ಅಂಕಣ ಬರಹ
ರಂಗ ರಂಗೋಲಿ
ಪಾತರಗಿತ್ತೀ ಅಕ್ಕಾ! ಬಣ್ಣದ ಪರದೇ ಪಕ್ಕಾ
” ಆರು ಗಂಟೆಗೆ ಸರಿಯಾಗಿ ನೀವು ಅಲ್ಲಿರಬೇಕು “
ಎಂದು ವಿಶೇಷ ಗೌರವ,ಪ್ರೀತಿಯಿಂದ ಅವರು ಕರೆ ನೀಡಿದ್ದರು. ಆ ಸಮಾರಂಭದ ಸ್ವರೂಪ ನನಗೆ ತಿಳಿದಿರಲಿಲ್ಲ. ಈ ಮೊದಲೇ ಕಿರಿಯ ಗೆಳೆಯ, ಸಿನಿಮಾ ನಿರ್ದೇಶಕ ಅಕ್ಷಯ್ ಕರೆಮಾಡಿ ತಿಳಿಸಿದ್ರು.
” ಅಕ್ಕಾ, ಕೊಂಕಣಿ ಸಿನೇಮಾಗಳಿಗಾಗಿಯೇ ನೀಡುವ ಪ್ರಶಸ್ತಿಗೆ ನಮ್ಮ ಸಿನೇಮಾದ ಅಪ್ಲಿಕೇಶನ್ ಹೋಗಿದೆ…ತುಂಬ ನಿರೀಕ್ಷೆಗಳಿಲ್ಲ. ಚೂರು ಚೂರು ಆಸೆ ಇದೆ. ನೋಡುವ “
ನಕ್ಕೆ. ನನಗೆ ನಿರೀಕ್ಷೆಗಳ ಗಿಡ ಆ ಸಂದರ್ಭದಲ್ಲಿ ಹೂ ಬಿಡುತ್ತಲೇ ಇರಲಿಲ್ಲ. ಎಂತದೋ ಸಿನೇಮಾದ ಬಗ್ಗೆ ನಡೆಯುತ್ತಲಿದೆ. ಹೆಚ್ಚು ಮಾಹಿತಿಯೂ ಇರಲಿಲ್ಲ. ಬೇರೆ ಇಂತಹ ರಾಷ್ಟ್ರೀಯ,ಅಂತರಾಷ್ಟ್ರೀಯ ಪ್ರಶಸ್ತಿಗಳ ಸಂದರ್ಭಗಳನ್ನು ಅತೀ ಪ್ರೀತಿ, ಆಸಕ್ತಿಯಿಂದ ಒಳಗಣ್ಣು ತೆರೆದು ಕಂಡಿರಲಿಲ್ಲ. ಅದು ತನ್ನದಲ್ಲದ ಬೇರೆಯೇ ಲೋಕ ಎಂಬ ತಟಸ್ಥ ಭಾವ ಇರಬೇಕು.
ನಾನು ಆ ಸಮಯ ‘ಸಿರಿ’ಯನ್ನು ನನ್ನೊಳಗೆ ಕರೆತರುವ ತಯಾರಿಯ ಹಂತದಲ್ಲಿದ್ದೆ. ದಿನವಿಡೀ ಅದೇ ಆಲೋಚನೆ. ‘ಸಿರಿ’ ನಾಟಕದ ಮೊದಲ ಪ್ರಸ್ತುತಿಗೆ ದಿನವೂ ನಿಗದಿಯಾಗಿತ್ತು.
ನಿರ್ದೇಶಕರಾದ ಕೃಷ್ಣಮೂರ್ತಿ ಕವತ್ತಾರ್ ಅವರ ಸೂಚನೆಯಂತೆ ತಯಾರಿ ನಡೆಯುತ್ತಿತ್ತು. ಅವರದ್ದು ಶಿಸ್ತುಬದ್ಧ, ಕರಾರುವಾಕ್ಕಾದ ನಿರ್ದೇಶನ.
ನಾನು ರಾಶಿರಾಶಿ ಹೆದರಿಕೆಯ ಮೂಟೆ ಹೊಟ್ಟೆಯೊಳಗೆ ಪೇರಿಸಿಕೊಂಡು ಧ್ಯಾನಿಸುತ್ತಿದ್ದೆ. ಆಗಿನ್ನೂ ಸಿರಿಯ ಕೊನೆಯ ದೃಶ್ಯಗಳ ರಿಹರ್ಸಲ್ ಪೂರ್ಣಗೊಂಡಿರಲಿಲ್ಲ. ‘ ಸಿರಿ’ ನಾಟಕದ ಕೇಂದ್ರ ಪಾತ್ರವೇ ಸಿರಿ ಎಂಬ ಮಹಿಳೆ. ಆ ಪಾತ್ರದೊಳಗೆ ಸ್ವಪಾಕವಾಗುತ್ತಾ ನಾನು ಬೇಯುತ್ತಿದ್ದೆ. ಅಂತಹ ಉತ್ಕಟ ದಿನಗಳಲ್ಲಿ ಈ ಸಮಾರಂಭದ ಬಗ್ಗೆ ಹೆಚ್ಚು ಯೋಚನೆ, ಕನಸು ಕಟ್ಟುವುದಾದರೂ ಹೇಗೆ?.
ಉಡುಪಿಯ ಎಮ್.ಜಿ.ಎಮ್ ಕಾಲೇಜಿನಲ್ಲಿ ಅಮೋಘ ತಂಡದ 2 ನಾಟಕಗಳು ಎರಡು ದಿನ ರಂಗಪ್ರಸ್ತುತಿಗೊಳ್ಳಲಿತ್ತು. ಅದರ ಮುನ್ನಾ ದಿನ ಅಂತಿಮ ಹಂತದ ರಿಹರ್ಸಲ್ ಗೆ ಹೋಗುವುದೆಂದಾಯಿತು. ಅಷ್ಟರಲ್ಲಿ ಅಕ್ಷಯ್ ಕರೆ ಮಾಡಿ
” ಅಕ್ಕಾ,ನಾಳೆ ನಮ್ಮ ಕೊಂಕಣಿ ಸಿನೇಮಾಗಳ ಅಂತರಾಷ್ಟ್ರೀಯ ಅವಾರ್ಡ್ ಫಂಕ್ಷನ್. ಸಂಜೆ 6 ಕ್ಕೆ ಶುರು. ನಮಗೆ ಬೇಗ ಬರಲು ತಿಳಿಸಿದ್ದಾರೆ. ಫಂಕ್ಷನ್ ತುಂಬಾ ಚೆಂದ ಮಾಡ್ತಾರೆ. ನೀವು ಬೇಗ ಬನ್ನಿ.”
” ಯಾಕೆ, ಬೇಗ ಬಂದರೆ ನನಗೆ ಅವಾರ್ಡ್ ಕೊಡಿಸ್ತೀರಾ”
” ಅಯ್ಯೋ, ಹಿಂದಿ ಭಾಷೆಯ ಕಲಾವಿದರೆಲ್ಲ ಇದ್ದಾರೆ. ಆದರೂ ಒಂದು ಪುಟ್ಟ ಬೆಳಕು. ಸಿಗಬಹುದು. ನಮ್ಮ ಸಿನೇಮಾವೂ ಚೆಂದವಿದೆ. ನೀವು ಬನ್ನಿ..ಜೊತೆಯಲ್ಲಿ ಇರುವ. ಹಲವಾರು ವಿಭಾಗಗಳಿಗೆ ಸ್ಪರ್ಧಿಸುತ್ತಿದ್ದೇವೆ, ಯಾವುದಾದರೂ ವಿಭಾಗದಲ್ಲಿ ಸಿಕ್ಕಿದರೂ ತಂಡದ ಶ್ರಮಕ್ಕೆ ಸಿಕ್ಕಿದ ಪುರಸ್ಕಾರ “
ನನಗೆ ಆ ಅಕ್ಷಯ್ ಎಂಬ 25 ವಯಸ್ಸಿನ, ಕನಸುಗಾರ ಹುಡುಗನ ಪರಿಶ್ರಮ, ಬದ್ದತೆ ಗೊತ್ತು.
ಆರಂಭದಲ್ಲಿ
” ಮಾಯೀ..” ಎನ್ನುತ್ತಿದ್ದವನು ಕನ್ನಡಕ್ಕೆ ಬಂದಾಗ
“ಮೇಡಂ” ಎಂದು ಸಂಭೋಧಿಸಿ
ಕೊನೆಗೆ “ಅಕ್ಕಾ” ಎಂದು ಸ್ಥಿರಗೊಂಡ ನಂಟು.
ನಾನು ನನ್ನ ನಾಟಕದ ನಿರ್ದೇಶಕರ ಬಳಿ ಹೋಗಿ ವಿಷಯ ತಿಳಿಸಿದೆ
. ” ನಾಳೆ ಕರೆದಿದ್ದಾರೆ “
ಬೆಳಿಗ್ಗೆ ನಿಧಾನವಾಗಿ ವಿನಂತಿಸಿದೆ.
” ಸರ್,ಸಂಜೆ ಮಂಗಳೂರು ಹೋಗುವುದಿದೆ. ನಮ್ಮ ಕೊಂಕಣಿ ಸಿನೇಮಾದ ಅವಾರ್ಡ್ ಫಂಕ್ಷನ್. ನಮ್ಮ ಸಿನೇಮಾದವರು ಹಾಗೂ ಆಯೋಜಕರೂ ಆಮಂತ್ರಣ ಪತ್ರಿಕೆ ಹಾಗೂ ಕರೆ ಮಾಡಿ ಆಹ್ವಾನಿಸಿದ್ದಾರೆ.”
” ….”
ಅವರದ್ದು ಗಂಭೀರ ಮೌನ.
” ಸರ್, ಕಾರ್ಯಕ್ರಮ 6 ಕ್ಕೆ ಆರಂಭ. ನಮಗೆ ಬೇಗ ಬನ್ನಿ ಎಂದಿದ್ದಾರೆ”
“…”
” ಸರ್,ಇನ್ನೊಂದು ನಾಟಕದ ರಿಹರ್ಸಲ್ ನಂತರ ಮಾಡಬಹುದೇ,ನಮ್ಮ ಸ್ಟೇಜ್ ಸೆಟ್ ಆದ ನಂತರ ಮೊದಲು ಸಿರಿ ರಿಹರ್ಸಲ್..ಮಾಡಿದರೆ..”
” ಮೊದಲು ಮೇಲೆ ಸ್ಟೇಜ್ ಗೆ ಹೋಗಿ ಸಿರಿ ಬಗ್ಗೆ ಧ್ಯಾನಿಸಿ”
ಧ್ಯಾನಸ್ಥ ಶಿವನ ಮೂರನೆಯ ಕಣ್ಣು ತೆರೆದಂತಹಾ ಪ್ರಭೆ, ಅವರದ್ದು..
ತಪ್ಪಿತಸ್ಥಳಂತೆ ಓಡಿದೆ.
ಆರಂಭ ಹಂತದ ಕೆಲಸಗಳು ಮುಗಿದು ಮನೆಗೆ ಬಂದೆ.
” ಎಲ್ಲ ಕಲಾವಿದರೂ ಮಧ್ಯಾಹ್ನ 2.30 ಮತ್ತೆ ಸ್ಟೇಜ್ ಹತ್ತಿರ ಇರಬೇಕು”
ನಿರ್ದೇಶಕರ ಮಾತು ಕಿವಿರಂಧ್ರದೊಳಗೆ ಮತ್ತೆಮತ್ತೆ ಪುನರಪಿಯಾಗಿ ಕೇಳಿಸುತ್ತಲೇ ಇತ್ತು. ಒಂದು ಚೀಲದೊಳಗೆ ಸಮಾರಂಭಕ್ಕೆ ಧರಿಸುವ ಉಡುಪುಗಳನ್ನು ತುರುಕಿದೆ.
ಮೇಕಪ್ ಸಾಧನ ಹೇಗೆ.. ನಿರ್ದೇಶಕರು ಗಮನಿಸಿದರೆ..
ಒಂದು ಪೌಂಡೇಷನ್ , ಕಿವಿಯ ಆಭರಣ ಹಾಗೂ ಬಾಚಣಿಗೆ ಕಾರಿನ ಡ್ಯಾಷ್ನಲ್ಲಿ ಹಾಕಿಟ್ಟೆ. ರಿಹರ್ಸಲ್ ಜಾಗಕ್ಕೆ ಓಡಿದೆ. ನಿರ್ದೇಶಕರು ರಂಗದ ಬೆಳಕಿನ ನಿರ್ದೇಶನದಲ್ಲೇ ಇದ್ದಾರೆ. ನನಗೋ ತಾಳಲಾರೆ ಎಂಬ ತಳಮಳ. ಒಳಬರುವಾಗಲೇ ಅಕ್ಷಯ್ ಕರೆ ಬಂದಿತ್ತು.
” ಅಕ್ಕಾ, ಹೊರಟೆಯಾ?
ಬೇಗ ಬಾ ಬಾ..(ವಗ್ಗಿ ಯೋ)”
ಎಮ್.ಜಿ.ಎಮ್ ಕಾಲೇಜಿನ ಸಭಾಂಗಣ ಪ್ರವೇಶಿಸುತ್ತಿದ್ದಂತೆ ನಿರ್ದೇಶಕರ ಎಂದಿನಂತೆ ಅಣತಿ.
” ಮೊಬೈಲ್ ಒಳಗಿಡಿ. ಸೈಲೆಂಟ್ನಲ್ಲಿಡಿ “
ಸಂಪರ್ಕ ಸೇತು ಅಡಗಿ ಕೂತಿತು. ನನ್ನ ಸಿರಿ ಟ್ರಾಯಲ್ ಆರಂಭವಾಗುತ್ತಿಲ್ಲ..ಒಂದೆಡೆ ಸಿರಿಯ ಚಿಂತೆ. ಮಗದೊಂದು ಕಡೆ ರಾಷ್ಟ್ರೀಯ ಕೊಂಕಣಿ ಸಿನೆಮಾ ಅವಾರ್ಡ್ ಕಾರ್ಯಕ್ರಮಕ್ಕೆ ಹೋಗಬೇಕಾದ ಒತ್ತಡ. ಆದರೆ ಕೇಳಲಾಗದು. ನನ್ನ ಸಿರಿಯ ಬಗ್ಗೆ ಇರುವ ಬದ್ಧತೆ, ಪ್ರೀತಿ ಬಗ್ಗೆ ಸಂಶಯಿಸಿದರೆ..
ಸಮಯ ಓಡುತ್ತಿತ್ತು. ಓಡಿದಂತೆ ಭಾಸವಾಗುತ್ತಿತ್ತು. ಉಳಿದ ಕಲಾವಿದರು ನಿಧಾನವಾಗಿ ಪಿಸುಗುಡುತ್ತಿದ್ದರು.
” ಹೋಗಿ ನೇರವಾಗಿ ಹೇಳಿ. ನೀವಿನ್ನೂ ತಯಾರೇ ಆಗಿಲ್ಲ”
ಒತ್ತಡದೊಂದಿಗೆ ದುಃಖ ಮಿಶ್ರಣಗೊಂಡು ದೂರ ಮೂಲೆಗೆ ಓಡಿ ಮನಸಾರೆ ಅತ್ತು ಹಗುರವಾದರೆ ಸರಿ ಹೋದೀತು ಎಂದುಕೊಂಡೆ.
ನಿರ್ದೇಶಕರ ಅಪ್ಪಣೆಯಾಯಿತು.
” ಹೋಗಿ ಶುರುಮಾಡಿ..ರಿಹರ್ಸಲ್”
ನಾನು ವೇದಿಕೆಗೆ ನಡೆದೆ. ಸಿರಿ ಚೆಂದ ಬರಬೇಕು. ಸಿರಿಯೇ ಬರಬೇಕು. ದೇವರೇ ಅನುಗ್ರಹ ತೋರು. ಅಭಿನಯಿಸುತ್ತಿದ್ದೆ. ನಡುವಿನಲ್ಲಿ ಹಿನ್ನೆಲೆ ಸಂಗೀತದವರಿಗೆ ರಾಗದ ಬಗ್ಗೆ ಸೂಚನೆ ನೀಡಲು ಬಿಡುವಾದಾಗ ತಂಡದ ಹಿರಿಯರಾದ ಆಶೋಕಣ್ಣ ಓಡಿ ಬಂದರು.
” ಹೋಗುವುದಿಲ್ವಾ..5.30 ಇಲ್ಲೇ ಆಗಿದೆ.”
ನಾನು ತಣ್ಣಗೆ ನೋಡಿದೆ. ಸಂಕಟದ ಜೊತೆಗೆ ನಿರ್ಧಾರ ಗಟ್ಟಿಯಾಗುತ್ತಿತ್ತು. ಅದೆಷ್ಟು ಸಮಾರಂಭಗಳಿರುತ್ತವೆ. ಅವಾರ್ಡ್ ನನಗೇ ಇದೆಯಾ. ಮುಖ್ಯವಾದದ್ದು ಯಾವುದು. ಸಿರಿ..ಸಿರಿಯನ್ನು ಒಪ್ಪಗೊಳಿಸುವೆ.
ನಿರ್ಧೇಶಕರು ಮತ್ತೆ ‘ ಹಾಂ, ಮುಂದುವರೆಸಿ ಎಂದರು.
ಸಿರಿಯ ಸ್ಪರ್ಶಕ್ಕೆ ಅನುವಾಗುತ್ತ ಅಭಿನಯಿಸುತ್ತಿದ್ದೆ.
ಸರ್ ವೇದಿಕೆಗೆ ಬಂದರು. ಬಳಿ ಬಂದು ನಿಂತರು. ನಾನು ಕ್ಷಣ ಅವರನ್ನು ನೋಡಿದೆ.
” ಮಂಗಳೂರು ಹೋಗುವುದಿಲ್ವೇ”
“…”
ಈಗ ನನ್ನದು ವಿಸ್ಮಯ ಮೌನ
” ಯಾಕೆ ಕೇಳಲಿಲ್ಲ..ಇಷ್ಟು ಹೊತ್ತು”
“…” ಹೋಗಲಾ ಸರ್”
“ಸರಿ”
ನಾನು ಭರಭರ ಓಡಿದೆ. ಸೈಡ್ ವಿಂಗ್ನಲ್ಲಿ ಇದ್ದ ಹಿರಿಯರಾದ ನಾರಾಯಣ ಕಾಮತ್ ರಿಂದ ಆರಂಭಿಸಿ ಶಬರಿ, ಶುಭ, ಜಯಂತಿ, ಅನಿಲ್, ರವಿ…ಎಲ್ಲರ ಮುಖದಲ್ಲಿ ದೊಡ್ಡ ನಗೆ.
” ಹ್ಹೋ…” ಎಂದು ಧ್ವನಿ ಹೊರಬಾರದಂತೆ ಸನ್ನೆಯಲ್ಲೇ ಹರ್ಷಿಸಿದರು. ಒಂದೆರಡು ನಿಮಿಷ ಉಡುಪು ಬದಲಾಯಿಸಿ ಓಡಿ ಬಂದೆ. ಗುರುಗಳ ಪಾದಗಳಿಗೆ ನಮಿಸಿದೆ. ಮೌನವಾಗಿ ಶಿರದ ಮೇಲೆ ಕೈಯಿಟ್ಟರು. ಕಾರಿನ ಬಳಿ ಓಡಿದೆ. ನನ್ನ ಹಿಂದೆ ಅಮೋಘದ ಕಲಾವಿದರು. ಕಾರಿನಲ್ಲಿ ಕೂತು ಉದ್ವೇಗ, ಸಂತಸ, ತಲ್ಲಣ ಜೊತೆಗೂಡಿಸಿ ಡ್ರೈವರ್ ಗೆ
” ಬೇಗ ಹೋಗಬೇಕು ” ಎಂದೆ.
ಇನ್ನೇನು ಕಾರು ಆರಂಭವಾಗಿ ಮುಂದೆ ಹೊರಟಿತು ಅನ್ನುವಾಗ ‘ಸರ್’ ಕಾರಿನ ಬಳಿ ಬಂದು
“ಸುಮ್ಮನೆ ಹೋಗಲು ಬಿಟ್ಟದ್ದಲ್ಲ. ಬರುವಾಗ ಜೊತೆಯಲ್ಲಿ ಪ್ರಶಸ್ತಿ ತಗೊಂಡು ಬರಬೇಕು. ಬರುತ್ತೀರಿ. ಶುಭವಾಗಲಿ.”
ಕಾರು ಹೊರಟಿತು. ನಾನು ಚಿಕ್ಕ ಕಾರ್ಯಕ್ರಮ ಅಂದುಕೊಂಡರೆ ದೊಡ್ಡ ಬಯಲಿನಲ್ಲಿ ದೀಪಗಳಿಂದ ಝಗಮಗಿಸುತ್ತ ಅಲಂಕಾರಗೊಂಡ ವಾತಾವರಣ.ಯಾವುದೋ ಬೇರೆ ಲೋಕ, ಬಣ್ಣದ ಲೋಕ. ಸಿನೇಮಾಗಳಲ್ಲಷ್ಟೆ ಕಂಡಿದ್ದೆ.
ಅಂಜಿಕೆಯಿಂದ ದ್ವಾರದತ್ತ ಸರಿದರೆ..
ಸಮವಸ್ತ್ರ ಧರಿಸಿದ್ದ ಇಬ್ಬರು ಬಳಿಬಂದು ಅತೀ ಗೌರವ ವಿನಯದಿಂದ
” ಬನ್ನಿ ಮ್ಯಾಡಂ ಬನ್ನಿ. ಮೊದಲ ಸಾಲಿನಲ್ಲಿ ನಿಮ್ಮ ಆಸನವಿದೆ.”
“ಇದಾರು..ನನ್ನ ಪರಿಚಯ..”
“ವಿಶಿಷ್ಟವಾದ ಸ್ವಾಗತ ಪಾನೀಯ..ಸುಂದರವಾಗಿ ಅಲಂಕರಿಸಿದ ಸೀಟುಗಳು”
ನನ್ನ ಕರೆದೊಯ್ದರು. ಮೊದಲ ಪಂಕ್ತಿಗೆ..ಅಲ್ಲಿ ನನ್ನ ಹೆಸರು ಬರೆದ ಸೀಟು.
” ಕುಳಿತುಕೊಳ್ಳಿ”
ಅಷ್ಟರಲ್ಲಿ ಬಳಿಗೆ ಹಿರಿಯ ಸಂಘಟಕರು ಬಳಿ ಬಂದರು
” ಕೂತುಕೊಳ್ಳಿ. ಇದೇನು ಮಾಡಿದಿರಿ. ನಿಮ್ಮ ಕಾರ್ಯಕ್ರಮವಿದು. ನೀವೇ ಹೀಗೆ ಇಷ್ಟು ತಡವಾಗಿ ಬರುವುದೇ “
ಅಪರಾಧಿ ಮೌನ.
” ಸರಿ. ಆರಾಮವಾಗಿರಿ. “
ಕಣ್ಣುಗಳು ನನ್ನ ಸಿನೇಮಾದ ಸಂಬಂಧಿಗಳನ್ನು ಅರಸುತ್ತಿತ್ತು. ಹೊಸಹೊಸ ಮುಖಗಳು. ಯಾರೂ ಕಾಣಿಸರು. ಅಷ್ಟರಲ್ಲಿ ಇನ್ನೊಂದು ಬದಿಯಲ್ಲಿ ಇಬ್ಬರು ನಿಂತಂತಾಯಿತು. ನೋಡಿದರೆ ಅಕ್ಷಯ್ ಹಾಗೂ ನನ್ನ ತಮ್ಮನ ಪಾತ್ರ ನಿರ್ವಹಿಸಿದ್ದ ಸುಜಯ್. ಅಲ್ಲಿಂದಲೇ ಕೈ ಬೀಸಿದರು. ಎದುರಿನ ವೇದಿಕೆಯಲ್ಲಿ ದೇಶದ ಪ್ರಸಿದ್ಧ ನಟ, ಪ್ರಕಾಶ್ ರಾಜ್ ಜೊತೆಗೆ ನನಗೆ ಪರಿಚಯವಿರದ ಮುಖಗಳು..ಬಳಿಯಲ್ಲಿ ಸುಂದರವಾದ ನಟಿ. ಅವಳೇ ಮಾತನಾಡಿಸಿದಳು.
” ಗೋವಾದಿಂದ ಬಂದ ಕಲಾವಿದೆ.”
ಎದೆ,ಹೊಟ್ಟೆಯೊಳಗೆ ಪುಕುಪುಕು. ಎದುರಿನ ದೊಡ್ಡ ಪರದೆಯಲ್ಲಿ Nominee ಗಳ ಹೆಸರು,ಸಿನೇಮಾ ವಿವರಣೆ ಬರುತ್ತಿತ್ತು. ವಿಜೇತರು ಹೋಗಿ ಸಂಭ್ರಮದಿಂದ ಪ್ರಶಸ್ತಿ ಸ್ವೀಕರಿಸಿ ಚೆಂದ ಮಾತನಾಡುತ್ತಿದ್ದರು. ನಾನಿನ್ನೂ ಅಲ್ಲಿಯ ಪರಿಸರಕ್ಕೆ ಪೂರ್ತಿ ಹೊಂದಿಕೊಂಡಿರಲಿಲ್ಲ. ಉಡುಪಿಯಿಂದ ಮಂಗಳೂರಿನ ಪಯಣ..ಒತ್ತಡ, ಕಾರಿನಲ್ಲೇ ಕೂದಲು ಸರಸರ ಬಾಚಿ, ಡ್ಯಾಷ್ನಲ್ಲಿಟ್ಟಿದ್ದ ಫೌಂಡೇಷನ್ ಚೂರು ಹಚ್ಚಿ ತಯಾರಾಗಿದ್ದೆ. ಇಲ್ಲಿ ಬಂದರೆ ಅರ್ಧ ಕಾರ್ಯಕ್ರಮ ನಡೆದಿದೆ. ಅಪರಾಧಿ ಪ್ರಜ್ಞೆ. ಮನಸ್ಸು,ಬುದ್ದಿ ತಹಬಂದಿಗೆ ಬಂದಿರಲಿಲ್ಲ.
ಅಷ್ಟರಲ್ಲಿ ಕಥೆ, ನಿರ್ದೇಶನ ಕ್ಕಾಗಿ ನಮ್ಮ ಸಿನೆಮಾದ ಅಕ್ಷಯ್ ಆಯ್ಕೆಯಾಗಿದ್ದ. ಅಕ್ಕನ ಖುಷಿಯಿಂದ ನನ್ನ ಕಣ್ಣಾಲಿಗಳು ತುಂಬಿದವು. ಜತೆಗೇ, ನಾನು ಒಮ್ಮೆಲೆ ಎಲ್ಲವನ್ನೂ ಕಳಚಿಕೊಂಡಂತೆ ಹಗುರವಾದೆ. ನರನಾಡಿಗಳಲ್ಲಿ ಎಂತದೋ ಪುಳಕ. ಪ್ರಶಸ್ತಿ ಸ್ವೀಕರಿಸಿ ಕೆಳಗಡೆ ಬಂದ ಅಕ್ಷಯ್ ನನ್ನ ಬಳಿ ಬಂದ.
” ಎಂತ ತಡ ಮಾಡಿದ್ರಿ. ನೀವು ಫೈನಲ್ ತಲುಪಿದ್ದೀರಿ. ಹೆಸರು ಹೇಳಿ ಮೇಲೆ ಕರೆದ್ರು. ನೀವೇ ಇಲ್ಲ. ನಿಮ‌್ಮ ಪರವಾಗಿ ನಾನು ಹೋಗಿ ಬಂದೆ. ಇರಿ ಚೆಂದದ ಮೊಮೆಂಟೊ ಇದೆ. ಕೊಡ್ತೇನೆ.”
ಸರಿದು ಹೋದ.
ಮೆದುಳಿನಲ್ಲಿ ಒಮ್ಮೆಗೆ ನರಗಳು ಗುಂಯ್ ಎಂದಂತೆ ” ನಾನು ಫೈನಲ್ ಗೆ ಬಂದಿರುವೆನೇ..ನಂಬುವುದೇ..ಬೇಗ ಬರಬೇಕಿತ್ತು. ಈ ಹೆದರಿಕೆ ನನ್ನನ್ನು ಬಿಡಬೇಕಲ್ವಾ”
ವೇದಿಕೆ ನೋಡುತ್ತಿದ್ದೆ.
” ಈಗ ನನಗೆ ಪ್ರಶಸ್ತಿಯೇನಾದರೂ ಬಂದರೆ..?”
” ಬಂದರೆ..ಅಬ್ಬಾ..ನಿಜಕ್ಕೂ ಬಂದರೇ..
ಹೇಗೆ..ಇಂತಹ ಕನಸು..
ಕಲಾವಿದೆಯರ ಹೆಸರುಗಳಲ್ಲಿ ‘ಸೀಮಾ ಬಿಸ್ವಾಸ್’ನಂತಹ ದೇಶದ ಪ್ರತಿಭಾವಂತ ಕಲಾವಿದರಿದ್ದಾರೆ. ಸುಮ್ಮನಾಗು ಹುಚ್ಚು ಮನವೇ..
ಆದರೆ..ಆಯ್ಕೆ ಆಗಿಯೇ ಬಿಟ್ಟರೆ ಹೋಗಿ ಏನು ಮಾತಬಾಡುವುದು?..
ಆದರೆ ತಾನೇ..
ಬದುಕಿನಲ್ಲಿ ಅದೆಷ್ಟು ಕನಸುಗಳು ಮುರಿದು ಬಿದ್ದಿಲ್ಲ. ಬೇಡ. ಯೋಚನೆಯೇ ಬದಲಾಯಿಸುವುದು ಒಳಿತು. ಮತ್ತೆ ನಿರಾಸೆಯಾಗದು. ಫೈನಲ್ ಗೆ ಬಂದಿರುವೆ..
ಛೇ,ವೇದಿಕೆ ಹತ್ತುವ ಅವಕಾಶ ತಪ್ಪಿತು..”
ಮನಸ್ಸು ಒಂದೇ ಸಮನೆ ವಟಗುಟ್ಟುತ್ತಲೇ ಇತ್ತು. ಆಗಲೇ “Best supporting actor female- Nominees..ಎದೆ ದಸಕ್ಕೆಂದಿತು.
ರೈಲು ಮೈಮೇಲೆ ಓಡಿದಂತೆ..
ಅಲ್ಲ ಎತ್ತರಕ್ಕೆ ಕೊಂಡೊಯ್ದು ಕೆಳಕ್ಕೆ ಬಿಟ್ಟಂತೆ..
ವಿಪರೀತ ಟೆನ್ಯನ್ ನಂತಹ ಏನೋ ಒಂದು ಆಗುತ್ತಿದೆ.
” ನನಗಿಲ್ಲ..ನನ್ನ ಹೆಸರು ಬರುವುದೇ..”
ಅನ್ನುವಾಗಲೇ ಯೋಚನೆಗಳಿಗೆ ಡಿಕ್ಕಿ ಹೊಡೆದಂತೆ, ನಿರೂಪಕಿಯ ಸ್ವರ ಮೊಳಗಿತು..
” ಅಂತು ಸಿನೇಮಾದ ಅಭಿನಯಕ್ಕಾಗಿ ಪೂರ್ಣಿಮಾ ಸುರೇಶ್..Best supporting actor”
ಕರತಾಡನದ ಸುರಿಮಳೆ. ಏಳಲು ಬಲವಿಲ್ಲದಂತೆ.. ಎದ್ದೆ. ಸಭಾಂಗಣ ಪೂರ್ತಿ ನನ್ನ ನೋಡುತ್ತಿದೆ. ಎದ್ದು ನಿಂತು ಚಪ್ಪಾಳೆ ಸುರಿಯುತ್ತಿದೆ. ನಶೆಯಲ್ಲಿದ್ದಂತೆ ನಡುಗುವ ಕಾಲುಗಳನ್ನು ಎಳೆಯುತ್ತ ನಡೆದೆ. ಅಪ್ರತಿಮ ಕಲಾವಿದರಾದ ಪ್ರಕಾಶ್ ರಾಜ್ ಅವರಿಂದ ಪ್ರಶಸ್ತಿ ಸ್ವೀಕರಿಸಿದೆ. ಮಾತನಾಡಿದೆ.
Photo ಗಳು ಕ್ಲಿಕ್ಕಿಸಿದವು. ಕೆಳಗಿಳಿದು ನನ್ನ ಆಸನಕ್ಕೆ ಬಂದೆ. ಬರುವಾಗ ಅದೆಷ್ಟೋ ಸ್ವರಗಳು “ಅಭಿನಂದನೆ” ” ಕಂಗ್ರಾಟ್ಸ್” ಎನ್ನುವುದು ಕೇಳಿಸುತ್ತಿತ್ತು. ಎಲ್ಲೋ ಯಾವುದೋ ಲೋಕದ ಮಾತುಗಳಂತೆ. ನನ್ನ ಆಸನದಲ್ಲಿ ಕೂತ ಬಳಿಕವೂ ಹೌದೇ ಇದು.. ನನಗೆ ಈ ಮನ್ನಣೆ, ಆ ಸರಸ್ವತಿಯ ಕರುಣೆ..ನಿಜವೇ”
ಒಳ ಹೊರಗಲ್ಲಿ ನಿಶ್ಯಬ್ಧ. ನಂತರ ನಡೆದ ಯಾವುದೂ ನನ್ನೊಳಗು ದಾಖಲಾಗುತ್ತಿರಲಿಲ್ಲ. ಬಾಗಿಲು ಜಡಿದು ಕೂರಿಸಿದಂತೆ.
ಕಾರ್ಯಕ್ರಮ ಮುಗಿಯಿತು. ಅದೆಷ್ಟು ಅಭಿನಂದನೆಗಳು. ಜೊತೆಗೆ ಸಣ್ಣನೆಯ ದೂರು..
” ತಡವೇಕೇ..”
ಹಿರಿಯ ಕಲಾವಿದರೂ ನಿರ್ದೇಶಕರಾದ ರಿಚಾರ್ಡ ಕ್ಯಾಸಿನೋ ಬಳಿಬಂದರು. ಪರಿಚಯ ಮಾಡಿಕೊಂಡರು.
” ಕೊನೆಯ ದೃಶ್ಯ ಒಂದೇ ಸಾಕು. ನೀನು ಆಯ್ಕೆಯಾಗಲು..ನಾನು ಜ್ಯೂರಿಯಾಗಿದ್ದೆ. ಇನ್ನೂ ಒಳ್ಳೆಯ ಪಾತ್ರಗಳು ಸಿಗಲಿ.”
ಸರಸ್ವತಿಯೆದರು ಮನಸ್ಸಿನಲ್ಲೇ ಮಂಡಿಯೂರಿದ್ದೆ. “ನಾನೇನೂ…ಏನೂ ಅಲ್ಲ. ಅವಳ ಕರುಣೆ..ಶರಣು ದೇವ “
ಅಕ್ಷಯ್ ಬಳಿ ಬಂದ.
” ಅಕ್ಕಾ ಹೇಗೆ, ಖುಷಿಯಾ..ಎಲ್ಲಿ ನಮ್ಮ ಭಾವ”
ಎನ್ನುವಾಗ ನನ್ನವರೂ ಬಂದಿದ್ದರು.
“ನಾನೇ ಇದೆಲ್ಲ ಕಾರಿನಲ್ಲಿಡುವೆ. ನನಗದರಲ್ಲಿ ಖುಷಿ. ನಮ್ಮ ಪ್ರಯತ್ನ ಗೆದ್ದಿತು ಅಕ್ಕಾ” ಅಂದ.
ನನಗೆ ಆನಂದಭಾಷ್ಪ. ಮಾತುಗಳು ಸೋಲೊಪ್ಪಿಕೊಂಡ ಕ್ಷಣ.
ಹೌದು ಇದೆಲ್ಲವೂ ” ಅಂತು” ಕೊಂಕಣಿ ಸಿನೇಮಾಗಿ ಅಂತರಾಷ್ಟ್ರೀಯ ಮಟ್ಟದ
” Hyssa global cini award”
ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಜೇತರಾದ ಅನುಭೂತಿಯ ಕ್ಷಣಗಳು. ಇದರಲ್ಲಿ ನಟಿಯಾಗಿ ಒಂದು ಅನನ್ಯ ಪಾತ್ರಕ್ಕೆ ಆಯ್ಕೆಯಾದ ನೆನಪುಗಳೂ ಹಚ್ಚ ಹಸಿರು.
ಆ ದಿನ ಮನೆಯಲ್ಲಿ ಏನೋ ಕೆಲಸದಲ್ಲಿದ್ದೆ
ಅವನು ಕರೆ ಮಾಡಿದ್ದ. ” ನಾನು ಅಕ್ಷಯ್. ಅಕ್ಷಯ ನಾಯಕ್. ನನ್ನ ಮಾತೃಭಾಷೆ ಕೊಂಕಣಿಯಲ್ಲಿ ಒಂದು ಸಿನೇಮಾ ಮಾಡಬೇಕೆಂದಿರುವೆ. ಅದರಲ್ಲಿ ಒಂದು ಮುಖ್ಯವಾದ ಪಾತ್ರದಲ್ಲಿ ನೀವು ಅಭಿನಯಿಸಬೇಕು”
ಕೇಳಿದ್ದು ಸರಿಯಾಗಿಯೇ ಇದೆಯಾ ಎಂಬ ಗೊಂದಲದಲ್ಲಿ ಮತ್ತೆ ಕೇಳಿದೆ
“ನಾನು ಪೂರ್ಣಿಮಾ..ಪೂರ್ಣಿಮಾ ಸುರೇಶ್. ನೀವು ಯಾರಿಗೆ ಕರೆ ಮಾಡಿದಿರಿ “
” ಸರಿಯಿದೆ. ನಿಮಗೇ ಕಾಲ್ ಮಾಡಿದ್ದು. ಸಿನೇಮಾದ ಬಗ್ಗೆ..”
” ಹೌದು..ಆದರೆ ನಾಯಕಿಯ ಪಾತ್ರ ಅಂದದ್ದು ಯಾರಿಗೆ?”
” ಅದೂ ನಿಮಗೆ..”
” ನಾಯಕಿ ಪಾತ್ರ ಮಾಡುವ ವಯಸ್ಸು..”
” ನಿಮ್ಮ ಎಲ್ಲ ವಿವರ ನನ್ನಲ್ಲಿದೆ. ನನ್ನ ಸಿನೇಮಾಗೆ ಬೇಕಾಗಿರುವ ನಾಯಕಿ ನೀವೇ”
ಮತ್ತಷ್ಟು ಗೊಂದಲದಿಂದ ಹೇಳಿದೆ
” ಏನು ಕಥೆ”
ಕಥೆ ವಿವರಿಸಿದರು.
” ಆದರೂ..ಸ್ವಲ್ಪ ಚಿಕ್ಕ ವಯಸ್ಸಿನವರು ಸರಿ ಹೊಂದಬಹುದು.”
” ನನ್ನ ಸಿನೇಮಾಗೆ ನೀವೇ ಸರಿ. ನಿಮಗೆ ಬೇರೆ ತೊಂದರೆ ಇದ್ದರೆ ತಿಳಿಸಿ”
ಒಪ್ಪಿದೆ. ಕೊಂಕಣಿ ಭಾಷೆಯ ಸಿನೇಮಾ. ಮನೆ ಮಾತು,ಅಮ್ಮ ತುತ್ತು ಉಣಿಸುವಾಗ ಲಲ್ಲೆಗರೆದು ಮುದ್ದಿಸಿದ ಭಾಷೆ. ಆದರೂ ಆಳದಲ್ಲಿ ಏನೋ ಒಂದು ಬಗೆಯ ಹಿಂಜರಿಕೆ. ಆ ಪಾತ್ರ ನನಗೆ ಸರಿ ಹೊಂದುವುದೇ?.
ಆ ಸಂಜೆ ಒಂದು ತಣ್ಣನೆಯ ನೀರವತೆ ಹೊದ್ದು ಮನಸ್ಸು ಹಠ ಮಾಡುತ್ತಿತ್ತು. ಏನೂ ಆಗುತ್ತಿಲ್ಲ, ಏನೂ ಮಾಡುತ್ತಿಲ್ಲ..ಎಂಬ ನಿರಾಸೆಯಿಂದ ಹುಟ್ಟಿಕೊಂಡ ಭಾವವದು. ಆ ಜಡತ್ವ ವನ್ನು ನೂಕಿ ಹೊರಬಂದಂತೆ.. ಹೊಸದೊಂದು ವೇದಿಕೆಗೆ ಸಜ್ಜಾಗಿದ್ದೆ.
ಮಂಗಳೂರಿನ ರಥಬೀದಿ ಬಳಿಯಿದ್ದ ವಠಾರದಲ್ಲಿ ಚಿತ್ರೀಕರಣ.15-16 ದಿನ ಬೆಳಗ್ಗೆ 6..6.30 ರ ಬಸ್ಸಿನಲ್ಲಿ ಮಂಗಳೂರಿಗೆ ಪಯಣ.
ಈ ಪಾತ್ರಕ್ಕೆ ನನ್ನ ಹೆಸರು ಸೂಚಿಸಿದವರು ಚಿದಾನಂದ ಕಾಸರಗೋಡು. ಅವರು ಇದರ ಮೊದಲೇ ” ಉಜ್ವಾಡು” ಎಂಬ ಕೊಂಕಣಿ ಸಿನೇಮಾದಲ್ಲಿ ನನ್ನ ಅಭಿನಯ ಹತ್ತಿರದಲ್ಲಿ ಕಂಡವರು. ಅವರೂ ಅದರಲ್ಲಿ ಅಭಿನಯಿಸಿದ್ದರು. ಅವರದ್ದು ನನ್ನ ತಂದೆಯ ಪಾತ್ರ. ಅತ್ಯುತ್ತಮ ಕಲಾವಿದರು. ಆದರೆ ಚಿತ್ರ ತೆರೆ ಕಾಣುವ ಮುನ್ನ ಹೃದಯಾಘಾತದಿಂದ ಕಣ್ಮರೆಯಾದರು. ಇದ್ದರೆ ಅದೆಷ್ಟು ಖುಷಿ ಪಡುತ್ತಿದ್ದರೋ..
ಇಲ್ಲಿ ಬುದ್ದಿಮಾಂದ್ಯ ತಮ್ಮನಿಗಾಗಿ ಮದುವೆಯಾಗದೇ ಉಳಿದ ಅಕ್ಕನ ಪಾತ್ರ ನನ್ನದು.
ಅವಳ ಅಂತಃಕರಣ, ಕಾಳಜಿ, ಸೇವೆ ತಾಯ್ತನ. ಇಂತಹ ಮಕ್ಕಳಿದ್ದಾಗ ಅವರಿಗೆ ಬೇಕಾಗುವುದು ಹಣವಲ್ಲ, ಪ್ರೀತಿಯ ಮಾತು, ಆರೈಕೆ ಎಂಬ ಸಂದೇಶ.
ಕೊಂಕಣಿ ಭಾಷಿಗರ ಸಿನೇಮಾ..’ಅಂತು’ ಅಂತೂ ಗೆದ್ದಿತ್ತು. ಕಲಾವಿದಳಾಗಿ ನನಗೊಂದು ಗುರುತು ಮೂಡಿಸಿತ್ತು.
ಫೋಟೊ ಆಲ್ಬಂ
ಪೂರ್ಣಿಮಾ ಸುರೇಶ್
ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ
Very emotional and anxious moments in the life of a great unassuming artist dear Poornima brought out in beautiful flowery language like music.
Warmest wishes dear Poornima.