ಕಥಾಗುಚ್ಛ

Image result for photos of farmer suicide poison

ನನ್ನ ಅಪ್ಪ ಹೇಡಿಯಾಗಿಬಿಟ್ಟಿದ್ದ..!

ವೇಣುಗೋಪಾಲ್

ನನ್ನ ಅಪ್ಪ ಹೇಡಿಯಾಗಿಬಿಟ್ಟಿದ್ದ..!

ಬಡತನವನ್ನೇ ಬುನಾದಿಯಾಗಿ ಮೆಟ್ಟಿ ಸಿರಿತನದ  ಒಂದೊಂದು ಇಟ್ಟಿಗೆಯನ್ನು ಹೆಕ್ಕಿತಂದು ಬೆವರರಿಸಿ ನೆಮ್ಮದಿಯ ಬದುಕನ್ನು ಕಟ್ಟಿಕೊಡುತ್ತಿದ್ದ ಅಪ್ಪ ಹೇಡಿಯಾಗಿಬಿಟ್ಟಿದ್ದ..!

ನಾ ಕಂಡ ಅಪ್ಪ ಹೀಗಿರಲಿಲ್ಲ.! ಉರಿಯುವ ಸೂರ್ಯನಂತೆ ಎಂತಹ ಕಷ್ಟಗಳ ಮೋಡಗಳನ್ನ ಕರಗಿಸಿ ಬಿಡುತ್ತಿದ್ದ.. ಅವನ ಪ್ರೀತಿಯು ಅಷ್ಟೇ ಆಗತಾನೆ ಕರೆದ ಹಾಲಿನಂತಹ ಸಿಹಿ ನಿಷ್ಕಲ್ಮಶವಾದ ತ್ಯಾಗವೆತ್ತ ಸಾಕಾರಮೂರ್ತಿ.. ಅಮ್ಮನ ಪ್ರಿತೆಯೇ ಕಾಣದ ನನಗೆ ಅವನ ಬೆಚ್ಚನೆಯ ತೋಳುಗಳೇ ಎಲ್ಲವೂ ಆಗಿತ್ತು ಮರಿಗುಬ್ಬಿಗೆ ಗೂಡಿನಂತೆ..! ಅವನಿಗೂ ಅಷ್ಟೇ ನಾನೆಂದರೆ ಪ್ರೀತಿ ನಾನೆಂದರೆ ಅಮ್ಮನ ಪ್ರತಿರೂಪು.! ನಾನೆಂದರೆ ಅಮ್ಮನ ನೆನಪು.! ನಾನೆಂದರೆ ಅವನ ಮೊಗದ ನಗು.! ನಾನೆಂದರೆ ಅವನ ತೋಳುಗಳಲ್ಲಿನ ಬಲ.!  ನಾನೆಂದರೆ ಅವನ ಬಲಿಷ್ಠ ತೋಳುಗಳನ್ನೇ ಸುತ್ತಿಕೊಂಡು ಬೆಳೆಯುತ್ತಿರುವ ಬಳ್ಳಿ..! ನಾನೆಂದರೆ ಅವನಿಗೆ ಜೀವ…! ಅಮ್ಮನಿಲ್ಲದ ನನಗೆ ಅಮ್ಮನಾಗಿದವನು.! ಸಂಬಂಧಿಗಳೆಲ್ಲ ಇನ್ನೊಂದು ಮದುವೆಗೆ ಒತ್ತಾಯಿಸಿದರು ಒಪ್ಪದೆ  ತನ್ನ ಯೌವನದ ದಿನಗಳನ್ನ ನನ್ನ ನಗುವಿಗಾಗಿ ತೆಯುತ್ತಿದ್ದ.. ಹೀಗೆ ದಿನಗಳು ಕಳೆಯುತ್ತಿತ್ತು ನನ್ನ ಮನಸ್ಸಿನಲ್ಲಿ ಅಪ್ಪನ ಅಭಿಮಾನದ ಪುತ್ತಳಿಯೊಂದು ಮುಗಿಲೆತ್ತರಕ್ಕೆ ಬೆಳೆದು ನಿಂತಿತ್ತು..!
ನಾನು ಕೂಡ ಅವನ ಹೆಗಲಮೀರಿ ಬೆಳೆದು ನಿಂತಿದ್ದೆ..!

ನನ್ನೂರಿಗೆ ಬರ ಬಡಿದು ಹಲವು ವರ್ಷಗಳು ಕಳೆದಿದ್ದೋ… ಹನಿ ಕಾಣದ ಹಳ್ಳಿಗೆ ಕಳೆದ ಎರಡು ದಿನಗಳಿಂದ ಮಳೆಯು ಬಿಡುವಿಲ್ಲದಂತೆ  ಸುರಿದು ರಾತ್ರಿಕೂಡ ತೊಯ್ದು ನಿಂತಿತ್ತು  ಭಾನುವಾರ ಬೆಳ್ಳಂಬೆಳಗ್ಗೆ ಸೂರ್ಯಕಿರಣಗಳು ಸೋನೆ ಮಳೆಯೊಡನೆ ಸರಸಕ್ಕಿಳಿದಿದ್ದೋ.. ನೀಲಿ ಆಕಾಶದಲ್ಲಿ ರಾತ್ರಿಯೆಲ್ಲಾ ಮಳೆಯಾಗಿ ಕರಗಿದ ಕಂದುಮೋಡಗಳೆಲ್ಲ ಅಲ್ಲಲ್ಲಿ ಸಣ್ಣಗೆ ಚದುರಿ ಹರಡಿದ್ದೋ.. ನೆಂದು ತೇವವಾಗಿದ್ದ ರಸ್ತೆಗಳು ಹೊಲದ ಕಿದ್ದಾರೆಯಲ್ಲಿ ತುಂಬಿ ನಿಂತಿದ್ದ ನೀರು..  ಬತ್ತಿದ್ದ ಹಳ್ಳಗಳೆಲ್ಲ ತುಂಬಿನಿಂತಿವೆ ಹಳ್ಳದ ಬದಿಗಿದ್ದ ಬಿದಿರುಮಳೆಗಳು ಹೊಂಗೆಮರಗಳೆಲ್ಲ ಹೊಸ ಹುರುಪಿನಿಂದ ಕಂಗಳಿಸುತ್ತಿವೆ.
ಕಂಗಳಿಗೆ ರಸದೌತಣ  ನೀಡುವ ಪ್ರಕೃತಿಯೊಂದಿಗೆ ವಾರದ ರೂಢಿಯಂತೆ ಅಪ್ಪನೋಡನೆ ಬಿಳೆಕಲ್ಲು ಬೆಟ್ಟವತ್ತಿ ಊರ ಸುತ್ತಲಿನ ಹೊಲ ತೋಟ ಕೆರೆಗಳನ್ನೆಲ್ಲ ನೋಡುತ್ತಾ ಸಣ್ಣಗೆ ಹರಿಯುವ ಜರಿಗಳಲ್ಲಿ ಕಾಲಿಟ್ಟು ನೆಗೆದು ಸಣ್ಣ ಮಗುವಿನಂತೆ ಆಟವಾಡುತ್ತಾ  ನೆಡೆಯುತ್ತಿದ್ದೆ  ನನ್ನ ಜೊತೆಗಿದ್ದ ಅಪ್ಪ ಮಾತ್ರ ಪ್ರಕೃತಿ ಸೊಬಗು  ಸವಿಯದೆ..! ತನಗೆ ಸಂಬಂಧವಿಲ್ಲದಂತೆ ಮೌನಿಯಾಗಿದ್ದ
ಕಡಿದಾದ ಆ ಬಂಡೆಯನ್ನು ನಿಧಾನವಾಗಿ ಏರುತ್ತ ಬರುತ್ತಿದ್ದವನು..

ಹರಿ ಜಾಗ್ರತೆ ಬಿದ್ದಿಯಾ..!  ಎಂದು ಹೇಳುತ್ತಿದ್ದಂತೆಯೇ ಬಾರೆಯ ಇಳಿಜಾರಿನಲ್ಲಿ ಜಾರಿ ಎರಡೂರುಳು ಬಿದ್ದೆ  ಕೈ ಹಿಡಿದು ಎತ್ತಿ.

ಹರಿ ಈ ಹಳ್ಳಿ ಜೀವನವೇ ಹೀಗೆ.!  ಹೊಲ ಗದ್ದೆ ತೋಟ ಈ ಹಳ್ಳಿ ಇಲ್ಲಿನ ಜೀವನದ ಆಸೆಗಳನ್ನೆಲ್ಲ ಬಿಟ್ಟುಬಿಡು.. ಈ ಜೀವನ ನೋಡುವುದಕ್ಕೆ ಈ ಪ್ರಕೃತಿಯಷ್ಟೇ ಸುಂದರ ಅನಿಸುತ್ತದೆ  ಆದರೆ ಕಾಲುಜಾರಿಬಿದ್ದರಂತೂ ಮೇಲೆ ಹೇಳಲಾರದಷ್ಟು ಪ್ರಪಾತಕ್ಕೆ ತಳ್ಳಿ ಬಿಡುತ್ತದೆ..! ಯಾರು ಕೈಹಿಡಿದು ಎತ್ತಲಾರದಷ್ಟು ಕೆಳಕ್ಕೆ.! ಕಗ್ಗತ್ತಲಿಗೆ..! ನಿನಗೆ ಅತ್ತಿಬರಬೇಕೆಂಬ ಹಂಬಲವಿದ್ದರು ಕತ್ತಲು ನಿನ್ನ ಇರುವಿಕೆಯನ್ನೇ ನುಂಗುವಷ್ಟು ಆಳಕ್ಕೆ ನೂಕಿಬಿಡುತ್ತದೆ..!

ಈ ವ್ಯವಸಾಯವೇ ಹೀಗೆ ಮಳೆಯೊಂದಿಗೆ ಬಿಸಿಲಿನೋದಿಂಗೆ ಬರದೊಂದಿಗೆ ಮನುಷ್ಯನ ದೂರಸೆಗಳೊಂದಿಗೆ ಸರಕಾರದ ನಿರಾಸಕ್ತಿಯೊಂದಿಗೆ ಇಡೀ ಪ್ರಕೃತಿಯೊಂದಿಗೆ ಆಡುವ ಜೂಜು ..! ಇದನ್ನೆಲ್ಲ ಎದುರಿಸಿ ಜಯಿಸಿದರಷ್ಟೇ ನಿನಗೆ ಉಳಿಗಾಲ.. ಸೋತರಂತೂ ಇದೆ ಪ್ರಕೃತಿಯ ಒಡಲಾಳಕ್ಕೆ ಕಸವಾಗಿ ಕೊಳೆತು ಹೋಗುತ್ತಿಯ ಹರಿ..!

ಈ ವರ್ಷ ನಿನ್ನ ಇಂಜಿನಿಯರಿಂಗ್ ಮುಗಿದ ನಂತರ ಇಲ್ಲಿ ಬಂದು ನೆಲೆಸುವುದ ಬಿಟ್ಟು  ಬೆಂಗಳೂರಿನಲ್ಲಿ  ಕೆಲಸವಿಡಿದು ಬದುಕ ಕಟ್ಟಿಕೊಂಡುಬಿಡು ಹರಿ.

ಅಪ್ಪನ ಈ ಮಾತುಗಳು ನನ್ನ ಕನಸ್ಸಿಗೆ ತಣ್ಣೀರೆರೆಚ್ಚಿದ್ದವು..

ಅಪ್ಪ ಇಲ್ಲಿ ಈ ಜಮೀನನ್ನೆಲ್ಲ ಬಿಟ್ಟು  ನಾನು ಅಲ್ಲಿದ್ದು ಗಳಿಸುವುದಾದರು ಏನು.?
ಹತ್ತಿರದ ಹಾಸನದಲ್ಲಿ ಸಣ್ಣ ನೌಕರಿಹಿಡಿಯುತ್ತೇನೆ ನಿನ್ನೊಂದಿಗೆ ನಾನು ಇಲ್ಲೇ ಇದ್ದು ಎಲ್ಲವನ್ನು ನೋಡಿಕೊಂಡು ಆರಾಮಾಗಿ ಇದ್ದುಬಿಡೋಣ..!

ಇಲ್ಲಾ  ಹರಿ ನೀನು ಬೆಂಗಳೂರಿನಲ್ಲೇ ಇರಬೇಕು ಒಂದು ಒಳ್ಳೆಯ ಕೆಲಸವಿಡಿದು ಕೂಡಿಟ್ಟ ಹಣದಲ್ಲಿ ಇಲ್ಲಿ  ಉಳಿದದ್ದನ್ನೆಲ್ಲ ಮಾರಿ ಬಂದ ಹಣದಲ್ಲಿ ಸ್ವಂತಕ್ಕೊಂದು ಮನೆಮಾಡಿಕೊಂಡು ನೆಮ್ಮದಿಯಿಂದ ಇದ್ದುಬಿಡು..!

ಅಪ್ಪ ಮತ್ತೆ ನೀನು ಬರುವುದಿಲ್ಲವೇ.!?

ಬರುತ್ತೇನೆ ಹರಿ ನಿಜಕ್ಕೂ ಬರುತ್ತೇನೆ ನನ್ನ ಸೋಲುಗಳನ್ನೆಲ್ಲ ಮರೆತು ನಿನ್ನ ಗೆಲುವಿನ ಹೆಗಲ ಮೇಲೆ ಮಗುವಾಗಿ ನಿನ್ನ ಜೋತೆಗಿರಲು ಬಂದೆ ಬರುತ್ತೇನೆ ಹರಿ..

ಹೀಗೆ ಹೇಳಿ ಮನೆಗೆ ಬಂದು ಒಂದು ಖಾಲಿ ವಿಷದ ಬಾಟಲಿಯನ್ನು ಮಗ್ಗುಲಲ್ಲಿಟ್ಟು ನಿದ್ರೆಗೆ ಜಾರಿದ್ದ ಎಂದಿನಂತೆ ಸಂಜೆಗೆ ಎಚ್ಚರವಾಗುವ ನಿದ್ರೆಗಲ್ಲ..!  ಹಸಿವು ಬಾಯರಿಕೆಗಳೆನ್ನದ ರಾತ್ರಿ ಹಗಲೆನ್ನದ ಬಾಯಿತುಂಬ ಮತ್ತೆ “ಹರಿ” ಎಂದು ಕೂಗದ ಚಿರನಿದ್ರೆಗೆ ಜಾರಿಬಿಟ್ಟಿದ್ದ..!

ಹೌದು ಅವನು ಬೆಳಗ್ಗೆ ನನ್ನೊಂದಿಗೆ ಆಡಿದ ಪ್ರತಿಮಾತು ಒಡೆದ ಅರ್ಥಗಳೆಲ್ಲ ನನ್ನೆದೆಗೆ ಇರಿಯುತ್ತಿದ್ದೋ..! ನಿಜಕ್ಕೂ ಅಪ್ಪ ಸಾವಿನ ನಿರ್ಧಾರವನ್ನು ಮೊದಲೇ ಮಾಡಿಬಿಟ್ಟಿದ್ದನೆ.!?  ಈ ಕೃಷಿ ಈ ನಾಲ್ಕೈದು ವರ್ಷದ ಬರ ನನ್ನ ಓದಿನ ಖರ್ಚು ಇವೆಲ್ಲವೂ ಅವನನ್ನ ಸಾಲಗಾರನಾಗಿಸಿತ್ತ.?

ಅವನ ಮುಗಿಲೆತ್ತರದ ಪ್ರತಿಮೆಯೊಂದು ಅವನ ದೇಹವ ದಹಿಸುತ್ತಿರುವ ಚಿತೆಯ ತಾಪಕ್ಕೆ ನನ್ನ ಕಣ್ಗಳ ಹನಿಗಳ ಕೋಪಕ್ಕೆ ಕರಗುತ್ತಿತ್ತು…!

ನನ್ನಪ್ಪ ಹೆಗಲೆತ್ತರದ ಮಗನಿದ್ದರೂ ಸಾಲಕ್ಕೆದರಿಯೋ..? ನನ್ನ ಸಂತೋಷಕ್ಕೆದರಿಯೋ..? ಅಪ್ಪ ಹೇಡಿಯಾಗಿಬಿಟ್ಟಿದ್ದ..!

*********

4 thoughts on “ಕಥಾಗುಚ್ಛ

  1. ಕಥೆಯ ವಸ್ತು,ವಿಷಯ ಪ್ರಸ್ತುತದ ಸಮಾಜದ ಓರೆಕೋರೆಗಳ ಕನ್ನಡಿಯಾಗಿದೆ.ತಂದೆ ಮಗನ ಪಾತ್ರಗಳು ಕುಟುಂಬದ ಸಂಬಂಧಗಳ ಆಳಅನುಬಂಧವನ್ನು ಅರುಹುತ್ತದೆ. ಮನಮುಟ್ಟುವ ಕಥೆ.ಚಂದವಾಗಿದೆ.

Leave a Reply

Back To Top