದಲಿಸು ಎಂದೆ

ನಾಲ್ಕೆ ಸಾಲುಗಳ ಈ‌ ಪದ್ಯ ಒಂದು ಇಡೀ ದಾಂಪತ್ಯದ ಸವಿಯನ್ನು, ಅವರ ಮೋಹಕ ಬದುಕನ್ನು ,ಅವರ ಪ್ರೇಮವನ್ನು ಹಿಡಿದಿಟ್ಟಿರುವ ರೀತಿಯನ್ನು ವಿವರಿಸ ಹೊರಟರೆ ನಾವು‌ ಮೂರ್ಖರಾಗುತ್ತೇವೆ.

ಮೂರೇ ಮೂರು ಸಾಲಿನಲ್ಲಿ‌ಇಡೀ ಬದುಕನ್ನೇ ಹಿಡಿದಿಟ್ಟ ಪರಿಗೆ –

ಬದುಕಿನ

ಪಠ್ಯದ ಹೆಸರೇ

ಬೇವು ಬೆಲ್ಲ

ಒಂದು ಇಡೀ ಮಹಾಕಾವ್ಯ ಸ್ಪುರಿಸುವ ಅರ್ಥವನ್ನು ಈ ಮೂರು ಸಾಲಿನ ಪದ್ಯ ಹೇಳುವದು ಕವಿಯ ಸೂಕ್ಷ್ಮದರ್ಶಿತ್ವಕ್ಕೆ ಸಾಕ್ಷಿಯಾಗಿದೆ.

      ಕವಿ ಬರೀ ಸುಂದರ ಸಾಲುಗಳನ್ನು ಬರೆದು ತೃಪ್ತರಾಗುವದಿಲ್ಲ.ಅವರೊಳಗಿನ ಹೋರಾಟದ ಮನಸ್ಸು ಸಿಡಿಯುತ್ತದೆ.

ಪಲ್ಲಕ್ಕಿಮೇಲೆ

ಕುಳಿತಿದ್ದಾರೆ ಪ್ರಭುಗಳು

ಹೊರುವವರಿಗಾಗಿ

ಕಾಯುತ್ತಿದ್ದಾರೆಹಿಂಬಾಲಕರು

ಇಲ್ಕಿರುವ ವ್ಯಂಗ್ಯ ಮಾತಿಗೆ‌ ಮೀರಿದ್ದು. ಇಂದು ಪ್ರಭುಗಳನ್ನು ಹೊರಲು ಜನವೂ ಇಲ್ಲ. ಅವರಿಗಾಗಿ‌ ಕಾಯಬೇಕಾದ ಸ್ಥಿತಿ ಪ್ರಭುಗಳಿಗೆ ಬಂದೊದಗಿದೆ ಎಂಬ ಸೂಕ್ಷ್ಮ‌ವಿಡಂಬನೆ‌ ಅಲ್ಲಿದೆ . ಕವಿಯ‌ ಮನಸ್ಸು ಬಡವರನ್ನು‌,ನಿರ್ಗತಿಕರನ್ನು ಕಂಡು ಮಿಡಿಯುತ್ತದೆ.ಅಂತೆಯೇ

ಚಳಿಗೆ ನಡುಗುವ ಮಕ್ಕಳಿಗೆ

ಹೊದಿಕೆಯಾಗಲಿ  ನನ್ನ ಕವನ

ಮುದುಡಿಮಲಗಿದ್ದ ಕಂದಮ್ಮಗಳಿಗೆ

ತಾಯ ಮಡಿಲಾಗಲಿನನ್ನಕವನ

ಎಂದು ಹಂಬಲಿಸುತ್ತಾರೆ.ಇಲ್ಲಿನ‌ ದೇವರು ಮಸಿದಿ ಚರ್ಚಗಳು‌,ಸ್ವಾಮಿ‌,ಬಾಬಾ,ಪಾದರ್ ಗಳು ಜಗತ್ತಿನಲ್ಲಿ ತುಂಬಿದ ಹಿಂಸೆಯನ್ನು ಕಡಿಮೆ‌ ಮಾಡುತ್ತಿಲ್ಲವಲ್ಲ ಎಂಬ‌ ವಿಷಾದ ಕಾಡಿದೆ ಕವಿಗೆ.ಅದನ್ನೆ

ಅಡಿಗಡಿಗೆ ಇವೆ ಗುಡಿಗಳು

ಚರ್ಚ ಮಸಿದಿಗಳು

ಆದರೂ ತುಂಬುತ್ತಿವೆ  ಪತ್ರಿಕೆಯಲ್ಲಿ

ಅಪರಾಧ ಪುಟಗಳು

ಎಂಬ ಹನಿ ವಿವರಿಸಲು ಯತ್ನಿಸಿದೆ.ನಾವೇ ಸೃಷ್ಟಿಸಿದ ಗುಡಿ ಗುಂಡಾರಗಳು ಚರ್ಚು ಮಸಿದಿಗಳು‌ ಮಾನವೀಯತೆಯ ನಡುವೆ ಬಿರುಕು‌ ಮಾಡಿಸುವ ಕೆಲಸ ಮಾಡುತ್ತಿರುವದು ಕವಿಗೆ ಕಾಡಿದೆ. ಹಾಗಾಗಿ‌ಕವಿಯ‌ ಮನ ಕೋಪಗೊಂಡು‌ ಇಂತಹ‌ ಆಕ್ರೋಶ‌ ಹೊರಗೆಡಹುತ್ತದೆ.

   ಇಲ್ಲಿನ ಎಲ್ಲ ಮುನ್ನುರು ಹನಿಗಳು ಶ್ರೇಷ್ಠ ಕಾವ್ಯ ವಾಗಿವೆ ಎಂದು ನನ್ನ ಅಭಿಪ್ರಾಯವಲ್ಲ.ಸುಮ್ಮನೆ ಹೊಸೆದ, ಪದದ ಕೆಳಗೆ‌ ಪದವಿಟ್ಟ ಕೆಲವು ರಚನೆಗಳು ಇರದಿದ್ದರೆ ಚೆನ್ನಿತ್ತು‌ ಎಂದು ಅನ್ನಿಸಿದ್ದು ಇದೆ.ಆದರೆ ಕವಿ ತಾಯಿಯಂತೆ .ಅವನ‌ ಕವಿತೆಗಳಲ್ಲಿ ಯಾವುದು ಶ್ರೇಷ್ಠ,? ಯಾವುದು‌ ಕನಿಷ್ಠ ಎಂದು ಆತ  ಅಂತರ ಮಾಡಲಾರ .ಹಾಗಾಗಿ ಎಲ್ಲ ರಚನೆಗಳನ್ನು ಆತ ಸೇರಿಸಿ ಬಿಡುತ್ತಾನೆ.ಇಂತಹ‌ ಕೆಲವು‌ ಜಾಳು‌ ಜಾಳು ರಚನೆ ಗಳನ್ನು‌ ಸಹಿಸಿಕೊಳ್ಳಲೇ ಬೇಕಾಗುತ್ತದೆ. ಕವಿಯ ಪ್ರತಿ ಕವಿತೆ ಶ್ರೇಷ್ಠವಾಗಿಯೇ ತೀರುತ್ತದೆ ಎಂದೇನಿಲ್ಲ ಅದು ಕವಿಗೂ ಗೊತ್ತಿದ್ದದ್ದೇ ಆಗಿದೆ.ಅಂತೆಯೆ ಅವರೇ

ಎಲ್ಲವೂ ಕಾವ್ಯವಾಗಬೇಕಿಲ್ಲ

ಅನುಭವದ ಮೂಸೆಯಲ್ಲಿ

ಎಷ್ಟೊಂದು ಉಳಿದಿಲ್ಲ

ಮೊಳಕೆಯೊಡೆಯದ ಬೀಜ

ಭೂ ತಾಯಿಯ ಒಡಲಲ್ಲಿ

ಎಂಬ ಸಮಜಾಯಿಷಿಯನ್ನೂ ನೀಡುತ್ತಾರೆ.ಎಲ್ಲ‌ ಕವಿ ಎದುರಿಸಬೇಕಾದ ಅಗ್ನಿದಿವ್ಯವಿದು.

      ಇಲ್ಲಿನ‌ ಎಲ್ಲ ಹನಿಗಳನ್ನು‌ ಉದಾಹರಿಸ ಬೇಕೆಂಬ‌ ಆಸೆ ನನಗೆ.ಆದರೆ ಅದು ವಿಮರ್ಶಕನ‌ ಕೆಲಸವಲ್ಲ.ಆತ ಏನಿದ್ದರೂ ತಾಯಿ‌ ಕೂಸು‌ ಹೆರುವಾಗ ದಾಯಿಯಂತೆ‌. ಇದು ಕವಿಯ ಕವಿತೆ ಎಂದು‌ ಮಾತ್ರ ತೋರಿಸಿ ದೂರ ಸರಿಯಬೇಕು.ಇನ್ನು ಕವಿತೆಯುಂಟು. ಓದುಗರಾದವ ರುಂಟು. ಇಂತಹದೊಂದು ,ನಿಮ್ಮ ಸಾರ್ಥಕ ಓದಿಗೆ ಕವಳವಾಗಬಲ್ಲಸಂಕನವಿದೆಯಂದು ಸೂಚಿಸುವದಷ್ಟೇ ಕೆಲಸ.ಈ  ಚಂದನೆಯ ಸಂಕಲನ ನೀಡಿದ್ದಕ್ಕೆ ಕವಿಗೆ ಶುಭಾಶಯಗಳು.

             ೨೦೧೬ ರ ನಂತರದ ಅಂತರ್ಜಾಲ ರಚನೆಗಳು ಸಂಕಲನವಾಗಿ ನಮ್ಮ ಕೈ ಸೇರಲಿ ಎಂದು ಓದುಗನಾಗಿ ನನ್ನ ಹಾರೈಕೆ.


ಡಾ.ಯ.ಮಾ.ಯಾಕೊಳ್ಳಿ

One thought on ““ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ”

  1. ಉತ್ತಮವಾದ ಓದಲು ಉತ್ಸಾಹಿಸುವ ಕವನಗಳ ಪುಸ್ತಕ ಪರಿಚಯ ತುಂಬಾ ಚೆನ್ನಾಗಿದೆ ಸರ್.

Leave a Reply

Back To Top