ಕಥಾ ಸಂಗಾತಿ
ತೊಳೆದ ಸಿರಿಮುಡಿ
ಸುಮಾ ಕಿರಣ್
ತಲೆಯ ಮೇಲೆ ಧಾರೆ ಧಾರೆಯಾಗಿ ಬೀಳುತ್ತಿದ್ದ ನೊರೆಭರಿತ ಬೆಳ್ಳನೆಯ ಹಾಲು ತಲೆಯ ನೀಳ ಕೂದಲಿಂದ ಜಾರುವಾಗ ಕೆಂಬಣ್ಣಕ್ಕೆ ಇಳಿಯಿತು. ಕೆಂಬಣ್ಣದ ಓಕುಳಿಯಂತೆ ಕಾಲಡಿಯಲ್ಲಿ ಜಾರುತ್ತಿರುವ ನೀರನ್ನೇ ತೆರೆದ ಕಣ್ಣುಗಳಿಂದ ನಿಟ್ಟಿಸಿ ನೋಡತೊಡಗಿದೆ. ನಿಧಾನವಾದ ನಿಟ್ಟುಸಿರೊಂದು ಹೊರಟಿತು. ನನ್ನ ಗತ ಜೀವನದ ನೋವೆಲ್ಲ ಕಾಲಡಿಯಲ್ಲಿ ಸುರಿದು ಸರಿದು ಹೋಗುತ್ತಿದೆಯೇನೋ… ಎನ್ನುವಂತೆ ಭಾಸವಾಗತೊಡಗಿತು. ಸ್ವಲ್ಪ ಹೊತ್ತಿಗೆ ಮುಂಚೆ ಯುದ್ಧ ಭೂಮಿಯಿಂದ ಹಿಂದಿರುಗಿದ ನನ್ನನ್ನು ಕಂಡು ಇದೇ ಸಖಿಯರು ನಾಲ್ಕು ಹೆಜ್ಜೆ ಹಿಂದೆ ಸರಿದಿದ್ದು ನೆನಪಾಗಿ ಹೃದಯ ಹಿಂಡಿತು. ಮಾತೆ ಕುಂತಿಯ ಕಂಗಳಲ್ಲಿ ಕಂಡು ಕಾಣದಂತೆ ಮಿಂಚಿ ಮಾಯವಾದ ತಿರಸ್ಕಾರದ ನೆನಪಾಗಿ ಮನಸ್ಸು ಚೀರಿತು, “ಓ ಹೆಣ್ಣೇ, ಯುಗ ಯುಗಕ್ಕೂ ನಿನಗೆ ಇನ್ನೊಂದು ಹೆಣ್ಣು ಶತ್ರು” ಎಂದು. ಇಷ್ಟಕ್ಕೂ ಇಂದು ಇವರೆಲ್ಲರೂ ಭಯ, ವ್ಯಂಗ್ಯ, ಅಸಮಧಾನ, ತಿರಸ್ಕಾರದಿಂದ ನನ್ನತ್ತ ನೋಡಲು ನಾನು ಮಾಡಿದ ತಪ್ಪಾದರೂ ಏನಾಗಿತ್ತು?
ಹೆಣ್ಣಾಗಿ ಹುಟ್ಟಿದ್ದು ನನ್ನ ಅಪರಾಧವೇ? ಅದರಲ್ಲೂ ದ್ರುಪದನ ಮಗಳಾಗಿ ಹುಟ್ಟಿದ್ದು ನನ್ನ ಅಪರಾಧವೇ? ಇಲ್ಲಾ… ಬಲಾಡ್ಯ ಪುರುಷ ಪುಂಗವರಾದ ಪಂಚಪಾಂಡವರನ್ನು ಪತಿಯರನ್ನಾಗಿ ಪಡೆದದ್ದು ನನ್ನ ತಪ್ಪೆ? ಅಥವಾ ಕುರುವಂಶದ ಸೊಸೆಯಾಗಿ ಹಸ್ತಿನಾವತಿಯ ಹೊಸ್ತಿಲು ತುಳಿದದ್ದು ನನ್ನ ತಪ್ಪೇ? ಹೋಗಲಿ ಕೃಷ್ಣನ ಪ್ರಿಯ ಸಹೋದರಿಯಾದದ್ದು ನನ್ನ ಮಹದಪರಾಧವೇ? ಯಾವುದು? ಇದರಲ್ಲಿ ಯಾವುದು ನನ್ನ ತಪ್ಪು? ಯಾಕಾಗಿ ಅಂದು ಆ ಶಿಕ್ಷೆ? ಯಾಕಾಗಿ ಇಂದು ಹೃದಯವನ್ನೇ ಇರಿವ ಈ ನೋಟ! ನನ್ನದಲ್ಲದ ತಪ್ಪಿಗೆ ಇಡೀ ಜೀವನವನ್ನೇ ಬಲಿ ಕೊಡಬೇಕಾಗಿ ಬಂತಲ್ಲ… ಎಂದು ಮನಸ್ಸು ಹದಿನಾಲ್ಕು ವರ್ಷದ ಹಿಂದಕ್ಕೆ ಜಾರಿತು.
“ಮಾತೆ, ಧರ್ಮರಾಯ ಪ್ರಭುಗಳು ದ್ಯೂತದಲ್ಲಿ ಸಕಲವನ್ನೂ ಕಳೆದುಕೊಂಡಿದ್ದಾರೆ. ಕೊನೆಗೆ ಸಹೋದರರನ್ನೂ ಒಬ್ಬೊಬ್ಬರನ್ನಾಗಿ ಪಣವಾಗಿ ಒಡ್ಡಿ ಕಳೆದುಕೊಂಡರು. ತಮ್ಮನ್ನು ಪಣವಾಗಿಟ್ಟು ಸೋತಿದ್ದಾರೆ. ಇದೀಗ ನಿಮ್ಮನ್ನೂ ಪಣಕ್ಕಿಟ್ಟಿದ್ದಾರೆ” ಎಂದು ಸಖಿಯರು ಸುದ್ದಿ ತಂದದ್ದು ಕೇಳಿದಾಗ ಎದೆ ಝಲ್ಲೆಂದಿತು. ಪತಿಯರಲ್ಲಿ ಅಗ್ರನಾದ ಧರ್ಮರಾಯನ ದ್ಯೂತದ ಹುಚ್ಚು ಹೊಸದೇನಲ್ಲ. ಆದರೆ, ಆ ಹುಚ್ಚು ಹೀಗೆ ಎಲ್ಲದರ ಜೊತೆ, ಜೀವ-ಭಾವ ತುಂಬಿದ ಮನುಷ್ಯರನ್ನೇ ಪಣಕ್ಕೆ ಒಡ್ದುವಂತೆ ಮಾಡುತ್ತದೆ ಎಂಬುದು ಮಾತ್ರ ಹೊಸದಾಗಿತ್ತು. ಈ ಹೊಸತನದ ಹುಚ್ಚಿಗೆ ನಡುಗಿದೆ.
ತಮ್ಮ ಅಣ್ಣನೆಂದರೆ ಅಪಾರ ಪ್ರೀತಿ, ಅಭಿಮಾನ ಹೊಂದಿರುವ ಈ ಸಹೋದರರು… ಅಣ್ಣನಿಗಿಂತಲೂ ಬಲಾಡ್ಯರೇನೋ ನಿಜ. ಆದರೆ, ಅದನ್ನು ಅಣ್ಣನ ಮುಂದೆ ಪ್ರದರ್ಶಿಸದಷ್ಟು ವಿಧೇಯರು. ಅಣ್ಣನೆಂದರೆ ‘ಧರ್ಮದೇವತೆ’ ಎಂಬಂತೆ ಯೋಚಿಸುವ ಇವರಲ್ಲಿ ಯಾರೂ ಮುಂದಿನ ಅವಘಡವನ್ನು ತಡೆಯರು. ಇನ್ನು ಸ್ವಲ್ಪ ಧ್ವನಿಯೆತ್ತಿ ನನ್ನನ್ನು ರಕ್ಷಿಸಿದರೆ ಅದು ಭೀಮಸೇನ ಮಾತ್ರ. ಆಕಾರದಲ್ಲಿ ಗಜ ಗಾತ್ರವನ್ನು ಹೊಂದಿ, ನೋಡಿದವರ ಎದೆ ನಡುಗಿಸುವಂತೆ ದೇಹವನ್ನು ಬೆಳೆಸಿದ್ದಾನೆ. ಆದರೆ, ಅವನದು ಹೆಂಗರುಳು. ನನ್ನನ್ನು ಕಾಪಾಡಿದರೆ, ನನ್ನ ಪರವಾಗಿ ವಾದಿಸಿದರೆ ಅವನೊಬ್ಬನೇ. “ಹೇ… ವಾಸುದೇವ, ಮುಂದಿನ ಎಲ್ಲಾ ಅನರ್ಥಗಳನ್ನು ತಪ್ಪಿಸು” ಎಂದು ಮನದಲ್ಲೇ ವಾಸುದೇವನ ಮೊರೆಹೋದೆ.
ಅದಾಗಲೇ ಬಾಗಿಲ ಪರದೆಯನ್ನು ಸರಿಸಿ ಬಂದ ದೂತ “ಮಾತೆ, ಧರ್ಮರಾಯ ಪ್ರಭುಗಳು ನಿಮ್ಮನ್ನೂ ಪಣವಾಗಿಟ್ಟು ಸೋತಿದ್ದಾರೆ. ಇದೀಗ ನಿಮ್ಮನ್ನು ದಾಸಿಯಾಗಿ ಸಭೆಗೆ ಕರೆತರುವಂತೆ ದುರ್ಯೋಧನ ಪ್ರಭುಗಳು ಆಜ್ಞಾಪಿಸಿದ್ದಾರೆ. ಬರಬೇಕು ತಾಯಿ” ಎಂದು ವಿನಯ ವಿಧೇಯತೆಯಿಂದ ನಡುಬಗ್ಗಿಸಿ ಹೇಳಿದ. ಮಿಂಚೊಂದು ಬಂದು ಎದೆಗೆ ಅಪ್ಪಳಿಸಿದಂತಾಗಿ ಕುಸಿದು ಕುಳಿತೆ. “ಹೇ, ವಾಸುದೇವ” ಎಂಬ ಆರ್ತನಾದವೊಂದು ಬಾಯಿಂದ ಹೊರಬಿತ್ತು. ಸ್ವಲ್ಪ ಸಮಯಕ್ಕೆ ಪ್ರಜ್ಞೆ ಮರುಕಳಿಸಿತು. ಸುದ್ದಿ ತಂದ ದೂತನಿಗೆ ಹೇಳಿದೆ, “ಪ್ರಭುಗಳು ತಮ್ಮನ್ನು ಸೋತು ನಂತರ ನನ್ನನ್ನು ಪಣವಾಗಿಟ್ಟರೋ… ಅಥವಾ ಮೊದಲೇ ನನ್ನನ್ನು ಪಣಕ್ಕಿಟ್ಟು ಸೋತರೋ… ಕೇಳಿ ಬಾ” ಎಂದು ಅಟ್ಟಿದೆ. ಏನೇ ಸಮಾಧಾನವನ್ನು ಮನ ಹೇಳುತ್ತಿದ್ದರು ಮುಂದಿನ ಅನಾಹುತ ಕಣ್ಣ ಮುಂದಿತ್ತು.
ಎಣಿಸಿದಂತೆ ಮತ್ತೆ ದೂತ ಬರೆದೆ.. ದುಶ್ಯಾಸನನ ಆಗಮನವಾಯಿತು. ಅವನಲ್ಲೂ ಪರಿಪರಿಯಾಗಿ ಬೇಡಿದೆ. “ರಜಸ್ವಲೆಯಾದವಳು ಸಭೆಗೆ ಬರಕೂಡದು. ಇನ್ನು ನಾನು ನಿನ್ನ ಅತ್ತಿಗೆ. ಅಂದರೆ ತಾಯಿಗೆ ಸಮಾನ. ತಾಯಿಯನ್ನು ಅವಮಾನಿಸುವುದು ತರವಲ್ಲ” ಎಂದು ಕೇಳಿಕೊಂಡೆ. ನನ್ನ ಯಾವ ಮನವಿಗೂ ಕರಗದೆ ಮೃಗಗದಂತೆ ನನ್ನನ್ನು ಎಳೆದೊಯ್ದ.
ಸಭೆಯ ದ್ವಾರವನ್ನು ದಾಟುವಾಗ ಬಿದ್ದ ನನ್ನ ಮುಡಿಯ ಕೂದಲಿಗೆ ಕೈ ಹಾಕಿ ಎಳೆದಾಡಿದ ದುಶ್ಯಾಸನನ ನೆತ್ತರನ್ನು ಹೀರಿ ಬಿಡುವಷ್ಟು ಕ್ರೋಧ ಉಕ್ಕೇರಿತು ಆ ಕ್ಷಣಕ್ಕೆ. ನಾನು ದಾಸಿ, ಆದರೇನಂತೆ? ನನಗೂ ನನ್ನದೇ ಆದ ಸ್ಥಾನ-ಮಾನಗಳು ಇಲ್ಲವೇ? ಹೆಣ್ಣು ಎಂಬ ಕಾರಣಕ್ಕೆ ಈ ರೀತಿಯ ಅವಮಾನ ತರವೇ? ಮಾತೆಯಾಗಿ, ಸಹೋದರಿಯಾಗಿ, ಸತಿಯಾಗಿ, ಮಗಳಾಗಿ ಪುರುಷ ಜೀವನದ ಅವಿಭಾಜ್ಯ ಅಂಗವಾಗಿ ಇರುವವಳು ಹೆಣ್ಣು. ಇಂಥದ್ದರಲ್ಲಿ ಅತ್ತಿಗೆಯಾದ ನನ್ನನ್ನು ಹೀಗೆ ನಡೆಸಿಕೊಳ್ಳುತ್ತಿರುವ ಕೌರವರನ್ನು ಸಿಗಿದು ಬಿಡುವಷ್ಟು ಆಕ್ರೋಶ ನನ್ನೊಳಗೆ ಉದಿಸಿತು. ಕಂಗಳು ಸಭೆಯ ಮಧ್ಯದಲ್ಲಿ ಕುಳಿತ ಪಂಚಪತಿಗಳತ್ತ ಹೊರಳಿತು. ತಗ್ಗಿಸಿದ ತಲೆ ಎತ್ತದೆ ಕುಳಿತವರನ್ನು ಕಾಣುತ್ತಲೇ… ನಾನು ಮಾಡಬೇಕಾದದು ಏನೆಂಬುದು ಹೊಳೆಯಿತು.
ಹೌದು, ಹೆಣ್ಣಾದವಳು ಪತಿಯನ್ನು ಹೀಗೆ ಸಭಾ ಮಧ್ಯದಲ್ಲಿ ಅವಮಾನಿಸುವುದು ತರವಲ್ಲ ಎಂದು ಮನದೊಳಗೆ ತರ್ಕಿಸಿ, ತಕ್ಷಣ ಅಲ್ಲಿದ್ದ ಹಿರಿಯರ ಕಾಲಿಗೆ ಬಿದ್ದೆ. ನ್ಯಾಯ ಬೇಡಿದೆ. ತಪ್ಪು ಸರಿಗಳನ್ನು ಕೇಳಿದೆ. ಆದರೆ, ಅವರು ಆ ಕ್ಷಣಕ್ಕೆ ಅಸಹಾಯಕರಾಗಿ ಕೈಕಟ್ಟಿ ಕುಳಿತು ಮುಂದಿನ ಅಧ್ಯಾಯಕ್ಕೆ ಎಡೆಮಾಡಿಕೊಟ್ಟರು!
ದುಶ್ಯಾಸನ ಸಭೆಯ ಮಧ್ಯದಲ್ಲಿ ಅತ್ತಿಗೆ ಎಂಬುದನ್ನು… ಹೋಗಲಿ, ರಜಸ್ವಲೆಯಾದ ಹೆಣ್ಣು … ಎಂಬುದನ್ನೂ ಲೆಕ್ಕಿಸದೆ ನನ್ನ ಸೆರಗಿಗೆ ಕೈ ಹಾಕಿದಾಗ ಇನ್ನೊಮ್ಮೆ ಪತಿಗಳೆಡೆಗೆ ಆರ್ತಳಾಗಿ ನೋಡಿದೆ. ಭೀಮನ ಕಣ್ಣುಗಳು ಕೆಂಡದುಂಡೆಗಳನ್ನು ಉಗುಳಿದರೂ… ಕೈಗಳು ಮಾತ್ರ ಅಸಹಾಯಕತೆಯಿಂದ ಕಟ್ಟಿ ಕುಳಿತಿದ್ದು ಕಂಡಿತು. ಇವರಾರೂ ನನ್ನನ್ನು ಉಳಿಸಲಾರರು ಎಂಬ ಸತ್ಯ ಆಗ ಗೋಚರಿಸಿತು. ಕೊನೆಗೂ ಅನಾಥ ರಕ್ಷಕ, ಆಪದ್ಬಾಂಧವನಾಗಿ ಶ್ರೀ ಕೃಷ್ಣ ಬಂದೊದಗಿ ನನ್ನ ಮಾನ ಕಾಪಾಡಿದ್ದು ಇಂದಿಗೆ ಗತ ಇತಿಹಾಸ.
“ಅತ್ತಿಗೆ ಎಂಬುದು ಸಾಯಲಿ, ಹೆಣ್ಣು ಎಂಬುದನ್ನೂ ನೋಡದೇ ನನ್ನ ಮುಡಿಗೆ ಕೈ ಇಟ್ಟ ಧೂರ್ತನ ರಕ್ತದಿಂದ ಈ ಮುಡಿಯನ್ನು ತೊಳೆಯದೆ ಇಂದು ಬಿಚ್ಚಿದ ನನ್ನೀ ಮುಡಿಯನ್ನು ಕಟ್ಟಲಾರೆ” ಎಂದು ಅಂದು ಶಪಥಗೈದಿದ್ದೆ. ಹಾಗೆ ಹೇಳುವಾಗ ನನ್ನ ಕಂಗಳು ಭೀಮನೆಡೆಗೆ ನೆಟ್ಟಿದ್ದವು. ಇದನ್ನು ನೆರವೇರಿಸುವ ತಾಕತ್ತು ಆ ಐವರಲ್ಲಿ ಇದ್ದರೆ ಅದು ಭೀಮನಿಗೆ ಮಾತ್ರ… ಎಂಬ ನಿಜದ ಅರಿವೂ ನನಗಿತ್ತು. ನನ್ನ ಎಣಿಕೆಯಂತೆ ಭೀಮ, ನಾನಿತ್ತ ಪ್ರತಿಜ್ಞೆಯನ್ನು ಪೂರೈಸುವುದಾಗಿ ಅಂದೇ, ಆ ತುಂಬಿದ ಸಭೆಯಲ್ಲಿ ಮಾತನ್ನಿತ್ತ.
ಇಂದು ಕುರುಕ್ಷೇತ್ರ ರಣರಂಗದಲ್ಲಿ ನನ್ನ ಶೂರ ಪತಿ ಭೀಮ ನನ್ನ ಅಂದಿನ ಪ್ರತಿಜ್ಞೆಯನ್ನು ಪೂರೈಸಿದ್ದ. ಧೂರ್ತ ದುಶ್ಯಾಸನನ ಎದೆಯನ್ನು ಬಗೆದು ಅವನ ರಕ್ತವನ್ನು ಮೊಗೆ ಮೊಗೆದು ನನ್ನ ಮುಡಿಯನ್ನು ತೊಳೆದ. ದುಷ್ಟ ದುಶ್ಯಾಸನನ ರಕ್ತದಿಂದ ಸ್ನಾನ ಮಾಡಿ ಬಂದ ನನ್ನ ರೌದ್ರ ರೂಪವನ್ನು ಕಂಡು ಸಖಿಯರು ಹಿಮ್ಮೆಟ್ಟಿದ್ದರು. ಮಾತೆ ಕುಂತಿಯ ಕಂಗಳಲಿ ನೋವು ಕಂಡು ಕಾಣದಂತೆ ಸುಳಿದಾಡಿತು.
ತಂಬಿಗೆ ಗಟ್ಟಲೆ ಹಾಲಿನಿಂದ ತೊಳೆದ ಕೇಶದಿಂದ ಈಗ ನೊರೆ ನೊರೆಯಾದ ಬಿಳಿ ಹಾಲು ಬೀಳಲಾರಂಭಿಸಿದೆ. ಅನತಿ ದೂರದಲ್ಲಿ ನಿಂತ ಅರ್ಚಕ ವೃಂದದಿಂದ ಅವ್ಯಾಹತವಾಗಿ ಮಂತ್ರೋಚ್ಛಾರಣೆ ಕೇಳಿಬರುತ್ತದೆ. ಸಖಿಯರು ನನಗಾಗಿ ಸಿದ್ಧಪಡಿಸುತ್ತಿದ್ದ ವಸ್ತ್ರದ ನಿರಿನಿರಿ ಶಬ್ದದ ಜೊತೆ, ಆಭರಣಗಳ ಝಣಝಣವು ಕಿವಿ ತುಂಬಿತು. ಮಾತೆ ಕುಂತಿಯ “ಸಖಿಯರೇ, ಮುಂದೆ ಅರಸಿನ, ಶ್ರೀಗಂಧ, ಚಂದನ, ಪರಿಮಳ ದ್ರವ್ಯಗಳಿಂದ ಅಭ್ಯಂಜನವನ್ನು ಮುಂದುವರಿಸಿ” ಎಂದ ಆಜ್ಞೆಯು ಕಿವಿಗೆ ಬಿತ್ತು.
ಮತ್ತೆ ಮನಸ್ಸು ಮಂಥನದಲ್ಲಿ ತೊಡಗಿತು. ಅಂದು ನಾನು ಹೀಗೊಂದು ಪ್ರತಿಜ್ಞೆಯನ್ನು ಕೈಗೊಳ್ಳದಿದ್ದರೆ.. ಯುಗಯುಗಕ್ಕೂ ಈ ಅವಮಾನದ ಬಿಸಿ ಉಳಿದುಬಿಡುತ್ತಿತ್ತು. ಹೆಣ್ಣು ತನಗಾದ ಅವಮಾನವನ್ನು ಎಲ್ಲಿಯವರೆಗೂ ಪ್ರತಿಭಟಿಸದೆ ಸಹಿಸುತ್ತಾಳೋ… ಅಲ್ಲಿಯವರೆಗೂ ಈ ಪುರುಷ ಅಹಂಕಾರ ಮುರಿಯುವುದಿಲ್ಲ. ನನ್ನ ಮುಡಿಗೆ ಕೈಯಿಡುವ ಧೈರ್ಯ ಮಾಡಿದ ಅಧಮನನ್ನು ಶಿಕ್ಷಿಸದೇ ಬಿಟ್ಟಿದ್ದೆ ಆದರೆ.. ಎಂದಿಗೂ ಶಾಶ್ವತವಾದ ಕಳಂಕ ಒಂದು ನನಗೆ ಅಂಟುತ್ತಿತ್ತು. ಮುಂದೆ ಎಂದೂ ಹೆಣ್ಣುಮಕ್ಕಳು ನನ್ನನ್ನು ಮಾದರಿಯಾಗಿ ಪರಿಗಣಿಸುತ್ತಲೇ ಇರಲಿಲ್ಲ. ಅದಮ್ಯ ಶಕ್ತಿಯ ಚಿಲುಮೆಯಾದ ಹೆಣ್ಣು ಹೀಗೆ ಅವಮಾನವನ್ನು ಸಹಿಸಬೇಕಾದ ಅಗತ್ಯವಾದರೂ ಏನಿದೆ? ಅಂದು ನಾನು ಸಹಿಸಿದ್ದು… ಎದುರಿಗೆ ಪತಿಯರು ಅಸಹಾಯಕರಾಗಿ ಕುಳಿತಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ. ಇಲ್ಲದಿದ್ದರೆ ಅಂದೇ ದುಷ್ಟ ದುಶ್ಯಾಸನ ನನ್ನ ಆಕ್ರೋಶದ ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಿದ್ದ.
ಕೊನೆಗೂ ಹೀಗೊಂದು ಪ್ರತಿಜ್ಞೆಯನ್ನು ಮಾಡದೆ… ಪತಿಯರು ಅಸಹಾಯಕರಾಗಿದ್ದಾರೆ ಎಂದು ನನಗಾದ ಅವಮಾನವನ್ನು ಸಹಿಸಿದ್ದೆ ಆಗಿದ್ದರೆ ಮುಂದಿನ ಯುಗ ಯುಗಗಳಲ್ಲೂ ಹೆಣ್ಣು ತುಳಿತಕ್ಕೆ ಒಳಗಾಗಬೇಕಾಗಿತ್ತು. ಹೆಣ್ಣು ತನ್ನ ಪ್ರತಿಭಟಿಸುವ ಸ್ವಾತಂತ್ರ್ಯವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಿದ್ದಳು. ಇಂದು ಇವರೆಲ್ಲರೂ ನೋಟದಿಂದ ನನ್ನನ್ನು ಇರಿದರೂ… ಮುಂದಿನ ಯುಗಗಳಲ್ಲಿ ಹೆಣ್ಣು ನನ್ನನ್ನೇ ಮಾದರಿಯಾಗಿ ಅನುಸರಿಸಿ, ಅವಮಾನ, ಅತ್ಯಾಚಾರ ಎಸಗಿದವರ ಎದೆ ಬಗೆದು ರಕ್ತ ಕುಡಿಯುವುದು ದಿಟ ಎನ್ನಿಸಿತು.
ಇದುವರೆಗೂ ತಲೆಯ ಮೇಲೆ ಬೀಳುತ್ತಿದ್ದ ಬಗೆಬಗೆಯ ನೀರು ಹೇಗೆ ಕೇಶವನ್ನು ತೊಳೆದು ಶುದ್ಧಗೊಳಿಸಿತೋ… ಹಾಗೆಯೇ ಮನಸ್ಸಿನಲ್ಲಿ ನಡೆಯುತ್ತಿದ್ದ ಈ ಮಂಥನ ಮನದ ಕೊಳೆಯನ್ನು ತೊಳೆದು ಶುಚಿಗೊಳಿಸಿತು. ಇಂದಿನ ನನ್ನ ನಡೆ ಇವರಿಗೆ ಭೀಭತ್ಸ, ಕ್ರೌರ್ಯದ ಪರಾಕಾಷ್ಟೆಯಾಗಿ ಕಂಡರೂ… ಮುಂದಿನ ತಲೆಮಾರಿನ ಹೆಣ್ಣು ತನಗಾಗುವ ಅವಮಾನಕ್ಕೆ ಇದಕ್ಕಿಂತಲೂ ಘನಘೋರ ಪ್ರತಿಕಾರ ಕೈಗೊಳ್ಳಲು ಇದು ದಾರಿದೀಪವಾಗಲಿದೆ ಅನ್ನಿಸಿ ಮನಸ್ಸು ನೆಮ್ಮದಿಯ ನೆಲೆ ಕಂಡಿತು. ಮಾನಸಿಕ ಸಂತೃಪ್ತಿಯಲ್ಲಿ ನಾನು ಮುಂದಿನ ಅಲಂಕಾರಕ್ಕಾಗಿ ಅಂತಃಪುರದೊಳಗೆ ನಿಧಾನವಾಗಿ ಪ್ರವೇಶಿಸಿದೆ.
ಸುಮಾಕಿರಣ್
ದ್ರೌಪದಿಯ ಮನದಾಳದ ಮಾತುಗಳು ನಿಮ್ಮ ಲೇಖನಿಯಲ್ಲಿ ಉತ್ತಮವಾಗಿ ಮೂಡಿಬಂದಿದೆ ಸುಮಾ .
ನಿಮ್ಮಿಂದ ಮತ್ತಷ್ಟು ಇಂತಹ ಸುಂದರ ಲೇಖನಗಳು ಮೂಡಿಬರಲೆಂಬುದೇ ನನ್ನ ಪ್ರೀತಿಯ ಹಾರೈಕೆ.
ಸ್ತ್ರೀ ಸಂವೇದನೆಯ ಕತೆ. ನಿರೂಪಣೆ ಸೊಗಸು.