ಕಾವ್ಯಸಂಕ್ರಾಂತಿ

silhouette of plant during sunset

ಸಾಕೊಂದಿಷ್ಟು

ಕವಿತಾ ಸಾರಂಗಮಠ

ಉತ್ತರಾಯಣನ ಪುಣ್ಯ ಕಾಲಕೆ
ಗದ್ದಲದ ಅಂಧರ ಮಂಡಿಪೇಟೆಯಲ್ಲಿ
ಸಂಕ್ರಮಣ ಕಾಲಕೆ ಕಣ್ಣಾವೆಗಳಾದರೂ ಸಂಧಿಸಿವೆ
ಸಾಕೊಂದಿಷ್ಟು ಈ ಕಾಲಕೆ..!

ಹ್ಯಾಪಿ ಪೊಂಗಲ್ ಡೇ ಎಂಬ ಜಾಹೀರಾತಿಗೆ
ಸಂತೋಷ ಉಕ್ಕಿ ಮೋಬೈಲ್ ಮಾತಲಿ ತೊಡಗಿದವರ ನಡುವೆಯೂ
ಕುಂಟರಿಬ್ಬರ ತೆವಳುವಿಕೆಗೆ ಗಾಳಿಯಾದರೂ ಬೀಸಿದೆಯಲ್ಲ
ಸಾಕೊಂದಿಷ್ಟು ಈ ಕಾಲಕೆ..!

ಭವಿಷ್ಯ ಕೇಳಿ ಮದುವೆಯಾಗಬಾರದು ಎಂಬ ನುಡಿಗೆ,ಕಣ್ಣುಗಳ ಒದ್ದೆಮಾಡಿಕೊಂಡಿದ್ದೇನಿಲ್ಲಿ
ಬಿಕ್ಕಿಸಿ ಅತ್ತಾಗ ಬೀದಿ ನಾಯಿಯಾದರೂ ನಲುಗಿತಲ್ಲ
ಸಾಕೊಂದಿಷ್ಟು ಈ ಕಾಲಕೆ..!

ಹಬ್ಬವೆಂದರೆ ಕಿಬ್ಬದಿಯ ಕೀಲು ಮುರಿಸಿಕೊಂಡು,ಗೇಣು ಭೂಮಿಗೆ ಕಾದಾಡಿ ನ್ಯಾಯ ಕೋರ್ಟಿನಲ್ಲಿ
ಹೊಟ್ಟೆಗೆ ಅಂಬಲಿಯಾದರೂ ಸಿಕ್ಕಿತಲ್ಲ
ಸಾಕೊಂದಿಷ್ಟು ಈ ಕಾಲಕೆ..!

ಬೇಡಿದ್ದಿಲ್ಲಿ ದೊರಕದೆ
ಹಿಡಿಚೆಲ್ಲಿ ಬೊಗಸೆ ಬಾಚಿಕೊಂಡವನ ನಡುವೆ,ಮಣ್ಣು ಸಿಗದವನಿಗೂ ಹೊನ್ನು ಸಿಕ್ಕಿದೆಯಲ್ಲ
ಸಾಕೊಂದಿಷ್ಟು ಈ ಕಾಲಕೆ..!

ಎಳ್ಳು-ಬೆಲ್ಲ, ಕುಸುರೆಳ್ಳು-ಅರಷಿಣ ತಿರುವಿ,ಮಂಡಿಪೇಟೆಯೆಂದರೆ ಭಿಕ್ಷೆಯೆಂದಲ್ಲ,ದೇವರಿಗೆ ಹೂವಾದರು ಸಿಕ್ಕಿತಲ್ಲ ಹಿತ್ತಲಿನ ಗಿಡದಲ್ಲಿ..
ಸಾಕೊಂದಿಷ್ಟು ಈ ಕಾಲಕೆ..!

*********

Leave a Reply

Back To Top