ಅಂಕಣ ಸಂಗಾತಿ

ಸಕಾಲ

ಯುದ್ಧವೆಂದರೆ ನರಮೇಧವಾಗದಿರಲಿ…

ಒಂದು ದೇಶದ ಭವಿಷ್ಯ ನಿಂತಿರುವುದು,ಆ‌ ದೇಶದ ಜನತೆಯಿಂದ.ಬದುಕಿನಲ್ಲಿ ಹುಟ್ಟು ಸಾವುಗಳು ಘಟಿಸುವುದು ಆಯಾ ಕಾಲಘಟ್ಟಕ್ಕೆ ಸತ್ಯ ಲಿಖಿತ ಹಾಗೂ ಅನಿವಾರ್ಯ ಕೂಡ.ಆದರೆ ಆನಾಯಾಸವಾಗಿ ಭುಗಿಲೆದ್ದ ಮನಸ್ತಾಪಗಳು ದೇಶ,ರಾಜ್ಯ ಅಸಮಾಧಾನ ಗೊಂಡ  ಗುಂಪುಗಳ ಮಧ್ಯ ಆಯುಧ ತಲೆಎತ್ತುವ ಅಸ್ತ್ರವಾಗಿ ಬಳಕೆಯಾಗಿ,ನಡೆಯುವ ಕಾಳಗಗಳಿಗೆ “ಯುದ್ಧ”ವೆನ್ನುವುದನ್ನು ನೆನಯಲೇ ಬೇಕು.ಈ ವಿಚಿತ್ರ ಯುದ್ಧಗಳು ಸಾರ್ವಭೌಮತ್ವಕ್ಕಾಗಿ, ಗಡಿಪ್ರದೇಶಕ್ಕಾಗಿ, ಆಹಾರ ಪದಾರ್ಥಗಳಿಗಾಗಿ, ಧರ್ಮಕ್ಕಾಗಿ ಅಥವಾ ತಮ್ಮ ಪಟ್ಟ ಭದ್ರ ಸಿದ್ಧಾಂತಕ್ಕಾಗಿ ನಡೆಯುತ್ತವೆ ಎಂಬುದನ್ನು ಅರ್ಥೈಸಲು ಬಹಳ ಸಮಯ ಬೇಕಿಲ್ಲ. ಒಂದು ದೇಶ,ರಾಜ್ಯದೊಳಗಿನ ಪಂಗಡಗಳ ಮಧ್ಯ ನಡೆಯುವ ಯುದ್ಧಗಳು ಒಳಯುದ್ಧವೆಂದು ಕರೆಯಲ್ಪಡುತ್ತವೆ.

ಶಾಂತಿ ಸಾರುವ ರಾಷ್ಟಗಳು,ಯುದ್ಧದ ಕರಿನೆರಳ ಛಾಯೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿರುವದೆ ಆತಂಕಕೆ ಎಡಮಾಡಿಕೊಡುವ ಸಂಗತಿ.ಬಾಯಲ್ಲಿ ಮಂತ್ರ,ಬಗಲಲ್ಲಿ ತಂತ್ರ ಹೆಣೆದಿದ್ದನ್ನು ಇತಿಹಾಸದ ಪುಟಗಳು ತಿರುವಿದಷ್ಟು ಚರಿತ್ರೆಯುದ್ದಕ್ಕೂ ಯುದ್ಧಗಳು ನಡೆಯುತ್ತಲೇ ಬಂದಿವೆ ಎಂಬುದಕ್ಕೆ ಸಾಕ್ಷಿ ಪುರಾವೆಗಳು ಸಿಗುತ್ತವೆ.ಅದರಲ್ಲೂ ಧರ್ಮದ ನೆವದಲ್ಲಿ ನಡೆದ ಯುದ್ಧಗಳಂತೂ ಹೆಚ್ಚು. ಹಾಗೇ  ಸಾಮ್ರಾಜ್ಯ ವಿಸ್ತರಣೆ, ಲೂಟಿ-ಕೊಳ್ಳೆಗಳಿಗಾಗಿಯೇ ನಡೆದ ಯುದ್ಧಗಳೂ ಸಾಕಷ್ಟಿವೆ. ಯುದ್ಧಾನಂತರದ ಪರಿಣಾಮಗಳಿಂದ ಉಂಟಾದ ರೋಗ-ರುಜಿನಗಳು, ಆರ್ಥಿಕ ಸಂಕಷ್ಟಗಳೂ, ತತ್ತರಿಸಿದ ಜನಸಾಮಾನ್ಯರ ಬದುಕುಗಳೂ ಯುದ್ಧ ಬಯಸುವ ದುಷ್ಟ ಬುದ್ಧಿಗೆ ಸಾಣೆ ಹಿಡಿಯದ ಕಾರಣ ಈ ಆಧುನಿಕ ಯುಗದಲ್ಲೂ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಈಗಲೂ ಯುದ್ಧಗಳು ನಡೆಯುತ್ತಲೇ ಇರುವುದು ಮನುಕುಲಕ್ಕೇ ಹಿಡಿದ ಶಾಪ ಹಾಗೂ ಗ್ರಹಣವಾಗಿದೆ.

ಯುದ್ಧವೆಂದರೆ ನರಮೇಧ. ಸಂಪತ್ತಿನ ವಿನಾಕಾರಣ ನಾಶ. ಅಲೆಕ್ಸಾಂಡರ್, ಅಶೋಕನಂಥ ಮಹಾನ್ ನಾಯಕರು ಯುದ್ಧಾನಂತರ ಪಶ್ಚಾತ್ತಾಪ ಪಟ್ಟದ್ದು ಇತಿಹಾಸಕ್ಕೆ ಸೇರಿತೇ ವಿನಾ ಅದು ಪಾಠವಾಗಲೇ ಇಲ್ಲ. ಬರೀ ಸೈನಿಕರ ನಡುವೆ ನಡೆಯುತ್ತಿದ್ದ ಸಾಮ್ರಾಜ್ಯ ಶಾಹೀ ಯುದ್ಧಗಳಿಗಿಂತ ಆಧುನಿಕ ಯುಗದ ಯುದ್ಧ ಪರಿಣಾಮಗಳು ಅಪಾಯಕಾರಿಯಾಗಿವೆ. ಹಿಂದೆಲ್ಲ ಯುದ್ಧವೆಂದರೆ ಬರಿಯ ಸೈನಿಕರ, ರಾಜ ಸಾಮಂತರ ಸೋಲು-ಗೆಲುವಿನಲ್ಲಿ ಮುಗಿಯುತ್ತಿದ್ದವು. ಸಾಮಾನ್ಯ ಜನರಿಗೆ ತೆರಿಗೆಯ ಹೊರೆ ಬಿಟ್ಟರೆ ಉಳಿದಂತೆ ಜನಜೀವನದ ಮೇಲೆ ಪರಿಣಾಮ ಇರುತ್ತಿರಲಿಲ್ಲ. ಆದರೆ ಆಧುನಿಕ ಯುಗದ ಯುದ್ಧಗಳಲ್ಲಿ ಬಳಸಲಾಗುತ್ತಿರುವ ಆಪಾಯಕಾರೀ ಪರಮಾಣು ಶಸ್ತ್ರಾಸ್ತ್ರಗಳು ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆಯಾಗಿಸುವುದಷ್ಟೇ ಅಲ್ಲದೆ ನೆಮ್ಮದಿಯನ್ನು ನಾಶಮಾಡಿ ಹತಾಶ ಸ್ಥಿತಿಗೆ ಒಯ್ಯುತ್ತ್ವೆ ಹಿಂದೆಲ್ಲ ಯುದ್ಧಗಳಲ್ಲೂ ನೀತಿ,ನಿಯಮ, ಕಟ್ಟುಪಾಡುಗಳಿದ್ದವು ಎಂಬುದನ್ನು ಉಲ್ಲೇಖವಿದೆ. ಅವನ್ನು ಮೀರುವ ಅನೈತಿಕ ನಡವಳಿಕೆ ಹಿಂದಿನವರಿಗೆ ಇರಲಿಲ್ಲ.

ಆದರೆ ಆಧುನಿಕರಾದಷ್ಟೂ ಮೋಸ,ಕಪಟಗಳಿಗೂ ಆಧುನಿಕತೆಯ ಮೊಹರು ಬೀಳುತ್ತಿದೆ. ಕಟ್ಟುಪಾಡುಗಳನ್ನು ಮೀರಿ ವ್ಯವಸ್ಥೆಗೆ ಸಡ್ಡು ಹೊಡೆಯುವುದೇ ಗೆಲುವಿನ ಮಜಲಾಗುತ್ತಿದೆ.

ಇತ್ತೀಚೆಗಂತೂ ಧರ್ಮಾಂಧತೆ ಹೆಚ್ಚಿ ಮತಮೋಹವನ್ನು ಜಾಗೃತಗೊಳಿಸಿ ಶ್ರೇಷ್ಟತೆಯ ಭ್ರಮೆ ಹುಟ್ಟಿಸಿ ಅನ್ಯರನ್ನು ಕೀಳಾಗಿ ಕಾಣಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ವ್ಯಕ್ತಿಯ ಇಂಥ ದುಷ್ಟತನವನ್ನು ನಿಗ್ರಹಿಸಬೇಕಾದ ವ್ಯವಸ್ಥೆಯನ್ನೇ ಕತ್ತಲಿನಲ್ಲಿಟ್ಟಿರುವ ಧರ್ಮ ಮತ್ತು ಧರ್ಮಾಧಾರಿತ ಸೀಮಿತ ಚೌಕಟ್ಟಿನ ಧೋರಣೆಗಳು ಆ ವ್ಯಕ್ತಿಯನ್ನು ಬೆಂಬಲಿಸುತ್ತವೆ.

ಧರ್ಮದ ನೆಲೆಗಟ್ಟಿನ ಹಾಗೆಯೇ ಜನಾಂಗೀಯ ನೆಲೆಗಳ ಆದಾರದ ಮೇಲೆ ನಡೆಯುವ ಹಲ್ಲೆ ಮತ್ತು ಗಲಭೆಗಳೂ ಜನಾಂಗೀಯ ವಾದಿಗಳ ಅಹಂಕಾರ ಮತ್ತು ಅವರ ಶ್ರೇಷ್ಠತೆಯ ಪರಿಕಲ್ಪನೆಯನ್ನೂ ಆಧರಿಸಿರುತ್ತವೆ. ಬಿಳಿಯರು ಕರಿಯರ ಮೇಲೆ ನಡೆಸುತ್ತಿರುವ ದುರಾಚಾರ, ಒಂದು ದೇಶದಲ್ಲಿ ತಲೆತಲಾಂತರದಿಂದ ನೆಲೆಸಿರುವವರನ್ನು ಅವರ ಮೂಲ ನೆಲೆಯ ಕಾರಣದಿಂದಾಗಿ ವಿದೇಶಿಯರಂತೆ ಕಾಣುವುದೂ ಹೆಚ್ಚಾಗುತ್ತಿದೆ. ಹಿಟ್ಲರ್ ಮತ್ತು ಮುಸಲೋನಿ ಇತಿಹಾಸದ ಪುಟ ಸೇರಿದ್ದನ್ನು ಮೆರಯುವಂತಿಲ್ಲ.ಮೂಲತಃ ಯುದ್ಧವೆನ್ನುವುದೇ ಮನುಕುಲದ ವಿರೋಧಿ. ಜೀವಪಿಪಾಸುಗಳ ಅಂತಿಮ ಆಯ್ಕೆ. ಅದು ಯಾವತ್ತೂ ಸಹಿಸಲಸಾಧ್ಯವಾದ ಅತ್ಯಂತ ಕ್ರೂರ ಕೆಲಸವೆಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳಬೇಕಾದ ಅಗತ್ಯತೆ ಇಲ್ಲ.

ಪರಸ್ಪರ ದ್ವೇಷ, ಪೂರ್ವಾಗ್ರಹ ಪೀಡಿತ ನಂಬಿಕೆ ಎಂಬ ಭ್ರಮೆಗಳು ಈ ಅಮಾನವೀಯ ಕೃತ್ಯದ ಹಿಂದಿರುವ ಶಕ್ತಿಗಳು.ಬುದ್ಧನ ಬದ್ಧತೆ, ಗಾಂಧೀಜಿಯ ಅಹಿಂಸಾತತ್ವ ಯಾವಕಾಲಕ್ಕೂ ಇಂಥ ಯುದ್ಧಗಳ ಪಾಶಗಳಿಂದ ನಮ್ಮನ್ನು ಬಿಡಿಸಿ ತರಬಲ್ಲ ಅಸ್ತ್ರಗಳು. ಸೋದರತ್ವ ಮತ್ತು ಸ್ನೇಹ ಸಂಬಂಧಗಳು ಮಾತ್ರ ಜಗತ್ತಿನ ಯುದ್ಧಗಳನ್ನು ನಿವಾರಿಸಬಲ್ಲವು. ಬುದ್ಧ ಮತ್ತು ಗಾಂಧಿ ಆ ಕಾರಣಕ್ಕೇ ಸರ್ವಕಾಲಿಕ ನಾಯಕರಾಗುತ್ತಾರೆ. ಶಾಂತಿ ಮಂತ್ರದ ಹರಿಕಾರರಾಗಿ ಗೋಚರಿಸುತ್ತಾರೆ.

ಮನುಷ್ಯನ ವಿಕೃತ ಮನಸ್ಸಿನಿಂದಲೇ ಭೀಕರ ಯುದ್ಧಗಳ ಹುಟ್ಟು ಎಂಬುದನ್ನು ಎಲ್ಲರೂ ಅರಿತಲ್ಲಿ ಇತಿಹಾಸದಲ್ಲಿ ನಡೆದು ಹೋಗಿರುವ ಕಹಿ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸಾಧ್ಯಯುದ್ಧದ ಅಂಗೀಕಾರದಿಂದ ನಮ್ಮ ಸಂಸ್ಕೃತಿಯಲ್ಲಾಗುವ ಬದಲಾವಣೆಯ ನಾವು ಅರಿತಿರಬೇಕು

ಬಂದೂಕುಗಳ ಬಾಯಲ್ಲಿ ಪ್ರೀತಿ ಜಪಿಸಲಿ

ಮದ್ದು ಗುಂಡುಗಳ ಬದಲು ಸ್ನೇಹ ಚಿಗುರಲಿ

ಎದೆಸೀಳುವ ಗುಂಡಿಗೆಯಲ್ಲಿ ಮೌಲ್ಯ ವಿರಲಿ

ಯುದ್ಧವೆನ್ನುವ ಮಹಾಮಾರಿಗೆ ತರೆಬೀಳಲಿ

ವಿಶ್ವದ ಕಣಕಣದಲಿ ದ್ವೇಷಾಸೂಯೆ ಮಣಿಯಲಿ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ…

One thought on “

  1. ತಮ್ಮ ಲೇಖನವು ದ ಆಶಯ ತುಂಬಾ ಉನ್ನತ &ಅಗತ್ಯ.ಸಾಮಾಜಿಕ ಸಾಮರಸ್ಯ ಬೆಳೆಸುವಲ್ಲಿ ಈ ಲೇಖನ ತುಂಬಾ ಚೆನ್ನಾಗಿದೆ.ತಮ್ಮ ಉನ್ನತ ಆದರ್ಶ ಗಳು ಜನರ ಮನಸ್ಸು ನ್ನು ಬೆರೆಸಲಿ, ಸೌಹಾರ್ದ ತಯನ್ನು ಕಾಣುವಲ್ಲಿ ಯಶಸ್ವಿ ಆಗಲಿ ಎಂದು ನಮ್ಮ ಶುಭ ಹಾರೈಕೆಗಳು

Leave a Reply

Back To Top