ಅಂಕಣ ಬರಹ

ತೊರೆಯ ಹರಿವು

ಅಕ್ಷಯ ವಸ್ತ್ರವೂ.. ಅಕ್ಷೋಹಿಣಿ ಸೈನ್ಯವೂ

online,saris | Chronicle Today Network

ತಂದೆ ಕೊಡಿಸೋ ಸೀರೆ; ಮದುವೆ ಆಗೋವರೆಗೆ. ತಾಯಿ ಕೊಡಿಸೋ ಸೀರೆ; ತಾಯಿ ಆಗೋವರೆಗೆ, ಬಂಧು ಕೊಡಿಸೋ ಸೀರೇ ಬಣ್ಣ ಹೋಗೋವರೆಗೆ, ಗಂಡಾ ಕೊಡಿಸೋ ಸೀರೇೇೇ… ಕುಂಕುಮ ಇರುವವರೆಗೆ, ಹೆಣ್ಣಿನ ಜನುಮ ಕಳೆಯುವವರೆಗೆ, ಮಣ್ಣಿನ ಮಮತೆ ಮರೆಯೋವರೆಗೆ…’ ಹೆಣ್ಣು ಮನಸ್ಸುಗಳನ್ನು ಕಲಕಿ ಬಿಡುವ ಅಣ್ಣಾವ್ರ ದನಿಯಲ್ಲಿ ಬಂದ ಈ ಹಾಡಿಗಿರುವ ವೈಟೇಜೇ ಬೇರೆ…   

         ಸ್ತ್ರೀವಾದ, ಸ್ವಾಭಿಮಾನ ಮುಂತಾದವೆಲ್ಲಾ ಅರ್ಥವಾಗದ ಮುಗ್ಧೆಯರಿಂದ ಹಿಡಿದು, ಅಪ್ಪಟ ಸ್ತ್ರೀವಾದಿಯವರೆಗೂ ಸೀರೆ ಮೆಚ್ಚುಗೆಯ ಉಡುಪೆಂದರೆ ತಪ್ಪಾಗದು. ವಿದೇಶಿ ಹೆಣ್ಣುಗಳೂ ಸಹ ಮೀಟರುಗಟ್ಟಲೆ ಇರುವ ಬಟ್ಟೆಯನ್ನು ಬಗೆ ಬಗೆ ಶೈಲಿಯಲ್ಲಿ ಉಡುವ ಭಾರತೀಯ ನಾರಿಯರ ಸೌಂದರ್ಯ ಪ್ರಜ್ಞೆಗೆ ಬೆರಗಾಗುತ್ತಾರೆ ಎನ್ನುವುದು ಸೀರೆಯ ಮೆರುಗಿನ ಮುಕುಟಕ್ಕೊಂದು ಹಿರಿಮೆಯ ಗರಿ ಸಿಕ್ಕಿಸುತ್ತದೆ. ಗೊರೂರರ, ‘ಅಮೇರಿಕದಲ್ಲಿ ಗೊರೂರು’ ಪುಸ್ತಕದಲ್ಲಿ ಅವರ ಶ್ರೀಮತಿಯವರು ಉಡುಪಾಗಿದ್ದ ಸೀರೆಯನ್ನು ವಿದೇಶಿಯರು ಅಚ್ಚರಿಯಿಂದ ನೋಡಿ ಪ್ರೀತಿಯಿಂದ ಮೆಚ್ಚಿದ ಪ್ರಸಂಗವನ್ನಿಲ್ಲಿ ನೆನಪಿಸಿಕೊಳ್ಳಬಹುದು. 

    ಮಿಲಿಂದನೆಂಬ ಸಾರ್ವಕಾಲಿಕ ಸುಂದರಾಂಗನ ತಾಯಿ ಉಷಾ ಸೋಮನ್, ಸೀರೆ ಉಟ್ಟೇ ಮ್ಯಾರಥಾನ್ ಓಡುವ, ನಾನಾ ಬಗೆಯ ಕಸರತ್ತು ಮಾಡುವ ವೀಡಿಯೋಗಳನ್ನು ಸೀರೆಯನ್ನು ತೊಡಕಿನ ಬಟ್ಟೆಯೆಂದು ಹಳಿದು ಮೂಗು ಮುರಿಯುವವರಿಗೆ ತೋರಿಸಬೇಕು. ಗದ್ದೆ ನಾಟಿಯಿಂದ ಹಿಡಿದು, ಕಾರ್ಖಾನೆ, ಕೂಲಿ, ಕಚೇರಿ, ಅಡುಗೆ ಮನೆ, ಮಕ್ಕಳ ಸಂಭಾಳಿಕೆ… ಹೀಗೆ ಎಲ್ಲದಕ್ಕೂ ಸೈ ಎನ್ನುವ ಸೀರೆಗೊಂದು ಜೈ ಎನ್ನದಿರಲಾದೀತೆ?!

 ಮನೆಯ ಟ್ರಂಕಿನಲ್ಲಿ, ಬೀರುವಿನಲ್ಲಿ ಸೀರೆಗಳು ರಾಶಿ ತುಂಬಿದ್ದರೂ, ಅಂಗಡಿಯೊಳಗಿನ ಗೊಂಬೆ ಮೈಮೇಲಿನದ್ದು ತನ್ನಲಿಲ್ಲವಲ್ಲಾ! ಬೇರೊಬ್ಬಾಕೆ ಉಟ್ಟ ಬಣ್ಣ, ಕಸೂತಿ, ಡಿಸೈನ್, ಫ್ಯಾಬ್ರಿಕ್ ತನ್ನ ಕಲೆಕ್ಷನ್ ನಲ್ಲಿ ಇಲ್ಲವಲ್ಲಾ!! ಎಂದು ಪೇಚಾಡದ  ಮಹಿಳೆಯರನ್ನು ದುರ್ಬೀನಿನಲ್ಲಿ ಹುಡುಕಬೇಕು.

     ಸೀರೆಗೊಂದು ಸೊಗಸು ಬರುವುದೇ ಅದರ ಬಣ್ಣ, ಕಸೂತಿ, ಸೆರಗಿನ ಮೆರುಗು, ಅಂಚಿನ ಸೊಬಗು, ನೆರಿಗೆ ಚಿಮ್ಮುವ ಪರಿಯಿಂದ ಎಂದರೆ ತಪ್ಪಾಗದು. ಒಂದಿಬ್ಬರು ಹೆಂಗಳೆಯರು ಬಿಡುವಿದ್ದು    ಸೀರೆ ಮಳಿಗೆಯೊಂದಕ್ಕೆ ಕಾಲಿಟ್ಟರೆಂದರೆ ನೋಡಿ, ಪ್ರತೀ ಸೀರೆಯ ಗುಣಗಾನ ಮಾಡುತ್ತಾ, ಅಂಚು ಸವರುತ್ತಾ, ಸೆರಗಿನ ವೈಭವ ಬಣ್ಣಿಸುತ್ತಾ, ಉಟ್ಟರೆ ಎಷ್ಟು ನೆರಿಗೆ ಬರಬಹುದೆಂದು ಅಂದಾಜಿಸುತ್ತಾ, ಅದರ ಗುಣಮಟ್ಟ, ಕಸೂತಿ, ಪ್ರಿಂಟ್, ಬಣ್ಣವನ್ನು ವಿಶ್ಲೇಷಿಸುತ್ತಾ… ಇಡೀ ದಿನ ಅಲ್ಲಿಯೇ ಹೊತ್ತು ಕಳೆದು ಬರಬಲ್ಲರು.

          ಸೀರೆ ಎಂದರೆ ಕೇವಲ ಒಂದು ಬಗೆಯ ಉಡುಪೆಂದು ಸಾಮಾನ್ಯೀಕರಿಸುವುದು ಸರಿಯಲ್ಲ. ಸೀರೆ ಎಂಬುದು ಹಲವು ಭಾವನೆಗಳ ಸಂಗಮ. ಮೇಲೆ ಉದಾಹರಿಸಿದ ಅಣ್ಣಾವ್ರ ಹಾಡಿನ ಒಳ ದನಿ ಕೂಡ ಇದೇ ಆಗಿದೆ. ಯಾವ ಯಾವ ಕಾರ್ಯಕ್ರಮಗಳಿಗೆ ಯಾವ ಬಗೆ ಸೀರೆ ಉಡಬೇಕೆನ್ನುವುದೂ ರೂಢಿಯಲ್ಲಿದೆ. ಮದುವೆ ಹೆಣ್ಣಿಗೆ ಆರತಕ್ಷತೆಗೆ ಮರೂನ್ ಬಣ್ಣದ ದೊಡ್ಡಂಚಿನ ರೇಷ್ಮೆ, ಧಾರೆಗೆ ಬಿಳಿ/ಕೆನೆ ಬಣ್ಣಕ್ಕೆ ಕೆಂಪಂಚಿನ ರೇಷ್ಮೆ; ಸೀಮಂತಕ್ಕೆ ಹಸಿರು ಬಣ್ಣದ ರೇಷ್ಮೆ, ಬಾಣಂತನದಲ್ಲಿ ಮೆತ್ತನೆಯ ಹತ್ತಿ ಸೀರೆ, ಹಬ್ಬ ಹರಿದಿನಗಳಿಗೆ, ಶುಭ ಕಾರ್ಯಗಳಿಗೆ, ತಿಥಿ- ಅಂತ್ಯಕ್ರಿಯೆಗಳಿಗೆ… ಹೀಗೆ.. ಋತುಮಾನ ಆಧಾರಿತ ಬೆಳೆಗಳಿರುವಂತೆ, ಕಾರ್ಯಕ್ರಮ ಆಧರಿಸಿ ಸೀರೆ ಉಡುವುದಿರುತ್ತದೆ!!. ಭಾರೀ ದಪ್ಪಂಚಿನ ರೇಷ್ಮೆ ಸೀರೆಯುಟ್ಟು ಶೋಕ ಕಾರ್ಯಗಳಿಗೆ ಯಾರೂ ಹೋಗುವುದಿಲ್ಲ. ಹಾಗೇ ಸಾದಾಸೀರೆಯುಟ್ಟು ವೈಭವದ ಮದುವೆ ಇತರೆ ಸಮಾರಂಭಗಳನ್ನು ಮಾಡುವುದಿಲ್ಲ. ಇದು ಜನರ ಔಚಿತ್ಯ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ. 

     ಕಲಾವಿದರಿಗೆ ಅಷ್ಟೇನು ಗೌರವ ಕೊಡದ ಕಾಲದಿಂದ ಹಿಡಿದು, ಅವರನ್ನು ಆರಾಧಿಸುವ ಕಾಲದವರೆಗೂ ಅವರನ್ನು ಅನುಸ(ಕ)ರಿಸುವ ಸಾಮಾಜಿಕರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಅದರಲ್ಲೂ ನಟಿಯರ ಉಡುಗೆ, ಅಲಂಕಾರ, ಕೇಶ ವಿನ್ಯಾಸ, ನಡಿಗೆಯ ಭಂಗಿ, ಮಾತಿನ ಶೈಲಿ, ಅನುಕರಿಸದವರುಂಟೆ?! ಅದಕ್ಕೆಂದೇ ಅವರನ್ನು ‘ಫ್ಯಾಷನ್ ಐಕಾನ್’ ಎನ್ನುವುದು. ಸೀರೆ ಎಂದರೆ, ಮೋಟು ಸೆರಗಿನಿಂದ ಹಿಡಿದು ಮೈಲುಗಟ್ಟಲೆ ಗಾಳಿಪಟದ ಹಾಗೆ ಬಿಡುವವರೆಗೂ ಸಿನೆಮಾ ಮಂದಿಯನ್ನೇ ಅನುಕರಿಸುತ್ತಾರೆ. ಬೆಳ್ಳಿ ಮೋಡ ಆಪ್ತಮಿತ್ರ, ಹಾಲುಂಡ ತವರು, ಚಂದ್ರಮುಖಿ ಪ್ರಣ ಸಖಿ, ಚಾಂದಿನಿ, ಹಮ್ ಆಪ್ ಕೆ ಹೇ ಕೌನ್, ರಂಗೀಲಾ, ನಾಗಿನ್… ಹೀಗೆ ಆಯಾ ಕಾಲದ ಜನಪ್ರಿಯ ಸಿನೆಮಾಗಳಲ್ಲಿ ನಾಯಕಿ ಉಟ್ಟ ಸೀರೆ ಟ್ರೆಂಡ್ ಆಗಿ, ಅದೇ ಹೆಸರಿನ ಸೀರೆಗಳು ಮಾರುಕಟ್ಟೆಯನ್ನು ಆಳಿರುವುದುಂಟು. ಈಗ ಬಿಡಿ, ಮನೆಮನೆಗಳಲ್ಲಿ ಟಿವಿಗಳಿದ್ದು ಧಾರಾವಾಹಿಗಳು  ವೈವಿಧ್ಯಮಯ ಉಡುಪುಗಳನ್ನು ಅದರಲ್ಲೂ ಕಣ್ಣುಕುಕ್ಕುವ ರಂಗು-ಚಿತ್ತಾರ-ಜರಿಯ ಸೀರೆಗಳನ್ನು ಮಹಿಳೆಯರಿಗೆ ಪರಿಚಯಿಸುತ್ತಿವೆ. 

   ಇನ್ನು, ಸೀರೆ ಎನ್ನುವ ಹೆಸರು ಒಂದೇ ಆಗಿದ್ದರೂ, ಅದನ್ನು ಉಡುವುದರಲ್ಲಿ, ಸೆರಗು ಹಾಕುವುದರಲ್ಲಿ, ಹಲವು ವಿಧಾನ-ರೀತಿ -ರೂಢಿ ಗಳಿವೆ ಎಂದರೆ ಆಶ್ಚರ್ಯಪಡಬೇಕಿಲ್ಲ. ಗೊಬ್ಬೆ, ಕಚ್ಚೆ, ಕೂರ್ಗ್, ಮರಾಠಿ, ತಮಿಳು, ಬಂಗಾಳಿ, ಮಲೆಯಾಳಿ, ತಮಿಳರ ಶೈಲಿ… ಹೀಗೆ ಪ್ರಾದೇಶಿಕತೆ, ಜನಾಂಗಗಳ  ವೈವಿಧ್ಯವನ್ನು ಸೀರೆಗಳು ಪ್ರತಿನಿಧಿಸುತ್ತವೆ. ಉಡುವ ಮಾದರಿಯಲ್ಲದೆ, ಅವುಗಳ ಫ್ಯಾಬ್ರಿಕ್ಕೂ ಸಹ ಪ್ರಾದೇಶಿಕತೆಯ ಸೊಗಡನ್ನು ಸಾರುತ್ತವೆ. ಮೈಸೂರ್ ಸಿಲ್ಕ್, ಕಲ್ಕತ್ತಾ ಕಾಟನ್, ಕಂಚಿ, ಇಕ್ಕತ್, ಇಳಕಲ್, ಚಂದೇರಿ, ಬಾಂದನಿ, ಜೈಪುರಿ,  ಹ್ಯಾಂಡ್ಲೂಮ್, ಲಂಬಾಣಿ, ಮಹೇಶ್ವರಿ, ಧರ್ಮಾವರಂ, ಕಾಂಚಿಪುರಂ, ಬನಾರಸಿ, ಮೊಳಕಾಲ್ಮೂರು, ಕೊಡಿಯಾಲ, ಸಂಬಾಲ್ಪುರಿ, ಕಲಂಕಾರಿ…. ಶುದ್ಧ ರೇಷ್ಮೆ, ಶುದ್ಧ ಜರಿ, ಶುದ್ಧ ಹತ್ತಿ, ಶುದ್ಧ ಕೈಮಗ್ಗ, ಶುದ್ಧ ಕಸೂತಿ…. ಹೀಗೆ ಪಟ್ಟಿಯನ್ನು ವಿಸ್ತರಿಸುತ್ತಾ ಹೋಗಬಹುದು! ಬೆಂಗಳೂರಿನಂತಹ ಮಹಾನಗರಗಳಲ್ಲಿರುವ ಯಾವುದಾದರೂ ಒಂದು ಸೀರೆ ಅಂಗಡಿಯ ಒಳ ಹೊಕ್ಕರೆ, ಸೀರೆಗಳಲ್ಲಿರುವ ವರ್ಣ ವೈವಿಧ್ಯ, ಪ್ರಾದೇಶಿಕ ವೈವಿಧ್ಯವನ್ನು ಕಣ್ತುಂಬಿಕೊಂಡು ಬರಬಹುದು. 

    ಹತ್ತಿ ಬಟ್ಟೆಯಿಂದಾದ ನಿಸರ್ಗ ಸ್ನೇಹಿ ಕೈಮಗ್ಗದ ದೇಸಿ ಸೀರೆಗಳಿಗೆ ಆಧುನಿಕರು ಬುದ್ಧಿ – ಭಾವಗಳಿಂದ ಶರಣಾಗಿದ್ದಾರೆ. ದೇಸೀ ಸೀರೆಗಳು ಅವರ ಮನಸ್ಸೂರೆ ಮಾಡಿವೆ. ಶುದ್ಧ ಹತ್ತಿಯ, ನೈಸರ್ಗಿಕ ಬಣ್ಣದ ಈ ಸೀರೆಗಳು ನವತರುಣಿಯರ, ಮಧ್ಯಮ ವಯೋಮಾನದವರ, ವೃದ್ಧರ ಅಚ್ಚುಮೆಚ್ಚಿನ ಆಯ್ಕೆಯಾಗುತ್ತಿವೆ. ಮಗ್ಗವನ್ನೇ ಜೀವನಾಧಾರ ಮಾಡಿಕೊಂಡಿರುವ ಕಾರ್ಮಿಕರ ಜೀವಚೈತನ್ಯಕ್ಕೆ ಟಾನಿಕ್ ನ ಹಾಗೆ ಈ ಒಲವು ಇದ್ದರೂ ಇದು ಹೊಟ್ಟೆ ತುಂಬಿಸುವುದಿಲ್ಲ, ಆರ್ಥಿಕ ಸದೃಢತೆ ನೀಡುವುದಿಲ್ಲ. ಇದು ‘ರಾಕ್ಷಸನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತೆ’ಎನ್ನುವ ಹುಯ್ಯಲು ಆಗಾಗ್ಗೆ ಕೇಳಿಬರುತ್ತದೆ. ಸರ್ಕಾರ ಕೈಮಗ್ಗದ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ನೀಡುತ್ತಿದೆ. ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸುವ ಅಂಶಗಳನ್ನೂ ರೂಪಿಸುತ್ತಿದೆ.

  ಮೈಸೂರು ರಾಜವಂಶದ ಶ್ರೀಕಂಠದತ್ತ ಒಡೆಯರ್ ಹಾಗೂ ಪ್ರಮೋದಾ ದೇವಿ ಅವರು ಮೈಸೂರ್ ಸಿಲ್ಕ್ ಸೀರೆಗಳ ಪ್ಯಾಷನ್ ಶೋ ಮಾಡಿ ಆ ಸೀರೆಗಳ ಜನಪ್ರಿಯತೆಯನ್ನು ವಿಸ್ತರಿಸಿದ್ದನ್ನೂ ಸಹ ನಾವಿಲ್ಲಿ ನೆನಪಿಸಿಕೊಳ್ಳಬಹುದು!! ಭಾರತದ ರಾಯಭಾರಿ ಕಚೇರಿಗಳಲ್ಲಿ, ಭಾರತಕ್ಕೆ ಭೇಟಿ ನೀಡುವ ವಿದೇಶಗಳ ಪ್ರಮುಖ ವ್ಯಕ್ತಿಗಳಿಗೆ ಮೈಸೂರ್ ಸಿಲ್ಕ್ ಸೀರೆಯ ಉಡುಗೊರೆ ನೀಡುವುದೂ ಸಹ ಒಂದು ರೂಢಿ. ಇದು ಕರ್ನಾಟಕ ರಾಜ್ಯದ ಕ್ಲಾಸಿಕಲ್ ಹಿರಿಮೆ..!!

      ದಮಯಂತಿಯನ್ನು ಕಾಡಲ್ಲಿ ಬಿಟ್ಟು ಹೋಗುವ ನಳನು ತನ್ನ ಮಾನ ರಕ್ಷಣೆಗೆ ಬಳಸಿಕೊಂಡದ್ದು,  ದ್ರೌಪದಿಯ ಪ್ರಸಂಗ ಕುರುಕ್ಷೇತ್ರ ಯುದ್ಧದ ಭೀಕರತೆಗೆ ಒಂದು ನೆಪವಾದದ್ದು ನೆನಪಿಸಿಕೊಳ್ಳಿ. ಎರಡೂ ಪ್ರಸಂಗಗಳಲ್ಲಿ ಸೀರೆಯೇ ಸಮಾನಾಂಶ. ನಳ ಚರಿತೆಗೆ ದಮಯಂತಿಯ ಅರ್ಧ ಹರಿದ ಸೀರೆ ಕಾರಣವಾದರೆ, ಮಹಾಭಾರತದಲ್ಲಿ ದುಶ್ಯಾಸನ ಸೆಳೆಯಲಾರದೆ ಸುಸ್ತಾದ ದ್ರೌಪದಿಯ ಅಕ್ಷಯ ವಸ್ತ್ರ ಸೀರೆಯು ಅಕ್ಷೋಹಿಣಿ ಸೈನ್ಯದ ಯುದ್ಧಕ್ಕೆ ಪ್ರಬಲ ಕಾರಣ ಎಂದು ಪ್ರತಿಪಾದಿಸಿ ಗೆಲ್ಲಬಹುದು. 

        ಮನೆಯಲ್ಲೇ ಸೀರೆ ವ್ಯಾಪಾರ ಮಾಡುವ ಎಷ್ಟೋ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಗಳಿಸಿ ಮನೆ ನಿಭಾಯಿಸುತ್ತಿರುವುದು ಸುಳ್ಳಲ್ಲ. ಮಕ್ಕಳ ಫೀಸು, ಮನೆಯ ಸಾಲದ ಕಂತು, ತವರಿಗೆ ಒಂದು ಪಾಲು ಕಳಿಸುತ್ತಾ, ಒಂದಷ್ಟು ಇಡಿಗಂಟು ಉಳಿಸುತ್ತಾ ದೇಶದ ಆರ್ಥಿಕತೆಗೆ ತಮ್ಮ ಕೊಡುಗೆಯನ್ನು ನೀಡಿರುತ್ತಾರೆ. ನೇರ ಸೀರೆ ವ್ಯಾಪಾರ ಮಾಡದವರೂ ಸಹ ಸೆರಗಿಗೆ ಕುಚ್ಚು, ಅಂಚಿಗೆ ಫಾಲ್, ಜ಼ಿಗ್ಜ಼್ಯಾಗ್, ಕಸೂತಿ, ಕುಪ್ಪಸ ಹೊಲಿಯುವ ಇತರೆ ಸೀರೆ ಸಂಬಂಧಿ ಕೆಲಸಗಳನ್ನು ಮನೆಯಲ್ಲೇ ಮಾಡುತ್ತಾ ಸಣ್ಣಪುಟ್ಟ ಖರ್ಚಿಗೆ ಸಂಪಾದಿಸಿಕೊಳ್ಳುವವರಿದ್ದಾರೆ. ಇದು ಆರ್ಥಿಕ ಸ್ವಾವಲಂಬನೆಗೆ ಸೀರೆಯ ಕೊಡುಗೆ ಎಂದು ಸೀರೆಯನ್ನು ಪ್ರಶಂಸಿಸಬಹುದು. ಸೀರೆಗೆ ಜೊತೆಯಾಗುವ ಕುಪ್ಪಸದ ವೈವಿಧ್ಯವೇ ಬೇರೆ ಲೋಕ. ಸೀರೆಯ ಒಟ್ಟು ಬೆಲೆಗಿಂತಲೂ ಕುಪ್ಪಸದ ಹೊಲಿಗಯೇ ಐದಾರು ಪಟ್ಟು ಹೆಚ್ಚು ದುಬಾರಿಯಾಗಿರುತ್ತದೆ! ಕುಪ್ಪಸದ ಅಂದವೇ ಸೀರೆಗೆ ಮೆರುಗು ನೀಡುತ್ತದೆ. ಸೀರೆಯ ಸೆರಗಿನ ಚಿತ್ತಾರ, ಕುಚ್ಚಿನ ಅಲಂಕಾರಗಳೂ ಸೀರೆಯನ್ನು ಅಂದಗಾಣಿಸುವಲ್ಲಿ ಅಪಾರ ಕೊಡುಗೆಯನ್ನು ನೀಡುತ್ತವೆ. ಚಿನ್ನ-ಬೆಳ್ಳಿಯ ಎಳೆಗಳನ್ನು, ಮುತ್ತ-ರತ್ನ-ವಜ್ರ -ಪಚ್ಚೆ ಹರಳಿನ ಕುಸುರಿಯನ್ನು ಸೇರಿಸಿಕೊಂಡು ಬಹು ಲಕ್ಷ /ಕೋಟಿ ರೂಪಾಯಿಯಲ್ಲಿ ರೇಷ್ಮೆ ಸೀರೆಗಳು  ತಯಾರಾಗುವುದುಂಟು. ಆಗಾಗ್ಗೆ ಇಂತಹ ಸೀರೆಗಳು ಸುದ್ದಿಗೆ ಗ್ರಾಸವಾಗಿ ವಿಶ್ವದ ಗಮನ ಸೆಳೆಯುತ್ತವೆ. 

   ಮಗ್ಗದವರ ಜೀವನ ಅಗ್ಗವಾಯ್ತು ಎನ್ನುವ  ಕೊರಗಿನ ಕೂಗಿನ ನಡುವೆಯೂ ಕೈಮಗ್ಗದ ಸೀರೆಗಳ ಗ್ರಾಹಕರು ದೊಡ್ಡದೊಡ್ಡ ಮಂದಿಯೇ ಇರುತ್ತಾರೆ. ನಮ್ಮ ಮಹಿಳಾ ಸಂಸದರು, ಮಹಿಳಾ ಮಂತ್ರಿಗಳು, ಜನಪ್ರಿಯ ರಾಜಕೀಯ ನಾಯಕಿಯರು ಸೀರೆಗಳು ಚರ್ಚೆಯ ಮುನ್ನೆಲೆಗೆ ಬರುವುದುಂಟು. ಮಮತಾ ಬ್ಯಾನರ್ಜಿ, ಸೋನಿಯಾಗಾಂಧಿ, ಮನೇಕಾ ಗಾಂಧಿ, ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆಯವರ ಸೀರೆಗಳಿಂದ ಆಕರ್ಷಿತರಾದವರೂ ಬಹಳ ಮಂದಿ ಇದ್ದಾರೆ. ಹೀಗಾಗಿ ಸೀರೆ ಸಾಮಾನ್ಯ ಮಹಿಳೆಯರ ಉಡುಗೆಯಾಗಿ ಉಳಿದಿಲ್ಲ. ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ನೌಕರರ ಮೆಚ್ಚಿನ ಆಯ್ಕೆಯೂ ಸೀರೆಯೇ….

      ಹೆಂಗಸರ ಬಟ್ಟೆಯೆಂದೇ ಜನಪ್ರಿಯವಾಗಿರುವ ಸೀರೆ ಹೆಂಗಸರ ಗೌರವದ ಧಿರಿಸಾಗಿರುವಂತೆ, ಮಾದಕ ಉಡುಪೂ ಆಗಿರುವುದುಂಟು. ನಾಯಕಿಯರ ಸೌಂದರ್ಯವನ್ನು ತೆರೆಯ ಮೇಲೆ ತೋರಿಸಲು ನಿರ್ದೇಶಕರು ಸೀರೆಗೇ ಪ್ರಥಮ ಆದ್ಯತೆ ನೀಡುತ್ತಾರೆ. ಆದರೆ, ಸೀರೆಯನ್ನು ಮೊದಲ ಬಾರಿಗೆ ಉಟ್ಟವರು ಅದನ್ನು ನಿಭಾಯಿಸಿಕೊಂಡು ತೊಡರುಗಾಲು ಇಡುತ್ತಾ ನಡೆದಾಡುತ್ತಾ ಕಾಲ ತಳ್ಳುವುದನ್ನು ನೋಡಿದರೆ ನಗೆ ಉಕ್ಕದಿರುವುದೇ? ಹತ್ತಾರು ಸೇಫ್ಟಿ ಪಿನ್ನುಗಳನ್ನು ಚುಚ್ಚಿಕೊಂಡರೂ ಎಲ್ಲಿ ಕಳಚುವುದೋ ಎಂಬ ಗಾಬರಿಯ ಹೊಸ ಹುಡುಗಿಯರ, ಯಾವುದೇ ಪಿನ್ನುಗಳನ್ನು ಹಾಕದೇ ಸೀರೆ ನಿಭಾಯಿಸುವಷ್ಟು ಪ್ರವೀಣರಾಗುವುದು ಸೀರೆಯ ಗೆಲುವು. ‘ಪುಣ್ಯಕ್ಕೆ ಸೀರೆ ಕೊಟ್ಟರೆ ಹನ್ನೆರಡೇ ಮೊಳ’ ಎಂದು ಕೊಂಕು ಆಡುವವರ ಬಾಯಿ ಮುಚ್ಚಿಸಲಾದೀತೆ? ಕುಪ್ಪಸ ಜೊತೆಯಾಗಿ ಬರುವ ಸೀರೆಗಳು, ಕಾನ್ಟ್ರಾಸ್ಟ್ ಕುಪ್ಪಸ ಹೊಲಿಸುವ ಸೀರೆಗಳು… ನಾನಾ ವಿಧಗಳಿವೆ. ಉದ್ದ, ಗಿಡ್ಡ, ಮಧ್ಯಮ ಎತ್ತರದವರಿಗೆಲ್ಲಾ ಸೀರೆಯೇ ಸೂಕ್ತವಾಗಿ ಒಪ್ಪುವ ಉಡುಗೆ ಎನ್ನುವುದು ಸಾರ್ವಕಾಲಿಕ ಸತ್ಯ. 

    ಸೀರೆ ಉಡಿಸುವುದೊಂದು ಕಲೆ . ಸೀರೆ ಉಡಿಸುವುದನ್ನೇ ಉದ್ಯೋಗ ಮಾಡಿಕೊಂಡಿರುವ  ಬಹಳ ಜನರಿದ್ದಾರೆ. ಮದುವೆ ಹೆಣ್ಣಿಗೆ ಸೀರೆ ಉಡಿಸಲು ಬರುವವರು ಹೆಣ್ಣಿನ ಅಮ್ಮ, ಅಕ್ಕ,ತಂಗಿ, ನಾದಿನಿ, ಅತ್ತೆ, ಅತ್ತಿಗೆಯರಿಗೂ ಸೀರೆ ಉಡಿಸಲೇ ಬೇಕೆನ್ನುವುದು ಅಲಿಖಿತ ಅಗ್ರಿಮೆಂಟು. ಚಿಕ್ಕ ಹುಡುಗಿಯರಿಗೆ ಸೀರೆ ಉಡಿಸುವುದು ಒಂದು ಸಮಸ್ಯೆಯೇ… ಸೀರೆ ಉದುರಿಹೋಗುವ ಭೀತಿ ಅವರಿಗೆ!! ಹೇಗೋ ಕಷ್ಟಪಟ್ಟು ಉಟ್ಟರೂ ಕಳೆಚಿಟ್ಟ ಮೇಲೆಯೇ ಉಸ್ಸೆಂದು ನಿಟ್ಟುಸಿರು ಬಿಡುತ್ತಾರೆ. ಮರುಕ್ಷಣವೇ ಮತ್ತೆ ಯಾವಾಗ ಸೀರೆ ಉಟ್ಟೇನೆಂದು ಕನವರಿಸುತ್ತಾರೆ!! ಹುಡುಗರಂತೂ ತಾವು ಪ್ರೇಮಿಸುವ ಹುಡುಗಿ ಸೀರೆ ಉಟ್ಟು ಬರಲಿ ಎಂದು ಪರಿತಪಿಸುತ್ತಾರೆ ಎಂದು ಸಿನೆಮಾಗಳಲ್ಲಿ ಹಲವು ಬಾರಿ ತೋರಿಸಿ ಅದೇ ನಿಜವಿರಬಹುದೆನಿಸುತ್ತದೆ. ‘ದೂರದ ಊರಿಂದ ಹಮ್ಮೀರ ಬಂದ ಜರತಾರಮ ಸೀರೆ ತಂದ..’, ‘ಹೆಣ್ಣಿಗೇ ಸೀರೆ ಏಕೆ ಅಂದ..!’, ‘ಸೀರೇಲಿ ಹುಡುಗಿಯ ನೋಡಲೇ ಬಾರದು..’, ‘ಮೊಳಕಾಲ್ ಸೀರೆ ಉಟ್ಕೊಂಡು…’ ಉಫ್..! ಪಟ್ಟಿ ಬೆಳೆಯುತ್ತದೆ ಹೊರತು ಮುಗಿಯುವುದಿಲ್ಲ.

      ಸೀರೆ ಖರೀದಿಯು ಗಂಡಸರ ಜೇಬಿಗೆ ಕತ್ತರಿ ಹಾಕುತ್ತದೆ ಎಂದು ಕೊಂಕು ನುಡಿಯುವವರಿಗೇನು ಗೊತ್ತು? ಹಲವು ಕಂತುಗಳಲ್ಲಿ ಹಣಕೊಟ್ಟು ಖರೀದಿಸುವ ದುಬಾರಿ ಬೆಲೆಯ ಸೀರೆಗಳು ಜೇಬಿಗೆ ಕತ್ತರಿ ಹಾಕದೆ, ಜೇಬಿನ ಭಾರ ಕಡಿಮೆ ಮಾಡುತ್ತಾ  ಮಹಿಳೆಯರ ಸಂಭ್ರಮವನ್ನು ಹೆಚ್ಚಿಸುತ್ತವೆ ಎಂದು!   ಸೀರೆಗಳನ್ನು ಅರಿಶಿನ ಕುಂಕುಮಕ್ಕೆ, ಹಬ್ಬಗಳಲ್ಲಿ,  ವಿವಿಧ ಮಂಗಳ ಕಾರ್ಯಗಳಲ್ಲಿ ಉಡುಗೊರೆಯಾಗಿ ನೀಡುವಂತೆಯೇ, ನಮ್ಮ ಹಳ್ಳಿಗಳ ಕಡೆ ಗಂಡನನ್ನು ಕಳೆದುಕೊಂಡ ವಿಧವೆಯರಿಗೆ ನೀಡುವ ಪದ್ಧತಿ ಉಂಟು. ಬಹುಶಃ, ಹಿಂದಿನ ಕಾಲಗಳಲ್ಲಿ ಮನೆಯ ದುಡಿಮೆಯ ಆಸರೆ ಗಂಡ ಮಾತ್ರವಾಗಿದ್ದು, ಆತನ ಸಾವಿನ ಅನಂತರ ಹೆಂಡತಿಯ ಪರಿಸ್ಥಿತಿ ಮೂರಾಬಟ್ಟೆಯಾಗದಿರಲಿ ಎಂದು ಯಾರೋ ಅಂತಃಕರಣ ಉಳ್ಳವರು ಇದನ್ನು ಜಾರಿಗೆ ತಂದಿರಬಹುದು…

  ಗೋಪಿಕಾ ಸ್ತ್ರೀಯರ ಸೀರೆ ಕದ್ದು ಕಳ್ಳನೆನಿಸಿದರೂ ದ್ರೌಪದಿಯ ಆಪತ್ತಿನಲ್ಲಿ ಮಾನ ಕಾಯ್ದ ಕೃಷ್ಣ ಪರಮಾತ್ಮನೆನಿಸಿದ್ದೂ ಸಹ ಸೀರೆಯಿಂದಲೇ ಎಂದು ನಾವು ನಾರೀಮಣಿಯರು ಸೆರಗನ್ನು ಹಾರಿಸಬಹುದು(ಕಾಲರನ್ನು ಏರಿಸಿದಂತೆ!. ಇನ್ನು ‘ಸೆರಗನ್ನು ಹಾಸು’ ಎಂಬ ನುಡಿಯು ಪ್ರೇಮ/ಕಾಮದ ಪರಿಭಾಷೆಯಾಗಿ ಬಳಕೆಯಾಗುವುದನ್ನು ಗಮನಸಿರುತ್ತೇವೆ. ‘ಸೀರೆ ಮುಳ್ಳಿನ ಮೇಲೆ ಬಿದ್ರೂ ಮುಳ್ಳು ಸೀರೆ ಮೇಲೆ ಬಿದ್ರೂ ಹರಿಯೋದು ಸೀರೆ’ ಎನ್ನುತ್ತಾ ಹೆಣ್ಣಿನ ಶೀಲದ ಪರಿಕಲ್ಪನೆಯನ್ನು  ಸೀಕೆಗೆ ಕಟ್ಟಿ ಹಾಕುತ್ತೇವೆ. ಅಮ್ಮನ ಮಡಿಲಿನ ಬೆಚ್ಚನೆಯ ಭಾವವನ್ನು ಸೀರೆ ಮಾತ್ರ ಕೊಡಲು ಸಾಧ್ಯ. ಮಣ್ಣಿನ ವಾಸನೆಯಂತೆ, ಮಡಿಲಿನ ಗಮಲು ಸೀರೆಯು ನೀಡಲು ಮಾತ್ರ ಸಾಧ್ಯ. ಅಮ್ಮಾವ್ರ ಗಂಡಂದಿರು ಹೆಂಡತಿಯ ಸೆರಗು ಹಿಡಿದರೆ, ಹೆದರು ಪುಕ್ಕಲು ಮಕ್ಕಳು ಅಮ್ಮನ ಸೆರಗಿನ ಹಿಂದೆ ಬಚ್ಚಿಟ್ಟುಕೊಳ್ತಾರೆ. ಸೀರೆ ಎಂಬುದು ಬರಿಯ ಉಡುಪೇ? ತಲೆ ಮೇಲೆ ಹೊದ್ದರೆ ಛತ್ರಿ, ಭುಜದ ಮೇಲೆ ಹೊದ್ದರೆ ಶಾಲು!! ಮಕ್ಕಳ ಸಿಂಬಳ ಒರೆಸುವ ನ್ಯಾಪ್ಕಿನ್ನು, ಹಣೆಯ ಬೆವರು ಒರೆಸುವಾಗ ಕರ್ಚೀಫು, ಸ್ನಾನದ ಮೈ ಒರೆಸುವ ಟವೆಲ್ಲು, ಮಲಗುವಾಗ ಹೊದಿಕೆ, ಮೇಲಾಸು, ಮಡಚಿಟ್ಟು ತಲೆ ದಿಸೆಯಲ್ಲಿಟ್ಟರೆ ತಲೆದಿಂಬು, ಕಾಲೊರೆಸಲು, ಅಡುಗೆ ಮನೆ ಕಟ್ಟೆ ಒರೆಸಲು, ನೆಲ ಒರೆಸಲು ತೊಳೆದ ಪಾತ್ರೆ ಒರೆಸಲು, ಹಳೆಯ ಸಾಮಾಗ್ರಿಗಳ ಮೇಲೆ ಧೂಳನ ಹಿಡಿಯದಂತೆ ಹೊದಿಸಲು…!! ಹೀಗೆ ಬಹುಪಯೋಗಿ ಸೀರೆಗೆ ಬಹುಪರಾಕು ಹೇಳದಿರಲಾದೀತೆ?!

ಸೀರೆ ಖರೀದಿಸುವಂತೆಯೇ ಅದನ್ನು ಸಂರಕ್ಷಿಸುವುದೂ ದೊಡ್ಡ ಜವಾಬ್ದಾರಿಯ ಕೆಲಸವೇ.. ಬೇಸಿಗೆಯಲ್ಲಿ ಹಳೆಯ ರೇಷ್ಮೆ ಸೀರೆಗಳನ್ನು ಬಿಸಿಲಿಗೆ ಹಾಕುವುದು, ನುಸಿ ಗುಳಿಗೆ ಇಡುವುದು, ಚಂದನದ ಪುಡಿ ಇಟ್ಟು ಗಮಗಮಿಸುವಂತೆ ಮಾಡುವುದು, ನಾಜೂಕಾಗಿ ಒಗೆಯುವುದು, ನೆರಳಿನಲ್ಲೇ ನೆನೆಸುವುದು, ಇಸ್ತ್ರೀ ಮಾಡಿಸುವುದು, ಡ್ರೈ ಕ್ಲಾನಿಗೆ ಕೊಡುವುದು ಇವೆಲ್ಲಾ ಸೀರೆಯನ್ನು ರಕ್ಷಿಸುವ ಸಕಲೋಪಾಯಗಳು. ಒಂಜು ಮರೆತರೂ ಬೆಲೆಬಾಳುವ ಸೀರೆ ಹಾಳಾಗುವುದು. ಸೀರೆಯ ಬೆಲೆ ಎಂದರೆ ಕೇವಲ ಮುಖಬೆಲೆಯಲ್ಲ. ಅದರ ಹಿನ್ನೆಲೆ. ನಿಶ್ಚಿತಾರ್ಥ, ಮದುವೆ, ಸೀಮಂತ, ಬಾಣಂತನ, ಋತುಮತಿಯ ಕಾಲದ ಆರತಿಯ ಸೀರೆ… ಹೀಗೆ ಭಾವನೆಗಳ ಗುಚ್ಛವೇ ಸೀರೆಯಾಗಿರುತ್ತದೆ. 

   ಹಾಗೆಯೇ, ಮದುವೆಯ ಭರ್ಜರಿ ಜರಿಯ ಸೀರೆಗಳನ್ನು ಉಟ್ಟ ಅಮ್ಮಂದಿರು ಅದನ್ನು ಮುಂದೆ ತಮ್ಮ ಮಗಳಿಗೋ ಮೊಮ್ಮಗಳಿಗೋ ಜರಿ ಲಂಗವಾಗಿ, ಚೂಡಿದಾರಿನ ಟಾಪ್ ಆಗಿ, ದುಪ್ಪಟ್ಟವಾಗಿ ಹೊಲಿಸಿಕೊಳ್ಳಲು ಧಾರಾಳವಾಗಿ ಕೊಡುವುದುಂಟು. ಇದು ಸೀರೆಯ ಅಪ್ಡೇಷನ್. ಈಗೀಗ ಸೀರೆಗಳನ್ನು ಗೋಡೆಯಲ್ಲಿ ಇಳಿಬಿಟ್ಟು ಮನೆಯ ಅಲಂಕಾರಕ್ಕೆ ವಿಶೇಷ ಮೆರುಗು ತರುತ್ತಾರೆ. ಕಿಟಕಿ-ಬಾಗಿಲುಗಳಿಗೆ ಪರದೆಯಾಗಿ ಬಳಸುತ್ತಾರೆ. ಹಳೆಯ ಸೀರೆಗಳಿಂದ ಕಾಲೊರೆಸುವ  ಬಟ್ಟೆ ಹೆಣೆಯುತ್ತಾರೆ, ಟೇಬಲ್ಲಿನ ಮೇಲಾಸು ಮಾಡುತ್ತಾರೆ…. ನೀನಾರಿಗಾದೆಯೋ…. ಎಂದು ಇತರೆ ಬಟ್ಟೆಗಳನ್ನು ಹಂಗಿಸುವಷ್ಟು ಸೀರೆಯು ಬಹುಪಯೋಗಿ ವಸ್ತ್ರವಾಗಿದೆ. ಹಾಗೆಯೇ,  ತೊಟ್ಟಿಲಿಗೆ ಮೆತ್ತನೆ ಹಾಸಾಗುವ, ಜೋಳಿಗೆ ಮಾಡಿ ಹಸುಮಗುವನ್ನು ಬೆಚ್ಚಗೆ ಮಲಗಿಸುವ ಸೀರೆಯು… ನೇಣಿಗೆ ಶರಣಾಗುವವರ ಕೊರಳನ್ನೂ ಬಿಗಿಯುತ್ತದೆ ಎಂದರೆ ಬೆಚ್ಚಿ ಬೀಳಬೇಕಾಗುತ್ತದೆ. 

***************************

ವಸುಂಧರಾ ಕದಲೂರು

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

Leave a Reply

Back To Top