ಉತ್ತರ ಕರ್ನಾಟಕದ ಸಡಗರದ ಹಬ್ಬ ಕಾರಹುಣ್ಣಿಮೆ

ಲೇಖನ

ಉತ್ತರ ಕರ್ನಾಟಕದ ಸಡಗರದ

ಹಬ್ಬ ಕಾರಹುಣ್ಣಿಮೆ

ಜಯಶ್ರೀ ಭ.ಭಂಡಾರಿ

Kara hunnime3 - Karnataka Trending

ಭಾರತ ದೇಶ ಹಬ್ಬಗಳ ನಾಡು. ಸಂಸ್ಕ್ರತಿಯ ನೆಲೆವಿಡು. ಹಬ್ಬಗಳು ಪ್ರಾರಂಭವಾದರೆ ಒಂದರ ಹಿಂದೆ ಒಂದರಂತೆ ಬರುತ್ತವೆ. ಮನೆಯ ತುಂಬ ಸಡಗರ ತುಂಬತ್ತೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಖುಷಿಯಾಗಿ ಹಬ್ಬ ಆಚರಿಸುತ್ತಾರೆ. ಮನೆಯ ಹೆಂಗಳೆಯರಿಗಂತೂ ಬಿಡುವಿಲ್ಲದ ಕೈತುಂಬ ಕೆಲಸ.ಪುರುಷರು ಗದ್ದೆತೋಟ, ಮನೆ ‌‌‌‌‌ಅಂತ ಓಡಾಡ್ತಾ ಕೆಲಸಗಳಲ್ಲಿ ಖುಷಿ ಯಾಗಿರ್ತಾರೆ.

ಮುಂಗಾರಿನ ಜೊತೆಗೆ ಬರುವ ಹಬ್ಬ ಕಾರಹುಣ್ಣಿವೆ.ಉತ್ತರ ಕರ್ನಾಟಕದಲ್ಲಿ ಎರಡು ದಿನಗಳ ಹಬ್ಬ.ಮೊದಲ ದಿನ ಹೊನ್ನುಗ್ಗಿ ಮರುದಿನ ಕಾರಹುಣ್ಣಿಮೆ. ಕಾರ ಹುಣ್ಣಿಮೆ ಇದು ಕೃಷಿಕರಿಗಾಗಿ ಇರುವ ಹಬ್ಬ.ಕೃಷಿಕರು,ಜನಪದರು ಆಚರಿಸುವ ಹಬ್ಬಗಳಲ್ಲಿ ಇದು ಮೊದಲನೆಯದು.ಉಳಿದೆಲ್ಲವು ನಂತರ ಬರುತ್ತವೆ.ಬೆಳೆಯನ್ನು ಬೆಳೆದು ಮಾರಿಬಂದ ಹಣ ರೈತರ ಕೈಯಲ್ಲಿರುತ್ತದೆ. ಹಳೆಯ ಸಾಲಗಳನ್ನು ತೀರಿಸಿ ಹೊಸ ಮನೆ,ಹೊಲ,ಒಡವೆ ಖರೀದಿಗೆ ತೊಡಗುವರು

ಬೇಸಿಗೆ ಸರಿದು ಮಳೆಗಾಲ ಪ್ರಾರಂಭದಲ್ಲಿ ಕಾರ ಹುಣ್ಣಿಮೆ ಬರುತ್ತದೆ ಜೂನ ಇಲ್ಲವೆ ಜುಲೈನಲ್ಲಿ ಬರುವ ಕೃಷಿಕರ ಸಂತಸದ ಹಬ್ಬ.ಎತ್ತುಗಳ ಜೊತೆಗೆ ಹೊಲದ ನಿತ್ಯೋಪಯೋಗಿ ವಸ್ತುಗಳಾದ ರಂಟೆ,ಕುಂಟೆ,ಕೂರಿಗೆಗಳನ್ನು ಸಹ ದೇವರಂತೆ ಪೂಜಿಸುವರು..ಉತ್ತರ ಕರ್ನಾಟಕದಲ್ಲಿ ಎತ್ತು,ದನ,ಕರುಗಳನ್ನ ಪೂಜಿಸಿ ಕರಿಹರಿಯುವ ಸಂಪ್ರದಾಯವಿದೆ.ಮೊದಲ ದಿನ ಹೊನ್ನುಗ್ಗಿ ಎಂದು ವಿಶಿಷ್ಟವಾಗಿ ಆಚರಿಸುತ್ತಾರೆ.ಮಾರನೆ ದಿನ ಕಾರಹುಣ್ಣಿಮೆ.’ ಕಾರ್’ ಎಂದರೆ ಮಳೆಗಾಲ.ಮುಂಗಾರಿನ ಮೋಡಗಳು ಕಪ್ಪಾಗಿ ಆಕಾಶದಲ್ಲಿ ಒಂದಕ್ಕೊಂದು ತಾಕಲಾಡುವ ಸಮಯ.

ಹೊನ್ನುಗ್ಗಿ: ಊರಿನ ಕೆರೆ,ಬಾವಿಗೆ ಎತ್ತು ದನಗಳನ್ನೆಲ್ಲ ಒಯ್ದು ಮೈ ತೊಳೆಯುವರು.ದನಗಳಿಗೆ ರೋಗಬಾರದೆ ಮುಂದಿನ ಹೊಲಕೆಲಸಗಳಿಗೆ ಸಿದ್ಧವಾಗಲು ಔಷಧಿ ಗೊಟ್ಟ ಹಾಕುತ್ತಾರೆ. ಎತ್ತುಗಳ ಕೋಡು ಪಾಲಿಶ ಮಾಡಿ ಬಣ್ಣ ಹಚ್ಚುತ್ತಾರೆ.ಕೊರಳಲ್ಲಿ ಗೆಜ್ಜೆ ಹಾಗೂ ಕೊಂಬುಗಳಿಗೆ ರಿಬ್ಬನ್ ಕಟ್ಟಿ ಶಂಗರಿಸುತ್ತಾರೆ.ಹಿಂಡಿ ನುಚ್ಚು ಕಲಿಸಿ ತಿನ್ನಿಸುವರು. ಸಾಯಂಕಾಲ ಪೂಜಿಸುವರು. ಕಂಬಳಿ ಹಾಸಿ ಎತ್ತುಗಳನ್ನು ಮನೆಯ ಪಡಸಾಲೆಯಲ್ಲಿ ನಿಲ್ಲಿಸಿ ಆರತಿ ಮಾಡಿ ಎತ್ತುಗಳ ಪಾದಕ್ಕೆ ಬಂಗಾರ ಮುಟ್ಟಿಸಿ ತಿನ್ನಲು ಅಕ್ಕಿಯ ಹುಗ್ಗಿಯನ್ನು ಕೊಡುತ್ತಾರೆ.ಹಾಡಿ ಹರಿಸಿ ಒಳ್ಳೆಯ ಬೆಳೆ ಹಾಗೂ ಸಮೃದ್ಧಿಗಾಗಿ ಬೇಡಿಕೊಳ್ಳುವರು. “ಹೊನ್ನು-ಹುಗ್ಗಿ” ಎನ್ನುವದು ಜನರ ಬಾಯಲ್ಲಿ ಹೊನ್ನುಗ್ಗಿಯಾಗಿದೆ.

ಕರಿಹರಿಯುವದು: ಮರುದಿನ ಕಾರ ಹುಣ್ಣಿಮೆ ದಿನ ಸಡಗರ ಸಂಭ್ರಮ.ಕರಿ ಹರಿಯುವ ಸಂಪ್ರದಾಯ. ತಮ್ಮ ಎತ್ತುಗಳನ್ನು ಶೃಂಗರಿಸುತ್ತಾರೆ. ದಪ್ಪ ನಾರಿನ ಹಗ್ಗಕ್ಕೆ ಬೇವಿನ ಸೊಪ್ಪು,ಕೊಬ್ಬರಿ ಬಟ್ಟಲುಗಳನ್ನು ಹೆಣೆದು ಸರಮಾಡಿ ಊರ ಅಗಸೆ ಬಾಗಿಲಿಗೆ ರಸ್ತೆಗೆ ಅಡ್ಡವಾಗಿ ಎತ್ತರದಲ್ಲಿ ಕಟ್ಟುವರು. ಕರಿ ಹರಿಯುವ ಎತ್ತುಗಳನ್ನು ಊರ ಪ್ರಮುಖರು ಆಯ್ಕೆ ಮಾಡುತ್ತಾರೆ. ಇವುಗಳಲ್ಲಿ ಒಂದು ಕರಿ ಇನ್ನೊಂದು ಬಿಳಿ ಎತ್ತು. ಊರೆಲ್ಲ ಮೆರವಣಿಗೆ ಮಾಡಿಕೊಂಡು ಬಂದು ದೇವಾಲಯದ ಮುಂದೆ ನಿಲ್ಲಿಸಿ ಅವುಗಳನ್ನು ಬೆದರಿಸಿ, ಬಾಲತಿರುವಿ ಕರಿಹರಿಯಲು ಓಡಿಸುತ್ತಾರೆ. ನಂತರ ಉಳಿದೆಲ್ಲ ಎತ್ತುಗಳು ಸಾಗುತ್ತವೆ.ಕರಿ ಎತ್ತು ಮುಂದೆ ಸಾಗಿ ಜಯಿಸಿದರೆ ಮುಂಗಾರು ಬೆಳೆ ಚೆನ್ನಾಗಿ ಬರುವದು, ಬಿಳಿಎತ್ತುಜಯಿಸಿದರೆ ಹಿಂಗಾರು ಚೆನ್ನಾಗುವದೆಂಬ ನಂಬಿಕೆ ಇದೆ.ಇದನ್ನು ತಿಳಿದೆ ಕೃಷಿಕಾರ್ಯ ಆರಂಭಿಸುತ್ತಾರೆ. ಕೆಲವು ಕಡೆ ಬಹುಮಾನ ಕೊಡುವ ಪದ್ಧತಿಗಳೂ ಇವೆ. ಅದಕ್ಕಾಗಿ “ಕಾರ ಹುಣ್ಣಿಮೆ ಕರಕೊಂಡ ಬಂತು, ಉಗಾದಿ ಉಡಗಿಸಿಕೊಂಡ ಹೋಯ್ತು,’ ಎಂಬ ಗಾದೆಮಾತಿದೆ. ಕಾರಹುಣ್ಣಿಮೆಯಾದ ಮೇಲೆ ಕತ್ತೆನೂ ಬಾಸಿನಗ ಕಟ್ಟೊಲ್ಲ ಎಂಬ ಮಾತಿದೆ. ದೀಪಾವಳಿ ಕಳೆದು ತುಳಸಿಲಗ್ನ ಬರೋವರೆಗೂ ಲಗ್ನಗಳು ನಡಿಯುವದಿಲ್ಲ. ಹೊಸಮದುಮಕ್ಕಳು ಈ ಕರಿಹರಿಯುವ ಪ್ರಕ್ರೀಯೆಯನ್ನು ನೋಡುವಂತಿಲ್ಲ. ಕಾರಹುಣ್ಣಿಮೆ ಬೇರೆ ಬೇರೆ ರೀತಿಯಲ್ಲಿ ಆಚರಣೆಯಲ್ಲಿದ್ದರೂ ಉತ್ತರ ಕರ್ನಾಟಕದಲ್ಲಿ ಪ್ರಮುಖ ಹಬ್ಬವಾಗಿದೆ.ಪ್ರಾಣಿ ಹಾಗೂ ಮನುಷ್ಯರ ನಡುವಿನ ಬಾಂಧವ್ಯ, ಪ್ರೀತಿ ಸಾಮರಸ್ಯದ ಸಂಕೇತವಾಗಿದೆ.

ಹೀಗೆ ಮಳೆ ಬೆಳೆ ತಿಳಿಸುವ ಮುಂಭವಿಷ್ಯದ ಹಬ್ಬವಾಗಿದೆ ಕಾರಹುಣ್ಣಿಮೆ.

‌‌.  ‌‌‌‌‌‌‌   *******************************

Leave a Reply

Back To Top