ಏಕತೆ ಸಾರುವ ಹುಸೇನ್-ಷಾವಲಿ ತಾತಯ್ಯ…!
ಕೆ.ಶಿವು.ಲಕ್ಕಣ್ಣವರ
`ಸರ್ವಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ’ ಎಂಬುದು ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯಲ್ಲಿನ ಒಂದು ಸಾಲು. ಇಂತಹ ಸೌಹಾರ್ದ ಪರಂಪರೆಗೆ ಸಾಕ್ಷಿ ಎಂಬಂತೆ ಬಾಗೇಪಲ್ಲಿಯಲ್ಲಿ ದರ್ಗಾ-ಕರಗ, ಮಂದಿರ, ಮಸೀದಿ, ಗುಡಿ, ಚರ್ಚ್ ಎಲ್ಲವೂ ಇಲ್ಲೇ ಇವೆ. ಈ ನೆಲದಲ್ಲಿ ಸೌಹಾರ್ದ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಹಜರತ್ ಸೈಯ್ಯದನಾ ಶೇಕ್ ಹುಸೇನ್ ಷಾ ಖಾದ್ರಿ ಅವರ ಕೊಡುಗೆ ಸಾಕಷ್ಟಿದೆ…
ಹಿಂದು-ಮುಸ್ಲಿಂರು ತಮ್ಮ ಗುರು ಮತ್ತು ಮಾರ್ಗದರ್ಶಕರೆಂದೇ ಅವರನ್ನು ಕಾಣುತ್ತಾರೆ. ಅದೇ ಕಾರಣಕ್ಕೆ ಮುಸ್ಲಿಂರ ಪಾಲಿಗೆ ಅವರು ಹುಸೇನ್ ಶಾವಲಿಯಾದರೆ, ಹಿಂದುಗಳಿಗೆ ಅವರು ಪ್ರೀತಿಯ ತಾತಯ್ಯ. ದಾಸರಿಂದ ಹುಸೇನ್ ದಾಸ ಎಂದೂ ಅವರು ಕರೆಸಿಕೊಂಡಿದ್ದಾರೆ. ಸೌಹಾರ್ದ ಮತ್ತು ಸಹಬಾಳ್ವೆಗೆ ಸಾಕ್ಷಿಯಾಗಿದ್ದಾರೆ ಅವರು…
1963ರ ದಿನಗಳಲ್ಲಿ ಜವಳಿ ಉದ್ಯಮಿಯಾಗಿದ್ದ ಹಜರತ್ ಸೈಯ್ಯದನಾ ಶೇಕ್ ಹುಸೇನ್ ಷಾ ಖಾದ್ರಿ ಅವರು ಸಂತರಾದದ್ದು ಆಕಸ್ಮಿಕ ಪವಾಡವೇನಲ್ಲ. ಅವರು ಜನರಿಗೆ ಏನನ್ನೂ ಬೋಧನೆ ಮಾಡಲಿಲ್ಲ. ತತ್ವ ಪದಗಳನ್ನು ಹೇಳಲಿಲ್ಲ. ಆದರೆ ಅವರ ಇಡೀ ಬದುಕೇ ಲೌಕಿಕ ಸತ್ಯಗಳನ್ನು ಹೇಳುವ ವಿಶ್ವವಿದ್ಯಾಲಯವಾಯಿತು…
ಶ್ರೀಮಂತರಾಗಿದ್ದ ಅವರು ಪ್ರತಿ ದಿನ ಹೊಸ ಬಟ್ಟೆ ಧರಿಸುತ್ತಿದ್ದರು. ಯಾವುದೇ ಕೊರತೆ ಅವರಿಗೆ ಇರಲಿಲ್ಲ. ಆದರೆ ಧರ್ಮಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿ, ಕೊನೆಯುಸಿರೆಳೆದಾಗ ಅವರಲ್ಲಿ ವೈರಾಗ್ಯ ಮೂಡಿತು. ಅತ್ತ ಹಾಲು ಕುಡಿಯುವ ಮಗು ಮತ್ತು ಇತ್ತ ವ್ಯಾಪಾರ- ವಹಿವಾಟು ತ್ಯಜಿಸಿ ದೈವ ಸಾಕ್ಷಾತ್ಕಾರದ ಮಾರ್ಗದಲ್ಲಿ ಬೆಳೆದು ನಿಂತವರು ಸಂತ ಹುಸೇನ್ ಷಾವಲಿ ತಾತಯ್ಯ..!
ಹೆಗಲ ಮೇಲೆ ಕಂಬಳಿ ಹಾಕಿಕೊಂಡು, ಸೊಂಟಕ್ಕೆ ತುಂಡು ಬಟ್ಟೆ ಧರಿಸಿಕೊಂಡು, ಕಾಡು-ಮೇಡು ಅಲೆಯಲು ಆರಂಭಿಸಿದರು. ಪ್ರತಿ ನಿತ್ಯ ಸ್ವಾದಿಷ್ಟ ತಿನಿಸುಗಳನ್ನು ತಿನ್ನುತ್ತಿದ್ದವರು ಭಿಕ್ಷಾಪಾತ್ರೆಯನ್ನು ಹಿಡಿದು ಮನೆಗಳ ಮುಂದೆ ಭಿಕ್ಷೆ ಕೇಳತೊಡಗಿದರು. ಅಲ್ಲಿಗೆ ಅವರು ಸಂಪೂರ್ಣವಾಗಿ ಬದಲಾದರು. ಮೊದ ಮೊದಲು ಅವರನ್ನು ಹುಚ್ಚ, ಧರ್ಮ ವಿರೋಧಿ ಎಂದು ಮಸೀದಿಯಿಂದ ಜನರೇ ಹೊರ ನೂಕಿದರು. ಆದರೆ ನಂತರದ ದಿನಗಳಲ್ಲಿ ಅವರ ತತ್ವ, ಆದರ್ಶಗಳ ಪ್ರಭಾವಕ್ಕೆ ಒಳಗಾಗಿ ಅದೇ ಜನರು ಸಾವಿರಾರು ಸಂಖ್ಯೆಯಲ್ಲಿ ಅನುಯಾಯಿಗಳಾದರು…
`ಗುಡಿ-ಮಸೀದಿಗಳಲ್ಲಿ ಭಗವಂತನನ್ನು ನೋಡದೇ ಪ್ರಾಣಿ-ಪಕ್ಷಿ ಸೇರಿದಂತೆ ಸಕಲ ಜೀವರಾಶಿಗಳಲ್ಲಿಯೂ ಧರ್ಮಾತ್ಮನನ್ನು ಕಾಣಿರಿ. ಹಿಂದು-ಮುಸ್ಲಿಂ ಎನ್ನುವಂತಹದ್ದು ಮನುಷ್ಯ ಸ್ಥಾಪಿಸಿಕೊಂಡಿರುವುದು. ದೈವನಿರ್ಣಯವಲ್ಲ. ಜಾತಿ, ಧರ್ಮಗಳು ಬೇರೆ ಬೇರೆಯಾದರೂ ನಡೆದು-ಕುಣಿದಾಡುವ ಆತ್ಮ ಒಂದೇ. ನಾನು ನನ್ನ ಹೊಟ್ಟೆ ತುಂಬಿಸಿಕೊಳ್ಳಲು ನಿಮ್ಮಿಂದ ಭಿಕ್ಷೆ ಬೇಡುತ್ತಿಲ್ಲ. ನಿಮ್ಮ ಪಾಪ-ಕರ್ಮಗಳನ್ನು ಬೇಡುತ್ತಿದ್ದೇನೆ. ನಂತರ ಕರುಳನ್ನು ಹರಿಯುವ ನದಿಯಲ್ಲಿ ತೊಳೆಯುತ್ತಿದ್ದೇನೆ’ ಎಂದು ಅವರು ತಮ್ಮ ಶಿಷ್ಯಂದಿರಿಗೆ ಹೇಳುತ್ತಿದ್ದರು…!
ಅವರು ಗತಿಸಿ ಇಂದಿಗೆ 50 ವರ್ಷಗಳ ಮೇಲಾಗಿವೆ. ರಂಜಾನ್ ಹಬ್ಬದ ಮಾರನೆಯ ದಿನದಿಂದ 11ನೇ ದಿನಕ್ಕೆ ಅವರು ಇಹಲೋಕವನ್ನು ತ್ಯಜಿಸಿದರು. ಇಸ್ಲಾಂ ಧರ್ಮದ ಪ್ರಕಾರ, ಈ ದಿನವನ್ನು ಸೌಹಾಲ್ 11ನೇ ತಾರೀಖು ಎನ್ನುತ್ತಾರೆ. ಪ್ರಾಣ ತ್ಯಾಗ ಮಾಡಿದ ದಿನದಂದು ಜಾತಿ- ಧರ್ಮಗಳು ಮೀರಿ ತಮ್ಮ ಗುರುವಿನ ಆಜ್ಞೆಯಂತೆ ಎಲ್ಲರೂ ಒಂದಾಗಿ ಅವರನ್ನು ಸಮಾಧಿ ಮಾಡಿದ ಅಂದಿನಿಂದ ಇಂದಿನವರಿಗೂ ಜಾತ್ಯತೀತವಾಗಿ ಪ್ರತಿದಿನ ದರ್ಗಾಗೆ ಪ್ರವೇಶಿಸಿ ತಮ್ಮ ಸಂಕಷ್ಟಗಳನ್ನು ಬಗೆಹರಿಸುವಂತೆ ಪ್ರಾರ್ಥಿಸುವುದು ರೂಢಿಯಾಗಿದೆ…!
`ಈ ಸಂತನಿಗೆ ನಡೆದುಕೊಳ್ಳುವ ಜನರು ಹೃದಯವಂತಾಗಿರಬೇಕು. ಮನುಷ್ಯತ್ವ ಇರುವಂತಾಗಿರಬೇಕು. ಸಕಲ ಜೀವಿಗಳಲ್ಲಿ ಪರಮಾತ್ಮನನ್ನು ಕಾಣುವ ಹೃದಯವಂತರಾಗಿರಬೇಕು. ಅಷ್ಟೇ ಹೊರತು ಜಾತಿವಂತರಲ್ಲ…!
ಎಲ್ಲಾ ಜಾತಿ, ವರ್ಗದವರು, ಜಾತ್ಯತೀತತೆ, ಏಕತೆ, ಸಹೋದರ ಭಾವ ಹೊಂದಿದವರೆಲ್ಲ ದರ್ಗಾಗೆ ಬರುತ್ತಾರೆ. ತಾತಯ್ಯ ಕಣ್ಮರೆಯಾದರೂ ಅವರ ಶಿಷ್ಯಂದಿರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ’ ಎನ್ನುತ್ತಾರೆ ದರ್ಗಾದವರು…
ಈದ್-ಉಲ್-ಫಿತರ್ ಹಬ್ಬದ ಮಾರನೆ ದಿನದಿಂದ 11ನೇ ದಿನಕ್ಕೆ ಸಂತ ಹಜರತ್ ಶೇಖ್ ಹುಸೇನ್-ಷಾವಲಿ ತಾತಯ್ಯ ಇಹಲೋಕ ತ್ಯಜಿಸಿದರು. ಆ ದಿನವನ್ನು ಸೌಹಾಲ್ ಎಂದು ಕರೆಯಲಾಗುತ್ತದೆ…!
ಹಿಂದು ಮತ್ತು ಮುಸ್ಲಿಂ ಸಮುದಾಯದವರು ಸೋಮವಾರ ರಾತ್ರಿ 8ರ ಸುಮಾರಿಗೆ `ಸಂದಲ್-ಎ-ಶರೀಫ್’ (ಗಂಧದ ಅಭಿಷೇಕ), ಅನ್ನದಾನ ಮತ್ತು ಆರಾಧನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ಯಾರೆ…!
ಹೀಗಿದೆ ಸಂತ ಹಜತತ್ ಶೇಖ್ ಹುಸೇನ್-ಷಾವಲಿ ತಾತಯ್ಯನ ಪುರಾಣ..!!
———–