ಸುಮಾ ಕಿರಣ್ ಲೇಖನ ವಸ್ತುನಿಷ್ಠ ಪಠ್ಯಪುಸ್ತಕ

ವಿಶೇಷ ಲೇಖನ

ವಸ್ತುನಿಷ್ಠ ಪಠ್ಯಪುಸ್ತಕ

ಸುಮಾ ಕಿರಣ್

Siri Kannada Text Book Class 5 Solutions Answers Guide - KSEEB Solutions

ಮಿತ್ರರೇ, ಇನ್ನೇನು ಶಾಲೆ ಪ್ರಾರಂಭವಾಯಿತು.  ಎಲ್ಲೆಡೆ ಶಾಲೆಗಳಲ್ಲಿ ಮಕ್ಕಳ ಕಲರವ ಕೇಳಿ ಬರಲಾರಂಭಿಸಿತು. ಬ್ಯಾಗ್, ಸಮವಸ್ತ್ರ, ವಾಟರ್ ಬಾಟಲ್, ಟಿಫಿನ್ ಕ್ಯಾರಿಯರ್, ಕಂಪಾಕ್ಸ್ ಬಾಕ್ಸ್, ಛತ್ರಿ ಹೀಗೆ ಎಲ್ಲವನ್ನೂ ಹೊಸದಾಗಿ ಖರೀದಿಸಿ ಹೆಗಲಿಗೇರಿಸಿ ಹೊರಟ ಚಿಣ್ಣರ ಮುಖದಲ್ಲಿ ಸಂತೋಷದ ನಗು ಅರಳಿದೆ.  ಮಕ್ಕಳ ಈ ಸಂತೋಷದಲ್ಲಿ ಭಾಗಿಯಾಗಲು ಶಾಲೆಗಳೂ ಹಿಂದೆ ಬಿದ್ದಿಲ್ಲ.  ತಳಿರು-ತೋರಣಗಳಿಂದ ಶಾಲೆಯನ್ನು ಅಲಂಕರಿಸಿ, ಮಕ್ಕಳನ್ನು ಸಂಭ್ರಮದಿಂದ ಅದ್ದೂರಿಯಾಗಿಯೇ ಸ್ವಾಗತಿಸಲು ಶಾಲೆಗಳು ಸಿದ್ಧವಾಗಿ ನಿಂತಿದೆ.

ಇದೆಲ್ಲದರ ನಡುವೆಯೂ ಈಗ ಸುದ್ದಿ ಮಾಡುತ್ತಿರುವುದು ಪಠ್ಯಪುಸ್ತಕದ ಪರಿಷ್ಕರಣೆಯ ವಿಷಯ.  ಈ ಬಾರಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿರುವುದು ಪ್ರಖರ ಹಿಂದುತ್ವವಾದಿ, ಉತ್ತಮ ಬರಹಗಾರ, ಅದ್ವಿತೀಯ ಮಾತುಗಾರ ಶ್ರೀ. ರೋಹಿತ್ ಚಕ್ರತೀರ್ಥ ಅವರು.  ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿರುವ ಇವರು ಹಲವಾರು ಸಂವಾದ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಭಾರತದ ನೈಜ ಇತಿಹಾಸದ ಬಗ್ಗೆ ಬಹಳಷ್ಟು ತಿಳಿದುಕೊಂಡಿರುವುದರ ಜೊತೆಗೆ ದೇಶದ ಬಗ್ಗೆ ಅಪಾರ ಅಭಿಮಾನವನ್ನೂ ಹೊಂದಿರುವ ವ್ಯಕ್ತಿ ರೋಹಿತ್ ಚಕ್ರತೀರ್ಥ.

ಮಿತ್ರರೆ, ಒಂದು ಪಠ್ಯಪುಸ್ತಕ ಹಲವಾರು ಆಯಾಮಗಳನ್ನು ಒಳಗೊಂಡಿರುತ್ತದೆ. ಧರ್ಮನಿರಪೇಕ್ಷತೆ, ಮೌಲ್ಯಾಧಾರಿತ ನೆಲೆಯಲ್ಲಿ ನಿರ್ಣಯ, ಸ್ವತಂತ್ರ ಚಿಂತನೆ, ಐತಿಹಾಸಿಕ ಅವಲೋಕನ, ಪರಿಸರ ಕ್ಷೇಮ, ಸ್ವವಿಮರ್ಶೆ, ರಾಷ್ಟ್ರಪ್ರೇಮ, ನಾಡು-ನುಡಿಯ ಬಗ್ಗೆ ಗೌರವ, ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಗೌರವ, ನೀತಿ ಬೋಧನೆ… ಹೀಗೆ ಹತ್ತು ಹಲವು ಆಯಾಮಗಳನ್ನು ಒಳಗೊಂಡಿರಬೇಕು.  ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಪಠ್ಯ ವಿಷಯವು ಹೆಚ್ಚಿನ ಓದಿಗೆ ಕುತೂಹಲ ಕೆರಳಿಸುವ ಜೊತೆಗೆ ಅವರ ಸೃಜನಶೀಲತೆಯನ್ನು ವೃದ್ಧಿಸುವಂತೆ ಇರಬೇಕು.  ಜೀವನಾವಶ್ಯಕ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಜೊತೆಗೆ ಸಂಕೀರ್ಣ ಸಮಸ್ಯೆಗಳನ್ನು ಅರಿತು ಪರಿಹರಿಸಿಕೊಳ್ಳುವ ಚಾಕಚಕ್ಯತೆಯನ್ನು ಕಲಿಸುವಂತಿರಬೇಕು.

ಪಠ್ಯಪುಸ್ತಕವು ಕೇವಲ ಪರೀಕ್ಷಾ ಕೇಂದ್ರಿತವಾಗಿರದೆ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯನ್ನೂ ಗಮನದಲ್ಲಿಟ್ಟುಕೊಂಡಿರಬೇಕು. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಪಠ್ಯಪುಸ್ತಕವು ಯಾವುದೇ ಪೂರ್ವಗ್ರಹ ಪೀಡಿತವಾಗಿ ಇರಬಾರದು.  ನಿರ್ದಿಷ್ಟ ಜಾತಿ, ಲಿಂಗ, ಜನಾಂಗ, ಧರ್ಮ, ಪಕ್ಷದ ಬೆಂಬಲಿತವಾಗಿ  ತನ್ನ ಮೌಲ್ಯವನ್ನು ಕಳೆದುಕೊಳ್ಳಬಾರದು. ಪಠ್ಯಪುಸ್ತಕವು ಇತಿಹಾಸವನ್ನು ತಿರುಚುವ ಕೆಲಸ ಮಾಡದೇ… ವಸ್ತುನಿಷ್ಠವಾಗಿ ಸತ್ಯವನ್ನು ವಿದ್ಯಾರ್ಥಿಗಳ ಮುಂದಿಟ್ಟು ಮುಂದಿನ ನ್ಯಾಯ ನಿರ್ಣಯವನ್ನು ಅವರಿಗೆ ಬಿಟ್ಟುಕೊಡುವಂತೆ ಇರಬೇಕು.

ಅತಿ ಸಣ್ಣ ವಯಸ್ಸಿನ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪಠ್ಯಪುಸ್ತಕಗಳು ಅಗಾಧವಾದ ಪ್ರಭಾವವನ್ನು ಬೀರುತ್ತದೆ. ಪಠ್ಯ ಪುಸ್ತಕಗಳಲ್ಲಿರುವ ಅನೇಕ ವಿಚಾರಧಾರೆಗಳು ಎಳೆಯ ಮನದ ಮೇಲೆ ಅಚ್ಚೊತ್ತುತ್ತದೆ.  ಮುಂದೆ ಈ ವಿದ್ಯಾರ್ಥಿಗಳು ಬೆಳೆದು ದೊಡ್ಡವರಾದ ಮೇಲೂ ಪಠ್ಯಪುಸ್ತಕಗಳಲ್ಲಿ ಇದ್ದ ಮಾಹಿತಿಗೆ ಪೂರಕವಾಗಿ ಯಾ ತಮ್ಮ ಮನಸ್ಸಿಗೆ ಹಿಡಿಸಿದ ಪಠ್ಯ ವಿಷಯ ಇರುವುದನ್ನೇ ಹುಡುಕುತ್ತಾರೆ ಹಾಗೂ ಹೆಚ್ಚಿನ ಅಧ್ಯಯನ ಮಾಡಬಯಸುತ್ತಾರೆ.  ಹಾಗಾಗಿಯೇ ಪಠ್ಯಪುಸ್ತಕಗಳು ಅಡಗೂಲಜ್ಜಿಯ ಕಥೆಗಳಂತೆಯೇ ಆದರ್ಶ ವ್ಯಕ್ತಿಗಳನ್ನು, ನೈಜ ಇತಿಹಾಸವನ್ನು, ಸಾಮಾಜಿಕ ಹಾಗೂ ಪರಿಸರ ಪ್ರಜ್ಞೆ ಬೆಳೆಸುವಂತಹ, ನೈತಿಕ ಮೌಲ್ಯಗಳನ್ನು ತಿಳಿಸುವ ವಿಚಾರಗಳನ್ನು ಒಳಗೊಂಡಿರಬೇಕು.

ಮಿತ್ರರೇ, ಹಲವಾರು ಬಾರಿ ಈ ಪಠ್ಯ ಪುಸ್ತಕದಲ್ಲಿರುವ ಪಾಠಗಳು ಯಾವುದೋ/ಯಾರದ್ದೋ ಪೂರ್ವಗ್ರಹ ಪೀಡಿತವಾಗಿದ್ದು, ಸತ್ಯಕ್ಕೆ ದೂರವಾಗಿರುತ್ತದೆ.  ಅದನ್ನು ಪಾಠ ಮಾಡುವ ಶಿಕ್ಷಕರು ನೈಜ ವಸ್ತು ವಿಷಯವನ್ನು ಅರಿತಿದ್ದಾಗಲಂತೂ… ತಾನು ತಿಳಿದ ಸತ್ಯವನ್ನು ಹೇಳಲಾಗದೆ, ಅತ್ತ ಅಸತ್ಯ ವಿಷಯಗಳನ್ನು ಬೋಧಿಸದೆಯೇ ಇರಲಾಗದಂತಹ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ.  ಆಗೆಲ್ಲ ಶಿಕ್ಷಕರು ತೀರಾ ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಿಯೇ ಪಾಠವನ್ನು ಮಾಡಬೇಕಾಗಿ ಬರುತ್ತದೆ.

ಇದೀಗ  ರೋಹಿತ್ ಚಕ್ರತೀರ್ಥರಂತಹ ಸಮರ್ಥ ವ್ಯಕ್ತಿಯೊಬ್ಬರು ಪಠ್ಯಪುಸ್ತಕ ರಚನಾ ಸಮಿತಿಯನ್ನು ಮುನ್ನಡೆಸುತ್ತಿರುವುದು ಆನಂದದ ವಿಷಯ. ಇನ್ನಾದರೂ ಸತ್ಯಕ್ಕೆ ದೂರವಾಗಿರುವ, ವ್ಯಕ್ತಿ ನಿಷ್ಠೆಯ ಹಾಗೂ ಪಾಠ ಮಾಡಲು ಅಧ್ಯಾಪಕರಿಗೆ ಮುಜುಗರ ತರುವಂತಹ ವಿಷಯಗಳನ್ನು/ಪಠ್ಯ ಕ್ರಮಗಳನ್ನು ಒಳಗೊಂಡಿರುವ ಪಠ್ಯಪುಸ್ತಕಕ್ಕೆ ಬದಲಾಗಿ ಒಂದು ಆದರ್ಶ ಪಠ್ಯಪುಸ್ತಕ ಅಧ್ಯಾಪಕರ ಕೈ ಸೇರುತ್ತದೆ ಎಂದು ಆಶಿಸೋಣವೇ!?


3 thoughts on “ಸುಮಾ ಕಿರಣ್ ಲೇಖನ ವಸ್ತುನಿಷ್ಠ ಪಠ್ಯಪುಸ್ತಕ

  1. ಉತ್ತಮ ಸಾಂದರ್ಭಿಕ ಲೇಖನ ಸುಮಾ.

    ನಾವು ನಮ್ಮ ಶೈಕ್ಷಣಿಕ ಕಾಲದಲ್ಲಿ ತಿರುಚಿದ ಪಠ್ಯವನ್ನು ಓದಿ… ಅದನ್ನೇ ಸತ್ಯವೆಂದು ನಂಬಿದ್ದೆವು. ಕಾಲ ಬದಲಾಗಿ ಆಧುನಿಕ ತಂತ್ರಜ್ಞಾನದ ಮೂಲಕ ನಾವು ಓದಿದ್ದ ಪಠ್ಯಕ್ರಮಗಳಲ್ಲಿ ಕೆಲವು, ವ್ಯಕ್ತಿನಿಷ್ಠವಾದ ಮತ್ತು ಸತ್ಯಕ್ಕೆ ವಿರುದ್ಧವಾಗಿ ಕೊಡಮಾಡಿದ್ದ ವಿಷಯಗಳೆಂದು ಅರಿತು ವ್ಯಥೆಯಾಯಿತು.

    ಇದುವರೆವಿಗೂ ಬಹಳಷ್ಟು ಸತ್ಯಗಳನ್ನು ಕಂಡುಕೊಂಡಿದ್ದೂ ಉದ್ಯೋಗ ನಿಮಿತ್ತ ಮುಂದೆ ಕುಳಿತ ಮಕ್ಕಳಿಗೆ ತಿರುಚಿದ ಇತಿಹಾಸ ಮತ್ತು ಧರ್ಮ ಸಂಬಂಧಿ ಪಠ್ಯ ಕ್ರಮಗಳನ್ನು ಬೋಧಿಸಬೇಕಾದ ಶಿಕ್ಷಕರ ಸಂಕಟದ ಬಗ್ಗೆ ಹೇಳಿದ್ದು ಸರಿ ಇದೆ.

    ನಿನ್ನಿಂದ ಮತ್ತಷ್ಟು ಇಂತಹ ಉತ್ತಮ ಲೇಖನಗಳು ಮೂಡಿಬರಲೆಂಬುದೇ ನನ್ನ ಪ್ರೀತಿಯ ಹಾರೈಕೆ

    1. ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು

  2. ಸಂಗಾತಿಯ ಸಂಪಾದಕರಿಗೆ ಅನಂತ ಧನ್ಯವಾದಗಳು

Leave a Reply

Back To Top