ಅಂಕಣ ಬರಹ

ತೊರೆಯ ಹರಿವು

ನಗುನಗುತಾ ನಲೀ ನಲೀ ಏನೇ ಆಗಲಿ’

  ವಿದ್ಯೆ, ಹಣ, ಅಧಿಕಾರ, ಅಂತಸ್ತು, ಪ್ರಸಿದ್ಧಿ ಎಲ್ಲದರ ಹಿಂದೆ ಓಡುವಾಗ ನಾವು ಅದೆಷ್ಟು ಚಟುವಟಿಕೆಯಿಂದ ಇರುತ್ತೇವೆ! ಸ್ವಲ್ಪವೂ ಪುರಸೊತ್ತು ಕೊಡದೆ ಬಯಸಿದ್ದನ್ನು ಹೇಗಾದರೂ ಮಾಡಿ ಪಡೆದುಕೊಳ್ಳಲು ಇಲ್ಲಸಲ್ಲದ ಕಸರತ್ತು ಮಾಡಿಬಿಡುತ್ತೇವೆ. ಆದರೆ ಈ ಓಟದ ನಡುವಲ್ಲಿ ನಾವು ಕಡೆಗಣಿಸಿದ್ದೇನು? ನಿರ್ಲಕ್ಷಿಸಿದ್ದೇನು? ಕೈ ಬಿಟ್ಟದ್ದೇನೆಂದು ಬಹುಶಃ ಕ್ಷಣಕಾಲ ನಿಂತು ಯೋಚಿಸಿರಲಾರೆವು. ಆದರೂ ನಮಗೇನೋ ಮೋಹ.. ಪಡೆಯಬೇಕು, ಹೊಂದಬೇಕು, ಗಳಿಸಬೇಕು, ಮೆರೆಯಬೇಕು… ಹೀಗೆ ಆಸೆಗೆ ಅಂತ್ಯವಿಲ್ಲ. ನಿಜ, ಸಾಧಿಸಬೇಕೆನ್ನುವುದು ತಪ್ಪಲ್ಲ. ಸಕಾರಾತ್ಮಕ ಹಾದಿ ಹಿಡಿದು ಒಳಿತಾದುದನ್ನು ಸಾಧಿಸುವುದು ಸರಿಯೇ. ಆದರೆ ಆಕಾಶದ ಅಂಗಳದಲ್ಲಿ ಅರಮನೆ ಕಟ್ಟಬೇಕೆಂದೋ, ಭೂತಳದೊಳಗಿನ ರತ್ನನಿಧಿಯನ್ನು ಬಗೆದು ಹೊರಗೆ ತೆಗೆಯಬೇಕೆಂದೋ ಆಸೆ ಪಡುವುದು ಮಾತ್ರ ವಿಪರೀತಾರ್ಥದ ಅಸಹಜ ಬಯಕೆಯಾಗುತ್ತದೆ.

   ಯಾರ ಬದುಕೂ ಮತ್ತೊಬ್ಬರದರಂತೆ ಇರಲು ಸಾಧ್ಯವಿಲ್ಲ.  ನಾವು ಅವರಂತಾಗಬೇಕು, ಇವರಂತಿರಬೇಕೆಂದು ಒದ್ದಾಡುವುದು ಏಕೆ? ನಮಗೆ ದೊರೆತ ಬದುಕನ್ನು ಚೆಂದ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇರುತ್ತದೆ. 

     ‘The last lecture’ ಕೃತಿಕಾರ ‌ರ್‍ಯಾಂಡೀ ಪಾಶ್ ಹೇಳುವುದೂ ಇದನ್ನೇ. ಅಮೇರಿಕದವನಾದ ಈ ಬಹುಕಲಾವಲ್ಲಭ  ಮಾರಣಾಂತಿಕ ಕ್ಯಾನ್ಸರ್ ರೋಗ ತನ್ನ ಬೆನ್ನು ಹತ್ತಿದ್ದು, ಬದುಕಲು ಕೆಲವೇ ದಿನಗಳನ್ನು ‘ಗಿಫ್ಟ್ ಕೂಪನ್’ ರೀತಿಯಲ್ಲಿ ನೀಡಿರುವ ವಿಚಾರವನ್ನು ವೈದ್ಯರಿಂದ ತಿಳಿಯುತ್ತಾನೆ. ಹಲವಾರು ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದ ಪಾಶ್ ಸಾವಿನ ಎದುರು ಮಂಡಿಯೂರಬೇಕು ಎಂದಾಗ ಆತ ವಿಚಲಿತನಾಗುವುದಿಲ್ಲ. ಸಾವನ್ನು ಘನತೆಯಿಂದ ಆಹ್ವಾನಿಸುವ ಪಣತೊಡುತ್ತಾನೆ. ತನ್ನ ಪ್ರೀತಿ ಪಾತ್ರರು, ಬಂಧುಗಳು, ಸ್ನೇಹಿತರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ‘The last lecture’ ಎಂಬ ಉಪನ್ಯಾಸ ನೀಡುತ್ತಾನೆ. ಇದನ್ನು ಉಪನ್ಯಾಸ ಎನ್ನುವುದಕ್ಕೂ ಹೆಚ್ಚಾಗಿ ಬದುಕಿನ ಕುರಿತ ಭರವಸೆಯ ನುಡಿಗಳೆನ್ನಬಹುದು. 

      ಸಾವನ್ನು ಹೆಗಲ ಮೇಲೆ ಹೊತ್ತುಕೊಂಡಿರುವ ವ್ಯಕ್ತಿ ಹೀಗೂ ಜೀವನವನ್ನು ಮಾದರಿಯಾಗಿ ಕಾಣಬಹುದೆ ಎಂದು ಅಚ್ಚರಿಯಾಗುವಂತೆ ಪಾಶ್ ಒಬ್ಬ ಪರಮಾಪ್ತ ಮಿತ್ರನಂತೆ ಮಾತನಾಡುತ್ತಾನೆ. ಹಾಗೆಂದೇ ಈ ಉಪನ್ಯಾಸವು ಪುಸ್ತಕ ರೂಪದಲ್ಲಿಯೂ ಅದೇ ಹೆಸರಿನಲ್ಲಿ ಹೊರಬಂದಿದೆ. ವಿಶ್ವದಾದ್ಯಂತ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ದಾಖಲೆ ನಿರ್ಮಿಸಿದೆ. ಈಗ ‍ರ್‍ಯಾಂಡೀ ಪಾಶ್ ನಮ್ಮೊಡನಿಲ್ಲ. ಆದರೆ ಆತನ ಸ್ಫೂರ್ತಿದಾಯಕ ಮಾತುಗಳು, ಕೆಲಸಗಳಿವೆ. ಚೇತೋಹಾರಿಯಾಗಿರುವ ಈ ಪುಸ್ತಕವು ಜೀವನೋತ್ಸಾಹ ಕಳೆದುಕೊಂಡವರನ್ನು ಉತ್ಸಾಹಿಗಳನ್ನಾಗಿ ಮಾಡಲು,   ಸಾವಿನ ಕದಬಡಿಯಲು ಸಿದ್ಧರಾಗಿರುವರನ್ನು ಬದುಕಿ ಬಾಳುವಂತೆ ಮಾಡಲು ಸಾಧ್ಯವಾಗಿಸುವ ಮಂತ್ರದಂಡ ಎನ್ನಬಹುದು. ಒಮ್ಮೆಯಾದರೂ ಓದಬೇಕಾದ ಪುಸ್ತಕ. 

  ಇದೊಂದೇ ಅಲ್ಲ ಹುಡುಕಿದರೆ, ಪಾಶ್ ನಂತಹ ಹಲವಾರು ಭರವಸೆಯ ಮಾದರಿಗಳು ನಮಗೆ ಸಿಗುತ್ತವೆ.

      “ಹುಟ್ಟಿಲ್ಲದವರಿಗೆ ಸಾವಿಲ್ಲ

      ಹುಟ್ಟಿ ಬಂದ ಮೇಲೆ ಸಾವಿಲ್ಲದಿಲ್ಲ

      ಸತ್ತ ಮೇಲೆ ಹುಟ್ಟುವುದಿದೆಯಲ್ಲಾ

      ಅದು ಎಲ್ಲರ ಕೈಯಿಂದ ಸಾಧ್ಯವಿಲ್ಲ

      ಸತ್ತ ಮೇಲೂ ಬದುಕಿರುವುದು

       ಸಾಧಕರ ಸಿದ್ಧಿ ನೋಡಲ್ಲಾ

       ಬದುಕಿರುವಾಗ ಅತೀ ದುರ್ಭರ ಪರಿಸ್ಥಿತಿಗಳು ಎದುರಾಗುವುದು ಸುಳ್ಳಲ್ಲ. ಆದರೆ, ಭೂಮಿಯ ಮೇಲೆ ಯಾವ ಋತುಗಳೂ ಸ್ಥಿರವಾಗಿರುವುದಿಲ್ಲ. ಅಲ್ಲವೇ? ಭೂಮಿಯೇ  ನಿರಂತರದ ಚಲನೆಯಲ್ಲಿ ಇರುವಾಗ ಅದರೊಳಗಿನ ನಮ್ಮ ಬದುಕೂ ಅಷ್ಟೇ. ಬದಲಾವಣೆಗೆ ಪಕ್ಕಾಗಬೇಕು. ಸ್ಥಿತಪ್ರಜ್ಞರು ಸಮಸ್ಥಿತಿಯನ್ನು ಸಿದ್ಧಿಸಿಕೊಂಡಿರುತ್ತಾರೆ. ಅವರನ್ನು ಯಾವ ಸುಖ- ಮೋಹ- ಆಸೆ ಹೆಚ್ಚಾಗಿ ಕಾಡದಂತೆ ನೋವು- ಸಾವು- ದುಃಖವೂ ಅಪಾರವಾಗಿ  ಬಾಧಿಸದಿರಬಹುದು. ಆದರೆ ಸಾಮಾನ್ಯರನ್ನು ಅರಿಷಡ್ವರ್ಗಗಳು ಸದಾ ಕಾಡುತ್ತಿರುತ್ತಿರುತ್ತವೆ. ಇದರ ನಡುವೆಯೂ ಯಾವುದೂ ಸ್ಥಿರವಲ್ಲ ಎನ್ನುವ ಒಂದು ತಿಳುವಳಿಕೆಯಿಂದ ಬಂದುದನ್ನು ಎದುರಿಸುವ ಛಲವನ್ನು, ನಿರ್ಧಾರವನ್ನು ತೆಗೆದುಕೊಂಡರೆ ಬದುಕು ದುರ್ಭರವಾಗುವುದಿಲ್ಲ. ಹಿರಿಯರಲ್ಲಿ ಈ ಬಗೆಯ ಅರಿವು ಹೆಚ್ಚಾಗಿರುತ್ತದೆ. ಹಾಗಾಗಿಯೇ ಸಣ್ಣವರು ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದಕ್ಕೆ ದೊಡ್ಡವರು ಸಾವಧಾನದ ಪ್ರತಿಕ್ರಿಯೆ ನೀಡುವುದು.

   ‘ಏನಾಗಲಿ, ಮುಂದೆ ಸಾಗು ನೀ.. ಬಯಸಿದ್ದೆಲ್ಲಾ ಸಿಗದು ಬಾಳಲಿ’ ಇದು ಜೀವನದ ಪರಮ ಸತ್ಯ. ಇದು ಗೊತ್ತಿದ್ದರೂ ನಾವು ಚಡಪಡಿಸುವುದನ್ನೇ ರೂಢಿ ಮಾಡಿಕೊಂಡಿರುತ್ತೇವೆ. ಹಾಗೆಂದು ಹೊಸತನಕ್ಕೆ ಹಾತೊರೆಯ ಬಾರದು ಎಂದಲ್ಲ. ಅನ್ವೇಷಣೆಗೆ ಕೈ ಹಾಕದಿದ್ದರೆ, ಸಂಶೋಧನೆ ನಡೆಯದಿದ್ದರೆ ಇಷ್ಟು ತಾಂತ್ರಿಕ ಔನತ್ಯ, ಪಾರಂಪರಿಕ ಪ್ರಜ್ಞೆ, ಐತಿಹಾಸಿಕ ಮಹತ್ವ, ಸಾಂಸ್ಕೃತಿಕ ಶ್ರೀಮಂತಿಕೆ ನಮ್ಮದಾಗುತ್ತಿರಲಿಲ್ಲ. 

 ‘ನಡೆಯುವವರು ಎಡವದೇ ಕುಳಿತವರು ಎಡವುತ್ತಾರೆಯೇ?’ ಎಲ್ಲಾ ಪ್ರಯತ್ನಗಳ ಫಲಿತಾಂಶಗಳು ಸಫಲತೆ ಪಡೆಯುವುದಿಲ್ಲ. ಹಲವು ವಿಫಲತೆ, ಸೋಲು, ನಿರಾಸೆಗಳು ಪ್ರಯತ್ನದ ಹಾದಿಯಲ್ಲಿ ಸಿಕ್ಕಿರುತ್ತವೆ. ‘ಸೋಲೇ ಗೆಲುವಿನ ಸೋಪಾನ’ ಎಂದುಕೊಂಡು ಮುನ್ನಡೆದರೆ, ಗೆಲುವು ಕನ್ನಡಿ ಗಂಟಾಗುವುದಿಲ್ಲ. ಕಿರೀಟವಾಗಿ ಮುಡಿಯೇರಿರುತ್ತದೆ. 

  ಮಗುವನ್ನೇ ನೋಡಿ ಪ್ರತಿಯೊಂದಕ್ಕೂ ಅನ್ಯರನ್ನು ಆಶ್ರಯಿಸಿ, ಅಸಹಾಯಕ ಮೂರ್ತಿ ಎನಿಸಿದ್ದು, ಮುಂದೆ ಮುಂದೆ ಬೆಳೆದು ಅಸಾಮಾನ್ಯ ಎನಿಸುವುದಿಲ್ಲವೇ? ಕೃತಕ ಕಾಲಿನ ಅರುಣಿಮಾ ಹಿಮಾಲಯ ಏರಿ ಸಾಧನೆ ಮಾಡಲಿಲ್ಲವೇ? ಆ್ಯಸಿಡ್ ಸಂತ್ರಸ್ತರು ಛಲದಿಂದ ಬದುಕಿಲ್ಲವೇ? ಯಾವ ವೈದ್ಯರು ಕೊನೆಯ ಪ್ರಯತ್ನ ಮಾಡದೆ, ಶುರುವಿನಲ್ಲೇ ಕೈ ಚೆಲ್ಲುತ್ತಾರೆ ಹೇಳಿ!? ಯಾವ ಶಿಕ್ಷಕ ತನ್ನ ಅತಿದಡ್ಡ ವಿದ್ಯಾರ್ಥಿ ಸಹ ಸಫಲನಾಗಲಿ ಎನ್ನದೆ ಇರುತ್ತಾರೆ!? ಎಂಜಿನ್ ದುರಸ್ಥಿಗೆ ಬಂದರೂ ರಿಪೇರಿ ಮಾಡಿಸಿಯೇ ವಾಹನವನ್ನು ಗುರಿಮುಟ್ಟಲು ಚಲಾಯಿಸುವುದಿಲ್ಲವೇ?!ಹೆಬ್ಬಾಗಿಲು ಮುಚ್ಚಿದಾಗ, ವಾತಾಯನಗಳನ್ನು ಹುಡುಕಬೇಕು. ಕಡೇ ಪಕ್ಷ ಬದುಕಲು ಸ್ವಲ್ಪ ಉಸಿರನ್ನಾದರೂ ಅಲ್ಲಿಂದ ಪಡೆಯಬಹುದು.  

    ‘ಕೊಲೆ ಪಾಪ; ಆತ್ಮಹತ್ಯೆ ಮಹಾಪಾಪ’ ಎಂದು ಗೊತ್ತಿದ್ದರೂ, ಅದೆಷ್ಟು ದುಡುಕುತ್ತೇವೆಂದರೆ, ನಮ್ಮ ಜೊತೆಯವರ ಬಾಳನ್ನೂ ನಮ್ಮ ದುಡುಕಿಗೆ ಬಲಿ ತೆಗೆದುಕೊಂಡಿರುತ್ತೇವೆ. ಪುಟ್ಟ ಮಕ್ಕಳೊಡನೆ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಕಂಡರೆ, ‘ಅಯ್ಯೋ!’ ಎಂದು ಕರುಣೆ ಉಕ್ಕುವ ಬದಲು ನಿಯಂತ್ರಿಸಲಾರದ ಕೋಪ ಬರುತ್ತದೆ. ತನಗೆ  ಬದುಕಲಾಗದು ಎಂದ ಮೇಲೆ, ಮತ್ತೊಬ್ಬರ ಬದುಕುವ ಹಕ್ಕನ್ನು ಕಸಿಯುವುದು ಏಕೆ? ಎಂಬ ಪ್ರಶ್ನೆ ಕಾಡುತ್ತದೆ. ನಮ್ಮ ಕೈಯಲ್ಲಿ ಏನಿಲ್ಲಾ.., ಎಲ್ಲಾ ಭಗವಂತನ ಚಿತ್ತ ಎಂದು ನಮ್ಮ ಜೀವನವನ್ನು ನಾವು ನಡೆಸಲಾರದೆ, ಅನ್ಯ ನಂಬಿಕೆ ಮೇಲೆ ಭಾರ ಹಾಕಿಬಿಡುವುದು, ಕೊಲೆ/ಆತ್ಮಹತ್ಯೆಯ ಸಾವಿಗಿಂತಲೂ ಸಾವಿರ ಪಾಲು ಮೇಲೆನಿಸುತ್ತದೆ. ಸೃಷ್ಟಿಸುವ ತಾಕತ್ತು ನಮಗಿಲ್ಲದ ಮೇಲೆ, ಸೃಷ್ಟಿಯನ್ನು ನಾಶ ಮಾಡುವುದೂ ನಮಗೆ ಶೋಭೆ ತರುವುದಿಲ್ಲ.  ಬದುಕಿ, ಬದುಕಲು ಬಿಡಿ, ಬದುಕಲು ಕಲಿಯಿರಿ. ಎನ್ನುವುದು ವ್ಯಷ್ಟಿ ಪ್ರಜ್ಞೆಯಲ್ಲ. ಸಮಷ್ಟಿಯ ಅರಿವು. 

 ಎಲ್ಲ ಇದ್ದರೂ ನಗುವುದು, ನಲಿಯುವುದು ನಮಗೆ ಕಷ್ಟವೇ… ‘ಇಷ್ಟಿದೆ, ಮತ್ತಷ್ಟು ಬೇಕಿತ್ತು..’ ಎನ್ನುವ ಅಸಮಾಧಾನ ನಗುವನ್ನು ಕಸಿಯುತ್ತದೆ. ಹಾಗೆಂದೇ ಹಿರಿಯರು ಹೇಳಿದ್ದು, ನಮಗಿಂತ ಮೇಲೆ ಇರುವವರನ್ನು ನೋಡಿ ಸಂಕಟ ಪಡುವುದಕ್ಕಿಂತ, ನಮಗಿಂತ ಕೆಳಸ್ಥಿತಿಯಲ್ಲಿ ಇರುವವರನ್ನು ನೋಡಿ ಸಮಾಧಾನ ಮಾಡಿಕೊಳ್ಳಬೇಕು ಎಂದು. ಇದು ಅನ್ಯರನ್ನು ಹಂಗಿಸಬೇಕಾದ ರೂಢಿಯಲ್ಲ. ನಮ್ಮನ್ನು ಸಂತೈಸಿಕೊಳ್ಳುವ ವಿಧಾನ. 

   ಜಗತ್ತು ಈಗಂತೂ ತಾಂತ್ರಿಕ ಅತ್ಯುನ್ನತಿಗೆ ಹೋಗುತ್ತಿದೆ. ಹಾಗೆಯೇ ನೈತಿಕ ಅಧಃಪತನಕ್ಕೆ ಇಳಿಯುತ್ತಿದೆ. ಹತಾಶೆಯನ್ನು ಅಪ್ಪಿ ಹಿಡಿದವರು ದುಡುಕುತ್ತಿದ್ದಾರೆ. ಸಾವಿಗೆ ಆಹ್ವಾನ ನೀಡುತ್ತಿದ್ದಾರೆ. ದುಡುಕಿನ ನಿರ್ಧಾರಗಳು ಮುಂದಾಗುತ್ತಿವೆ. ಸಂಕಟ, ಅವಮಾನ, ಅಸ್ಥಿರತೆಗಳು ಬರುವುದು ಸಹಜ; ಬಂದರೂ ಅವುಗಳ ಇರುವಿಕೆ ಕ್ಷಣಿಕ ಎಂದು ಅರಿತು ಬಾಳಿದರೆ ಬದುಕು ಬಂಗಾರವಾಗುತ್ತದೆ. ಸಕಾರಾತ್ಮಕ ಚಿಂತನೆ, ರೂಢಿಗಳನ್ನು ಬೆಳೆಸಿಕೊಂಡರೆ ಎಲ್ಲರಿಗೂ ಒಳಿತಾಗುತ್ತದೆ. ಹಾಗಾಗಿ ನಮ್ಮ ನಮ್ಮ ಮನವನ್ನು ಸಂತೈಸಿಕೊಳ್ಳಬೇಕು – ‘ನಗುನಗುತಾ ನಲೀ ನಲೀ ಏನೇ ಆಗಲಿ..’

ಬೇಕು- ಬಯಕೆಗಳನ್ನು ಕಡಿಮೆ ಮಾಡಿಕೊಂಡರೆ, ಸುಖ ಹೆಚ್ಚುತ್ತದೆ. ಆಕಾಶಕ್ಕೆ ಏಣಿ ಹಾಕುವ ಬದಲು, ಮನೆಯ ಅಟ್ಟ ಏರಬಹುದಲ್ಲನೇ? ಮರದ ಮೇಲೆ ಕೂರಬಹುದಲ್ಲವೇ! ಈಗೇನು, ಸ್ವಲ್ಪ ಸಾಮರ್ಥ್ಯವಿದ್ದರೆ, ಆಕಾಶಕ್ಕೇ ಹೋಗಿ ಬರಬಹುದು. ಹಾಗೆ ಹೋಗಿ ಬರುವ ಮುನ್ನ ನಮ್ಮ ಅವಶ್ಯಕತೆ ಏನೆಂದು ನಮಗೆ ಅರಿವಿರಬೇಕು. ‘ತಾಳಿದವರು ಬಾಳಿಯಾರು’ ಹೊರತು ಹೃದಯದ ತಾಳ ತಪ್ಪಿದರೆ ಬಾಳಲಾಗದು. ಸಮಯವೇ ಕ್ಷಣಕ್ಷಣಕ್ಕೂ ಬದಲಾಗುವಾಗ ಕಾಲಕ್ಕೆ ತಕ್ಕಂತೆ ನಾವೂ ನಡೆಯಬೇಕಲ್ಲವೇ? ಹಾಗೆಂದು ಊಸರವಳ್ಳಿಗಳಂತೆ ಬಣ್ಣಬದಲಿಸುವುದು ಬೇಕಿಲ್ಲ. ಮುಖೇಡಿಗಳಾಗಿ ಬದುಕುವುದು ಸಲ್ಲ. 

   ಶರಣರ ಮಾತಿಲ್ಲವೇ!

         ‘ಕಳಬೇಡ, ಕೊಲಬೇಡ, ಹುಸಿಯ 

         ನುಡಿಯಲು ಬೇಡ, ಮುನಿಯ ಬೇಡ,

         ಅನ್ಯರಿಗೆ ಅಸಹ್ಯ ಪಡಬೇಡ, ತನ್ನ 

         ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ, 

         ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ     

          ಶುದ್ಧಿ……

    ಇಷ್ಟು ಶುದ್ಧಿಯನ್ನು ಸಿದ್ಧಿಸಿಕೊಂಡರೆ, ಪರಮ ಶಾಂತಿ- ಸುಖವನ್ನು ಕಾಣಬಹುದು. ಇದೇ  ಜೀವನದ ಕಾಣ್ಕೆ! ದರ್ಶನ!!

*****************

 ವಸುಂಧರಾ ಕದಲೂರು

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ  ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

4 thoughts on “

Leave a Reply

Back To Top