ಆಧ್ಯಾತ್ಮ-ಸಂಸಾರ

ಕಥೆ

ಆಧ್ಯಾತ್ಮ-ಸಂಸಾರ

ಗುರುರಾಜ ಶಾಸ್ತ್ರಿ

What is Abstract Art?

ಸೀತಮ್ಮಳಿಗೆ ಯೋಚನೆ ಶುರುವಾಗಿತ್ತು. ತನಗಾಗಲೇ ಅರವತ್ತು ವರ್ಷವಾಗಿದೆ. ಇನ್ನೂ ಅವಳ ಮಗ ಸುನೀಲನಿಗೆ ಮದುವೆಯಾಗಿಲ್ಲ. ಒಳ್ಳೇ ಸರ್ಕಾರಿ ಕೆಲಸ, ಸುಂದರವಾಗಿದ್ದಾನೆ, ಆದರೆ ಮದುವೆ ವಿಷಯ ಎತ್ತಿದರೆ ಹತ್ತು ಅಡಿ ದೂರ ಹೋಗುತ್ತಾನೆ. ನನ್ನ ನಂತರ ಇವನನ್ನು ಯಾರು ನೋಡಿಕೊಳ್ಳುತ್ತಾರೆ, ಅದು ಹಾಳಗಿ ಹೋಗಲೀ, ನನಗೇ ಹುಷಾರಿಲ್ಲ ಅಂದರೂ ಯಾರದರೂ ಇನ್ನೊಂದು ಹೆಣ್ಣು ಮನೇಲಿ ಇದ್ದರೆ ಒಳ್ಳೆಯದಲ್ಲವೇ. ಈಗಾಗಲೇ ಅವನಿಗೆ ವಯಸ್ಸು ಮೂವತ್ತು ದಾಟಿದೆ. ಇನ್ನೊಂದೆರೆಡು ವರ್ಷ ಹೀಗೆ ಬಿಟ್ಟರೆ, ಆಮೇಲೆ ಮದುವೆ ಅನ್ನೋದೆ ಮರೆತುಬಿಡಬೇಕಾಗುತ್ತೆ. ಇವತ್ತು ಅವನು ಆಫೀಸಿನಿಂದ ಬರಲಿ, ಮಾತನಾಡುತ್ತೇನೆ. ಏನಾದರೊಂದು ಇಂದು ನಿಶ್ಚಯವಾಗಲೇಬೇಕು. ಪಕ್ಕದಮನೆ ಪರಿಮಳಳ ಸಲಹೆಯಂತೆ ನಾನೊಂದರೆಡು ದಿನ ಉಪವಾಸ ಸತ್ಯಾಗ್ರಹ ಮಾಡ್ತೀನಿ ಅಂತ ಹೆದರಿಸಿದ್ರೆ, ದಾರೀಗೆ ಬರ್ತಾನೆ ಅನ್ಸುತ್ತೆ, ಹಾಗೇ ಹೀಗೆ ಅಂತ ಯೋಚಿಸುತ್ತಾ ಮಗನ ಬರುವಿಕೆಯನ್ನು ಕಾಯುತ್ತಾ ಕುಳಿತಳು ಸೀತಮ್ಮ.

ಸುನೀಲನಿಗೆ ಬೇರೊಂದು ಸರ್ಕಾರಿ ಆಫೀಸಿನಿಂದ ಈಗಿರುವ ಆಫೀಸಿಗೆ ಕಳೆದವಾರವಷ್ಟೇ ವರ್ಗಾವಣೆಯಾಗಿತ್ತು. ಇವನ ಜಾಗದಲ್ಲಿದ್ದವರು ಎರಡು ದಿನದಲ್ಲಿ ನಿವೃತ್ತಿಯಾಗುವವರಿದ್ದರು. ಹಾಗಾಗಿ ರಿಪೋರ್ಟ್‌ ಮಾಡಿಕೊಂಡ ಒಂದೆರೆಡು ದಿನ ಇವನಿಗೆ ಕುಳಿತುಕೊಳ್ಳಲು ಜಾಗವೂ ಕೂಡಾ ಇರಲಿಲ್ಲ. ಅಲ್ಲಲ್ಲಿ ಓಡಾಡಿಕೊಂಡು ಆಫೀಸಿನ ವಾತಾವರಣವನ್ನು ಮೈಗೂಡಿಸಿಕೊಂಡ. ಎಲ್ಲಾ ಸಹೋದ್ಯೋಗಿಗಳ ಪರಿಚಯವೂ ಆಯಿತು. ನೇರವಾಗಿ ಕೆಲಸವನ್ನೇ ಶುರುಮಾಡಿಬಿಟ್ಟರೆ, ಇಂತಹ ಸರ್ಕಾರಿ ಆಫೀಸುಗಳಲ್ಲಿ ಸಹೋದ್ಯೋಗಿಗಳ ಪರಿಚಯ ಆಗುವುದೇ ಕಷ್ಟ. ಇವನಿಗೆ ಮುಕ್ತವಾಗಿ ಸಿಕ್ಕ ಮೊದಲೆರಡು ದಿನ ವರವಾಗಿಯೇ ಪರಿಣಮಿಸಿತು. ಈಗ ಒಳ್ಳೆಯ ದೊಡ್ಡ ಮೇಜು, ಕುರ್ಚಿ ಇದೆ. ಆಫೀಸರ್‌ ಆಗಿರುವುದರಿಂದ ಇವನದು ಹೆಚ್ಚೇನು ಕೆಲಸವಿರುವುದಿಲ್ಲ, ಆದರೆ ಜವಾಬ್ದಾರಿ ಹೆಚ್ಚು. ಅಷ್ಟೇ ಅಲ್ಲದೆ ಲಂಚದ ಹಣ ಮಾಡಲು ಒಂದು ಅತ್ಯುತ್ತಮವಾದ ಕಛೇರಿ ಇದಾಗಿತ್ತು. ತನಗೆ ಜಾಗ ಸಿಕ್ಕ ಮೊದಲನೇ ದಿನವೇ ಒಂದು ದೊಡ್ಡ ಗಾಂಧೀಜಿಯ ಗೊಂಬೆಯನ್ನು ತಂದ. “ಗಾಂಧೀಜಿ ನಮ್ಮನ್ನು ನೋಡುತ್ತಿರುತ್ತಾರೆ.ನಾನೂ ಅವರ ಹಾಗೇ ನಿಯತ್ತಿನಿಂದಿರಲು ಬಯಸುತ್ತೇನೆ. ಲಂಚ ಕೇಳುವುದು ಹಾಗೂ ಕೊಡುವುದು ಎರಡೂ ಅಪವಾದ” ಎಂದು ಬಿಳಿಯ ಹಾಳೆಯಲ್ಲಿ ದೊಡ್ಡದಾಗಿ ಮುದ್ರಿಸಿ ಹಾಳೆಯನ್ನು ಗಾಂಧಿಜಿ ಗೊಂಬೆಗೆ ನೇತುಹಾಕಿದ. ಎರಡು ದಿನಕ್ಕೆ ಮುಂಚೆ ಗೆಳೆಯರಾಗಿದ್ದ ಸಹೋದ್ಯೋಗಿಗಳು ಇವನನ್ನು ಒಂದು ವಿಚಿತ್ರ ಮನುಷ್ಯನಂತೆ ನೋಡಿ ನಕ್ಕರು.

ಈಗ ಸುನೀಲ ಈ ಕಛೇರಿಗೆ ಬಂದು ಏಳು ದಿನವಾಗಿದೆ. ಯಾರೋ ಒಬ್ಬ ವಯಸ್ಸಾದವರು ಇವನ ಮುಂದೆ ಬಂದು, ಬಹಳ ಬೇಗ ನನಗೆ ಕೆಲಸ ಮಾಡಿಕೊಟ್ಟಿದ್ದೀರಿ, ನಿಮಗೆ ಎಷ್ಟು ಕೊಡಬೇಕು ಅಂತ ಹೇಳಿದರೆ ಅಷ್ಟು ಕೊಡುತ್ತೇನೆ ಎಂದರು. ಅದು ಜೋರಾಗಿ ಎಲ್ಲರಿಗೂ ಕೇಳುವಂತೆ. ಇವನು ಅವರಿಗೆ ಗಾಂಧೀಜಿಯ ಗೊಂಬೆ ತೋರಿಸಿದ. ಇವೆಲ್ಲ ಇದ್ದಿದ್ದೆ ಬಿಡಿ ಸ್ವಾಮಿ, ಭಾರತದಲ್ಲಂತೂ ಬಹಳಷ್ಟು ಅನಾಚಾರಗಳು ಆ ಮಹಾತ್ಮನ ಪೋಟೋ ಗೋಡೆಗೆ ತೂಗುಹಾಕೇ ಮಾಡುತ್ತಾರೆ, ಇರಲಿ, ನಿಮ್ಮ ಫೀಸ್‌ ಎಷ್ಟು ಎಂದ ಮತ್ತೆ. ಈಗ ಸುನೀಲನಿಗೆ ಕೋಪ ಬಂತು. ಕನ್ನಡದಲ್ಲಿ ಬರೆದಿರುವುದು ಅರ್ಥವಾಗಲ್ಲ ಅಂದ್ರೆ ಹೇಳಿ, ನಿಮಗೆ ಗೊತ್ತಿರೋ ಭಾಷೆಯಲ್ಲೇ ಹೇಳ್ತೇನೆ. ನಿಮ್ಮಂತಹವರೇ ಸರ್ಕಾರಿ ಉದ್ಯೋಗಿಗಳನ್ನು ಹಾಳು ಮಾಡಿರೋದು. ಮೊದಲು ಲಂಚ ಕೊಡುವವರನ್ನು ಒಳಗೆ ಹಾಕಬೇಕು, ಆಗ ಜನಕ್ಕೆ ಬುದ್ದಿ ಬರುತ್ತೆ ಎಂದ. ನಮಗೆ ಸರ್ಕಾರ ಸಂಬಳ ಕೊಡುತ್ತೆಲ್ಲ, ನೀವು ಎಸೆಯೋ ಎಂಜಲು ಕಾಸು ನನಗೇನು ಬೇಡ ಎಂದು ಜೋರಾಗಿ ಕಿರುಚಾಡಿದ. ಬಂದ ಆಸಾಮಿಯು ಇವನನ್ನು ಯಾವುದೋ ಬೇರೆ ಗ್ರಹದಿಂದ ಬಂದ ಪ್ರಾಣಿಯಂತೆ ನೋಡುತ್ತಾ ನಮಸ್ಕಾರ ಮಾಡಿ ಕಛೇರಿಯಿಂದ ಹೊರಟುಹೋದ.

ಆಗ ಕಛೇರಿಯ ಮುಖ್ಯಸ್ಥರಾದ ರೆಡ್ಡಿಯವರು ಬಂದು, ನೋಡಿ ಸುನೀಲ್‌ ಕಛೇರಿಯಲ್ಲಿ ಎಲ್ಲಾ ಹೇಗಿದ್ದಾರೋ ಹಾಗೇ ನೀವು ಇದ್ದರೆ ಒಳ್ಳೆಯದು ಎಂದರು. ಏನ್‌ ಸಾರ್‌, ನೀವು ಹೇಳೋದೂ ಎಂದು ಅವನು ಕೇಳಿದ ತಕ್ಷಣ, ಕಛೇರಿಯಲ್ಲಿರುವವರು ಯಾರೂ ಯಾರ ಮೇಲೂ ಕೋಪಮಾಡಿಕೊಳ್ಳುವುದಿಲ್ಲ, ಕೂಗಾಡುವುದಿಲ್ಲ, ಹಾಗೇ ನೀವೂ ಶಾಂತವಾಗಿರುವುದನ್ನು ಕಲಿಯಬೇಕಂದೆ ಅಷ್ಟೆ. ಈ ಆಫೀಸಿನ ನಿಯಮಗಳನ್ನು ನೀವು ಬೇಗ ಅರ್ಥಮಾಡಿಕೊಳ್ಳಬೇಕು, ಸ್ವಲ್ಪ ನೀವೆಲ್ಲಾ ತಿಳಿಸಿಕೊಡಿ ಎಂದು ಬೇರೆ ಉದ್ಯೋಗಿಗಳಿಗೆ ಹೇಳುತ್ತಾ, ರೆಡ್ಡಿಯವರು ತಮ್ಮ ಕ್ಯಾಬಿನ್‌ಗೆ ತೆರಳಿದರು. ರೆಡ್ಡಿಯವರು ಯಾವ ವಿಷಯದ ಬಗ್ಗೆ ಸೂಕ್ಷ್ಮವಾಗಿ ಹೇಳಿದರು ಎಂಬುದು ಸುನೀಲನಿಗೆ ಅರ್ಥವಾಯಿತು. ಕೋಪ ಇನ್ನೂ ಸ್ವಲ್ಪ ಜಾಸ್ತಿಯೇ ಆಯಿತು. ಕಛೇರಿಯ ಸಮಯ ಮುಗಿದಿದ್ದರಿಂದ ಮನೆಯ ಕಡೆ ಹೊರಟ ಸುನೀಲ. ಆದರೆ ಇವನ ಸಹೋದ್ಯೋಗಿಗಳು ಇನ್ನೂ ಒಂದು ಗಂಟೆ ತಮಗೆಲ್ಲಾ ಕೆಲಸ ಇದೆ ಅಂದು ಅಲ್ಲೇ ಉಳಿದುಕೊಂಡರು. ಅವರು ಪ್ರತಿದಿನ ಕಛೇರಿಯ ಸಮಯವಾದ ಒಂದು ಗಂಟೆಯ ನಂತರವೇ ಹೊರಡುವುದನ್ನು ಅವನೂ ಗಮನಿಸಿದ್ದ. ಕಛೇರಿಯಲ್ಲಿ ಇಂದು ನಡೆದ ಸನ್ನಿವೇಶಗಳಿಂದ ಅವನಿಗೆ ತುಂಬಾ ತಲೆ ಬಿಸಿಯಾಗಿತ್ತು.

ಮನೆಯಲ್ಲಿ ಸೀತಮ್ಮ ಮಗ ಸುನೀಲನೊಂದಿಗೆ ಅವನ ಮದುವೆ ವಿಷಯ ಮಾತನಾಡಲು ಕಾಯುತ್ತಿದ್ದಳು.

ಸುನೀಲ ಮನೆಗೆ ಬಂದಾಗ ಸಂಜೆ ಸುಮಾರು ಏಳು ಗಂಟೆ. ಮನೆಯಲ್ಲಿ ದೀಪಗಳಾವುದೂ ಹಾಕಿರಲಿಲ್ಲ. ಸೀತಮ್ಮ ಬಾಗಿಲು ತೆಗೆದು ಟೀವಿ ನೋಡುತ್ತಾ ಕುಳಿತಳು. ಇದೇಕೆ ದೀಪವನ್ನೂ ಹಾಕದೆ ಕುಳಿತಿರುವೆ, ಹಾಗೇ ಕತ್ತಲಲ್ಲಿ ಟಿ.ವಿ ನೋಡಿದರೆ ಕಣ್ಣು ಹಾಳಾಗುತ್ತೆ ಎಂದ ಸುನೀಲ. ಸೀತಮ್ಮನಿಂದ ಯಾವುದೇ ಉತ್ತರವಿಲ್ಲ. ಟಿವಿ ಧಾರವಾಹಿಯಲ್ಲಿ ಅಮ್ಮ ತಲ್ಲೀಣಳಾಗಿದ್ದಾಳೆ ಎಂದುಕೊಂಡು ನಕ್ಕು ತಾನೇ ದೀಪ ಹಾಕಿದ.

ಅಮ್ಮ, ತಲೆ ಚಿಟ್‌ ಹಿಡಿದುಹೋಗಿದೆ, ಒಂದು ಲೋಟ ಬಿಸಿ ಬಿಸಿ ಕಾಫಿ ಕೋಡ್ತ್ಯಾ ಎಂದ. ಸೀತಮ್ಮನಿಂದ ಯಾವುದೇ ಪ್ರತಿಕ್ರಿಯೆಯಿಲ್ಲ. ಒಮ್ಮೆ ಹತ್ತಿರಹೋಗಿ ಸೀತಮ್ಮನನ್ನು ನೋಡಿದ, ಮಲಗಿ ಬಿಟ್ಟಿದ್ದಾಳೇನೋ ಎಂದು. ಸೀತಮ್ಮ ಮಲಗಿರಲಿಲ್ಲ ಮತ್ತು ಅವಳ ದೃಷ್ಟಿಯೂ ಟಿವಿಯ ಮೇಲಿಲ್ಲವೆಂಬುದು ತಿಳಿಯಿತು ಸುನೀಲನಿಗೆ. ಏನಾಗಿದೆ ನಿಂಗೆ ಇವತ್ತು, ಯಾಕೆ ಹೀಗೆ ಸುಮ್ಮನೆ ಕುಳಿತಿದ್ದಿ, ಏನಾದರೂ ಮಾತನಾಡು, ನೀನು ಹೇಳದಿದ್ದರೆ ನನಗೆ ಹೇಗೆ ಗೊತ್ತಾಗಬೇಕು ಎಂದ ಸುನೀಲ. ಹೌದು ಎಲ್ಲಾ ಬಿಡಿಸಿ ಬಿಡಿಸಿ ಹೇಳಬೇಕು. ನಿನಗೆ ತಲೆ ಬಿಸಿಯಾದ್ರೆ ನಾನು ಕಾಫಿ ಮಾಡಿಕೊಡ್ಬೇಕು, ನನಗೇನಾದ್ರು ಹುಷಾರಿಲ್ಲ ಅಂದ್ರೆ ಯಾರು ಕೊಡ್ತಾರೆ ಕಾಫಿ ಎಂದಳು ಸೀತಮ್ಮ. ನಾನಿದೀನೆಲ್ಲಮ್ಮ ಎಂದು ಸುನೀಲನು ಹೇಳಿದ ತಕ್ಷಣ, ಹೌದು, ದಿನವೆಲ್ಲಾ ನನ್ನ ಮುಂದೆಯೇ ಕುಳಿತುಕೊಂಡಿರ್ತ್ಯಾ ನೋಡು. ನೀನು ಆಫೀಸಿಗೆ ಹೋದಾಗ ನನಗೇನಾದರು ಆದ್ರೆ, ಎಂದಳು ಸೀತಮ್ಮ. ಸುಮ್ಮನೆ ಏನೇನೋ ಯೋಚಿಸಬೇಡ, ಸುತ್ತಿ ಬಳಸಿ ಮಾತನಾಡೋದ್‌ ಬಿಟ್ಟು, ಅದೇನ್‌ ಹೇಳ್ಬೇಕೂಂತ ಇದೆಯೋ ಅದನ್ನು ಹೇಳಿಬಿಡು ಎಂದ ಸುನೀಲ.

ನಾನು ನಾಳೆಯಿಂದ ಊಟ ಮಾಡೋಲ್ಲ, ಊಟ ಮಾಡೋದೇನೂ, ಅಡುಗೇನೂ ಮಾಡೋಲ್ಲ. ನನಗೆ ಕೈಲಾಗೊಲ್ಲ ಎಂದಳು ಸೀತಮ್ಮ. ಸರಿ ಹಾಗಾದ್ರೆ ಯಾರನ್ನಾದರೂ ಕೆಲಸಕ್ಕೆ ಇಟ್ಕೊಳೋಣ. ಬೇಳಗ್ಗೆಯಿಂದ ಸಂಜೆಯವರೆಗೂ ನಮ್ಮ ಮನೆಯಲ್ಲಿಯೇ ಇರುವಂತವರಾದರೆ ಒಳ್ಳೆಯದು. ನಿನಗೂ ಸಹಾಯವಾಗುತ್ತೆ ಮತ್ತು ಜೊತೆಗೂ ಒಬ್ಬರಿದ್ದಹಾಗೆ ಅಗುತ್ತೆ ಎಂದ ಸುನೀಲ. ಸೀತಮ್ಮನಿಗೆ ಎಲ್ಲಿಲ್ಲದ ಕೋಪ ಬಂತು. ನನಗೆ ಒಬ್ಬಳು ಸೊಸೆ ಬೇಕು ಅಷ್ಟೇ, ಎಂದಾಗ, ಹಾಗೆ ಹೇಳು ಮತ್ತೆ, ವಿಷಯ ಇಲ್ಲಿದೆ,ನೀನಿನ್ನೆಲ್ಲೋ ಸುತ್ತಾಡ್ತಾ ಇದ್ಯಾ. ಏನೇನೋ ಮಾತನಾಡಿ ನನಗೆ ಮರೆಸಬೇಡ. ಇವತ್ತು ಎರಡರಲ್ಲಿ ಒಂದು ತೀರ್ಮಾನವಾಗಲೇಬೇಕು, ಮದುವೆ ಮಾಡಿಕೊಳ್ಳುತ್ತೀಯೋ ಇಲ್ಲವೋ ಹೇಳಿಬಿಡು. ಅಮ್ಮ ನೀನು ಅರ್ಥ ಮಾಡಿಕೋ, ನನಗೆ ಮೊದಲೇ ಆಫೀಸಿನ ಇಂದಿನ ಕೆಲಸದಿಂದ ತಲೆ ಕೆಟ್ಟಿದೆ, ನಾಳೆ ನಿಧಾನವಾಗಿ ಮಾತನಾಡೋಣ ಎಂದ.

ಸೀತಮ್ಮ, ಸೋಫಾದಿಂದ ಎದ್ದು ಮನೆಯಿಂದ ಹೊರಗಡೆ ಹೊಸಿಲಿನ ಕಟ್ಟೆ ಮೇಲೆ ಕುಳಿತು, ನೀನು ಮದುವೆ ಮಾಡಿಕೊಳ್ಳುತ್ತೇನೆ ಎಂದರೆ ಮಾತ್ರ ನಾನು ಒಳಗೆ ಬರ್ತೀನಿ ಎಂದಳು. ಸುನೀಲನಿಗೆ ಕೋಪ ತಡೆದುಕೊಳ್ಳಲಾಗಲಿಲ್ಲ.

ಬಹುಶಃ ನಿನ್ನ ಈ ಹಠಕ್ಕೇ ಹೆದರಿ, ನಾನು ಹುಟ್ಟಿದ ತಕ್ಷಣ ಅಪ್ಪ ನಿನ್ನನ್ನು ಬಿಟ್ಟು ಹೋದದ್ದು ಅನಿಸುತ್ತೆ ಎಂದ ಸುನೀಲ. ಸೀತಮ್ಮಳಿಗೆ ಸಿಡಿಲು ನೇರವಾಗಿ ತಲೆಯ ಮೇಲೆ ಬಡಿದಂತಾಯಿತು. ಸಾಕಷ್ಟು ಜನ ಈ ವಾಕ್ಯವನ್ನು ಸೀತಮ್ಮಳಿಗೆ ಹೇಳಿದ್ದರು, ಆದರೆ ಮಗನೂ ಇಷ್ಟು ಕಠೋರವಾಗಿ ಮಾತನಾಡುತ್ತಾನೆಂದು ಅವಳು ಕನಸಿನಲ್ಲೂ ಊಹಿಸಿರಲಿಲ್ಲ.

ಆದರೆ ತಾಯಿ ಹೃದಯತಕ್ಷಣ ಮಗನನ್ನು ಕ್ಷಮಿಸಿತ್ತು. ಸೀತಮ್ಮ ಏನೂ ಮಾತನಾಡದೆ ಮನೆಯ ಒಳಗೆ ನಡೆದಳು. ಸುನೀಲನೋ ಪ್ರತಿಮೆಯಂತೆ ನಿಂತಿದ್ದ. ತನ್ನಿಂದ ಇಂತಹ ವಾಕ್ಯ ಏಕೆ ಬಂತು ಎಂದು ತನ್ನನ್ನೇ ತಾನು ದೂಷಿಸಿಕೊಳ್ಳುತ್ತಾ ಅಳುತ್ತಾ ನಿಂತ. ಸೀತಮ್ಮ ಮೊದಲು ಮಗನಿಗೆ ಕಾಫಿ ಮಾಡಿ ತಂದುಕೊಟ್ಟಳು, ನಂತರ ಅವನಿಗೆ ಇಷ್ಟವಾದ ತರಕಾರಿ ಹಾಕಿದ ಉಪ್ಪಿಟ್ಟು ಮಾಡಿದಳು. ಇಬ್ಬರೂ ತಿಂದರು, ಆದರೆ ಇಬ್ಬರಿಂದಲೂ ಒಂದು ವಾಕ್ಯವೂ ಹೊರ ಬರಲಿಲ್ಲ. ತಿಂಡಿ ತಿಂದ ನಂತರ ಸೀತಮ್ಮ ಸೋಫಾ ಮೇಲೇ ಕುಳಿತು ಟಿವಿ ನೋಡುತ್ತಾ ಕುಳಿತಳು. ಸುನೀಲ ಅವಳ ಕಾಲಿಗೆ ಬಿದ್ದ. ಕ್ಷಮಿಸಿ ಬಿಡು ಅಮ್ಮ. ನಾನು ನಿನ್ನ ಮಗನಾಗಿರಲಿಕ್ಕೆ ಯೋಗ್ಯನಲ್ಲ. ನನಗೆ ಬೈದು ಬಿಡು. ನಿನ್ನ ಮೌನವನ್ನು ಎದುರಿಸುವ ಶಕ್ತಿ ನನಗಿಲ್ಲ. ಇದೇ ಖಿನ್ನತೆಯಲ್ಲಿ ನಾನೀಗ ಮಲಗಿದರೆ ನಾನು ಬೆಳಿಗ್ಗೇ ಏಳುತ್ತೇನೆ ಎಂಬುವ ನಂಬಿಕೆಯೇ ನನಗಿಲ್ಲ. ನೀನು ಹೇಳಿದ ಹಾಗೆ ಆಗಲಿ, ಯಾವುದಾದರೂ ನಿನಗೆ ಒಪ್ಪುವ ಹೆಣ್ಣು ನೋಡು, ಮದುವೆ ಮಾಡಿಕೊಳ್ಳುತ್ತೇನೆ ಎಂದು ಅಳುತ್ತಾ ಹೇಳಿದ ಸುನೀಲ.

ಏನೂ ಬೇಡ ಬಿಡು, ಮದುವೆ ಮಾಡಿಕೊಂಡು ನಾನು ಅನುಭವಿಸಿದ್ದು ಅಷ್ಟರಲ್ಲೇ ಇದೆ. ಕಛೇರಿಯಲ್ಲಿ ದೊಡ್ಡ ಹುದ್ದೆಯಲ್ಲಿರುವ ನಿನಗೆ ನೂರೆಂಟು ತೊಂದರೆಗಳಿರುತ್ತವೆ, ಅದನ್ನೆಲ್ಲಾ ಯೋಚಿಸದೇ ಹಠ ಮಾಡಿದ್ದು ನನ್ನದೇ ತಪ್ಪು. ಇನ್ನು ಮುಂದೆ ಈ ಮನೆಯಲ್ಲಿ ನಾನು ಮದುವೆಯ ವಿಷಯ ಮಾತನಾಡುವುದಿಲ್ಲ. ನಾನಷ್ಟೇ ಅಲ್ಲ, ಯಾರೂ ಮದುವೆ ವಿಷಯ ಮಾತನಾಡುವುದು ಬೇಡ. ಮಾತನಾಡಿ ನಿನ್ನನ್ನು ಕಳೆದುಕೊಳ್ಳುವ ಧೈರ್ಯ ನನಗಿಲ್ಲ. ಇಂದು ಆಗಿದ್ದೆಲ್ಲಾ ಒಂದು ಕನಸೆಂದುಕೊಂಡುಬಿಡು. ಇಬ್ಬರೂ ಮರೆತುಬಿಡೋಣ ಎಂದು ಹೇಳಿ ಕಣ್ಣೀರಿನ ಜೊತೆಯಲ್ಲೇ ನಗುತ್ತಾ ಸುನೀಲನ ತಲೆ ಸವರಿ ಮಲಗಲು ಹೊರಟಳು ಸೀತಮ್ಮ.

ಸುನೀಲ ಕೈಕಾಲು ಮುಖ ತೊಳೆದುಕೊಂಡು ದೇವರ ಮನೆಯಲ್ಲಿ ಧ್ಯಾನಕ್ಕೆ ಕುಳಿತ. ಕೆಟ್ಟ ಸನ್ನಿವೇಶಗಳು ಮನಸ್ಸನ್ನು ಕೆಡೆಸಿದಾಗ ಸಾಮಾನ್ಯವಾಗಿ ಸುನೀಲ ಮೊರೆಹೋಗುತ್ತಿದ್ದದ್ದು ಧ್ಯಾನಕ್ಕೆ. ಯಾವ ಗುರುಗಳಿಂದಲೂ ಕಲಿತಿಲ್ಲದಿದ್ದರೂ, ಚಿಕ್ಕಂದಿನಿಂದ ದೇವರು, ಧ್ಯಾನ ಎಂದರೆ ಅದೇನೋ ಅಪಾರ ಆಸಕ್ತಿ ಅವನಿಗೆ.

ಸೀತಮ್ಮಳಿಗೆ ನಿದ್ದೆ ಬರಲಿಲ್ಲ. ಹಾಗೆ ಮಂಚದ ಮೇಲಿನ ಹಾಸಿಗೆಯ ಮೇಲೆ ಕಾಲು ಚಾಚಿ ಕುಳಿತು, ಗೋಡೆಗೆ ಒರಗಿಕೊಂಡಳು. ಮಗನು ಇಂದು ಹೇಳಿದ ಮಾತುಗಳು ಕಿವಿಯಲ್ಲಿ ಮತ್ತೆ ಮತ್ತೆ ಕೇಳುತ್ತಿರುವಂತಾಗಿ ಮೂವತ್ತು ವರ್ಷದ ಹಳೆಯ ನೆನಗಪುಗಳಿಗೆ ಅವಳ ಮನಸ್ಸು ಜಾರಿತ್ತು.

ಸೀತಮ್ಮ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಳು. ಬ್ಯಾಂಕಿನಲ್ಲಿ ಅವಳ ಹೆಸರು ಸೀತಾ ಅಷ್ಟೇ. ಪಕ್ಕದಮನೆ ರಮಾಬಾಯಿ ಬ್ಯಾಂಕಿಗೆ ಬಂದು, ಪುಟ್ಟಿ ನೀನು ಬ್ಯಾಂಕಿನಲ್ಲಿರೋದು ನನಗೆ ಅನುಕೂಲವೇ ಆಯಿತು. ಇಲ್ಲವಾದರೆ ನನ್ನ ಗಂಡನ ಪಿಂಚಣಿ ಹಣ ಯಾವಾಗ ಅಕೌಂಟ್‌ಗೆ ಬರುತ್ತೆ, ಅದು ಹೇಗೆ ತೊಗೊಳ್ಬೇಕು ನನಗೆ ಗೊತ್ತೇ ಗೊತ್ತಾಗದು ಎಂದರು. ಯೋಚಿಸಬೇಡಿ ಅಮ್ಮ, ನಾನಿರೋವರೆಗೂ ಬ್ಯಾಂಕಿನಲ್ಲಿ ನಿಮ್ಮದು ಏನೇ ಕೆಲಸ ಇದ್ದರೂ ನನಗೇ ಹೇಳಿ, ಮಾಡಿಮುಗಿಸುತ್ತೇನೆ ಎಂದಳು ಸೀತಾ. ಒಳ್ಳೇ ಪಾದರಸದ ತರ ಮಾತಾಡ್ತೀಯ, ನನ್ನ ಮಗ ಮೋಹನನಿಗೆ ಯಾವುದಾದ್ರೂ ಹೆಣ್ಣಿದ್ರೆ ನೋಡೇಮ್ಮ ನಿಮ್ಮ ಬ್ಯಾಂಕಿನಲ್ಲಿ ಅಂದಳು ರಮಾಬಾಯಿ. ಸೀತಾಳ ಪಕ್ಕದಲ್ಲಿದ್ದ ಅವಳ ಸಹೋದ್ಯೋಗಿ ಜೋರಾಗಿ ನಕ್ಕು, ಇವಳಿಗೇ, ಅವರಪ್ಪ ಅಮ್ಮ ಗಂಡು ಹುಡುಕ್ತಾ ಇದ್ದಾರೆ, ಇನ್ನು ನಿಮ್ಮ ಮಗನಿಗೆ ಇವಳು ಹೆಣ್ಣು ಹುಡಕಬೇಕೆ ಎಂದರು. ಬೇಕಿದ್ದರೆ ಸೀತಾಳನ್ನೇ ನಿಮ್ಮ ಸೊಸೆ ಮಾಡ್ಕೊಂಡುಬಿಡಿ ಎಂದರು. ರಮಾಬಾಯಿ ಏನೋ ಹೊಳೆದಂತಾಗಿ, ಬ್ಯಾಂಕಿನಿಂದ ಹೊರನಡೆದರು.

ಸಾಯಂಕಾಲ ಸೀತಾನ ಮನೆಗೆ ಕರೆದು, ಏನೇ ಪುಟ್ಟಿ ನೀನೇ ಯಾಕೆ ನನ್ನ ಸೊಸೆ ಆಗಬಾರದು ಹೇಳು. ನನ್ನ ಮಗ ಮೋಹನನದು ಒಳ್ಳೆಯ ಸರ್ಕಾರಿ ಕೆಲಸ, ಈಡು ಜೋಡು ಚೆನ್ನಾಗಿರುತ್ತೆ, ನಿಮ್ಮಪ್ಪ ಅಮ್ಮನ ಹತ್ತಿರ ಮಾತನಾಡಲೇ ಎಂದಳು ರಮಾಬಾಯಿ. ಆಗ ಸೀತಾ, ಅಲ್ಲ ಅಮ್ಮಾನೀವು ನಿಮ್ಮ ಮಗ ಮೋಹನನ ಹತ್ತಿರ ಮೊದಲು ಕೇಳಿ. ದೇಶಸೇವೆ, ಪ್ರವಚನ, ವೇದಪಾಠ, ಆಧ್ಯಾತ್ಮ ಅಂತೆಲ್ಲಾ ಹೇಳಿಕೊಂಡು ಊರಲ್ಲಿರೋ ಹೆಣ್ಣುಮಕ್ಕಳನ್ನೆಲ್ಲಾ ಭಗಿನಿ ಭಗಿನಿ ಅಂತಾ ಮಾತಾಡ್ಕೊಂಡು ಇರ್ತಾನೆ. ಅವನಿಗೆ ಊರಲ್ಲಿರೋ ಹೆಣ್ಣು ಮಕ್ಕಳು ತಾಯಿ, ತಂಗಿ ಇಲ್ಲವೇ ಅಕ್ಕನ ಸಮಾನ ಅಂತೆ. ಹೆಂಡತಿ ಅನ್ನೋ ಹೆಸರೇ ನನ್ನ ಜೀವನದಲ್ಲಿ ಬರೆದಿಲ್ಲ ಆ ಬ್ರಹ್ಮ ಅಂತಾನೆ.

ನೀನು ಹೇಳೋದು ಸರೀನೇ, ಅದ್ರೆ ನೀವು ಹೆಣ್ಣುಮಕ್ಕಳು ಸರೀ ಇಲ್ಲ ನೋಡು, ಹುಡುಗರೇ ಮುಂದುವರೀಬೇಕು ಅಂದ್ರೆ ಆಗುತ್ತಾ. ನಿಮ್ಮ ಪ್ರಯತ್ನ ನೀವು ಮಾಡ್ಬೇಕಮ್ಮ ಎಂದಳು ರಮಾಬಾಯಿ. ಸರಿ, ನಿಮ್ಮ ಅನುಮತಿ ಸಿಕ್ಕಿದ್ಯೆಲ್ಲಾ, ನೋಡ್ತಾ ಇರೀ ಈ ಬ್ರಹ್ಮಚಾರಿ ಮೋಹನನಾ ಹೇಗೆ ದಾರೀಗೆ ತರ್ತೀನಿ ಎಂದಳು ಸೀತಾ.

ಸೀತಾ ಮತ್ತು ಮೋಹನ ಇಬ್ಬರೂ ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದೋರು. ಸಲಿಗೆ ಸ್ವಲ್ಪ ಜಾಸ್ತೀನೇ ಇತ್ತು. ಹಾಗಾಗಿ ಹತ್ತಿರ ಹೋಗೋದು ಕಷ್ಟ ಏನೂ ಆಗಲಿಲ್ಲ. ರಮಾದೇವಿಗೆ ಆರೋಗ್ಯ ಸರಿಯಾಗಿಲ್ಲದಿದ್ದಾಗ ಕೆಲಸಕ್ಕೆ ಎರಡು ದಿನ ರಜೆ ಹಾಕಿ ಸೀತಾ ಮನೆಯ ಕೆಲಸವನ್ನೆಲ್ಲಾ ನೋಡಿಕೊಂಡಳು. ನಿಜವಾಗಲೂ ರಮಾದೇವಿಗೆ ಆರೋಗ್ಯ ಕೆಟ್ಟಿತ್ತೇ!, ದೇವರಿಗೇ ಗೊತ್ತು. ಸಂಜೆಯಾದರೆ ಸಾಕು ಸೀತಾ ರಮಾದೇವಿಯವರ ಮನೆಗೆ ಬಂದು ತರಕಾರಿ ಹೆಚ್ಚಿಕೊಡುವುದು, ಕಾಫಿ ಮಾಡುವುದು ಇವೆಲ್ಲಾ ಸ್ವಲ್ಪ ಜಾಸ್ತಿಯೇ ಆಯಿತು. ಒಂದೊಂದು ದಿನ ಒಂದೊಂದು ರೀತಿಯ ಅಲಂಕಾರ ಮಾಡಿಕೊಂಡು ಬರುತ್ತಿದ್ದಳು ಸೀತಾ.ಮೋಹನ ಒಂದು ದಿನ, ಇದೇನು ಸಂಜೆ ಮನೆಗೆ ಬರುವಾಗ ಒಳ್ಳೇ ಬ್ಯಾಂಕಿಗೆ ಹೋಗೋ ಹಾಗೇ ಅಲಂಕಾರ ಮಾಡಿಕೊಂಡು ಬರ್ತೀಯಾ ಎಂದ.ಅದಕ್ಕೆ ಸೀತಾ, ಪರವಾಗಿಲ್ವೇ, ನೀನೂ ನನ್ನನ್ನು ಗಮನಿಸುತ್ತಿದ್ದೀಯ ಅಂತ ಆಯ್ತು, ಎಂದಳು. ಮನೆಯೆಲ್ಲಾ ಓಡಾಡ್ತಾ ಇದ್ದರೆ ನಾನು ಮಾತ್ರ ಅಲ್ಲ, ಬೀದಿಯೋರು ಗಮನಿಸ್ತಾರೆ ಅಲ್ವಾ ಅಮ್ಮ ಎಂದು ರಮಾದೇವಿಯ ಕಡೆಗೆ ನೋಡಿದ. ಆಗ ರಮಾದೇವಿ, ಹೌದಲ್ವೇನೋ, ನಾನೂ, ಇವಳು ಅಲಂಕಾರ ಮಾಡಿಕೊಂಡು ಬರೋದು ಗಮನಿಸೇ ಇರಲಿಲ್ಲ ನೋಡು. ನೀವು ಹುಡುಗರು ಎಲ್ಲಾ ಗಮನಿಸುತ್ತೀರಿ. ಇರಲಿ ಚೆನ್ನಾಗಿಯೇ ಇದ್ದಾಳೆಲ್ಲಾ, ನೀನು ನೋಡೋದ್ರಲ್ಲಿ ತಪ್ಪೇನಿಲ್ಲ ಎಂದಳು.
ಇದೇಕೋ ಮೋಹನನಿಗೆ ವಿಷಯ ದಾರಿ ತಪ್ಪುತ್ತಿದೆ ಅನಿಸಿತು.ನನಗೆ ಕೆಲಸ ಇದೆ ಹೊರಗೆ ಹೋಗಿ ಬರ್ತೀನಿ ಎಂದ, ಆಗ ರಮಾದೇವಿ, ಭಗಿನಿ ಸೀತಾಗೂ ಹೇಳಿ ಹೋಗು ಅಂತ ಚುಡಾಯಿಸುವ ಹಾಗೆ ಮಾತನಾಡಿದಳು. ಇವಳೆಂಥ ಭಗಿನೀ,ಯಾರ್ಯಾರಿಗೋ ಏನೇನೋ ಸಂಬಂಧ ತರಬೇಡ ಎಂದ. ರಮಾದೇವಿಗೆ ಸೂಕ್ಷ್ಮ ಅರ್ಥವಾಯಿತು. ಇದೇ ಸರಿಯಾದ ಸಮಯ ಅಂದುಕೊಂಡು, ಮೋಹನನ ಕಡೆ ನೋಡುತ್ತಾ ಸೀತಾ ತರಹದ ಹುಡುಗಿ ನಮ್ಮ ಮನೆಗೆ ಸೊಸೆಯಾಗಿ ಬಂದರೆ ಚೆನ್ನಾಗಿರುತ್ತ ಅಲ್ವೇ, ಏನೇ ಸೀತಾ ನಮ್ಮ ಮೋಹನಾನ ಮದುವೆ ಆಗ್ತೀಯಾ ಅಂತ ಕೇಳಿದಳು. ಸೀತಾ ನಾಚಿಕೆಯಿಂದ ಮನೆಯ ಕಡೆಗೆ ಓದಿದಳು. ಇಲ್ಲಿ ಮೋಹನ, ರಮಾದೇವಿಗೆ, ಏನಮ್ಮಾ, ಏನೋ ನಿನಗೆ ಸಹಾಯ ಮಾಡಲು ಬಂದ ಹುಡುಗಿಯನ್ನ ಹೀಗೆ ಕೇಳಬಹುದಾ ಎಂದನು. ನಾನು ಹೇಳಿದ್ರಲ್ಲಿ ತಪ್ಪೇನಿಲ್ಲ ಅಲ್ವಾ. ನೀನೀಗ ಹೇಳು, ಇನ್ನೂ, ಆಧ್ಯಾತ್ಮ, ದೇಶಸೇವೆ ಅಂತಾನೆ ಕೂತ್ಕೊಂಡಿರ್ತೀಯಾ, ಇಲ್ಲ ಮದುವೆ ಆಗ್ತೀಯಾ ಎಂದಳು ರಮಾದೇವಿ. ನೋಡುವ ಕಣ್ಣಲ್ಲಿದೆ ಮಾಯೆ ಎನ್ನುತ್ತಾರೆಲ್ಲಾ ಹಾಗೇ, ಸೀತಾಳನ್ನು ನೋಡುತ್ತಾ ನೋಡುತ್ತಾ ಮೋಹನನು ಸ್ವಲ್ಪ ಬದಲಾಗಿದ್ದ.ಸರಿ ವಿಚಾರಿಸಿ ನೋಡು, ಎಲ್ಲಾ ನಿನ್ನದೇ ಜವಾಬ್ಧಾರಿ;ಮದುವೆ ಆದಮೇಲೆ ಏನಾದ್ರು ಸಂಸಾರ ಸರಿಯಾಗಿ ನಡೀಲಿಲ್ಲ ಅಂದ್ರೆ ನಾನಂತೂ ಎಲ್ಲಾ ಬಿಟ್ಟು ಓಡಿಹೋಗುತ್ತೇನೆ ಎಂದ. ಎಲ್ಲಾ ಚೆನ್ನಾಗಿಯೇ ಇರುತ್ತೆ, “ಶುಭ ನುಡಿಯೋ ಸೋಮ ಅಂದರೆ ಗೂಬೆ ಕಾಣಿಸ್ತು ಮಾಮʼ ಅಂದ ಹಾಗೆ ಇದೆ ನಿನ್ನ ಮಾತು ಎಂದಳು,

ಎರಡು ತಿಂಗಳಲ್ಲಿ ಮೋಹನನಿಗೆ ಸೀತಾಳ ಜೊತೆ ಮದುವೆಯಾಯಿತು. ಇಬ್ಬರೂ ರಸ್ತೆಯಲ್ಲಿ ಕೈ ಕೈ ಹಿಡಿದು ನಡೆಯುತ್ತಿದ್ದರೆ ಗಂಡ ಹೆಂಡಿರಂದರೆ ಹೀಗಿರಬೇಕು ಅಂತ ಜನ ಹೇಳುತ್ತಿದ್ದರು. ಇಚ್ಛೆಯನ್ನರಿವ ಸತಿ ಇರಲು, ಆಧ್ಯಾತ್ಮ, ದೇಶಸೇವೆ ಎಲ್ಲ ಮೋಹನನ ಜೀವನದ ಬಂಡಿಯ ಹಿಂದಿನ ಸೀಟನ್ನು ಅಲಂಕರಿಸಿತು. ಸಮಯ ಕಳೆಯುತ್ತಿದ್ದಂತೆ, ಸೀತಾಗೆ ಮಗು ಆಯಿತು. ಅವನೇ ನಮ್ಮ ಸುನೀಲ. ಸುನೀಲ ಹುಟ್ಟಿದ ಎರಡು ತಿಂಗಳಲ್ಲೇ ರಮಾದೇವಿಗೆ ಹೃದಯಾಘಾತವಾಗಿ ಮೋಹನನ ತೊಡೆಯ ಮೇಲೇನೋವಿನಿಂದ ನರಳುತ್ತಾ ಸತ್ತಳು. ತಾಯಿಯ ಅಗಲುವಿಕೆ ಮೋಹನನ ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬೀರಿತ್ತು. ಅವನು ಧ್ಯಾನ, ದೇವರಪೂಜೆಗೇ ಹೆಚ್ಚು ಶರಣಾದ. ಸೀತಾ ಎಷ್ಟು ಪ್ರಯತ್ನಿಸಿದರೂ ಅವನನ್ನು ಆ ಖಿನ್ನತೆಯಿಂದ ಹೊರಗೆ ತರಲು ಸಾಧ್ಯವಾಗಲೇ ಇಲ್ಲ. ಸಂಸಾರ, ಹೆಂಡತಿ, ಮಗು ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿದ್ದ. ಮತ್ತೇ ಅವನ ಮನಸ್ಸು ಆಧ್ಯಾತ್ಮದ ಕಡೆಗೆ ವಾಲುತ್ತಿತ್ತು. ಒಂದು ದಿನ ಆಫೀಸಿಗೆ ಹೋದವನು ಮನೆಗೆ ಬರಲೇ ಇಲ್ಲ. ಎರಡು ದಿನದ ನಂತರ ಮನೆಗೆ ಒಂದು ಪೋಸ್ಟ್‌ ಬಂತು, ನಾನು ದೇಶಾಂತರ ಹೋಗುತ್ತಿದ್ದೇನೆ, ನೀವು ನನ್ನನ್ನು ಹುಡುಕಲು ಪ್ರಯತ್ನಿಸಬೇಡಿ, ಹಾಗೇನಾದರೂ ಮಾಡಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಮೋಹನ ಬರೆದಿದ್ದ.

ಇಂದು ಸುನೀಲನು ಮಾತನಾಡುವಾಗ, ನಾನೇ ಹಠ ಮಾಡಿರಬೇಕು ಅಂದ, ಅಲ್ವಾ, ಹೌದು ಮೋಹನನನ್ನೇ ಮದುವೆ ಮಾಡಿಕೊಳ್ಳಬೇಕೆಂಬ ಹಠ ಇತ್ತು ನಿಜ, ಆದರೆ ಅವನು ಓಡಿ ಹೋಗುವುದಕ್ಕೆ ನಾನು ಹೇಗೆ ಕಾರಣ ಆಗ್ತೀನಿ, ಎಂದು ಕಣ್ಣಿರು ಒರೆಸಿಕೊಳ್ಳುತ್ತಾ, ಮಂಚದಿಂದೆದ್ದು ನೀರು ಕುಡಿಯಲು ಅಡುಗೆ ಮನೆಗೆ ಹೋದಳು ಸೀತಮ್ಮ. ಸುನೀಲ ದೇವರ ಮನೆಯಲ್ಲಿ ಧ್ಯಾನ ಮಾಡುತ್ತಾ ಕುಳಿತಿದ್ದನು. ಅಪ್ಪನಂತೆಯೇ ಮಗೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಒಂದೆರೆಡು ಲೋಟ ನೀರು ಕುಡಿದು ನಿದ್ದೆಗೆ ಶರಣಾದಳು ಸೀತಮ್ಮ.

ಮಾರನೆಯ ದಿನ ಬೆಳಗ್ಗೆ ಹಿಂದಿನ ದಿನ ಏನು ನಡೆದೇ ಇಲ್ಲವೇನೋ ಎಂಬಂತೆ ತಾಯಿ ಮಗ ಇಬ್ಬರೂ ಇದ್ದರು.

ದಿನೇ ದಿನೇ ಸುನೀಲನಿಗೆ ಕಛೇರಿಯಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಾ ಬಂತು. ನಿಯತ್ತಿನಿಂದ ನಡೆಯುವವರ ಹಾದಿ ಯಾವಾಗಲು ಕಷ್ಟವಾಗಿಯೇ ಇರುತ್ತದೆ ಎಂಬುದು ಸುನೀಲನಿಗೆ ತಿಳಿದಿತ್ತು. ಅವನ ಕಛೇರಿಗೆ ಬರುವ ಫೈಲ್‌ಗಳನ್ನೆಲ್ಲಾ ಮುಖ್ಯಸ್ಥರಾದ ರೆಡ್ಡಿಯವರು ತಮ್ಮ ಕೆಳಗಿನವರಿಗೆ ಹಂಚಬೇಕು. ಸುನೀಲನಿಂದ ಏನೂ ಲಾಭವಿಲ್ಲವೆಂದು ಅರಿತು, ಅವನಿಗೆ ಫೈಲ್‌ ಹೆಚ್ಚು ಕೊಡುತ್ತಿರಲಿಲ್ಲ. ಬೇರೆಯವರಿಗೆ ಹತ್ತು ಫೈಲ್‌ ಕೊಟ್ಟರೆ ಸುನೀಲನಿಗೆ ಒಂದು ಫೈಲ್‌ ಕೊಡುತ್ತಿದ್ದರು. ಸಂಜೆಯ ಹೊತ್ತು, ಅಂದು ಕಛೇರಿಯಲ್ಲಿ ಪಡೆದ ಲಂಚದ ಹಣವನ್ನೆಲ್ಲಾ ಎಲ್ಲರೂ ಅವರವರ ಹುದ್ದೆಗಳಿಗೆ ಸರಿಸಮನಾಗಿ ಹಂಚಿಕೊಳ್ಳುತ್ತಾರೆ ಎಂಬುದು ಕಛೇರಿಯ ಪ್ಯೂನ್‌ನಿಂದ ಸುನೀಲನಿಗೆ ತಿಳಿಯಿತು. ಇವನೇನು ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ.

ಹೀಗಿರುವಾಗ ಒಂದು ದಿನ ರೆಡ್ಡಿಯವರು ಹೆಚ್ಚು ಲಂಚ ಬರಬಹುದಾದಂತಹ ಒಂದು ಫೈಲನ್ನು ತಪ್ಪಾಗಿ ಸುನೀಲನ ಮೇಜಿಗೆ ಕಳಿಸಿದ್ದರು. ಇದು ಕೃಷ್ಣಯ್ಯ ಶೆಟ್ಟಿಯವರ ಫೈಲ್‌ ಆಗಿತ್ತು ಮತ್ತುಕಡಿಮೆಯೆಂದರೂ ಹತ್ತು ಲಕ್ಷ ಲಂಚಕ್ಕೆ ಅವಕಾಶವಿತ್ತು. ಸುನೀಲನಂತೂ ಆ ಫೈಲಿಗೆ ಮಾಡಬೇಕಾದ ಕೆಲಸ ಮಾಡಿ ರೆಡ್ಡಿಯವರಿಗೆ ತಲುಪಿಸಿದ. ಇವನು ಲಂಚ ತೆಗೆದುಕೊಳ್ಳೋದಿಲ್ಲ ಎಂದು ಕೋಪವಿದ್ದರೂ, ಇವನು ಮಾಡುವ ಕೆಲಸದ ಮೇಲೆ ರೆಡ್ಡಿಯವರಿಗೆ ಸಂಪೂರ್ಣ ನಂಬಿಕೆ ಇತ್ತು. ಹಾಗಾಗಿ ಫೈಲ್‌ ಹೆಚ್ಚು ಓದದೆ, ಇವನು ಮಾಡಿದ್ದ ಶಿಫಾರಸ್ಗಳ ಪತ್ರಕ್ಕೆ ಸಹಿ ಹಾಕಿದರು. ಮಾರನೆಯ ದಿನ ಕೃಷ್ಣಯ್ಯ ಶೆಟ್ಟಿಯವರು ಒಂದು ಸ್ವೀಟ್‌ ಬಾಕ್ಸ್ ತಂದು ‌ರೆಡ್ಡಿಯವರಿಗೆ ಕೊಟ್ಟಾಗಲೇ, ಅವರಿಗೆ ಗೊತ್ತಾಗಿದ್ದು ತಾವು ಮಾಡಿದ್ದ ತಪ್ಪು. ಅನ್ಯಾಯವಾಗಿ ಹತ್ತುಲಕ್ಷ ಲಂಚದ ಹಣ ಹೋಯಿತೆಲ್ಲಾಎಂದು ಪರಿತಪಿಸಿದರು.

ಇನ್ನೊಂದಿಬ್ಬರು ಹಿರಿಯ ಸಹೋದ್ಯೋಗಿಗಳೊಂದಿಗೆ ಈ ವಿಷಾದವನ್ನು ಹಂಚಿಕೊಂಡರು. ಇಲ್ಲಾ ಸಾರ್‌, ನೀವು ಆ ಸುನೀಲನಿಗೆ ಸರಿಯಾಗಿ ಬುದ್ದಿ ಹೇಳಬೇಕು. ಅವನಿಗೆ ಹಣ ಬೇಡವೆಂದರೆ ಹಾಳಾಗಿ ಹೋಗಲಿ, ಹೆಂಡತಿ ಮಕ್ಕಳು ಇರುವ ನಮಗೆ ಹಣ ಬೇಡವೇ. ಇಲ್ಲವಾದರೆ ಅವನನ್ನು ವರ್ಗಾವಣೆ ಮಾಡಲು ನೀವು ಶಿಫಾರಸ್ಸು ಮಾಡಿ, ಎಂದರು ಒಬ್ಬ ಸಹೋದ್ಯೋಗಿ.

ಅಂದು ಸಂಜೆ, ರೆಡ್ಡಿಯವರು ಸುನೀಲನ ಸೀಟಿನ ಹತ್ತಿರ ಬಂದು ಕುರ್ಚಿಯಲ್ಲಿ ಕುಳಿತರು. ಬೇರೆ ಸಹೋದ್ಯೋಗಿಗಳಿಗೆ ಹೊರಗೆ ನಡೆಯಲು ಹೇಳಿದರು. ಈ ಹುದ್ದೆಗೆ ಬರಲು ನಾನೆಷ್ಟು ಕಷ್ಟ ಪಟ್ಟೀದ್ದೀನಿ ಗೊತ್ತೆ ನಿಮಗೆ. ಹುದ್ದೆಗೆ ಬರೋದಿರಲಿ, ಇಲ್ಲೇ ಉಳಿದುಕೊಳ್ಳಲು ನಾನು ಎಷ್ಟು ಜನಕ್ಕೆ ಪ್ರತಿ ತಿಂಗಳು ದುಡ್ಡು ಕೊಡಬೇಕು ಗೊತ್ತಾ ನಿಮಗೆ. ಕನಿಷ್ಠ ಹತ್ತು ಲಕ್ಷ ಲಂಚ ಪಡೆಯಬಹುದಿದ್ದ ಕೆಲಸವನ್ನು ಹಾಳು ಮಾಡಿದಿರೆಲ್ಲಾ ನೀವು. ಇನ್ನು ಮುಂದೆ ಎಲ್ಲರ ಹಾಗೇ ನೀವು ಲಂಚ ಪಡೆಯುತ್ತೇನೆಂದು ಮಾತುಕೊಟ್ಟರೆ, ನೀವು ಇಲ್ಲಿ ಕೆಲಸ ಮಾಡಬಹುದು ಇಲ್ಲವಾದರೆ ಸಧ್ಯದಲ್ಲೇ ಅನ್ನ ನೀರು ಸಿಗದ ಜಾಗಕ್ಕೆ ನಿಮಗೆ ವರ್ಗಾವಣೆಯಾಗುತ್ತದೆ ಎಚ್ಚರಿಕೆ, ಏನಂತೀರಿ ಎಂದರು ರೆಡ್ಡಿಯವರು. ಆಗ ಸುನೀಲ, ಅವರಿಗೆ ಗಾಂಧೀಜಿ ಗೊಂಬೆಯನ್ನು ತೋರಿಸಿದ. ಸಾರ್‌ ಆ ಮಹಾತ್ಮರು ನಮ್ಮ ಆತ್ಮಸಾಕ್ಷಿಯ ರೂಪದಲ್ಲಿ ನಮ್ಮನ್ನು ಗಮನಿಸುತ್ತಿದ್ದಾರೆ. ಅವರ ಮುಂದೆ ನೀವು ಹೀಗೆಲ್ಲಾ ಮಾತನಾಡಿದ್ದು ತಪ್ಪಾಯಿತು ಎಂದ. ನಿಮಗೇನು ಹುಚ್ಚೇ, ಅಲ್ಲಾ ಗ್ರಾಹಕರಿಗೆ ತೋರಿಸೋ ತರಹ ನನಗೂ ಗಾಂಧಿ ಗೊಂಬೇ ತೋರಿಸುತ್ತೀರೆಲ್ಲಾ ಎಂದು ಜೋರಾಗಿ ಕಿರುಚಿದರು.

ಹೊರಗಿದ್ದ ಸಿಬ್ಬಂದಿ ಇವರನ್ನು ಸಮಾಧಾನ ಮಾಡಲು ಒಳಗೆ ಬಂದರು. ನೋಡುತ್ತಿರು ಸಧ್ಯದಲ್ಲೇ ನನ್ನ ಪ್ರಭಾವ ಎಷ್ಟು ಎಂದು ನಾನು ನಿನಗೆ ತೋರಿಸುತ್ತೇನೆ ಎಂದರುರೆಡ್ಡಿ. ಅಲ್ಲಿದ್ದ ಇನ್ನಿಬ್ಬರು ಹಿರಿಯ ಸಿಬ್ಬಂದಿ ಸುನೀಲನ ಹತ್ತಿರ ಬಂದು ಅವಾಚ್ಯ ಶಬ್ಧಗಳಿಂದ ಬೈದು, ನಾವೆಲ್ಲಾ ಇರೋ ಹಾಗೇ ನಿಮಗಿರುವುದಕ್ಕೇನೂ. ಇನ್ನು ಮುಂದೆ ನೀವು ಯಾವ ಕೆಲಸ ಮಾಡುವುದೂ ಬೇಡ. ಸುಮ್ಮನೆ ಆಫೀಸಿಗೆ ಬಂದು ಹೋಗಿ ಸಾಕು. ನಾವೇ ಎಲ್ಲಾ ಕೆಲಸ ಮಾಡುತ್ತೇವೆ. ನೀವೂ ಅಷ್ಟೇ ಸಾರ್, ಇವನಿಗೆ ಒಂದು ಫೈಲ್‌ ಕೂಡಾ ಅಲಾಟ್‌ ಮಾಡಬೇಡಿ ಎಂದರು, ಮುಖ್ಯಸ್ಥರನ್ನು ನೋಡುತ್ತಾ.

ಸುನೀಲ ಎಲ್ಲರನ್ನೂ ಕರುಣಾಮಯಿಯಂತೆ ನೋಡುತ್ತಾ ಆಗಾಗ ಗಾಂಧೀ ಗೊಂಬೆಯನ್ನು ನೋಡುತ್ತಾ‌ ಕಣ್ಣಿರು ಹಾಕಿದ. ಇಂದಿನ ಕಛೇರಿ ಸಮಯ ಮುಗಿದಿದೆ, ಇನ್ನು ಶುರುವಾಗೋ ನಿಮ್ಮ ಪಾಪದ ಕೆಲಸಕ್ಕೆ ನಾನು ಸಾಕ್ಷಿಯಾಗಲಾರೆ, ಈ ಮಹಾತ್ಮರ ಗೊಂಬೆಯೂ ಇಲ್ಲಿನ ವಾತಾವರಣಕ್ಕೆ ಅಪಚಾರ. ನಾನು ನನ್ನ ಮನೆಗೆ ತೆಗೆದುಕೊಂಡು ಹೋಗುವೆ ಎಂದು ಜೋರಾಗಿ ಹೇಳಿ ಗೊಂಬೆ ತೆಗೆದುಕೊಂಡು ಹೊರನಡೆದ.

ನಾಳೆ ಕಛೇರಿಗೆ ಎಲ್ಲಾ ಅರ್ಧ ಗಂಟೆ ಮುಂಚೆ ಬನ್ನಿ, ಮುಖ್ಯವಾದ ಕೆಲವು ವಿಷಯಗಳನ್ನು ಮಾತನಾಡುವುದಿದೆ ಎಂದರು ರೆಡ್ಡಿ;ನಿನಗೂ ಕೂಡಾ ಹೇಳ್ತಾ ಇದ್ದೀನಿ ಎಂದು ಸುನೀಲನ ಕಡೆ ತಿರುಗಿ ಹೇಳಿದರು.

ಮಾರನೆಯ ದಿನ ಕಛೇರಿ ಸಿಬ್ಬಂದಿಯೆಲ್ಲಾ ಅರ್ಧ ಗಂಟೆ ಮುಂಚೆ ಬಂದರು, ಸುನೀಲನೂ ಬಂದಿದ್ದನು. ಆದರೆ ಕಛೇರಿಯ ಮುಖ್ಯಸ್ಥರೂ ಮತ್ತು ಇಬ್ಬರು ಹಿರಿಯ ಸಿಬ್ಬಂದಿ ಬರಲೇ ಇಲ್ಲ. ಅರ್ಧ ಗಂಟೆಯ ನಂತರ ಆಫೀಸಿನ ಪ್ಯೂನ್‌ ಬಂದು, ಸಾಹೇಬರ ಕ್ಯಾಬಿನ್ಗೆ ಈಗ ತಾನೇ ವಿಧಾನಸೌಧದಿಂದ ಫೋನ್‌ ಬಂದಿತ್ತು. ನಮ್ಮ ಕಛೇರಿಯ ಮುಖ್ಯಸ್ಥರೂ ಹಾಗೂ ಇಬ್ಬರು ಹಿರಿಯ ಸಿಬ್ಬಂದಿ ನಿನ್ನೆ ರಾತ್ರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರಂತೆ. ಹೊಸಬರು ಇಂದು ೧೧ ಗಂಟೆಗೆ ರಿಪೋರ್ಟ್‌ ಮಾಡಿಕೊಳ್ಳಲು ಬರುತ್ತಾರಂತೆ, ನಾವೆಲ್ಲಾ ಕಾಯಬೇಕಂತೆ ಎಂದನು.

ಕಛೇರಿಯಲ್ಲಿ ಎಲ್ಲರಿಗೂ ಆಶ್ಚರ್ಯ, ಕೆಲವರು ರಾಜೀನಾಮೆ ನೀಡಿದವರಿಗೆ ಫೋನ್‌ ಮಾಡಲು ಪ್ರಯತ್ನಿಸಿದರು. ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ ಎಂದು ಬರುತ್ತಿತ್ತು. ಹನ್ನೊಂದು ಗಂಟೆಗೆ ಹೊಸ ಮುಖ್ಯಸ್ಥರು ಬಂದರು. ಹಿಂದಿನ ಮುಖ್ಯಸ್ಥರು ಹಾಗೂ ಹಿರಿಯ ಸಿಬ್ಬಂದಿ ಏಕೆ ರಾಜೀನಾಮೆ ನೀಡಿದರೆಂದು ನನಗೆ ಗೊತ್ತಿಲ್ಲ. ಆದರೆ ನಾನು ಕೆಲಸ ಶುರು ಮಾಡುವ ಮುಂಚೆ ಈ ಕಛೇರಿಯಲ್ಲಿ ಕಳೆದರಡು ದಿನದಲ್ಲಿ ಏನಾದರೂ ಅಹಿತಕರ ಘಟನೆ ನಡೆದಿದ್ದರೆ ತಿಳಿಸಿ ಎಂದು ಕೇಳಿದರು. ಬಂದ ಮೊದಲನೇ ದಿನವೇ ಮುಖ್ಯಸ್ಥರಿಗೆ ಲಂಚದ ಬಗ್ಗೆ ಆದ ಗಲಾಟೆಯ ವಿಷಯವನ್ನು ತಿಳಿಸಲು ಯಾರು ಸಿದ್ದವಿರಲಿಲ್ಲ. ಅದೂ ಅಲ್ಲದೇ ಬಂದಿರುವ ಅಧಿಕಾರಿ ನಿಯತ್ತಿನ ಮನುಷ್ಯನಾಗಿದ್ದರೆ ಈ ವಿಷಯ ಹೇಗೆ ತೆಗೆದುಕೊಳ್ಳುತ್ತಾರೆಂಬ ಹೆದರಿಕೆಯೂ ಅವರಿಗೆಲ್ಲಾ ಇತ್ತು. ಹಾಗಾಗಿ ಲಂಚದ ವಿಷಯ ಹೇಳದೇ, ಕೇವಲ ಸುನೀಲನ ಜೊತೆ ಈ ಮೂವರು ನಿನ್ನೆ ಗಲಾಟೆ ಮಾಡಿದರು ಎಂದು ಮಾತ್ರ ತಿಳಿಸಿದರು. ಸುನೀಲನನ್ನು ನೋಡಿದರೆ, ಇವನೇ ಏನಾದರೂ ಮಾಡಿಸಿರಬಹುದೆಂಬ ಅನುಮಾನ ಪಡುವ ಹಾಗೇ ಇರಲಿಲ್ಲ. ಹೊಸ ಮುಖ್ಯಸ್ಥರು ಸುನೀಲನ ಕಡೆ ನೋಡಿ, ಅನುಕಂಪದಿಂದ ಸುಮ್ಮನೆ ನಕ್ಕು ತಮ್ಮ ಕ್ಯಾಬಿನ್‌ಗೆ ತೆರಳಿದರು.

ಅಂದು ಮಧ್ಯಾಹ್ನ ಕಛೇರಿಗೆ ಇನ್ನೊಂದು ಸುದ್ದಿ ಬಂತು. ನಿನ್ನೆ ರಾಜೀನಾಮೆ ನೀಡಿದ್ದವರಲ್ಲಿ ಒಬ್ಬರು ಹಿರಿಯ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು. ಅವರುಯಾವುದೇ ಪತ್ರ ಏನು ಬರೆದಿಟ್ಟಲ್ಲವಾದ್ದರಿಂದ ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲವೆಂದು ತಿಳಿಯಿತು. ಸುನೀಲ ಮುಖ್ಯಸ್ಥರ ಕ್ಯಾಬಿನ್‌ಗೆ ಹೋಗಿ ತನ್ನ ರಾಜೀನಾಮೆ ಪತ್ರ ಸಲ್ಲಿಸಿದ. ಕಛೇರಿಯಲ್ಲಿ ಆಗುತ್ತಿರುವ ವಿದ್ಯಮಾನಗಳು ತನಗೆ ತುಂಬಾ ಬೇಸರ ತಂದಿದೆ, ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದಷ್ಟೇ ರಾಜೀನಾಮೆ ಪತ್ರದಲ್ಲಿತ್ತು.

ಏನು ನಡೆಯುತ್ತಿದೆ ಎಂದು ತಿಳಿಯದೇ ಎಲ್ಲರೂ ಹೆದರಿಕೆಯಲ್ಲಿ ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತರು. ಸುನೀಲ ಮನೆಗೆ ಬಂದವನೇ, ಸೀತಮ್ಮಳಿಗೆ ರಾಜೀನಾಮೆ ಕೊಟ್ಟ ವಿಷಯವನ್ನು ತಿಳಿಸಿದ. ಸೀತಮ್ಮನಿಗೆ ಸುನೀಲನ ಮೇಲೆ ಅಪಾರವಾದ ನಂಬಿಕೆ ಇತ್ತು. ಹಾಗಾಗಿ ಪ್ರಭಲವಾದ ಕಾರಣವಿಲ್ಲದೆ ಸುನೀಲ ಈ ಕೆಲಸ ಮಾಡಿರಲಿಕ್ಕಿಲ್ಲ ಎಂದೆನಿಸಿ, ಅವನಿಗೆ ಕಾಫಿ ತಂದು ಕೊಟ್ಟಳು. ಕಾಫಿ ಕುಡಿದವನೇ, ಮುಖ ಕೈಕಾಲು ತೊಳೆದುಕೊಂಡು ಬಂದು ದೇವರ ಮನೆಯಲ್ಲಿ ಧ್ಯಾನಕ್ಕೆ ಕುಳಿತ. ಸೀತಮ್ಮ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾಗ ಉಳಿಸಿದ್ದ ಸಾಕಷ್ಟು ಹಣ ಇತ್ತು. ಸುನೀಲನೂ ಸಾಕಷ್ಟು ಹಣ ಉಳಿತಾಯ ಮಾಡಿದ್ದ. ಹಾಗಾಗಿ ಇವರ ಮುಂದಿನ ಜೀವನಕ್ಕೇನೂ ತೊಂದರೆಯಾಗುವುದಿಲ್ಲವೆಂಬ ಭರವಸೆಯೂ ಇಬ್ಬರಲ್ಲಿಯೂ ಇತ್ತು.

ಅಂದು ರಾತ್ರಿ ಸುನೀಲ ಮನೆಯ ಮುಂದಿನ ಜಗಲಿಯ ಮೇಲೆ ಕುಳಿತು ಸೀತಮ್ಮನನ್ನು ಕರೆದ. ಅಮ್ಮ, ನನಗೆ ಈ ದಿನನಿತ್ಯದ ಜೀವನಶೈಲಿಯಿಂದ ಒಂದು ಬ್ರೇಕ್‌ ಬೇಕಿದೆ. ಹಾಗಾಗಿ ನಾನು ದೇಶ ಸುತ್ತಾಡುವ ಯೋಚನೆಯಲ್ಲಿದ್ದೇನೆ. ಒಂದೆರೆಡು ತಿಂಗಳು ನಾನು ಪ್ರವಾಸ ಅಲ್ಲ ತೀರ್ಥಯಾತ್ರೆಗೆ ಹೋಗಿ ಬರಲೇ ಎಂದ ಸುನೀಲ. ಸೀತಮ್ಮನಿಗೆ ಭಯ ಶುರುವಾಯಿತು. ಅವಳು ಸುನೀಲನ ಮಾತುಗಳಲ್ಲಿ ತನ್ನ ಗಂಡ ಮೋಹನನನ್ನು ಕಂಡಳು. ಗಂಡನಂತು ಓಡಿಹೋಗಿದ್ದಾಯಿತು, ಇನ್ನು ಮಗನೂ ಓಡಿಹೋಗಿ ವಾಪಸ್‌ ಬರದೇ ಹೋದರೆ ನನ್ನ ಗತಿ ಏನು ಎಂಬ ಭಯ ಪ್ರಾರಂಭವಾಯಿತು. ಒಂದು ಕೆಲಸ ಮಾಡೋಣ, ನಾನು ನಿನ್ನೊಂದಿಗೆ ಪ್ರವಾಸಕ್ಕೆ ಬರುತ್ತೇನೆ. ಇಬ್ಬರೂ ಕೂಡಿ ಹೋಗೋಣ ಎಂದಳು ಸೀತಮ್ಮ. ಇಲ್ಲ ಅಮ್ಮ, ನನಗೆ ಏಕಾಂತದ ಅವಶ್ಯಕತೆ ಇದೆ. ಅದಲ್ಲದೆ ಕೆಲವು ಕಡೆ ಹಿಮಾಲಯದಲ್ಲಿ ಚಾರಣ ಮಾಡಲು ನಾನು ಯೋಚಿಸುತ್ತಿದ್ದೇನೆ. ಈ ವಯಸ್ಸಿನಲ್ಲಿ ನಿನಗೆ ಅವೆಲ್ಲವೂ ಕಷ್ಟ. ಆದ್ದರಿಂದ ಒಬ್ಬನೇ ಹೋಗಿಬರುತ್ತೇನೆ. ಹೆದರಬೇಡ, ನಾನು ಅಪ್ಪನಂತೆ ಹೇಡಿಯಲ್ಲ. ನಿನ್ನನ್ನು ನೋಡಿಕೊಳ್ಳುವ ಜವಾಬ್ಧಾರಿ ನನ್ನದೇ. ಅದನ್ನು ನಾನು ಎಂದೂ ತಪ್ಪಿಸಿಕೊಳ್ಳುವುದಿಲ್ಲ. ಪ್ರವಾಸದಲ್ಲಿ ಸಾಧ್ಯವಾದಷ್ಟು ಪ್ರತಿದಿನವೂ ನಿನಗೆ ಫೋನ್‌ ಮಾಡಲು ಪ್ರಯತ್ನಿಸುತ್ತೇನೆ ಎಂದ ಸುನೀಲ. ಸೀತಮ್ಮಳಿಗೆ ಸಮಾಧಾನವಾಯಿತು. ಆದರೆ ಅವನ ರಾಜೀನಾಮೆಗೆ ಕಾರಣವೇನೆಂದು ತಿಳಿಯುವ ಅವಶ್ಯಕತೆ ಸೀತಮ್ಮಳಿಗೆ ಇತ್ತು. ನೇರವಾಗಿ ನಿನ್ನ ರಾಜೀನಾಮೆಗೆ ಕಾರಣವೇನೆಂದು ತಿಳಿಸಿದರೆ, ನಾನು ನಿನ್ನ ಪ್ರವಾಸಕ್ಕೆ ಒಪ್ಪಿಗೆ ಕೊಡುತ್ತೇನೆ ಎಂದಳು ಸೀತಮ್ಮ.

ಅಮ್ಮಾ, ನಿಷ್ಠೆಯಿಂದ ಪಾರದರ್ಶಕವಾಗಿ ಕೆಲಸ ಮಾಡುವವರನ್ನು ಯಾವುದಾದರೂ ರೀತಿ ಸಿಕ್ಕಿಹಾಕಿಸಲು ಸಹೋದ್ಯೋಗಿಗಳು ಕಾಯುತ್ತಿರುತ್ತಾರೆ. ಇದನ್ನು ಅರಿತ ನಾನು, ಕಛೇರಿಗೆ ತಗೆದುಕೊಂಡು ಹೋಗಿದ್ದ ಗಾಂಧಿ ಗೊಂಬೆಯ ಕಣ್ಗಳಲಿ ಒಂದು ವೀಡಿಯೋ ಕ್ಯಾಮೆರಾ ಇಟ್ಟಿದ್ದೆ. ನಿನ್ನೆಯ ದಿನ, ಕಛೇರಿಯ ಮುಖ್ಯಸ್ಥರು ಹಾಗೂ ಹಿರಿಯ ಸಿಬ್ಬಂದಿ ನನ್ನ ಮೇಜಿನ ಹತ್ತಿರ ಬಂದು ಬೈದದ್ದು, ಲಂಚದ ಬಗ್ಗೆ ಮಾತನಾಡಿದ್ದು, ಎಲ್ಲವೂ ಅದರಲ್ಲಿ ವೀಡಿಯೋ ಆಗಿತ್ತು. ನಿನ್ನೆ ಸಂಜೆ ಆ ವೀಡಿಯೋವನ್ನು ಆ ಮೂವರಿಗೂ ವಾಟ್ಸಾಪ್‌ ಮೂಲಕ ಕಳಿಸಿದೆ. ನಾನು ಈ ವಿಷಯವನ್ನು ಯಾರಿಗೂ ಹೇಳಬಾರದೆಂದರೆನೀವು ಇಂದೇ ನಿಮ್ಮ ರಾಜೀನಾಮೆ ಪತ್ರವನ್ನು ವಿಧಾನಸೌಧಕ್ಕೆ ಕಳಿಸಿ. ಮುಂದೆ ಎಂದಾದರೂ ನೀವು ಈ ವೀಡಿಯೋ ವಿಷಯವನ್ನು ಬಾಯಿ ಬಿಟ್ಟರೆ ನಾನು ವೀಡಿಯೋವನ್ನು ಫೇಸ್‌ ಬುಕ್, ವಾಟ್ಸಾಪ್‌ಗಳಲ್ಲಿ ಇತರರೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದೆ. ಅವರು ವೀಡಿಯೋ ನೋಡಿದ್ದು ಖಾತ್ರಿಯಾದ ತಕ್ಷಣ ನಾನು “ಡಿಲೀಟ್‌ ಫಾರ್‌ ಎವೆರಿಒನ್” ಆಯ್ಕೆ ಬಳಸಿ ನಾನು ಕಳಿಸಿದ್ದ ವೀಡಿಯೋ ವಾಟ್ಸಾಪಿನಿಂದ ಡಿಲೀಟ್‌ ಮಾಡಿದೆ. ನನ್ನ ಬೆದರಿಕೆಗೆ ಹೆದರಿ ಆ ಮೂವರು ರಾಜೀನಾಮೆ ನೀಡಿದರು. ಆದರೆ ಅವರಲ್ಲಿ ಒಬ್ಬರು ಸಿಬ್ಭಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ನನಗೆ ಬೇಸರ ತಂದಿತು. ನಾನೇ ಅದಕ್ಕೆ ನೇರ ಕಾರಣ ಎಂದು ಅರಿತು, ನಾನೂ ರಾಜೀನಾಮೆ ನೀಡಿದೆ. ಈಗ ಹೇಳು ನಾನು ಮಾಡಿದ್ದು ಸರಿಯೋ ತಪ್ಪೋ? ಎಂದು ಕೇಳಿದ ಸುನೀಲ.

ಸೀತಮ್ಮಳ್ಳಿಗೆ ಏನು ಉತ್ತರ ಕೊಡಬೇಕೆಂದು ತಿಳಿಯಲಿಲ್ಲ. ಆದರೆ ಸದ್ಯಕ್ಕೆ ನೀನು ಮಾಡಿದ ಕೆಲಸ ಸರಿಯೇ ಎನಿಸುತ್ತಿದೆ ನನಗೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಅವರು ಮಾಡಿದ ಕರ್ಮಕ್ಕೆ ಆ ಹಿರಿಯ ಸಿಬ್ಬಂದಿ ಆತ್ಮಹತ್ಯೆಮಾಡಿಕೊಂಡರು. ನೀನೊಂದು ಕೊಂಡಿಯಾದೆ ಅಷ್ಟೇ. ನನಗಂತೂ ನೀನು ಸರಿಯೇ ಎಂಬ ನಂಬಿಕೆ ಸಂಪೂರ್ಣವಾಗಿದೆ. ಈ ವಿಷಯ ಇಲ್ಲಿಗೇ ಬಿಟ್ಟುಬಿಡು. ಪ್ರವಾಸಕ್ಕೆ ಹೊರಡಲು ತಯಾರಿ ಮಾಡಿಕೋ. ಈ ಕಛೇರಿಯ ವಿಷಯಗಳು ಇನ್ನೆಂದಿಗೂ ನಿನ್ನನ್ನು ಬಾಧಿಸದಹಾಗೆ ನಿನ್ನ ಮನಸ್ಸನ್ನು ಸರಿಪಡಿಸಿಕೋ. ದಿನಾ ರಾತ್ರಿ ನಿನ್ನ ಫೋನ್‌ಗಾಗಿ ಕಾಯುತ್ತಿರುತ್ತೇನೆ ಎಂದಳು ಸೀತಮ್ಮ.ನಡೆದ ವಿಷಯ ಹಂಚಿಕೊಂಡಮೇಲೆ ಸುನೀಲನ ಮನಸ್ಸು ಹಗುರವಾಯಿತು. ಕಛೇರಿಯಲ್ಲಿ ರಾಜೀನಾಮೆ ನಂತರ ಇದ್ದ ಕೆಲವು ಕೆಲಸಗಳನ್ನು ಮುಗಿಸಿ ಪ್ರವಾಸಕ್ಕೆ ಹೊರಟ ಸುನೀಲ.

ಬದರೀನಾಥ, ಕೇಧಾರ, ಗಂಗೋತ್ರಿ, ಯಮುನೋತ್ರಿ, ಶಿಮ್ಲಾ, ಕುಲು, ಮನಾಲಿ ಹೀಗೆ ಹಲವಾರು ಊರುಗಳನ್ನು ಪ್ರವಾಸ ಮಾಡಿ, ಕೆಲವುಕಡೆ ಚಾರಣಗಳಲ್ಲೂ ಪಾಲ್ಗೊಂಡು, ಎರಡು ತಿಂಗಳ ನಂತರ ಕಡೆಯಲ್ಲಿ ಹರಿದ್ವಾರಕ್ಕೆ ಬಂದ ಸುನೀಲ. ಹರಿದ್ವಾರದಲ್ಲಿ ಚಿತ್ರಾನಂದರ ಆಶ್ರಮ ಒಳ್ಳೇ ಹೆಸರು ಮಾಡಿತ್ತೆಂಬುದು ಸುನೀಲನಿಗೆ ಗೊತ್ತಿತ್ತು. ಅದರಲ್ಲೂ ಚಿತ್ರಾನಂದ ಸ್ವಾಮೀಜಿಯವರು ಕನ್ನಡದವರೇ ಆಗಿದ್ದು ಆಶ್ರಮದಲ್ಲಿದ್ದ ಸಾಕಷ್ಟು ಸಿಬ್ಬಂದಿ ಕನ್ನಡದವರೇ ಆಗಿದ್ದರು. ಆಶ್ರಮದಲ್ಲಿ ಮೂರು ದಿನ ಉಳಿದುಕೊಳ್ಳಲು ಅವಕಾಶವಿತ್ತು. ಮೊದಲ ಎರಡು ದಿನ ಧ್ಯಾನ, ಭಜನೆ, ಊಟ ಎಲ್ಲವೂ ಅದ್ಭುತವಾಗಿತ್ತು. ಸುನೀಲನಿಗೆ, ಜೀವನದಲ್ಲಿ ಏನಾದರೂ ಸಾಧನೆ ಮಾಡುವುದಾದರೇ ಅದು ಈ ಆಶ್ರಮದಲ್ಲಿ ಮಾತ್ರ ಸಾಧ್ಯ ಎಂದೆನಿಸಿತು. ಆದರೆ ಅಮ್ಮನಿಗೆ ಕೊಟ್ಟ ಮಾತು ಜ್ಞಾಪಕಕ್ಕೆ ಬಂದು, ಸದ್ಯ ಆಶ್ರಮದಲ್ಲಿ ವಾಸಮಾಡುವ ಆಸೆ ದೂರ ತಳ್ಳಿದನು ಸುನೀಲ.

ಮೂರನೆಯ ದಿನ ಚಿತ್ರಾನಂದ ಸ್ವಾಮೀಜಿಯವರನ್ನು ಭೇಟಿ ಮಾಡುವ ಅವಕಾಶ ಸಿಕ್ಕತು. ಸ್ವಾಮೀಜಿಯ ಕೋಣೆಯಲ್ಲಿ ಸುಮಾರು ಇಪ್ಪತ್ತು ಜನ ಭಕ್ತರು ಇದ್ದರು. ಎಲ್ಲರ ದೃಷ್ಟಿಯೂ ಸ್ವಾಮೀಜಿಯ ಮೇಲೇ ಇತ್ತು. ಸುನೀಲ ಕೋಣೆಯೊಳಗೆ ಬಂದ ತಕ್ಷಣ ಸ್ವಾಮೀಜಿಯ ದೃಷ್ಟಿ ಸುನೀಲನ ಮೇಲೆ ನಿಂತದ್ದು ಅಕ್ಕ ಪಕ್ಕ ಸರಿಯಲೇ ಇಲ್ಲ. ಸ್ವಾಮೀಜಿ ಈ ಭಕ್ತನಲ್ಲಿ ಅಂತದ್ದೇನು ವಿಶೇಷ ಕಂಡರು ಎಂದು ಎಲ್ಲರೂ ಸುನೀಲನ ಕಡೆಗೇ ನೋಡಿದರು. ಸುನೀಲನಿಗೆ ಏನಾಗುತ್ತಿದೆ ಎಂದು ತಿಳಿಯಲಿಲ್ಲ.

ಸುನೀಲ ಸ್ವಾಮೀಜಿಗೆ ನಮಸ್ಕರಿಸಿ ತಾನು ಕನ್ನಡದವನು ಎಂದು ಪರಿಚಯಿಸಿಕೊಂಡಾಗ, ನನ್ನ ಪಕ್ಕದಲ್ಲೇ ಕುಳಿತುಕೋ ಎಂದರು ಸ್ವಾಮೀಜಿ. ಎಲ್ಲಾ ಭಕ್ತರು ಕೋಣೆಯಿಂದ ಹೊರಗೆ ಹೋದ ಮೇಲೆ ಸ್ವಾಮೀಜಿ ಸುನೀಲನಿಗೆ ಏನಾದರು ಮಾತನಾಡಲು ಹೇಳಿದರು. ತನ್ನ ತಂದೆ ತಾಯಿ,ಊರು, ತಾನಿದ್ದ ಕೆಲಸ ಎಲ್ಲದರ ಬಗ್ಗೆಯೂ ಸುನೀಲ ಸ್ವಾಮೀಜಿಗೆ ತಿಳಿಸಿದ. ನನಗೆ ಈ ಆಶ್ರಮದ ವಾತಾವರಣ ತುಂಬಾ ಇಷ್ಟವಾಗಿದೆ. ಜೀವನ ಪೂರ್ತಿ ಇಲ್ಲೇ ಇರಬೇಕೆಂಬ ಆಸೆಯಾಗಿದೆ. ಅದಕ್ಕೆ ಅವಕಾಶವಿದೆಯೇ ಎಂದು ಕೇಳಿದ ಸುನೀಲ. ನಮ್ಮಲ್ಲಿ ಎಂಟು ವರ್ಷದ ಬ್ರಹ್ಮಚರ್ಯದ ಕೋರ್ಸ್‌ ಇದೆ. ನೀನು ಇಷ್ಟಪಟ್ಟರೆ ಅದಕ್ಕೆ ಸೇರಿಕೊಳ್ಳಬಹುದು. ಪೂರ್ತಿ ಎಂಟು ವರ್ಷ ಕೋರ್ಸ್‌ ಮುಗಿಸಬೇಕು, ಮಧ್ಯದಲ್ಲಿ ನೀನು ಆಶ್ರಮ ಬಿಟ್ಟುಹೋಗುವುದಾದರೆ, ವರ್ಷಕ್ಕೆ ಒಂದು ಲಕ್ಷ ರೂಪಾಯಿಯಂತೆ ದಂಡ ಕೊಡಬೇಕಾಗುತ್ತದೆ ಎಂದರು. ಸದ್ಯ ನನ್ನ ಅಮ್ಮನನ್ನು ನೋಡಿಕೊಳ್ಳಬೇಕಾದ ಜವಾಬ್ಧಾರಿ ನನ್ನ ಮೇಲಿದೆ. ಮುಂದೆಂದಾದರೂ ಇದರ ಬಗ್ಗೆ ಯೋಚಿಸುತ್ತೇನೆ ಎಂದ ಸುನೀಲ.

ಆಗ ಸ್ವಾಮೀಜಿಗಳು, ಇಲ್ಲಿರುವ ಕೆಲವು ಬ್ರಹ್ಮಚಾರಿಗಳು ಅವರ ತಂದೆ ತಾಯಿಯ ಜೊತೆಯೇ ಇದ್ದಾರೆ. ಕೋರ್ಸ್‌ ಮುಗಿದಮೇಲೆ, ಸಂನ್ಯಾಸ ತೆಗೆದುಕೊಂಡಾಗ ಮಾತ್ರ ತಂದೆ ತಾಯಿಯನ್ನು ನಮ್ಮ ವೃದ್ಧಾಶ್ರಮದಲ್ಲಿ ಬಿಡಬಹುದು. ಇಲ್ಲಿ ಬಂದ ಹಿರಿಯರೂ ಕೂಡಾ ಯಾರೂ ವಾಪಸ್‌ ಹೋಗಲು ಇಷ್ಟ ಪಡುವುದಿಲ್ಲ, ಹಾಗಿದೇ ನಮ್ಮ ಆಶ್ರಮದ ವಾತಾವರಣ.ನೀನು ಕೂಡ ನಿನ್ನ ತಾಯಿಯನ್ನು ಅವರು ಒಪ್ಪುವುದಾದರೆ ಇಲ್ಲಿಗೇ ಕರೆದುಕೊಂಡುಬರಬಹುದು ಎಂದರು ಸ್ವಾಮೀಜಿ. ಈ ವಿಷಯ ಕೇಳಿ ಸುನೀಲನಿಗೆ ತುಂಬಾ ಖುಷಿಯಾಯಿತು. ನಾನು ನನ್ನ ತಾಯಿಗೆ ಈ ವಿಷಯದಲ್ಲಿ ಮನವೊಲಿಸಿ ಖಂಡಿತಾ ಇಲ್ಲಿಗೆ ಬ್ರಹ್ಮಚಾರಿ ಕೋರ್ಸ್‌ ಮಾಡಲು ಬರುತ್ತೇನೆ ಎಂದು ಸುನೀಲ ಹೇಳಿದಾಗ, ನಮ್ಮ ಆಶ್ರಮದ ಕಛೇರಿಗೆ ಹೋಗು; ಬ್ರಹ್ಮಚಾರಿ ಕೋರ್ಸಗೆ ಅರ್ಜಿ ಫಾರಂ ತೆಗೆದುಕೋ. ಸಾಮಾನ್ಯವಾಗಿ ತುಂಬಿದ ಅರ್ಜಿ ಫಾರಂ ಇಲ್ಲಿನ ಆಡಳಿತಾಧಿಕಾರಿಗೆ ಕೊಡಿ ಎಂದು ಕಛೇರಿಯಲ್ಲಿ ಹೇಳುತ್ತಾರೆ. ನೀನು ಫಾರಂನಲ್ಲಿ ಕೇಳಿರುವ ಪ್ರಶ್ನೆಗಳನ್ನು ಉತ್ತರಿಸಿ, ನಿನ್ನ ಹೆಸರು, ವಿಳಾಸ ಎಲ್ಲವನ್ನೂ ಬರೆದು ನೇರ ನನಗೇ ತಂದುಕೊಡು. ಆದಷ್ಟು ಬೇಗ ನೀನು ಮತ್ತು ನಿನ್ನ ತಾಯಿ ಇಲ್ಲಿಗೆ ಬನ್ನಿ. ಇಲ್ಲಿಗೆ ಬರುವ ಮುನ್ನ ನನಗೆ ಫೋನ್‌ ಮಾಡಿ ಬಾ. ಕಛೇರಿಗೆ ಹೋಗುವುದು ಬೇಡ. ಇಲ್ಲಿಯೇ ನನ್ನ ಕೋಣೆಗೇ ನೇರವಾಗಿ ಬನ್ನಿ. ನಾನು ನಿಮ್ಮ ಬರುವಿಕೆಯನ್ನು ಎದುರುನೋಡುತ್ತಿರುತ್ತೇನೆ ಎಂದರು ಸ್ವಾಮೀಜಿ. ಸ್ವಾಮೀಜಿ ಹೇಳಿದಹಾಗೇ ಮಾಡಿದ ಸುನೀಲ. ತಾನು ಕನ್ನಡಿಗನೆಂದು ಹೇಳಿದ್ದಕ್ಕೋ ಅಥವಾ ತನ್ನಲ್ಲಿ ಏನೋ ವಿಶೇಷ ಗುಣವನ್ನು ಸ್ವಾಮೀಜಿ ಕಂಡಿರಬಹುದು, ಆದ್ದರಿಂದ ಸ್ವಾಮೀಜಿ ತನ್ನ ಕಡೆ ವಿಶೇಷ ಕಾಳಜಿ ತೋರಿಸುತ್ತಿದ್ದಾರೆ ಎಂದುಕೊಂಡ ಸುನೀಲ. ಹೆಚ್ಚು ತಡಮಾಡದೇ, ಬೆಂಗಳೂರಿನೆಡೆಗೆ ಪ್ರಯಾಣ ಬೆಳೆಸಿದ.
ಪ್ರವಾಸದಿಂದ ಹಿಂದಿರುಗಿದ ಸುನೀಲನನ್ನು ನೋಡಿ ಸೀತಮ್ಮ ತುಂಬಾ ಸಂತೋಷಪಟ್ಟಳು. ಅವನಲ್ಲಿ ಏನೋ ಬದಲಾವಣೆಯಾಗಿರುವುದು ಅವನ ಮುಖದಲ್ಲಿ ಚಿಮ್ಮುತ್ತಿದ್ದ ತೇಜಸ್ಸು ತೋರುತ್ತಿತ್ತು. ಅವನ ಮಾತು ನಡೆ ನುಡಿ ಎಲ್ಲವೂ ಬದಲಾಗಿತ್ತು. ತನ್ನ ಪ್ರವಾಸದ ಅನುಭವಗಳನ್ನೆಲ್ಲಾ ಅಮ್ಮನೊಂದಿಗೆ ಚಿಕ್ಕ ಮಗುವಿನಹಾಗಿ ಉಲ್ಲಾಸದಿಂದ ಹಂಚಿಕೊಂಡ. ತಾನು ಮೊಬೈಲಿನಲ್ಲಿ ತೆಗೆದಿದ್ದ ಕೆಲವು ಫೋಟೋಗಳನ್ನು ಸೀತಮ್ಮಳಿಗೆ ತೋರಿಸಿದ. ಅವನ ಪ್ರವಾಸ ಇಷ್ಟು ಬದಲಾವಣೆ ತಂದಿದ್ದು ಸೀತಮ್ಮಳಿಗೂ ಆನಂದ ಉಂಟು ಮಾಡಿತು. ಸರಿ ಹಾಗಾದರೆ, ನಾನು ಇದನ್ನೆಲ್ಲಾ ಯಾವಾಗ ನೋಡುವುದು ಎಂದು ಫೋಟೋಗಳನ್ನು ನೋಡುತ್ತಾ ಕೇಳಿದಳು ಸೀತಮ್ಮ.

ಇದೇ ಸಮಯಕ್ಕೆ ಕಾಯುತ್ತಿದ್ದ ಸುನೀಲ, ಹರಿದ್ವಾರದ ಚಿತ್ರಾಶ್ರಮದಲ್ಲಿ ನಡೆದ ವಿಷಯಗಳನ್ನೆಲ್ಲಾ ಸೀತಮ್ಮಳಿಗೆ ತಿಳಿಸಿದ. ನಮ್ಮ ಮುಂದೆ ನಡೆದಾಡುವ ಮತ್ತು ಫೋಟೋಳಲ್ಲಿರುವ ಎಷ್ಟೋ ಸಂನ್ಯಾಸಿಗಳಿಗೆ ನಾವು ನಮಸ್ಕರಿಸಬಹುದು, ಆದರೆ ತನ್ನ ಮಗನೇ ಸಂನ್ಯಾಸ ಸ್ವೀಕರಿಸುತ್ತೇನೆ ಎಂದರೆ ಯಾವ ತಾಯಿಯಾದರು ಒಪ್ಪಿಯಾಳ. ಸದ್ಯಕ್ಕೆ ಸುನೀಲನು ಬದುಕುಳಿಯುವುದು ಮತ್ತು ಸಂತೋಷವಾಗಿ ಜೀವನ ನಡೆಸುವುದನ್ನು ಅವಳುನೋಡಬೇಕಿತ್ತು. ಹಿಂದಿನ ಘಟನೆಗಳನ್ನೆಲ್ಲಾ ಜ್ಞಾಪಿಸಿಕೊಂಡು ಖಿನ್ನತೆಗೆ ಹೊರಟುಹೋದರೆ ನಾನಂತು ತಡೆದುಕೊಳ್ಳಲಾರೆ. ಹಾಗಾಗಿ ಸಂನ್ಯಾಸಿಯೋ, ಬ್ರಹ್ಮಚಾರಿಯೋ, ತನ್ನ ಕಣ್ಣಮುಂದೆ ಅವನು ಸಂತೋಷವಾಗಿದ್ದರೆ ಸಾಕು ಎಂದು ಲೆಕ್ಕಾಚಾರಹಾಕಿ, ಹರಿದ್ವಾರದ ಚಿತ್ರಾಶ್ರಮಕ್ಕೆ ಸ್ವಾಮೀಜಿಗಳು ಹೇಳಿರುವಂತೆ ತಾನೂ ಬರುವುದಾಗಿ ತಿಳಿಸಿದಳು. ಆದರೆ ಇಲ್ಲಿರುವ ಸ್ವಂತ ಮನೆ, ಅದನ್ನು ಏನು ಮಾಡುವುದು ಎಂದು ಕೇಳಿದಳು ಸೀತಮ್ಮ. ಸದ್ಯಕ್ಕೆ ಅದನ್ನು ಬಾಡಿಗೆಗೆ ಕೊಡೋಣ. ಆಮೇಲೆ ಏನು ಮಾಡುವುದು ನೋಡಿದರಾಯಿತು ಎಂದ. ಆದರೆ ಸ್ವಾಮೀಜಿ ತನ್ನೆಡೆಗೆ ತೋರಿಸಿದ ವಿಶೇಷ ಕಾಳಜಿಯ ಬಗ್ಗೆ ಸುನೀಲ ಸೀತಮ್ಮಳಿಗೆ ವಿವರಿಸಲಿಲ್ಲ.

ಎರಡು ಮೂರು ದಿನಕ್ಕೊಮ್ಮೆ ಸ್ವಾಮೀಜಿಯೊಂದಿಗೆ ಸುನೀಲ ಗಂಟೆಗಟ್ಟಲೇ ಮಾತನಾಡುತ್ತಿದ್ದ. ತಾವಿಬ್ಬರೂ ಹರಿದ್ವಾರಕ್ಕೆ ಸದ್ಯದಲ್ಲೇ ಬರುವುದಾಗಿ ನಿಶ್ಚಯವಾಗಿದೆ ಎಂದು ಹೇಳಿದಾಗ ಸ್ವಾಮೀಜಿ ಕೂಡಾ ಸಂತೋಷಪಟ್ಟರು. ಕಡೆಗೂ, ಅಮ್ಮ ಮಗ ಹರಿದ್ವಾರಕ್ಕೆ ಹೊರಟೇ ಬಿಟ್ಟರು. ಆಶ್ರಮಕ್ಕೆ ಹೋಗುವ ಮುನ್ನ ಬದರಿ, ಕೇಧಾರ, ಗಂಗೋತ್ರಿ, ಯಮುನೋತ್ರಿ ತೀರ್ಥಕ್ಷೇತ್ರಗಳನ್ನು ತಾನೂ ನೋಡಬೇಕೆಂದು ಸೀತಮ್ಮ ಆಸೆಪಟ್ಟಳು. ಎಲ್ಲಾ ಯಾತ್ರೆಯನ್ನು ಮುಗಿಸಿ, ನಿಗದಿತ ದಿನದಂದು ಆಶ್ರಮಕ್ಕೆ ಪ್ರವೇಶಿಸಿದರು ಸೀತಮ್ಮ ಮತ್ತು ಸುನೀಲ. ನೇರವಾಗಿ ಸ್ವಾಮೀಜಿ ಕೋಣೆಗೆ ಅವರನ್ನು ಕಳಿಸಬೇಕೆಂದು ಆಶ್ರಮದ ಬಾಗಿಲಿನಲ್ಲಿದ್ದ ಸೆಕ್ಯೂರಿಟಿಗೆ ಸೂಚನೆ ನೀಡಲಾಗಿತ್ತು. ಸ್ವಾಮೀಜಿಯ ಕೋಣೆಯೊಳಗೆ ಇಬ್ಬರೂ ಹೋದರು. ಆಶ್ರಮದ ಪದ್ದತಿಯಂತೆ ಸೀತಮ್ಮ ತಲೆಯಮೇಲೆ ತನ್ನ ಸೀರೆಯ ಸೆರಗನ್ನು ಹೊದ್ದಿಕೊಂಡು ತಲೆ ನೆಲದ ಕಡೆ ತಗ್ಗಿಸಿ ಕುಳಿತಿದ್ದಳು. ಬೇರೆ ಯಾರು ಭಕ್ತರಿರಲಿಲ್ಲ. ಸ್ವಾಮೀಜಿಯೊಬ್ಬರೇ ಕುಳಿತಿದ್ದರು.

ಇಬರೂ ಸ್ವಾಮೀಜಿಗೆ ನಮಸ್ಕಾರ ಮಾಡಿದರು.ಸ್ವಾಮೀಜಿ, ಸುನೀಲನು ಕೊಟ್ಟಿದ್ದ ಬ್ರಹ್ಮಚಾರಿ ಕೋರ್ಸಿನ ಫಾರಂನೋಡುತ್ತಾ, ಸೀತಮ್ಮನವರೇ ನಿಮ್ಮ ಸಹಿಯೂ ಬೇಕಿದೆ, ಸಹಿ ಮಾಡಿ ಎಂದರು. ನಿಮಗೆ ನಿಮ್ಮ ಮಗ ಸುನೀಲಸದ್ಯ ಬ್ರಹ್ಮಚಾರಿ ಕೋರ್ಸ್‌ ಮಾಡುವುದಕ್ಕೂ ಹಾಗೂ ಮುಂದೆ ಸಂನ್ಯಾಸ ಧೀಕ್ಷೆ ತೆಗೆದುಕೊಳ್ಳುವುದಕ್ಕೆ ನಿಮ್ಮ ಒಪ್ಪಿಗೆಇದೆ ಎಂದು ಬರೆಯಲಾಗಿದೆ ಎಂದರು ಸ್ವಾಮೀಜಿ. ಸುನೀಲನ ಕಡೆ ಒಮ್ಮೆ ನೋಡಿ, ಮನದಲ್ಲೇ ನಕ್ಕು ಸಹಿ ಮಾಡಿದಳು ಸೀತಮ್ಮ. ಇಲ್ಲಿ ಇವನ ತಂದೆಯ ಸಹಿ ಬೇಕೆಲ್ಲಾ, ಎಂದರು ಸ್ವಾಮೀಜಿ. ಸುನೀಲ ಮತ್ತು ಸೀತಮ್ಮ ಶಾಕ್‌ ಹೊಡೆದವರಂತೆ ಸ್ವಾಮೀಜಿಯ ಕಡೆ ನೋಡಿದರು.

ಬಿಡಿ ಆ ವಿಷಯ. ಆ ಫಾರಂ ಕೊಡಿ ಇಲ್ಲಿ ಎಂದು ಹೇಳಿ, ಅಲ್ಲಿ ಕೋಣೆಯ ಬಾಗಿಲಿನಲ್ಲಿದ್ದ ಒಬ್ಬ ಸೆಕ್ಯೂರಿಟಿಗೆ ಆಶ್ರಮದ ಆಡಳಿತಾ ಅಧಿಕಾರಿಯನ್ನು ಕರೆತರಲು ಹೇಳಿದರು. ಇವರ ಮುಂದಿನ ವ್ಯವಸ್ಥೆಯನ್ನೆಲ್ಲಾ ಆಢಳಿತಾಧಿಕಾರಿಯೇ ಮಾಡಬೇಕಿತ್ತು. ಆ ಅಧಿಕಾರಿ ಬಂದು ಸ್ವಾಮೀಜಿಗೆ ನಮಸ್ಕರಿಸಿದರು. ಸ್ವಾಮೀಜಿ, ಅವರಿಗೆ ಅರ್ಜಿಯ ಫಾರಂ ಕೊಟ್ಟು, ಇದರಲ್ಲಿ ನಿಮ್ಮ ಸಹಿ ಅವಶ್ಯಕತೆ ಇತ್ತು ಅದಕ್ಕೆ ಹೇಳಿಕಳಿಸಿದೆ ಎಂದರು. ಅಧಿಕಾರಿಗೆ, ನೀವು ಇಲ್ಲಿ ಸಹಿ ಮಾಡಬೇಕು ಎಂದು ತಂದೆಯ ಹೆಸರು ಮತ್ತು ಸಹಿ ಎಂದು ಇರುವ ಜಾಗವನ್ನು ತೋರಿಸಿದರು ಸ್ವಾಮೀಜಿ. ಅಧಿಕಾರಿಗೆ ಗಾಭರಿಯಾಯಿತು, ಒಮ್ಮೆ ಸುನೀಲನ ಕಡೆ ನೋಡಿದರು. ಅವರಿಗೆ ಎಲ್ಲವೂ ಅರ್ಥವಾಗಿತ್ತು. ಮೂವತ್ತು ವರ್ಷದ ಹಿಂದಿನ ಮೋಹನನ ತದ್ರೂಪವೇ ಸುನೀಲನಾಗಿದ್ದ.

ಪಕ್ಕದಲ್ಲಿದ್ದ ಸೀತಮ್ಮನ ಕಡೆ ನೋಡಿದರು ಅಧಿಕಾರಿ.ಸೀತಾ ನೀನೇನು ಇಲ್ಲಿ ಎಂದರು. ಸೀತಮ್ಮಳಿಗೆ ಒಂದುಕಡೆ ಭಯ ಮತ್ತೊಂದು ಕಡೆ ಆನಂದ, ತಲೆಸುತ್ತು ಬಂದಂತಾಗಿ ಒಂದು ಕ್ಷಣ ಅಲ್ಲೇ ಕುಸಿದಳು. ಸ್ವಾಮೀಜಿ ಅವಳಿಗೆ ನೀರು ಕುಡಿಯಲು ಕೊಟ್ಟು, ಸುಧಾರಿಸಿಕೊಂಡ ಮೇಲೆ, ಅಂದು ಸುನೀಲನನ್ನು ನನ್ನ ಕೋಣೆಯಲ್ಲಿ ನೋಡಿದಾಗಲೇ ಇವನು ನಮ್ಮ ಆಡಳಿತ ಅಧಿಕಾರಿ ಮೋಹನನ ಮಗನೇ ಎಂದು ನನಗೆ ತಿಳಿಯಿತು. ಅವನೊಂದಿಗೆ ಸ್ವಲ್ಪ ಹೊತ್ತು ಅವನ ತಂದೆ ತಾಯಿಯ ವಿಚಾರ ಮಾತನಾಡಿದಾಗ ನನ್ನ ನಂಬಿಕೆ ಖಾತ್ರಿಯಾಯಿತು. ಸ್ವಾಮೀಜಿಯು, ಮೋಹನನ ಕಡೆ ನೋಡುತ್ತಾ, ನನ್ನ ಪ್ರಕಾರ ನಿನ್ನ ಸಂಸಾರಕ್ಕೆ ನೀನು ಮತ್ತೆ ಸೇರಿಕೊಳ್ಳುವ ಅವಕಾಶ ಬಂದಿದೆ. ನಿಮ್ಮಲ್ಲರನ್ನೂ ಮತ್ತೆ ಸೇರಿಸುವ ಸೌಭಾಗ್ಯ ನನ್ನದಾಗಿದೆ ಎಂದರು. ಮೋಹನ, ಸ್ವಾಮೀಜಿಯ ಮಾತು ಕೇಳುತ್ತಾ ತನಗೆ ಸ್ವಾಮೀಜಿಯ ಮಾತಿನಲ್ಲಿ ಒಪ್ಪಿಗೆ ಇದೆ ಎಂದು ಸೂಚನೆ ನೀಡುವಂತೆ ತಲೆ ಅಲ್ಲಾಡಿಸುತ್ತಾ ಕುಳಿತ.

ಸೀತಮ್ಮಾ, ನಿನ್ನ ಗಂಡನೂ, ನಮ್ಮ ಆಶ್ರಮದಲ್ಲಿ ಬ್ರಹ್ಮಚರ್ಯ ಕೋರ್ಸ್‌ ಇಪ್ಪತ್ತು ವರ್ಷ ಮುಂಚೆಯೇ ಮುಗಿಸಿದ, ಆದರೆ ಅವನ ಸಂನ್ಯಾಸಕ್ಕೆ ನಿನ್ನ ಅನುಮತಿ ಇಲ್ಲದ್ದರಿಂದ, ಅವನಿಗೆ ನಾವು ಸಂನ್ಯಾಸ ದೀಕ್ಷೆ ಕೊಡಲಿಲ್ಲ. ಬಹುಶಃ ನಿಮ್ಮನ್ನು ಮತ್ತೆ ಸೇರಿಸಬೇಕೆಂಬುದು ದೈವ ಇಚ್ಛೆಯಾಗಿತ್ತು ಅನಿಸುತ್ತೆ, ಎಂದರು ಸ್ವಾಮೀಜಿ.

ಇನ್ನು ಮುಂದೆ ಹೇಗಿರಬೇಕೆಂಬುದು ನಿಮಗೆ ಬಿಟ್ಟಿದ್ದು. ಆದರೆ ಹಿರಿಯನಾಗಿ ನನ್ನ ಸಲಹೆ ಏನೆಂದರೆ, ಈ ಆಶ್ರಮದಲ್ಲೇ ನೀವು ಒಟ್ಟಿಗೇ ಇರಬಹುದು ಅಥವಾ ಕೆಲವು ವರ್ಷ ಬೇಕಾದರೇ ಬೆಂಗಳೂರಿಗೆ ಹೋಗಿ ಮತ್ತೇ ಹೊಸ ಜೀವನ ನಡೆಸಿ ಬೇಕೆನಿಸಿದರೇ ಇಬ್ಬರೂ ಒಟ್ಟಿಗೇ ಆಶ್ರಮಕ್ಕೆ ಬರಬಹುದು, ಸುನೀಲನು ಮಾತ್ರ ತನ್ನ ಇಷ್ಟದಂತೆ ಬ್ರಹ್ಮಚರ್ಯ ಕೋರ್ಸ್‌ ಮಾಡಲಿ ಎಂದರು ಸ್ವಾಮೀಜಿ.

ಸೀತಮ್ಮ, ಸ್ವಾಮೀಜಿಯನ್ನು ನೋಡುತ್ತಾ, ನೋಡಿ ಗುರುಗಳೇ, ಯಾವಾಗ ಈ ವ್ಯಕ್ತಿಯಿಂದ ಪ್ರೀತಿ, ಪ್ರೇಮ, ದಾಂಪತ್ಯಸುಖದ ಅವಶ್ಯಕತೆ ನನಗಿತ್ತೋ ಆ ಸಮಯದಲ್ಲೇ ನನಗೆ ದೊರೆಯಲಿಲ್ಲ. ಈಗ ನಾನು ಖಾವಿ ವಸ್ತ್ರ ಧರಿಸಿಲ್ಲದೆಯೇ ಸುಮಾರು ಮೂವತ್ತು ವರ್ಷ ತಪಸ್ಸು ಮಾಡಿರುವ ಸಂನ್ಯಾಸಿನಿಯಷ್ಟೆ. ನನಗೆ ಈ ಸಂಸಾರದ ಜೀವನಕ್ಕೆ ಮತ್ತೆ ಹೋಗಲು ಇಷ್ಟವಿಲ್ಲ. ಅದಲ್ಲದೇ, ನಾನು ಸುನೀಲನಿಗೆ ಆಶ್ರಮದ ಕೋರ್ಸ್‌ ಸೇರಲು ಒಪ್ಪಿಗೆ ನೀಡಿದ ತಕ್ಷಣವೇ ನನ್ನ ಜೀವನ ಹೇಗಿರಬೇಕೆಂದು ನಾನು ನಿರ್ಧರಿಸಿದ್ದೇನೆ. ಎಂದೋ ಕಳೆದುಹೋದ ವ್ಯಕ್ತಿ ಇಂದು ದೊರೆತನೆಂದು ನಾನು ಮತ್ತೇ ನನ್ನ ನಿರ್ಧಾರ ಬದಲಿಸಲಾರೆ.

ಅವರಿಗೆ ಸಂನ್ಯಾಸ ದೀಕ್ಷೆ ಪಡೆಯುವುದಕ್ಕೆ ನನ್ನ ಅನುಮತಿ ಬೇಕಲ್ಲವೇ;ಆ ಅರ್ಜಿ ಫಾರಂ ಕೊಡಿ, ನಾನು ಅದರಲ್ಲೂ ಸಹಿ ಮಾಡಿ ನನ್ನ ಒಪ್ಪಿಗೆಯನ್ನು ನೀಡುತ್ತೇನೆ ಎಂದಳು ಸೀತಮ್ಮ.

ಅಷ್ಟಲ್ಲದೇ ಹೇಳುತ್ತಾರೆಯೇ, “ಸಂಸಾರದಲ್ಲಿ ಇದ್ದು ಆಧ್ಯಾತ್ಮ ಆಚರಿಸುವುದು, ಮೊಸಳೆಯ ಮೇಲೆ ಕುಳಿತು ನದಿ ದಾಟಿದ ಹಾಗೆ” ಎಂದು. ಆಧ್ಯಾತ್ಮ ಆಧ್ಯಾತ್ಮವೇ-ಸಂಸಾರ ಸಂಸಾರವೇ.

****************************

Leave a Reply

Back To Top