ಲೇಖನ
ಸಮತಾ ಆರ್.
ಪುಟ್ಟಿ ಎನ್ನೋ ಕೋಳಿ..
ಒಂದು ಮೇ ತಿಂಗಳ ಕೊನೆಯ ವಾರದ ಮಟ ಮಟ ಮಧ್ಯಾಹ್ನ.ಬಿಸಿಲು ಧಗೆ ದಭ ದಭ ಸುರಿಯುತ್ತಿದ್ದರೂ ಪರಿವೇ ಇಲ್ಲದಂತೆ ನಾವು ಏಳೂ ಜನ ಅವ್ವನ ಮನೆ ಎದುರಿನ ಮಾಡಿಮನೆ ರಾಮಣ್ಣವ್ರ ಕೊಟ್ಟಿಗೆಮನೆ ಕಾಂಪೌಂಡ್ ಗೋಡೆ ಹತ್ತಿ ಕುಳಿತು,ಕಾಲು ಇಳಿಬಿಟ್ಟು ಕೊಂಡು,ಅಲ್ಲಾಡಿಸುತ್ತ ಗಹನವಾದ ಚರ್ಚೆಯಲ್ಲಿ ಮುಳುಗಿ ಹೋಗಿದ್ದೆವು.ನಾನು, ನಮ್ಮಣ್ಣ ಮನು,ತಮ್ಮ ಸಂತು ಮತ್ತೆ ಕಸಿನ್ ಗಳಾದ ಶಶಿ,ದೀಪು, ಕಿಶು,ರಂಜಿನಿ ಎಲ್ಲರ ತಲೆಯಲ್ಲಿ ಓಡ್ತಾ ಇದ್ದದ್ದು ಒಂದೇ ಯೋಚನೆ,” ಇವತ್ತೇನು ಆಟ ಆಡೋದು?’
ರಂಜಿನಿ ಹೇಳಿದ್ಲು,”ಪಂಪ್ಸೆಟ್ ಬಾವಿ ಹತ್ರ ಗೋಡು ಮಣ್ಣು ರಾಶಿ ಹಾಕವ್ರೆ,ಹೋಗಿ ಗಣೇಶನ ಮಾಡನ.”ತಕ್ಷಣ ಮನು ಹೇಳಿದ,”ಮಾಡಕ್ ಕೆಲ್ಸಿಲ್ಲ ನಿಂಗೆ, ಹೋದ್ವಾರ ಎತ್ತಿನ ಗಾಡಿ ಮಾಡಿ,ಬಟ್ಟೆ ಮಣ್ಣಾಗಿದ್ದಕ್ಕೆ ಅಮ್ಮ ವಸಿ ಹೊಡಿತಾ, ಬೇಡ ಕಣೇ” ಅಂದ.” ತೋಟಕ್ ಹೋಗಿ ಬೆಟ್ಟುಣಿಸೆ ಹಣ್ಕೀಳನ” ಅನ್ನೋ ಐಡಿಯಾ ಕಿಶುಂದು.”ದೊಡ್ಮಾವುಂಗೆ ಗೊತ್ತಾದ್ರೆ ಅಷ್ಟೇ,ಕಾಲ್ ಮುರಿತದೆ, ರೋಟಿ ಅವುಸಿ ಇಟ್ಟವ್ರೆ, ಬೆಟ್ಟುಣಿಸೆ ಮರದ ಹತ್ರ ಹೊಗೆಸೊಪ್ಪು ಮಡಿ ಮಾಡವ್ರೆ,ತುಳುದು ಹಾಕ್ತಿರ,ಹೋಗ್ಬೇಡಿ ಅಲ್ಗೆ ಅಂತ ಅವ್ವ ಹೇಳದೆ,” ಎಂದೆ ನಾನು. ಇನ್ನು ಮರ ಹತ್ತಿ ಎಳ್ನೀರ್ ಕೀಳದು,ಪರಂಗಿ ಹಣ್ಣು ಉದುರ್ಸೋದು, ಹುಲ್ಲಿನ್ಮೆದೆ ಹತ್ತಿ ಜಾರೋದು,ಪಂಪ್ಸೆಟ್ ಬಾವಿ ಪಕ್ಕದ ದೊಡ್ಡ ತೊಟ್ಟಿಲಿ ಮುಳುಗಿ ಆಡೋದು,ಸೀಗೆ ಮೆಳೆ ಒಳಗೆ ಇದ್ದ ಜೀರಿಗೆ ಮಾವಿನ ಮರಕ್ಕೆ ಕಲ್ಲು ಹೊಡೆಯೋದು,ಹಲಸಿನ ಮರಕ್ಕೆ ಕಟ್ಟಿದ್ದ ಉಯ್ಯಾಲೇಲಿ ತೂಗೋದು,ತೋಟದ ಹಿಂದಿನ ಕೊರಕಲ ನೀರಿನಲ್ಲಿ ನಳ್ಳಿ ಹಿಡಿದು ಸುಟ್ಟು ತಿನ್ನೋದು,ಎಲ್ಲಾ ಐಡಿಯಾಗಳು ಒಂದೋ ಮಾಡಿ ಮಾಡಿ ಬೇಸರವಾಗಿರೋ ಕಾರಣಕ್ಕೋ,ಇಲ್ಲವೇ ದೊಡ್ಡೋರಿಗೆ ಗೊತ್ತಾದ್ರೆ ವದೆ ಸಿಗುತ್ತೇ ಅನ್ನೋ ಕಾರಣಕ್ಕೋ ತಳ್ಳಿ ಹಾಕಲ್ಪಟ್ಟವು.
ಆಗ ಶಶಿಗೆ ಒಂದು ಭಯಂಕರ ಐಡಿಯಾ ಹೊಳಿತು.” ಕೋಳಿ ಹಾರ್ಸೋ ಆಟ ಆಡನ ಕಣ್ರೋ,ನಮ್ಮಮ್ಮ ಹಿತ್ಲಲ್ಲಿ ಮೇಯಕ್ ಬುಟ್ಟದೆ, ಕೋಳಿ ಎತ್ತಿ ಸ್ವಲ್ಪ ಮ್ಯಾಕೆ ಎಸೆದ್ರೆ ಸಾಕು, ವಸಿ ದೂರ ಅವೂ ಹಕ್ಕಿಯಂಗೆ ಹಾರ್ತವೆ,ಯಾರ್ ಕೋಳಿ ದೂರ ಹಾರ್ತದೆ ಅವ್ರು ಗೆದ್ದಂಗೆ” ಅಂದ.ತೊಗೊ ಎಲ್ರಿಗೂ ಸರಿ ಅನ್ಸಿ, ದುಡುಮ್ಮನೆ ಕಾಂಪೌಂಡ್ ಗೋಡೆ ಯಿಂದ ಕೆಳ ನೆಗೆದು ಹಿತ್ತಿಲು ಕಡೆಗೆ ಓಟ ಕಿತ್ತೆವು.
ನಮ್ಮ ಎರಡನೇ ಅತ್ತೆ ಹೆಸ್ರು ಯಶೋದಾ ಆಗಿದ್ರೂ,ಶಶಿಯ ಅಮ್ಮ ಆಗಿದ್ದ ಕಾರಣ ಅವ್ರು ನಮ್ಗೆ ಶಶಿಯತ್ತೆ ಆಗಿದ್ರು. ಮಸ್ತಾಗಿ ಕೋಳಿ ಸಾಕಿದ್ರು. ಅವೋ ಮನೆ ಹಿಂದಿನ ತೋಟದಲ್ಲೇ ಯಾವಾಗ್ಲೂ ಮೇಯ್ಕೊಂಡು,ಸಂಜೆ ಮೇಲೆ ತಾವೇ ತಾವಾಗಿ ಮನೆ ಸೇರಿ, ಕೊಟ್ಟಿಗೆಲಿ ಅವುಕ್ಕೆ ಅಂತ ಕಟ್ಟಿದ್ದ ಬಿದಿರುಗಳ ಹತ್ತಿ ಕೂತ್ಕೊಂಡು ರಾತ್ರಿ ಕಳಿಯೋವು.ಹಿತ್ಲಲ್ಲಿ ಮೆಯೋವಾಗ ಸ್ವಲ್ಪ ಅಟ್ಟಾಡಿಸಿ ಹಿಡುದ್ರೆ ಸಾಕು ಕೈಗೆ ಸಿಗೋವು.
ತೊಗೊ ನಮ್ಮ ಐಡಿಯಾ ಪ್ರಕಾರ ಎಲ್ಲಾ ಹಿತ್ತಲಲ್ಲಿ ಗುಂಪು ಸೇರಿ ನಮ್ಮ ಆಟಕ್ಕೆ ಶುರು ಹಚ್ಕೊಂಡೋ.ಎಲ್ರೂ ಒಂದೊಂದು ಕೋಳಿ ಹಿಡಿದು ಎಷ್ಟು ಸಾಧ್ಯವೋ ಅಷ್ಟು ಶಕ್ತಿ ಮೀರಿ ಮೇಲೆ ಎಸೆಯುವುದು.ಯಾರ ಕೋಳಿ ಹೆಚ್ಚು ದೂರ ಹಾರಿ ಹೋಗುವುದೋ ಅವರು ಗೆದ್ದ ಹಾಗೆ.ಸರಿ ಎಲ್ಲರೂ ಕೋಳಿಗಳ ಅಟ್ಟಾಡಿಸಿ ಹಿಡಿದು,ತಾವು ತಾವು ಹಿಡಿದ ಕೋಳಿಗಳ ತಮ್ಮ ಕೈಲಿ ಎಷ್ಟು ಸಾಧ್ಯವೋ ಅಷ್ಟು ದೂರಕ್ಕೆ ಎಸೆದು ಅವು ಹಾರಿ ಹೋಗುವ ದೂರವನ್ನು ಕಣ್ಣ ಅಳತೆಯಲ್ಲೇ ಗುರುತಿಸಿ ಯಾರ ಕೋಳಿ ಹೆಚ್ಚು ದೂರ ಹಾರಿತು,ಯಾರದು ಮುಂದೆ ಹೋಗ್ಲೆ ಇಲ್ಲ ಅಂತ ಲೆಕ್ಕ ಹಾಕ್ತಾ,ಬೊಬ್ಬೆ ಹಾಕ್ಕೊಂಡು,ಕಿರುಚಿಕೊಂಡು, ಅರಚಿಕೊಂಡು ಹಿತ್ತಲಲ್ಲೆಲ್ಲ ಬೊಬ್ಬೆಯೋ ಬೊಬ್ಬೆ. ಎಲ್ಲರಿಗಿಂತ ಚಿಕ್ಕವನು ನನ್ನ ತಮ್ಮ ಸಂತು.ಪಾಪ ಅವನು ಕೋಳಿ ಹಿಡಿದುಕೊಳ್ಳಲು ಹೋಗೋ ಮೊದಲೇ ಯಾರಾದ್ರೂ ಹೋಗಿ ಅವನು ಗುರಿ ಇಟ್ಟಿದ್ದ ಕೋಳಿ ಇವರೇ ಹಿಡಿದು ಹಾರಿಸಿ ಬಿಡ್ತಿದ್ರು.ಅಂತೂ ಕೊನೆಗೆ ,ಕೊಬ್ಬಿ ಖಂಡ ಖಂಡವಾಗಿದ್ದ,ಮೈ ತೂಕದ ಕಾರಣದಿಂದ ಉಂಟಾಡಿ ಕೊಂಡು ನಡಿತಿದ್ದ, ಓಡಲಾಗದ ಒಂದು ಗಿರಿರಾಜ ಹುಂಜ ಹೆಂಗೋ ಅವನ ಕೈಗೆ ಸಿಕ್ಕಿ ಬಿಟ್ಟಿತು.ತೊಗೊ ಇವನು ಫುಲ್ ಖುಷ್ ಆಗಿ, ಟುಂ ಟುಂ ಆಗಿ ತುಂಬಿಕೊಂಡಿದ್ದ ಆ ಕೋಳಿಯನ್ನ ತನ್ನ ಶಕ್ತಿ ಮೀರಿ ಮೇಲೆತ್ತಿ ಎಸೆದುಬಿಟ್ಟ.ಪಾಪ ಭಾರೀ ತೂಕವಾಗಿದ್ದ ಆ ಗಿರಿರಾಜ,ಹಾರಲಾಗದೆ, ಮೇಲಕ್ಕೆ ಹೋಗಿದ್ದ ರಭಸದಲ್ಲೆ,”ಗುಡ್” ಎಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ನೆಲಕ್ಕೆ ಬಿದ್ದು,ಸ್ವಲ್ಪ ಹೊತ್ತು ವದ್ದಾಡಿ ನಂತರ ನಿಶ್ಚಲವಾಗಿ ನೆಲಕ್ಕೊರಗಿ ಮಲಗಿಬಿಟ್ಟ.ತಕ್ಷಣವೇ ಮಂತ್ರ ಹಾಕಿದ ಹಾಗೆ ನಮ್ಮೆಲ್ಲರ ನಡುವೆ ನಿಶ್ಯಬ್ದ ಆವರಿಸಿಕೊಂಡು ಬಿಟ್ಟಿತು.ಎಲ್ಲರೂ ಕಕರು ಮಕರಾಗಿ ಒಬ್ಬರ ಮುಖ ಒಬ್ಬರು ನೋಡಿಕೊಂಡು ಮುಂದೇನು ಮಾಡಬೇಕೆಂದು ತೋಚದೇ,”ದೊಡ್ಡವರಿಗೆ ಗೊತ್ತಾದ್ರೆ ಏನಪ್ಪಾ ಮಾಡೋದು”ಅಂತ ತಲೆ ಕೆರೆದುಕೊಂಡು ನಿಂತೆವು.ಅಷ್ಟರಲ್ಲಿ ನಮ್ಮ ಬೊಬ್ಬೆ ಕೇಳಿ ಹಿತ್ತಲಿಗೆ ಬಂದ ನಮ್ಮವ್ವ ನೆಲದಲ್ಲಿ ಬಿದ್ದಿದ್ದ ಕೋಳಿ ನೋಡಿ ಕಿಟ್ಟನೆ ಕಿರುಚಿಕೊಂಡೇ ಬಿಡ್ತು.” ಅಯ್ಯೋ ನಿಮ್ ಕುಕ್ಕರ್ಸಾ ಇನ್ಯಾವ್ ಆಟನೂ ಇತ್ತಿಲ್ವ ಮುಕ್ಕುಗೋಳ,ಲೆ ಯಸೋದೀ,ಬಿರ್ನ್ ಬಾ ಇಲ್ಲಿ,ಇವ್ ಮಾಡಿರೋ ಕೆಲ್ಸ ನೋಡು!,ನೀನು ಬೈಲಾಪುರುಕ್ ಬುಟ್ಕೊಂಡಿದ್ದ ಹುಂಜುನ್ನೇ ನೀಗವೆ.ನೋಡು ಎಂಥ ಕೆಲ್ಸ ಮಾಡವೆ! ಪಷ್ಟು ಇಸ್ಕೂಲ್ ತಗುದ್ರೆ ಸಾಕು ಅನ್ನಷ್ಟು ರೋಸು ಹಿಡುಸ್ಬುಟ್ಟೋ.” ಎಂದು ಅಲ್ಲಿಗೆ ಬಂದ ನಮ್ಮ ಶಶಿಯತ್ತೆಗೆ ದೂರು ನೀಡಿದರು.ಬಿದ್ದಿದ್ದ ಕೋಳಿಯ ಎರಡೂ ಕಾಲು ಹಿಡಿದು ಎತ್ತಿ ನೋಡಿ ನಮ್ ಶಶಿಯತ್ತೆ ಅಳೊದೊಂದ್ ಬಾಕಿ.ಸೆರಗು ಬಾಯಿಗೆ ಹಿಡಿದು ” ಅಲ್ಲಾ,ಕುಣಿತಿವಿ ಅಂತಃ ಹಿಂಗೂ ಕುಣಿತರ! ಐದಾರು ಕೆಜಿಯಾದ್ರೂಮಾವ್ಸ ಬರೋದು,ಹಿಂಗಾಯ್ತಲ.” ಅಂತ ಕೊರಗುತ್ತಾ ನಿಂತ್ರು.ಹಿತ್ತಿಲ ಈ ಬೊಬ್ಬೆ ಕೇಳಿ ಉಳಿದ ಅತ್ತೆ ,ನಮ್ಮಮ್ಮ , ಚಿಕ್ಕಮ್ಮ ಎಲ್ಲಾ ಹಿತ್ತಲಿಗೆ ನುಗ್ಗಿ ಬಂದರು.ಅವರ ಹತ್ರ ಇನ್ನೊಂದಿಷ್ಟು ಕೋಳಿ ಸತ್ತ ಕಥೆ ಹೇಳಿ ನಮ್ಮ ಗಿಲ್ಟ್ ಇನ್ನೂ ಹೆಚ್ಚಾಗುವ ಹಾಗೆ ಮಾಡಿದ್ರು.
“ಅಯ್ಯೋ,ಇವತ್ತು ನನ್ ಕಥೆ ಮುಗೀತು ಕಣೆ,ಅಮ್ಮ ಚಚ್ಚಿ ಹಾಕುತ್ತೆ,” ಅಂತ ಪಿಸುಗುಟ್ಟಿದ ಸಂತು ದುಸುಗರೆಯಲು ಪ್ರಾರಂಭಿಸಿದ.”ಇನ್ನೇನ್ ಮಾಡೋಕಾಯ್ತದೆ ಬುಡು,ಹೊಡುದ್ರೆ ಒಂದೇಟು ಅಲ್ವಾ, ” ಅಂದುಕೊಂಡು ನಾವೆಲ್ಲ ಮಕ್ಳು ಸುಮ್ಮನಾದೋ.
ಅಷ್ಟರಲ್ಲಿ ಎಲ್ಲಿದ್ರೋ ನಮ್ಮ ಮಾವ,ದೇವರಂಗೆ ಅಲ್ಲಿಗೆ ಬಂದ್ರು.ಕೋಳಿ ಹಿಡಿದು ನೋಡಿ,ಆಗಿದ್ದೆಲ್ಲ ವಿಚಾರಿಸಿದ ಬಳಿಕ,” ಅಲ್ಲ ಕಣ್ರೋ ಅಷ್ಟೂ ಬುದ್ದಿ ಬೇಡ್ವಾ ನಿಮ್ಗೆಲ್ಲಾ,ಕೋಳಿ ಸತ್ತಿಲ್ಲ,ಪ್ರಜ್ಞೆ ಇಲ್ಲ ಅಷ್ಟೇ,ಇನ್ನೂ ಮೈ ಬೆಚ್ಚಗಿರೋ ಹಂಗೇ ಕೂದಾಕಿ ಸಾರ್ ಮಾಡಿ,ಅದು ಬುಟ್ ಬುಟ್ಟು ನ್ಯಾಯ ಪಂಚಾಯ್ತಿ ಮಾಡ್ಕೊಂಡ್ ನಿಂತಿದಿರಲ!” ಎಂದಾಗ ,”ಅಪ್ಪ,ಸದ್ಯ ಬದುಕ್ದೋ,”ಅಂದುಕೊಂಡು ಹೈಕ್ಳೆಲ್ಲಾ ಅಲ್ಲಿಂದ ಓಟ ಹೊಡ್ದೋ.ಅಂತೂ ಕೊಂದ ಪಾಪವನ್ನು ಆ ರಾತ್ರಿ ,ಗಿರಿರಾಜ ಕೋಳಿ ಸಾರು,ಒತ್ತು ಶಾವಿಗೆ ತಿಂದು ಪರಿಹರಿಸಿಕೊಂಡೆವು.
ಆದ್ರೆ ನಮ್ಮತ್ತೆಗೆ ಮಾತ್ರ ಕೋಳಿ ಕಳಕೊಂಡ ದುಕ್ಕ ಕಮ್ಮಿಯೇ ಆಗಿರ್ಲಿಲ್ಲ. ಆ ಗಿರಿರಾಜ ಕೋಳಿ ಇಡೀ ಕೋಳಿ ಹಿಂಡಿಗೇ ರಾಜನಂಗಿತ್ತು. ಅಲ್ಲದೇ ಹರಕೆ ಕೋಳಿ ಬೇರೆ. “ಮತ್ತೆ ಇನ್ನೊಂದ್ ಗಿರಿರಾಜ ಕೋಳಿಮರಿ ತಕ್ಕೊಂಡು ಸಾಕಿದ್ರಾಯ್ತು ಬುಡು,”ಅಂದ್ಕೊಂಡು ಹೆಂಗೋ ಸಮಾಧಾನ ತಂದ್ಕೊಂಡ್ರು.
ಗಿರಿರಾಜ ಕೋಳಿಗಳನ್ನು ಆಗ ಸ್ವಲ್ಪ ವರ್ಷಗಳ ಹಿಂದೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದವರು ಅಭಿವೃದ್ಧಿ ಪಡಿಸಿದ್ದರು.ನಾಟಿ ಕೋಳಿಗಳು ಮತ್ತು ಕಾಡುಕೋಳಿಗಳ ನಡುವಿನ ಕ್ರಾಸ್ ಅವು ಅಂತ ನಮ್ಮ ಮಾವ ಹೇಳೋರು.ಮಾಮೂಲಿ ನಾಟಿ ಕೋಳಿಗಳಿಗಿಂತ ಹೆಚ್ಚು ತೂಕ,ರೋಗ ನಿರೋಧಕ ಶಕ್ತಿ ಹೊಂದಿದ್ದು,ಎಲ್ಲಾ ಹವಾಮಾನಕ್ಕೆ ಸುಲಭವಾಗಿ ಹೊಂದಿಕೊಳ್ಳುವ ಗುಣ ಹೊಂದಿದ್ದ ಅವು ಬಹಳ ಬೇಗನೆ ರೈತರಲ್ಲಿ ಜನಪ್ರಿಯವಾಗಿ ಬಿಟ್ಟವು.ಎಷ್ಟೊಂದು ಮನೆಗಳಲ್ಲಿ ನಾಟಿ ಕೋಳಿಗಳ ಗುಂಪಿನ ನಡುವೆ ಉಳಿದವುಗಳಿಗಿಂತ ಚೆನ್ನಾಗಿ ಕೊಬ್ಬಿ ಬೆಳೆದಿರುತ್ತಿದ್ದ ಗಿರಿರಾಜಗಳು ಹಳ್ಳಿ ಸಂತೆಗೆ ಟೂರ್ ಬಂದಿದ್ದ ಫಾರಿನ್ ಪ್ರವಾಸಿಗರಂಗೆ ಎದ್ದು ಕಾಣೋವು.ಗಿರಿರಾಜ ಮರಿಗಳನ್ನು ಒಂದು ದೊಡ್ಡ ದುಂಡನೆಯ ,ಪರದೆ ಹೊದ್ದಿಸಿದ್ದ ಬುಟ್ಟಿಯಲ್ಲಿ ಇಟ್ಟುಕೊಂಡು,ತಲೆ ಮೇಲೆ ಹೊತ್ಕೊಂಡು”ಕ್ಕೋಳಿ ಮರೀ,”ಅಂತ ವಿಚಿತ್ರವಾಗಿ ಕೂಕ್ಕೊಂಡು ಒಬ್ಬ ಬೀದಿ ಬೀದಿ ಮೇಲೆ ಮಾರ್ಕೊಂಡು ಬರೋನು.ಅವನ ಬಳಿಯೇ ಮತ್ತೆ ಶಶಿಯತ್ತೆ ಇನ್ನೊಂದು ನಾಲ್ಕು ಕೋಳಿ ಮರಿಗಳ ತಕ್ಕೊಂಡು ಸಾಕಲು ಬುಟ್ಕೊಳ್ತು.
ಇದು ಆಗಿದ್ದು ಒಂದು ಬೇಸಿಗೆಯ ರಜೆಯಲ್ಲಿ ಅಮ್ಮನ ಜೊತೆಯಲ್ಲಿ ನಾವು ಮೂವರೂ, ನಮ್ಮೂರು ಅಂದ್ರೆ ನಮ್ಮಮ್ಮನ ತಾಯಿ, ನಮ್ಮವ್ವನ ಊರು ಸಾಲಿಗ್ರಾಮಕ್ಕೆ ಹೋಗಿದ್ದಾಗ.ನಾವು ಮೂವರೂ ಪ್ರಾಥಮಿಕ,ಮಾಧ್ಯಮಿಕ ಹಂತದ ಬೇರೆ ಬೇರೆ ತರಗತಿಗಳಲ್ಲಿ ಇದ್ದ ವರ್ಷವದು. ಆಗೆಲ್ಲಾ ಫಲಿತಾಂಶದ ದಿನಕ್ಕೂ ಕಾಯದೆ ಪರೀಕ್ಷೆ ಮುಗಿದ ಮಾರನೆಯ ದಿನವೇ ಊರಿಗೆ ಬಸ್ಸು ಹತ್ತೋದೇ ಸರಿ.ಮಾರ್ಚ್ ಮೂವತ್ತಕ್ಕೆ ಊರಿಗೆ ಹೋದ್ರೆ ಬರ್ತಾ ಇದ್ದದ್ದೇ ಜೂನ್ ಮೊದಲ ವಾರದಲ್ಲಿ. ಪ್ರತೀ ವರ್ಷ ನಾವು ಮೂವರೂ ಶಾಲೆ ಶುರುವಾಗಿ ನಾಲ್ಕೈದು ದಿನವಾದ ಬಳಿಕವೇ ಹೋಗಿರೋದು. ಜೂನ್ ಒಂದಕ್ಕೇ ಶಾಲೆಗೆ ಯಾವ ವರ್ಷವೂ ಹೋದವರೇ ಅಲ್ಲ.ದಸರ ರಜೆಯನ್ನು ಈಗೀಗ ವರ್ಷದಿಂದ ವರ್ಷಕ್ಕೆ ಕಡಿತಗೊಳಿಸುತ್ತಲೇ ಬರುತ್ತಿದ್ದಾರೆ.ಆದರೆ ಆಗಂತೂ ದಸರಾ ರಜೆ ಅಂದ್ರೆ ಅಕ್ಟೋಬರ್ ಒಂದಕ್ಕೆಊರ ಬಸ್ ಹತ್ತಿದರೆ ತಿರುಗಿ ಬರ್ತಾ ಇದ್ದದ್ದು ನವಂಬರ್ ಒಂದಕ್ಕೇನೆ.
ಆ ರೀತಿಯಾಗಿ ಊರಿಗೆ ಹೋಗಲು ನಾವು ಮುಗಿ ಬೀಳುತ್ತಿದ್ದದ್ದಕ್ಕೆ ಕಾರಣಗಳು ಒಂದೇ ಎರಡೇ!ನಮ್ಮವ್ವನ ಮನೆ ಊರಿನ ಕೊನೆಯಂಚಲ್ಲಿ ತೆಂಗಿನ ತೋಟದ ಒಳಗೆ ಇತ್ತು.ಮನೆಯ ಹಿಂದಿನ ಭಾಗವಾದ ಕೊಟ್ಟಿಗೆ ಮನೆಯ ಬಾಗಿಲು ತೆರೆದರೆ ಸೀದಾ ತೋಟದ ಒಳಗೇ ನುಗ್ಗ ಬಹುದಿತ್ತು.ಊರಲ್ಲಿದ್ದಷ್ಟೂ ದಿನಗಳು ಬೆಳಿಗ್ಗೆ ಎದ್ದು,ಸ್ನಾನ,ತಿಂಡಿ ಎಲ್ಲಾ ಮುಗಿಸಿ ತೋಟದೊಳಗೆ ನುಗ್ಗುವುದೇ ನಾವು ಮಾಡ್ತಾ ಇದ್ದ ಮೊದಲ ಕೆಲಸ . ನಮ್ಮ ಜೊತೆಗೆ ಚಿಕ್ಕಮ್ಮಂದಿರ,ಮಾವಂದಿರ ಒಂದು ಹಿಂಡು ಮಕ್ಳು ಕೂಡ ಸೇರ್ಕೊತಿದ್ದೋ.ತೋಟದೊಳಗೆ ನುಗ್ಗಿ ಮರಗಳ ಮರೆಯಲ್ಲಿ ಕಳೆದು ಹೋಗಿ,ಇಡೀ ದಿನ ನಾವು ಆಡಿದ್ದೇ ಆಟ,ಕುಣಿದಿದ್ದೆ ಕುಣಿತ. ” ರಜ ಅಲ್ವಾ,ಹೈಕ್ಳು ಆಡ್ಕೊಳ್ಳಿ ಬುಡಿ,” ಅಂತ ಅವ್ವನೂ ತಮ್ಮ ಮಕ್ಕಳಿಗೆ ಹೇಳ್ಕೊಂಡು ನಮಗೆ ಹೇಳೋರು ಕೇಳೋರು ಯಾರೂ ಇರದ ಸ್ವಾತಂತ್ರ್ಯ.
ಇವುಗಳ ಜೊತೆಗೆ ಇದ್ದ ಇನ್ನೊಂದು ಆಕರ್ಷಣೆ ಎಂದರೆ ಕೊಟ್ಟಿಗೆಯಲ್ಲಿ ತುಂಬಿರುತ್ತಿದ್ದ ಸಾಕು ಪ್ರಾಣಿಗಳು.ಹಸು,ಎಮ್ಮೆ,ಆಡು,ಕುರಿ,ಕೋಳಿ,ಬಾತು ಕೋಳಿ,ನಾಯಿ, ಬೆಕ್ಕು ಎಲ್ಲವೂ ನಮ್ಮ ಕಣ್ಣಿಗೆ ಚಂದವೇ.ಅತ್ತೆ ಇಲ್ಲ ಮಾವ ಹಾಲು ಕರಿವಾಗ ಹೋಗಿ ನಾವೂ ಕೆಚ್ಚಲಿಗೆ ಕೈ ಹಾಕಿ ಜಗ್ಗುವುದು. ಮಾವಂದಿರು ಹೊಲ ಉಳುವಾಗ ಹಲಗೆ ಹೊಡಿತಿದ್ರೆ ಅದರ ಮೇಲೆ ನಿಂತುಕೊಂಡು ಸಾಗುವುದು,ಕೋಳಿಗಳನ್ನು ಅಟ್ಟಾಡಿಸಿ ಕೊಂಡು ಹಿಡಿಯಲು ಹೋಗುವುದು,ಮೊಟ್ಟೆ ಕೋಳಿ ಎಲ್ಲಿ ಮೊಟ್ಟೆ ಇಟ್ಟಿದೆ ಎಂದು ಹುಡುಕುವುದು.ಕೋಳಿ ಮರಿ ಮಾಡಿದಾಗ ಆ ಹೂ ಮರಿಗಳನ್ನು ಕೈಲಿ ಹಿಡಿದು ಮುದ್ದಿಸುವುದು.ಎತ್ತಿನ ಗಾಡಿ ಹತ್ತಿ, ಇಲ್ಲವೇ ಕಾಲ್ನಡಿಗೆಯಲ್ಲೇ ಸುತ್ತ ಮುತ್ತಲ ಹಳ್ಳಿಗಳಲ್ಲಿದ್ದ ನೆಂಟರ ಮನೆಗೆ ಇಲ್ಲವೇ ಪಿಚ್ಚರ್ ಗೆ ಹೋಗೋದು,ಇದೆಲ್ಲದರ ಸುಖ ಹೇಗೆ ಹೇಳಲಿ?
ಊರಲ್ಲಿ ಹೀಗೆ ಗೊತ್ತು ಗುರಿ ಇಲ್ಲದಂತೆ,ಗದ್ದೆ ತೋಟ ಅಲೆದು,ಬೀದಿ ಬೀದಿ ಸುತ್ತಿ,ಹೊಳೆ, ಕೆರೆ,ಬಾವಿಯಲ್ಲಿ ಮುಳುಗಿ ಮಜವಾಗಿರುತ್ತಿದ್ದ ನಮಗೆ,ಮರಳಿ ಭದ್ರಾವತಿಗೆ ಹೋಗೋದು ಅಂದ್ರೆ ಸಂಕಟವೋ ಸಂಕಟ. ಆದ್ರೂ ಶಾಲೆಗೆ ಹೋಗಲೇಬೇಕಿತ್ತಲ್ಲ.”ಅಮ್ಮ ಇನ್ನೊಂದ್ ದಿನ ಇರನ,ಇನ್ನೊಂದ್ ದಿನ ಇರನ,”ಅನ್ನುತ್ತಾ ಜೂನ್ ನಲ್ಲಿ ಎರಡು ಮೂರನೇ ತಾರೀಕು ಕಳೆದ ಮೇಲೆಯೇ ಮನಸ್ಸಿಲ್ಲದ ಮನಸ್ಸಲ್ಲಿ ಭದ್ರಾವತಿಗೆ ಹಿಂದಿರುಗುತ್ತಿದ್ದೆವು.ಒಂದು ವರ್ಷವಾದರೂ ಜೂನ್ ಒಂದನೇ ತಾರೀಕಿಗೇ ಶಾಲೆಗೆ ನಾವು ಹೋದವರೇ ಅಲ್ಲ.
ಮರಳಿ ಬಂದರೂ ಊರಿನ ಕನವರಿಕೆಯೆ.ಶಾಲೆಯಿಂದ ಬಂದ ಮೇಲೆ ಅಮ್ಮ ಏನಾದ್ರೂ” ಊರಿಂದ ಕಾಗದ ಬಂದಿದೆ,” ಅಂದ್ರೆ ಖುಷಿಯೋ ಖುಷಿ.ಮನೆ ಎದುರಿಗಿದ್ದ ಚಿಕ್ಕ ಅಂಗಳದಲ್ಲೇ ನಾಲ್ಕೈದು ಗಿಡ,ಮರ ಹಾಕ್ಕೊಂಡು, ಬೆಳೆಸ್ಕೊಂಡು ಊರಿನ ಒಂದು ಸಣ್ಣ ತುಣುಕನ್ನು ನಮ್ಮ ಮನೆಯಲ್ಲೂ ನೋಡುವ ಆಸೆ ನಮ್ಮದು.ಊರಿನ ಹಾಗೆ ಹಸು,ಕರು,ಎಮ್ಮೆ,ಕೋಳಿ,ಕುರಿ ಸಾಕನ ಅಂದ್ರೆ ಜಾಗ ಎಲ್ಲಿ ಇತ್ತು? ಹಾಗೇ ಯಾವಾಗಲೂ ಊರನ್ನು ಕನವರಿಸಿ ಕೊಂಡು,ರಜೆ ಬರುವುದನ್ನು ಕಾಯುತ್ತಾ ಮತ್ತೆ ನಮ್ಮ ಶಾಲಾ ಜೀವನಕ್ಕೆ ಹೊಂದಿಕೊಂಡು ಹೋಗುತ್ತಿದ್ದೊ.
ಊರಿಂದ ಬಂದ ಬಳಿಕ ಒಂದು ಭಾನುವಾರದ ಮಧ್ಯಾಹ್ನ ನಾವೆಲ್ಲಾ ಟಿವಿಯಲ್ಲಿ ಬರುತ್ತಿದ್ದ ಯಾವುದೋ ಪಿಚ್ಚರ್ ನೋಡಿಕೊಂಡು ಕೂತಿದ್ದೋ.ನಮ್ಮ ಟಿವಿ ಆಕರ್ಷಣೆ ಮೀರಿ ರಸ್ತೆಯಲ್ಲಿ,”ಕ್ಕೋಳಿ ಮರಿ,” ಎಂದು ಕೂಗಿಕೊಂಡು ಹೋಗುವುದು ಕೇಳಿಸಿತು.ತಕ್ಷಣ ಓಡಿ ಹೋಗಿ ನೋಡಿದರೆ ಊರಲ್ಲಿ ಮಾರ್ತ ಇದ್ದ ಹಾಗೆಯೇ, ಅದೇ ರೀತಿಯ ಬುಟ್ಟಿಯಲ್ಲಿ ಕೊಳಿಮರಿಗಳನ್ನು ಹೊತ್ತುಕೊಂಡು ಒಬ್ಬ ಮಾರುತ್ತಾ ಹೋಗ್ತಾವ್ನೆ! ತೊಗೊ ಮತ್ತೆ ಮನೆಯೊಳಗೆ ನುಗ್ಗಿ ಅಮ್ಮನನ್ನು ಪೀಡಿಸಲು ಶುರು.” ಅಮ್ಮ ಒಂದ್ ಕೋಳಿ ಮರಿಯಾದ್ರು ಕೊಡ್ಸೂ, ನಾವೂ ಊರಂಗೆ ಸಾಕನ,”ಅಂತ ಪೇರಾಕೊಂಡೆವು.ಅಮ್ಮ,”ಬೇಡಾ ಕಣ್ರೋ,ನಮ್ಮನೆ ಕೋಳಿ ಸಾಕಕ್ಕೆ ಜಾಗ ಎಲ್ಲಿದೆ,ಎಲ್ಲಿ ಕವುಚಿ ಹಾಕೋದು? ಮೇಯಕೆ ಎಲ್ಲಿ ಬಿಡೋದು, ಬೇಡ” ಅಂತ ನಿರಾಕರಿಸಿ ಬಿಟ್ಟಿತು.ನಾವು ಬಿಟ್ಟರೆ ತಾನೇ.” ಬಚ್ಚಲು ಮನೇಲಿ ಕವುಚ್ಹಾಕಿದ್ರಾಯ್ತು. ಮೇಯಕೆ ಯಾಕೆ ಬಿಡೋದು,ಕೈ ಮೇವು ಕೊಟ್ಟು ಸಾಕನ,ಒಂದೇ ಒಂದು ಸಾಕು, ಕೊಡ್ಸೂ,” ಅಂತ ಗೋಳಾಕ್ಕೊಂಡು ಅಮ್ಮನನ್ನು ಎಳ್ಕೊಂಡು ಕೋಳಿ ಮಾರೋನ ಹತ್ರ ಕರ್ಕೊಂಡು ಹೋದೋ.
ಅಲ್ಲಿ ನೋಡಿದರೆ ಬರೀ ಗಿರಿರಾಜ ಮರಿಗಳಲ್ಲದೆ,ಕೆಂಪು,ಹಸಿರು,ಹಳದಿ,ನೀಲಿ ಅಂತೆಲ್ಲ ಬಣ್ಣ ಹಚ್ಚಿ ಮಾರಲು ತಂದಿದ್ದ ಬ್ರಾಯ್ಲರ್ ಕೋಳಿಮರಿಗಳು ಕೂಡ ಇದ್ದವು.ನಮ್ಮ ಕಣ್ಣಿಗೆ ಅವೇ ಚಂದ ಕಾಣಲು ತೊಡಗಿ,” ಅಮ್ಮ,ಎಲ್ಲಾ ಬಣ್ಣದ್ದು ಒಂದೊಂದು ತಕ್ಕಳನ,” ಅಂತ ಹೇಳಿದ್ದಕ್ಕೆ ಅಮ್ಮ,” ಅವು ಬಲು ನಾಜೂಕು, ಔಷ್ದಿ ಹಾಕ್ಕೊಂಡ್ ಸಾಕ್ಬೇಕು,ಇಲ್ದಿದ್ರೆ ಬೇಗ ಸತ್ತ್ಹೊಯ್ತವೆ.ಗಿರಿ ರಾಜ ಮರಿಗಳೇ ಗಟ್ಟಿ ಅವುನ್ನೇ ತೊಗೊಳ್ಳಿ,”ಎಂದು ಹೇಳಿತು.ನಂತರ ನಮ್ಮ ಕಣ್ಣಿಗೆ ಬಣ್ಣ ಬಣ್ಣವಾಗಿ ಚಂದ ಕಂಡ ನಾಲ್ಕು ಮರಿಗಳ ಕೊಂಡು ಕೊಂಡೋ.
ಮರಿಗಳು ಮನೆಗೆ ಬಂದ ಮೇಲೆ ಅವುಗಳ ಒಟ್ಟಿಗೆ ಆಟದ ಸಡಗರವೋ ಸಡಗರ.ಅಕ್ಕಿ,ರಾಗಿ , ಗೋಧಿ,ಎಲ್ಲಾ ಕೈಯಲ್ಲಿ ಹಿಡಿದು ತಿನ್ನಿಸಿದ್ದೇ ತಿನ್ನಿಸಿದ್ದು.ಅಡುಗೆ ಮನೆಯಲ್ಲಿದ್ದ ಸೊಪ್ಪು ತರಕಾರಿ ಯಾವುದಕ್ಕೂ ಉಳಿಗಾಲವಿರದಂತೆ ತಂದು ಸಣ್ಣ ಸಣ್ಣ ತುಂಡು ಮಾಡಿ ಮರಿಗಳಿಗೆ ಹಾಕಿದ್ದೇ ಹಾಕಿದ್ದು.”ಜಾಸ್ತಿ ತಿನ್ನುಸ್ಬೇಡಿ,ಉಚ್ಕೊತವೇ” ಅಂತ ನಮ್ಮಜ್ಜಿ ಹೇಳಿದ್ರೂ ಕೇಳ್ದೆ ತಿನ್ನಿಸ್ದೋ.
ಮಾರನೇ ದಿನ ಶಾಲೆಗೆ ಹೋಗುವ ಮುನ್ನ ಅಮ್ಮ,ಅಜ್ಜಿಗೆ ನಾವು “ಚೆನ್ನಾಗಿ ನೋಡ್ಕೊಳಿ ಮರಿಗಳ,” ಅನ್ನುವಾಗ ಅವರಿಬ್ಬರಿಗೂ ನಗು,”ಆರ್ ಹೆತ್ತೋಳಿಗೆ ಮೂರ್ ಹೆತ್ತೋಳು ಬುದ್ಧಿ ಹೇಳಿಧ್ಲಂತೆ,ಸುಮ್ನೆ ಹೋಗ್ರೋ,ಯಾರೂ ಸಾಕದ ಕೋಳಿ ಸಾಕ್ತಿರ!,”ಅಂತ ನಕ್ಕು ನಮ್ಮನ್ನು ಶಾಲೆಗೆ ಓಡಿಸಿದರು.
ಕೋಳಿ ಮರಿಗಳ ಮನೆಯೊಳಗೆ,ಮುಂದಿನ ಅಂಗಳ,ಹಿಂದಿನ ಹಿತ್ಲಲ್ಲೆ ಬಿಟ್ಟುಕೊಂಡು,ರಾತ್ರೆ ಬಚ್ಚಲು ಮನೆಯಲ್ಲಿ ಒಂದು ಬಿದಿರಿನ ಕುಕ್ಕೆಯಲ್ಲಿ ಕವುಚಿ ಹಾಕಿ ಸಾಕಲು ಶುರು ಮಾಡಿದೋ.
ಹೀಗೆ ಒಂದು ವಾರ ಕಳೆದ ಬಳಿಕ ಶಾಲೆಯಿಂದ ಬಂದಾಗ ಒಂದು ಆಘಾತಕಾರಿ ಸುದ್ದಿ ಕಾದಿತ್ತು.ಒಂದು ಮರಿಯನ್ನ ,ಅದು ಅಂಗಳದಲ್ಲಿ ಆಡುತ್ತಿರುವಾಗ ಗಿಡುಗ ವೊಂದು ಕಚ್ಚಿಕೊಂಡು ಹೋಗಿ ಬಿಟ್ಟಿತ್ತು! ತೊಗೊ ಅಮ್ಮ,ಅಜ್ಜಿಗೆ ಸರಿಯಾಗಿ ಕ್ಲಾಸ್ ತಗೊಂಡೋ.ಪಾಪ ಅವರು ತಾನೇ ಏನ್ಮಾಡ್ತರೆ.ಮನೆ ಕೆಲಸ ಬಿಟ್ಟು ಕೋಳಿ ನೋಡ್ಕೊಂಡು ಇರಕ್ಕೆ ಆಗುತ್ತಾ?.ಅಂತೂ ಒಂದು ವಾರದೊಳಗೆ ಉಳಿದ ಮೂರರಲ್ಲಿ ಎರಡನ್ನು,ಎದುರು ರಸ್ತೆಯ ನಾಯಿ,ಪಕ್ಕದ ಮನೆ ಬೆಕ್ಕು ಕಚ್ಕೊಂಡ್ಹೋಗಿ ತಿನ್ಕೊಂಡೋ.ಉಳಿದಿದ್ದು ಒಂದೇ ಮರಿ.
ಇಷ್ಟರಲ್ಲಿ ಕೋಳಿ ಜೋಪಾನ ಮಾಡೋದು ಅಮ್ಮ ,ಅಜ್ಜಿ ಕಲ್ತುಕೊಂಡು ಬಿಟ್ಟಿದ್ರು. ಮನೆಯೊಳಗೇ ಬಿಟ್ಕೊಂಡು,ಅಂಗಳ, ಹಿತ್ಲಲ್ಲಿ ಆಡುವಾಗ ಕಾಯ್ಕೊಂಡು ನಿಗಾ ಮಾಡಿದ್ರು. ಶಾಲೆಯಿಂದ ಬಂದ ಮೇಲೆ ಕೋಳಿಮರಿ ಜೊತೆ ನಮ್ಮ ಆಟ. ಅದಕ್ಕೆ ಪುಟ್ಟಿ ಅಂತ ನಾಮಕರಣವೂ ಆಯ್ತು.
ಪುಟ್ಟಿಗೆ ಆರೈಕೆ ಹೆಚ್ಚಾಗಿ,ಚೆನ್ನಾಗಿ ಟುಂ ಟುಂ ಆಗಿ, ಖಂಡ ಖಂಡ ಬೆಳೆಸಿಕೊಂಡು ದುಮ್ಮು ದುಮ್ಮಗೆ ಬೆಳೀತು. ಬೆಳಿತ ಬೆಳಿತ ಒಂದು ಚಿಕ್ಕ ಕುರಿ ಮರಿ ಗಾತ್ರಕ್ಕೆ ಬೆಳೆದು ಬಿದ್ದುಹೋಯ್ತು.ನಮಗೆಲ್ಲಾ ಅದನ್ನು ಕಂಡ್ರೆ ಮುದ್ದು ಅಂದ್ರೇ ಮುದ್ದು.””ಪುಟ್ಟಿ, ಪುಟ್ಟಿ, ಪುಟ್ಟಿ ” ಅಂತ ಕರೆದ್ರೆ ಸಾಕು,ಎಲ್ಲಿದ್ದರೂ ಪುಟು ಪುಟು ಪುಟು ಅಂತ ಓಡಿ ಬಂದು ಮಡಿಲಲ್ಲಿ ಕೂರೋದು. ಮನುಷ್ಯರಿರಲಿ,ನಾಯಿ ಬೆಕ್ಕು ಭಯನೂ ಅದಕ್ಕಿರಲಿಲ್ಲ.ಈಗ ಅದೇ ಆರಾಮಾಗಿ ಹಿತ್ತಿಲ ಕಡೆ ಹೋಗಿ ಸುತ್ತಿಕೊಂಡು,ಅಲ್ಲಿ ಇಲ್ಲಿ ಸಾಕಿದ್ದ ಕೋಳಿಗಳ ಜೊತೆ ಆಡಿಕೊಂಡು ಸಂಜೆ ಮುನ್ನ ಮನೆ ಸೇರ್ಕ್ಕೊತ್ತಿತ್ತು.
ಒಂದು ದಿನ ಅದು ಯಾಕೋ,”ಕ್ಕಕ್ ಕ್ಕಕ್ ಕ್ಕಕ್,” ಅಂತ ಪರದಾಡಿಕೊಂಡು ಓಡಾಡುತ್ತಿದ್ದಾಗ ಅಜ್ಜಿ” ಕೋಳಿ ಮೊಟ್ಟೆಗೆ ಬಂದದೆ ಅಂತ ಕಾಣ್ತದೆ,ಕವುಚಿ ” ಅಂತು.ನಮಗೆಲ್ಲಾ ಹಿಗ್ಗೋ ಹಿಗ್ಗು. ಕುಕ್ಕೆ ತಂದು ಕವುಚಿದೋ.ಸ್ವಲ್ಪ ಹೊತ್ತಿಗೆಲ್ಲ ಮೊಟ್ಟೆ ಇಟ್ಟು ಜಂಬದಿಂದ ಮತ್ತೆ,”ಕ್ಕಕ್ ಕ್ಕಕ್ ಕ್ಕಕ್” ಅಂದಾಗ ನಾವು ಕುಕ್ಕೆ ಎತ್ತಿ ನೋಡಿದರೆ ಅಲ್ಲಿ ಮೊಟ್ಟೆ ಇತ್ತು! ಹೀಗೆ ಒಂದು ವಾರ ಒಂದೇ ಜಾಗದಲ್ಲಿ ಕವುಚಿ ರೂಢಿ ಮಾಡಿದ ಮೇಲೆ ದಿನಾ ಅದೇ ಜಾಗಕ್ಕೆ ಹೋಗಿ ಮೊಟ್ಟೆ ಇಡಲು ಶುರು ಮಾಡ್ತು.
ಊರ ನಾಟಿ ಕೋಳಿಗಳೆಲ್ಲ ಹೆಚ್ಚು ಅಂದ್ರೆ ಹದಿನಾರರರಿಂದ ಹದಿನೆಂಟು ಮೊಟ್ಟೆ ಇಟ್ರೆ ಇದು ಇಟ್ಟಿದ್ದಕ್ಕೆ ಲೆಕ್ಕವೇ ಇಲ್ಲ.ಒಂದು ದಿನ ಬಿಡದ ಹಾಗೆ ಸುಮಾರು ಮೂರು ತಿಂಗಳು ಮೊಟ್ಟೆ ಇಡ್ತು.ನಮಗೋ ಮೊಟ್ಟೆಗಳನ್ನು ಕಾವಿಗೆ ಇಟ್ಟು ಮರಿಗಳ ಮಾಡಿಸೋ ಆಸೆ.ಅಮ್ಮ ಮಾತ್ರ ಒಪ್ಪಲೇ ಇಲ್ಲ.” ಕೋಳಿ ಹೇನ್ ಹತ್ಕೊಂಡ್ರೆ ತಡಿಯೋರು ಯಾರು. ಇನ್ನು ಆ ಮರಿಗಳ ಗಿಡುಗ,ನಾಯಿ, ಬೆಕ್ಕು ಅಂತೆಲ್ಲಾ ಕಾಯ್ಬೇಕು,ಕಾವಿಗೆ ಕೂರ್ಸೋದು ಬೇಡಕ್ಕೇ ಬೇಡ,”ಅಂದು ಬಿಟ್ಟಿತು. ಹಂಗಾಗಿ ಮೊಟ್ಟೆ ಇಟ್ಟ ಹಾಗೆಲ್ಲಾ ತಿಂದು ಮುಗಿಸಿದೆವು. ಆ ಮೊಟ್ಟೆಗಳಲ್ಲಿ ಒಂದು ವಿಚಿತ್ರ ಏನೆಂದರೆ ಕೆಲವು ಮೊಟ್ಟೆಗಳಲ್ಲಿ ಹಳದಿ ಭಂಡಾರ ಎರಡೆರಡು ಇರುತ್ತಿದ್ದೋ.ನಮ್ಮಜ್ಜಿ ಮಾತ್ರ ಅಷ್ಟೊಂದು ಸಂಖ್ಯೆಯ, ಆ ವಿಚಿತ್ರ ಮೊಟ್ಟೆಗಳ ನೋಡಿ,” ಯಾವ್ ಕೇಡಿಗೆ ಹಿಂಗ್ ಮೊಟ್ಟೆ ಇಡ್ತಾದೋ ಕಾಣೆ, ಅತ್ಲಗೆ ಈ ಕೋಳಿನ್ ಕೂದ್ಹಾಕಿ”ಅಂದ್ರೆ,ನಾವು ಅಜ್ಜಿ ಮೇಲೆ ಜಗಳಕ್ಕೇ ಹೋಗೋವು.
ಹೀಗಿರುವಾಗ ಒಮ್ಮೆ ಅಣ್ಣ,ಅಮ್ಮ ಊರಿಗೆ ಹೋಗಿದ್ದರು.ಮನೆಯಲ್ಲಿ ನಾವು ಮಕ್ಕಳು ಮತ್ತು ಅಜ್ಜಿ ಮಾತ್ರ ಇದ್ದೆವು.ಆವತ್ತು ಪುಟ್ಟಿ ಸಂಜೆ ಮನೆಗೆ ಮರಳಿ ಬಂದದ್ದೇ ಬಚ್ಚಲು ಮನೆ ಸೇರಿ ಜೂಗರಿಸಲು ಶುರು ಮಾಡಿತು.ನಮಗೆಲ್ಲಾ ಗಾಬರಿಯೋ ಗಾಬರಿ.ಅಜ್ಜಿಗೆ ಹೇಳಿದ್ರೆ,”ಜೂಗರಿಸುತ್ತೆ ಅಂದ್ರೆ ಇನ್ನೇನು ನಾಳೆ, ನಾಡಿದ್ದರಲ್ಲಿ ಸತ್ತು ಹೊಯ್ತದೆ,ಕೂದಾಕನ ಬುಡಿ,” ಅಂತು.ನಾವು ಒಪ್ಪುತ್ತೇವೆಯೇ. ಅಜ್ಜಿಯನ್ನೇ ಕೂದಾಕುವಷ್ಟು ಸಿಟ್ಟು ಬಂತು. ಅಜ್ಜಿಯನ್ನ ಬೈದು ಸುಮ್ಮನಿರಿಸಿದೆವು.
ನಾನು ಸಂತು ಇಬ್ರೂ ಪುಟ್ಟಿಗೆ ತಿನ್ನಿಸಲು,ನೀರು ಕುಡಿಸಲು ಪ್ರಯತ್ನಪಟ್ಟರೂ ಫಲ ಕಾಣಲಿಲ್ಲ.ಅದು ಕಣ್ಣು ಮುಚ್ಚಿ ನಿಂತುಕೊಂಡು,ಇಡೀ ರಾತ್ರೆ ಜೂಗರಿಸಿ ಬೆಳಿಗ್ಗೆ ನಾವು ಏಳುವಷ್ಟರಲ್ಲಿ ಸತ್ತು ಮಲಗಿತ್ತು. ಇನ್ನೇನೂ ಮಾಡಲು ದಾರಿ ಕಾಣದೆ ನಮ್ಮ ಅಂಗಳದಲ್ಲಿದ್ದ ದಾಸವಾಳದ ಗಿಡದ ಕೆಳಗೆ ಅದಕ್ಕೆ ಗುಂಡಿ ತೋಡಿ ಮಣ್ಣು ಮಾಡಿದೆವು.
ಮಾರನೇ ದಿನ ಅಮ್ಮ ಅಣ್ಣ ಊರಿಂದ ಬಂದ ಬಳಿಕ ಅಜ್ಜಿ ಮಕ್ಕಳ ಮೇಲೆ ಚೆನ್ನಾಗಿ ಚಾಡಿ ಹೇಳ್ತು.”ಅಷ್ಟೊಂದ್ ಹೇಳ್ದೆ ಹೈಕ್ಳಿಗೆ ಕೂದಾಕಿ,ಕೂದಾಕಿ ಅಂತ.ನನ್ ಮಾತು ಕೇಳ್ದೆ ಹೋದೋ. ಐದ್ ಕೆಜಿ ಮಾವ್ಸಾಗಾದೇನೋ,ಎಲ್ಲಾ ಮಣ್ಣ್ ಪಾಲು ಮಾಡ್ದೋ,”ಅಂತು. ಅಣ್ಣ ಅಮ್ಮ ಇಬ್ರೂ “ಅಯ್ಯೋ,ದಡ್ಡ ಮಕ್ಕಳೇ ಅಜ್ಜಿ ಹೇಳ್ದಂಗೆ ಕೇಳೋ ದಲ್ವ,ಸುಮ್ನೆ ಕೋಳಿನ ಮಣ್ ಮಾಡುದ್ರಲ್ಲ,” ಅಂದಾಗ ಅಣ್ಣ ಅಮ್ಮನ ಜೊತೆಗೂ ಜಗಳ ಕಾಯ್ದೋ.ಅಜ್ಜಿ, ಅಣ್ಣ,ಅಮ್ಮ ಎಲ್ಲಾ ನಕ್ಕು ಸುಮ್ಮನಾದರು.
ಅದಾದ ಮೇಲೆ ಸ್ವಲ್ಪ ದಿನಕ್ಕೇ ಅಮ್ಮ ಹುಷಾರು ತಪ್ಪಲು ಶುರುವಾಗಿ ನಮ್ಮ ಕೋಳಿ ಸಾಕುವ ಆಸೆ ಮತ್ತೆ ಈಡೇರಲಿಲ್ಲ.ಒಂದೆರಡು ವರ್ಷಗಳ ಬಳಿಕ ಅಮ್ಮ ತೀರಿಕೊಂಡರು.ನಂತರ ಒಮ್ಮೆ ಯಾವುದೋ ಒಂದು ಪುಸ್ತಕದಲ್ಲಿ ಆಫ್ರಿಕಾದ ಒಂದು ಕಥೆಯಲ್ಲಿ “ಒಂದು ಮೊಟ್ಟೆಯಲ್ಲಿ ಎರಡು ಭಂಡಾರ ಇದ್ದರೆ,ಅದು ಅಪಶಕುನ,ಅದು ಮನೆಯಲ್ಲಿ ಮುಂಬರುವ ಸಾವಿನ ಮುನ್ಸೂಚನೆ,”ಎನ್ನುವ ಆಫ್ರಿಕಾ ದೇಶದ ನಂಬಿಕೆ ಬಗ್ಗೆ ಓದಿದಾಗ ಕಣ್ಣು ತುಂಬಿಕೊಂಡು ಬಿಟ್ಟವು.ಕೋಳಿ ಸಾಕಲು ಹಠ ಮಾಡದೇ ಇದ್ದಿದ್ದರೆ ಅಮ್ಮ ಇರ್ತಾ ಇತ್ತೇನೋ ಅನ್ನಿಸಿ ಬಿಟ್ಟಿತು.
ಇದೆಲ್ಲಾ ಯಾಕೆ ನೆನಪಾಯಿತು ಅಂದ್ರೆ, ಈ ಬೇಸಿಗೆಯಲ್ಲಿ ನನ್ನ ತಮ್ಮ ಸಂತುನ ಮನೆಗೆ ಹೋಗಿದ್ದಾಗ ಅವನ ಮಗಳ ಜೊತೆ,ಅವಳ ಬಲವಂತದಂತೆ, ಕೂತ್ಕೊಂಡು ಅವಳ ಫೇವರಿಟ್ ಕಾರ್ಟೂನ್ ಮೂವಿ ಮೋನ ನೋಡಿದೆ.ಅದರಲ್ಲಿ ನಾಯಕಿ ಮೋನಾಳ ಪೆಟ್ ಒಂದು ಕೋಳಿಯಾಗಿತ್ತು.” ಅತ್ತೇ, ಕೋಳಿನೂ ಯಾರಾದ್ರೂ ಪೆಟ್ ಆಗಿ ಸಾಕ್ತಾರ,”ಎಂದು ಕೇಳಿದ ಮಗುವಿಗೆ,”ಹೂಂ ಕಣಪ್ಪಾ,”ಅನ್ನಲು ಮಾತ್ರ ನನ್ನಿಂದ ಸಾಧ್ಯವಾಗಿದ್ದು.
Super sis ilove this
i ಸವಿ ಸವಿ ನೆನಪು
Very nice mam
ಚೆನ್ನಾಗಿ ಮೂಡಿ ಬಂದಿದೆ