ಚೇರ್ಮನ್ ಸೋಮಯ್ಯ

ಕಥೆ

ಚೇರ್ಮನ್ ಸೋಮಯ್ಯ

ಗಣಪತಿ ಹೆಗಡೆ

Panchayat Elections: AP CEO directs collectors to Print the ballot papers  by December 15

ಸೋಮಯ್ಯ ಶುದ್ಧ ರಾಜಕಾರಣಿ. ಅವನ ಜೀವನದಲ್ಲೇ ಬೆರಕೆ ಇಲ್ಲ. ಇದನ್ನು ಯಾರು ಹೇಳುತ್ತಾರೆ ಅಂತಲೋ ನೀವು ಕೇಳುವದು? ಯಾರೋ, ಯಾಕೆ ಹೇಳಬೇಕು. ಸ್ವತಃ ಖಾಸಾ ಸೋಮಯ್ಯ ಹೇಳಿದರೆ ಸಾಕಲ್ಲವೇ. ಅವನದು   ಏನು ಹೇಳುವದಿದ್ದರೂ ನೇರಾನೇರ. ಸುಳ್ಳು ಹೇಳುವಾಗಲೂ ಯಾರದೇ ಮುಲಾಜು ಇರುವದಿಲ್ಲ. ಅವನನ್ನೇ ಕೇಳೋಣ ಬೇಕಾದರೆ.  ರಾಜಕಾರಣಿಗಳ ಶಬ್ದಕೋಶದಲ್ಲಿ ಸುಳ್ಳು ಎನ್ನುವ ಶಬ್ದವೇ ಇರುವದಿಲ್ಲ ಅಂತ ಹೇಳುತ್ತಾನೆ. ಅವನ ಮಾತನ್ನು ಸುಳ್ಳು ಅಂತ ಹೇಳುವ ಧೈರ್ಯ ಯಾರಿಗೂ ಇಲ್ಲ ಎನ್ನುವ ವಿಶ್ವಾಸ ಅವನದು. ಜನರಿಗೆ, ಅವನು ಸುಳ್ಳು ಹೇಳುತ್ತಾನೆ ಅಂತ ನಂಬಿಸುವ ಅವಶ್ಯಕತೆ ಏನಿದೆ? ಎಲ್ಲರಿಗೂ ಗೊತ್ತಿರುವ ಸತ್ಯವನ್ನು ಬಿತ್ತರಿಸುವ ಅವಶ್ಯಕತೆ ಏನು?

ಯಾರು ಏನೇ ಹೇಳಲಿ ಸೋಮಯ್ಯ ಪಕ್ಷಾತೀತ ರಾಜಕಾರಣಿ. ಅವನಿಗೆ ಪಕ್ಷರಾಜಕಾರಣದಲ್ಲಿ ನಂಬಿಕೆ ಇಲ್ಲ. ಯಾವುದೋ ಪಕ್ಷದವರು ಸೇರಿಸಿಕೊಂಡರೆ ನಂಬಿಕೆ ಬರುತ್ತಿತ್ತೋ ಏನೋ. ಪಾಪ ಇವನದೇನು ತಪ್ಪು. ಇವನ ಮೇಲೆ ವಿಶ್ವಾಸ ಇಡುವ ಅರ್ಹತೆ ಯಾವ ಪಕ್ಷದವರಿಗಿದೆ? ಮತ್ತೊಂದು, ಇವನಿಂದ ಆಗುವ ಲಾಭವಾದರೂ ಏನು?

ಆದರೂ ಸ್ಥಳೀಯ ಚುನಾವಣೆಗಳಲ್ಲಿ ಇವನನ್ನು ಅಷ್ಟಿಟ್ಟು ಮಾತಾಡಿಸುವ ಜನರುಂಟು. ತಾನು ಪಂಚಾಯತ ಚುನಾವಣೆಗಳಲ್ಲಿ ಮಾತ್ರ ಸ್ಪರ್ಧಿಸುತ್ತೇನೆ ಅಂತ ಚುನಾವಣೆ ಘೋಷಣೆಯಾಗುವ ಪೂರ್ವದಲ್ಲಿಯೇ ಇವನ ವಾರ್ಡೇ ಯಾಕೆ, ಇಡೀ ಊರಿನಲ್ಲಿಯೇ ಡಂಗುರ ಹೊಡೆಯುತ್ತಾನೆ. ಇದಕ್ಕೆ ಕಾರಣ ಪಂಚಾಯತ ಚುನಾವಣೆಯಲ್ಲಿ ಪಕ್ಷದ ಗುರುತು ಇರಬಾರದು ಎನ್ನುವ ನಿಬಂಧನೆ ಇದೆಯಂತೆ. ಪಕ್ಷಗಳ ಉಮೇದುವಾರರೇ ಅಂತ ಬೇರೆ ಬೇರೆ ಗುರುತುಗಳ ಮೇಲೆ ಸ್ಪರ್ಧಿಸಿದರೂ ಊರಿನವರಿಗೆ ಮಂಕು ಬೂದಿ ಎರಚಲು ಈ ನಿಯಮ ಅಂತ ಅವನದು ಸಾರ್ವತ್ರಿಕ ಹೇಳಿಕೆ.

ಪಂಚಾಯತ ಚುನಾವಣೆ ಘೋಷಣೆಯಾಗೇ ಬಿಟ್ಟಿತು. ಸಾಮಾನ್ಯವಾಗಿ ಮುಹೂರ್ತ ನೋಡಿ ಉಮೇದುವಾರಿಕೆಗೆ ಅರ್ಜಿ ಗುಜರಾಯಿಸುವದು ಕ್ರಮ. ಸೋಮಯ್ಯನದು ಹಾಗಲ್ಲ. ಅರ್ಜಿ ಸ್ವೀಕರಿಸುವ ಮೊದಲ ದಿನ ಮೊದಲ ನಾಮಪತ್ರ ಸೋಮಯ್ಯನದು. ಅನುಮೋದನೆಗೆ ಇಬ್ಬರನ್ನು ತಯಾರಿಮಾಡುವದು ಸ್ಥಳೀಯ ರಾಜಕಾರಣಿ ಸೋಮಣ್ಣನಿಗೇನು ಕಷ್ಟ. ಈಗಾಗಲೇ ಊರಿನಲ್ಲೆಲ್ಲಾ ಡಂಗರು ಹೊಡೆದಾಗಿದೆ, ‘ವಾರ್ಡಿನವರ ಒತ್ತಾಯಕ್ಕೆ ಮಣಿದು ಚುನಾವಣೆಗೆ ನಿಂತಿದ್ದಾನೆ ‘ ಎಂದು. ಇಷ್ಟು ಒತ್ತಾಯಮಾಡುವವರಿದ್ದಾಗ ಜಜುಬಿ ಅನುಮೋದನೆಗೆ ಏನು ತೊಂದರೆ.

ಸೋಮಯ್ಯನ ಒಳಮನಸ್ಸಿನೊಳಗೊಂದು ಆಸೆಯಿತ್ತು. ಯಾರಾದರೂ ತನ್ನನ್ನು ಕರೆದು ಉಮೇದುವಾರಿಕೆ ಹಿಂಪಡೆಯಲು ಒತ್ತಾಯಿಸ ಬಹುದೆಂದು. ಎಲ್ಲರೂ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದು ಉಮೇದುವಾರರಾಗುವದಿಲ್ಲ. ಕೆಲವೊಮ್ಮೆ ಪಕ್ಷದ ಒತ್ತಾಯಕ್ಕೆ ಮಣಿದು ನಿಲ್ಲುವುದೂ ಉಂಟು. ಬೇರೆ ಯಾರನ್ನೋ ಗೆಲ್ಲಿಸಲೆಂದೋ ಅಥವಾ ಸೋಲಿಸಲೋ ನಿಲ್ಲುವ ಕ್ರಮವೂ ಉಂಟು. ಒಂದೇ ಜಾತಿಯ ಉಮೇದುವಾರರನ್ನು ನಿಲ್ಲಿಸುವದು ಇದೇ ಕಾರಣಕ್ಕೆ. ಎಷ್ಟೋಸಲ ಹಿಂಪಡೆಯಲು ದುಡ್ಡು ಕೊಡುತ್ತಾರೆ ಎನ್ನುವ ಕಾರಣಕ್ಕೂ ಅರ್ಜಿ ಗುಜರಾಯಿಸುವದುಂಟು.

ಸೋಮಯ್ಯನಿಗೆ ಇವೆಲ್ಲಾ ಗೊತ್ತಿದ್ದದ್ದೆ. ಅವನಿಗೆ ತಾನು ಗೆಲ್ಲುವದಿಲ್ಲ ಎನ್ನವದೂ ಗೊತ್ತು. ಅವನ ಜಾತಿಯ ಜನರು ಈ ವಾರ್ಡಿನಲ್ಲಿ ಹೆಚ್ಚು ಜನರಿರುವದರಿಂದ ಮೂರೂ ಪಕ್ಷಗಳ ಅಭ್ಯರ್ಥಿಗಳೂ ಸೋಮಯ್ಯನ ಜಾತಿಯವರೆ. ಆದ್ದರಿಂದ ಯಾರಾದರೂ ಬಂದು ಹಣಕೊಟ್ಟು, ಅರ್ಜಿ ಹಿಂಪಡೆಯಲು ಒತ್ತಾಯಿಸಬಹುದೆಂಬ ನಿರೀಕ್ಷೆ. ಆರಿಸಿ ಬಂದಲ್ಲಿ ಖರ್ಚು ಮಾಡಿದ ಹಣಕ್ಕೆ ಒಂದಕ್ಕೆ ಹತ್ತು ಸಂಪಾದಿಸುತ್ತಾರೆ ಅಂತ ಗೊತ್ತಾಗದಷ್ಟು ಹೆಡ್ಡ ಅಲ್ಲ ಸೋಮಯ್ಯ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೇ ಮತ ಹಾಕುವದೊಂದು ಕ್ರಮ. ಇಲ್ಲಿ ಹಾಗಲ್ಲ. ಮೂವರೂ ಹಣ ಕೊಟ್ಟು ಹಿಂಪಡೆಯಲು ಆಗ್ರಹಿಸಬಹುದೆಂಬ ಆಸೆ.  ಆದರೆ ಹಾಗಾಗಲೇ ಇಲ್ಲ. ಪ್ರತಿಯೊಂದು ಪಕ್ಷದವರಿಗೂ ಅವರವರೇ ಆರಿಸಿ ಬರುತ್ತೇವೆ ಎನ್ನುವ ವಿಶ್ವಾಸ ಇರುವದರಿಂದ ಸೋಮಯ್ಯನ ಕಡೆ ಲಕ್ಷ್ಯ ವಹಿಸಲಿಲ್ಲ. ಹಿಂಪಡೆಯುವ ದಿನದ ಕೊನೆಯ ಕ್ಷಣದ ತನಕವೂ ಆಫೀಸಿನ ಹತ್ತಿರವೇ ಸುತ್ತುತ್ತಾ ಇದ್ದ ಸೋಮಯ್ಯ.

ಪಾಪ ಸೋಮಯ್ಯನನ್ನು ಮಾತಾಡಿಸಿದವರೇ ಇಲ್ಲ. ಅರ್ಜಿಯನ್ನು ಹಿಂಪಡೆಯುವ ಸಮಯ ಮುಗಿಯಿತು. ಸುಮ್ಮನೆ ಹಿಂಪಡೆಯುವ ಮನಸ್ಸು ಮಾಡಲಿಲ್ಲ ಸೋಮಯ್ಯ. ಅಡಿಗೆ ಬಿದ್ದರೂ ಮೀಸೆ ಮೇಲೆ. ಮೂರೂ ಪಕ್ಷದವರು ಹಿಂಪಡೆಯಲು ಒತ್ತಾಯ ಮಾಡಿದರು. ಆದರೆ ನಾನು ಶುದ್ಧ ರಾಜಕಾರಣಿ. ಆದ್ದರಿಂದ ಯಾವುದೇ ಆಮಿಶಕ್ಕೆ ಮನಸು ಮಾಡಲಿಲ್ಲ, ಅಂತ ಹೇಳುತ್ತಾ ತಿರುಗಿದ , ಊರಿನಲ್ಲಿ.

ಆದರೆ ತಾನು ಆರಿಸಿ ಬರುವದಿಲ್ಲ ಅಂತ ನೂರಕ್ಕೆ ನೂರು ವಿಶ್ವಾಸವಿತ್ತು ಸೋಮಯ್ಯನಿಗೆ. ಅರ್ಜಿ ಹಿಂತೆಗೆಯದಿದ್ದರೂ ಪ್ರಚಾರ ಮಾಡಬೇಡ ಅಂತ ದುಡ್ಡಿನ ಆಮಿಶ ತೋರುವದಿರುತ್ತದೆ. ಈ ಕಾರಣಕ್ಕಾಗಿಯಾದರೂ ಯಾರಾದರೂ ತನ್ನಲ್ಲಿ ಬರಬಹುದೆನ್ನುವ ದೂರದ ಆಸೆಯೂ ಚುನಾವಣೆ ದಿನ ಹತ್ತಿರ ಬಂದ ಹಾಗೆ ಕಮರಿತು.

ಇಷ್ಟರಲ್ಲಿ ಒಂದು ಅನಿರೀಕ್ಷಿತ ಘಟನೆ ನಡೆಯಿತು. ಆಡಳಿತ ಪಕ್ಷದ ಉಮೇದುವಾರಿಕೆಯಲ್ಲಿ ಟಿಕೇಟು ಸಿಗದೇ  ಇದ್ದವನು ಅವರ ಪಕ್ಷದ ಉಮೇದುವಾರನನ್ನು ಸೋಲಿಸುವದಾಗಿ ಪಣ ತೊಟ್ಟಿದ್ದ. ಉಳಿದ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವದಕ್ಕಿಂತ ಸೋಮಯ್ಯನನ್ನು ಬೆಂಬಲಿಸುವದೇ ಒಳ್ಳೆಯದು ಅಂತ ತೀರ್ಮಾನಿಸಿದ ಅವನು. ಪಕ್ಷದ ನಿಷ್ಟಾವಂತ ಕಾರ್ಯಕರ್ತನಾದರೂ ಅಭ್ಯರ್ಥಿಯನ್ನು ವಿರೋಧಿಸುವವ ಅವನು.  ಇದರಿಂದ ಪೂರ್ತಿ ಪಕ್ಷವಿರೋಧಿಯಾದ ಹಾಗಾಗಲಿಲ್ಲ. ಇದು ಪಂಚಾಯತ ಚುನಾವಣೆ ಆದುದರಿಂದ ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿದರೆ ಪಕ್ಷದವರಿಂದ ಹೇಳಿಕೊಳ್ಳುವಷ್ಟು ವಿರೋಧ ಬರಲಿಕ್ಕಿಲ್ಲ ಅಂತ ತಿಳುವಳಿಕೆ. ಸೋಮಯ್ಯನನ್ನು ಗೆಲ್ಲಿಸುವದಕ್ಕಿಂತ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸುವದೇ ಗುರಿ.

ಚುನಾವಣೆ ಮುಗಿದು ಫಲಿತಾಂಶವೂ ಬಂದಿತು. ಸೋಮಯ್ಯ ಬಹುಮತದಿಂದ ಆಯ್ಕೆಯಾದ. ಈಗಲೂ ಸೋಮಯ್ಯನದು ಒಂದೇ ಹೇಳಿಕೆ. ನಾನು ಶುದ್ಧ ರಾಜಕಾರಣಿ. ಪಕ್ಷಾತೀತ ಮೆಂಬರು. ಯಾರು ಪರಿಶುದ್ಧರೋ ಅವರನ್ನು ಅಧ್ಯಕ್ಷನನ್ನಾಗಿ ಮಾಡುವ ಆಸೆ. ಅಂತ.

ಹೊಂದಾಣಿಕೆ ರಾಜಕಾರಣದಲ್ಲಿ ಸೋಮಯ್ಯನೇ ಅಧ್ಯಕ್ಷನಾಗುವ ಸಂಭವ ಇದೆಯಂತೆ. ತನ್ನನ್ನು  ಬೇಡ ಬೇಡ ಅಂದರೂ ಅಧ್ಯಕ್ಷನನ್ನಾಗಿ ಮಾಡುತ್ತಾರೆ ಅಂತ ಸೋಮಯ್ಯನ ಹೇಳಿಕೆ.

ಎರಡು ವರ್ಷದ ಮೇಲೆ ಅವನನ್ನು ನೋಡಲು ಹೋಗಿದ್ದೆ. ಅವನ ಮನೆಯ ಗುರುತು ನನಗೆ ಸಿಗಲಿಲ್ಲ. ಸೋಮಯ್ಯ ಅರಮನೆಯಲ್ಲಿದ್ದಾನೆ. ಇದೇನು ಸೋಮಯ್ಯ, ಸಾದಾ ಜೀವನವೇ ಇಷ್ಟ ಅಂತ ಹೇಳುತ್ತಿದ್ದೆ ಎಂದು ಕೇಳಿದ್ದಕ್ಕೆ ‘ಒಮ್ಮೆ ಉನ್ನತಾಧಿಕಾರಿ ಬಂದಾಗ ಇವರ ಮನೆ ಸಣ್ಣದು ಅಂತ ಹಾಗೇ ಹೋದನಂತೆ. ತಾನು ಅತಿಥಿ ಸತ್ಕಾರ ಮಾಡಲಾಗಲಿಲ್ಲವಲ್ಲ ಎನ್ನುವ ಕಾರಣಕ್ಕೆ ಬೇರೆ ಮನೆ ಮಾಡಿದೆ’ ಅಂತ ಹೇಳಿದ. ಮನೆಯ ಮುಂದಿನತನಕ ಟಾರ್ ರಸ್ತೆಯ ಬಗ್ಗೆ ಕೇಳಿದಾಗ, ‘ಪಕ್ಕದಲ್ಲಿ ಹರಿಜನ ಕೇರಿ ಇದೆ. ಮುಖ್ಯರಸ್ತೆಯಿಂದ ಎರಡು ಕಿಲೋಮೀಟರು. ಅವರ ಸಲುವಾಗಿ ಈ ರಸ್ತೆ ಮಾಡಿಸಿದ್ದೇನೆ’ ಅಂದನು. ‘ಆದರೆ ರಸ್ತೆ ಇಲ್ಲಿಗೇ ನಿಂತಿದೆಯಲ್ಲ?’ ಎಂದಿದ್ದಕ್ಕೆ ‘ಸೇಂಕ್ಶನ್ ಆದ ಹಣ ಕಡಿಮೆ ಆಯಿತು ಅಂತ ಅರ್ಧಕ್ಕೇ ನಿಂತಿದೆ. ಮುಂದಿನ ಬಜೆಟ್ಟಿನಲ್ಲಿ ಮುಂದುವರಿಸುವ ಯೋಚನೆ ಇದೆ’ ಅಂತ ಹೇಳಿದನು.

ಚೇರ್ಮನ್ ಆಗುವ ಪ್ರಯತ್ನದಲ್ಲಿ ಸೊಸೈಟಿಯಿಂದ ಪಡೆದ ಸಾಲ, ಸಾಲ ಮನ್ನಾದಲ್ಲಿ ಮನ್ನಾ ಆಗಿದೆ ಅಂತ ಊರವರು ಹೇಳಿಕೊಳ್ಳುತ್ತಿದ್ದಾರೆ. ಅಸೂಯೆಗಿರಬಹುದು. ತಾನು ನಿಸ್ಪೃಹ ಪಕ್ಷಾತೀತನಾದುದರಿಂದ ಇನ್ನೂ ಮೂರುವರ್ಷ ಚೇರ್ಮನ್ನನಾಗಿ ಮುಂದುವರಿಯುವ ಅವಕಾಶ ಇದೆಯಂತೆ. ಊರವರು ತನ್ನ ಅರ್ಹತೆಗೆ ಪಂಚಾಯತ ಕ್ಷೇತ್ರ ಸಣ್ಣದಾಯಿತೆಂದೂ ಜಿಲ್ಲಾ ಪಂಚಾಯಿತಕ್ಕೆ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆಂದೂ ಹೇಳಿದ.

ಇದ್ದೀತು. ‘ದೇವರೊಲ್ಮೆಯದಿರಲ್ ಎಳೆಗರುಂ ಎತ್ತಾಗದೇ ಲೋಕದೊಳ್.’ ಎಮ್ಮೆಲ್ಲೆಯೂ ಆಗ ಬಹುದು ಮಂತ್ರಿಯೂ ಆಗಬಹುದಲ್ಲವೇ?

ಶುಭವನ್ನು ಹಾರೈಸಿ ಮನೆಗೆ ಬಂದೆ.
*************************************


 

2 thoughts on “ಚೇರ್ಮನ್ ಸೋಮಯ್ಯ

Leave a Reply

Back To Top