ದಾರಾವಾಹಿ

ಆವರ್ತನ

ಅದ್ಯಾಯ-31

Abstract Art Oil Painting By Vishal Mandaviya | absolutearts.com

ಅಂದು ಸೋಮವಾರ. ಭಾಗೀವನವು ಅರುಣೋದಯಕ್ಕೆ ಮುಂಚೆಯೇ ಎಚ್ಚರಗೊಂಡು ಚಟುವಟಿಕೆಯನ್ನಾರಂಭಿಸಿ, ಮೊದಲ ಬಾರಿಗೆ ತನ್ನ ವಠಾರದಲ್ಲಿ ನಡೆಯಲಿದ್ದ ದೊಡ್ಡ ಮಟ್ಟದ ವಿಶೇಷ ಧಾರ್ಮಿಕ ವಿಧಿಯೊಂದರ ಸಂಭ್ರಮಕ್ಕೆ ಸಿದ್ಧಗೊಳ್ಳುತ್ತಿತ್ತು. ಆ ಬಡಾವಣೆಯ ಮಾಂಸಾಹಾರಿಗಳೆಲ್ಲ ಗೂರೂಜಿಯವರ ಸೂಚನೆಯಂತೆ ಒಂದು ವಾರದ ಹಿಂದೆಯೇ ಮಾಂಸಾಹಾರವನ್ನು ತ್ಯಜಿಸಿ ಶುದ್ಧಾಚಾರದಿಂದಿದ್ದರು. ಅಂದು ತಂತಮ್ಮ ಮನೆಗಳ ಮೂಲೆ ಮೂಲೆಗಳನ್ನೂ ಗುಡಿಸಿ ಒರೆಸಿ ತೊಳೆದು ಸ್ವಚ್ಛಗೊಳಿಸಿ ಮನೆಯ ಮುಂದೆ ರಂಗೋಲಿಯಿಟ್ಟು ಮಾವಿನೆಲೆಗಳ ತಳಿರುತೋರಣಗಳಿಂದಲೂ ವಿವಿಧ ಹೂವುಗಳ ಮಾಲೆಗಳಿಂದಲೂ ಸಿಂಗರಿಸುತ್ತ ಇಡೀ ವಠಾರವನ್ನು ಕಿನ್ನರಲೋಕದಂತೆ ಅಲಂಕರಿಸಿದ್ದರು. ಭಾಗೀವನದೊಳಗೆ ಸಣ್ಣ ಮೈದಾನದಂಥ ವಿಶಾಲ ಜಾಗವೊಂದಿತ್ತು. ಆದರೂ ಗುರೂಜಿಯವರ ಅಪ್ಪಣೆಯಂತೆ ಅಂದಿನ ಪೂಜಾವಿಧಿಯನ್ನು ಸುಮಿತ್ರಮ್ಮನ ಅಂಗಳದಲ್ಲಿಯೇ ನೆರವೇರಿಸಲು ಸಜ್ಜುಗೊಳಿಸಲಾಗಿತ್ತು. ಆದರೆ ವಠಾರದಲ್ಲಿ ನೂರೈವತ್ತಕ್ಕೂ ಹೆಚ್ಚು ಮಂದಿಯಿದ್ದುದರಿಂದಲೂ ಸುಮಿತ್ರಮ್ಮನ ಅಂಗಳದಲ್ಲಿ ನೂರರಷ್ಟು ಜನರು ಮಾತ್ರವೇ ಭಾಗವಹಿಸಲು ಸ್ಥಳಾವಕಾಶವಿದ್ದುದರಿಂದಲೂ ಅವರ ಮನೆಯ ಎದುರಿನ ರಸ್ತೆಯುದ್ದಕ್ಕೂ ಶಾಮಿಯಾನ ಹಾಕಿಸಿ ಊಟದ ವ್ಯವಸ್ಥೆಯನ್ನು ಅಲ್ಲಿಯೇ ಮಾಡಲಾಯಿತು.

                                                       ***

ಭಾಗೀವನದ ಪಕ್ಕದ ಹಸಿರು ಬನವೊಂದನ್ನು ಏಕನಾಥ ಗುರೂಜಿಯವರು ಬಹಳ ಹಿಂದೆಯೇ ಕಂಡಿದ್ದರು. ಆದ್ದರಿಂದ ಅವರ ಮನಸ್ಸಿನಲ್ಲೂ ಆವತ್ತೇ ಆ ಕುರಿತು ಹೊಸ ಯೋಜನೆಯೊಂದು ಚಿಗುರೊಡೆದಿತ್ತು. ಹಾಗಾಗಿ ಭಾಗೀವನದಲ್ಲಿ ತಾವು ನಡೆಸಲಿರುವ ಧಾರ್ಮಿಕವಿಧಿಯು ಮುಖ್ಯವಾಗಿ ತಮ್ಮ ಆ ಯೋಜನೆಯು ನೆರೆವೇರಲು ಪೂರಕವಾಗಿಯೇ ಸಂಪನ್ನವಾಗಬೇಕು ಎಂದೂ ಅವರು ಯೋಚಿಸಿದ್ದರು. ಆದರೆ ಆಶ್ಲೇಷಬಲಿಯ ಕುರಿತು ಇನ್ನೂ ಸಂಪೂರ್ಣ ಜ್ಞಾನವಿಲ್ಲದ ಅವರು ಅದಕ್ಕಾಗಿ ಒಂದುವಾರದ ಹಿಂದೆಯೇ ಈಶ್ವರಪುರದ ಪುಸ್ತಕದಂಗಡಿಗಳನ್ನೆಲ್ಲ ಸುತ್ತಾಡಿದ್ದರು. ಆಗ ‘ಆಶ್ಲೇಷಬಲಿಯ ಚರಿತ್ರೆ’ ಎಂಬ ಪುಸ್ತಕವೊಂದು ಅವರ ಕಣ್ಣಿಗೆಬಿತ್ತು. ಆದ್ದರಿಂದ ಆತುರಾತುರವಾಗಿ ಅದನ್ನಲ್ಲೇ ಮೇಲು ಮೇಲೆ ಓದಿ ನೋಡಿದರು. ಆ ಕೃತಿಯಲ್ಲಿ ಆಶ್ಲೇಷಬಲಿಯನ್ನು ಯಾವ ಕಾರಣಗಳಿಗೆ ಆಚರಿಸಬೇಕು? ಅದರ ಅರ್ಥ ಮತ್ತು ಸ್ವರೂಪಗಳೇನು? ಆಚರಿಸುವ ವಿಧಿವಿಧಾನಗಳು ಯಾವುವು? ಆ ಪೂಜಾವಿಧಿಯನ್ನು ನಡೆಸುವುದರಿಂದ ಕಲಿಯುಗದ ಭಕ್ತಾದಿಗಳ ಎಂಥೆಂಥ ಪಾಪಕೃತ್ಯಗಳೆಲ್ಲ ನಿವಾರಣೆಯಾಗುತ್ತವೆ? ಯಾವ ಯಾವ ರೂಪದ ಸಮೃದ್ಧಿಗಳು ಅವರಿಗೆ ಒದಗಿ ಬರುತ್ತವೆ? ಒಂದು ವೇಳೆ ಆ ಪೂಜೆಯನ್ನು ನೆರವೇರಿಸದಿದ್ದರೆ ಮುಂದೆ ಜನರ ಜೀವನದಲ್ಲಾಗುವ ಕಷ್ಟನಷ್ಟಗಳು ಯಾವ ಬಗೆಯವು? ಆ ಆಚರಣೆಯ ಕುರಿತು ಮಹಾಭಾರತ ಮತ್ತಿತರ ಪುರಾಣಗ್ರಂಥಗಳು ಏನು ಹೇಳುತ್ತವೆ? ಎಂಬಂಥ ಹತ್ತು ಹಲವು ವಿಚಾರಗಳ ವಿವರಗಳಿದ್ದುದನ್ನು ಕಂಡವರು ಕೂಡಲೇ ಅದನ್ನು ಕೊಂಡು ತಂದರು. ಆದರೆ ಆ ಕೃತಿಯ ಲೇಖಕರು ನಿಜವಾಗಿಯೂ ವೇದೋಪನಿಷತ್ತುಗಳನ್ನು ಅಧ್ಯಯನ ಮಾಡಿದವರೇ? ಅಥವಾ ಅಂಥ ಧಾರ್ಮಿಕ ಉದ್ಯಮದಲ್ಲಿ ತಾವೂ ತೊಡಗಿಕೊಂಡಿದ್ದು ತಮ್ಮ ವ್ಯಾಪಾರ ವಹಿವಾಟುಗಳ ಅಭಿವೃದ್ಧಿ ಮತ್ತು ಪ್ರಚಾರದ ಉದ್ದೇಶದಿಂದಲೇ ಬರೆದಂಥ ಕೃತಿಯೇ ಅದು? ಎಂಬಂಥ ಯಾವ ಸಂಗತಿಗಳನ್ನೂ ಯೋಚಿಸುವ ಗೋಜಿಗೆ ಹೋಗದೆ ಆವತ್ತೇ ಓದಲು ಕುಳಿತರು. ಒಂದೇ ದಿನದಲ್ಲಿ ಓದಿ ಮುಗಿಸಿ ತಮಗೆ ಬೇಕಾದ ಮುಖ್ಯ ವಿಚಾರಗಳನ್ನು ಟಿಪ್ಪಣಿ ಮಾಡಿಕೊಂಡರು. ಆ ಟಿಪ್ಪಣಿಯನ್ನು ಸರಾಸರಿ ಹತ್ತು ಬಾರಿ ಬೆಂಬಿಡದೆ ಪಠಿಸುತ್ತ ಪಾಯಿಪಾಠ ಮಾಡಿಕೊಂಡ ನಂತರ ನಿರಾಳರಾದರು.

ಮುಂದಿನ ಸೋಮವಾರದಂದು ಮುಂಜಾನೆ ತಮ್ಮ ಐದು ಜನ ಸಹಾಯಕರೊಂದಿಗೆ ಭಾಗೀವನಕ್ಕೆ ಹೊರಟು ಬಂದರು. ಆದರೂ ಗುರೂಜಿಯವರಿಗೆ ನವಪದ ಮಂಡಲ ಚಿತ್ರಿಸಲು ಬರುತ್ತಿರಲಿಲ್ಲ ಮಾತ್ರವಲ್ಲದೇ ಅದನ್ನು ತಮ್ಮ ಸಹಾಯಕರಿಂದಲೇ ಬರೆಯಿಸುವುದೂ ತಮ್ಮ ಘನತೆಗೊಂದು ಹಿರಿಮೆ ಎಂದೂ ಅವರು ಭಾವಿಸಿದ್ದರು. ಆದ್ದರಿಂದ ಅದಕ್ಕಾಗಿಯೇ ಕರೆದು ತಂದಿದ್ದ ಇಬ್ಬರು ಸಹಾಯಕರಿಂದ ಸುಮಿತ್ರಮ್ಮನ ಅಂಗಳದಲ್ಲಿ ಸುಂದರವಾದ ನವಪದ ಮಂಡಲವೊಂದನ್ನು ಬರೆಯಿಸಿದರು. ಅದರೆದುರು ಹೋಮ ಕುಂಡವನ್ನು ಸ್ಥಾಪಿಸಿ ಪೂಜೆಗೆ ಕುಳಿತರು. ಬಡಾವಣೆಯ ಪ್ರತಿನಿಧಿಗಳಾಗಿ ಸುಮಿತ್ರಮ್ಮ, ರಾಜೇಶ ಮತ್ತು ಸುಂದರಯ್ಯ ಭಯಭಕ್ತಿ ಮತ್ತು ಹುರುಪಿನಿಂದ ಕುಳಿತರು. ಸುಮಾರು ಒಂದು ಗಂಟೆಯ ಕಾಲ ತಮ್ಮ ಸಹಾಯಕರ ನಮ್ರ ಸಲಹೆ ಸೂಚನೆಯೊಂದಿಗೆ ಗುರೂಜಿಯವರಿಂದ ವಿಶೇಷ ಹೋಮ ಹವನಾದಿಗಳು ನಡೆಯತೊಡಗಿದವು. ನಡುನಡುವೆ ಗುರೂಜಿಯವರು ತಪ್ಪುತ್ತಿದ್ದ ಪೂಜಾಕ್ರಮವನ್ನು ಅವರ ಸಹಾಯಕರೇ ಖುದ್ದಾಗಿ ಗಮನಿಸುತ್ತ ಮೃದುವಾಗಿ ಅವರ ಕಿವಿಗಳಲ್ಲಿ ಉಸುರುತ್ತ ಅಂತೂ ಆ ಕೈಂಕರ್ಯವನ್ನು ವಿಧಿವತ್ತಾಗಿ ನಡೆಸಿಕೊಟ್ಟರು. ಆ ಹೋಮದಿಂದ ಹೊರಟ ದಟ್ಟ ಹೊಗೆಯು ಪೂಜೆಗೆ ಕುಳಿತಿದ್ದ ಒಂದಷ್ಟು ಭಕ್ತಾದಿಗಳಲ್ಲಿ ಕಿರಿಕಿರಿ ಮತ್ತು ಅಸಹನೆಯನ್ನು ಸೃಷ್ಟಿಸುತ್ತಿತ್ತಾದರೂ ಆ ಪವಿತ್ರ ಧೂಮವು ಭಾಗೀವನದ ಬಡಾವಣೆಯ ಚರಾಚರಗಳಲ್ಲೂ ಅಲ್ಲಿನ ವಾಯುಮಂಡಲದಲ್ಲೂ ಮತ್ತು ಸುತ್ತಮುತ್ತಲಿನ ಪರಿಸರದಲ್ಲೂ ನವಚೈತನ್ಯವನ್ನು ತುಂಬಿ, ಬಡಾವಣೆಯ ಸರ್ವರೂಪದ ಮಾಲಿನ್ಯವನ್ನೂ ತೊಡೆದು ಹಾಕಿ ವಾತಾವರಣವನ್ನು ಪರಿಶುದ್ಧಗೊಳಿಸಿ ಕೆಲಹೊತ್ತು ದೈವೀಪ್ರಭೆಯನ್ನು ಹೊಮ್ಮಿಸುವಲ್ಲಿ ಸಫಲವಾಯಿತು. ಕೊನೆಯಲ್ಲಿ ಗುರೂಜಿಯವರು ಹೋಮಕ್ಕೆ ಪೂರ್ಣಾಹುತಿ ನೀಡಿದರು. ಬಳಿಕ ಆಶ್ಲೇಷಬಲಿ ಮತ್ತು ನಾಗ ಸಂಬಂಧಿಯಾದ ಸೇವೆಗಳನ್ನು ಆಚರಿಸುವ ಅರ್ಥವನ್ನೂ ಅವುಗಳಿಂದ ದೊರಕುವ ಫಲಾನುಫಲಗಳ ಮಾಹಿತಿಯನ್ನೂ ಜನರಿಗೆ ವಿವರಿಸಲು ಮುಂದಾದರು.

‘ಭಕ್ತಾದಿಗಳೇ, ನೀವೆಲ್ಲರೂ ಭಯಭಕ್ತಿಯಿಂದ ಹಮ್ಮಿಕೊಂಡಂಥ ಈ ವಿಶೇಷ ಪೂಜೆಯು ಸಂಪನ್ನವಾಗಿರುವುದನ್ನು ನೋಡಿದಿರಿ. ಹಾಗಾಗಿ ಈ ಮಹಾ ಧಾರ್ಮಿಕವಿಧಿಯನ್ನು ನೀವೆಲ್ಲ ಯಾಕೆ ಆಚರಿಸಬೇಕು? ಇದನ್ನು ನಡೆಸುವುದರಿಂದ ನಿಮ್ಮೆಲ್ಲರ ಯಾವ ಯಾವ ರೂಪದ ಮನೋಭೀಷ್ಟಗಳು ನೆರವೇರುತ್ತವೆ ಎಂಬುದನ್ನು ನಿಮಗೆಲ್ಲ ಅರ್ಥವಾಗುವಂತೆ ವಿವರಿಸುವುದು ನಮ್ಮ ಕರ್ತವ್ಯ!’ ಎಂದ ಗುರೂಜಿಯವರು ಒಮ್ಮೆ ನೆಟ್ಟಗೆ ದೃಢವಾಗಿ ಕುಳಿತು ತಮ್ಮ ಮಾತನ್ನು ಮುಂದುವರೆಸಿದರು.

‘ಮುಖ್ಯವಾಗಿ ಜನರ ಜೀವ ರಕ್ಷಣೆಯ ದೃಷ್ಟಿಯಿಂದಲೂ ಮತ್ತು ಅನೇಕ ಬಗೆಯ ಸಮೃದ್ಧಿಗಳಿಗಾಗಿಯೂ ಹಾವುಗಳಂಥ ಕ್ರೂರ ಜಂತುಗಳನ್ನು ನಾಶ ಮಾಡುವುದು ಕೇವಲ ಕಲಿಯುಗದ ನಮ್ಮಂಥವರಿಗೆ ಮಾತ್ರವೇ ತಿಳಿದ ಉಪಾಯವಲ್ಲ. ಅದು ಬಹಳ ಹಿಂದೆ ದ್ವಾಪರಾಯುಗದಲ್ಲಿ ಅಂದರೆ, ಮಹಾಭಾರತ ನಡೆದ ಕಾಲದಲ್ಲೇ ಆರಂಭವಾಗಿತ್ತು ಎಂಬುದನ್ನು ಕೆಲವು ಪುರಾಣಗಳು ಹೇಳುತ್ತವೆ. ಅಂದು ನಾಗಲೋಕದ ವಿಷಸರ್ಪಗಳಿಂದ ಮನುಷ್ಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಮತ್ತು ಸಾವು ನೋವುಗಳನ್ನೂ ಅದರಿಂದ ನಾಡಿನ ಪ್ರಜೆಗಳೆಲ್ಲ ಹೆದರಿ ಕಂಗಾಲಾಗುತ್ತಿದ್ದುದನ್ನೂ ಅಂದಿನ ಮಹಾರಾಜ ಜನಮೇಜಯನು ಸ್ವತಃ ಕಾಣುತ್ತ ಬರುತ್ತಿದ್ದ. ಅಷ್ಟಲ್ಲದೇ ತಕ್ಷಕನೆಂಬ ಸರ್ಪವೊಂದು ಅವನ ಅಪ್ಪ ಪರೀಕ್ಷಿದ್ ಮಹಾರಾಜನನ್ನೇ ಕಚ್ಚಿ ಸಾಯಿಸಿಬಿಟ್ಟಿತು. ಅದರಿಂದ ಅವನಿಗೆ ಸರ್ಪಕುಲದ ಮೇಲೆಯೇ ದ್ವೇಷ ಹುಟ್ಟಿಬಿಟ್ಟಿತು. ಇದೇ ಸಂದರ್ಭದಲ್ಲಿ ಅವನಿಗೆ ಉತ್ತಂಕ ಋಷಿಯಿಂದ ಸರ್ಪಕುಲದ ಮೇಲೆ ಸೇಡು ತೀರಿಸಿಕೊಳ್ಳುವ ಸಲಹೆಯೂ ಬೆಂಬಲವೂ ಸಿಕ್ಕಿತು. ಹೀಗಾಗಿ ಹಾವುಗಳಂಥ ಕಂಟಕಜೀವಿಗಳನ್ನು ಈ ಭೂಮಿಯ ಮೇಲಿಂದಲೇ ನಿರ್ನಾಮ ಮಾಡಿಬಿಡಬೇಕು ಎಂದು ಪಣತೊಟ್ಟವನು ಕೂಡಲೇ, ‘ಸರ್ಪಸತ್ರ’ ಎಂಬ  ಯಾಗವನ್ನು ಹಮ್ಮಿಕೊಂಡು ಆ ಮೂಲಕ ಕೋಟಿಗಟ್ಟಲೆ ಸರ್ಪ ಸಂಕುಲಗಳನ್ನು ಆವಾಹಿಸಿ ಹೋಮಾಗ್ನಿಯಲ್ಲಿ ಕೆಡವುತ್ತ ಸುಟ್ಟು ಭಸ್ಮ ಮಾಡಿ ಲೋಕಕಲ್ಯಾಣ ಮಾಡಿದ. ಆದರೆ ಕೊನೆಯಲ್ಲಿ ಏನಾಯಿತೆಂದರೆ ಅವನ ಆಪ್ತರೂ, ಋಷಿಮುನಿಗಳೂ, ಸರ್ಪಸಂಕುಲದ ಹತ್ಯಾದೋಷವು ಮಹಾಪಾಪ! ಎಂದು ಅವನಿಗೆ ಮನವರಿಕೆ ಮಾಡಿಸಿದರು. ಆದ್ದರಿಂದ ಆ ಪಾಪಭೀತಿಗೆ ಬಿದ್ದ ಅವನು ಅದೇ ಋಷಿಮುನಿಗಳ ಸಲಹೆಯಂತೆ,  ‘ಆಶ್ಲೇಷಬಲಿ’ ಎಂಬ ಪೂಜಾವಿಧಿವನ್ನೂ ಆಚರಿಸಿದ. ಆ ಮೂಲಕ ತನ್ನ ಆ ಕೃತ್ಯಕ್ಕೂ ತನಗೆ ಸಹಕಾರ ನೀಡಿದ ಋಷಿಮುನಿಗಳಿಂದಾದ ಪಾಪಕ್ಕೂ ಪ್ರಾಯಶ್ಚಿತ್ತವನ್ನು ಮಾಡಿಕೊಂಡ. ಹೀಗಾಗಿ ಮುಂದೆ ಕಲಿಯುಗದಲ್ಲಿಯೂ ಆ ಆಚರಣೆಯು ಚಾಲ್ತಿಗೆ ಬಂತು!’ ಎಂದು ತಮ್ಮ ಮಾತಿಗೆ ಸ್ವಲ್ಪ ವಿರಾಮ ಕೊಟ್ಟ ಗುರೂಜಿಯವರು ನೀರು ಕುಡಿದು ಸುಧಾರಿಸಿಕೊಂಡು ಮತ್ತೆ ಆರಂಭಿಸಿದರು.

   ‘ನಾವೀಗ ನವಪದ ಮಂಡಲ ಬರೆದು ಅಷ್ಟ ಕುಲನಾಗರನ್ನು ಪೂಜಿಸಿ ಅವರೊಳಗೆ ಒಂದಾಗಿರುವ ಸಂಕರ್ಷಣಾಶಕ್ತಿ ಪರಮಾತ್ಮನನ್ನು ಆರಾಧಿಸಿದ್ದೇವೆ. ಅಷ್ಟಕುಲ ನಾಗರು ಯಾರೆಲ್ಲ ಎಂದರೆ ಶೇಷ, ವಾಸುಕಿ, ಕಾರ್ಕೋಟಕ, ಶಂಕಪಾಲ, ತಕ್ಷಕ, ಪದ್ಮ, ಮಹಾಪದ್ಮ, ಕುಲಿಕ ಎಂಬ ಎಂಟು ನಾಗಶಕ್ತಿಗಳು. ಅವರಲ್ಲೂ ಮೇಲು ಮತ್ತು ಕೀಳುಜಾತಿಯವರು ಇದ್ದಾರೆ. ಅಂದರೆ ಬ್ರಾಹ್ಮಣ ಮತ್ತು ಶೂದ್ರ ಜಾತಿಗಳು ಹಾಗೂ ವರ್ಣಭೇದಗಳು ಅವರಲ್ಲೂ ಇವೆ. ಈ ಅಷ್ಟಕುಲ ನಾಗರಲ್ಲಿ ಬ್ರಾಹ್ಮಣವರ್ಣದ ಬಿಳಿಯಬಣ್ಣದ ಸಾವಿರ ಹೆಡೆಗಳುಳ್ಳವನು ಶೇಷ. ಅವನು ಎಲ್ಲರಿಗಿಂತ ಸರ್ವ ಶ್ರೇಷ್ಠನು. ವೈಶ್ಯವರ್ಣದ ನೀಲಿಬಣ್ಣದ ಐನೂರು ಹೆಡೆಗಳಿರುವ ನೀಳ ದೇಹಿಯನ್ನು ತಕ್ಷಕ ಎನ್ನುತ್ತಾರೆ. ಕ್ಷತ್ರಿಯವರ್ಣದ ಹರಸಿನ ಬಣ್ಣದ ಏಳುನೂರು ಹೆಡೆಗಳುಳ್ಳ ವಾಸುಕಿಯೂ ಉತ್ತಮನೇ! ಇನ್ನು ಕೆಳಜಾತಿಯವರೆಂದರೆ ಕಪ್ಪುವರ್ಣದ ದೇಹವನ್ನೂ ಕೇವಲ ಮೂವತ್ತು ಹೆಡೆಗಳಿರುವ ಕಂಬಲನನ್ನೂ, ಕಾರ್ಕೋಟಕನನ್ನೂ ಶೂದ್ರರೆಂದು ತಿಳಿದು ಪೂಜಿಸುತ್ತೇವೆ!’ ಎಂದು ವಿವರಿಸುವ ಮೂಲಕ ಗುರೂಜಿಯವರು ಜನಮೇಜಯ ಮಹಾರಾಜನ ಸರ್ಪಸತ್ರ ಯಾಗದ ಪವಿತ್ರ ಉದ್ದೇಶವನ್ನೂ ಪುರಾಣ ಪ್ರಸಿದ್ಧ ನಾಗದೇವತೆಗಳ ಜಾತಿ ಮತ್ತು ವರ್ಣಗಳ ಅರ್ಥ ವಿಶೇಷಣಗಳನ್ನೂ ಮನಬಂದಂತೆ ತಿರುಚಿ ಹೇಳಿಬಿಟ್ಟರು.

   ಗುರೂಜಿಯವರ ಎದುರಿನಲ್ಲಿ ಕುಳಿತು ಶ್ರದ್ಧಾಭಕ್ತಿಯಿಂದ ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಸುಮಿತ್ರಮ್ಮನಿಗೆ ಜನಮೇಜಯನ ಕಥೆ ಕೇಳಿ ಗೊಂದಲವೂ, ಬೇಸರವೂ ಒಟ್ಟೊಟ್ಟಿಗಾಯಿತು. ಏಕೆಂದರೆ ಅವರೂ ಮಹಾಭಾರತವನ್ನು ಓದಿದವರು. ಹಾಗಾಗಿ ಗುರೂಜಿ ವಿವರಿಸಿದ್ದ ಕಥೆಗೂ ತಾವು ಓದಿ ಮತ್ತು ಕೇಳಿ ತಿಳಿದಿದ್ದ ಕಥೆಗೂ ಸಂಬಂಧವೇ ಇಲ್ಲದಷ್ಟು ಅದು ತದ್ವಿರುದ್ಧವಾಗಿತ್ತು! ಅತ್ತ ಗುರೂಜಿಯವರ ಸ್ವಲ್ಪ ದೂರದಲ್ಲಿ ಡಾ. ನರಹರಿಯೂ ಕುಳಿತಿದ್ದ. ಅವನು ತನ್ನ ಸುತ್ತಲಿನ ಸಮಾಜದ ನಂಬಿಕೆ, ಸಂಪ್ರದಾಯ ಮತ್ತು ಆಚರಣೆಗಳನ್ನು ಬಹಳವೇ ಗೌರವಿಸುವವನು ಮತ್ತು ಅವರಲ್ಲನೇಕರ ಮೌಢ್ಯ ಹಾಗೂ ತಲತಲಾಂತರದಿಂದ ಅವರೊಡನೆ ರಕ್ತಗತವಾಗಿ ಬಂದಿದ್ದಂಥ ಧಾರ್ಮಿಕ ದೌರ್ಬಲ್ಯಗಳನ್ನೂ ಅವುಗಳ ನಿವಾರಣೆಗಾಗಿ ಅವರೆಲ್ಲ ಹಮ್ಮಿಕೊಳ್ಳುವ ವಿವಿಧ ವಿಧಿಯಾಚರಣೆಗಳನ್ನೂ ಅದರಿಂದ ಅವರಲ್ಲಿ ತಾತ್ಕಾಲಿಕವಾಗಿ ಶಾಂತಿ, ನೆಮ್ಮದಿ ಮೂಡುವುದನ್ನೂ ಕಾಣುತ್ತ, ಆ ವಿಚಾರಗಳನ್ನು ತನ್ನೊಳಗೆಯೇ ತುಲನಾತ್ಮಕವಾಗಿ ವಿಮರ್ಶಿಸುತ್ತ ಬರುತ್ತಿದ್ದವನು ಆ ಕುರಿತು ಅತೀವ ಕುತೂಹಲವನ್ನೂ ಹೊಂದಿದ್ದ. ಹಾಗಾಗಿ ಇಂದು ಕೂಡಾ ಎಲ್ಲರೊಂದಿಗೆ ಬೆರೆತು ಗುರೂಜಿಯವರ ಪೂಜೆಯನ್ನು ತನ್ಮಯತೆಯಿಂದ ಗಮನಿಸುತ್ತಿದ್ದ. ಆದರೆ ಕೊನೆಯಲ್ಲಿ ಅವರ ಪ್ರವಚನವನ್ನು ಕೇಳಿದವನಿಗೆ ವಿಸ್ಮಯವಾಯಿತು. ಏಕೆಂದರೆ ಅವನೂ ಅನೇಕ ಧಾರ್ಮಿಕ ಗ್ರಂಥಗಳನ್ನು ಓದಿದ್ದ ಮತ್ತು ಅವುಗಳ ಸಾರಸತ್ವವನ್ನು ಅರ್ಥೈಯಿಸಿಕೊಂಡಿದ್ದ. ಹೀಗಾಗಿ ಅವನಿಗೆ ಗುರೂಜಿಯವರ ಜ್ಞಾನ ಮತ್ತು ತಿಳುವಳಿಕೆಯು ಕ್ಷುಲ್ಲಕವೆನಿಸಿಬಿಟ್ಟಿತು.   

   ಇತ್ತ ಗುರೂಜಿಯವರು ಮತ್ತೆ ತಮ್ಮ ಪ್ರವಚನ ಮುಂದುವರೆಸಿದರು. ‘ಇಂದಿನ ಆಶ್ಲೇಷಬಲಿಯ ಪರಿಣಾಮವಾಗಿ ನಿಮ್ಮೆಲ್ಲರ ಎಂಥೆಂಥ ಪಾಪಕೃತ್ಯಗಳು ಪರಿಹಾರವಾಗಿವೆ ಎಂಬ ಕುತೂಹಲವೂ ನಿಮಗಿರಬೇಕಲ್ಲಾ? ಹಾಗಾದರೆ ಅದನ್ನೂ ವಿವರಿಸುತ್ತೇವೆ ಕೇಳಿ!’ ಎಂದು ಹೆಮ್ಮೆಯಿಂದ ಅಂದವರು ತಾವು ವಾರದ ಹಿಂದೆ ಹೊಸ ಕೃತಿಯೊಂದನ್ನು ಓದಿ ಬಾಯಿಪಾಠ ಮಾಡಿಕೊಂಡಿದ್ದ ಮುಖ್ಯ ವಿಷಯವನ್ನು ಕಣ್ಣುಮುಚ್ಚಿ ಜ್ಞಾಪಿಸಿಕೊಂಡರು.

‘ಕಲಿಯುಗದಲ್ಲಿ ನಾಗನಿಗೆ ಎರಡು ರೂಪವಂತೆ. ಒಂದು ಪ್ರತಿಮಾ ರೂಪ, ಅಂದರೆ ಶಿಲಾರೂಪ. ಇನ್ನೊಂದು ಉರಗರೂಪ. ಅಂದರೆ ಹಾವಿನ ರೂಪ. ಹೀಗಾಗಿ ಅವನು ವಾಸ ಮಾಡುವ ಸ್ಥಳ ಮತ್ತು ಪರಿಸರವನ್ನು ಯಾರಾದರೂ ಅಶುದ್ಧ ಮಾಡಿದ್ದರೆ, ಸರ್ಪ ಮಿಲನವನ್ನು ನೋಡಿದ್ದರೆ, ಅವುಗಳ ಕ್ರಿಯೆಗೆ ಅಡ್ಡಿ ಪಡಿಸಿದ್ದರೆ, ನಾಗನಿಗೆ ನೀಡಬೇಕಾದ ಪೂಜೆ ಪುನಸ್ಕಾರಗಳನ್ನು ಕಾಲಕಾಲಕ್ಕೆ ನೀಡದೇ ಹೋದರೆ, ಅವನು ಸಂಚರಿಸುವ ಬೀದಿಗಳಿಗೆ ತಡೆಯೊಡ್ಡಿದ್ದರೆ, ಅಲ್ಲೆಲ್ಲ ಕಸ ಕಶ್ಮಲಗಳನ್ನೆಸೆದು ಗಲೀಜು ಮಾಡಿದ್ದರೆ, ಹಾವು ಹಿಡಿಯುವವರನ್ನು ಕರೆದು ತಮ್ಮ ಮನೆ, ವಠಾರಗಳ ಸುತ್ತಮುತ್ತ ಸಂಚರಿಸುವ ಸರ್ಪಗಳನ್ನು ಹಿಡಿಸಿದ್ದರೆ, ಹುತ್ತ ಮತ್ತು ನಾಗಬನಗಳ ಹತ್ತಿರ ಮನೆಗಳನ್ನು ಕಟ್ಟಿದ್ದರೆ, ನಾಗಸಂತತಿಯನ್ನು ಕಂಡಕಂಡಲ್ಲಿ ಹೆದರಿಸಿದ್ದರೆ ಮತ್ತು ತಿಳಿಯದೆ ಕೊಂದಿದ್ದರೆ, ನಾಗಭಕ್ತರನ್ನೂ ಇಂಥ ಪೂಜಾವಿಧಿಗಳನ್ನೂ ಹಾಗೂ ಅವುಗಳನ್ನು ಆಚರಿಸುವ ಪ್ರಮುಖರನ್ನೂ ನಾಸ್ತಿಕರಾಗಿ ನಿಂದಿಸಿದ್ದರೆ, ಅಂಥ ಧಾರ್ಮಿಕ ಕಾರ್ಯಗಳು ನಡೆಯುವುದನ್ನು ಕಂಡೂ ಅಲ್ಲಿಗೆ ಭೇಟಿಕೊಡದಿದ್ದರೆ, ಅಲ್ಲಿನ ಪ್ರಸಾದವನ್ನು ಸ್ವೀಕರಿಸದೆ ಅವಹೇಳನ ಮಾಡಿದ್ದರೆ ಹಾಗೂ ಇಂಥ ಇನ್ನೂ ಅನೇಕ ವಿಷಯಗಳಲ್ಲಿ ನಾಗನಿಗೆ ವಿರುದ್ಧವಾಗಿ ನಡೆದುಕೊಂಡಿರುವಂಥವರು ಯಾರೇ ಆಗಿರಲಿ ಆಶ್ಲೇಷಾಬಲಿಯನ್ನೂ ಮತ್ತು ಇತರ ನಾಗಸಂಬಂಧಿ ಪೂಜೆ, ಪುನಸ್ಕಾರಗಳನ್ನೂ ನಡೆಸುತ್ತಾರೋ ಅವರೆಲ್ಲರೂ ನಾವೀಗ ತಿಳಿಸಿದಂಥ ಸಕಲ ಶಾಪ, ದೋಷಗಳಿಂದಲೂ ಮುಕ್ತರಾಗುತ್ತಾರೆ!

   ಇಷ್ಟುಮಾತ್ರವೇ ಅಲ್ಲದೇ ಸರ್ಪ ಮತ್ತು ನಾಗಗಳನ್ನು ಹಿಡಿಯುವವರೂ ಹಾಗೂ ಅವುಗಳ ಕೋಪಕ್ಕೆ ತುತ್ತಾಗುವವರೂ, ವಿಷದ ಹಾವುಗಳಿಂದ ಕಚ್ಚಿಕೊಂಡು ಸಾಯುವವರೂ ಮತ್ತು ಬದುಕಿದವರೂ ಮುಂದಿನ ಜನ್ಮದಲ್ಲಿ ನಾಗಲೋಕದಲ್ಲಿ ವಿಷವಿಲ್ಲದ ಹಾವುಗಳಾಗಿ ಹುಟ್ಟುತ್ತಾರೆ. ಅಂದರೆ ಕೇರೆ, ಒಲ್ಲೆ ಅಥವಾ ಪಗೆಲ ಅಂತಾರಲ್ಲ ಆ ಜಾತಿಯ ಹಾವುಗಳಾಗಿ ಹುಟ್ಟಿ ನಿಕೃಷ್ಟ ಜೀವನವನ್ನು ನಡೆಸುತ್ತಾರೆ. ಬಳಿಕ ಯಾರ್ಯಾರಿಂದಲೋ ಕೊಲ್ಲಲ್ಪಟ್ಟು ನರಕಕ್ಕೆ ಹೋಗುತ್ತಾರೆ. ನೀವು ಪೂರ್ವ ಜನ್ಮದಲ್ಲೋ ಈ ಜನ್ಮದಲ್ಲೋ ಅಥವಾ ನಿಮ್ಮ ಹಿರಿಯರೋ ಅಥವಾ ಅವರ ಹಿರಿಯರೋ ತಿಳಿದೋ ತಿಳಿಯದೆಯೋ ಮಾಡಿರುವ ಸರ್ಪ ಹತ್ಯಾದೋಷಗಳೆಲ್ಲ ಇಂಥ ನಾಗಸಂಬಂಧಿ ಪೂಜಾವಿಧಿಗಳನ್ನು ಆಚರಿಸುವುದರಿಂದಲೇ ಸಂಪೂರ್ಣ ಪರಿಹಾರವಾಗಿ ಬಿಡುತ್ತವೆ! ಎಂದು ಈಗಿನ ನಮ್ಮ ಕೆಲವು ವೇದೋತ್ತಮ ಪಂಡಿತರು ತಮ್ಮ ಗ್ರಂಥಗಳಲ್ಲಿ ಅರ್ಥವತ್ತಾಗಿ ವಿವರಿಸಿದ್ದಾರೆ. ಆದ್ದರಿಂದ ಧಾರ್ಮಿಕ ನಿಯಮದ ಪ್ರಕಾರ ಪ್ರತೀ ಮನೆಗಳಲ್ಲೂ ಒಂದು ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಅಥವಾ ವರ್ಷಕ್ಕೊಮ್ಮೆಯಾದರೂ ಆಶ್ಲೇಷಬಲಿಯನ್ನು ಎಲ್ಲರೂ ಮಾಡಿಸಲೇಬೇಕು. ಅದರೊಂದಿಗೆ ತಮ್ಮ ಸುತ್ತಮುತ್ತಲಿನ ಹಸಿರು ನಾಗಬನಗಳನ್ನೆಲ್ಲ ಸಾಧ್ಯವಾದಷ್ಟು ಬೇಗನೇ ಜೀರ್ಣೋದ್ಧಾರವನ್ನೂ ಮಾಡಿಸಿ ನಾಗನಿಗೂ ಅವನ ಗಣಗಳಿಗೂ ನಮ್ಮಂಥದ್ದೇ ಉತ್ತಮ ವಸತಿ ವ್ಯವಸ್ಥೆಯನ್ನು ಕಲ್ಪಿಸುವಂಥ ಮಹತ್ಕಾರ್ಯವು ನಮ್ಮ ನಿಮ್ಮೆಲ್ಲರಿಂದ ನಿರಂತರವಾಗಿ ನಡೆಯುತ್ತಿರಬೇಕು. ಆವಾಗಲೇ ಜನಮೇಜಯನ ಅಂದಿನ ಲೋಕಕಲ್ಯಾಣ ಕಾರ್ಯವು ನಮ್ಮಿಂದಲೂ ಸಂಪನ್ನವಾಗುವ ಮೂಲಕ ಸರ್ವರೂ ಸಮೃದ್ಧಿಯಿಂದ ಬಾಳಲು ಸಾಧ್ಯ!’ ಎಂದು ಗುರೂಜಿಯವರು ಗಂಭೀರವಾಗಿ ವಿವರಿಸಿ ತಮ್ಮ ಮಾತಿಗೆ ಪೂರ್ಣ ವಿರಾಮ ನೀಡಿ ಕಣ್ಣುಮುಚ್ಚಿ ಕುಳಿತರು.

   ನಾಗಚರಿತ್ರೆಯ ಕುರಿತು ಈವರೆಗೆ ಎಂದೂ ಕೇಳರಿಯದ ಹೊಸ ಪ್ರವಚನವನ್ನು ಗುರೂಜಿಯವರಿಂದ ಕೇಳಿದ ಸುಮಿತ್ರಮ್ಮ ಮತ್ತವರ ಗಂಡ ಲಕ್ಷ್ಮಣಯ್ಯ ಹಾಗೂ ಡಾ. ನರಹರಿಯನ್ನು ಹೊರತುಪಡಿಸಿ ಉಳಿದೆಲ್ಲರೂ ರೋಮಾಂಚಿತರಾಗಿದ್ದರು. ಹಾಗಾಗಿ ಗುರೂಜಿಯವರು ವಿವರಿಸಿದ ನಾಗಸಂಬಂಧಿ ಅಪಚಾರಗಳು ತಮ್ಮಿಂದಲೂ ನಡೆದಿರಬಹುದೇನೋ ಎಂಬ ಸಂಶಯ ಮತ್ತು ಭಯಕ್ಕೆ ಬಿದ್ದ ಅವರಲ್ಲನೇಕರು ಆ ಕುರಿತೇ ಯೋಚಿಸುತ್ತ ತಮ್ಮೊಳಗಿನ ತಳಮಳವನ್ನು ಹತ್ತಿಕ್ಕಲಾಗದೆ ಅಡಿಗಡಿಗೂ ಕೆನ್ನೆ ಬಡಿದುಕೊಂಡು ನಾಗನಲ್ಲಿ ಕ್ಷಮೆಯಾಚಿಸುತ್ತ ಒಬ್ಬೊಬ್ಬರಾಗಿ ಎದ್ದು ಗುರೂಜಿಯವರಿಂದ ತೀರ್ಥ ಪ್ರಸಾದ ಸ್ವೀಕರಿಸುತ್ತ ತಾತ್ಕಾಲಿಕ ಸಮಾಧಾನ ಹೊಂದತೊಡಗಿದರು. ಆದರೆ ತುಸುಹೊತ್ತಿನಲ್ಲಿ ಆ ವಿಷಯವನ್ನು ಬದಿಗೆ ತಳ್ಳಿ ಊಟದ ನಿರೀಕ್ಷೆಯಲ್ಲಿ ಶತಪಥ ಹಾಕುತ್ತ ಸಮಯ ಕಳೆದರು. ಅಷ್ಟರಲ್ಲಿ ಅಡುಗೆಯವನೊಬ್ಬ ಬಂದು ಗುರೂಜಿಯ ಕಿವಿಯಲ್ಲಿ ಏನೋ ಉಸುರಿದ. ಅದಕ್ಕವರು, ‘ಓಹೋ ಹೌದಾ ಸರಿ, ಸರಿ. ಎಲ್ಲವೂ ತಯಾರಾಗಿದೆ ತಾನೇ…?’ ಎನ್ನುತ್ತ ಅವನನ್ನು ತೀಕ್ಷ್ಣವಾಗಿ ದಿಟ್ಟಿಸಿದರು. ಅದಕ್ಕವನೂ, ‘ಹೌದು ಗುರೂಜೀ…!’ ಎಂದ ನಮ್ರನಾಗಿ.

‘ಹ್ಞೂಂ, ನೀನು ಹೋಗು. ನಾವೇ ಕಳುಹಿಸುತ್ತೇವೆ!’ ಎಂದವರು ಎದ್ದು ನಿಂತು ಗಟ್ಟಿ ಧ್ವನಿಯಲ್ಲಿ, ‘ನೋಡಿ ಭಕ್ತಾದಿಗಳೇ ದೇವರ ಪ್ರಸಾದ ತಯಾರಿದೆ. ಎಲ್ಲರೂ ಸಾವಕಾಶವಾಗಿ ಹೋಗಿ ಭೋಜನ ಸ್ವೀಕರಿಸಿ…!’ ಎಂದು ಸೂಚಿಸಿದರು. ಆಗ ಎಲ್ಲರೂ ದಡಬಡನೆದ್ದು ಊಟದ ವ್ಯವಸ್ಥೆಯತ್ತ ನಡೆದರು.

   ಇತ್ತ ಗುರೂಜಿಯ ಪ್ರವಚನದಿಂದ ನರಹರಿಗೆ ಆಘಾತವಾಗಿತ್ತು! ತಾವು ಧಾರ್ಮಿಕರು ಮತ್ತು ಜ್ಞಾನಿಗಳು ಎಂದು ಕರೆಯಿಸಿಕೊಳ್ಳುವ ಇಂಥ ಒಂದಷ್ಟು ವ್ಯಕ್ತಿಗಳು ತಮ್ಮ ಕಾರ್ಯಸಾಧನೆ ಮತ್ತು ಶ್ರೀಮಂತಿಕೆಗೋಸ್ಕರ ಸನಾತನ ಹಿಂದೂ ಧರ್ಮದ ಆಚರಣೆ, ಸಂಪ್ರಾದಾಯಗಳನ್ನೆಲ್ಲ ತಮಗೆ ಬೇಕಾದಂತೆ ದುರುಪಯೋಗಪಡಿಸಿಕೊಂಡು ಆಮೂಲಕ ಮುಗ್ಧ, ಅಮಾಯಕ ಜನರನ್ನು ಹೇಗ್ಹೇಗೆಲ್ಲ ಶೋಷಿಸುತ್ತಿದ್ದಾರೆ!? ಎಂದುಕೊಂಡವನಿಗೆ ಏಕನಾಥರ ಮೇಲೆ ತೀವ್ರ ಜಿಗುಪ್ಸೆ ಹುಟ್ಟಿತು. ಅಷ್ಟಲ್ಲದೇ ಅವರು ತಮ್ಮ ಮಾತಿನ ಮಧ್ಯೆ, ‘ನಿಮ್ಮ ಸುತ್ತಮುತ್ತಲಿನ ನಾಗಬನಗಳನ್ನು ಆದಷ್ಟು ಬೇಗ ಜೀರ್ಣೋದ್ಧಾರಗೊಳಿಸಲು ಸಿದ್ಧರಾಗಿ!’ ಎಂದು ಕರೆ ಕೊಟ್ಟಿದ್ದು ಮತ್ತು ಅವರ ಆ ಮಾತನ್ನು ಅಲ್ಲಿನ ಜನರು ವೇದವಾಕ್ಯವೆಂದೇ ಭಾವಿಸಿದ್ದನ್ನೂ ಅವರಲ್ಲನೇಕರ ಮುಖಭಾವದಿಂದಲೇ ಗ್ರಹಿಸಿದ್ದವನು ದಂಗಾಗಿಬಿಟ್ಟ! ಅಷ್ಟು ಮಾತ್ರವಲ್ಲದೇ ಈ ಗುರೂಜಿಯವರಂಥ ದುರ್ಮಾಗಿಗಳು ತಮ್ಮ ಅಸಂಬದ್ಧ ವಿಚಾರಗಳಿಂದ ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿರುವುದೇ ಅಲ್ಲದೇ ‘ದೇವರು’ ಎಂಬ ಮಹಾನ್‍ಶಕ್ತಿಯ ಹುಡುಕಾಟದಲ್ಲಿ ತೊಡಗಿರುವಂಥ ಸಾತ್ವಿಕ ಜನರನ್ನೂ ದಾರಿ ತಪ್ಪಿಸಿ ಮೂಢನಂಬಿಕೆಯ ಕೂಪಕ್ಕೆ ತಳ್ಳುತ್ತಾ ಅದರೊಂದಿಗೆ ಪ್ರಕೃತಿಯ ಹಸಿರು ಪರಿಸರದ ನಾಶಕ್ಕೂ ಪ್ರಚೋದಿಸುತ್ತಿರುವುದನ್ನು ಸೂಕ್ಷ್ಮವಾಗಿ ಅರಿತ ನರಹರಿಯು ತೀವ್ರ ತಳಮಳಗೊಂಡ. ಆದ್ದರಿಂದ ಇಂಥ ಹಾಳು ಕೆಲಸಕ್ಕೆ ತಾನು ಪಾಲು ಕೊಡಲೇಬಾರದಿತ್ತು! ಎಂದುಕೊಂಡು ಮರುಗಿದವನು ಮರುಕ್ಷಣ ಇಲ್ಲ, ಇಂಥವರನ್ನು ಸುಮ್ಮನೆ ಬಿಡಬಾರದು. ಬಿಟ್ಟರೆ ದೊಡ್ಡ ಅಪಾಯ! ಅದಕ್ಕಾಗಿ ತಾನು ಏನಾದರೊಂದು ಮಾಡಲೇಬೇಕು! ಎಂದು ನಿರ್ಧರಿಸಿದವನಿಗೆ ತಟ್ಟನೆ ತನ್ನ ಗೆಳೆಯ ರಾಜಶೇಖರ ನೆನಪಾದ. ಆದ್ದರಿಂದ ಸಹನೆ ತಂದುಕೊಂಡು ಎದ್ದು ಊಟಕ್ಕೆ ನಡೆದ.

   ಗುರೂಜಿಯವರ ಪ್ರವಚನದಿಂದಾಗಿ ಸುಮಿತ್ರಮ್ಮನಿಗೂ ಅವರ ಮೇಲೆ ಮೊದಲಿದ್ದ ಗೌರವಾದರಗಳು ತುಸು ಸಡಿಲವಾದಂತೆನ್ನಿಸಿತು. ಈ ಗುರೂಜಿ, ಶಂಕರ ಹೊಗಳಿದಷ್ಟು ಜ್ಞಾನಿಯೇನಲ್ಲ. ಯಾಕೆಂದರೆ ಇವರಿಗೆ ನಮ್ಮ ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ಸರಿಯಾದ ತಿಳುವಳಿಕೆಯೇ ಇಲ್ಲ. ಹಾಗಾಗಿ ತಮ್ಮ ಲಾಭಕ್ಕಾಗಿಯೇ ಇವರು ನಮ್ಮನ್ನೆಲ್ಲ ದಾರಿ ತಪ್ಪಿಸಿ ದುಡ್ಡು ಮಾಡಲು ಹೊರಟಿದ್ದಾರೋ ಹೇಗೇ…? ಎಂದು ಅವರ ಒಳಮನಸ್ಸು ಅನುಮಾನಿಸಿತು. ಆದರೆ ಮರುಕ್ಷಣ, ‘ಛೇ, ಛೇ! ಹಾಗೇನೂ ಇರಲಾರದು. ಏನೋ ಸಾಮಾನ್ಯ ಜನರಿಗೆ ವಿಷಯ ಅರ್ಥವಾಗಲು ಪುರಾಣ ಕಥೆಯನ್ನು ಸ್ವಲ್ಪ ಸರಳ ಮಾಡಿ ಹೇಳಿರಬಹುದಷ್ಟೇ! ಎಂದುಕೊಂಡು ತಮ್ಮ ಯೋಚನೆಯನ್ನು ಬದಿಗೊತ್ತಿ ಊಟದ ಚಪ್ಪರದತ್ತ ಹೆಜ್ಜೆ ಹಾಕಿದರೆ ಅವರ ಗಂಡ ಲಕ್ಷ್ಮಣಯ್ಯ, ಪತ್ನಿಯನ್ನೂ ಗುರೂಜಿಯವರನ್ನೂ ಅಸಹನೆಯಿಂದ ದಿಟ್ಟಿಸಿ ರಪ್ಪನೆ ಹಣೆ ಚಚ್ಚಿಕೊಂಡು ಮೌನವಾಗಿ ಭೋಜನ ವ್ಯವಸ್ಥೆಯತ್ತ ನಡೆದರು.

(ಮುಂದುವರೆಯುವುದು)

******************

ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply

Back To Top