ಪಯಣದ ಪ್ರಸಂಗಗಳು..

ಪ್ರಬಂಧ

ಪಯಣದ ಪ್ರಸಂಗಗಳು..

ಸಮತಾ.ಆರ್

Travelling in KSRTC bus? Enjoy free wi-fi

ನಾನು ವೃತ್ತಿಯನ್ನು ಪ್ರಾರಂಭಿಸಿದ ಮೊದಲ ಶಾಲೆ ಕೊಡಗಿನ ಒಂದು ಹಳ್ಳಿಯಲ್ಲಿತ್ತು.ಕೊಡಗು ಅಂದ ಮೇಲೆ ಹೇಳಬೇಕೇ!ಸುಂದರ ಹಸಿರು ಪರಿಸರದ ಕಾಫೀ ತೋಟಗಳ ಮಧ್ಯೆ,ವಿಶಾಲವಾದ ಕೈತೋಟ,ಆಟದ ಮೈದಾನಗಳ , ಹಳೆಯ ಕಾಲದ,ಯು ಆಕಾರದ ಒಂದು ಸುಂದರ ಹೆಂಚಿನ ಕಟ್ಟಡದ ಶಾಲೆ ಈಗಲೂ ನನಗೆ ಅಚ್ಚುಮೆಚ್ಚು.ನಾವು ವಾಸವಿದ್ದ ಕುಶಾಲನಗರದಿಂದ ಸುಮಾರು ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿದ್ದ ಶಾಲೆಗೆ ಹೋಗಿ ಬರಲು ಇದ್ದ ವಾಹನ ಸೌಕರ್ಯ ಅಂದರೆ ಖಾಸಗಿ ಬಸ್ ಗಳದ್ದೆ.ಸ್ಕೂಟಿಯಲ್ಲಿ ಓಡಾಡಲು ದೂರ ಅಂತ ಹೇಳಿ ನಾನು ಮತ್ತು ನನ್ನ ಸಹೋದ್ಯೋಗಿ ಗಳೆಲ್ಲ ಈ ಖಾಸಗಿ ಬಸ್ ಅವಲಂಬಿಗಳೇ.ಸಮಯಕ್ಕೆ ಸರಿಯಾಗಿ ಸಿಗುವ, ದರವೂ ಅತಿ ಎನಿಸದ ಈ ಬಸ್ ಗಳು ಕೊಡಗಿನ ಹಳ್ಳಿ ಹಳ್ಳಿ ಮೂಲೆಗಳನ್ನು ತಲುಪಿಸುವ ಉತ್ತಮ ಜನ ಸ್ನೇಹಿ ಸಂಪರ್ಕ ವ್ಯವಸ್ಥೆಗಳು.

ಮನೆಯಿಂದ ಶಾಲೆಗೆ ನಲವತ್ತು ನಿಮಿಷದ ಪ್ರಯಾಣ ಕಣ್ಮುಚ್ಚಿ ಬಿಡುವುದರಲ್ಲಿ ಸಾಗಿ ಬಿಡುತ್ತಿತ್ತು.ನಮ್ಮ ಶಾಲೆಯ ದಾರಿಯಲ್ಲಿ ಬರುವ ,ಮುಂದಕ್ಕೂ ಇರುವ,ಎಷ್ಟೊಂದು ಇತರೆ ಹಳ್ಳಿಗಳ ಶಾಲೆಗಳ ಟೀಚರ್ ಗಳು ಹೆಚ್ಚು ಕಡಿಮೆ ನಮ್ಮ ಬಸ್ ನಲ್ಲೇ ಇರುತ್ತಿದ್ದರು.ಸಿಗೋ ನಲವತ್ತು ನಿಮಿಷದಲ್ಲೇ ಹರಟೆ ನಗು, ಮಾತು ತುಂಬಿ ಹೋಗಿ ಬಸ್ ನಲ್ಲೆಲ್ಲ ಕಲರವವೇ.ಕಂಡಕ್ಟರ್ ಡ್ರೈವರ್ ಗಳಿಗೆಲ್ಲ ಕಾಲೆಳೆದು ಕೊಂಡು,ಇಲಾಖೆಯ ಸುದ್ದಿ,ಸ್ನೇಹಿತರ ಬಗೆಗಿನ ಗಾಸಿಪ್ಗ ಳಲ್ಲಿ ಸಮಯ ಜಾರಿದ್ದೇ ಗೊತ್ತಾಗುತ್ತಿರಲಿಲ್ಲ.

ಸಾಗುವ ದಾರಿಯು ಕೂಡ ಎಷ್ಟೊಂದು ಸುಂದರ ಎಂದರೆ,ಮಾತು ಬೇಸರವಾದರೆ ,ಕಿಟಕಿಯಾಚೆ ನೊಡುತ್ತಾ ಕುಳಿತರೆ ಸಾಕು ಶಾಲೆ ತಲುಪಿದ್ದು ಗೊತ್ತಾಗುತ್ತಿರಲಿಲ್ಲ.ರಸ್ತೆಯಿಂದ ಒಂದು ನೂರು ಮೀಟರ್ ದೂರದಲ್ಲೇ ಹರಿಯುವ ಕಾವೇರಿ ಮಳೆಗಾಲದಲ್ಲಿ ಇನ್ನೂ ಸಮೀಪಕ್ಕೆ ಬಂದು,ಬಸ್ ಜೊತೆಗೆ ರನ್ನಿಂಗ್ ರೇಸ್ ಓಡಿದಂತೆ ಅನ್ನಿಸುತ್ತಿತ್ತು.ಅತಿ ಮಳೆಯ ಕೊಡಗಿನಲ್ಲಿ ,ಮಳೆಗಾಲದಲ್ಲಿ,ಗುಡ್ಡಗಾಡು ಪ್ರದೇಶ ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು,ಶಿಕ್ಷಕರು ಶಾಲೆ ತಲುಪಲು ಕಷ್ಟವಾಗುವುದರಿಂದ ಒಂದೆರಡು ವಾರ ಶಾಲೆಗಳಿಗೆ ಮಳೆ ರಜೆ ಕೊಟ್ಟು ಬಿಡುತ್ತಾರೆ. ಅಂತಹ ಭಾರೀ ಮಳೆಯ ದಿನಗಳಲ್ಲಿ ನಮ್ಮ ಶಾಲೆಯ ದಾರಿಯ ಒಂದು ಸೇತುವೆ ಕೆಳಗಿನ ಗದ್ದೆಯಲ್ಲಿ ನೀರು ನಿಲ್ಲಲು ಶುರುವಾಗುತ್ತಿತ್ತು.ಗದ್ದೆಯಲ್ಲಿ ನೀರು ಒಂದು ಮಟ್ಟ ತಲುಪಿದ ತಕ್ಷಣ ನನ್ನ ಸಹೋದ್ಯೋಗಿ ಯೊಬ್ಬರು,”ಓಹ್,ನಾಳೆಯಿಂದ ಶಾಲೆಗೆ ರಜೆ, ಮಳೆ ಜಾಸ್ತಿಯಾಯ್ತು,’ ಅಂತ ಘೋಷಿಸಿ ಬಿಡುತ್ತಿದ್ದರು.ಅವರ ಭವಿಷ್ಯ ಹೆಚ್ಚು ಕಡಿಮೆ ಯಾವಾಗಲೂ ಸರಿಯಾಗಿ,ನಾವೆಲ್ಲ ಮಳೆಗಾಲ ಶುರುವಾದಾಗ ಗದ್ದೆಯಲ್ಲಿ ನೀರು ನೋಡೋದೇ ಆಗ್ತಿತ್ತು.

ಹೆಚ್ಚು ಕಡಿಮೆ ನನ್ನ ಎಲ್ಲಾ ಸಹೋದ್ಯೋಗಿಗಳು ಕುಶಾಲ ನಗರದಿಂದಲೆ ಹೊರಡೋರು. ನಾವು ಹಿಡಿತ್ತಿದ್ದ ಬಸ್ ಗಳು ಬಹುತೇಕ ಕುಶಾಲ ನಗರ ದಿಂದಲೇ ಪ್ರಯಾಣ ಪ್ರಾರಂಭಿಸುವವೇ ಆದ್ದರಿಂದ ಬಸ್ ನಿಲ್ದಾಣಕ್ಕೆ ಖಾಲಿಯೇ ಬರುತ್ತಿದ್ದವು.ಆಗ ಯಾರು ಮೊದಲು ಬಸ್ ಹತ್ತುತ್ತಾರೋ ಅವರು ಉಳಿದವರಿಗೆ ಸೀಟ್ ಹಿಡಿತಿದ್ರು. ಬರೀ ಸಹೋದ್ಯೋಗಿಗಳಿಗೆ ಮಾತ್ರವಲ್ಲ ಅಕ್ಕ ಪಕ್ಕದ ಶಾಲೆಯ ಗೆಳತಿಯರಿಗೆ ಕೂಡ ಸೀಟ್ ಬೇಡವೇ? ಹಾಗಾಗಿ ತಮ್ಮ ಬ್ಯಾಗ್,ಕೊಡೆ ಕರ್ಚೀಫ್,ಪುಸ್ತಕ,ನ್ಯೂಸ್ ಪೇಪರ್ ಎಲ್ಲಾ ಇರೋ ಬರೋ ಸೀಟ್ ಗಳಿಗೆಲ್ಲ ಹಾಕಿ ಕಾಯೋದೆ.ಯಾರಾದರೂ ಜಗಳಕ್ಕೆ ಬಂದರೆ,”ನಾವು ದಿನಾ ಓಡಾಡೋರು, ಗೊತ್ತಾ”ಅನ್ನೋ ದಬ್ಬಾಳಿಕೆ ಬೇರೆ.ಒಮ್ಮೆ ಹೀಗೆ ಹಿಡಿದಿದ್ದ ಸೀಟುಗಳಲ್ಲಿ ಒಂದನ್ನು,ಅದರ ಮೇಲಿಟ್ಟಿದ್ದ ಕೊಡೆ ತೆಗೆದು,ಶಾಲಾ ಭೇಟಿಗೆ ಹೊರಟಿದ್ದ ನಮ್ಮ ಇಲಾಖೆಯ ಆಫೀಸರ್ ಒಬ್ಬರಿಗೆ ದಯಪಾಲಿಸಿದೆವು. ಆ ಮನುಷ್ಯ ಕುಳಿತುಕೊಳ್ಳುತ್ತಾ,”ಯಾಕ್ರಮ್ಮ ಇಷ್ಟೊಂದು ಕಷ್ಟ ಪಡ್ತಿರಾ?ಎಲ್ರೂ ಹೆಗಲ ಮೇಲೊಂದು ಟವಲ್ ಹಾಕ್ಕೊಂಡು ಬಂದ್ ಬಿಡಿ. ಇಡೀ ಬಸ್ ಸೀಟ್ ಎಲ್ಲಾ ಸುಲಭಕ್ಕೆ ಹಿಡಿಬಹುದು ಅಂತ ಪುಕ್ಕಟ್ಟೆ ಸಲಹೆ ನೀಡಿ ಹಲ್ಲು ಕಿರಿದಾಗ ನಮಗೂ ನಗು.

ನಮ್ಮ ಶಾಲೆಯ ಹಿಂದಿನ ಸ್ಟಾಪ್ ನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗೆಳತಿಯೊಬ್ಬಳಿಗೆ ಮಾತು ಆಡಿದಷ್ಟೂ ಮುಗಿಯದು.ಸಿಗೋ ಇಪ್ಪತ್ತು ನಿಮಿಷದಲ್ಲೇ,ತನ್ನ ಮನೆ,ಶಾಲೆ,ಗಂಡ ಮಕ್ಕಳು,ಊರ ಉಸಾಬರಿ ಎಲ್ಲಾ ಗಳಹಬೇಕು.,”ಇಷ್ಟೊಂದು ಸರಾಗವಾಗಿ ನಾನ್ ಸ್ಟಾಪ್ ಬಸ್ ನಂತೆ ಅದು ಹೇಗೆ ಮಾತನಾಡುತ್ತಾಳೋ,”ಅನ್ನಿಸಿ ನನಗಂತೂ ಆಶ್ಚರ್ಯವೋ ಆಶ್ಚರ್ಯ. ಅದೂ ಒಂದು ಕಲೆ ಬಿಡಿ.ಮಾತನಾಡಲು ಅವಳಿಗೆ ಪರಿಚಿತರೇ ಸಿಗಬೇಕು ಅಂತಾ ಏನಿರಲಿಲ್ಲ.ಪಕ್ಕದಲ್ಲಿ ಒಂದು ಮನುಷ್ಯ ಪ್ರಾಣಿ ಕೂತಿದ್ದರಾಯಿತು ಅಷ್ಟೇ .ಒಮ್ಮೆ ಹೀಗೆ ನನ್ನ ಪಕ್ಕ ಕೂತವಳು ಶುರು ಹಚ್ಚಿ ಕೊಂಡಳು.ನಮ್ಮಿಂದ ಒಂದೆರಡು ಸೀಟ್ ಹಿಂದೆ ಕೂತಿದ್ದ ಅವರ ಶಾಲೆ ಹೆಚ್ ಎಂ “ನೋಡಿ ,ನಮ್ಮ ಮೇಡಂ ಬಾಯಿ ಈಗ ತೆರೆದಿರೋದು ಇನ್ನು ಬಸ್ ಇಳಿಬೇಕಾದ್ರೆನೆ ಮುಚ್ಚೋದು.ಪಾಪ ಸಮತಾ ಮೇಡಂ ಸುಮ್ಮನೆ ತಲೆಯಾಡಿಸಿಕೊಂಡು ಕೂತಿರಬೇಕು,”ಅಂತ ತಮ್ಮ ಪಕ್ಕ ಕುಳಿತ ಅವರ ಶಾಲೆಯ ಇನ್ನೊಬ್ಬ ಶಿಕ್ಷಕರಿಗೆ ಹೇಳಿದ್ದಾರೆ.ಅದು ಇವಳ ಕಿವಿಗೂ ತಲುಪಿ,ಮಾರನೇ ದಿನ ನನ್ನ ಪಕ್ಕ ಕೂತವಳು,”ನೋಡಿ ಮೇಡಂ,ನನ್ನ ಬಾಯಿ,ನನ್ನ ಮಾತು,ಇವರಿಗೇನು ಕಷ್ಟ,”ಎಂದು ಇಳಿಯುವವರೆಗು ಬೈದಿದ್ದೂ ಬೈದಿದ್ದೆ.

ಇನ್ನು ಖಾಸಗಿ ಬಸ್ ಗಳಲ್ವಾ, ದರ ಹೆಚ್ಚು ಕಡಿಮೆ ಚೌಕಾಸಿ ಮಾಡಿ ದಿನಾ ಓಡಾಡೋರು ಕಡಿಮೆ ಮಾಡಿಸಿ ಕೊಳ್ಳುತ್ತಿದ್ದೋ. ಆದ್ರೂ ಚಿಲ್ಲರೆ ವಿಷಯಕ್ಕೆ ಕಂಡಕ್ಟರ್ ಗಳ ಹತ್ರ ಜಗಳ ಕಾಯುವುದು ಕೂಡ ಒಂದು ಮನ ರಂಜನೆ.ನಮ್ಮ ಶಾಲೆಯ ಒಬ್ಬ ಹಿರಿಯ ಶಿಕ್ಷಕರಿಗೂ ಒಬ್ಬ ಹುಡುಗ ಕಂಡಕ್ಟರ್ ಗೂ ಹತ್ತಿದ ಜಗಳ ಹರಿಯುತ್ತಿರಲಿಲ್ಲ.”ನಾನು ಕುಶಾಲ ನಗರಕ್ಕಿಂತ ಒಂದು ಸ್ಟಾಪ್ ಹಿಂದೆ ಇಳಿತಿನಿ,”ಅಂತ ಹೇಳಿ ದುಡ್ಡು ಮಾಮೂಲಿಗಿಂತ ಕಡಿಮೆ ಕೊಡೋರು. ಅವನೋ ಗೊಣಗಿಕೊಂಡು ಸುಮ್ಮನಾಗುತ್ತಿದ್ದ.ಒಂದು ದಿನ ಅವರು ಬಂದಿಲ್ಲದಿದ್ದಾಗ,”ಎಲ್ಲಿ ನಿಮ್ಮ ಅಜ್ಜಿ ಟೀಚರ್ “ಅಂತ ಕೇಳಿದ್ದಕ್ಕೆ ನಾವು”ಅವ್ರು ಇವತ್ತು ರಜೆ “ಅಂತ ಹೇಳಿ ಸುಮ್ಮನಾಗಿದ್ದೆವು. ನಮಗೇನೂ ಅವನು ಕೇಳಿದ್ದು ವಿಶೇಷ ಅನ್ನಿಸಿರಲಿಲ್ಲ.ಆದರೆ ಮಾರನೇ ದಿನ ಅವರ ಕಿವಿಗೆ”ಅಜ್ಜಿ ಟೀಚರ್”ಅನ್ನೋ ಪದ ಬಿದ್ದು ಆ ತಾಯಿ ಉಗ್ರ ಮಾಂಕಾಳಿಯಾಗಿ,”ಮೊದ್ಲು ಸರಿಯಾಗಿ ಮಾತಾಡೋದು ಕಲ್ತುಕೊ, ಯಾರನ್ನು ನೀನು ಅಜ್ಜಿ ಅನ್ನೋದು,ಇನ್ನೊಂದ್ ಸಾರಿ ಅಜ್ಜಿ ಅಂದ್ರೆ ನಿಮ್ಮ ಓನರ್ ಗೆ ಹೇಳಿ ಕೆಲ್ಸದಿಂದಾ ತೆಗೆಸ್ತಿನಿ ಅಷ್ಟೇ” ಎಂದು ಅವನಿಗೆ ಚೆನ್ನಾಗಿ ಗಾಳಿ ಬಿಡಿಸಿದರು.ಆತ ಹಲ್ಲು ಕಿರಿದು ಸುಮ್ಮನಾದ.ನಾವೆಲ್ಲ ಕಷ್ಟಪಟ್ಟು ಹಲ್ಲು ಕಚ್ಚಿ ನಗೆ ತಡೆದುಕೊಂಡೆವು.ಇಲ್ಲದಿದ್ದರೆ ನಮಗೂ ಗ್ರಾಚಾರ ಬಿಡಿಸುತ್ತಿದ್ದರು.

ಶಾಲೆಯಿಂದ ಹಿಂದಿರುಗುವಾಗ ಹಿಡಿವ ಬಸ್ ನ ಓನರ್ ಬಸ್ ನಲ್ಲಿ ಒಂದು ಸೌಂಡ್ ಸಿಸ್ಟಮ್ ಹಾಕಿಸಿ,ದಿನವೂ ಹಾಡುಗಳು ಬೇಕೋ ಬೇಡವೋ ಕೇಳಿಸಿಕೊಂಡು ಹೋಗಬೇಕಿತ್ತು.ಯಾವ ಹಾಡು ಅನ್ನೋದು ಕಂಡಕ್ಟರ್ ನ ಮರ್ಜಿ.ಒಂದು ದಿನ ನಾವೆಲ್ಲ ಬಸ್ ಹತ್ತಿದಾಕ್ಷಣವೆ,”ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೋಬಾನ…”ಅನ್ನೋ ರವಿಚಂದ್ರನ್ ಹಾಡು ಶುರುವಾಗಿ ಬಿಟ್ಟಿತು.ತೊಗೊ,ನಮ್ಮ ಅಜ್ಜಿ ಟೀಚರ್ “ನಿನಗೇನು ಬುದ್ಧಿ ಸ್ವಯ ಇಲ್ಲವಾ,ಒಂದು ಪಬ್ಲಿಕ್ ಬಸ್ ನಲ್ಲಿ ಹಾಕೋ ಹಾಡ ಇದು,ಮಾನ ಮರ್ಯಾದೆ ಉಂಟಾ ನಿಂಗೆ”ಅಂತಾ,ಕಂಡಕ್ಟರ್ ಗೆ ಬೈಯ್ಯೋಕೆ ಶುರು ಮಾಡಿ,ಅವನು ಓಡಿ ಹೋಗಿ ತಕ್ಷಣವೇ ಹಾಡು ನಿಲ್ಲಿಸಿಬಿಟ್ಟ.ಸ್ವಲ್ಪ ದಿನಗಳ ನಂತರ ಟಿವಿ ಬೇರೆ ಒಂದಲ್ಲ ಅಂತ ಎರಡು, ಬಸ್ ನ ಮುಂಭಾಗದಲ್ಲಿ, ಎಡಗಣ್ಣಿಗೊಂದು, ಬಲಗಣ್ಣಿಗೊಂದು,ಅನ್ನೋ ಹಾಗೆ ಎರಡೂ ಬದಿ ಹಾಕಿಸಿ,ದಿನವೂ ಪುಕ್ಕಟೆ ಪಿಚ್ಚರ್ ನೋಡುವ ಭಾಗ್ಯ ನಮಗೆಲ್ಲಾ.ಒಂದು ದಿನ ಬಸ್ ಹತ್ತಿ ನೋಡಿದರೆ ಬಸ್ ನ ಜನ ಮಾತು ಕಥೆ ನಿಲ್ಲಿಸಿ ಕಣ್ಣು ಬಾಯಿ ಬಿಟ್ಟುಕೊಂಡು ಟಿವಿ ಕಡೆಯೇ ನೋಡುತ್ತ ಕುಳಿತು,ಬಸ್ ನಲ್ಲೆಲ್ಲ ಸದ್ದು ಗದ್ದಲ ಏನೂ ಇಲ್ಲ.”ಅದಿನ್ನೆಂತಾ ಪಿಚ್ಚರಪ್ಪಾ”ಅಂದುಕೊಂಡು ನೋಡಿದರೆ,”ಜಿ, ಏ,ಜೆ, ಏ,ಗಜ,”ಅಂತ ಮಸ್ತ್ ಐಟಂ ಹಾಡಿಗೆ ಹುಡುಗಿ ಕುಣಿತಿದ್ದಾಳೆ! ನಮ್ಮ ಅಜ್ಜಿ ಟೀಚರ್ ಇನ್ನೊಂದ್ ರೌಂಡ್ ಕಂಡಕ್ಟರ್ ಜೊತೆ ಜಗಳಕ್ಕೆ ಸಿದ್ಧರಾಗುವಾಗ ನಾವೆಲ್ಲ,”ಹೋಗ್ಲಿ ಬಿಡಿ ಮೇಡಂ,ಎಷ್ಟು ದಿನ ಅಂತ ಹೇಳೋದು”ಎಂದು ಸುಮ್ಮನಿರಿಸಿದೆವು.

ಕಂಡಕ್ಟರ್ ಹೀಗೆ ಜನರೊಂದಿಗೆ ಹೆಚ್ಚಿನ ಸಂಪರ್ಕದಲ್ಲಿದ್ದರೆ,ಡ್ರೈವರ್ ಗೆ ಸುಮ್ಮನೆ ರಸ್ತೆ ನೋಡಿಕೊಂಡು ಗಾಡಿ ಬಿಡೋದೇ ಕೆಲಸ.ತಾನಾಯಿತು ತನ್ನ ಸ್ಟೇರಿಂಗ್ ವೀಲಾಯಿತು ಅನ್ನೋ ಹಾಗೆ ಇರೋರೆ ಜಾಸ್ತಿ.ಆದರೆ ಬೆಳಿಗ್ಗೆ ಮಾಮೂಲಿಗಿಂತ ಸ್ವಲ್ಪ ಬೇಗ ಹೊರಡುವ ಬಸ್ ನಲ್ಲಿ ಒಬ್ಬ ಆರಡಿ ಎತ್ತರದ,ಕಿವಿಗೆ ಒಂಟಿ ಹಾಕಿಕೊಂಡಿದ್ದ,ದಿಲ್ದಾರ್ ರಸಿಕ ಮಹಾಶಯ ಡ್ರೈವರ್ ಇದ್ದ. ಹೇಗೂ ಹೆಂಗಸರು ಬಸ್ಸಿನ ಮುಂಭಾಗ ಹತ್ತಿ,ಡ್ರೈವರ್ ಆಸುಪಾಸು ಇರುವ ಸೀಟ್ ಗಳಲ್ಲೇ ಕೂರುವುದಲ್ಲವೇ, ಹಾಗಾಗಿ, ಹತ್ತೋ ಹೆಂಗಸರನ್ನೆಲ್ಲಾ ಮಾತನಾಡಿಸಿಕೊಂಡು,ಕಾಲೇಜು ಹುಡುಗಿಯರ ಚುಡಾಯಿಸಿಕೊಂಡು,ಹುಸಿನಗೆ ಬೀರುತ್ತಾ ಬಸ್ ಓಡಿಸೋನು.ಹಾಗಂತ ಕೆಟ್ಟವನು ಅಂತ ಏನೂ ಅಲ್ಲ ,ಓರ್ವ ನಿರುಪದ್ರವಿ ಫ್ಲರ್ಟ್ ಅಷ್ಟೇ. ಬೆಳ ಬೆಳಗ್ಗೆಯೇ ಕಾಫೀ ತೋಟಗಳಿಗೆ ಕೆಲಸಕ್ಕೆ ಹೋಗೋ ಹೆಂಗಸರು, ಆ ದಾರಿಯಲ್ಲಿ ಹೊಸದಾಗಿ ಆಗಿದ್ದ ಒಂದು ಫುಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು, ದಿನಾ ಓಡಾಡುವ ಬೇರೆ ಬೇರೆ ಇಲಾಖೆಯ ಹೆಂಗಳೆಯರು,ಕಾಲೇಜು ಹುಡುಗಿಯರು, ಎಲ್ಲರನ್ನೂ ಮಾತನಾಡಿಸಿ ಕಾಲು ಎಳೆಯೋದೆ.ಯಾರೂ ಅದನ್ನು ಸೀರಿಯಸ್ ಆಗಿ ತೊಗೋತಿರಲಿಲ್ಲ. ಕೆಲವರು ಆತನ ಮಾತಿಗೆ ಮಾತು ಕೊಟ್ಟು ಬಸ್ ನಲ್ಲಿ ನಗೆಯೋ ನಗೆ.ಒಮ್ಮೆ ಶಾಲೆಯಿಂದ ಸ್ವಲ್ಪ ಬೇಗ ಹಿಂದಿರುಗುವಾಗ ಆತನ ಬಸ್ ಹಿಡಿಬೇಕಾಗಿ ಬಂತು.ಹತ್ತಿದಾಗ,”ಏನ್ ಮೇಡಂ,ಸ್ಕೂಲಿಗೆ ಚಕ್ಕರ್ ಹೊಡ್ದು ಹೋಗ್ತಿದಿರ!”ಎಂದು ಹಲ್ಲು ಕಿರಿದಾಗ ನಾನೂ ನಕ್ಕು ಸುಮ್ಮನಾದೆ.ಮುಂದೆ ಸಾಗುತ್ತ ಫುಡ್ ಫ್ಯಾಕ್ಟರಿ ಹತ್ತಿರವಾಗುವಾಗ ನೋಡಿದರೆ,ಅಲ್ಲಿಯ ಕೆಲಸಗಾರ ಹೆಂಗಸರೆಲ್ಲಾ ಫ್ಯಾಕ್ಟರಿ ಬಾಗಿಲ ಬಳಿ ಗುಂಪುಗೂಡಿ ನಿಂತಿದ್ದರು.ಅವರ ಗಮನ ರಸ್ತೆಯ ಕಡೆಗೇನ್ ಇರಲಿಲ್ಲ.ಆದರೆ ಈತ ಫ್ಯಾಕ್ಟರಿ ಹತ್ತಿರವಾಗುತ್ತಿದೆ ಎನ್ನುವಾಗ ಒಂದು ಹಾರ್ನ್ ಮಾಡಿದ ತಕ್ಷಣವೇ ,ಎಲ್ಲಾ ಹೆಂಗಸರು ಒಮ್ಮೆಲೇ ತಿರುಗಿ ಆತನಿಗೆ ಕೈ ಬೀಸಿದಾಗ ನನಗೆ ನಗು ತಡೆಯದಾಯಿತು.ಮುಂಬದಿ ಎಂಜಿನ್ ಹತ್ರ ಕೂತಿದ್ದ ಕ್ಲೀನರ್ ಹುಡುಗ ಬೇರೆ,”ಅಣ್ಣಾ,ನಿನ್ಹತ್ರ ಎಲ್ಲಾ ಅದೆಷ್ಟು ಚೆನ್ನಾಗಿ ಮಾತಾಡ್ತಾರೆ, ಅದೆಂಗಣ್ಣ,”ಎಂದು ಕೊರಗಿದಾಗ ನನಗೆ ಉಕ್ಕಿ ಬಂದ ನಗುವಿನಿಂದ ಸೀಟ್ನಿಂದ ಕೆಳಗೆ ನಾನು ಬೀಳದೆ ಇದ್ದದ್ದು ನನ್ನ ಪುಣ್ಯ. 

ಹೀಗೆ ಎಷ್ಟೋ ವರ್ಷ ಪ್ರಯಾಣದ ಆಯಾಸ ತಿಳಿಯದ ಹಾಗೆ ಆ ದಾರಿ ಸವೆಸಿದ ಬಳಿಕ ಆ ಶಾಲೆಯಿಂದ ವರ್ಗವಾಗಿ ಕುಶಾಲಗರದ ಸಮೀಪದ ಬೇರೆ ಶಾಲೆಗೆ ಬಂದೆ.ಇಲ್ಲಿಗೆ ಬಂದ ಬಳಿಕ ಸ್ವಂತಕ್ಕೆಂದು ಮನೆಯೊಂದನ್ನು ಕಟ್ಟಿಕೊಳ್ಳುವ ಆಸೆಯಾದಾಗ,ನಮ್ಮ ಮೂಲಸ್ಥಳವಾದ ಮೈಸೂರಿನಲ್ಲೇ ಮನೆ ಕಟ್ಟೋಣವೆಂದು ನಾವಿಬ್ಬರೂ ಅಳೆದು ಸುರಿದು ನಿರ್ಧರಿಸಿದ್ದಾಯಿತು.ಅದರಂತೆ ಮನೆ ಕಟ್ಟಿಕೊಂಡು ಮೈಸೂರಿನಲ್ಲೇ ವಾಸ ಮಾಡಲು ಪ್ರಾರಂಭಿಸಿದೆವು.ನನ್ನ ಗಂಡನೇನೋ ಮೈಸೂರಿನಲ್ಲೇ ಕೆಲಸ ಹುಡುಕಿಕೊಂಡರೆ,ನನಗೆ ವರ್ಗಾವಣೆ ಸುಲಭವಾಗಿ ಸಿಗದ ಕಾರಣ ಪ್ರತಿನಿತ್ಯವೂ ಪಯಣಿಸ ಬೇಕಾಗಿದೆ.

ಪ್ರತಿದಿನವೂ ಕುಶಾಲನಗರಕ್ಕೂ ಮೈಸೂರಿಗೂ ಎಂಬತ್ತು ಕಿಲೋಮೀಟರ್ ದೂರದ ನನ್ನ ಪ್ರಯಾಣ, ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲೇ.ಖಾಸಗಿ ಬಸ್ ಗಳ ಪ್ರಯಾಣ ನಿಂತೇ ಹೋಯಿತು.ಅದರ ಜೊತೆಗೆ ಪಯಣದಲ್ಲಿನ ಪುಕ್ಕಟ್ಟೆ ಹಾಡು, ಸಿನೆಮಾ ಭಾಗ್ಯ,ಸ್ನೇಹಿತರ ಜೊತೆಗಿನ ಹರಟೆ ಎಲ್ಲದಕ್ಕೂ ಬ್ರೇಕ್ ಬಿತ್ತು. ಇಷ್ಟರಲ್ಲಾಗಲೇ ಸ್ಮಾರ್ಟ್ ಫೋನ್ ಯಕ್ಷಿಣಿ ಧರೆಯಲ್ಲಿ ಅವತರಿಸಿ,ಎಲ್ಲರನ್ನೂ ತನ್ನ ಮಾಯಾ ಜಾಲದಲ್ಲಿ ಸೆರೆಹಿಡಿದು,ಪ್ರತಿಯೊಬ್ಬ ಪ್ರಯಾಣಿಕರೂ ತಮ್ಮದೇ ಆದ ಖಾಸಗಿ ಭ್ರಮಾಲೋಕದಲ್ಲಿ ತೇಲುವಂತೆ ಮಾಡಿರುವಾಗ,ಪಕ್ಕದಲ್ಲಿ ಕುಳಿತವರ ಜೊತೆ ಮಾತನಾಡಲು ಪುರುಸೊತ್ತು ಯಾರಿಗಿದೆ ಹೇಳಿ?

ಏನೋ ಹತ್ತು ನಿಮಿಷಕ್ಕೊಮ್ಮೆ ಮಡಿಕೇರಿ ಕಡೆಯ ಬಸ್ ಗಳು ಸಿಗುತ್ತವೆ. ನೇರ ದಾರಿ, ಬರೀ ಮೂರೇ ನಿಲ್ದಾಣಗಳು ದಾರಿಯಲ್ಲಿ,ಅಲ್ಲದೆ ರಸ್ತೆ ಕೂಡ ಚೆನ್ನಾಗಿ ಇರುವುದರಿಂದ ಪ್ರಯಾಣ ಇದುವರೆಗೂ ಅಷ್ಟೇನೂ ತ್ರಾಸದಾಯಕ ಅನ್ನಿಸಿಲ್ಲ.

 ನನ್ನ ಪರಿಚಿತರು,ಸ್ನೇಹಿತರು,ನೆಂಟರಿಷ್ಟರು, ಸಹೋದ್ಯೋಗಿಗಳು ಮಾತ್ರ”ಅಯ್ಯೋ ಪಾಪ, ಅಷ್ಟು ದೂರ ದಿನಾ ಓಡಾಡ್ತರೆ.”ಎಂದು ಕನಿಕರಿಸಿದರೂ,ನನಗೆ ಮಾತ್ರ,”ಹೌದಾ!ನಾನು ಅಷ್ಟೊಂದು ಕಷ್ಟ ಪಡ್ತಾ ಇದೀನಾ!”ಅನ್ನಿಸಿ ನಗೆ ಬರುತ್ತದೆ.

ಹಾಗಂತ ಬಹಳ ಆರಾಮಾಗಿ ಹೋಗಿ ಬರ್ತಾ ಇದ್ದೀನಿ ಅಂತಾ ಏನೂ ಇಲ್ಲ.ವಾರದ ಮೊದಲ ದಿನ ಇರುವ ಉಲ್ಲಾಸ,ಶಕ್ತಿ,ಶನಿವಾರದ ಹೊತ್ತಿಗೆ ಮಾಯವಾಗಿರುತ್ತದೆ.ಭಾನುವಾರ ಇಡೀ ದಿನ ಮಲಗಿ ಸುಧಾರಿಸಿಕೊಳ್ಳದಿದ್ದರೆ ಮತ್ತೆ ಮರುವಾರ ಕೆಲಸ ಮಾಡಲು ಆಗದು.

ದಿನವೂ ಪಯಣಿಸುವ ಏಕತಾನತೆ,ಬೇಸರವನ್ನು ಬಸ್ ನಲ್ಲಿ ಜರುಗುವ ಸಣ್ಣ ಪುಟ್ಟ ಸಂಗತಿಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡುತ್ತವೆ.

ಕೇಂದ್ರ ಬಸ್ ನಿಲ್ದಾಣದಿಂದ ಹೊರಡುವ ಬಸ್ ನಾನು ಹತ್ತುವ ಸ್ಟಾಪ್ ಗೆ ಬರುವಷ್ಟರಲ್ಲಿ ಪ್ರಯಾಣಿಕರು ತುಂಬಿಕೊಂಡು, ಒಮ್ಮೊಮ್ಮೆ ಸೀಟ್ ಸಿಗೋದಿಲ್ಲ.ಹಾಗಾಗಿ ಬಸ್ನಲ್ಲಿ ವಿಪರೀತ ರಷ್ ಇದ್ದಾಗ,ಸೀಟ್ ಎಲ್ಲಿ ಸಿಗಬಹುದು,ಮುಂದಿನ ಸ್ಟಾಪ್ ನಲ್ಲಿ ಯಾರು ಇಳಿಯಬಹುದು ಅಂತ ಹುಡುಕುವುದೇ ಆಗುತ್ತೆ.ಒಮ್ಮೊಮ್ಮೆಯಂತು ನಿಲ್ಲಲು ಆಗೋದೇ ಇಲ್ಲ ಅಂತ ಆದಾಗ ಎಲ್ಲಿ ಸಾಧ್ಯವೋ ಅಲ್ಲಿ ಕೂರುವುದೇ ಸೈ.ಎತ್ತಿ ಎತ್ತಿ ಹಾಕುವ ಹಿಂಬದಿಯ ಉದ್ದನೆಯ ಸೀಟ್,ಹಿಂದಿನ ಸೀಟ್ ನ ಬಳಿ ಇಟ್ಟು ಸಾಗಿಸುವ, ರಗ್ಗು,ಕಾರ್ಪೆಟ್,ಬೆಡ್ಶೀಟ್ ಗಳ ಬಂಡಲ್ ಗಳು,ದೂರದೂರಿನ ಪ್ರಯಾಣಿಕರ ಹೊಟ್ಟೆ ಉಬ್ಬರಿಸಿಕೊಂಡಿರುವ ದೊಡ್ಡ ದೊಡ್ಡ ಲಗ್ಗೇಜ್ ಬ್ಯಾಗ್ ಗಳು ಹೀಗೆ ಯಾವುದು ಕೂರಲು ಒಂದು ಸೀಟ್ ಥರ ಕಾಣುತ್ತೋ ಅದರ ಮೇಲೆ ಎಷ್ಟೋ ಜನರು ಕೂರೋದೆ. ಆ ಲಗ್ಗೇಜ್ ಗಳ ಓನರ್ ಗಳು ಗೊಣಗುವುದೂ ಅಪರೂಪವೇ.ಓಡುವ ಬಸ್ ನಲ್ಲಿ ನಿಲ್ಲುವ ಕಷ್ಟ ಎಲ್ಲರಿಗೂ ಗೊತ್ತಿರೋದೆ ಅಲ್ವಾ,ಹಾಗಾಗಿ ಬಹಳಷ್ಟು ಜನ ಸುಮ್ಮನಾಗುತ್ತಾರೆ.ಏನೂ ಸಿಗದೆ ಇದ್ದ ಪಕ್ಷದಲ್ಲಿ ಬಸ್ ನ ಮೆಟ್ಟಿಲು, ಎಂಜಿನ್ ಗಳನ್ನೂ ಬಿಡದೆ ಕುಳಿತಿ ದ್ದೂ ಇದೆ.ಅಂತ ಸಮಯದಲ್ಲಿ ಕೆಳಗೆ ಹಾಸಿಕೊಳ್ಳಲು ತಾವು ಓದುತ್ತಿರುವ ನ್ಯೂಸ್ ಪೇಪರ್ ನ್ನೇ ಕೊಟ್ಟಿರುವ ಪುಣ್ಯಾತ್ಮರೂ ಇದ್ದಾರೆ.

ಹೀಗೆ ಬಸ್ ನಲ್ಲಿ ಸೀಟ್ ಹಿಡಿಯುವುದು,ಒಂದು ಕಥೆಯಾದರೆ,ಕನಿಷ್ಟ ಎರಡು ಘಂಟೆಯಾದರೂ ಕೂರಬೇಕಾಗುವುದರಿಂದ ಸಮಯ ಕಳೆಯುವುದು ಇನ್ನೊಂದು ಸಮಸ್ಯೆ.ಬೆಳಗಿನ ಹೊತ್ತು ಏನೋ ಸ್ವಲ್ಪ ನಿದ್ದೆಯ ಝೋಂಪು ಆವರಿಸಿ ಸ್ವಲ್ಪ ಕಾಲ ಕಳೆಯುತ್ತದೆ.ಸಂಜೆ ಹಿಂದಿರುಗಿ ಬರುವಾಗ ಮಾತ್ರ ನನಗೆ ಏನು ಮಾಡಿದರೂ ನಿದ್ದೆ ಮಾತ್ರ ಬಾರದು.ಪಕ್ಕದಲ್ಲಿ ಪರಿಚಿತರು ಯಾರಾದರೂ ಕುಳಿತರೆ ಮಾತನಾಡಿಕೊಂಡು ದಾರಿ ಸವೆಸಬಹುದು. ಹೀಗೆ ಒಂದು ದಿನ ಪಕ್ಕದಲ್ಲಿ ಕುಳಿತ ಗೆಳತಿಯೊಬ್ಬಳೊಂದಿಗೆ ಮಾತನಾಡಲು ಶುರು ಮಾಡಿ, ಎಷ್ಟು ಮಾತನಾಡಿದೆವು ಎಂದರೆ ಎರಡು ಗಂಟೆ ಕಳೆದದ್ದೇ ಗೊತ್ತಾಗಲಿಲ್ಲ.ಮನೆ ತಲುಪಿದ ಬಳಿಕ ತುಂಬಾ ಬಾಯಿ ಒಣಗಿದಂತೆ ಅನ್ನಿಸಿ ಎರಡು ಲೋಟ ನೀರು ಕುಡಿದ ನಂತರವೇ ಗೊತ್ತಾಗಿದ್ದು ಎಷ್ಟು ಮಾತಾಡಿದ್ದೇನೆ ಎಂದು.

ವಿಚಿತ್ರವಾದ,ಊಹಿಸಿಯೂ ಇರದ ಹಾಗೆ ಎದುರಾಗುವ ಸನ್ನಿವೇಶಗಳು ಸಿಕ್ಕಾಪಟ್ಟೆ ನಗೆ ಉಕ್ಕಿಸಿದ್ದೂ ಇದೆ.ಒಂದು ದಿನ ಸೀಟ್ ಸಿಗದೇ ಕಂಡಕ್ಟರ್ ಪಕ್ಕದ ಸೀಟ್ ನಲ್ಲಿ ಕುಳಿತಿದ್ದೆ.ಪಕ್ಕದ ಮೂರುಸೀಟ್ ನ ಕೊನೆಯಲ್ಲಿ ಒಬ್ಬರು ಪರಿಚಿತರು ಕುಳಿತಿದ್ದರು. ಒಳ್ಳೆ ಹುದ್ದೆಯಲ್ಲಿರುವ,ವಿದ್ಯಾವಂತ ಜನ.ನಮಸ್ತೆ ಎಲ್ಲಾ ಆದ ಮೇಲೆ ಇದ್ದಕ್ಕಿದ್ದಂತೆ ಆ ಜನ,”ಯಾಕೆ,ಯಾಕೆ ನೀವು ಮೂಗು ಚುಚ್ಚಿಕೊಂಡಿಲ್ಲ,”ಎಂದು ಗದರಿಸುವ ದನಿಯಲ್ಲಿ ಕೇಳಬೇಕೆ!ನಾನಂತೂ ಕಕ್ಕಾಬಿಕ್ಕಿ,ಏನೋ ಸುಮ್ಮನೆ ಹಲ್ಲು ಕಿರಿದು ಸುಮ್ಮನಾದೆ.ಬಳಿಕ ಆತನ ಕೆಂಪಾದ ಕಣ್ಣು, ತೂಗುತ್ತಿದ್ದ ತಲೆ,ಸುತ್ತಲೂ ಪಸರಿಸಿದ್ದ ಹುಳಿ ಹುಳಿ ಪರಿಮಳ ನೋಡಿ,”ಓಹ್,ಇದೊಂದು ಎಣ್ಣೆಗಾಡಿ,”ಎನ್ನುವುದು ಹೊಳೆದು,ಉಕ್ಕಿ ಬಂದ ನಗು ತಡೆದುಕೊಂಡು ಸುಮ್ಮನಾದೆ.ಪುಣ್ಯಾತ್ಮ ಒಂದೆರಡು ನಿಮಿಷದಲ್ಲೇ ನಿದ್ದೆಗೆ ಜಾರಿ ಹೋಗಿ,ನನಗೆ ಸ್ವಲ್ಪ ಸಮಾಧಾವಾಯಿತು. ಇಲ್ಲದೇ ಇದ್ದರೆ ಇನ್ನೇನೇನು ಪ್ರಶ್ನೆಗಳ ಬಾಣಗಳು ಆತನ ಬತ್ತಳಿಕೆಯಲ್ಲಿತ್ತೋ.

ಶಾಲೆಯಲ್ಲಿ ಒಂದು ದಿನ ಯಾಕೋ ತಡವಾಗಿ,ಮನೆಗೆ ಹಿಂದಿರುಗಲು ಬಸ್ ಹಿಡಿಯುವಾಗ ಆಗಲೇ ಕತ್ತಲಾಗತೊಡಗಿತ್ತು.ಸಿಕ್ಕಿದ ಯಾವುದೋ ಸೀಟ್ ನಲ್ಲಿ ಕುಳಿತವಳು,ಮೊಬೈಲ್ ತೆಗೆದು,ಇಯರ್ ಫೋನ್ ಸಿಕ್ಕಿಸಿ ಕೊಂಡು ಹಾಡುಗಳ ಲೋಕದಲ್ಲಿ ಮುಳುಗಿ ಹೋದೆ.ಪಕ್ಕದಲ್ಲಿ ಯಾರೋ ಬಂದು ಕುಳಿತಂತಾದರೂ ಆ ಕಡೆಗೆ ಗಮನ ಹೋಗಲಿಲ್ಲ.ಇನ್ನೇನು ಮೈಸೂರು ಹತ್ತಿರ ಬರುವಾಗ ಆ ವ್ಯಕ್ತಿ ಕೆಮ್ಮಿ ಗಂಟಲು ಸರಿ ಮಾಡಿಕೊಂಡು,”ಮೇಡಂ,ನೀವು ಕನ್ನಡದವರೇ?”ಎಂದಿತು.ನಾನು ಆಗಲೇ ಆತನ ಮುಖ ಸರಿಯಾಗಿ ನೋಡಿದ್ದು,ವಿಚಿತ್ರವಾದ ಬಣ್ಣದ ಬಟ್ಟೆಗಳ, ಬೋಳು ತಲೆಯ,ಕಿವಿಗಳೆರಡರಲ್ಲೂ ಹೊಳೆಯುತ್ತಿದ್ದ ಓಲೆಗಳ ಆಸಾಮಿ ನೋಡಿ ಸ್ವಲ್ಪ ನಗು ಬಂತು.”ಹೌದು,ಯಾಕೆ”ಅಂದೆ.”ಹಾಗಾದ್ರೆ ನನ್ನ ಗುರುತಾಗಲಿಲ್ಲವಾ”ಅಂದಾಗ ನನಗೆ ಆಶ್ಚರ್ಯವೋ ಆಶ್ಚರ್ಯ.”ಕನ್ನಡದವಳಾಗುವುದಕ್ಕೂ ಈತನ ಪರಿಚಯ ಕ್ಕೂ ಏನಪ್ಪಾ ಸಂಬಂಧ ಶಿವನೇ” ಅನ್ನಿಸಿ,”ಇಲ್ಲ,ನೀವ್ಯಾರು ಗೊತ್ತಾಗಲಿಲ್ಲ,”ಅಂದೆ.”ನಾನು ಟಿವಿ ಆಕ್ಟರ್,ಮೇಡಂ,”ಅಂದು ಅದ್ಯಾವುದೋ ಸೀರಿಯಲ್ ನ ಹೆಸರು ಹೇಳಿದ.ನಾನು ಟಿವಿ ನೋಡುವುದು ಬಿಟ್ಟೇ ಹತ್ತು ವರ್ಷಗಳಾಗಿವೆ. ಇನ್ನು ಇವನನ್ನು ಎಲ್ಲಿ ನೋಡಲಿ. ಹಾಗೇ ಹೇಳಿಯೂ ಬಿಟ್ಟೆ.ತಗೊ ಇನ್ನು ಮೈಸೂರು ಬರುವವರೆಗೂ ತನ್ನ ಪ್ರತಿಭೆ,ಪರಾಕ್ರಮಗಳ ಬಗ್ಗೆ ಕೊರೆದದ್ದೂ ಕೊರೆದದ್ದೇ.ಇನ್ನೇನು ನಾನು ಇಳಿಯುವ ಜಾಗ ಬರಬೇಕು, ಆಗ”ಮೇಡಂ,ಒಂಚೂರು ಈ ಕಡೆ ನೋಡಿ” ಅಂದವನು,ನಾ ತಿರುಗಿದ ತಕ್ಷಣ ತನ್ನ ಫೋನ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಬಿಟ್ಟ.ನಾನು” ಇದೇನು “ಅನ್ನುವಷ್ಟರಲ್ಲಿ ನನ್ನ ಸ್ಟಾಪ್ ಬಂದು ಇಳಿಯಬೇಕಾಯ್ತು.ಮಾರನೇ ದಿನ ಶಾಲೆಯಲ್ಲಿ ಹೇಳಿದಾಗ,ಸಹೋದ್ಯೋಗಿಗಳೆಲ್ಲ ಚೆನ್ನಾಗಿ ಬೈದರು.”ಅಲ್ಲ, ಯಾರೋ ಏನೋ,ನೀವು ಕಂಡಕ್ಟರ್ ಗೆ ದೂರು ಕೊಟ್ಟು ಆ ಫೋಟೋ ಡಿಲೀಟ್ ಮಾಡಿಸದೆ ಇದ್ದೀರಲ್ಲ, ಆ ನನ್ ಮಗನ ಫೋನ್ ಕಿತ್ಕೋ ಬೇಕಿತ್ತು.ಏನಾದರೂ ಫೋಟೋ ದುರ್ಬಳಕೆ ಆದ್ರೆ,”ಅಂತೆಲ್ಲ ಹೇಳಿದಾಗ ಸ್ವಲ್ಪ ಹೆದರಿಕೆಯಾಗಿದ್ದಂತೂ ನಿಜ.

ಹೀಗೆ ಯಾರೂ ಮಾತಿಗೆ ಸಿಗದಿದ್ದಾಗ ಇದ್ದೇ ಇದೆಯಲ್ಲ ಸ್ಮಾರ್ಟ್ ಪೋನ್ ಎನ್ನುವ ಮಾಯಾ ಪೆಟ್ಟಿಗೆ.

ಯಾರು ಎಷ್ಟೇ ಮೊಬೈಲ್ ಫೋನ್ ಗಳ ಅತಿ ಬಳಕೆ,ಸಾಮಾಜಿಕ ಜಾಲತಾಣಗಳ ಬಗ್ಗೆ ದೂರಿದರೂ, ಇದಿಲ್ಲದೇ ಹೋಗಿದ್ದಿದ್ದರೆ ದೂರ ಪ್ರಯಾಣಿಕರ ಹೊತ್ತು ಹೇಗೆ ಕಳೆಯುತ್ತಿತ್ತು?

ಕರೋನ ಕಾರಣದಿಂದಾಗಿ ಲಾಕ್ ಡೌನ್ ಆಗಿ ಮನೆಯಲ್ಲಿ ತಿಂಗಳುಗಟ್ಟಲೆ ಕುಳಿತಿರುವ ಹಾಗಾಗಿತ್ತು. ಮೊದ ಮೊದಲು ರಜೆ ಎಂದು ಒಂದೆರಡು ವಾರ ಮೈ ಮನಸ್ಸುಗಳಿಗೆ ವಿಶ್ರಾಂತಿ ದೊರೆತರೂ,ನಂತರ ನಿಧ ನಿಧಾನವಾಗಿ ಮನಸ್ಸು ಪ್ರಯಾಣವನ್ನು ಬಯಸಲಾರಂಭಿಸಿತು.

ಸುಮ್ಮನಿರುವುದು ಎಷ್ಟು ಕಷ್ಟ ಅನ್ನುವುದು ಯಾವಾಗಲೂ ಬ್ಯುಸಿಯಾಗಿ ಇರುತ್ತಿದ್ದವಳಿಗೆ ಅರಿವಿಗೆ ಬಂದಿದ್ದು ಆಗಲೇ.ಸಿಹಿ ಎಷ್ಟೇ ಮನಕ್ಕೆ ಮುದ ನೀಡಿದರೂ ಎಷ್ಟು ತಿನ್ನಬೇಕು ಅಷ್ಟೇ ತಿನ್ನಲು ಸಾಧ್ಯ. ಊಟವಿಡಿ ಸಿಹಿಯೇ ತುಂಬಿ ಹೋದರೆ ರುಚಿಸಲು ಸಾಧ್ಯವೇ?ರಜೆಯ ಈ ಸಿಹಿ ಸಾಕು ಸಾಕಾಗಿ ಹೋಗಿ,ಮನ ಮತ್ತೆ,ನನ್ನ ಬಸ್ ಪ್ರಯಾಣ,ಶಾಲೆಯ ಕೆಲಸ,ಮಕ್ಕಳ, ಸಹೋದ್ಯೋಗಿಗಳ ಸಹವಾಸಕ್ಕೆ ಕಾತರಿಸಿ,ಶಾಲೆ ಪ್ರಾರಂಭವಾದ ದಿನ ನಿರಾಳವೆನಿಸಿತು.


16 thoughts on “ಪಯಣದ ಪ್ರಸಂಗಗಳು..

  1. ಅನುಭವಗಳನ್ನು ಬರಹ ರೂಪಕ್ಕಿಳಿಸುವ ನಿಷ್ಣಾತರು madam ನೀವು,ಚೆನ್ನಾದ ಬರಹ

  2. ನಿಮ್ಮ‌ ಪಯಣ ಓದಿಗೂ ಸುಖ ಕೊಟ್ಟಿತು..ಚೆಂದದ ಬರಹ ಸಮತಾ..

  3. ಬಸ್ ನ ರಸಪ್ರಸಂಗ ತುಂಬಾ ಚೆನ್ನಾಗಿ ಬಂದಿದೆ

  4. ಓದಿ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು
    ಸಮತಾ

Leave a Reply

Back To Top