ಕಾವ್ಯಯಾನ

ನಭದ ಕೌತುಕದ ಕಡೆಗೆ

ನಾರಾಯಣಸ್ವಾಮಿ ವಿ

ನಭದ ಕೌತುಕದ ಕಡೆಗೆ

ಮನವ್ಯಾಕೋ ಯೋಚನಲಹರಿಯ
ಕಡೆಗೆ ತಿರುಗುತಿದೆ, ಅಜ್ಞಾನದಿಂದ
ವಿಜ್ಞಾನದ ಕಡೆ ಸಾಗಿದ ಮನುಜ
ಮತ್ತೆಕೊ ಮರಳಿ ಅಜ್ಞಾನದ ಗೂಡಿನ
ಸುತ್ತ ಸುಳಿಯುತಿರುವನೆಂದು……..

ಪ್ರಕೃತಿಯ ವಿಸ್ಮಯಕ್ಕೆ ಹೆದರಿ
ದೇಗುಲ-ಗೃಹಗಳ ಕದವನೆ
ಮುಚ್ಚಿ,ದೂರದರ್ಶನದ ಪರದೆಯೊಳಗೆ
ನಭದ ಕೌತುಕವನು ವೀಕ್ಷಣೆ ಮಾಡುತಿಹನು…….

ಆಗಸದಲಿ ಘಟಿಸುವ ಸೂರ್ಯಚಂದ್ರರ
ವಿಸ್ಮಯ ರೂಪವನು ಕನ್ನಡಿಯೊಳಗಿಂದ
ನೋಡಬಹುದೆಂದು,ವಿಜ್ಞಾನಿಗಳು ಸಾರಿ
ಸಾರಿ ಹೇಳಿದರೂ ನಂಬಲೇ ಇಲ್ಲ ವಿಜ್ಞಾನವನು……

ಟಿವಿ ಪರದೆಯೊಳಗೆ ಕುಳಿತು ಕಟ್ಟುಕಥೆ
ಸಾರುವ ಮಾತಿನಮಲ್ಲರ ಭಾಷಣವು
ಹುಟ್ಟಿಸಿತು ನಿನ್ನ ಮನದೊಳಗೆ ಭಯವನು
ಹುಡುಕುತಲಿರುವೆ ದಬೆ೯ಗರಿಕೆಯ ಹುಲ್ಲನು…..

ಭಾನಾಡಿಯಲಿ ಹಾರುವ ಹಕ್ಕಿಗೆ
ಹರಿಯುತಿರುವ ಜಲಧಾರೆಗೆ
ಹೊಲದೊಳಗೆ ದುಡಿಯುತಿರುವ ರೈತನಿಗೆ
ಮಣ್ಣು ಹೊರುತಿರುವ ಶ್ರಮ ಜೀವಿಗೆ
ತಾಕಲಿಲ್ಲವೇಕೆ ಗ್ರಹಣ …….

ಜ್ಞಾನವ ಪಡೆದು ಅಂಧಕಾರದೊಳಗೆ
ಮನವನೆಟ್ಟು,ಮೂಢಚಾರಣೆಗೆ ಬೆಂಬಲವಿತ್ತು
ಸಾಗುತಿರುವ ಮನುಜನೇ,ಮುಂದಿನ ಪೀಳಿಗೆಗೆ
ಯಾವುದು ನಿನ್ನ ಸಂದೇಶ ?…..

********

Leave a Reply

Back To Top