ದಾರಾವಾಹಿ

ಆವರ್ತನ

ಅದ್ಯಾಯ-25

500+ Abstract Art Pictures | Download Free Images on Unsplash

ಸುಮಿತ್ರಮ್ಮನ ಭಯಭಕ್ತಿಯ ಪ್ರಾರ್ಥನೆಗೆ ಒಲಿದು ನಾಗರಹಾವು ಮಾಯವಾದುದು (ವಾಸ್ತವದಲ್ಲಿ  ಆ ಹಾವು ಅವರೆಲ್ಲರ ಕಣ್ಣು ತಪ್ಪಿಸಿ ಹೊರಗೆ ಹೊರಟು ಹೋದುದು) ವಠಾರದವರಿಗೆಲ್ಲ ವಿಸ್ಮಯವನ್ನು ತರಿಸಿತು! ಜೊತೆಗೆ ಸುಮಿತ್ರಮ್ಮನ ಮೇಲೆ ಅವರೆಲ್ಲರಲ್ಲಿ ಆವರೆಗೆ ಇದ್ದಂಥ ಅಸಹನೆ, ಅಸಡ್ಡೆಗಳೂ ತುಸು ಮರೆಯಾಗಿ ಅದರ ಬದಲಿಗೆ ಯರ್ರಾಬಿರ್ರಿ ಗೌರವಾದರಗಳು ಮೂಡಿಬಿಟ್ಟವು. ಇತ್ತ ತಮ್ಮ ಪ್ರಾರ್ಥನೆಗೆ ಬೆಲೆಕೊಟ್ಟು ನಾಗದೇವನು ಹೊರಟು ಹೋದುದು ಸುಮಿತ್ರಮ್ಮನನ್ನೂ ರೋಮಾಂಚನಗೊಳಿಸಿತು. ಅದೇ ಕಾರಣದಿಂದ ಅವರಲ್ಲಿ ನಾಗರಹಾವಿನ ಬಗ್ಗೆ ಸ್ವಲ್ಪ ಧೈರ್ಯವೂ ಹುಟ್ಟಿತು. ಆದರೆ ಲಕ್ಷ್ಮಣಯ್ಯನ ಮನಸ್ಸು ಹಾಳಾಗಿತ್ತು. ಸುಂದರಯ್ಯ ಮತ್ತು ತಮ್ಮ ಹೆಂಡತಿ ಜೋಯಿಸರಲ್ಲಿ ಪ್ರಶ್ನೆಯಿಡುವ ವಿಚಾರ ಎತ್ತಿದಾಗಿನಿಂದ ಅವರು, ಅಯ್ಯೋ, ದೇವರೇ…ಮುಂದೇನಾಗುತ್ತದೋ…? ಎಂಬ ಚಿಂತೆಯಿಂದ ಒದ್ದಾಡುತ್ತಿದ್ದವರು, ಈ ನೆರಕರೆಯವರನ್ನು ನಮ್ಮ ಆಪತ್ಕಾಲದಲ್ಲಿ ಯಾಕಾದರೂ ಕರೆಯುತ್ತೇವೆ? ನಮ್ಮಿಂದಾಗದ ಸಮಸ್ಯೆಯನ್ನು ಅವರಾದರೂ ಬಗೆಹರಿಸಿಕೊಡಲಿ ಎಂದಲ್ಲವಾ? ಆದರೆ ಅವರು ಬಂದು ಮಾಡಿದ್ದಾದರೂ ಏನು? ಆ ಫಟಿಂಗ ಸುಂದರಯ್ಯನಿಗೆ ಯಾಕಾದರೂ ಬೇಕಿತ್ತು ನಾಗದೋಷ ಮಣ್ಣು ಮಸಣ ಅಂತ ಇವಳ ತಲೆಗೆ ಹುಳ ಬಿಡುವ ಕೆಲಸ? ಛೇ! ಛೇ! ಅಧಿಕ ಪ್ರಸಂಗಿ ಮನುಷ್ಯನನ್ನು ತಂದು! ಎಂದು ಬೈದುಕೊಂಡರು. ಮತ್ತೆ ಯೋಚನೆ ಬಂತು. ಅಲ್ಲಾ, ಇನ್ನು ಇವಳಾದರೂ ಸುಮ್ಮನಿರುತ್ತಾಳಾ…? ಇವಳಿಂದ ಇನ್ನೇನೇನು ಅನುಭವಿಸಲಿಕ್ಕುಂಟೋ ಕೃಷ್ಣ, ಕೃಷ್ಣಾ…! ತಮ್ಮ ಕೈಕಾಲು ಗಟ್ಟಿ ಇರುವವರೆಗೆ ತಾವು ಯಾರ ಹಂಗಿಗೂ ಬೀಳಬಾರದು ಅಂತ ಕೇವಲ ಪೆನ್ಷನ್ ಹಣದಿಂದಲೇ ಜೀವನ ನಡೆಸುತ್ತಿರುವುದೂ ಈ ಕತ್ತೆಗೆ ತಿಳಿಯುವುದಿಲ್ಲವಾ? ಕಷ್ಟಪಟ್ಟು ಉಳಿಸಿರುವ ಇನ್ಷೂರ್ ಹಣವನ್ನೂ ಈ ತಲೆ ಕೆಟ್ಟವಳು ಇಂತಹದ್ದೇ ಹರಕೆ ಕರ್ಮಗಳಿಗೆ ಸುರಿದು ಹಾಳು ಮಾಡುತ್ತಾಳೋ ಏನೋ? ಇನ್ನು ಇವಳು ಆ ಜೋಯಿಸನ ಹತ್ತಿರ ಹೋದಳೆಂದರೆ ಅವನು ಸುಮ್ಮನಿರುತ್ತಾನಾ? ಅವನ ಅಪರ ಕರ್ಮಗಳಿಗೆ ತಾವೆಷ್ಟು ಸಾವಿರ ಬಿಚ್ಚಬೇಕೋ…?’ ಎಂದು ತೀವ್ರ ಚಿಂತೆಯಿಂದ ತಮ್ಮ ಅರೆ ಬಕ್ಕ ತಲೆಯನ್ನು ಪರಪರನೇ ಕೆರೆದುಕೊಂಡರು. ಬಳಿಕ ಸುಂದರಯ್ಯನನ್ನೂ ಹೆಂಡತಿಯನ್ನೂ ಕೆಕ್ಕರಿಸಿ ನೋಡಿ ರಪ್ಪನೆ ಒಳಗೆ ನಡೆದುಬಿಟ್ಟರು. ಗಂಡ ನೆರಕರೆಯವರೆದು ತಮ್ಮನ್ನು ಗುರಾಯಿಸಿ ಹೊರಟು ಹೋದುದು ಸುಮಿತ್ರಮ್ಮನಿಗೆ ಕೆಟ್ಟ ಅವಮಾನವೆನಿಸಿ ಅವರನ್ನು ಸರಿಯಾಗಿ ಬೈದು ಬಿಡಬೇಕೆಂದುಕೊಂಡರು. ಆದರೆ ಇಂಥ ಹೊತ್ತಲ್ಲಿ ಕೋಪಿಸಿಕೊಂಡರೆ ನಂತರ ಈ ಮನುಷ್ಯ ಜೋಯಿಸರ ಹತ್ತಿರ ಹೋಗಲು ನಯಾಪೈಸೆ ಬಿಚ್ಚಲಾರರು. ಹಾಗಾಗಿ ಕಾರ್ಯವಾಸಿ ಮುದಿ ಕತ್ತೆ ಕಾಲನ್ನೂ ಹಿಡಿಯಲೇಬೇಕು ಎಂದು ಯೋಚಿಸಿ ತಮ್ಮ ಸಿಟ್ಟನ್ನು ಹತೋಟಿಗೆ ತಂದುಕೊಂಡರು. ಆದರೆ ಸುಂದರಯ್ಯ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕಾರ್ಯಸಿದ್ಧಿಯ ಖುಷಿಯಿಂದ ನಗುತ್ತ ಎಲ್ಲರೊಡನೆ ಹೊರಟು ಹೋದರು.

ಅಂದು ರಾತ್ರಿ ಊಟವಾದ ಮೇಲೆ ಸುಮಿತ್ರಮ್ಮ ಗಂಡನ ಸಮೀಪ ಬಂದು ಕುಳಿತುಕೊಂಡು ಎಲೆಯಡಿಕೆ ನೀಡುತ್ತ ತಾವೂ ಒಂದಿಷ್ಟು ಬಾಯಿಗೆ ತುರುಕಿಸಿಕೊಂಡು ಮಾತಿಗೆ ಪೀಠಿಕೆ ಹಾಕಿದರು. ‘ಅಲ್ಲ ಮಾರಾಯ್ರೇ ನಾವು ಇಲ್ಲಿಗೆ ಬಂದು ಎಷ್ಟು ವರ್ಷವಾಯ್ತು ಹೇಳಿ…?’ ಎಂದು ಆತಂಕದಿಂದ ಕೇಳಿದರು. ಲಕ್ಷ್ಮಣಯ್ಯನಿಗೆ ಹೆಂಡತಿಯ ಉದ್ದೇಶ ಅರ್ಥವಾಯಿತು. ಆದರೂ ತೋರಿಸಿಕೊಳ್ಳದೆ, ‘ಯಾಕೆ ಮಾರಾಯ್ತೀ… ನೀನೂ ನನ್ನ ಜೊತೆಯಲ್ಲೇ ಬಂದವಳಲ್ಲವಾ. ನಿನಗೂ ಗೊತ್ತಿರಬೇಕಲ್ವಾ…?’ ಎಂದು ತಿರುಗೇಟು ಕೊಟ್ಟು ಸುಮ್ಮನಾದರು.

‘ಅಯ್ಯೋ, ಹಾಗಲ್ಲ ಮಾರಾಯ್ರೇ. ನಾವಿಲ್ಲಿಗೆ ಬಂದ ನಂತರ ಈ ವಠಾರದೊಳಗೆ ಯಾವತ್ತಾದರೂ ನಾವು ನಾಗರಹಾವನ್ನು ನೋಡಿದ್ದುಂಟಾ ಹೇಳಿ?’

‘ಇಲ್ವಲ್ಲ ಯಾಕೇ…?’

‘ಹಾಗಿದ್ದರೆ ಇವತ್ತು ಅಂಥ ಹಾವು ಏಕಾಏಕಿ ನಮ್ಮನೆಯೊಳಗೆಯೇ ಕಾಣಿಸಿಕೊಂಡಿದೆ ಅಂದರೆ ಏನರ್ಥ? ಯೋಚಿಸಿದಿರಾ…?’ ಎಂದು ಅಸಹನೆಯಿಂದ ಗಂಡನ ಮುಖ ನೋಡಿದರು.

‘ಓಹೋ, ಇದಾ ವಿಷಯಾ? ಅರ್ಥವಾಯಿತು ಬಿಡು. ಹೌದು ಅದರ ಬಗ್ಗೆ ನಾನೂ ಯೋಚಿಸಿದೆ. ನಮ್ಮನೆಯೊಳಗೆ ಇಲಿಯೋ ಕಪ್ಪೆಯೋ ಸೇರಿಕೊಂಡಿರಬೇಕು. ಅವುಗಳನ್ನು ಹಿಡಿಯಲು ಆ ಹಾವು ಬಂದಿರಬೇಕು ಅಂತ ಆಮೇಲೆ ಅರ್ಥವಾಯಿತು. ಯಾಕೆ ಇದು ಸರಿಯಾದ ಯೋಚನೆ ಅಲ್ಲವಾ?’ ಎಂದರು. ಆಗ ಸುಮಿತ್ರಮ್ಮನ ಮುಖ ಇನ್ನಷ್ಟು ಬಿಗುವಾಯಿತು. ಅದನ್ನು ಗಮನಿಸಿದ ಲಕ್ಷ್ಮಣಯ್ಯ, ‘ಅಲ್ಲ ಮಾರಾಯ್ತೀ ಹಾವು ಬಂದೂ ಆಯ್ತು. ನಿನ್ನ ಪ್ರಾರ್ಥನೆಗೆ ಓಗೊಟ್ಟು ಹೊರಗೆ ಹೋಗಿಯೂ ಆಯ್ತು. ಆದರೆ ನಿನ್ನ ತಲೆಯೊಳಗೆ ಹೊಕ್ಕಿರುವ ಹಾವಿನ್ನೂ ನಿನ್ನನ್ನು ಬಿಟ್ಟು ಹೋಗಲಿಲ್ಲವಲ್ಲ…!’ ಎಂದು ನಗುತ್ತ ಅಂದವರು, ‘ಆ ವಿಷಯವನ್ನು ಅಷ್ಟೊಂದು ದೊಡ್ಡದು ಮಾಡಿ ಆಲೋಚಿಸುವ ಅಗತ್ಯ ಉಂಟಾ ಹೇಳು? ಹಾವುಗಳ ಆಹಾರದ ಜೀವಿಗಳು ಇದ್ದರೆ ಮಾತ್ರ ಅವು ಮನೆಯೊಳಗೆ ಬರುತ್ತವೆ ಅಂತ ನನ್ನ ಸ್ನೇಹಿತ ಶ್ರೀಪತಿ ಬೆಳಿಗ್ಗೆನೇ ಹೇಳಿದ್ದ. ನೀನು ಮೊದಲು ಮನೆಯನ್ನು ಸ್ವಚ್ಛವಾಗಿಟ್ಟುಕೋ. ಆಮೇಲೆ ಯಾವ ಹಾವು ಬರುತ್ತದೆ ಅಂತ ನೋಡುವ. ಯಾರೋ ಬುದ್ಧಿ ಕೆಟ್ಟವರು ಏನೇನೋ ಕಥೆ ಕಟ್ಟಿ ಹೇಳುತ್ತಾರೆಂದರೆ ನೀನೂ ಅದನ್ನೆಲ್ಲ ನಂಬಿ ಮಂಡೆ ಹಾಳು ಮಾಡಿಕೊಳ್ಳುವುದು ಎಷ್ಟು ಸರಿ ಹೇಳು?’ ಎಂದು ಬೇಸರದಿಂದ ಹೇಳಿದರು.

   ಸುಮಿತ್ರಮ್ಮನಿಗೆ ತಟ್ಟನೆ ರೇಗಿತು. ‘ನಿಮ್ಮ ಮಂಡೆ! ಇಲಿ, ಕಪ್ಪೆಗಳು ಇರಲು ಈ ಮನೆಯೇನು ಮಸಣದಗುಡ್ಡೆಯ ಡಂಪಿಂಗ್‍ಯಾರ್ಡ್ ಅಂತ ತಿಳಿದುಕೊಂಡ್ರಾ…? ನಿಮ್ಮ ಶ್ರೀಪತಿಗೆ ಮೊದಲೇ ತಲೆಕೆಟ್ಟಿದೆ. ಹಾಗಾಗಿಯೇ ಅವನು ಹೆಂಡತಿ ಮಕ್ಕಳನ್ನು ಓಡಿಸಿ ಒಂಟಿ ಭೂತದಂತೆ ಬದುಕುತ್ತಿರುವುದು. ನೀವು ಅವನ ಮಾತುಕಟ್ಟಿಕೊಂಡು ನನಗೆ ಬುದ್ಧಿ ಹೇಳಲು ಬರಬೇಡಿ ಗೊತ್ತಾಯಿತಾ!’ ಎಂದು ಸಿಡುಕಿದರು. ಆಗ ಲಕ್ಷ್ಮಣಯ್ಯ, ‘ಅಯ್ಯೋ ದೇವರೇ…ಇವಳಿಗೆ ಬುದ್ಧಿ ಹೇಳುವುದು ವ್ಯರ್ಥ!’ ಎಂದು ಸುಮ್ಮನಾದರು. ಅದನ್ನು ಗಮನಿಸಿದ ಸುಮಿತ್ರಮ್ಮ ಸೌಮ್ಯವಾಗಿ, ‘ಸ್ವಲ್ಪ ಸರಿಯಾಗಿ ಯೋಚಿಸಿ ನೋಡಿ ಮಾರಾಯ್ರೇ. ಆಗ ನಿಮಗೂ ಸುಂದರಯ್ಯನ ಮಾತು ಸತ್ಯ ಅಂತ ಅನ್ನಿಸುತ್ತದೆ. ನಮಗೇ ಗೊತ್ತಿರದ ಯಾವುದೋ ದೋಷ, ಸಮಸ್ಯೆ ಇದ್ದರೆ ಮಾತ್ರ ನಾಗರಹಾವು ಕಾಣಿಸಿಕೊಳ್ಳುವುದು ಅಂತ ನಮ್ಮ ಅಜ್ಜಿ ಪಿಜ್ಜಂದಿರ ಕಾಲದಿಂದಲೂ ನಾವು ನಂಬಿಕೊಂಡು ಬಂದವರಲ್ಲವಾ! ಆ ನಂಬಿಕೆಯನ್ನು ಅಷ್ಟುಬೇಗ ಬಿಟ್ಟು ಬಿಡಲು ನಿಮ್ಮಿಂದಾಗಬಹುದು. ನನ್ನಿಂದ ಸಾಧ್ಯವಿಲ್ಲ. ನಾವು ಹೆಂಗಸರು ನಿಮ್ಮಷ್ಟು ಗಟ್ಟಿ ಮನಸ್ಸಿನವರಲ್ಲ…ಹಾಗಾಗಿ ಅದು ಹೌದೋ ಅಲ್ಲವೋ ಅಂತ ತಿಳಿದುಕೊಳ್ಳುವುದಕ್ಕೇ ನಾಳೆ ಬೆಳಿಗ್ಗೆ ಜೋಯಿಸರ ಹತ್ತಿರ ಹೋಗುತ್ತಿದ್ದೇನೆ. ನೀವು ಒಂದೈನ್ನೂರು ರೂಪಾಯಿ ಕೊಡುತ್ತೀರಿ ಅಷ್ಟೆ. ಬೇರೇನೂ ಮಾತಾಡಬೇಡಿ!’ ಎಂದು ಗದರಿಸುವ ಧ್ವನಿಯಲ್ಲೇ ಆಜ್ಞಾಪಿಸಿದರು.

   ಅಷ್ಟು ಕೇಳಿದ ಲಕ್ಷ್ಮಣಯ್ಯನ ಹೊಟ್ಟೆ ಚುರುಕ್ಕೆಂದಿತು. ‘ಅಲ್ಲ ಮಾರಾಯ್ತೀ, ನೀನಿಷ್ಟೊಂದು ಹೆದರು ಪುಕ್ಕೆಲಿ ಆದದ್ದು ಯಾವಾಗ? ಹಿಂದೆಲ್ಲಾ ಎಂಥೆಂಥ ಸಮಸ್ಯೆಗಳು ಬಂದರೂ ಡೋಂಟ್ ಕೇರ್! ಅನ್ನುತ್ತಿದ್ದವಳು ಈಗ ವಯಸ್ಸಾಗುತ್ತ ಬಂದಂತೆ ಏನೇನೋ ಯೋಚಿಸುತ್ತ, ಆ ಮುಠ್ಠಾಳ ಸುಂದರಯ್ಯನ ಮಾತನ್ನೂ ಕಟ್ಟಿಕೊಂಡು ನಿನ್ನ ನೆಮ್ಮದಿ ಕೆಡಿಸಿಕೊಂಡಿರುವುದಲ್ಲದೇ ನನ್ನ ಹಣವನ್ನೂ ಪೋಲು ಮಾಡುವುದು ಸರಿಯಾ ಹೇಳು…?’ ಎಂದು ಹತಾಶೆಯಿಂದ ಅಂದವರು, ‘ಸಾಯುವತನಕ ಯಾರ ಹಂಗಿನಲ್ಲೂ ಬೀಳದೆ ಬದುಕಬೇಕೆಂದಿರುವ ನನ್ನ ಸ್ವಾಭಿಮಾನವನ್ನು ಹಾಳು ಮಾಡಬೇಡ ಮಾರಾಯ್ತೀ…ಒಮ್ಮೆ ತಾಳ್ಮೆಯಿಂದ ಯೋಚಿಸಿನೋಡು, ನೀನು ಹೇಳುವಂತೆ ನಮ್ಮಲ್ಲಿ ಇಲಿ, ಕಪ್ಪೆಗಳಿಲ್ಲದಿರಬಹುದು. ಆದರೆ ಹೊರಗೆ ಬೇರೆ ಯಾವುದೋ ಪ್ರಾಣಿಗೆ ಹೆದರಿಯೂ ಆ ಹಾವು ಒಳಗೆ ಓಡಿ ಬಂದಿರಬಹುದಲ್ಲಾ? ಸುಮ್ಮನೆ ಏನೇನೋ ಚಿಂತಿಸಿ ಕೊರಗಬೇಡ. ಬಾ ಹೋಗಿ ಆರಾಮವಾಗಿ ಮಲಗಿಕೊಳ್ಳುವ!’ ಎಂದು ಮೃದುವಾಗಿ ಕರೆದರು.

   ಸುಮಿತ್ರಮ್ಮನಿಗೆ ಮರಳಿ ರೇಗಿತು, ‘ಅಂದರೆ ನಿಮ್ಮ ಈ ಉಪದೇಶದ ಅರ್ಥ ನಾಳೆ ನೀವು ಹಣ ಕೊಡುವುದಿಲ್ಲವೆಂದಾ…? ಸರಿ. ಆಯ್ತು ಮಾರಾಯ್ರೇ. ನೀವೇನಾದರೂ ಮಾಡಿಕೊಳ್ಳಿ. ಆದರೆ ಮುಂದೇನಾದರೂ ಹೆಚ್ಚುಕಮ್ಮಿಯಾದರೆ ಅದಕ್ಕೆಲ್ಲ ನೀವೇ ಹೊಣೆಯಾಗುತ್ತೀರಿ ಎಂಬುದನ್ನೂ ನೆನಪಿಟ್ಟುಕೊಳ್ಳಿ ಅಷ್ಟೇ!’ ಎಂದು ಸಿಡುಕಿ ಮುಖ ತಿರುವಿ ಕುಳಿತುಬಿಟ್ಟರು.

‘ಆಯ್ತು. ಆಯ್ತು. ಅದೇನಾಗುತ್ತದೋ ನಾನೇ ನೋಡಿಕೊಳ್ಳುತ್ತೇನೆ. ಆದರೆ ಇನ್ನು ಮುಂದೆ ಇಂಥ ಕಳಪೆ ವಿಷಯಗಳನ್ನೆಲ್ಲ ನನ್ನ ತಲೆಗೆ ಕಟ್ಟುವುದನ್ನು ನೀನೂ ನಿಲ್ಲಿಸಿಬಿಡಬೇಕು ಅಷ್ಟೇ!’ ಎಂದು ಲಕ್ಷ್ಮಣಯ್ಯನೂ ಒರಟಾಗಿ ಹೇಳಿ ಎದ್ದು ಹೋಗಿ ಮಲಗಿಕೊಂಡರು.

                                                           ***

ಮರುದಿನ ಬೆಳಿಗ್ಗೆ ಸುಮಿತ್ರಮ್ಮ ಎಂದಿನಂತೆ ಬೇಗನೆದ್ದವರು, ಎದುರಿನ ಗುಡ್ಡೆಯತ್ತ ಹೋಗಿ ಗೋಮಯ ತಂದು ನಿನ್ನೆ ನೆರೆಕರೆಯವರು ಹೊಕ್ಕಿದ್ದ ಕೋಣೆಗಳಿಗೆಲ್ಲ ಸಿಂಪಡಿಸಿ ಅಶುದ್ಧ ನಿವಾರಿಸಿಕೊಂಡರು. ನಂತರ ಉಪಾಹಾರ ತಯಾರಿಸಿ, ಕಾಫಿ ಮಾಡಿ ಗಂಡನಿಗೆ ಕೊಟ್ಟು ತಾವೂ ಸೇವಿಸಿದರು. ಅಷ್ಟರಲ್ಲಿ ಮರಳಿ ಅವರನ್ನು ಹಾವಿನ ಚಿಂತೆ ಕಾಡಿತು.  ಅಯ್ಯೋ ದೇವರೇ! ಆ ಹಾವು ಮತ್ತೆ ಬಂದರೇನಪ್ಪಾ ಮಾಡುವುದು! ಎಂದುಕೊಂಡು ಭಯಪಟ್ಟರು. ಅದೇ ಹೊತ್ತಿಗೆ ಲಕ್ಷ್ಮಣಯ್ಯನೂ ಪೇಟೆಗೆ ಹೊರಡುತ್ತಿದ್ದರು. ಅವರನ್ನು ಕಂಡ ಸುಮಿತ್ರಮ್ಮನಿಗೆ ಸಿಟ್ಟು ಬಂತು.

‘ಏನ್ರೀ, ಎಲ್ಲಿಗೆ ಹೊರಟಿದ್ದೀರೀ…?’ ಎಂದರು ಸಿಡುಕಿನಿಂದ.

‘ಪೇಟೆಯಲ್ಲಿ ಸ್ಪಲ್ಪ ಕೆಲಸವಿದೆ ಮಾರಾಯ್ತೀ…!’ ಎಂದು ಲಕ್ಷ್ಮಣಯ್ಯ ಹೊರಡುವ ಗಡಿಬಿಡಿಯಲ್ಲೇ ಉತ್ತರಿಸಿದರು.

‘ಕೆಲಸವಿದ್ದರೆ ಅಲ್ಲೇ ಇರಲಿ. ಇವತ್ತು ನೀವು ಎಲ್ಲಿಗೂ ಹೋಗುವುದು ಬೇಡ. ನಿನ್ನೆ ನೀವೇ ಹೇಳಿದಿರಲ್ಲ, ಮನೆಯೊಳಗೆ ಇಲಿ, ಕಪ್ಪೆಗಳಿರಬಹುದು ಅಂತ. ಇದ್ದರೆ ನನ್ನೊಬ್ಬಳಿಂದಲೇ ಅವುಗಳನ್ನು ಹಿಡಿಯಲು ಆಗಲಿಕ್ಕಿಲ್ಲ. ಇಬ್ಬರೂ ಸೇರಿಯೇ ಹಿಡಿದು ಹೊರಗೆ ಹಾಕುವ. ಸ್ವಲ್ಪ ಸಹಾಯ ಮಾಡಿ!’ ಎಂದು ಒರಟಾಗಿ ಆಜ್ಞಾಪಿಸಿದರು. ಅಷ್ಟು ಕೇಳಿದ ಲಕ್ಷ್ಮಣಯ್ಯನಿಗೆ ಒಳಗೊಳಗೇ ನಗು ಬಂತು. ‘ಹ್ಞೂಂ, ಆಯ್ತು ಮಾರಾಯ್ತೀ…’ ಎಂದುತ್ತರಿಸಿ ಉದಾಸೀನದಿಂದ ಕುಳಿತುಕೊಂಡರು. ಸುಮಿತ್ರಮ್ಮ, ಗಂಡನೊಂದಿಗೆ ಮನೆಯ ಮೂಲೆ ಮೂಲೆಗಳನ್ನು ಗುಡಿಸಿ ಒರೆಸಿ ಹಳೆಯ ಸಾಮಾನುಗಳನ್ನೆಲ್ಲ ಹೊತ್ತೊಯ್ದು ಹಿತ್ತಲಿನ ಶೆಡ್ಡಿನೊಳಗೆಸೆದು ಬಂದು ಸ್ನಾನ ಮಾಡಿದ ನಂತರ ನೆಮ್ಮದಿಯ ಉಸಿರುಬಿಟ್ಟರು. ಅಷ್ಟಾಗುವ ಹೊತ್ತಿಗೆ ಮಧ್ಯಾಹ್ನ ಸಮೀಪಿಸಿತು. ಆದ್ದರಿಂದ ಹಿಂದಿನ ರಾತ್ರಿಯ ಅಡುಗೆಯನ್ನೇ ಬಿಸಿ ಮಾಡಿ ಇಬ್ಬರೂ ಉಂಡು ಒಂದು ಸುತ್ತು ನಿದ್ದೆ ತೆಗೆದರು. ಸುಮಿತ್ರಮ್ಮ ಎದ್ದು ಗಂಡನಿಗೆ ಕಾಫಿ ಮಾಡಿ ಕೊಟ್ಟು ಹಿಂದಿನ ದಿನ ನಾಗರಹಾವಿನ ರಂಪಾಟದ ಕಥೆಯಿಂದಾಗಿ ಮೂಲೆ ಸೇರಿದ್ದ ಬಟ್ಟೆಬರೆಗಳನ್ನು ಗಂಡನಿಂದಲೇ ಕೊಡವಿ ಕೊಡವಿ ಪರೀಕ್ಷಿಸಿ ಹಾವಿಲ್ಲ ಎಂದು ಖಚಿತವಾದ ನಂತರ ಅವನ್ನೆಲ್ಲ ಒಗೆದು ಹಾಕಿದರು. ಅಷ್ಟೊತ್ತಿಗೆ ಸಂಜೆಯಾಯಿತು. ಕಾಲು ಸೇರಕ್ಕಿಯ ಅನ್ನ ಮಾಡಿಟ್ಟು ಅದಕ್ಕೊಂದು ಮೆಂತೆ ಸಾರು ಮಾಡುವ ಎಂದುಕೊಂಡು ತಯಾರಿ ನಡೆಸಿದರು.

   ಗ್ಯಾಸಿನ ಒಂದು ಒಲೆಯಲ್ಲಿ ಸಾರು ಕುದಿಯುತ್ತಿತ್ತು. ಇನ್ನೊಂದರ ಮಂದಾಗ್ನಿಯಲ್ಲಿ ಸಾರಿಗೆ ಹುಯ್ಯುವ ಒಗ್ಗರಣೆಯೆಣ್ಣೆ ಬಿಸಿಯೇರುತ್ತಿತ್ತು. ಸುಮಿತ್ರಮ್ಮ ಅದಕ್ಕೆ ಸಾಸಿವೆ ಸುರಿದು ಸಿಡಿದ ನಂತರ ಕರಿಬೇವಿನ ಸೊಪ್ಪು, ಬೆಳ್ಳುಳ್ಳಿ, ಉದ್ದು ಮತ್ತು ಒಣಮೆಣಸಿನ ಚೂರುಗಳನ್ನು ಸುರುವಿದರು. ಸ್ವಲ್ಪ ಹೊತ್ತು ತಿರುವಿದ ನಂತರ ಇನ್ನೇನು ಸೌಟನ್ನೆತ್ತಿ ಸಾರಿನ ಪಾತ್ರೆಗೆ ಹುಯ್ಯಬೇಕು ಎಂಬಷ್ಟರಲ್ಲಿ ಒಗ್ಗರಣೆಯಂಥದ್ದೇ ಶಬ್ದವೊಂದು ಸುಮಿತ್ರಮ್ಮನ ಪಕ್ಕದಲ್ಲೇ ಗಟ್ಟಿಯಾಗಿ ಹೊಮ್ಮಿತು! ಅವರು ಬೆಚ್ಚಿಬಿದ್ದರು. ಶಬ್ದವು ಕಾಲ ಬುಡದಲ್ಲೇ ಬಂದಿದ್ದಲ್ಲವಾ ಎಂದುಕೊಂಡವರು, ಆ ಹೆದರಿಕೆಯ ನಡುವೆಯೂ ಕೈಯಲ್ಲಿದ್ದ ಸೌಟನ್ನು ರಪ್ಪನೆ ಸಾರಿನ ಪಾತ್ರೆಗೆಸೆದು ಮಾರು ದೂರ ನೆಗೆದು ನಿಂತರು. ಅದು ಜುಂಯ್ಯೀ…! ಎಂದು ಅರಚಿ ಸ್ತಬ್ಧವಾಯಿತು. ಆದರೆ ಕಾಲ ಹತ್ತಿರದಿಂದ ಬರುತ್ತಿದ್ದ ಶಬ್ದವು ಇನ್ನೂ ಜೋರಾಗಿ ಬಂತು. ಹೆದರುತ್ತ ಅತ್ತ ಇಣುಕಿದರು. ಆದರೆ ಅಲ್ಲಿ ಉಪ್ಪಿನಕಾಯಿಯ ಜಾಡಿಗಳ ಎಡೆಯಲ್ಲಿ ನಿನ್ನೆಯ ಫಣಿರಾಜನು ಇವತ್ತೂ ಅದೇ ಭಂಗಿಯಲ್ಲಿ ನಿಂತುಕೊಂಡು ಬುಸುಗುಟ್ಟುತ್ತಿದ್ದ! ಸುಮಿತ್ರಮ್ಮನ ಹೃದಯ ನಡುಗಿಬಿಟ್ಟಿತು. ‘ಅಯ್ಯಯ್ಯೋ ದೇವರೇ…ಹಾವು, ಹಾವು…!’ ಎಂದು ಕೂಗುತ್ತ ಹೊರಗೆ ಓಡಿದರು. ಅದೇ ಹೊತ್ತಿಗೆ ಶೌಚಕ್ಕೆ ಹೋಗಿ ಪಂಚೆ ಸುತ್ತಿಕೊಳ್ಳುತ್ತ ಬರುತ್ತಿದ್ದ ಲಕ್ಷ್ಮಣಯ್ಯ ಹೆಂಡತಿಯ ಬೊಬ್ಬೆ ಕೇಳಿ ಅದುರಿಬಿದ್ದು ಪಂಚೆಯನ್ನು ಅರ್ಧಂಬರ್ಧ ಸುತ್ತಿಕೊಂಡು ಹೊರಗೆ ಧಾವಿಸಿದರು. ಸುಮಿತ್ರಮ್ಮ ಇನ್ನೇನು ವರಾಂಡ ದಾಟಿ ಅಂಗಳಕ್ಕೆ ಜಿಗಿಯಬೇಕು ಎಂಬಷ್ಟರಲ್ಲಿ ಗಬಕ್ಕನೇ ಅವರ ರಟ್ಟೆ ಹಿಡಿದು ನಿಲ್ಲಿಸಿ, ‘ಹೇ, ಹೇ, ಎಲ್ಲಿಗೆ ಓಡುತ್ತಿ ಮಾರಾಯ್ತಿ… ಹೆದರಬೇಡ. ನಿಲ್ಲು ನಿಲ್ಲು! ಎಲ್ಲಿದೆ ಹಾವು…? ನೋಡುವ ಬಾ!’ ಎಂದು ಸಾಂತ್ವನಿಸಿದರು. ಆಗ ಸುಮಿತ್ರಮ್ಮ ಸ್ವಲ್ಪ ಹತೋಟಿಗೆ ಬಂದರು.

   ಹೆಂಡತಿಯನ್ನು ಸೋಫಾದಲ್ಲಿ ಕುಳ್ಳಿರಿಸಿದ ಲಕ್ಷ್ಮಣಯ್ಯ ಕಳ್ಳ ಹೆಜ್ಜೆಗಳನ್ನಿಡುತ್ತ ಅಡುಗೆ ಕೋಣೆಯತ್ತ ಹೋದರು. ಹಾವನ್ನು ಕಂಡವರು ತಾವೂ ಹೆದರಿ ಕಂಗಾಲಾಗಿ ಹಿಂದೆ ಧಾವಿಸಿದರು. ಈ ಸಲವೂ ಸುಮಿತ್ರಮ್ಮನ ಕರ್ಣಕಠೋರ ಬೊಬ್ಬೆಯು ನೆರೆಕರೆಯವರಿಗೆ ತಲುಪಿತು. ಆದರೆ ಇಂದು ಸೋಮವಾರವಾಗಿತ್ತು. ಹಾಗಾಗಿ ಗಂಡಸರಲ್ಲಿ ಕೆಲವರು ಕೆಲಸಕ್ಕೂ ಮಕ್ಕಳು ಸ್ಕೂಲಿಗೂ ಹೋಗಿದ್ದರು. ಮನೆಯಲ್ಲಿದ್ದ ಸುಂದರಯ್ಯನೂ ಉಳಿದವರೂ ಹಿಂದಿನಂತೆಯೇ ಭಯ, ಕುತೂಹಲದಿಂದ ಓಡೋಡಿ ಬಂದರು. ಈ ಸಲ ಹೆಂಗಸರ ಸಂಖ್ಯೆಯೇ ಹೆಚ್ಚಿತ್ತು. ಅವರೆಲ್ಲ ಇವತ್ತೂ ನಿರ್ದಾಕ್ಷಿಣ್ಯದಿಂದ ಸುಮಿತ್ರಮ್ಮನ ಮನೆಗೆ ನುಗ್ಗಿದರು. ಆದರೆ ಇಂದು ಸುಮಿತ್ರಮ್ಮ, ಅವರು ಬರುವುದಕ್ಕಿಂತ ಮೊದಲೇ ಚುರುಕಾಗಿದ್ದರು. ಆದ್ದರಿಂದ ಬಂದವರೆದುರು ಧೈರ್ಯ ನಟಿಸಿದರು. ‘ಹೌದು ಸುಂದರಯ್ಯ, ನೀವು ನಿನ್ನೆ ಹೇಳಿದ್ದು ಸರಿ. ನಮ್ಮಿಂದ ನಾಗನಿಗೇನೋ ತೊಂದರೆಯಾಗಿದೆ. ಅದಕ್ಕೆ ಮತ್ತೆ ಕಾಣಿಸಿಕೊಂಡಿದ್ದಾನೆ!’ ಎಂದು ಹೇಳಿ ತೀಕ್ಷ್ಣವಾಗಿ ಗಂಡನನ್ನು ದಿಟ್ಟಿಸಿದರು. ಅವರು ಪಾಪ ಹೆಂಡತಿಯ ಕೋಪದ ಕಣ್ಣುಗಳನ್ನು ದಿಟ್ಟಿಸಲಾಗದೆ ದೃಷ್ಟಿ ತಪ್ಪಿಸಿದರು. ಆದರೆ ಸುಮಿತ್ರಮ್ಮ ಬಿಡಲಿಲ್ಲ, ‘ನೋಡ್ರೀ, ದೇವರ ಕೋಣೆಯಲ್ಲಿ ಷಣ್ಮುಖ ಕ್ಷೇತ್ರದ ಪ್ರಸಾದ ಇದೆ. ಬೇಗ ಹೋಗಿ ತಗೊಂಡು ಬನ್ನಿ!’ ಎಂದರು ಬಿರುಸಿನಿಂದ. ಲಕ್ಷ್ಮಣಯ್ಯ ಧಾವಿಸಿ ಹೋಗಿ ತೀರ್ಥ ಪ್ರಸಾದವನ್ನು ತಂದು ಹೆಂಡತಿಯ ಕೈಗಿತ್ತರು. ಸುಮಿತ್ರಮ್ಮ ಇವತ್ತೂ ನಾಗನೊಡನೆ ತಪ್ಪೊಪ್ಪಿಕೊಂಡು ಹಿಂದಿನಂತೆಯೇ ಪ್ರಾರ್ಥಿಸಿ ಹಾವಿನ ಮೇಲೆ ತೀರ್ಥಪ್ರಸಾದವನ್ನು ಎರಚಿದರು. ಆದರೆ ಅವರ ಇಂದಿನ ಪ್ರಾರ್ಥನೆಯಲ್ಲಿ ನಿನ್ನೆಯಷ್ಟು ಭಕ್ತಿಯಾಗಲೀ, ಆತ್ಮವಿಶ್ವಾಸವಾಗಲೀ ಕಾಣಿಸಲಿಲ್ಲ. ಅದನ್ನು ಗಮನಿಸಿದ ನೆರೆಕರೆಯವರಿಗೆ ಸ್ವಲ್ಪ ನಿರಾಶೆಯಾಯಿತು. ಅತ್ತ ಸುಮಿತ್ರಮ್ಮನನ್ನು ಕಂಡ ನಾಗರಹಾವು ಇವತ್ತೂ ಅತಿಯಾಗಿ ಭಯಪಟ್ಟಿತು. ಆದರೆ ತುಸುಹೊತ್ತಿನಲ್ಲಿ ಸುಮಿತ್ರಮ್ಮನ ಪರಿವಾರ ಹೊರಗೆ ಹೊರಟು ಹೋದುದನ್ನೂ ಗಮನಿಸಿದ್ದು ಸರ್ರನೆ ಹೆಡೆಯನ್ನು ಮಡಚಿಕೊಂಡು ಬಂದ ದಾರಿಯಿಂದಲೇ ಹೊರಗೆ ಹರಿದು ಕಣ್ಮರೆಯಾಯಿತು.  

                                                       ***                                              

ಮರಳಿ ನಾಗರಹಾವನ್ನು ಕಂಡ ಸುಮಿತ್ರಮ್ಮ ಕಂಗೆಟ್ಟಿದ್ದರು. ರಾಧಾಳ ಕೋಳಿಗಳು ತಮ್ಮ ಅಂಗಳದಲ್ಲಿ ರಾಡಿಯೆಬ್ಬಿಸಿದ ದಿನ ಮತ್ತು ನಾಗಬನದ ವಿಷಯವಾಗಿ ಅವಳನ್ನು ತಾವು ಹೆದರಿಸಿದ ಕ್ಷಣದಿಂದಲೇ ಅವರೊಳಗೂ ಸಂಶಯದ ಹುಳವೊಂದು ಹೊಕ್ಕು ಪೀಡಿಸತೊಡಗಿತ್ತು. ಆದ್ದರಿಂದ ಅಂಥ ತಳಮಳವನ್ನು ಹತ್ತಿಕ್ಕಲಾದ ಅವರು, ತಾನು ಇನ್ನೂ ಇನ್ನೂ ಮೀನಾಮೇಷ ಎಣಿಸುತ್ತ ಕೂತರೆ ಪ್ರಯೋಜನವಿಲ್ಲ. ಅದೇ ಹಾವು ಮತ್ತೆ ಬಂದು ತಮ್ಮ ಕಾಲ ಬುಡದಲ್ಲೇ ಬುಸುಗುಟ್ಟಿದ್ದನ್ನೂ ತಾನದರ ಅಷ್ಟು ಹತ್ತಿರವಿದ್ದರೂ ಅದು ಕಚ್ಚದೆ ಬರೇ ಹೆದರಿಸಿದ್ದನ್ನು ನೋಡಿದರೆ ನಾಗನಿಗೆ ನಮ್ಮಿಂದೇನೋ ಅಪಚಾರವಾಗಿರಲೇಬೇಕು! ಎಂದು ಯೋಚಿಸಿದ ಅವರು ತಲ್ಲಣಿಸಿಬಿಟ್ಟರು. ಅವರ ಯೋಚನೆ ಮತ್ತೂ ಮುಂದೆ ಸಾಗಿತು. ಹೌದು. ಈಗೆಲ್ಲಾ ಒಂದೊಂದೇ ಸ್ಪಷ್ಟವಾಗುತ್ತಿದೆ. ಕೆಲವು ತಿಂಗಳ ಹಿಂದೆ ಮಗಳ ಹೆರಿಗೆಯಲ್ಲಿ ನಾವು ಅನುಭವಿಸಿದ ತೊಂದರೆ ನೋವು ಅಷ್ಟಿಷ್ಟಾ? ಅಬ್ಬಾ! ಎಷ್ಟೊಂದು ಕಂಗಾಲಾಗಿದ್ದೆವು! ಡಾಕ್ಟರ್ ಸುರೇಖಾ ನಮ್ಮ ಭಯವನ್ನು ಕಾಣುತ್ತಿದ್ದವರು, ‘ಯಾಕೆ ಹೆದರುತ್ತೀರಿ ಸುಮಿತ್ರಮ್ಮಾ? ಮಗಳು ಆರೋಗ್ಯವಾಗಿದ್ದಾಳೆ. ಸಹಜ ಹೆರಿಗೆಯೇ ಆಗುತ್ತದೆ. ನಿಶ್ಚಿಂತೆಯಿಂದಿರಿ!’ ಎಂದು ನಗುತ್ತ ಸಮಾಧಾನ ಹೇಳುತ್ತಿದ್ದರು. ಆದರೆ ಆಮೇಲೆ ಒಮ್ಮೆಲೇ, ‘ಮಗುವಿನ ಕೈಕಾಲು ಗರ್ಭದ್ವಾರಕ್ಕೆ ಅಡ್ಡ ಬಂದುಬಿಟ್ಟಿದೆ. ಆದ್ದರಿಂದ ಸಹಜ ಹೆರಿಗೆಗೆ ಕಾಲಾವಕಾಶವಿಲ್ಲ. ಆದಷ್ಟು ಬೇಗ ಸಿಸೇರಿಯನ್ ಮಾಡದಿದ್ದರೆ ತಾಯಿ, ಮಗು ಇಬ್ಬರ ಪ್ರಾಣಕ್ಕೂ ಅಪಾಯ!’ ಎಂದು ಎಷ್ಟೊಂದು ಸಲೀಸಾಗಿ ಅಂದುಬಿಟ್ಟರು! ಸಿಸೇರಿಯನ್ ಎಂದ ಕೂಡಲೇ ಅವಳೂ ನಾವೂ ಎಷ್ಟೊಂದು ಪೇಚಾಡಿಡಿದೆವು! ಆಗ ಆ ಆಸ್ಪತ್ರೆಯ ಮೇಲೆಯೇ ಜಿಗುಪ್ಸೆ ಹುಟ್ಟಿತು. ಥೂ! ಈ ಆಸ್ಪತ್ರೆಗೆ ಬರಲೇಬಾರದಿತ್ತು ಮಾರಾಯ್ರೇ. ನಮ್ಮಂಥವರನ್ನು ಸುಲಿದು ತಿನ್ನುವುದಕ್ಕೆಂದೇ ಇವರೆಲ್ಲ ಮಾಡುತ್ತಿರುವ ಉಪಾಯ ಇದು. ಅದಕ್ಕೇ ಬೆಣ್ಣೆಯಂಥ ಮಾತು, ನಯವಿನಯವೆಲ್ಲ! ಎಂದು ತಾನು ಇವರೊಡನೆ ದುಃಖದಿಂದ ಹೇಳಿದ್ದೆ.

‘ಹೌದು ಮಾರಾಯ್ತೀ ನಿನ್ನ ಮಾತು ನಿಜ. ಡಾ. ಸುರೇಖಾ ಒಳ್ಳೆಯ ಹೆರಿಗೆತಜ್ಞೆ ಅಂತ ಎಲ್ಲರೂ ಹೊಗಳುವುದನ್ನು ಕೇಳಿ ನಾವೂ ಬಂದುಬಿಟ್ಟೆವು. ಅದರ ತಪ್ಪಿಗೆ ಈಗ ಅನುಭವಿಸಬೇಕು ನೋಡು. ಆದರೆ ನಮ್ಮದು ಹಾಗಿರಲಿ ಮಾರಾಯ್ತೀ, ಇಲ್ಲಿಗೆ ಬರುವ ಇತರ ಬಡವರ ಅವಸ್ಥೆಯೇನಾಗಬಹುದು? ಮನುಷ್ಯರ ಮಾನ ಪ್ರಾಣಕ್ಕಿಂತ ಇವರಿಗೆ ದುಡ್ಡೇ ಮುಖ್ಯವಾಗಿಬಿಟ್ಟಿತಾ! ಥೂ! ಕಲಿಗಾಲವೆಂದರೆ ಇದೇ ಇರಬೇಕು!’ ಎಂದು ಇವರೂ ನೋವಿನಿಂದ ಮಾತಾಡಿದ್ದರು.

ದುಡ್ಡೇ ಮುಖ್ಯವಾಗದೆ ಇರುತ್ತದಾ ಮಾರಾಯ್ರೇ…ಇಷ್ಟು ದೊಡ್ಡ ಆಸ್ಪತ್ರೆ ನಡೆಸುವವರಿಗೂ ಅಷ್ಟೇ ದೊಡ್ಡ ಲಾಭ ಬೇಡವಾ? ಅದಕ್ಕೇ ಸಹಜ ಹೆರಿಗೆಯನ್ನು ಅಸಹವಾಗಿ ಮಾಡಲೇ ಬೇಕಾಗುತ್ತದೆ. ಛೀ, ಛೀ! ರಕ್ತ ಹೀರುವ ತಿಗಣೆಗಳು! ಎಂದು ತಾವಿಬ್ಬರೂ ಆವಾಗ ಶಾಪ ಹಾಕಿದ್ದೆವು. ಆದರೆ ಆಮೇಲೇನಾಯಿತು? ಅವರಿಂದ ಹೆರಿಗೆ ಮಾಡಿಸಿಕೊಂಡವರೂ ನಮ್ಮ ಕೆಲವು ಹತ್ತಿರದ ಸಂಬಂಧಿಕರೂ, ‘ಡಾಕ್ಟರ್ ಸುರೇಖಾ ಬಹಳ ಅಂತಃಕರಣದ ಹೆಂಗಸು. ಅವರು ವಿನಾಕಾರಣ ಯಾರಿಗೂ ಸಿಸೇರಿಯನ್ ಅದೂ ಇದೂ ಅಂತ ಸಲಹೆ ನೀಡುವವರಲ್ಲ. ಆ ಆಸ್ಪತ್ರೆಯೂ ಈತನಕ ಯಾವ ಕಪ್ಪು ಚುಕ್ಕೆಯೂ ಇಲ್ಲದೆ ಉತ್ತಮ ಸೇವೆ ನೀಡುತ್ತ ಬಂದಿರುವಂಥದ್ದು. ಅದೂ ಅಲ್ಲದೆ ಆಸ್ಪತ್ರೆಯ ಎಂ. ಡಿ. ಡಾಕ್ಟರ್ ಸಂದೀಪ್ ಕುಮಾರ್ ಕೂಡಾ ಇವರ ಹಳೆಯ ಪರಿಚಯದವರಂತೆ. ಹಾಗಾಗಿ ಮಗಳ ಡಿಸ್ಚಾರ್ಜ್ ದಿನ ಬಿಲ್ಲಿನಲ್ಲಿ ಹತ್ತು ಪರ್ಸೆಂಟ್ ರಿಯಾಯ್ತಿಯನ್ನೂ ಕೊಟ್ಟಿದ್ದರಲ್ಲ! ಅದನ್ನೆಲ್ಲ ಯೋಚಿಸಿದ ಮೇಲೆ ನಾವಿಬ್ಬರೂ ಪಶ್ಚಾತ್ತಾಪಪಟ್ಟಿದ್ದೆವು. ಹಾಗಾದರೆ ಆವತ್ತು ಹಾಗೆಲ್ಲ ನಡೆದದ್ದಕ್ಕೆ ಕಾರಣ ನಾಗದೋಷವೇ ಇವಿರಬೇಕು! ಅದಾದ ಮೇಲೆ ಇನ್ನೊಂದು ಅನಾಹುತವೂ ನಡೆಯಿತ್ತಲ್ಲ. ಆ ನಾಗರಹಾವು ಮೊದಲ ಸಲ ಬಂದು ಕುಳಿತ ಜಾಗದಲ್ಲಿಯೇ ಅಲ್ಲವಾ ತಾನಂದು ಕಾಲು ಜಾರಿ ಬಿದ್ದು ಕೈಮುರಿದುಕೊಂಡಿದ್ದು! ಇಲ್ಲದಿದ್ದರೆ ಆ ಬಚ್ಚಲುಕೋಣೆಯಲ್ಲಿ ತಾನೊಂದು ಸಾವಿರ ಸಲವಾದರೂ ಓಡಾಡಿದ್ದವಳು ಆವತ್ತು ಒಮ್ಮೆಲೇ ಕುಲೆಸೊಪ್ಪು ಮುಟ್ಟಿದವಳಂತೆ ಬಿದ್ದುಬಿಡುವುದೆಂದರೇನು?

   ಆದರೆ ನನಗಾಕ್ಷಣವೇ ಮನಸ್ಸಿಗೇನೋ ಕೆಟ್ಟದು ಹೊಳೆದಿತ್ತು. ಅದನ್ನು ಇವರಲ್ಲಿ ಹೇಳಿದ್ದಕ್ಕೆ ಇವರು, ‘ಅಯ್ಯೋ ದೇವರೇ…! ಎಣ್ಣೆ ಪಸೆಗೋ, ಸೋಪಿನ ನೊರೆಗೋ ಕಾಲಿಟ್ಟು ಜಾರಿ ಬಿದ್ದುಬಿಟ್ಟಿದ್ದಿಯಷ್ಟೆ. ಸ್ವಲ್ಪ ವಾಸ್ತವವಾಗಿ ಯೋಚಿಸುವುದನ್ನು ಕಲಿ ಮಾರಾಯ್ತೀ…!’ ಅಂತ ರಾಗ ಎಳೆದರು. ಅಂದರೆ ನಾನೇನು ಎಣ್ಣೆಯನ್ನು ಕಾಣದವಳೇ ಅಥವಾ ಪ್ರಪಂಚ ಜ್ಞಾನವೇ ಇಲ್ಲದವಳು ಅಂತ ಇವರ ಮಾತಿನರ್ಥವಾ? ಇರಲಿ, ಅದೂ ಹಾಗಿರಲಿ. ಈಗ ಇವರ ಕಥೆಗೇ ಬರುವ. ಹೆಚ್ಚುಕಮ್ಮಿ ಮೂವತ್ತು ವರ್ಷಗಳಿಂದಲೂ ಇವರು ಸ್ಕೂಟರ್ ಓಡಿಸುತ್ತಿದ್ದವರಲ್ಲವ? ಹಾಗಾದರೆ ಹೋದ ತಿಂಗಳು ಕಾಟು ನಾಯಿಗಳ ಹಿಂಡೊಂದು ಅಡ್ಡ ಬಂತೆಂದು ಹೇಳಿ ಅವನ್ನು ತಪ್ಪಿಸಲು ಹೋಗಿ ಚರಂಡಿಗೆ ಬಿದ್ದು ಮೈಕೈಯೆಲ್ಲ ಗಾಯ ಮಾಡಿಕೊಂಡು ಬಂದರಲ್ಲ ಆವಾಗಲೂ ಅದೇಕೆ ಹಾಗಾಯಿತು ಅಂತ ಇವರಿಗೆ ತಿಳಿಯಲೇ ಇಲ್ಲ! ಸರಿ ಅದನ್ನೂ ಬಿಟ್ಟುಬಿಡುವ. ಆದರೆ ಇಷ್ಟು ತಿಂಗಳು ಮೊದಲ ವಾರದಲ್ಲೇ ಕೈ ಸೇರುತ್ತಿದ್ದ ಇವರ ಪೆನ್ಶನ್ ಹಣವು ಈ ಸಲ ಎರಡು ತಿಂಗಳಾದರೂ ಯಾಕೆ ಬರಲಿಲ್ಲ? ಎಂದು ನಾನು ಕೇಳಿದ್ದಕ್ಕೆ ಅದಕ್ಕೂ ಇವರದ್ದೊಂದು ಸಬೂಬು ಇತ್ತೇಇತ್ತು. ‘ನರೇಂದ್ರ ಮೋದಿಯವರ ಕಪ್ಪುಹಣ ನಿವಾರಣಾ ಕಾರ್ಯಚರಣೆಯಿಂದಾಗಿಯೇ ಈ ಸಲ ಪೆನ್ಶನ್ ಎಲ್ಲರಿಗೂ ಸ್ವಲ್ಪ ತಡವಾಗಿ ಬಂದಿದೆ ಮಾರಾಯ್ತೀ!’ ಅಂತ. ಆಯ್ತು ಅದನ್ನೂ ಬದಿಗಿಡುವ. ಆದರೆ ನಾನು ಜೀವಮಾನದಲ್ಲೇ ಎಂದೂ ಕಂಡಿರದಂಥ ಆ ಹಾಳು ಹುಳಕಜ್ಜಿ ಯಾಕೆ ನನ್ನನ್ನೇ ಅಮರಿಕೊಂಡಿತು?

‘ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಅಥವಾ ಜಾಸ್ತಿ ಟೆನ್ಷನ್ ಮಾಡಿಕೊಳ್ಳುವವರಿಗೆ ಚರ್ಮದ ಕಾಯಿಲೆಗಳು ಬರೋದು ಸಾಮಾನ್ಯನಮ್ಮಾ. ಹದಿನೈದು ದಿನದ ಔಷಧಿ ಬರೆದುಕೊಡುತ್ತೇನೆ. ತೆಗೆದುಕೊಂಡರೆ ಎಲ್ಲಾ ವಾಸಿಯಾಗುತ್ತೆ!’ ಅಂತ ಆ ಚರ್ಮರೋಗದ ಡಾಕ್ಟರ್ ರಾಜಾರಾಮರು ಎಷ್ಟು ಸಲೀಸಾಗಿ ಹೇಳಿಬಿಟ್ಟರು. ಆದರೆ ಅವರ ಔಷಧಿ ತೆಗೆದುಕೊಂಡರೂ ಅದಿನ್ನೂ ಪೂರ್ತಿಯಾಗಿ ವಾಸಿಯಾಗಲಿಲ್ಲ ಯಾಕೆ? ಎಲ್ಲವೂ ನಾವಂದುಕೊಂಡಂತೆಯೇ ಇರುತ್ತದಾ…? ಹಾಗಿದ್ದರೆ ದೈವ, ದೇವರುಗಳೆಲ್ಲ ಯಾಕೆ ಬೇಕಿತ್ತು ಜನರಿಗೆ? ನಮ್ಮಿಂದ ತಿಳಿದೋ ತಿಳಿಯದೆಯೋ ಅನ್ಯಾಯ, ಅಪಚಾರಗಳು ನಡೆದವಾದರೆ ಅದನ್ನು ತಿಳಿಸಲೂ ನಾಗನಂಥ ಶಕ್ತಿಗಳು ನನಗಾದಂಥ ತೊಂದರೆ, ಅಪಶಕುನಗಳನ್ನು ತಂದೊಡ್ಡಿರಬಹುದಲ್ಲವಾ? ಇವರ ವಾಸ್ತವಕ್ಕೆ ಬೆಂಕಿಬಿತ್ತು…! ಎಂದು ಗಂಡನ ಮೇಲೆಯೇ ಕೋಪಿಸಿಕೊಂಡ ಸುಮಿತ್ರಮ್ಮ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಸಹಜವಾಗಿ ಕಾಣಿಸಿಕೊಳ್ಳುವಂಥ ಸಾಮಾನ್ಯ ಸಮಸ್ಯೆಗಳನ್ನೂ ತಮ್ಮದೇ ದೃಷ್ಟಿಕೋನದಿಂದ ನೋಡುತ್ತ ತೀವ್ರ ಆತಂಕಕ್ಕೊಳಗಾದರು. ಆದ್ದರಿಂದ, ಇಲ್ಲ ಇಲ್ಲ. ವಿಷಯ ಇವರೆಣಿಸಿದಷ್ಟು ಸುಲಭದ್ದೇನಲ್ಲ. ಇದನ್ನೆಲ್ಲ ಯೋಚಿಸಿದರೆ ನನ್ನ ಮನೆಯಲ್ಲಿ ಸದ್ಯದಲ್ಲೇ ಏನಾದರೊಂದು ದುರ್ಘಟನೆ ನಡೆಯಲಿಕ್ಕಿದೆ ಮತ್ತದರ ಮುನ್ಸೂಚನೆಯೇ ಇಲ್ಲಿವರೆಗೆ ನಡೆದ ಘಟನೆಗಳು ಅಂತ ಖಚಿತವಾಗುತ್ತದೆ. ಅಯ್ಯಯ್ಯೋ ದೇವರೇ…! ಏನಾದರೊಂದು ಆಗುವುದಕ್ಕಿಂತ ಮುಂಚೆಯೇ ಈ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಕೊನೆಗಾಲದಲ್ಲೂ ನೆಮ್ಮದಿಯಿಂದ ಬದುಕಲಿಕ್ಕಾಗದು! ಎಂದುಕೊಂಡು ಇನ್ನಷ್ಟು ವಿಚಲಿತರಾದರು. ಮರುಕ್ಷಣ ಅವರಿಗೆ ಆವತ್ತು ಶೀಂಬ್ರಗುಡ್ಡೆಯ ನಾಗಬನ ಜೀರ್ಣೋದ್ಧಾರದ ಹೇಳಿಕೆ ನೀಡಲು ಬಂದಿದ್ದ ಶಂಕರ, ಏಕನಾಥ ಗುರೂಜಿಯ ಶಕ್ತಿ ಸಾಮರ್ಥದ ಬಗ್ಗೆ ಗುಣಗಾನ ಮಾಡಿದ್ದು ತಟ್ಟನೆ ನೆನಪಾಯಿತು. ಅವರು ಕೂಡಲೇ ಅವನಿಗೆ ಕರೆ ಮಾಡಿ ಗುರೂಜಿಯ ವಿಳಾಸ ತಿಳಿದುಕೊಂಡ ನಂತರ ತುಸು ಗೆಲುವಾದರು.

(ಮುಂದುವರೆಯುವುದು)

************************

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

Leave a Reply

Back To Top