ಅಂಕಣ ಬರಹ

ರಂಗ ರಂಗೋಲಿ

ರಂಗ ಸಿರಿ’ ಐಸಿರಿ

ಬೆಳ್ಳನೆಯ ಪಾದಗಳು. ಕಡು ಕೆಂಪು ರೇಶ್ಮೆ ಸೀರೆ ಅವರನ್ನು ಸುತ್ತುವರಿದಿತ್ತು. ಆಕರ್ಷಕ ಕಣ್ಣುಗಳು, ಕಿವಿಯಲ್ಲಿ, ಕೊರಳಲ್ಲಿ ಮಿನುಗುವ ವಜ್ರದ ಓಲೆ,ಸರ. ದೊಡ್ಡ ಬಿಂದಿ ಹಣೆಯಲ್ಲಿ. ಇವರಲ್ಲಿ ಎಂತಹ ಲಕ್ಷಣ,ತೇಜಸ್ಸು.

” ಪೂರ್ಣಿಮಾ, ನಾವು ಆಗಷ್ಟೆ ಮದುವೆಯಾಗಿ ಬಂದ ನವದಂಪತಿಗಳು. 

ಬಡತನ. ‘ಉರ್ಕಿದೊಟ್ಟು’ ಎಂಬ ಊರಿಗೆ ವಿದ್ಯುತ್ ದೀಪದ ಬೆಳಕಿನ್ನೂ ಬಂದಿರಲಿಲ್ಲ. ಬರುತ್ತಾ,  ದೊಣಪೆ ಹತ್ತಿ ದಾಟುತ್ತಿದ್ದಾಗ  ಒಳಲಂಗ “ಪರ್” ಎಂದಿತ್ತು.

ನಿನಗೆ ಅರ್ಥ ಆಗುತ್ತಿದೆಯಾ ಮಗಳೇ, ಇಲ್ಲೆಲ್ಲ ಗುಡ್ಡೆ, ಹಾಡಿ. ಅಂದು ತಲಪುವಾಗಲೇ, ಸಂಜೆಯ ಹೊತ್ತು, ಕತ್ತಲು ನಿಧಾನವಾಗಿ ಆವರಿಸುತ್ತಿತ್ತು.

ನನ್ನ ಯಜಮಾನರು,

” ನೋಡು ಇಲ್ಲಿಯೇ ನಮ್ಮ ಅಬ್ಬಗ- ದಾರಗರು ಮಾಯವಾದ ಸ್ಥಳ.”

ಸುತ್ತ ಮರಗಿಡ ತುಂಬಿದ ಬನ, ಅವ್ಯಕ್ತ ಕತ್ತಲು, ಥಂಡಿ ಗಾಳಿ, ಅಪರಿಚಿತ, ಆನಾಮಿಕ ಪರಿಸರ, ಮೈ ಝಮ್ಮೆಂದಿತು.

 ಆಗಲೇ ಎದುರುಗಡೆಯಿಂದ ವಯಸ್ಸಾದ ಹಿರಿಯರೊಬ್ಬರು ಕೈಯಲ್ಲಿ ಲಾಟೀನು ಹಿಡಿದು ನಮ್ಮ ಎದುರು ಹಾದು ಹೋದರು. ಆಗಲೇ ನನ್ನ ಮದುಮಗ,

” ನೋಡಿದೆಯಾ ನಮಗೆ ಶುಭಸೂಚನೆ. ಬಾ, ಹೀಗೆ”.

ಕೈ ಹಿಡಿದು ಆ ಜಾಗಕ್ಕೆ ಕರೆದೊಯ್ದರು.

” ಇಲ್ಲೇ ಅಬ್ಬಗ ದಾರಗ ಚೆನ್ನಮಣೆ ಆಟ ಆಡಿ ಮುನಿಸಿಕೊಂಡು ಮಾಯವಾದ ಜಾಗ. ಬಾ ಅಡ್ಡ ಬಿದ್ದು ಆಶೀರ್ವಾದ ಪಡೆದುಕೊಳ್ಳುವ.”

 “ಓ ನಮ್ಮ ಸಿರಿ ದೈವಗಳೇ, ನಿಮ್ಮ ಪಾದದಡಿ ಶರಣು ಬಂದಿದ್ದೇವೆ. ನಮ್ಮಲ್ಲಿ ಏನೂ ಇಲ್ಲ. ನಿಮ್ಮ ದಯೆಯಿಂದ ನಮಗೆ ಸಂಪತ್ತು, ಸಿರಿವಂತಿಕೆ ಬರುವಂತೆ ಮಾಡಿ. ಖಾಲಿಯಾಗಿರುವ ನಿಮ್ಮ ಈ ಜಾಗದಲ್ಲಿ ಆರಾಧನಾ ಸ್ಥಾನ ಕಟ್ಟಿಸುತ್ತೇನೆ.”

ಅದು ನಮ್ಮವರ ಸಂಕಲ್ಪ.

  ಮಗಳೇ, ನಮ್ಮಲ್ಲಿ ಏನೆಂದರೆ ಏನೂ ಇರಲಿಲ್ಲ. ಮುಂಬೈಗೆ ಉದ್ಯೋಗ ಅರಸಿಕೊಂಡು ಹೋದೆವು. ಹೋಟೇಲಲ್ಲಿ ನನ್ನವರು ಕೆಲಸಕ್ಕೆ ಸೇರಿಕೊಂಡರು.

ಮುಂದಿನದು ಚರಿತ್ರೆ. ನಮ್ಮದೇ ಸಣ್ಣ ಕ್ಯಾಂಟೀನ್ ನಂತಹ ಹೋಟೇಲ್, ಸಣ್ಣ ಹೋಟೇಲ್, ದೊಡ್ಡದಾಯಿತು ಸಂಬಂಧ, ವ್ಯವಹಾರ. ನಮ್ಮ ಕಲ್ಪನೆಗೂ ಮೀರಿ ಬೆಳೆಯಿತು. ಬೇಕು, ಬೇಡ ಎಂದರೂ ತುಂಬಿಕೊಂಡ ಹಣ, ಆಸ್ತಿಪಾಸ್ತಿ. ಶ್ರೀಮಂತರ ಪಟ್ಟಿಯಲ್ಲಿ ನಾವೂ ಇದ್ದೆವು.

 ಆಗಲೇ ನಾನು ನೆನಪಿಸಿದೆ.

” ಹರಕೆ ಬಾಕಿ ಇದೆ”

” ಯಾವ ಹರಕೆ? ಹಣವಾದ ನಂತರ ಸ್ಥಾನ ಕಟ್ಟಿಸುತ್ತೇನೆ ಎಂದಿದ್ದೆ ಅಲ್ವಾ. ಹಣ ಅಷ್ಟು ಆಗಲಿಲ್ಲ”

” ಹಾಗೆ ಆಡಬಾರದು. ದೈವ ಮುನಿಸಿಕೊಂಡರೆ..”

” ಹಣವಾದ ನಂತರ ಕಟ್ಟಿಸೋಣ”

ಬದುಕಿನ ಪ್ರತೀ ತಿರುವಿನಲ್ಲೂ ನೆನಪಿಸುತ್ತಿದ್ದೆ. ಅವರು ಇಂತಹ ಮಾತುಗಳನ್ನೇ ಆಡಿ ವಿಷಯ ತಳ್ಳಿ ಬಿಡುತ್ತಿದ್ದರು.

” ನನ್ನಲ್ಲಿ ಹಣವಿದೆ ಅಂದವರು ಯಾರು? ಹಣವಿಲ್ಲ..”

ಮುಂದೆ ಹಣದ ಬೇಡಿಕೆಗಾಗಿ ಭೂಗತ ಲೋಕದವರಿಂದ  ಅವರ ಹತ್ಯೆಯಾಯಿತು.”

ಹೀಗನ್ನುತ್ತಾ ಅವರು

ಕ್ಷಣವನ್ನು ಮೌನಕ್ಕೆ ಅರ್ಪಿಸಿದರು.

ನನಗೆ ಅವರ ಮುಖ ನೋಡುವ ಧೈರ್ಯವಿಲ್ಲ. ಆ ದೇವಾಲಯದ ಪ್ರದಕ್ಷಿಣೆ ಅವರ ಜೊತೆ ಸಾಗುತ್ತಿತ್ತು.

” ಬಾ ಪ್ರಸಾದ ತಗೋ.

ಇಲ್ಲಿ ಗರ್ಭಗುಡಿ ಕೆಳಗೆ ಬಾವಿಯಿದೆ. ಅದರ ಮೇಲೆ ದೇವಸ್ಥಾನ ಕಟ್ಟಿಸಿದೆವು. ಪ್ರಶ್ನೆ ಇಟ್ಟಾಗ ಹಾಗೇ ತೋರಿಬಂದಿತ್ತು. ಈಗ ಇಲ್ಲಿ ಜಾತ್ರೆ. ನೋಡು ಎಷ್ಟು ಜನ ಬರುತ್ತಾರೆ. ಕಾರಣೀಕದ ಜಾಗವಿದು.”

ಪ್ರಸಾದ ಸ್ವೀಕರಿಸಿದೆ. ಜೊತೆಯಲ್ಲೇ ಹೊರಬರುವಾಗ ಮುಂದುವರೆಸಿದರು.

” ಇವರ ನಂತರ ನಾನು ಇಲ್ಲಿ ಬಂದು ಕ್ಷಮೆ ಕೇಳಿ ದೈವಸ್ಥಾನ ಕಟ್ಟಲು ನಿಶ್ಚಯಿಸಿದೆ. ನಿಶ್ಚಯ ಮಾತ್ರ ನನ್ನದು. ಮುಂದೆ ಎಲ್ಲವೂ  ಸಾಂಗವಾಗಿ ನಡೆಯಿತು.”

” ನಿನ್ನ ಸಿರಿ ಪಾತ್ರ ಬಹಳ ತೃಪ್ತಿ ಕೊಟ್ಟಿತು ಮಗಳೇ. ಇಂದಿನ ದಿನ ನೀನು ಈ ಸನ್ನಿಧಿಯಲ್ಲಿ ಮಾಡುವುದು ಅವರ ಇಚ್ಛೆ. ನಾವು ನೆಪ.

ಇನ್ನಷ್ಟು ಪ್ರಸ್ತುತಿ ಆಗಬೇಕು ಮಗಾ. ನಮ್ಮ ಮಣ್ಣಿನ ಸಂಸ್ಕೃತಿ, ತುಳುಜನರ ಬದುಕು ಎಲ್ಲ ಕಡೆ ಹರಡಬೇಕು. ನೀನು ರಾಯಭಾರಿ. ನಿನಗದು ತಿಳಿದಿರಲಿ. ಈ ಜವಾಬ್ದಾರಿ ಅವರು ನಿನಗೆ ವಹಿಸಿದ್ದಾರೆ. ಮುಂದೆಯೂ ಬೇರೆ ಕಡೆಯೆಲ್ಲಾ ಮಾಡುವಂತಾಗಲಿ. ನನಗೆ ಹೆಚ್ಚು ಗೊತ್ತಿಲ್ಲ. ನನ್ನ ಸಹಾಯ ಏನಾದರೂ ಬೇಕಾದರೆ ಖಂಡಿತ ಹೇಳು.”

ಸಾಕ್ಷಾತ್ ತಾಯಿಯಾಗಿ ಕಂಡ ಅವರ ಪಾದ ಮುಟ್ಟಿ ಆಶೀರ್ವಾದ ಬೇಡಿದೆ.

ಇದು ನನ್ನ ಸಿರಿ  ಏಕವ್ಯಕ್ತಿ ಪ್ರಸ್ತುತಿಗೊಳ್ಳುತ್ತಿದ್ದ ಸಮಯದಲ್ಲಿ ಒಂದು ಕಡೆ ನಡೆದ ಪ್ರಸಂಗ. ಅದು ಉಡುಪಿ ಜಿಲ್ಲೆಯ ಉರ್ಕಿದೊಟ್ಟು ಎಂಬ ಊರು.

ಅದಾಗಲೇ ಸಿರಿ ಒಂದಷ್ಟು ಪ್ರಸ್ತುತಿ ಆಗಿತ್ತು. ಆಗಲೇ ತಂಡದ ಗಾಯಕಿ ಶಬರಿ ಬಿಡುವಿನ ಸಮಯದಲ್ಲಿ

” “ಮೇಡಂ,ನೀವು ಉರ್ಕಿದೊಟ್ಟು ಗೆ ಹೋಗಿದ್ದೀರಾ..ಸಿರಿಯ ಮೂಲ ಜಾಗವದು “

ಅದಾಗಲೇ ನಾನು ಅವ್ಯಕ್ತ ಸಿರಿಯ ಪ್ರಭಾವಳಿಯಲ್ಲಿ ಸಿಕ್ಕಿಕೊಂಡಿದ್ದೆ. ಸಿರಿ ಎಂಬ ಪದ ಎಲ್ಲಿ ಕೇಳಿದರೂ ಥಟ್ಟೆಂದು ಮೈಮನ ಬೇರೆಯದೇ ಆದ ಸಂವೇದನೆಗೆ ಸಿಲುಕಿದಂತೆ.

” ಎಲ್ಲಿಯದು”

“ಕಾರ್ಕಳದ ಹತ್ತಿರ”

ಮನಸ್ಸು ಒಮ್ಮೆ ಹೋಗಬೇಕು. ಕಾಣಬೇಕು ಆ ಕ್ಷೇತ್ರ.‌

ಆತ್ಮೀಯರಾದ ಗೀತ ಕರೆಮಾಡಿದ್ದರು.

”  ಸಿರಿಜಾತ್ರೆ ಉರ್ಕಿದೊಟ್ಟಿವಿನಲ್ಲಿ ಇದೆ. ನಿಮ್ಮ ಪ್ರಸ್ತುತಿ ಮಾಡುವಿರಾ. ಅವರಿಗೆ ಸಂಪರ್ಕಿಸಲು ಹೇಳಲೇ”

“ಹ್ಹೂಂ”

ನಾವು ಹೋದೆವು. ಕಾಡಿನ ನಡುವೆ..ನಡೆದಷ್ಟೂ ಮುಗಿಯದ, ದಣಿಯದ ತೊಟ್ಟಿಲಲ್ಲಿ ತೂಗಿದಂತಹಾ ತನ್ಮಯತೆಯ ಪ್ರಯಾಣ.

 ದೇವಾಲಯದಂತಿರುವ ಸಿರಿದೈವಗಳ ಸ್ಥಾನ. ದೊಡ್ಡದಾದ ಕೆರೆ.

ರಾತ್ರೆ ಸಾಲು ದೀಪಗಳ ದಿವ್ಯತೆ,

ಗಂಟೆ,

ಜಾಗಟೆ,

ವಾದ್ಯ,

ಪೂಜೆ.

“ಸಿರಿ” ನಾಟಕ ಪ್ರಕೃತಿಯ, ಬನದ ಎದೆ ಮಧ್ಯೆ, ಶ್ರೀರಂಗವಾಯಿತು. ನನ್ನೊಳಗೆ ಸಿರಿ ಹರಿದಿದ್ದಳು.

ಮುಗಿದಾಗ ಅವರು, ಆ ತಾಯಿ ನನ್ನ ಬಳಿ ಬಂದು ದೇವಾಲಯದ ಒಳಗೆ ಕರೆದೊಯ್ದು ಕಥೆ ಬಿಡಿಸಿದರು. ಅದು ಅನುಭವ ಕಥನ. ನಂಬಿಕೆ,ಆರಾಧನೆಗೆ ಸಂಬಂಧಿಸಿದ ಅನುಭವದ ಮುತ್ತುಮಾಲೆ.

ಹೌದು, ಅದು ತುಳು ಮಣ್ಣಿನ ಬಸಿರ ಪರಿಮಳ. ಬೇರೆಯದೇ ಆದ ಸಿರಿ ಪ್ರಪಂಚ.  ಅಲ್ಲಿ ನನ್ನ ದಾಖಲಾತಿಯಾದದ್ದು ಯಾವಾಗ..ಹೇಗೆ.

ಮುಂದೆ ಅಲ್ಲಿ ವಿಹರಿಸಿದ ನೆನಪು,ಕನಸುಗಳು..

ವಿಸ್ಮೃತಿಗೆ ಸಂದ ನೆನಪಿನ ಹರಳುಗಳನ್ನು ಬಿಚ್ಚಿ  ಅಘ್ರಾಣಿಸಬೇಕಾಗಿದೆ.

ಬಹಳ ಹಿಂದೆ, ಆಗ ನಾನು ಬಹಳ ಸಣ್ಣವಳು. ನಮ್ಮ  ಮನೆಯ ಹಿಂಬದಿಯಿಂದ ಅನತಿ ದೂರ ಸಾಗಿದಾಗ ಅಲ್ಲೊಂದು ಮನೆ. ಆ ಮನೆ ತಲುಪುವ ಮೊದಲೇ ಗದ್ದೆಗಳು ಸಿಗುತ್ತವೆ.

ಮಳೆಗಾಲ ಆರಂಭವಾದಾಗ ಮಗ್ಗದ ಸೀರೆ, ಒಳಲಂಗದ ಸಮೇತ ಮೊಣಕಾಲಿನವರೆಗೆ ಒಂದು ಬದಿ ಎತ್ತಿ ಸಿಕ್ಕಿಸಿಕೊಂಡು, ಸರಿಯಾಗಿ ಬಾಚದಂತಿರುವ ತಲೆ, ದೊಡ್ಡ ಕುಂಕುಮ ತನ್ನ ಕಪ್ಪು ಹಣೆಗೆ ಹಚ್ಚಿದ ಅವರು ಬರುತ್ತಿದ್ದರು. ಕೈಯಲ್ಲೊಂದು ಕತ್ತಿ. ಅದು ಗುಡ್ಡೆಯಲ್ಲಿ ಗಿಡಗಳ ಸೊಪ್ಪುಸವರುವ ಕತ್ತಿ. ಅಂಗಳದಲ್ಲಿ ನಿಂತು ಅಜ್ಜಿಯನ್ನು ಕೂಗುತ್ತಿದ್ದರು. ಸಣ್ಣನೆ ಧ್ವನಿಯಲ್ಲಿ, ನಡುನಡುವೆ ಒಂದಿಷ್ಟು ಧ್ವನಿ ಏರಿಸಿ ಒಂದಷ್ಟು ಹೊತ್ತು ಮಾತುಕಥೆ. ಮುಖ್ಯವಾಗಿ ನೇಜಿ ನೆಡಲು ಒಂದೆರಡು ದಿನವಾದರೂ ಬನ್ನಿ ಎಂಬ ಬಿನ್ನಹ. ಜೊತೆಗೆ ಊರ ರಂಗಿನ ಸುದ್ದಿಗಳು. ಪ್ರಾಮುಖ್ಯತೆಗೆ ಅನುಸಾರವಾಗಿ ಸ್ವರದ ಬದಲಾವಣೆ. ಅವರ ಗದ್ದೆಗಳು ನಮ್ಮ ಮನೆಗೆ ಬಹಳ ಸಮೀಪವಾದ್ದರಿಂದ ಬಾಲ್ಯ ಸಹಜ ಕುತೂಹಲ, ಆಸಕ್ತಿಯಿಂದ ಅಲ್ಲಿಗೆ ಓಡುತ್ತಿದ್ದೆ. ಗದ್ದೆಯ ಅಂಚಿನಲ್ಲಿ ಕೂತು ಹೆಂಗಸರು ಹಸಿರನ್ನು ಭೂಮಿತಾಯಿಗೆ ಒಡಲಿಗೆ ತುಂಬುವುದನ್ನು ನೋಡುವ ಖುಷಿ. ಅಷ್ಟು ಮಾತ್ರವಲ್ಲ, ಅವರವರಲ್ಲೇ ಗುಸುಗುಸು ಆರಂಭವಾಗಿ ಗಾಯನ ಆರಂಭಗೊಳ್ಳುತ್ತಿತ್ತು. ಒಬ್ಬರು ಅಲಾಪದೊಂದಿಗೆ ಆರಂಭಿಸಿ ಧ್ವನಿಯೇರಿಸಿ ಒಂದು ಸಾಲು ಹಾಡಿದಾಗ  ಉಳಿದವರು ಅದನ್ನು ಪುನರಾವರ್ತಿಸುತ್ತಿದ್ದರು.

ಅದು ನಮ್ಮ ತುಳುನಾಡಿನ ಮೌಖಿಕ ಕಾವ್ಯ ‘ ಪಾಡ್ದನ’ ಅದಕ್ಕೆ ಅದರದೇ ಆದ ವೈಶಿಷ್ಟ್ಯ. ಅದರಲ್ಲಿದ್ದ ಸಾಹಿತ್ಯದ ಬಗ್ಗೆ ಆಗ‌ ಅಷ್ಟು ಗಮನ ಹೋಗಿರಲಿಲ್ಲ. ಆದರೆ ಹಾಡುವ ಕ್ರಮ ಆ “ಧುನ್” ಎಷ್ಟು ಆರ್ದವಾಗಿ ಹೃದಯ ತೋಯಿಸುತ್ತಿತ್ತು. ಹೆಚ್ಚಾಗಿ ಪರಿಶಿಷ್ಟ ವರ್ಗದವರ ಬಾಯಲ್ಲಿ ಸುಲಲಿತವಾಗಿ ಕುಣಿಯುವ ಪಾಡ್ದನ ಗದ್ದೆಗಳಲ್ಲಿ ಎಲ್ಲ ಹೆಂಗಳೆಯರ ಎದೆ ಹಾಲು ಕುಡಿದು ನಗುವ, ಮೃದು ನವಿರು ಬೊಚ್ಚು ಬಾಯಿ ಕೂಸು.

ಧಾರ್ಮಿಕ ಚೌಕಟ್ಟು ಹೊಂದಿರುವ ಹೆಚ್ಚಿನ ಪಾಡ್ದನಗಳು ತುಳುವರ ಬದುಕು,ಸಂಬಂಧಗಳನ್ನು ಪ್ರತಿನಿಧಿಸುತ್ತದೆ.

 ನಂತರ ನಾನು ಏಳನೇ ತರಗತಿಗೆ ಬಂದಾಗ ನಮ್ಮ ಮನೆ ಬದಲಾಯಿಸಿ ಅನತಿ ದೂರದಲ್ಲಿ ಈ ಪರಿಶಿಷ್ಟ ವರ್ಗಕ್ಕೆ ಸೇರಿದ ಜನರ ಮೂರು ಗುಡಿಸಲುಗಳಿದ್ದವು. ಕತ್ತಲಿನ ಕಪ್ಪಿನಲಿ ನಶೆಯೇರಿಸಿಕೊಂಡು ಬರುವ ಮನೆಯ ಗಂಡಸರು ರಸ್ತೆಯ ತುದಿಯಿಂದಲೇ ಗಟ್ಟಿಧ್ವನಿಯಲ್ಲಿ ಪಾಡ್ದನದಂತಹ ಗಾಯನ ಸ್ವರ ಎಳೆದೆಳೆದು ಹಾಡುತ್ತ  ತನ್ನ ಗುಡಿಸಲಿನ ಬಳಿ ಬರುವಾಗ ಅದು ಉಚ್ಚಸ್ತರದಲ್ಲಿರುತ್ತಿತ್ತು. ನಂತರ ಅದೆಷ್ಟೋ ಹೊತ್ತಿನ ನಂತರ ನಿಧಾನವಾಗಿ ಕೆಳಸ್ತರಕ್ಕೆ ಬಂದು ಅಲ್ಲೇ ಆವಿಯಾದಂತೆ. ಒಂದು ದಿನ ಕೇಳಿಸದಿದ್ದರೂ ನಮ್ಮ ಮನೆಯಲ್ಲಿ

” ಏನಿವತ್ತು ಅಂಗರನ ಬಾಯಿ ಕೇಳುವುದಿಲ್ಲ. ಹುಷಾರಿಲ್ವಾ”

 ಎನ್ನುವುದಿತ್ತು.

ನಮ್ಮ ಊರಿನ ಗ್ರಾಮ ದೇವರು ವೀರಭದ್ರ. ಇಲ್ಲಿ ದೇವರ ಜೊತೆಜೊತೆಗೆ ದೈವಗಳ ಆರಾಧನೆ. ದೇವಾಲಯದ ಹೊರಪ್ರಾಂಗಣದಲ್ಲಿ ನಿಂತ ಹಲವಾರು ಹೆಸರಿನ ದೈವಗಳು, ಪ್ರತಿಯೊಂದು ದೈವಕ್ಕೂ ಅದರದೇ ಆದ ಹಿನ್ನೆಲೆ, ಚರಿತ್ರೆಯಿದೆ. ಊರ ಜಾತ್ರೆ ಆರಂಭಗೊಳ್ಳುವುದು ಹುಣ್ಣಿಮೆಯ ದಿನ. ಪೊರೆ ಕಳಚಿಕೊಂಡು ಎಳೆನಾಗರನಂತೆ ಹೊರಗಿಣುಕುವ  ಹಿಂಗಾರ ಹೂವನ್ನು ಅವಚಿ ಹಿಡಿದುಕೊಂಡು ಮೈಗೆ ಬಡಿತದೊಂದಿಗೆ ಪಾಡ್ದನ ಎಳೆ ಬಿಚ್ಚಿಕೊಳ್ಳುತ್ತದೆ.

ನನಗೆ ಆ ಪಾಡ್ದನಗಳಲ್ಲಿ ಬರುವ ಕಥೆಯ ಬಗ್ಗೆ ತೀರದ ಆಸೆ. ರಾಗದೊಳಗೆ ನೇಯ್ದ ಕಥೆಗೆ ಕಿವಿಯಾಗುತ್ತಿದ್ದೆ. ಕಥೆಗಳು ಹಾಡಿನ ಸಾಲುಗಳಲ್ಲಿ ಅರಳುತ್ತಿತ್ತು. ಸಮಯದ ಮಿತಿಗೆ ಅನುಗುಣವಾಗಿ ಪಾಡ್ದನ ರಂಗೇರಿಸಿಕೊಳ್ಳುತ್ತಿತ್ತು.

ನಮ್ಮ ಕರಾವಳಿಯಲ್ಲಿ ಯಕ್ಷಗಾನ ಹಾಗೂ ಕೋಲಗಳಿಗೆ ಬರವಿಲ್ಲ. ಕೋಲ ನಡೆಯುವಾಗೆಲ್ಲ ಭೂತ ಕಟ್ಟುವವರ ಮನೆಯ ಮಹಿಳೆ ತೆಂಬರೆ ಬಡಿಯುತ್ತ ಪಾಡ್ದನ ಹಾಡುತ್ತಾರೆ. ಆ ಪಾಡ್ದನ ಕೇಳು ಕೇಳುತ್ತ ಭೂತ ಕಟ್ಟಿದವರು ಆವೇಶಗೊಂಡಂತೆ ಕುಣಿಯುತ್ತಾರೆ ನಂತರ ಪಾಡ್ದನ ಅವರೂ ಹಾಡುವುದುಂಟು. ಆಗೆಲ್ಲ ಅವರ ಸಮೀಪ ಕೂತು, ನಿಂತು ಬಲು ಆಸಕ್ತಿಯಿಂದ ಆಲಿಸುವುದು.   ತುಳು ಭಾಷೆಯ  ಮೌಖಿಕ ಕಾವ್ಯ ಪರಂಪರೆಗೆ ಅದ್ಬುತ ಉದಾಹರಣೆ ಈ ಪಾಡ್ದನಗಳು. ಹಾಡುವ ಧಾಟಿ,ಶೈಲಿ ವೈವಿಧ್ಯಪೂರ್ಣ.

ಕರಾವಳಿ ಮಣ್ಣು ,ತುಳು ಮಣ್ಣಿಗೆ ತನ್ನದೇ ಆದ ಸಿರಿವಂತ ಮೌಖಿಕ ಪರಂಪರೆ. ಇಲ್ಲಿ ತುಳುವರ ಬದುಕು, ಸಂಪ್ರದಾಯ, ನಂಬಿಕೆ, ಮೌಲ್ಯ, ಸಂಸ್ಕೃತಿ, ಸಂಸ್ಕಾರ ಒಟ್ಟಾರೆ ಸಮಾಜದ ಮರುಸೃಷ್ಟಿ ಈ ಪಾಡ್ದನಗಳಲ್ಲಿವೆ

 ಇಲ್ಲಿರುವ ಮಾತೃರೂಪೀ ಸಂಸ್ಕೃತಿ, ಕುಟುಂಬ ರಚನೆ ಹೆಣ್ಣಿನ ಅನನ್ಯತೆಗೆ ದೊಡ್ಡ ಕೊಡುಗೆ ನೀಡಿದೆ. ಅವೆಲ್ಲವೂ ಈ ಪಾಡ್ದನಗಳಲ್ಲಿ ಹರಡಿಕೊಂಡಿದೆ. ಹೆಚ್ಚಿನ ಪಾಡ್ದನಗಳು ದುರಂತ ವಸ್ತುವನ್ನು ಹೊಂದಿರುತ್ತದೆ. ಎಲ್ಲವೂ ತುಳುವರಿಗೆ ಬಲು ಆಪ್ತ. ಇವೆಲ್ಲದರಿಂದ ” ಸಿರಿ” ಎಂಬ ಪದವೇ ನನ್ನೊಳಗೊಂದು ಆಕರ್ಷಣೆಯ ಮೂಲ ಬೀಜಮಂತ್ರವಾಗಿ ಅರಿವಿನ ಕ್ಷೇತ್ರ ವಿಸ್ತರಿಸುವ ಮುನ್ನವೇ ಬಿತ್ತನೆಯಾಗಿತ್ತು.

“ಸಿರಿ” ನಾಟಕದ ಮೊದಲ ಹೆಜ್ಜೆಗಳನ್ನು, ನನ್ನ ಪುಟ್ಟ ಪಾದಗಳು ಪುಟು ಪುಟಕ್ ಎಂದು ಇಟ್ಟಿದ್ದವು.

******************************

ಪೂರ್ಣಿಮಾ ಸುರೇಶ್

ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ

Leave a Reply

Back To Top