“ಬೆರಳ ತುದಿಯಲ್ಲೇ ಇದೆ ಭದ್ರತೆ “

ಅಪ್ಪನ ದಿನ

ಬೆರಳ ತುದಿಯಲ್ಲೇ ಇದೆ ಭದ್ರತೆ

ಸ್ಮಿತಾ ರಾಘವೇಂದ್ರ

Father Son Painting Daddy Son Daddy Little Boy Brother Sibling Dads Buddy  "Daddy's Little Man" Leslie Allen Fine Art | Father art, Daddy and son, Art

[20:43, 19/06/2021] SMITHA BHAT: “ನಾನು ನೋಡಿದ ಮೊದಲ ವೀರ

ಬಾಳು ಕಲಿಸಿದ ಸಲಹೆಗಾರ.

ಬೆರಗು ಮೂಡಿಸೊ ಜಾದೂಗಾರ ಅಪ್ಪ..”

ಇದೊಂದು ಹಾಡು ಬರದಿದ್ದರೆ ಭಾವಗಳೆಲ್ಲ ವ್ಯಕ್ತ ಪಡಿಸಲಾಗಿದೆ  ನನ್ನೊಳಗೆ ಉಳಿದು ಹೋಗುತ್ತಿತ್ತಾ ಅಂದುಕೊಂಡಿದ್ದೇನೆ ಅದೆಷ್ಟೋ ಸಲ.

ಬಡತನ,ನೋವು,ಹತಾಶೆ, ಅವಮಾನಗಳ ನಡುವೆ ಬದುಕು ಕಟ್ಟಿ ಕೊಟ್ಟ ಮತ್ತು ಬದುಕಲು ಕಲಿಸಿದ, ಬೆರಳ ತುದಿಯಲ್ಲೇ ಭದ್ರ ಭಾವ ಕೊಡುವುದು ಕೇವಲ ಅಪ್ಪನಿಂದ ಮಾತ್ರ ಸಾಧ್ಯ

ಪ್ರತಿಯೊಬ್ಬರಿಗೂ ಅಪ್ಪ ಬದುಕಿನ ಆಪ್ತ ಭಾವವೇ.

ಅವನು ಏನನ್ನೂ ಹೇಳಿಕೊಳ್ಳಿವುದಿಲ್ಲ ಹಲುಬುವದಿಲ್ಲ.

ಕಾಣುವಂತೆ ಕಣ್ಣೀರು ಹಾಕುವದಿಲ್ಲ.

ವ್ಯಥೆಯ ತೋರಗೊಡದೇ ವ್ಯಾಕುಲತೆಯ ಕಟ್ಟಿ

ಒಳಗೊಳಗೇ ಅಭಿವ್ಯಕ್ತವಾಗುವ ಆಕಾಶ.

 ಮೌನದಲೇ ಕರ್ಣನಾಗಿ ಬಿಡುತ್ತಾನೆ.

ನನ್ನ ಬದುಕಿನಲ್ಲಿ ಕತ್ತಲ ದಾರಿಯಲ್ಲೂ ನಡೆವುದ ಕಲಿಸಿದ್ದಾನೆ.

ನೋವಿಗೂ ನಗುವ ಕಲಿಸಿದ್ದಾನೆ.

ಮುಖದ ಮೇಲಿನ ಚಿಕ್ಕ ಗೆರೆ, ದ್ವನಿಯಲ್ಲಿ ಚೂರೇ ಚೂರು ಏರಿಳಿತಕ್ಕೂ ದೂರದಲ್ಲೇ ಕುಳಿತು ಏನಾಯ್ತು ಮಗಾ ಎಂದು ಗುಟ್ಟು ಬಯಲು ಮಾಡುವ ಅಪ್ಪನ ಭಾವದಲ್ಲಿ ನೂರು ಭದ್ರತೆ ಕಾಣುತ್ತೇನೆ ಈಗಲೂ.

ಆವತ್ತು ಅಪ್ಪನ ಹತ್ತಿರ ಶಾಲೆಗೆ ಬರುವದು ಬೇಡ ಎಂದು ಹಠ ಹಿಡಿದಿದ್ದೆ..ಯಾಕೆ ಮಗಾ.

ಬರೋವಿದ್ದೆ ಬಂದು ಹೋಗ್ತೆ ಅಂತಿದ್ರು.

ಗುರೂಜಿ ಏನು ಹೇಳಿ ಕಳಿಸಿಲ್ಲ ಬಂದು ಹೋಗೋಕೆ ಮತ್ಯಾಕೆ ಬರ್ತೀರಿ!? ನಿಮ್ಮ ಇಷ್ಟ.

ಅಂತ ಮುಖ ತಿರುವಿ ನಡದಿದ್ದೆ.

ಸರಿ ಬಿಡು ಎನ್ನುತ್ತ  ನನ್ನ ಮಡಿಲಲ್ಲಿ ಕೂರಿಸಿಕೊಂಡು ಯಾಕೆ ಎನ್ನುವದರ ಗುಟ್ಟು ಬಯಲು ಮಾಡುತ್ತಿದ್ದರು ಅಪ್ಪ

ಎನಿಲ್ಲ  ಅಪ್ಪಾ,, ಸುಮ್ನೇ ನಿಮಗೂ ತೊಂದ್ರೆ, ತೋಟ ಗದ್ದೆಯ ಕೆಲಸಗಳು ಸಾಕಷ್ಟಿವೆ, ಒಂದಿಡೀ ದಿ‌ನ ಬೇಕು ನೀವು ಶಾಲೆಗೆ ಬಂದು ಹೋಗೋಕೆ, ಐದು ಕಿಲೋಮೀಟರ್ ಈ ಬಿಸಿಲಲ್ಲಿ ನಡೆದು ಬರಬೇಕಲ್ಲ.

 ನಾನು ಅಪ್ಪನ ಕಾಳಜಿ ಬಗ್ಗೆ ಮಾತಾಡ್ತಾ ಇದ್ರ, ಅಪ್ಪ ಮೌನವಾಗಿ ಆಯಿತು ಮಗಳೇ ಅಂತ ತಬ್ಬಿ ತಲೆ ಸವರಿ ಬೆನ್ನು ತಟ್ಟಿ ಒಂತರ ಅಪರಾಧಿ ಭಾವದಲ್ಲಿ ನನ್ನ ಮುಳುಗಿಸಿ ನಡೆದಿದ್ದರು.

ಆವತ್ತು ರಾತ್ರಿ ಅಮ್ಮನ ಮಡಿಲೊಳಗೆ ನಾನು ಚಡಪಡಿಸುತ್ತಲೇ ಇದ್ದೆ.ಅಮ್ಮ ಏನಾಯಿತೆಂದು ಕೇಳಿದಾಗಲೆಲ್ಲ ದುಃಖದ ಕಟ್ಟೆ ಒಡೆಯುತ್ತಿತ್ತು.

ಬೇರೆಯವ ಮನೆಯಲ್ಲಿ ಉಳಿದುಕೊಂಡು ಶಾಲೆಗೆ ಹೋಗುವ ದಿನಗಳವು ವಾರಕ್ಕೊಮ್ಮೆ ಮಾತ್ರ ಮನೆಗೆ ಬರೋದು.

ವಾರದ ರಜೆ ಮುಗಿಸಿ ಸೋಮವಾರ ಶಾಲೆಗೆ ಹೋಗುವಾಗ ಮುಸಿ ಮುಸಿ ಅಳುವೊಂದು ಮನೆ ಮಾಡುತ್ತಿತ್ತು. ಅಮ್ಮ ಸಮಾಧಾನಿಸುತ್ತಲೇ ಇದ್ದಳು.

ಏನೋ ಹೇಳಬೇಕೆಂಬ ಮಾತು ನನ್ನೊಳಗೇ ಉಳಿದು ಹೋಗಿತ್ತು. ಬೆಳಗೆದ್ದು ಪಾಟಿ ಚೀಲ ಹೆಗಲಿಗೇರಿಸಿ ಟಾ ಟಾ ಮಾಡಿ ಒಂದು ಧಾವಂತದಲಿ ಹೊರಟೆ.

ಮಧ್ಯಾಹ್ನದ ಹೊತ್ತಿಗೆ ಒಂತರ ನಿರಾಳ ಅಪ್ಪ ಬರಲಿಕ್ಕಿಲ್ಲ ಎಂದು.

ನಾನು ಮಾಡಿದ ತಪ್ಪು ಮುಚ್ಚಿ ಹಾಕುವದರಲ್ಲಿ ಒಂದು ಸಣ್ಣ ಯಶಸ್ವೀ ನಿಟ್ಟುಸಿರು.

ನನ್ನ ಗೆಳತಿಯೊಬ್ಬಳು ಒಂದು ಚಂದದ ಮಣಿ ಸರ ಹಾಕಿ ಕೊಂಡು ಬಂದಿದ್ದಳು ನಾನು ಆಸೆ ಪಟ್ಟು ಒಂದಿನ ನಂಗೂ ಹಾಕಿ ಕೊಳ್ಳೋಕೆ ಕೊಡ್ತೀಯಾ ಅಂತ ಕೇಳಿದ್ದೆ. ಆಯ್ತು ಅಂತ ಕೊಟ್ಟಿದ್ದಳು. ಒಂದು ದಿ‌ನ ನಾನೂ ಹಾಕಿ ಕೊಂಡು ಸಂಭ್ರಮಿಸಿದೆ.

ಯಾಕೋ ಇದು ನನ್ನಲ್ಲೇ ಉಳಿದರೆ ಎಷ್ಟು ಚೆನ್ನಾಗಿತ್ತು ಅನ್ನುವ ಆಸೆ ತುಂಬಿದ ಮನಸು ನನ್ನಿಂದ ಕೊಂಡುಕೊಳ್ಳಲಾಗದ ನಿರಾಸೆ ಎರಡೂ ಒಟ್ಟಿಗೇ ಸೇರಿತ್ತು.

ಮರುದಿನ ಬೆಳಿಗ್ಗೆ ಶಾಲೆಗೆ ಹೋದಾಗ ಎಲ್ಲೋ ಕಳೆದು ಹೋಯಿತೆಂದು ಗೆಳತಿಗೆ ಸುಳ್ಳು ಹೇಳಿದ್ದೆ.ತಂದು ಕೊಡು ನಂಗೆ ಮನೆಲಿ ಬೈತಾರೆ ಅಂತ ರಂಪ ಮಾಡಿದಳು.

ಒಂತರ ಅಪರಾಧಿ ಭಾವದಲ್ಲಿ ಹಿಂದಿರುಗಿಸುವ ವಿಚಾರ ಕೂಡಾ ಮಾಡಿದ್ದೆ.

ಆದರೆ ಹೇಗೆ?!

ಆಗಲೇ ಸುದ್ದಿ ಬಳ್ಳಿಯಂತೆ ಹಬ್ಬ ತೊಡಗಿತ್ತು.

ನಾನು ಹಿಂದಿರುಗಿಸುವ ಮೊದಲೇ ಅಪ್ಪ ಶಾಲೆಗೆ ಬಂದರೆ?  ಎಂಬುದು ನನ್ನ ದಿಗಿಲಾಗಿತ್ತು.

ಅಪ್ಪ ಯಾವತ್ತೂ,ಶಿಕ್ಷಕರು ಹೇಳಲಿ ಹೇಳದೇ ಇರಲಿ,ಆಗಾಗ ಶಾಲಗೆ ಬಂದು ಹೋಗುತ್ತಿದ್ದರು.

ಶಾಲೆಯ ಮೆಟ್ಟಿಲು ಹತ್ತಿದ ದಿನದಿಂದ ಯಾವ ಶಾಲೆಗೇ ಹೋದರೂ ಅಲ್ಲಿನ ಪ್ರತೀ ಶಿಕ್ಷಕರೂ ಅಪ್ಪನ ಸ್ನೇಹಿತರು. ಶಾಲೆಗೆ ಸೇರಿದ ಒಂದೇ ವಾರದಲ್ಲಿ ಎಲ್ಲರನ್ನೂ ಆತ್ಮೀಯರಾಗಿಸಿಕೊಂಡು ಬಿಡುತ್ತಿದ್ದರು.ಒಂತರ ಸಂದಿಗ್ಧ ಪರಿಸ್ಥಿತಿ ಮಕ್ಕಳಾದ ನಮಗೆ.

ಯಾವ ತಪ್ಪು ಮಾಡಿದರೂ ಮನೆಗೆ ಗೊತ್ತಾಗಿ ಬಿಡುವ ಭಯ.

ಎಷ್ಟೋ ಜನ ಪಾಲಕರು ಮಕ್ಕಳ ಶಾಲೆಗೆ ಬಿಟ್ಟು ಹೋಗಿ ಬಿಡ್ತಾರೆ, ಅಲ್ಲೇನು ಮಾಡ್ತಾರೆ ಏನು ಓದ್ತಾರೆ ಏನೊಂದೂ ನೋಡೋಕೆ ಬರಲ್ಲ ಹೋಗ್ಲಿ ಹೇಳಿ ಕಳಿಸಿದ್ರೂ ಒಂದ್ಸಲ ಬಂದು ಹೋಗಲ್ಲ.

ನಿಮ್ಮ ನೋಡಿದ್ರೆ ಖುಷಿ ಆಗುತ್ತೆ ಅಂತಿದ್ರು ಅಪ್ಪನ್ನ ನೋಡಿ.

 ಶಾಲೆಯ ಬೆಂಚಿನ ಮೇಲೆ ಕುಳಿತು ಕಿಟಕಿಯತ್ತಲೇ ಮುಖ ಮಾಡಿ ಕಣ್ಣು ಕಿರಿದು ಮಾಡಿ ಶಾಲೆಯ ಗೇಟಿನ ಕಡೆಗೇ ನನ್ನ ಚಿತ್ತ ನೆಟ್ಟಿತ್ತು.

 ಆತಂಕದ ಅಗ್ನಿಕುಂಡದಲ್ಲಿ ಉರಿಯುತ್ತಿರುವ ನನಗೆ, ದೂರದಿಂದಲೇ ಅಪ್ಪ ಗೇಟು ದೂಡಿ ಬರುತ್ತಿರುವುದು ಕಂಡು  ಸಂಪೂರ್ಣ ಬೆಂದು ಹೋಗಿದ್ದೆ.

 ಅಪ್ಪ ಹೆಡ್ಮಾಸ್ಟರ್ ರೂಮ್ ಸೇರಿಕೊಂಡ ಹತ್ತು ನಿಮಿಷಗಳ ನಂತರ ನನಗೆ ಕರೆ ಬಂತು. ನಡುವಿನ ದಾರಿ ಇನ್ನು ಚೂರು ದೊಡ್ಡದಾಗಿದ್ದರೆ, ಎಲ್ಲಾದರೂ ಓಡಿಹೋಗಿ ಬಿಡಬಹುದಿತ್ತು ಅನ್ನಿಸಿದ್ದು ಆಗಲೇ. ಆದರೆ ಅಸಾಧ್ಯವಾಗಿತ್ತು.

 ನನ್ನ ಇಡೀ ದೇಹ ಬೆವರುತ್ತಿತ್ತು ತಲೆತಗ್ಗಿಸಿ ಅಪ್ಪ ಮತ್ತು ಹೆಡ್ಮಾಸ್ಟರ್ ಎದುರಿಗೆ ಹೋಗಿ ನಿಂತಿದ್ದೆ

 ಅಪ್ಪ ತನ್ನ ಅಂಗಿ ಕಿಸೆಯಿಂದ ನಾನು ಅಡಗಿಸಿಟ್ಟಿದ್ದ ಗೆಳತಿಯ ಸರವನ್ನು ನಿಧಾನವಾಗಿ ಹೊರತೆಗೆಯುತ್ತಾ, ಇದೇ ನೋಡು ತೆಗೆದುಕೋ, ನೀನು ಕಳೆದುಹೋಗಿದೆ ಎಂದು ದುಃಖ ಪಡುತ್ತಿದ್ದೆಯಲ್ಲ ಸರ ಸಿಕ್ಕಿದೆ.

 ಯಾರದ್ದೆಂದು ವಾಪಸ್ ಮಾಡಿ ಬಿಡು ಎನ್ನುತ್ತಾ ನನ್ನ ಕೈಹಿಡಿದು, ಭಯದಲ್ಲಿ ಕಟ್ಟಿಕೊಂಡಿದ್ದ ನನ್ನ ಮುಷ್ಟಿಯನ್ನು ಬಿಡಿಸಿ ಸರವನ್ನು ಇಟ್ಟು ಮತ್ತೆ ಮುಚ್ಚಿದರು.ಮತ್ತೊಂದು ಕೈಯನ್ನು ನನ್ನ ಮುಚ್ಚಿದ ಮುಷ್ಟಿಯ ಮೇಲಿಟ್ಟು ನೀಡಿದ ಭದ್ರ ಭಾವ ಇನ್ನೆಂದೂ ತಪ್ಪು ಮಾಡಲಾರೆನೆಂದು ಅಗಲೇ ಮನಸು ಶಪಥ ಮಾಡಿತ್ತು.

ಅಪ್ಪ ಹೊರಟಾಗ

ತಪ್ಪಾಯ್ತು ಅಪ್ಪ ಎಂದು ಓಡಿ ಬಂದು ಅಪ್ಪನಿಗೆ ಜೋತು ಬಿದ್ದಿದ್ದೆ,ನೋಡು ಮಗಾ,,

ಬೇರೆಯವರು ವಸ್ತು ತೃಣಕ್ಕೆ ಸಮಾನ ಯಾವತ್ತೂ ಆಸೆ ಪಡಬಾರದು

ತಪ್ಪಾಗುತ್ತದೆ.ಬದುಕು ತಿದ್ದಿಕೊಳ್ಳಲು ಹೆಚ್ಚು ಅವಕಾಶಗಳನ್ನು ಕೊಡುವುದಿಲ್ಲ. ಎಂದು ಹೇಳಿ ಹೊರಟು ಹೋಗಿದ್ದರು ಅಪ್ಪ ಹೋದ ದಾರಿ ಗುಂಟ ಕಣ್ಣು ಹಾಯಿಸಿ ಅದೆಷ್ಟೋ ಹೊತ್ತು ನಿಂತಿದ್ದೆ ಕಣ್ಣೀರು ಸುರಿಸುತ್ತ ,ಅದೇ ಕೊನೆ ಮತ್ತೆಂದೂ ಅಪ್ಪನಿಂದ ಮರೆ ಮಾಚಿ ತಪ್ಪು ಮಾಡುವ ಗೋಜಿಗೆ ಹೋಗಲೇ ಇಲ್ಲ.

ಈಗಲೂ ಪಾಲಿಸುತ್ತಿದ್ದೇನೆ.

ಈಗೆಲ್ಲ ನನ್ನ ಮಗ ನೀ ಶಾಲೆಗೆ ಬರೋದೇನು ಬೇಡಾ ಅಮ್ಮಾ,,ಅಂದಾಗೆಲ್ಲ ಹೋಗೇ ಬರೋಣ ಒಮ್ಮೆ ಅಂತ ಹೊರಟು ಬಿಡುತ್ತೇನೆ.

ನನ್ನ ಮಗನ ಪ್ರತೀ ಶಿಕ್ಷಕರೂ ನನಗೆ ಉತ್ತಮ ಸ್ನೇಹಿತರು ಇದು ಅಪ್ಪನ ದಾರಿ.

ಅಪ್ಪನ  ಬದುಕು ಹಲವು ಸತ್ಯಗಳನ್ನು ತರೆದಿಟ್ಟಿದೆ ಜೀವನದಲ್ಲಿ.

ಆಗ ಅರ್ಥವಾಗದ ಸತ್ಯಗಳೆಲ್ಲ ಈಗ ಸಲೀಸಾಗಿ ಅರ್ಥವಾಗುತ್ತದೆ.

ತಪ್ಪುಗಳಿಗೆ ಅತಿಯಾಗಿ ಗದರಿದ್ದು ಎಂದೂ ಕಂಡಿಲ್ಲ. ನಯವಾಗಿ ಪ್ರತಿ ತಪ್ಪುಗಳ್ಳನ್ನು ಅವರು ತಿದ್ದುತ್ತಿದ್ದ ರೀತಿ ನನಗೀಗಲೂ ಅತೀ ದೊಡ್ಡ ಪಾಠವೇ.

ತಾಯಿ ಮಾತ್ರ ತವರಲ್ಲ

ತಂದೆ ಇರದೇ ತಾಯಿಲ್ಲ.

ಋಣ ತೀರಿಸಲಾಗದು, ಪ್ರೀತಿಸುವೆ ಅನಂತ ಕಾಲದವರೆಗೂ ಅಷ್ಟೇ ಅಪ್ಪ..

**************************

2 thoughts on ““ಬೆರಳ ತುದಿಯಲ್ಲೇ ಇದೆ ಭದ್ರತೆ “

Leave a Reply

Back To Top