ವಾರದ ಕಥೆ

ಸಾಳೂ

ಅಕ್ಷತಾ ಕೃಷ್ಣಮೂರ್ತಿ

Graffiti, Background, Grunge, Street Art

ಸಾಳೂಗೆ ಈ ಸಲನಾದ್ರೂ ಮದ್ವೆ ಮಾಡಿ. ಎಷ್ಟು ದಿನಾ ಅಂತಾ ತಂಗಿಯನ್ನು ಮನೇಲಿ ಇಟ್ಕೋತೀರಿ?’ ಎಂದು ಈ ಬಾರಿ ಜಾತ್ರೆಗೆ ಬಂದ ಕರ‍್ಟೋಳಿ ಪಾವ್ಣೆಯ ಅಕ್ಕ ಸಾಳೂವಿನ ಅಣ್ಣಂದಿರಿಗೆ ಜೋರಾಗಿ ಹೇಳುತ್ತಿದ್ದಳು. ಸಾಳೂ ಅಪ್ಪ ತೀರಿಹೋಗಿ ಹತ್ತು ರ‍್ಷ ಕಷ್ಟದಲ್ಲಿಯೇ ಜೀವನ ಕಳೆದು ಹೋಗಿತ್ತು. ಅವರಿವರ ಮನೆ ಕೆಲಸ ಮಾಡಿ ಒಂದೊಂದು ದಿನ ಉಪವಾಸ ಇದ್ದು ಸಾಳೂವಿನ ಅಮ್ಮ ಮಕ್ಕಳನ್ನೆಲ್ಲ ಓದಿಸಿದ್ದಳು. ಮಗಳ ಜವಾಬ್ದಾರಿ ಬೇಗ ಕಳೆದುಕೊಂಡಷ್ಟು ಸುಖ ಎಂದು ಅಮ್ಮನಿಗೆ ಅನಿಸಿರಬೇಕು. ಅಣ್ಣಂದಿರೆಲ್ಲ ಕಡೆ ಪಕ್ಷ ಒಂದು ಮಾತಿಗಾದ್ರು ಸಾಳೂವಿನ ಒಪ್ಪಿಗೆಯನ್ನು ಕೇಳಲಿಲ್ಲ. ಪಾವ್ಣೆಯವರೆ ಹುಡುಕಿಕೊಟ್ಟ ಹುಡುಗನ ಮುಖ, ತಾವೂ ನೋಡದೆ ಪಾವ್ಣೆಯವರು ಹೇಳಿದ್ದಾರೆಂದು ಜಾತ್ರೆ ಮುಗಿದ ಎರಡು ತಿಂಗಳಿನಲ್ಲಿಯೇ ಮದುವೆ ಮಾಡಿ ಮುಗಿಸಿಬಿಟ್ಟಿದ್ದರು.

                         **

 `ಮುದಿಯಾದ್ರು ಸುಖಾ ಸಿಗಲಾ. ತೊಂದ್ರಿ ತಾಪತ್ರೆ ಕಳ್ದ ಹೋಗ್ಲೆ ಬೊಮ್ಮಯ್ಯ ದ್ಯಾವ್ರೆ. ನಿಂಗೆ ನೂರಾಉಂದ ಕಾಯಿ ಉಡಿಸ್ತಿ’ ಎಂದೆಲ್ಲ ಅಂದುಕೊಳ್ಳುತ್ತ ಹಳೆಯ ನೆನಪಲ್ಲಿ ಕಳೆದು ಹೋದ ಸಾಳೂವಿಗೆ ಬೆಕ್ಕು ಬಂದು ಮೀನು ಮಡಿಕೆಗೆ ಮುಚ್ಚಿದ ಮುಚ್ಚಳ ಕೆಳಗೆ ಬೀಳಿಸಿದ ಸದ್ದಾದಾಗಲೇ ವಾಸ್ತವಕ್ಕೆ ಬಂದದ್ದು. `ಹಾಳಾದ ಮೊಳ್ ಬಿಕ್ಕ. ಊರಲ್ಲಿರೂ ನಾಯಿ ನರಿ ನನ್ನೇ ಹುಡಿಕಂಡೆ ಬತ್ತವ್ ನಡಿ’ ಎನ್ನುತ್ತ ಕೋಲು ಹಿಡಿದು ಓಡಿಸಿಕೊಂಡು ಹೋದಳು. ಒಂದು ತಿಂಗಳ ಹಿಂದಷ್ಟೇ ಪಿಕಳಾರ ಹಕ್ಕಿಯೊಂದು ಮನೆಯ ಮುಂದಿನ ಬಣ್ಣದ ಎಲೆಯ ಗಿಡದ ಟೊಂಗೆಗೆ ಗೂಡು ಕಟ್ಟಿತ್ತು. ಪಿಕಳಾರದ ಮರಿ ಹಾರುವವರೆಗೂ ಗೂಡು ಕಾಯುವುದೇ ಸಾಳೂಗೆ ನಿತ್ಯದ ಕೆಲಸವಾಗಿತ್ತು. ಒಂದು ಮುಗಿಯುತ್ತಿದ್ದ ಹಾಗೆ ಮತ್ತೊಂದು ಶುರುವಾಗಿತ್ತು. ಮೊನ್ನೆ ಕಾಯಿ ಕೊಯ್ಯಲು ನಿಂಗ ಕಾಯಿ ಮರ ಹತ್ತಿದರೆ, ಹೆಜ್ಜೇನು ಎನ್ನುತ್ತ ಅವಸರವಸರವಾಗಿ ಮರ ಇಳಿದಿದ್ದ. ಮರಕ್ಕೆ ಎರಡೆರಡು ಜೇನುಗೂಡು. ಯಾಕಾದರೂ ಅವನನ್ನು ಮರ ಹತ್ತಿಸಿದೆ ಅಂದುಕೊಂಡಳು. ಇವೆಲ್ಲ ಕೆಲಸದ ನಡುವೆ ಸಾಳೂಗೆ ಆಗಾಗ ನೀರಡಿಕೆ ಆದಂತಾಗುತ್ತಿತ್ತು. ಪದೇ ಪದೇ ಒಂದಕ್ಕೆ ಬಂದ ಹಾಗೆ ಆಗುತಿತ್ತು, ಬಚ್ಚಲಿಗೆ ಹೋದ್ರೆ ಏನು ಇಲ್ಲ. ಉಚ್ಚೆ ಹೊಯ್ಯಲು ಒಮ್ಮೊಮ್ಮೆ ಕಷ್ಟ. ಹೀಗಾಗಿಯೇ ಸೀಸೈಗೆ ಹೋಗಿ ಬರಲೇಬೇಕೆಂದು ತರ‍್ಮಾನಿಸಿದಳು.

   ಬೆಳಕು ಹರಿಯುವ ಮೊದಲೇ ಅಡಿಗೆ ಎಲ್ಲಾ ಮುಗಿಸಿ ಹೋಗಬೇಕು. ಮೂರುವರೆಗೆ ಎದ್ದು ಒಲೆ ಹಚ್ಚಿದರು ಇನ್ನೂ ಅನ್ನ ಆಗಿರಲಿಲ್ಲ. ಅಂತೂ ಅಡುಗೆ ಮುಗಿಸಿ ತನ್ನ ಕೋಲಿನಂತಹ ಮೈಗೆ ಒಂದು ಸೀರೆ ಸುತ್ತಿಕೊಂಡು ಸಾಳೂ ಮನೆ ಬಾಗಿಲು ಸಾವಕಾಶ ಚಾಚಿದಳು. ರಾತ್ರಿಯೇ ಅತ್ತೆಗೆ ತಾನು ಡಿಗ್ಗಿಯಲ್ಲಿರುವ ಅಕ್ಕನ ಮನೆಗೆ ಹೋಗಿ ಬರುವುದಾಗಿ ಸುಳ್ಳು ಹೇಳಿದ್ದಳು. ಜೀಪು ಇರುವ ಬುಧವಂತನ ಮನೆ ದೂರವಿತ್ತು. ದಾರಿಯ ನಡುವೆ ಬೇರೆ ಯಾರ ಮನೆಯೂ ಇಲ್ಲ. ಕಾಡಿನ ಊರು ಅದು. ಸುತ್ತ ಮರಗಳ ರಾಶಿ. ಒಂದು ಮನೆ ಅಥವಾ ನರಪಿಳ್ಳೆನೂ ಅಷ್ಟು ಸುಲಭವಾಗಿ ಹತ್ತಿರ ಕಾಣುವುದಿಲ್ಲ. ಮರ‍್ನಾಲ್ಕು ಮನೆ ಸೇರಿ ಒಂದು ಊರು ಎಂಬ ರೀತಿ. ಮದುವೆಯಾದ ಹೊಸತರಲ್ಲಿ ಈ ಕಾಡು ನೋಡಿಯೇ ಸಾಳೂಗೆ ಒಂಥರಾ ಭಯ. ನೀವೆ ನನ್ನ ಗೆಳತಿಯರು ಎನ್ನುತ್ತಾ ಕಷ್ಟ ಅಂದುಕೊಂಡಾಗಲೆಲ್ಲ ಮರಗಳನ್ನೆ ಬಂದಪ್ಪಿ ಅಳುವುದು. ಖುಷಿಯಾದರೆ ಮರಗಳ ಜೊತೆ ಮಾತಾಡುವುದು. ಇದೆಲ್ಲ ನೋಡಿಯೇ ಸಾಳೂವಿನ  ಅತ್ತೆ ಮಾತೆತ್ತಿದರೆ ಅವಳಿಗೆ “ಮಳ್ಳಿ ಮಳ್ಳಿ” ಎನ್ನುವುದು. ಅತ್ತೆ ಮಳ್ಳಿ ಅಂದಾಗ ಸಾಳುವಿಗೆ ಬೇಜಾರಾಗುತ್ತದೆ. ಅದರಲ್ಲಿಯೂ ಅವಳತ್ತೆ ಒಮ್ಮೊಮ್ಮೆ ‘ರಂಡಿ, ಹಲ್ಕಟ್ಟ ಸೂಳೆ ಮಗಳು, ಕಳ್ಳ ಬಸುರಿ’ ಎಂದೆಲ್ಲ ಬೈದಾಗ ನೋವಾಗಿ ಸಣ್ಣಗೆ ಯಾರಿಗೂ ಕೇಳದ ಹಾಗೇ ಅಳುವುದು ಇಲ್ಲಿವರೆಗೆ ನಡೆದು ಬಂದ ದಾರಿ.

           ಶಾಲೆಯ ಹೆಡ್ ಬಾಯೋರು ಬಳಸಿದ ಹಳೆಯ ಕರಿ ಬಣ್ಣದ ಮೊಬೈಲನ್ನು ಸಾಳೂಗೆ ಕೊಟ್ಟಿದ್ದರು. ಅದೇ ಮೊಬೈಲು ರ‍್ಸಿನಿಂದ ತೆಗೆದು ಘಂಟೆ ಎಷ್ಟಾಯಿತೆಂದು ನೋಡಿದಳು. ಏಳು ಗಂಟೆಯಾಗುತ್ತಾ ಬಂತು ಬೇಗ ಮುಟ್ಟಬೇಕು ಎಂದುಕೊಳ್ಳುತ್ತಾ ದೊಡ್ಡ ದೊಡ್ಡ ಹೆಜ್ಜೆಗಳನ್ನು ಹಾಕಲು ಶುರು ಮಾಡಿದಳು. ಆದರೆ ಈಗೀಗ ಸಾಳೂಗೆ ನಡೆಯಲು ತುಂಬಾ ತ್ರಾಸು ಆಗುತ್ತಿತ್ತು.

         **

ಪಾವ್ಣೆಯವರು ಹೇಳಿದರೆಂದು ಅಮ್ಮ ಹಿಂದು ಮುಂದು ನೋಡದೇ ಮದುವೆ ಮಾಡಿಬಿಟ್ಟರು ಎಂದು ಎಷ್ಟೋ ಸಲ ಅಮ್ಮನ ಮೇಲೆಯೇ ಸಾಳೂ ಸಿಟ್ಟು ಮಾಡಿಕೊಂಡಿದ್ದು ಇದೆ. ಕುಡುಕರ ಕಂಡರೆ ಹೇಸಿಗೆ ಅಂತಿದ್ದಳು. ಗಂಡನ ನಿಜರೂಪ ರ‍್ಶನ ಆದಾಗ ಬದುಕೇ ಅಸಹ್ಯ ಎನಿಸಿತ್ತು. ದಿನ ಬೆಳಗಾದರೆ ಬೈಗುಳ. ಅಡಿಗೆ ಬೇಯಿಸುವುದು, ಬಡಿಸುವುದು, ಬಡಿಸಿಕೊಳ್ಳುವುದು. `ನಿನ್ ಗಂಡಾ ಇಪ್ಪತ್ತನಾಕ್ ಗಂಟಿ ಕುಡ್ಕ ಮಲ್ಕಾ ಬಿದ್ರೆ ಮನಿ ನಡಿಯುದ್ ಹೆಂಗೆ?’ ಎಂದು ಅತ್ತೆ ಕೆಲಸಕ್ಕೆ ಹಚ್ಚುತ್ತಿದ್ದಳು. ಸಾಳೂಗೆ ಬೆಳಿಗ್ಗೆದ್ದು ಬಯಲಿಗೆ ಹೋಗುವುದು ಮಾತ್ರ ಹಿಂಸೆ ಎನಿಸುತ್ತಿತ್ತು. `ನಿಂಗೊಬ್ಳಿಗೆ ರ‍್ಯಾದಿ ಮಾನಾ. ನಂಗೂ ಇದೆ. ಬೈಲ್ಕಡಿಗೆ ಹೋದ್ರೆ ನಿನ್ ಎಸ್ಎಸ್ಎಲ್ಸಿ ಡಿಗ್ರಿ ಕಮ್ಮಿಯಾಗುದಿಲ್ಲ ಬಿಡ್. ನಿನ್ ಅಪ್ಪನ ಮನಿಯಿಂದೆ ದುಡ್ ತಕಾಬಂದಕಂಡೆ ಮಾಡ್ಸಕಂಬುದಾದ್ರೆ ಮಾಡ್ಸಕಾ. ನಿಂಗೆ ಯಾರ್ ಬ್ಯಾಡಾ ಅಂದರೆ. ನಂಕಡೆ ಉಂದ್ ಅರಿಚಪ್ಪಿನೂ ಇಲ್ಲ ನಿಂಗ್ ಹೇಂಗೆ ದುಡ್ ಕುಡ್ಲೆ’ ಎಂದು ಅತ್ತೆ ಮಾತು ಮುಗಿಸಿದ್ದರು. ಹತ್ತನೇತಿ ಓದುವಾಗ ಬಯಲು ಶೌಚದ ಅಪಾಯವನ್ನು ಸಮಾಜ ವಿಷಯ ಕಲಿಸುವ ರಫೀಕ್ ಸರ್ ಚನ್ನಾಗಿಯೇ ಹೇಳಿದ್ದು ಈಗಲು ಸಾಳೂಗೆ ನೆನಪಿದೆ. ಶೌಚ ಎಂದರೆ ಒಂಥರಾ ಕಿರಿಕಿರಿ ಅನಿಸಿ ಒಂದು ದಿನ ಸಾಳೂ ತನಗೆ ತೋಚಿದಂತೆ  ರ‍್ಜಿಯೊಂದನ್ನು ಬರೆದು ನೇರ ಪಿಡಿಯೊ ಹತ್ತಿರ ಹೋಗಿ `ಸಾಹೇಬರೇ, ಶೌಚಾಲಯ ಕಟ್ಟಿಸಿಕೊಳ್ಳಲು ರ‍್ಕಾರದಿಂದ ಏನಾದರೂ ಸಹಾಯ ಸಿಗುವಂತೆ ಮಾಡಿ’ ಎಂದಾಗ ಕೆಲವು ಪಂಚಾಯತಿ ಮೆಂಬರಗಳು ಕಿಸಕ್ಕನೆ ನಕ್ಕಿದ್ದು ಅವಳ ಗಮನಕ್ಕೂ ಬಂದಿತ್ತು. ಅವರಿಗೆಲ್ಲ ಕ್ಯಾರೆ ಮಾಡದೆ ಸಾಹೇಬರು ಹೇಳಿದ ಎಲ್ಲ ಕಾಗದಪತ್ರಗಳನ್ನು  ಜೋಡಿಸಿ ಕೊಟ್ಟಿದ್ದಳು. ಅಂತೂ ಹಣ ಪಡೆದು ತಾನೇ ಮುಂದಾಗಿ ನಿಂತು ಶೌಚಾಲಯ ಕಟ್ಟಿಸಲು ಆರಂಭಿಸಿದಳು. `ನಿನ್ ಹೆಂಡ್ತಿ ಸಂಡಾಸ್ ಕಟ್ಟಿಸ್ತೀದ್ ಕಡಾ. ಅದೇನ್ ಸಾಧನೆ ಮಾಡ್ತಿದೋ ದ್ಯಾವ್ರಿಗೆ ಗುತ್ತ. ಹಂಕಾರಾ ನೋಡಾ’ ಎಂದು ಗಂಡನಿಗೆ ಸಾರಾಯಿ ಅಂಗಡಿಯಲ್ಲಿ ಚಾಡಿ ಹೇಳಿದ್ದ ಅವನ ಗೆಳೆಯ ಗಜಾ ಮನೆಗೂ ಬಂದು ಸಾಳೂ ಹೊಡೆತ ತಿಂಬುದನ್ನು ನೋಡಿ ನಕ್ಕಿದ್ದ. ಅವನ ಜೋರಿನ ಆ ನಗೆಯ ನೆನಪಿಸಿಕೊಂಡೇ ಜಿದ್ದಿಗೆ ಬಿದ್ದವಳಂತೆ ಸಾಳೂ ಶೌಚಾಲಯ ಕಟ್ಟಿ ಮುಗಿಸಿದ್ದಳು. ಕರ‍್ಟೋಳಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಅಡುಗೆ ತಯಾರಕರ ಹುದ್ದೆ ಖಾಲಿಯಾದಾಗ ಪಿಡಿಯೋ ಸಾಹೇಬರಿಗೆ ವರಾತೆ ಬಿದ್ದು ಎಸ್ಡಿಎಮ್ಸಿ ಠರಾವಿನಲ್ಲಿ ತನ್ನ ಹೆಸರನ್ನೆ ರ‍್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಬರೆಯುವಂತೆ ಮಾಡಿದ್ದಳು. ಸಾಳೂಗೆ ಈ ಕೆಲಸ ಬದುಕಿಗೊಂದು ನೆಲೆ ನೆಮ್ಮದಿ ಕೊಟ್ಟಿದ್ದಕ್ಕೆ ಎಲ್ಲ ಸಮಸ್ಯೆ ನುಂಗಿ ಬಿಡುತ್ತಿದ್ದಳು. ಎಸ್ಎಸ್ಎಲ್ಸಿ ಪಾಸಾದ ಕಾರಣಕ್ಕೆ ಮುಖ್ಯ ಅಡುಗೆಯವಳ ಜವಾಬ್ದಾರಿ ಸಿಕ್ಕಿ ಮತ್ತಷ್ಟು ಖುಷಿಗೊಂಡಿದ್ದಳು ಸಾಳೂ. ಏಫ್ರಾನ ತೊಟ್ಟು ತಲೆಗೊಂದು ಕ್ಯಾಫ್ ಹಾಕಿ ಚೀಲ, ಬಿಸಿಯೂಟ ತರಕಾರಿಗಳ ಲೆಕ್ಕವಿಡುವ ಪಟ್ಟಿ ಹಿಡಿದು ಸಾಳೂ ಅಂಗಡಿ ಬದಿಗೆ ಕಂಡರೆ ಅದು ಸರಿಯಾಗಿ ಒಂಬತ್ತುವರೆ ಘಂಟೆ ಎಂದೇ ಊರಿನವರು ವೇಳೆ ತಿಳಿಯುತ್ತಿದ್ದರು. ಶಾಲೆಯಲ್ಲಿ ನಡೆಯುವ ದಿನಾಚರಣೆಗಳು, ಗ್ಯಾದರಿಂಗ್, ಬೀಳ್ಕೊಡುಗೆ ಸಮಾರಂಭ, ಮೆಟ್ರಿಕ್ ಮೇಳ ಅದು-ಇದೂ ಎಂದು ಮಕ್ಕಳಿಗಿಂತ ಹೆಚ್ಚು ಆಸಕ್ತಿವಹಿಸಿ ಓಡಾಡುವವಳು ಅವಳೆ. ಹೆಡ್ಬಾಯೋರು ಹಾಗೂ ಉಳಿದ ಶಿಕ್ಷಕರು ಕೂಡ ಅವಳಿಗೆ ಎಂದು ನಿರಾಶೆಗೊಳಿಸುತ್ತಿರಲಿಲ್ಲ. ಅವಳದ್ದೇ ನರ‍್ಣಯ. ಸಾಳೂಗೆ ಚೂರು ಹೆಚ್ಚು ಸ್ವಾತಂತ್ರ‍್ಯ ಕೊಟ್ಟದ್ದು ಉಳಿದ ಅಡಿಗೆಯವರಿಗೆ ಮಾತ್ರ ಕಸಿವಿಸಿಯಾಗುತ್ತಿತ್ತು.

                                        ಇದೆಲ್ಲ ಏಳು ರ‍್ಷದ ಹಿಂದಿನ ಕಥೆ. ಈಗೀಗಂತೂ ಅವಳು ಇನ್ನೂ ಚುರುಕಾಗಿದ್ದಾಳೆ. ಸಂಘದ ಮೆಂಬರ್ ಆಗಿದ್ದಾಳೆ. ಕರ‍್ಟೋಳಿಯ ಅನೇಕ ಮಹಿಳೆಯರಿಗೆ ಸಂಘದ ಕರ‍್ಯ ಚಟುವಟಿಕೆಗಳ ಬಗ್ಗೆ ಹೇಳಿದ್ದಾಳೆ. ದಿನಕ್ಕೆ ಹತ್ತು ರೂಪಾಯಿಯಾದರೂ ಕಟ್ಟಿ ಹೇಗೆ ಹಣವನ್ನು ಕೂಡಿಡುವುದು, ಆರೋಗ್ಯ ಸಮಸ್ಯೆಗಳು ಉಂಟಾದರೆ ಹೇಗೆ ಹಣವನ್ನು ಹೊಂದಿಸುವುದು, ಸ್ವಾವಲಂಬಿ ಜೀವನದ ಕುರಿತು ಮಹಿಳೆಯರನ್ನು ಉತ್ತೇಜಿಸುವುದು, ಸಣ್ಣ ಸಣ್ಣ ವ್ಯಾಪಾರ ಮಾಡುವುದನ್ನು ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದರ ಬಗ್ಗೆಯೆಲ್ಲ ಸಂಘದ ದೊಡ್ಡ ಸಾಹೇಬರಿಂದ ತಿಳಿದು, ಕೊಂಕಣಿ ಮಾತಾಡುವ ಉಳಿದ ಜನರಿಗೆಲ್ಲ ಮಾಹಿತಿ ರವಾನಿಸುತ್ತಾಳೆ. ಹೀಗಾಗಿ ಒಂದಷ್ಟು ಹೆಣ್ಣುಮಕ್ಕಳು ಅನೇಕ ವಿಷಯಗಳ ಕುರಿತು ಅವಳ ಮಾತು ಕೇಳುತ್ತಿದ್ದರು. ಸಾಳೂವಿನ ಮಾತಿನಂತೆ ನಡೆದು ಬದುಕು ರೂಪಿಸಿಕೊಂಡಿದ್ದರು. ಒಮ್ಮೆಯಂತೂ ಅವಳ ಗಂಡ ಕುಡಿದು ಹೊಡೆಯಲು ಬಂದಾಗ ಗಂಡನ ಕೈಯನ್ನು ಸಾಳೂ ಗಟ್ಟಿಯಾಗಿ  ಹಿಡಿದಳು. ಅತ್ತಿ ಹಾಗೂ ಗಂಡನ ಮೂದಲಿಕೆ ಮಾತು ಕೇಳಿ ಸಿಟ್ಟು, ದುಃಖ, ಅಸಹಾಯಕತೆ ಎಲ್ಲ ಒಟ್ಟೊಟ್ಟಿಗೆ ಬಂದು ಕರುಳು ಹಿಡಿದು ಯಾರೋ ಚೂಟಿದಂತಾಯಿತು. ಸುತ್ತಮುತ್ತ ಒಮ್ಮೆ ನೋಡಿದಳು. ಸಿಟ್ಟಿನಿಂದ ಕುದಿಯುತ್ತಿದ್ದ ಅವಳ ಮುಖ ನೋಡಿ ಅತ್ತೆ ಹಿಂದಿಂದೆ ಹೆಜ್ಜೆ ಇಟ್ಟು ಅಡುಗೆ ಕೋಣೆ ಸೇರಿಕೊಂಡಳು. ಆ ಕ್ವಾಣಿಯ ಬಳ್ಳಿ ಮೇಲೆ ಹರಗಿದ ಪಂಜಿ ತುಂಡಿನಿಂದ ಸಾಳೂ ತನ್ನ ಗಂಡನ ಕೈ ಕಾಲು ಕಟ್ಟಿಯೇ ಬಿಟ್ಟಳು. ಕೊಡದಲ್ಲಿ ನೀರು ತಂದು ಅವನ ಮೈಮೇಲೆ ಸುರಿದಳು. ಬೆಳಗಾಗುವರೆಗೆ ಅದೇ ಸ್ಥಿತಿಯಲ್ಲಿ ಕುಂತವನನ್ನು ಎಬ್ಬಿಸಿ ಕೈ ಕಟ್ಟಿಯೇ ಕ್ಯಾಂಪಿಗೆ ಕರೆತಂದಳು. ಊರಿನ ಸಮುದಾಯ ಭವನದಲ್ಲಿ ಸಂಘದ ವತಿಯಿಂದ “ಕುಡಿತ ಬಿಡುವುದು ಹೇಗೆ” ಎಂಬುದರ ಕುರಿತು ಕ್ಯಾಂಪ್ ಆಯೋಜಿಸಿದ್ದರು. ಸಾಳೂ ಗಂಡನ ಕೈ ಕಟ್ಟಿ ತಂದ ವಿಷ್ಯ ಊರೆಲ್ಲ ಸುದ್ದಿಯಾಯಿತು. ಸಾರಾಯಿ ಅಂಗಡಿ ಗೆಳೆಯರ ಜೀವ ಒಮ್ಮೆ ಅಲುಗಾಡಿತು. ತಮ್ಮ ತಮ್ಮ ಹೆಂಡಂದಿರಿಗೆ ಸಾಳೂವಿನ ಜೊತೆ ಮಾತಾಡಬಾರದೆಂದು ತಾಕೀತು ಮಾಡಿದರು. `ಸಾಳೂ ಒಳ್ಳೆ ಹೆಂಗಸಲ್ಲ. ಆ ಪಿಡಿಓ ಸಾಹೇಬ ಅವ್ಳ ರೂಪ ನೋಡಿಕೊಂಡೇ ಹಂಗೆ ಕುಣಿಯೋದು’ ಎಂದೆಲ್ಲ ಬಾಯಿಗೆ ಬಂದ ಹಾಗೆ ಹೇಳಿದರೂ ಪ್ರಯೋಜನ ಆಗಲಿಲ್ಲ. ಒಂದಷ್ಟು ದಿನ ಊರ ಹೆಂಗಸರೆಲ್ಲ ಸುಮ್ಮನಿದ್ದರೂ ಸಾಳೂವಿನ ಗಂಡನ ಕುಡಿತ ನಿಧಾನ ಕಮ್ಮಿಯಾದದ್ದು ನೋಡಿ ತಮ್ಮ ಗಂಡಂದಿರನ್ನು ಕರೆತಂದು ಸಂಘಕ್ಕೆ ಸೇರಿಸಿ ಕುಡಿತ ಬಿಡಿಸಬೇಕೆಂಬ ಬಯಕೆಯನ್ನು ಸಾಳೂ ಬಳಿ ಹೇಳಿಕೊಂಡರು. ದಿನೇ ದಿನೇ ಸಾಳೂ ಹೆಂಗಸರನ್ನೆಲ್ಲ ಸೇರಿಸಿ ಕುಡುಕ ಗಂಡಂದಿರನ್ನು ಸಂಭಾಳಿಸುವ ರೀತಿ ಹೇಳಿಕೊಟ್ಟ ವಿಷ್ಯ ರಾತ್ರಿ ಕೊಟ್ಟಿ ಸಾರಾಯಿ ಕುಡಿಯುವ ಗಂಡಸರ ನಾಲಿಗೆಯಲ್ಲಿ ಹೊರಳಾಡಿ ಅವರ ಅಹಂ ಕೆಣಕಿ ಬಿಸಿಯೇರುವಂತೆ ಮಾಡುತ್ತಿತ್ತು. ಇದೆಲ್ಲ ಗೊತ್ತಾದ ಕೂಡಲೇ ಸಾಳೂ ಮದ್ಯಪಾನ ವಿರೋಧಿ ಸಂಘ ಮಾಡಿಕೊಂಡು ಹೆಂಗಸರನ್ನೆಲ್ಲ ಕೂಡಿಸಿ ಕ್ಯಾಂಪಗೆ ಸೇರಿಸುವ ವ್ಯವಸ್ಥೆ ನಿರಂತರ ಮಾಡುತ್ತಲೇ ಇದ್ದಳು. ನಾಕ್ ಜನರ ಮನೆ ಸುಧಾರಿಸಿ ಖುಷಿಯಾಗಿದ್ದರೆ ಸಾಕು ತನಗಂತೂ ದೇವ್ರು ಅನುಭವಿಸುವ ಕಾಲಕ್ಕೆ ಯಾವ ಖುಷಿನೂ ಕೊಡಲಿಲ್ಲ. ಬೇರೆಯವರಾದರೂ ಖುಷಿಯಿಂದ ಇರಲು ತಾನು ಕೈಲಾದಷ್ಟು ಸಹಾಯ ಮಾಡಲೇಬೇಕು ಎಂದು ಅಂದುಕೊಂಡಳು. ಎಲ್ಲ ಸರಿಯಾಗಿಯೇ ಇತ್ತು. ಆದ್ರೆ ಇತ್ತೀಚಿಗೆ ಯಾಕೋ ಹೋರಾಟ ಅದು ಇದು ಎಂದು ಒಂದ್ ನಾಕು ಸುತ್ತು ಊರೆಲ್ಲ ಸುತ್ತು ಹಾಕಿದರೆ ತಲೆ ತಿರುಗಿದಂತಾಗುತ್ತಿತ್ತು ಅವಳಿಗೆ. ಕಳೆದ ವಾರವಂತೂ ಎದೆಯೆಲ್ಲ ಯಾರೋ ಹಿಂಡಿ ಹೊಸಕುತ್ತಿದ್ದಾರೆ ಎಂಬಷ್ಟು ನೋವು. ಅದು ಇದು ಕಷಾಯ ಮಾಡಿ ಕುಡಿದಳು. ಊರಲ್ಲೆ ಔಷಧಿ ಕೊಡುವ ಅಜ್ಜಿ ಹತ್ರ ಹೋಗಿ ಅದೆಂತಹುದ್ದೊ ಬೇರು ಕುತ್ತಿಗೆಗೆ ಕಟ್ಟಿಸಿಕೊಂಡು ಬಂದ ನಂತರ ಚೂರು ಕಡಿಮೆಯಾದಂತೆನಿಸಿತ್ತು. ಎಲ್ಲರ ಕೆಲಸಗಳಿಗೂ ಈಗ ಸಾಳೂ ಬೇಕು. ಮನೆಯಲ್ಲಿ ಮಾತ್ರ ಸುಖ ಇಲ್ಲ. ಊಟ ಮಾಡಿದೆಯಾ? ಕಾಲು ನೋವು ಕಡಿಮೆ ಆಗಿದೆಯಾ, ಡಾಕ್ಟರ ಹತ್ರ ಹೋಗ್ವಾ ಎಂದು ಒಂದು ಜೀವವೂ ಇದುವರೆಗೆ ಅವಳನ್ನು ಕೇಳಿಲ್ಲ. ಸಾಳೂಗೆ ಒಮ್ಮೊಮ್ಮೆ ಬೇಸರ ಎನಿಸಿದರೂ ದಿನವಿಡೀ ಕೆಲಸದಲ್ಲಿ ವ್ಯಸ್ತವಾಗಿರುವುದರಿಂದ ಆ ನೋವಿನ ವಿಷಯಗಳ ಬಗ್ಗೆ ಯೋಚಿಸಲು ಪುರುಸೊತ್ತು ಮಾಡಿಕೊಳ್ಳುತ್ತಿರಲಿಲ್ಲ. “ಸಾಳೂ ಸಮಾಜಸೇವೆ ಈಗ ಜೋರಾಗಿದೆ” ಎಂದು ಅಣಕವಾಡಿದ  ಗ್ರಾಮ ಚಾವಡಿಗೆ ಹೊಸತಾಗಿ ಮೊನ್ನೆ ತಾನೇ ಬಂದ ಶಾನುಭೋಗನ ಮಾತು ಕೇಳಿಯೂ ಏನೂ ಹೇಳಿರಲಿಲ್ಲ. ಕೊನೆಗೆ ಅವನೇ ಮತ್ತೆ ಬಂದು ಮಾತಾಡಿಸಿದ ಮೇಲೆ `ನನ್ನಂತಹ ಕಷ್ಟ ಯಾರೂ ತೆಗೆಯದಿರಲಿ ಸಾರ್. ದಿನಾ ಕುಡಿದು ಮೋರಿಯಲ್ಲಿ, ರಸ್ತೆಲಿ ಬಿದ್ದುಕೊಂಡಿರುವ ಗಂಡನನ್ನು ಎತ್ತಿ ಕುಳ್ಳಿಸಿ ಯರ‍್ಯಾರದ್ದೋ ಕಾಲಿಗೆ ಬಿದ್ದು ಮನೆಗೆ ತಂದು ಕೂಳು ಹಾಕುವ ಹೆಂಡತಿಯರ ರಟ್ಟೆಯಲ್ಲಿ ಒಂದಿಷ್ಟು ಶಕ್ತಿ ತುಂಬಬೇಕು ಸರ್, ಇಲ್ಲವಾದ್ರೆ ನಮ್ ಹೆಣ್ಮಕ್ಕಳನ್ನು ಯರ‍್ಯಾರೋ ಬಂದು ಮೂಸಿ ನೋಡತಾರೆ. ಚಂದಾಗಿ ಬದುಕುವ  ಹಕ್ಕನ್ನೆ ಕಸಿದುಕೊಳ್ಳುತ್ತಾರೆ ಸರ್” ಎಂದು ಶುದ್ಧ ಕನ್ನಡದಲ್ಲಿ ಆತ್ಮವಿಶ್ವಾಸದಿಂದ ಹೇಳಿದಾಗ ಶಾನುಭೋಗನಿಗೆ ಕರುಣೆ ಉಕ್ಕಿ ಬಂತು. `ನಿಂಗೆ ಎಂತದೆ ಸಹಾಯ ಬೇಕಾದ್ರೂ ಕೇಳು ನಾ ಮಾಡ್ತೆ’ ಎಂಬ ಭರವಸೆಯು ಸಿಕ್ಕಿತು. ಜನಾ ಎನು ಹೇಳಿದರೂ ನಂಬದ ಶಾನುಭೋಗರು ಮುಂದಿನ ದಿನಗಳಲ್ಲಿ ಸಾಳುವಿನ ಸಂಘಕ್ಕೆ ಕಾನೂನಿನ ಪ್ರಕಾರ ಸಿಗಬಹುದಾದ ಎಲ್ಲ ಸೌಲಭ್ಯ ಕೊಡಿಸಿ ಗಟ್ಟಿಯಾಗಿ ನಿಂತರು.

                                                    ಇತ್ತೀಚೆಗೆ ಸಾಳೂವಿಗೆ ಮೂಳೆಯೇ ಬಿರಿದಂತೆ ವಿಪರೀತ ನೋವು, ದಿನಾಲು ಒಂದೊಂದು ಕಡೆ ಮುಟ್ಟಲಾರದಷ್ಟು ಸಂಕಟ, ಹೊಟ್ಟೆಯಲ್ಲಿ ಬೆಂಕಿ ಬಿದ್ದ ಹಾಗೆ ಉರಿ. ತಿಂಗಳ ಮುಟ್ಟು ಕೂಡ ನೋವಿಗೆ ಹೆದರಿ ಓಡಿ ಹೋಗಿದೆ. ಶಾಲೆ ಮಕ್ಕಳ ವೈದ್ಯಕೀಯ ತಪಾಸಣೆಗೆ ಬಂದ ಡಾಕ್ಟರು ಅವಳ ತೂಕದ ವ್ಯತ್ಯಾಸ ಗಮನಿಸಿ `ಅಡುಗೆಯವರು ಆರೋಗ್ಯವಾಗಿದ್ದರೆ, ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ ಸೂಕ್ತ ಕಾಳಜಿ ತಕೋ’ ಎಂಬ ಸಣ್ಣ ಎಚ್ಚರಿಕೆ ಕೊಟ್ಟು ಹೋಗಿದ್ದಾರೆ. ಆವತ್ತಿನಿಂದಲೇ ತನ್ನ ದೇಹದಲ್ಲಾಗುವ ಬದಲಾವಣೆಯನ್ನು ಸಾಳೂ ಗಮನಿಸುತ್ತಿದ್ದಾಳೆ. ಇತ್ತೀಚೆಗೆ ಶಾಲೆಗೆ ತಯಾರಾಗಿ ಹೋಗುವಾಗ ಸಾಳೂಗೆ ರವಿಕೆ ಹಾಕಿಕೊಳ್ಳಲು ಕಷ್ಟ ಆಗುತ್ತಿತ್ತು. ಮೊಲೆಯ ತೊಟ್ಟಿನಂಚಿಗೆ ಹಲಸಿನ ಬೇಳೆಯಂತುಹುದ್ದೇನೋ ಒಮ್ಮೊಮ್ಮೆ ಕೈಗೆ ತಾಗಿದಂತಾದರೂ ಕಂಡೂ ಕಾಣದ ಹಾಗೆ ಇದೆ. ಒಮ್ಮೊಮ್ಮೆ ರವಿಕೆ ತೆಗೆಯುವಾಗಲಂತೂ ಬದಿ ಮನೆಯ ಶಾರದಕ್ಕನನ್ನು ಕರೆಯುವುದೇ ರೂಢಿಯಾಗಿ ಹೋದಂತಿದೆ. ಕೈ ಮೇಲೆ ಎತ್ತಲೂ ಆಗುವುದೇ ಇಲ್ಲ.

**

`ಅಲ್ಲಿ ಇಲ್ಲಿ ತಿರುಗಾಡಿಕೊಂಡು ಶಾಲಿ ಕೆಲಸ ಮಾಡಿ ತಿಂದುಂಡುಕೊಂಡ ಜೀವಕ್ಕೆ ಇದೇನಪ್ಪಾ ಇಂತ ಶಿಕ್ಷೆ ಮಲ್ಲಿಕರ‍್ಜುನ’ ಎನ್ನುತ್ತ ಬುಧವಂತನ ಮನೆ ಮುಟ್ಟುವಷ್ಟರಲ್ಲಿ ಸಾಳುಗೆ ಜೀವ ಹೋಗಿ ಬಂದಂತಾಯಿತು. ಬೇಲಿಯಂಚಿಗೆ ಅವನ ನೀಲಿ ಜೀಪು ನಿಂತಿತ್ತು. `ಸರಿ ಟೇಮಿಗೆ ಬಂದೆ ನೋಡಕ್ಕ, ಐದ್ ನಿಮಿಶಾ ಲೇಟ್ ಆದ್ರೂ ನಾ ಹೊಂಟೋಗುತ್ತಿದ್ದೆ’ ಎಂದು ಹಲ್ಲು ಕಿಸಿದ. ಸಾಳೂಗೆ ನಗು ಬರಲಿಲ್ಲ. `ಎಲ್ಲಿಗೆ ಬಿಡಬೇಕ್ ನಿಂಗೆ’ ಎಂಬ ಮರುಪ್ರಶ್ನೆಗೆ ಯೋಚಿಸಿ ಉತ್ತರ ಕೊಡಬೇಕಾಯಿತು. ಮನೆಯಲ್ಲಿ ಡಿಗ್ಗಿ ಅಕ್ಕನ ಮನೆಗೆ ಹೋಗಿ ಸಂಜೆ ರ‍್ತೆ ಎಂದು ಸುಳ್ಳಾಡಿದ್ದು ಗೊತ್ತಾದರೆ ಅತ್ತೆ ಮತ್ತೊಂದು ಹೊಸ ಕಥೆಯನ್ನೆ ಹೇಳಬಹುದು. ಆದ್ರೂ ತಾನು ಡಿಗ್ಗಿಯಿಂದ ಮುಂದೆ ಸೀಸೈ ಊರಿನ ದತ್ತಾ ದೇಸಾಯಿ ನಾಟಿ ವೈದ್ಯರ ಹತ್ರ ಹೋಗುದು ಊರಲ್ಲಿ ಒಬ್ಬರಿಗಾದ್ರು ತಿಳಿದಿರಲಿ ಎಂದುಕೊಂಡು `ತಮ್ಮಾ ದತ್ತಣ್ಣನ ಹತ್ರ ಹೋಗಿ ಗಾಂವಟಿ ಮದ್ದ ತಕಾ ರ‍್ತೆ’ ಎಂದಳು. `ಹಂಗಾರೆ ಸೀಸೈಗೆ ಹೋಗು ರಸ್ತೆ ಹತ್ರ ಬಿಡತೆ ಅಕ್ಕ. ಮುಂದಕ್ಕೆ ಐದು ಕಿಮಿ ನೀ ನಡಕ್ಕಂಡೆ ಹೋಗಬೇಕ. ಅಲ್ಲಿ ಗಾಡಿ ಹೋಗುದಿಲ್ಲ. ನಿನ್ನ ನಸೀಬು ಚಲೋ ಇದ್ರೆ ಯಾರದ್ದಾದರು ಸ್ಕೂಟರ್ ಸಿಕ್ಕರೆ ಸಿಗ್ತು’ ಎಂದು ಮತ್ತೆ ಹಲ್ಲು ಕಿಸಿದ.

**

ಸೀಸೈ ಊರಿನತ್ತ ಗಾಂವಟಿ ಮದ್ದು ತರಲು ಮುಖ ಮಾಡಿ ಹೋದ ಸಾಳೂ ಮೂರು ದಿನ ಗಳಿದರೂ ಶಾಲೆಗೆ ಬಂದಿಲ್ಲ. ಒಬ್ಬಳೆ ಮದ್ದು ತರಲು ಯಾಕೆ ಹೋದಳು ಎಂದು ಯೋಚಿಸಿ ಯೋಚಿಸಿ ಹೆಡ್ ಬಾಯೋರಿಗೆ ಸಮಾಧಾನ ಇಲ್ಲದಂತಾಗಿದೆ. ಯಾರಿಗಾದ್ರೂ ಫೋನ್ ಮಾಡಿ ವಿಚಾರಿಸುವ ಎಂದರೆ ಸೀಸೈನಲ್ಲಿ ನೆಟರ‍್ಕ ಕೂಡಾ ಇಲ್ಲ. ಹೀಗಾಗಿ ಸಾಳೂ ವ್ಯಾಪ್ತಿ ಪ್ರದೇಶದ ಹೊರಗಿದ್ದಾಳೆ. ದಿನ ದಾಟುತ್ತಿದೆ.

***********************

ಅಕ್ಷತಾ ಕೃಷ್ಣಮೂರ್ತಿ

10 thoughts on “

  1. ಕತೆ ತುಂಬಾ ಕುತೂಹಲ ಹೆಚ್ಚಿಸಿದೆ. ಅಭಿನಂದನೆಗಳು ಮೇಡಂ. ಸಾಳೂವಂತ ಬಡ ಹೆಣ್ಮಕ್ಕಳು ಜೀವನ ಪ್ರತಿ ಗ್ರಾಮದಲ್ಲೂ ಇನ್ನೂ ಜೀವಂತವಾಗಿವೆ. ಮುಕ್ತಾಯ ಅಪೂರ್ಣ ಅನಿಸ್ತು…

    1. ನಮಸ್ತೆ, ಧನ್ಯವಾದ ತಮಗೆ. ಸಾಳೂ ಮುಗಿಯದ ಕಥೆ.

  2. ಸಂಗಾತಿಯಲ್ಲಿ ನನ್ನ ಸಾಳೂ ಕಂಡಳು.
    ಧನ್ಯವಾದ ಸಂಪಾದಕರಿಗೆ.

  3. ಸಾಳು ವಿನಂತಹ ಸ್ಥಿತಿಯಲ್ಲಿರುವ ಹತ್ತಾರು ಹೆಣ್ಣುಜೀವಗಳು ಕಣ್ಮುಂದೆ ಬಂದವು.. ತುಂಬಾ ಚೆನ್ನಾಗಿದೆ ಅಕ್ಷತಾ.. ಅಭಿನಂದನೆಗಳು..

  4. ಕಥೆ ತುಂಬಾ ಚೆನ್ನಾಗಿದೆ ಅಕ್ಷತಾ ಅಭಿನಂದನೆಗಳು

Leave a Reply

Back To Top