ಅಂಕಣ ಬರಹ

ತೊರೆಯ ಹರಿವು

ಕಣ್ಮುಚ್ಚಿ ಹಾಲು ಕುಡಿದರೆೆ…!

Can Cats Drink Milk? | Martha Stewart

ಸದ್ಯ..!! ಯಾರ್‍ಗೂ ಗೊತ್ತಾಗಲಿಲ್ಲ! ಅಬ್ಬ, ಬಚಾವಾದೆ! ಈ ಸಲ ತಪ್ಪಿಸ್ಕೊಂಡೆ… ಹೀಗೆ ನಿಟ್ಟುಸಿರು ಬಿಡುತ್ತಾ ನಿರಾಳವಾದ ಎಷ್ಟು ಕ್ಷಣಗಳು ನಮ್ಮ ಬದುಕಿನಲ್ಲಿಲ್ಲ ಹೇಳಿ!? ನಾವೇನು ಕನಕರೇ?! ದೇವರು ನೋಡದ ಎಡೆಯಿಲ್ಲವೆಂದು ಪ್ರಾಮಾಣಿಕವಾಗಿ ಹೇಳಲು? ಅಷ್ಟು ಆತ್ಮ ಶೋಧನೆ ನಮಗಿದ್ದಿದ್ದರೆ ಮಾನವ ಜೀವನ ಎಷ್ಟೋ ಪಾಲು ಇತರ ಜೀವಿಗಳಿಗಿಂತ ಉತ್ಕೃಷ್ಟವಾಗಿರುತ್ತಿತ್ತು. ಪುರಂದರದಾಸರು ‘ಮಾನವ ಜನ್ಮ ದೊಡ್ಡದು.. ಇದ ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದದ್ದು ನಮ್ಮನ್ನು ಎಚ್ಚರಿಸಲೇ ಹೊರತು ನೀಚಾತಿನೀಚ ವ್ಯಾಪಾರಗಳಲ್ಲಿ ತೊಡಗಿರುವ ಮನುಶ್ಯರೇ ಶ್ರೇಷ್ಠಾತಿಶ್ರೇಷ್ಠರು ಎಂದಲ್ಲ. 

       ಚಿಪ್ಪು, ಗರಿ, ತುಪ್ಪಳ, ಚರ್ಮ, ತೊಗಟೆ, ಕೂದಲು.. ಇತ್ಯಾದಿ ಸಹಜ ರಕ್ಷಾಕವಚ ಪ್ರಾಣಿ-ಪಕ್ಷಿ- ಗಿಡಮರಗಳಿಗೆ ಇರಬಹುದು. ಆದರೆ, ಮೈಮನಗಳೆರಡೂ ಬತ್ತಲಾಗಿಸಿಕೊಂಡೇ ಹುಟ್ಟುವ ಜಗದ ಜೀವಿಗಳಲ್ಲಿ ಕಾಲಕ್ರಮೇಣ ಅನೈಸರ್ಗಿಕ ವಸ್ತ್ರ ಧರಿಸುವುದು ಮನುಶ್ಯರು ಮಾತ್ರ. ಬರುವಾಗ ಹೋಗುವಾಗ ಬೆತ್ತಲಲ್ಲಿದ್ದು ಮೂಳೆ ಮಾಂಸಗಳ ತಡಿಕೆಯ ಮೇಲೆ ಚರ್ಮದ ಹೊದಿಕೆ ಹೊದ್ದು ಯಾವ ನಾಚಿಕೆ/ಅಂಕೆ/ಶಂಕೆಗಳಿಲ್ಲದೆ ಹುಟ್ಟಿದ ಮಗುವು ನಲಿಯುವುದಿಲ್ಲವೇ? ಮುಗ್ಧ ಶಿಶುತ್ವ ಕಳಚುತ್ತಾ ಹೋದಂತೆ ಸಲ್ಲದ ನಾಚಿಕೆ, ಹೇಸಿಗೆ ಆರೋಪಿಸುತ್ತಾ ಅಲೌಕಿಕ ಮಗುವಿಗೆ ಲೌಕಿಕದ ಕಟ್ಟುಪಾಡು ವಿಧಿಸಿ ಮುಗ್ಧತೆ ಮರೆ ಮಾಚುವುದರಲ್ಲಿ ಲೋಕವು ಗೆಲ್ಲುತ್ತದೆ. 

   ನಗ್ನ ಮೈಯ ರಕ್ಷೆಗಾಗಿ ನಾನಾ ಬಗೆಯ ಉಡುಪು ಧರಿಸುವ ಮನುಷ್ಯರು ಮನವನ್ನು ಮರೆ ಮಾಚುವುದರಲ್ಲೂ ನಿಸ್ಸೀಮರು. ನೇರವಾಗಿ ತಮ್ಮನ್ನು ಹೊಣೆಗಾರರನ್ನಾಗಿ ಮಾಡಿಕೊಳ್ಳದೆ, ನುಣುಚಿಕೊಳ್ಳುವ ಜಾಣ್ಮೆ ಮನುಷ್ಯರಿಗಿದೆ. ಯುದ್ಧದಲ್ಲಿ ಎದುರಾಗುವ ಶಸ್ತ್ರಾಸ್ತ್ರಗಳಿಂದ ರಕ್ಷಣೆ ಪಡೆಯಲು ಗುರಾಣಿ ಹಿಡಿಯುವಂತೆ, ಆರೋಪ ಬಂದಾಗ ಬಚಾವಾಗಲು ಯಾವುದಾದರೊಂದರ ಮರೆ ಹೋಗುವುದು ಮಾನವನ ಸಹಜ ಗುಣ. ಕಾಯಕ್ಕೆ ಉಡುಪು- ಅಲಂಕಾರಗಳ ಮರೆ ನೀಡಬಹುದು. ಮನಕ್ಕೆ?! ಸುಳ್ಳು ಮೋಸ ತಟವಟಗಳನ್ನು ಆರೋಪಿಸಿಕೊಳ್ವುದು ಮನುಷ್ಯರ ಗುಣಗಳೇ ಆಗಿರುವುದರಿಂದ ಆಗಾಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಅಗತ್ಯ. 

ಪೀಠಿಕೆಗೂ ಪೂರ್ವಪೀಠಿಕೆಗಳಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ..?! ಎನ್ನದಿರಿ. ಅರ್ಥವಾಗದ ಅಧ್ಯಾತ್ಮವನ್ನಾಗಲೀ ಪರಮ ಸತ್ಯವನ್ನಾಗಲೀ ಬೋಧನೆ ಮಾಡುವುದು ವ್ಯರ್ಥಾಲಾಪದಂತೆ. ಹುಣಸೇ ಹಣ್ಣು ತೊಳೆದ ಹೊಳೆ ನೀರು ಹರಿದು ಸಮುದ್ರ ಸೇರಿ ಉಪ್ಪುಪ್ಪಾದೀತೇ ಹೊರತು, ಹುಳಿಯ ಗುಣವನ್ನು ಎಂದಿಗೂ ತನಗೆ ಆರೋಪಿಸಿಕೊಳ್ಳುವುದಿಲ್ಲ. ಉಪ್ಪಿನಂಶ ಅಗಾಧ ಜಲರಾಶಿಯೊಳಗೆ ಕರಗಿ ಮರೆಯಾಗಿರುವಂತೆ, ದೈನಂದಿನ ಜೀವನ ಕ್ರಮದಲ್ಲಿ ನಾವು ಮರೆಮಾಚಿರುವುದು ಏನನ್ನು? ಹೇಗೆ? ಏಕೆ? ಎಂಬ ಸಾಮಾನ್ಯ ಪ್ರಶ್ನೆಗಳಿಗೆ ಸುಮ್ಮನೆ ಉತ್ತರ ಹುಡುಕುವುದು ಇಲ್ಲಿಯ ಒಂದು ಪ್ರಯತ್ನವಷ್ಟೇ..

 ನಮ್ಮ ಅಂಗೈ ಮೇಲಿನ ಹುಣ್ಣು ನಮಗಾದರೂ ಕಾಣಲೇ ಬೇಕಲ್ಲಾ?! ಹುಣ್ಣಿನ ನೋವಿನ ಅರಿವು  ಆಗುತ್ತಿರಬೇಕಲ್ಲಾ?! ಅರಿವಿದ್ದರೂ ನಾವು ಮರೆ ಮಾಚುವುದರಲ್ಲಿ ನಿಸ್ಸೀಮರು. ನಮ್ಮ ಸೋಲು, ದೌರ್ಬಲ್ಯ, ವೈಫಲ್ಯ, ನೋವುಗಳನ್ನು ಮೊದಲು ಮರೆಮಾಚುತ್ತೇವೆ. ಯಾರಿಂದ ಈ ತಪ್ಪಿಸುವಿಕೆ? ಎದುರಿರುವರಿಂದ. ನಾವು ಮಾಡುವ ಹಲವಾರು ಕೆಲಸ/ ವಿಚಾರಗಳು ಯಾರಿಗೂ ಗೊತ್ತಾಗುತ್ತಿಲ್ಲ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ತೇವೆ. 

   ಯಾರಿಗೂ ಗೊತ್ತಾಗಬಾರದು ಎಂದು ಮಾಡುವ ಕೆಲಸಗಳು ಅದನ್ನು ಮಾಡುವವರಿಗಾದರೂ ಗೊತ್ತಿರುತ್ತದೆ ಅಲ್ಲವೇ?! ಗೊತ್ತಾದರೂ ಏನಂತೆ? ಅವರು, ಇವರು ಎಲ್ಲರೂ ಮಾಡುವುದೂ ಸಹ ಇದೇ ಕೆಲಸ. ಯಾರಿಲ್ಲಿ ಸಾಚಾ ಇದ್ದಾರೆ?! ಏನು ಎಲ್ರೂ ಗಾಂಧೀನಾ? ಮಹಾ ಹರಿಶ್ಚಂದ್ರಾನಾ? ಎನ್ನುವ ಸಬೂಬುಗಳನ್ನು ಸಮಜಾಯಿಷಿಗಳನ್ನು ಕೊಡುತ್ತೇವೆ. ತಪ್ಪು ತಿದ್ದಿಕೊಳ್ಳುವ ಅವಕಾಶಗಳ ಸೃಜನೆಗಿಂತಲೂ, ಮಾಡಿದ್ದನ್ನೇ ಸಮರ್ಥನೆ ಮಾಡಿಕೊಳ್ಳುವ ತುಡಿತ ಹೆಚ್ಚಿರುತ್ತದೆ. ಇರುವೆಲ್ಲಾ ಜಾಣ್ಮೆಯನ್ನು ಖರ್ಚು ಮಾಡಿ ಮೊದಲು ನಮ್ಮ ಸೇಫ್ಟಿ ಕಂಡುಕೊಳ್ಳುತ್ತೇವೆ. 

     ‘ತಪ್ಪಾಯ್ತು, ಕ್ಷಮಿಸಿ. ಇನ್ಮೊಮ್ಮೆ ಹೀಗೆ ಆಗಲಾರದಂತೆ ನೋಡಿಕೊಳ್ಳುವೆ.’ ‘ಮತ್ತೆ ಈ ರೀತಿ ಮಾಡೋದಿಲ್ಲ ಕ್ಷಮೆ ಇರಲಿ’ ಎನ್ನುವುದು ಒಂದು ಮಾದರಿಯ ಸೌಜನ್ಯ ಹಾಗೂ ಸಂಸ್ಕಾರ. ಅದನ್ನು ನೇರವಾಗಿ ಹೇಳುವುದಕ್ಕೂ ಒಂದು ಧೈರ್ಯ ಖಂಡಿತ ಬೇಕು. ನೈತಿಕ, ತಾತ್ವಿಕ ಮನೋಧೈರ್ಯ ಇರಬೇಕು. ಆದರೆ, ಮರೆಮಾಡುವುದರಲ್ಲಿ ನಿಸ್ಸೀಮರಾದ ನಾವು ಒಂದಕ್ಕೆ ತೇಪೆ ಹಚ್ಚಲು ಹೋಗಿ ಮತ್ತೊಂದು ಮಗದೊಂದು ತೇಪೆ ಹಚ್ಚುತ್ತಾ ಸುಳ್ಳಿನ ಸುಳಿಯಲ್ಲಿ ಮುಳುಗುತ್ತೇವೆ. 

   ಸತ್ಯ ಹೇಳುವುದು, ಧರ್ಮ ಮಾಡುವುದು ಸುಲಭವಲ್ಲ ಎಂದು ಯಾರು, ಯಾವಾಗ ಪ್ರಚುರಪಡಿಸಿದರೋ..! ಅದು ಬಹಳ ಕಷ್ಟ ಎನ್ನುವ ನಿಲವಿಗೆ ಜನರೇಕೆ ಬಂದು ನಿಂತರೋ..? 

   ‘ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ, ಸತ್ಯ ವಾಕ್ಯಕೆ ತಪ್ರಿ ನಡೆದರೆ, ಮೆಚ್ಚನಾ ಪರಮಾತ್ಮನು…’ ಹಾಡಿಗೆ ರಾಗ ಲಯ ಬದ್ಧವಾಗಿ ತಲೆ ತೂಗಿಸಲು ಗೊತ್ತಿರುವ ನಮಗೆ, ಹೃದಯವನ್ನು ಸತ್ಯ ಅನುಸರಿಸುವುದಕ್ಕೆ ಟ್ಯೂನ್ ಮಾಡುವುದು ಬೇಕಿರುವುದಿಲ್ಲ ಎನ್ನುವುದು ಎಂಥಾ ಆಶ್ಚರ್ಯ! ಈ ವಿರೋಧಾಭಾಸವೇಕೆ? ಹರಿಶ್ಚಂದ್ರನ ಕೀರ್ತಿ- ಮಹಿಮೆ ಅಚಂದ್ರಾರ್ಕವಾಗಿ ಬೆಳಗಿ ಮನ್ನಣೆ ಪಡೆಯುತ್ತಿದ್ದರೂ; ಅನುಕರಣೆಗೆ ಹಿಂಜರಿತವೇಕೆ? ಗಾಂಧೀಜಿ ‘ನೊಬೆಲ್ ಪ್ರಶಸ್ತಿ’ಗೂ ಮೀರಿದ ಗೌರವ ವ್ಯಕ್ತಿ ಎಂದು ನಮ್ಮದೇ ಸಮರ್ಥನೆ ಕೊಡುವಾಗಲೂ ಅವರನ್ನು ಎಷ್ಟು ಅನುಸರಿಸುತ್ತೇವೆ?! 

 ಸದ್ಗುಣ ದೌರ್ಬಲ್ಯಗಳನ್ನು ಮರೆ ಮಾಚಬೇಕು. ವಿದ್ಯೆ ಅಜ್ಞಾನವನ್ನು; ಉದಾರತೆ ಕೆಡುಕನ್ನು; ಮಾನವತೆ ಮೃಗೀಯತೆಯನ್ನು; ದಾನ ಹಸಿವನ್ನು; ಕಲಿಕೆಯು ಕೊರತೆಯನ್ನು… ಹೀಗೆ ಒಳಿತುಗಳು ಕೆಡುಕನ್ನು ಮರೆಮಾಚಿ ಇಲ್ಲವಾಗಿಸಬೇಕು. ಆದರೆ ಈಗ ಆಗುತ್ತಿರುವುದೇನು? ಹಣ-ಅಜ್ಞಾನವನ್ನು, ಸ್ಥಾನ- ದೌರ್ಬಲ್ಯವನ್ನು, ಬಲ-ದನಿಯನ್ನು ಮರೆ ಮಾಚುತ್ತಾ ಅನಾಹುತಗಳೇ ಆಗುತ್ತಿವೆ…

     ‘ಕುರಿಗಳು ಸಾರ್ ಕುರಿಗಳು..’ ಎಂಬಂತಹ ನಾವು ನೀವು ಅವರು ಇವರು…ತಲೆತಗ್ಗಿಸಿಯೇ ಮುನ್ನಡೆಯುವವರಾಗಿರುವುದರಿಂದ ಎದುರಿರುವ ಸತ್ಯ ಕಾಣುವುದು ಹೇಗೆ? ಮರೆ ಮಾಚಿದನ್ನೇ ಮುಂದುವರೆಸಿಕೊಂಡು ಹೋಗುವುದರಲ್ಲಿ ಮಾತ್ರ ಕ್ರಿಯಾಶೀಲರಾಗಿರುತ್ತೇವೆ. 

   ‘ಎಲೆ ಮರೆ ಕಾಯಿ’ ಎನಿಸುವುದೊಂದು ನಾಣ್ಣುಡಿ. ಸಾಧಕರಾಗಿದ್ದರೂ ತಮ್ಮನ್ನು ತಾವು ಎತ್ತಿ ಮೆರೆಸದೆ, ತಮ್ಮಷ್ಟಕ್ಕೆ ಇದ್ದುಬಿಡುವ ನಾಚಿಕೆ ಸ್ವಭಾವದವರ ಬಗ್ಗೆ ಹೀಗೆ ಹೇಳಲಾಗುತ್ತದೆ. ಇದೊಂದು ಗುಣಸ್ವಭಾವವಷ್ಟೇ. ಅಂತಹ ಸಾಧಕರ ಪ್ರಸಿದ್ಧಿಯು ವನಸುಮದಂತೆ ವಿಕಸಿಸಿ, ಘಮ ಹರಡಿ ತಾನೇ ಪ್ರಸಿದ್ಧಿಯ ಮುನ್ನೆಲೆಗೆ ಬರುವುದನ್ನು ಯಾರೂ ತಪ್ಪಿಸಲಾಗದು.  ಒಂದೆರಡು ಸಹಜ ಕ್ರಿಯೆಗಳನ್ನೇ ಸಾಧನೆಯೆಂದು ಡಂಗೂರ ಸಾರಿಕೊಳ್ಳುವವರ ಮಧ್ಯೆ ನಿಜವಾದ ಸಾಧಕರನ್ನು ಗುರುತಿಸುವುದು ಹೇಗೆ? ಇತ್ತೀಚೆಗೆ ಎಲೆಮರೆ ಕಾಯಿಗಳನ್ನೂ ಹುಡುಕುವುದು ಕಷ್ಟಸಾಧ್ಯವಾಗಿದೆ.

    ಸೂರ್ಯನನ್ನು ಮೋಡಗಳು ಎಷ್ಟರವರೆಗೆ ಮರೆಮಾಚಲು ಸಾಧ್ಯ? ತನ್ನ ಉರಿಗಣ್ಣಿನಿಂದ ಸುಡು ಕಿರಣಗಳನ್ನು ಮತ್ತಷ್ಟು ಕಠಿಣವಾಗಿ ಬಿಟ್ಟರೆ ಎಂಥಾ ಘನ ಕಾರ್ಮೋಡವೂ ಕರಗಿ ಮಳೆಹನಿಯಾಗಿ ಸುರಿಯಲೇ ಬೇಕು. ಮರೆಯಿದ್ದ ಸೂರ್ಯ ಮುನ್ನೆಲೆಗೆ ಬಂದು ಜಗಕೆ ಬೆಳಕು ನೀಡಬೇಕು. ಶಿಕ್ಷಣ, ವಿದ್ಯೆ ಎನ್ನುವುದೂ ಹಾಗೆಯೇ… ಅದು ಪ್ರತೀ ಮಗು/ಮನುಷ್ಯನಲ್ಲಿನ ಮರೆಮಾಚಿದ ಪ್ರತಿಭೆಯನ್ನು ಬೆಳಕಿಗೆ ತರುವುದು. ‘ಗುಣಕ್ಕೇಂ ಮತ್ಸರಮೇ..’ ಎಂಬ ನುಡಿಯಂತೆ, ಗುಣವಂತರು ಮರೆಮಾಚಿಕೊಂಡಿದ್ದರೂ ಅವರನ್ನು ಗುರುತಿಸಿ ಅನುಸರಿಸಿ ಗೌರವಿಸಬೇಕಾದುದು ಸಮಾಜದ ಆದ್ಯ ಕರ್ತವ್ಯವಾಗಬೇಕು. ಹಲಸಿನ ಹಣ್ಣು, ಮಾವಿನ ಹಣ್ಣು…. ಇತ್ಯಾದಿ ಹಣ್ಣುಗಳನ್ನೂ, ಮಲ್ಲಿಗೆ-ಸಂಪಿಗೆ-ಕೇದಗೆ-… ಇತ್ಯಾದಿ ಹೂಗಳನ್ನೂ ಮುಚ್ಚಿಟ್ಟು ಮರೆ ಮಾಡಿದರೂ ಅವುಗಳ ಕಂಪನ್ನು ಮರೆಮಾಚಲು ಸಾಧ್ಯವೇ?!

 ಮರೆಮಾಚುವುದರಿಂದ ಆಗುವ ಅನಾಹುತಗಳಿಗೆ ಯಾರು ಹೊಣೆ? ಕರ್ಣನ ಜನನವನ್ನು ಲೋಕಾಪವಾದಕ್ಕೆ ಹೆದರಿ ಕುಂತಿ, ರಹಸ್ಯವಾಗಿಟ್ಟ ಕಾರಣದಿಂದಲೇ ತಾನೆ ಆ ಅಪ್ರತಿಮ ವೀರ, ಗುಣಶೀಲ, ಮಾನವಂತ, ಇಂತಹವರು ಇನ್ನುಂಟೆ ಎಂಬಂತಹವನು ಇಡೀ ಭಾರತ ಕತೆಯಲ್ಲಿ  ಹೀನಾಯ ಪಾಡು ಪಡಬೇಕಾದದ್ದು?! ಸಹೋದರನ ಜೀವನದ ವ್ಯಥೆ ಕಂಡು, ಧರ್ಮರಾಯ, ‘ಹೆಂಗಸರ ಬಾಯಲ್ಲಿ ರಹಸ್ಯ ನಿಲ್ಲದಿರಲಿ’ ಎಂಬರ್ಥದಲ್ಲಿ ಶಾಪ ನೀಡಿದನೆಂದು ಪ್ರತೀತಿ ಇರುವುದೂ ಸಹ ಕರ್ಣನ ಜನ್ಮ ರಹಸ್ಯ ಮರೆಮಾಚಿದ್ದೇ ಕಾರಣ…

    ನರಿಯೊಂದು ಹುಲಿ ಚರ್ಮ ಹೊದ್ದು, ಕೆಲವು ದಿನ ಇತರೆ ಪ್ರಾಣಿಗಳನ್ನು ಏಮಾರಿಸಿದ ಕತೆ ನಮಗೆ ಗೊತ್ತಿದೆ. ಈ ರೀತಿ ಮತ್ತೊಬ್ಬರಂತೆ ನಟಿಸುವುದು ತನ್ನ ನೈಜತೆಯನ್ನು ಮರೆ ಮಾಚಿದಂತೆ ಕಂಡರೂ, ಇದು ತಾತ್ಕಾಲಿಕ. ಅಂತಿಮವಾಗಿ ನರಿ ನರಿಯೇ… ಅಲ್ಲದೆ, ಹೀಗೆ ಹುಲಿಯಾಗಿ ನಟಿಸಿದ ಕಾರಣಕ್ಕೆ ಹಾಸ್ಯಾಸ್ಪ ವಸ್ತುವಾಗುವುದೂ ಸಹ ನರಿಯೇ… ಅದಕ್ಕೇ ‘ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ’ ಎಂದು ಹೇಳಿರುವುದು. ಎಷ್ಟೇ ಮರೆಮಾಡಿದ್ರೂ ಸತ್ಯ ಅಂತಿಮವಾಗಿ ಹೊರಬರುತ್ತದೆ. 

        ಇಂದ್ರಪ್ರಸ್ಥದಲ್ಲಿ ಮರೆ ನಿಂತ ದ್ರೌಪದಿ ದುರ್ಯೋಧನನ ಪೇಚಾಟ ಕಂಡು ನಕ್ಕಿದ್ದೇ ಮಹಾಯುದ್ಧಕ್ಕೆ ಮುನ್ನುಡಿ ಎನ್ನುವವರು, ದುರ್ಯೋಧನನ ಮನದ ಮರೆಯಲ್ಲಿದ್ದ ಅಧಿಕಾರದ ಆಸೆ- ಮದ, ದಾಯಾದಿಗಳ ಮೇಲಿದ್ದ ಮಾತ್ಸರ್ಯವನ್ನು ಕತೆಯಲ್ಲಿ ಹೆಂಗಸರ ಮೇಲೆ ಗೂಬೆ ಕೂರಿಸಲು ಮರೆ ಮಾಚುತ್ತಾರೆ. ಇದು ಸ್ತ್ರೀವಾದಿಗಳ ವಾದ ಎಂದು ವಾದಿಸಿ ಸತ್ಯವನ್ನು ಮರೆಮಾಡುವವರ ಗುಂಪು ಕಡಿಮೆಯಿಲ್ಲ ಬಿಡಿ. 

    ‘ಗೃಹಿಣೀಂ ಗೃಹಮುಚ್ಛತೇ..’ ಎಂದು ಹೇಳಿ, ರವಿ ಕಿರಣಗಳು ಮೈ ಸೋಂಕದಂತೆ ಎಷ್ಟು ಹೆಣ್ಣುಗಳು ತಮ್ಮ ಬದುಕನ್ನು ಸವೆಸಿ ಹೋಗಿಲ್ಲ..?! ಇನ್ನೂ ಸಹ ಪರ್ದಾ – ಬುರ್ಕಾ ಪದ್ಧತಿ, ಅವಗುಂಠನ ವ್ಯವಸ್ಥೆಗಳು ಜಾರಿಯಲ್ಲಿದ್ದು ಅವು ಮಹಿಳೆಯರ ಹಕ್ಕುಗಳನ್ನು ಕಸಿದು ಅವರ ಸ್ವಾತಂತ್ಯ್ರವನ್ನು ಮರೆ ಮಾಡಿವೆ. ಇಷ್ಟು ಕಾಲ ಸಮಾಜವು ತನ್ನ ಅರ್ಥಹೀನ ಕಟ್ಟುಪಾಡುಗಳಿಂದ ಜನಾಂಗ- ಜನಾಂಗವನ್ನೇ ಸತ್ಯದ ಬೆಳಕಿನಿಂದ ಮರೆಮಾಚಿದ್ದುಂಟು. ಭಾರತದಲ್ಲಿನ ವರ್ಣ ವ್ಯವಸ್ಥೆಯು ಬಡ-ದಲಿತ-ಹಿಂದುಳಿದ ವರ್ಗ- ಸ್ತ್ರೀಯರನ್ನು ಮುಖ್ಯವಾಹಿನಿಯಿಂದ ಹೊರಗಿಟ್ಟು ಕತ್ತಲಲ್ಲಿ ಮರೆಮಾಚಿರಲಿಲ್ಲವೇ? ವಿದ್ಯೆ-ವಿಜ್ಞಾನ- ವೈಚಾರಿಕ ಪ್ರಜ್ಞೆಯ ಜಾಗೃತಿಯ ಬೆಳಕು ಅವರನ್ನು ಇಂದು ಅದೇ ಸಮಾಜದ ಮುಖ್ಯವಾಹಿನಿಗೆ ಮುಕ್ತವಾಗಿ ನಿರ್ಭಿಡೆಯಿಂದ ತಂದು ನಿಲ್ಲಿಸಿದೆಯಲ್ಲವೇ? 

    ಮರೆ ಮಾಡಬೇಕಾದದು ಜ್ಞಾನ, ಸೌಂದರ್ಯ, ಬೆಳಕು, ಅವಕಾಶ, ಮಾನವೀಯತೆ, ಸಹಕಾರ ಬುದ್ಧಿ, ಸದ್ಗುಣ….ಗಳನ್ನಲ್ಲ. ನಮ್ಮೊಳಗಿನ ಅಜ್ಞಾನ, ಅಂಧಕಾರ, ಅಸತ್ಯ… ಮೊದಲಾದ ಋಣಾತ್ಮಕತೆಗಳನ್ನು. ಹಾಗೆಂದು ಅವುಗಳನ್ನು ಮರೆಯಲ್ಲಿಟ್ಟು ಪೋಷಿಸುವುದು ಬೇಡ. ಸಂಪೂರ್ಣವಾಗಿ ತೊಡೆದು ಹಾಕಬೇಕು. ಧನಾತ್ಮಕ ಚಿಂತನೆ, ಆಲೋಚನೆ ಎಲ್ಲರಲ್ಲೂ ಸಹಜ ರೂಢಿಯಾಗಬೇಕು. 

    ಬೆಂಕಿಯನ್ನು ಹೊಗೆ ಮರೆಮಾಚಿದರೂ ಒಳಗಿನ ಶಾಖ ಹೊರಗೆ ಹರಡಲೇಬೇಕು. ಹಾಗೆಯೇ ನಮ್ಮೊಳಗಿನ ಗುಣ ಸ್ವಭಾವಗಳು ಪ್ರಕಟವಾಗಲೇ ಬೇಕು. ಮರೆಮಾಚಿದ್ದು ದುರ್ಗುಣಗಳನ್ನಾದರೆ, ತಿದ್ದಿಕೊಂಡು ಸದ್ಗುಣಿಗಳಾಗುವುದು ನಮ್ಮ ಕೈಯಲ್ಲಿನ ಪ್ರಯತ್ನ. ಕೈ ಚೆಲ್ಲಿ ಕೂತರೆ ನಮಗೇ ನಷ್ಟ… ಏಕೆಂದರೆ, ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೂ, ಜಗತ್ತಿಗೆ ಗೊತ್ತಾಗದೇ ಇರುವುದೇ?

****************************

ವಸುಂಧರಾ ಕದಲೂರು

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

3 thoughts on “

    1. ವಿಚಾರವಂತಿಕೆಯ ಬರವಣಿಗೆ ಚನ್ನಾಗಿ ನರೂಪಿಸಿದ್ದೀರಿ
      ಕೊನೆಯ ಕಂಡಿಕೆಯಲ್ಲಿ ತಿಳಿಸಿರುವಂತೆ ಅರಿತು ಬಾಳಿದರೆ ಬದುಕು ಹಸನು.

Leave a Reply

Back To Top